ದಾವಣಗೆರೆಯ ಮೂಸೆಯಲ್ಲಿ ಅದ್ದಿ ತೆಗೆದಂತಿದ್ದ ವಿಜಯಾ ಅರ್ಥಾತ್ ವಿಜಿ ಓದು ಮುಂದುವರೆಸಲು ಮೈಸೂರಿಗೆ ಬ್ಯಾಗು ಕಟ್ಟಿ ನಿಂತಳು. ಆಗೆಲ್ಲ ಡೆಂಟಲ್ಲು, ಮೆಡಿಕಲ್ಲು, ಎಂಜಿನಿಯರಿಂಗುಗಳದ್ದೇ ಕಾರುಬಾರು ಇದ್ದರೂ ಇವಳು ಯಾವುದನ್ನೂ ಆಯ್ಕೆ ಮಾಡಿಕೊಳ್ಳದೆ ಸಾಮಾನ್ಯದಲ್ಲಿ ಅತೀ ಸಾಮಾನ್ಯವೆನಿಸಿದ್ದ ಬಿ.ಎ ಮಾಡಿದ್ದಳು. ಹಾಗಾಗಿ ನೆಂಟರಿಷ್ಟರಲ್ಲಿ ಇವಳ ಬಗ್ಗೆ ಅಂಥಾ ಆಸಕ್ತಿಯೇನೂ ಇರಲಿಲ್ಲ. ಮುಂದೇನು ಮಾಡಲು ಸಾಧ್ಯ ಎನ್ನುವ ಅಸಡ್ಡೆಯೂ ಇದ್ದಿರಬಹುದು.

ಅವಳ ವಾರಿಗೆಯವರಲ್ಲಿ ಆಗಲೇ ಕೆಲವರಿಗೆ ಮದುವೆಯ ಪ್ರಸ್ತಾವನೆಗಳು ಬರಲು ಶುರುವಾಗಿ ಕೆಲವರ ಮದುವೆಯೂ ಆಗಿ ಹೋಗಿದ್ದವು. ಅವರ ಮದುವೆಗೆಲ್ಲ ಹೊಸಾ ಬ್ಲೌಸು ಹೊಲಿಸಿಕೊಂಡು, ರೇಷ್ಮೆ ಸೀರೆ ಉಟ್ಟು ಮಲ್ಲಿಗೆ ಮಾಲೆ ತೊಟ್ಟು ಹೋಗಿ ಬಂದು ಸಾಕಾಗಿತ್ತು. ಈ ಎಲ್ಲವನ್ನೂ ಬಿಟ್ಟು ದೂರ ಹೋಗಬೇಕು ಅನ್ನಿಸಲು ಶುರುವಾದದ್ದು ಒಬ್ಬ ಗೆಳತಿಯ ಭರ್ಜರಿ ಮದುವೆಯಾದ ನಂತರವೇ.

ವಿಜಿಯ ಬಿ.ಎ ಕ್ಲಾಸ್ಮೇಟಾದ ಅನುರಾಧಾ ಅರ್ಥಾತ್ ‘ಅನಿಗಿ’ಯ ಮದುವೆ ಆಯಿತು. ಬೇರೆ ಊರಲ್ಲಾದರೆ ಅನುರಾಧಾ ಎನ್ನುವ ಹೆಸರು ಅನು ಅಥವಾ ಅನಿ ಆಗುತ್ತಿತ್ತೇನೋ. ದಾವಣಗೆರೆಯ ಕಡೆ ಹೆಸರಿಗೆ ‘ಗ’ ಸೇರಿಸುವುದು ಒಂದು ಅಭ್ಯಾಸ. ಅದೊಂಥರಾ ಪಡೆನುಡಿಯ ಹಾಗೆ. ಮಮತಾ ಮಮ್ಗಿ ಅಥವಾ ಮಂಗಿ ಆಗುವುದೂ, ರೂಪಾ ರೂಪ್ಗಿ ಆಗುವುದೂ ಬಹಳ ಸಾಮಾನ್ಯದ ವಿಷಯ. ಹಾಗೇ ಅನುರಾಧಾ ಅನಿಗಿಯಾಗಿದ್ದಳು. ಅನಿಗಿಯ ಅಪ್ಪ ಊರಿಗೇ ಹೆಸರು ಮಾಡಿದ ವ್ಯಾಪಾರಸ್ಥರು. ಅನಿಗಿಯ ಮದುವೆಯನ್ನು ಭರ್ಜರಿಯಾಗಿ ಮಾಡಿದರು. ಮದುವೆಯ ದಿನದ ತಿಂಡಿ ಸರ್ವೇ ಸಾಮಾನ್ಯವಾಗಿ ಉಪ್ಪಿಟ್ಟು, ಮಂಡಕ್ಕಿ ಸೂಸಲು ಇಂಥದ್ದಿರುವಾಗ ಅನಿಗಿಯ ಮದುವೆಯಲ್ಲಿ ಇಡ್ಲಿಯ ಸಮಾರಾಧನೆಯಾದದ್ದು ದೊಡ್ಡ ವಿಷಯವಾಗಿತ್ತು.

ಅನಿಗಿಯ ಅಮ್ಮ ಚೆನ್ನಮ್ಮ ಬಂದವರಿಗೆಲ್ಲ ಮದುವೆಯ ಫೋಟೊಗಳನ್ನು ತೋರಿಸುತ್ತಾ ಮದುವೆ ದಿನ ಸೇರಿದ್ದ ಜನಕ್ಕೆಲ್ಲ ತಿಂಡಿ ಪೂರೈಸಲು ಇಡ್ಲಿಯ ಬೆಟ್ಟವೇ ಬಂದಿಳಿದಿದ್ದನ್ನು ಕಡ್ಡಾಯವಾಗಿ ವಿವರಿಸುತ್ತಿದ್ದರು. ವಿಜಿ ಅವರ ಮನೆಗೆ ಹೋದ ದಿನ ಅನಿಗಿ ಇರಲಿಲ್ಲ. ಆದರೂ ಅವರಮ್ಮ ಬಿಡದೇ ಇವಳಿಗೆ ಇಡ್ಲಿಯ ಬೆಟ್ಟವನ್ನು ತೋರಿಸಿ ಸಂಜೀವಿನಿ ಪರ್ವತಕ್ಕೆ ಹೋಲಿಸಿ ಅಡುಗೆ ಭಟ್ಟರ ಕೈಗುಣವನ್ನು ಕೊಂಡಾಡಿದರು.

ವಿಜಿಗೆ ತಲೆ ಚಿಟ್ಟು ಬಂತು. ವಯಸ್ಸಿನ ಹುಡುಗಿಯರಿಗೆ ಪರಿಚಿತರು-ಅಪರಿಚಿತರು ಹೀಗೆ ಯಾರು ಬೇಕಾದರೂ ಒಂದು ಪ್ರಶ್ನೆ ಕೇಳುವ ಹಕ್ಕನ್ನು ನಮ್ಮ ಸಮಾಜ ಕೊಟ್ಟುಬಿಟ್ಟಿದೆ. ವಿಜಿಯ ಮುಂದೂ ಆ ಪ್ರಶ್ನೆ ಬಂದೇ ಬಂತು.

‘ನಿಂದ್ಯಾವಗವ್ವ ಮದಿವಿ?’
ಇದಕ್ಕೆ ಮುಖ ಮುರಿಯುವ ಹಾಗೆ ಉತ್ತರವನ್ನು ವಿಜಿ ತಯಾರು ಮಾಡಿಕೊಂಡೇ ಇದ್ದಳಾದರೂ ಅಷ್ಟು ಹೊತ್ತಿಗೇ ಇನ್ನೂ ಮದುವೆಯ ಗುಂಗಿನಲ್ಲೇ ಇದ್ದ ಅನಿಗಿ ಮನೆಗೆ ಬಂದಳು. ಸದ್ಯ, ಅನಿಗಿಯ ಅಮ್ಮ ಚಿಕ್ಕ ಹುಡುಗಿಯ ಕೈಲಿ ಆಗಲಿದ್ದ ಅವಮಾನದಿಂದ ಸ್ವಲ್ಪದರಲ್ಲೇ ಬಚಾವಾದರು.

ಅನಿಗಿ ಬಂದವಳೇ ವಿಜಿಯನ್ನು ನೋಡಿ ಕಂಡಾಪಟ್ಟೆ ಖುಷಿಯಾದಳು. ಅನಿಗಿಯ ಜೊತೆ ಇನ್ನೂ ನಾಲ್ಕು ಜನ ಸ್ನೇಹಿತೆಯರಿದ್ದರು. ಅನಿಗಿ ಮುಸುರೆ ಮುಟ್ಟುವ ಹಾಗಿಲ್ಲದ್ದರಿಂದ ಅವರಮ್ಮ ಎಲ್ಲರಿಗೂ ಕಾಫಿ ಮಾಡಿಕೊಟ್ಟು, ತಪ್ಪದೇ ಮದುವೆಯ ಆಲ್ಬಂ ಅನ್ನು ಅವರ ಕೈಗೆ ಇಟ್ಟು ಟಿ.ವಿ ನೋಡಲು ಕುಳಿತರು. ಸ್ನೇಹಿತೆಯರೆಲ್ಲರೂ ರೂಮಿನಲ್ಲೇ ಸೇರಿಕೊಂಡು ಅನಿಗಿಯ ಲಗ್ನೋತ್ತರ ಮತ್ತು ಲಗ್ನ ಪೂರ್ವ ಸಾಹಸಗಳನ್ನು ಕೇಳಲು ಕುಳಿತರು. ಸೀರೆ, ಬಟ್ಟೆ, ಸಮಾರಾಧನೆ, ಹುಡುಗನ ಮನೆ, ಆಸ್ತಿ ಇತ್ಯಾದಿಗಳ ಚರ್ಚೆ ಮುಗಿದು ‘ಫಸ್ಟ್ ನೈಟು’ ಇತ್ಯಾದಿಗಳ ಗುಸ-ಗುಸ ಪಿಸ-ಪಿಸಗಳೂ ನಡೆದವು. ಯಥೇಚ್ಛವಾಗಿ ನಗುವೂ ಇತ್ತು.

ಅನಿಗಿಯದ್ದು ಪ್ರೇಮ ವಿವಾಹವಲ್ಲ ಎಂದು ವಿಶೇಷವಾಗಿಯೇನೂ ಹೇಳಬೇಕಿಲ್ಲ. ವರ ಅವರಪ್ಪ ಸದಾ ಸಂಪರ್ಕದಲ್ಲಿರುತ್ತಿದ್ದ ಬ್ರೋಕರ್ ಮೂಲಕ ಫಿಕ್ಸ್ ಆದವನು. ಚಿಕ್ಕಮಗಳೂರಿನ ಕಡೆ ಯಾವುದೋ ಊರು. ಕೆಲಸ ಬೆಂಗಳೂರಿನಲ್ಲಿ. ಮುಂದೆ ಅಮೆರಿಕಕ್ಕೆ ಹೋಗುವ ಚಾನ್ಸ್ ಇದೆ ಎನ್ನುವುದನ್ನು ಖಾತ್ರಿ ಮಾಡಿಕೊಂಡೇ ಅನಿಗಿಯ ಅಪ್ಪ ಮಗಳ ಮದುವೆ ಮಾಡಿಕೊಟ್ಟಿದ್ದರು.

ಚಿಕ್ಕಮಗಳೂರು ಕಡೆಯಿಂದ ದಾವಣಗೆರೆ ತನಕ ಹೆಣ್ಣು ಹುಡುಕಲು ಬರುವವರು ಸುಮ್ಮನೇ ಬಂದಾರೆಯೇ? ಹೆಣ್ಣು ಹುಡುಕುವುದು ಗಂಡು ನೋಡುವುದು, ಇವೆಲ್ಲ ಮುಲಾಜಿಗೆ ಬಿದ್ದರೆ ಆಗದ ಕೆಲಸಗಳು. ಹಾಗಾಗಿ ಹೆಣ್ಣು ನೋಡಲು ಬರುವವರು ಊರ ಕಡೆ ಒಂದು ದಿನದಲ್ಲಿ ಒಂದೈದಾರು ಹೆಣ್ಣುಗಳನ್ನು ನೋಡುವ ತಯಾರಿಯಲ್ಲೇ ಬರುತ್ತಿದ್ದರು.

ಅನಿಗಿಯ ವರ ನವೀನನೂ ಆ ತೆರನ ಹೆಣ್ ನೋಡೋ ಟ್ರಿಪ್ (ಎಚ್ಎನ್ಟಿ) ಮೇಲೆ ಬಂದವನೇ. ಅವನು ಬಂದ ದಿನ ಅನಿಗಿಯ ಕ್ಲಾಸ್ ಮೇಟ್ ರೂಪಾ, ಶಶಿ ಮತ್ತು ಅನಿಗಿಯನ್ನೂ ಸೇರಿಸಿ ಇನ್ನೂ ಇಬ್ಬರನ್ನು ನೋಡಿ ಹೋಗಿದ್ದ. ತಮಾಷೆಯೆಂದರೆ, ರೂಪಾ, ಶಶಿ ಮತ್ತು ಅನಿಗಿ ಮೂರೂ ಜನ ಬಹಳ ಹತ್ತಿರದ ಸಂಬಂಧಿಗಳು ಮತ್ತು ಬಹಳ ಗಾಢವಾದ ಗೆಳೆತನ ಇದ್ದವರು. ಆರ್ಥಿಕವಾಗಿ, ಸಾಮಾಜಿಕವಾಗಿ ಮೂವರೂ ಒಂದೇ ತರಹದ ಹಿನ್ನೆಲೆ ಇದ್ದರೂ ಅನಿಗಿಯ ತಂದೆ ಸ್ವಲ್ಪ ತಮ್ಮ ರಾಜಕೀಯ ಕನೆಕ್ಷನ್ನುಗಳಿಂದಾಗಿ ಆಳುವ ವರ್ಗಕ್ಕೆ ಹತ್ತಿರವಾಗಿಯೂ, ಸ್ಥಿತಿವಂತರಾಗಿಯೂ ಇದ್ದರು.

ಹಾಗಾಗಿ ನವೀನನ ತೂಕದ ಕಡ್ಡಿ ಅನಿಗಿಯ ಕಡೆ ವಾಲಿತ್ತು. ಇದಕ್ಕೆ ಇನ್ನೊಂದು ಕಾರಣವೂ ಇತ್ತು. ವರದಕ್ಷಿಣೆ ನಿಷೇಧ ಕಾಯ್ದೆ ಇತ್ತೇನೋ ಹೌದು. ಆದರೆ ಬೆಳೆದಿರುವ ಮಗಳಿದ್ದಾಗ, ಹಸಿದಿರುವ ಹುಡುಗರಿದ್ದಾಗ ಕಾಯ್ದೆ ಏನು ‘ಕಿತ್ತುಕೊಂಡೀತು’ ಎನ್ನುವ ಭಾವ ಬಹಳ ಕನ್ಯಾಪಿತೃಗಳಿಗೆ ಇರುತ್ತದೆ. ಆ ಕಾಯ್ದೆ ನೆನಪಿಗೆ ಬರುವುದು ಮದುವೆ ಮುರಿಯುವ ಹಂತಕ್ಕೆ ಬಂದಾಗ ಮಾತ್ರ. ಆ ಮಾತು ಈಗ ಬೇಡ. ಇನ್ನೂ ಮದುವಣಗಿತ್ತಿಯೇ ಆಗಿದ್ದ ಅನಿಗಿಯನ್ನು ಮಾತನಾಡಿಸಲು ವಿಜಿಯ ಜೊತೆ ಶಶಿ, ರೂಪಾ ಕೂಡ ಬಂದಿದ್ದರು.

‘ಅಲ್ಲೇ ನಮ್ಮುನ್ನೂ ನೋಡ್ಕಂಡ್ ಹೋಗಿದ್ದ ನಿನ್ ಗಂಡ. ಆಮ್ಯಾಲ್ ಹೇಳ್ತೀನಿ ಅಂದಿತ್ತಪ್ಪ. ಅದೆಂಗ್ ನಿಮ್ಮನ್ಯಾಗ್ ಪಿಕ್ಸ್ ಆತೇ?’ ಅಂತ ರೂಪಾ ಕೇಳಿದಳು. ಇಲ್ಲಿ ಒಂದು ಮಾತು ಗಮನಿಸಬೇಕು. ಯಾರಿಗೂ ಯಾರ ಮೇಲೂ ಮತ್ಸರ ಇದ್ದಿದ್ದಿಲ್ಲ. ತನ್ನನ್ನು ನೋಡಿದ ಹುಡುಗ ಈಕೆಯನ್ನು ಮಾಡಿಕೊಂಡ ಎನ್ನುವ ಅವಮಾನವೂ ಇದ್ದಿದ್ದಿಲ್ಲ. ಇದ್ದದ್ದು ಬರೀ ಕುತೂಹಲ ಅಷ್ಟೇ.

ಸರೀಕರು ತುಂಬಿರುವ ಊರಿನಲ್ಲಿ ಬರೀ ಸಹೃದಯತೆ ಸತ್ತಾಗ ಮಾತ್ರ ಕೆಲಸಕ್ಕೆ ಬರುವ ಗುಣ ಎಂದು ನಂಬಿದ್ದರು ಅನಿಗಿಯ ಅಪ್ಪ. ಹಾಗಾಗಿಯೇ ಮಗಳ ಮದುವೆಯ ವಿಷಯ ಬಂದಾಗ ಬಹಳ ಚಾಕಚಕ್ಯತೆಯಿಂದ ಕೆಲಸ ಮಾಡಿದ್ದರು.

ಗೂಢಾಚಾರರನ್ನು ಬಿಟ್ಟು ಆ ಹುಡುಗ ಎಷ್ಟು ಹುಡುಗಿಯರನ್ನು ಈವತ್ತು ನೋಡಲಿದ್ದಾನೆ, ಅಲ್ಲೆಲ್ಲ ಎಷ್ಟು ವರದಕ್ಷಿಣೆ ‘ಕೋಟ್’ ಮಾಡಲಿದ್ದಾರೆ ಎಂದೆಲ್ಲ ಮೊದಲೇ ಮಾಹಿತಿ ಸಂಗ್ರಹಿಸಿಟ್ಟುಕೊಂಡಿದ್ದರು. ಹುಡುಗ ಅನಿಗಿಯ ಮನೆಗೆ ಬಂದ ಕೂಡಲೇ ಮೊದಲಿಗೆ ಅನಿಗಿಯನ್ನು ತೋರಿಸಿದರು.

‘ಚಹಾ ಮಾತ್ರ ಕೊಡು. ಆಗ್ಲೇ ಚನ್ನಬಸಪ್ಪಾರ ಮನ್ಯಾಗ (ಮೊದಲಿಗೆ ನೋಡಿದ ಹುಡುಗಿಯ ತಂದೆಯ ಹೆಸರು) ಇವ್ರದ್ದು ಉಪ್ಪಿಟ್ಟು-ಶಿರಾ ಆಗೇತಿ’ ಎಂದು ನವೀನನ ಕಡೆ ನೋಡಿ ಹಲ್ಲು ಕಿರಿದರು. ನವೀನ ಒಳಗಿನಿಂದ ಸ್ವಲ್ಪ ಕುಸಿದ. ಅರೆ! ತನ್ನ ಬಗ್ಗೆ ಪೂರ್ತಿ ಮಾಹಿತಿ ಇವರಿಗೆ ಗೊತ್ತಾದಂತಿದೆ ಎಂದು ಸ್ವಲ್ಪ ಮೆತ್ತಗಾದ.

ಮಾತುಕತೆ – ಅಂದರೆ ಗೊತ್ತಲ್ಲ? ಬಿಕರಿಯ ರೇಟು–ವರದಕ್ಷಿಣೆ ಮಗಳ ನೆಪದಲ್ಲಿ ಡಿಮಾಂಡಾಗುವ ಬಂಗಾರ ಎಲ್ಲದರ ಮಾತು ನಡೆಯಿತು.
ಅನಿಗಿಯ ಅಪ್ಪ ಎಲ್ಲದರಲ್ಲೂ ಹಿಂದಿನ ಮನೆಯಲ್ಲಿ ಕೋಟ್ ಮಾಡಿದ್ದಕ್ಕಿಂತ ಒಂದು ಗುಂಜಿ ತೂಕ ಜಾಸ್ತಿಯೇ ಮಾಡಿದ್ದರೇನೋ ಸರಿ. ಆದರೆ, ನವೀನ ಕ್ಲೀನ್ ಬೋಲ್ಡ್ ಆದದ್ದು ಅನಿಗಿಯನ್ನು ನೋಡಿ ಅಲ್ಲವೇ ಅಲ್ಲ. ವರದಕ್ಷಿಣೆಯ ಬಾಬತ್ತಿನ ಮಾತು ಬಂದಾಗ. ಅದನ್ನು ಮಾತ್ರ ಮಾಸ್ಟರ್ ಸ್ಟ್ರೋಕ್ ಎಂದೇ ಕರೆಯಬೇಕು.

‘ನಿಮ್ಮಪ್ಪ ಚೌಕಾಸಿ ಮಾಡಿ ಐದು ಲಕ್ಷ ಅಂತತಲ್ಲೇ? ನಮ್ಮಪ್ಪ ಎಲ್ಲ ಜಾಸ್ತಿ ಹೇಳ್ತು. ಕ್ಯಾಷು ಆರು ಲಕ್ಷ, ಮ್ಯಾಲ ಕಾರು, ಮತ್ತ ಅನ್ನ ಖರ್ಚು (ಮದುವೆ ಖರ್ಚು) ಮತ್ತ ಬಂಗಾರ 10 ತೊಲಿ ಅಂತು ನೋಡವಾ. ಅದಕ್ಕ ತಕ್ಷಣ ಒಪ್ಪಿಗ್ಯಂಡ್ರು ನಮ್ಮನೇವ್ರು. ಒಂದು ಲಕ್ಷ ಜಾಸ್ತಿ ಹೇಳಿದ್ದಕ್ಕ ನನಗ ಗಂಡು ದಕ್ಕಿದ್ದು. ಇಲ್ಲಾಂದ್ರ ಮತ್ತ ನಮ್ಮವ್ವ ವಾರ್-ವಾರಕ್ಕೂ ಉಪ್ಪಿಟ್ ಮಾಡ್ಕಂತ ಕುಂದ್ರ ಬೇಕಾಗಿತ್ತು’ ಎಂದು ಅನಿಗಿ ಅಭಿಮಾನದಿಂದ ಯಾವುದೇ ಮುಚ್ಚುಮರೆಯಿಲ್ಲದೆ ಹೇಳಿದಳು.

ಇದು ಬಹಳ ವರ್ಷಗಳ ಹಿಂದಿನ ಕತೆಯಾದ್ದರಿಂದ ಅಂದಿನ ಒಂದು ಲಕ್ಷ ಇಂದಿನ ಹತ್ತು ಲಕ್ಷಗಳಿಗೆ ಸಮ ಎಂದುಕೊಂಡರೂ ಆದೀತು. ರೂಪಾ, ಶಶಿ ತಮ್ಮ ಅಪ್ಪಂದಿರಿಗೆ ಈ ತಂತ್ರವನ್ನು ಅನುಸರಿಸುವಂತೆ ಹೇಳುವುದು ಎಂದು ನಿರ್ಧರಿಸಿಕೊಂಡರು.

ಇದನ್ನು ಕೇಳಿದ ವಿಜಿ ಸ್ವಲ್ಪ ವಿಚಲಿತಳಾದಳು. ಈ ಊರಿನಲ್ಲಿ ಇದ್ದರೆ ವಾರಾಂತ್ಯದ ಉಪ್ಪಿಟ್ಟು ಕಾರ್ಯಕ್ರಮದಲ್ಲಿ ಭಾಗಿಯಾಗಬೇಕಾಗುತ್ತದೆ. ಇದೆಲ್ಲ ಉಪಯೋಗವಿಲ್ಲದ ದಾರಿ ಎಂದೆನಿಸಿ ಗ್ರ್ಯಾಜುಯೇಷನ್ ಕೋರ್ಸು ಮುಗಿದ ನಂತರ ಅವರಪ್ಪನಿಗೆ ಖಡಾಖಂಡಿತವಾಗಿ ಹೇಳಿದಳು. ‘ದಾವಣಗೆರಿಯಾಗ್ ಇರಾ ಯಾವ್ ಕೋರ್ಸೂ ಓದಂಗಿಲ್ಲ ನಾನು. ಒಟ್ನಾಗ್ ಊರ್ ಬಿಡಬಕು. ನೀ ಏನ್ ಬೇಕಾರೂ ಮಾಡು. ನಾನು ಬ್ಯಾರೆ ಕಡೆ ಓದಬಕು. ಹಾಸ್ಟೆಲ್ಲಿನ್ಯಾಗೇ ಇರಬಕು’.

ಅವರಪ್ಪನೂ ಬೇರೆ ವಿಧಿಯಿಲ್ಲದೆ ಒಪ್ಪಿದರು. ಮೈಸೂರಿಗೆ ಇಂಗ್ಲಿಷ್ ಸಾಹಿತ್ಯ ಎಂ.ಎ ಮಾಡಲು ಪರೀಕ್ಷೆ ಬರೆದಳು. ಪಾಸೂ ಆಯಿತು. ಹೊಸ ಬಟ್ಟೆ ಬರೆ ಕೊಂಡುಕೊಳ್ಳುವಾಗ ಅವರಪ್ಪನ ಪರಿಚಯದವರು ಆಗಾಗ ಕಡ್ಡಿ ಇಡಲು ನೋಡಿದರು. ಮೈಸೂರಿನಲ್ಲಿ ಓದಿಸುವಂಥದ್ದು ಏನಿದೆ? ಇಲ್ಲೇ ಓದಬಹುದಲ್ಲ? ಅಲ್ಲಿಗೆ ಕಳಿಸಿದರೆ ಸುಮ್ಮನೆ ಖರ್ಚು ಎಂದೆಲ್ಲ ಹೇಳಿದರು. ಆದರೆ ವಿಜಿಯ ಅದೃಷ್ಟವೋ ಏನೋ ಅವರಪ್ಪ ಅದಕ್ಕೆಲ್ಲ ಮೈಟ್ ಮಾಡಲಿಲ್ಲ.

ಮಹದೇವ ಎಕ್ಸ್ಪ್ರೆಸ್ ಎನ್ನುವ ಏಕೈಕ ಬಂಡಿ ಬಸ್ಸು ದಾವಣಗೆರೆಯಿಂದ ಮೈಸೂರಿಗೆ ಓಡಾಡುತ್ತಿತ್ತು. ಟ್ರೇನು ಡೈರೆಕ್ಟ್ ಇರಲಿಲ್ಲ. ಅರಸೀಕೆರೆಯಲ್ಲಿ ಬದಲಾಯಿಸಿ ಹೊರಡಬೇಕಿತ್ತು ಅಥವಾ ಬೆಂಗಳೂರಿಗೆ ಬಂದು ಹೋಗಬೇಕಿತ್ತು. ಶಿವಮೊಗ್ಗಾದಲ್ಲಿ ಕುವೆಂಪು ಯೂನಿವರ್ಸಿಟಿಯಾದಾಗಿನಿಂದ ಮೈಸೂರಿಗೆ ಓದಲು ಬರುವ ಹುಡುಗರು ಹುಡುಗಿಯರು ಕಡಿಮೆಯಾಗಿದ್ದರು.

ವಿಜಿಗೆ ದಾವಣಗೆರೆಯ ಮಿರ್ಚಿ ಸ್ವಾದ ಕಳೆದುಕೊಂಡಂತೆಯೂ, ಸಂಬಂಧಗಳು ಅಳ್ಳಕವಾದಂತೆಯೂ ಭಾಸವಾಗಿ ತಲೆಚಿಟ್ಟು ಹಿಡಿದು ಹೋಗಿತ್ತು. ಊರು ಬಿಡುವಾಗ ಒಂದು ಬಗೆಯ ಬಿಡುಗಡೆಯ ಭಾವ. ಆ ಬಿಡುಗಡೆಯ ಭಾವವನ್ನು ಆಸ್ವಾದಿಸುತ್ತಿದ್ದೇನೆಂಬ ಅರಿವು ಒಳಗೇ ಚುಚ್ಚುತ್ತಿತ್ತು. ಆದರೆ, ಒಂದು ಮಾತಂತೂ ಖರೆಯಾಗಿತ್ತು. ಅಸ್ಮಿತೆ ಎನ್ನುವ ಹುಡುಕಾಟ ಮೈಸೂರಿನಲ್ಲಿ ಅಲ್ಲದಿದ್ದರೆ ಇನ್ನೊಂದು ಊರಿನಲ್ಲಾದರೂ ಆಗಬೇಕಿತ್ತು. ಆದರೆ, ಮೈಸೂರಿಗೆ ಇದ್ದ ಸಾಂಸ್ಕೃತಿಕ ನಗರ ಎಂಬ ಇಮೇಜು ವಿಜಿಯ ತಂದೆಗೆ ಬಹಳ ಹಿಡಿಸಿತ್ತು. ಸಂಬಂಧಿಕರು, ನೆಂಟರಿಷ್ಟರು ಇರುವ ಊರಿನಲ್ಲಿ ನಮ್ಮ ನೆಲೆ ಕಂಡುಕೊಳ್ಳುವುದು ಬಹುತೇಕ ಸುಲಭ. ಇಂಟರ್ನೆಟ್ ಇರುವ ಈವತ್ತಿನ ದಿವಸಗಳಲ್ಲಿ ಯಾವುದನ್ನೂ, ಯಾರನ್ನೂ ಕೇಳಲೇಬೇಕಿಲ್ಲ. ಹೋಟೆಲ್ಲಿನಿಂದ ಹಿಡಿದು ಬಾಡಿಗೆ ಮನೆ, ಇತ್ತ ಇಷ್ಟ ದೇವತೆಯ ದೇವಸ್ಥಾನದ ಲೊಕೇಷನ್ನೂ, ಪೂಜೆಯ ಸಮಯ ಎಲ್ಲವೂ ಅಂತರ್ಜಾಲದಲ್ಲಿ ಸಿಗುತ್ತದೆ.

ಆದರೆ, ರಕ್ತ-ಮಾಂಸಗಳುಳ್ಳ ಜನರನ್ನು ಪರಿಚಯ ಮಾಡಿಕೊಂಡು, ಅವರ ಹತ್ತಿರ ನಮಗೆ ಬೇಕಾದ ಮಾಹಿತಿ ತೆಗೆದುಕೊಂಡು ಬಂದ ಕೆಲಸ ಮುಗಿಸುವಷ್ಟರಲ್ಲಿ ಅರ್ಧ ದಿನವೇನು ಒಮ್ಮೊಮ್ಮೆ ಪೂರ್ತಿ ದಿನವೂ ಕಳೆದು ಹೋಗಿರುತ್ತದೆ. ಆದರೂ ಅಂತರ್ಜಾಲ ಇಲ್ಲದ ಕಾಲದಲ್ಲಿ ಸಹಾಯ ಕೇಳುವ ಮನುಷ್ಯರಿದ್ದರು. ಅಂತೆಯೇ ಸಹಾಯ ಮಾಡುವ ಸಹೃದಯಿಗಳೂ ಸಾಕಷ್ಟು ಸಂಖ್ಯೆಯಲ್ಲಿ ಇದ್ದರು. ಇಬ್ಬರಿಗೂ ಒಂದು ರೀತಿಯ ಋಣಭಾರ ಸಂದಾಯ ನಡೆಯುತ್ತಿತ್ತು. ತಮಗೆ ದೊರೆತ ಸಹಾಯಕ್ಕೆ ಪ್ರತಿಯಾಗಿ ಸಹಾಯ ಮಾಡುವವರು ಅಥವಾ ತಮಗೆ ಯಾರೋ ಮಾಡಿದ ಸಹಾಯವನ್ನು ನೆನೆಯುತ್ತಲೇ ಇನ್ನೊಬ್ಬರಿಗೆ ಅದನ್ನು ದಾಟಿಸಿ ಅವರನ್ನೂ ಋಣವೃತ್ತದೊಳಕ್ಕೆ ಸೇರಿಸಿಕೊಳ್ಳುವುದು ಬಹಳ ಸಾಮಾನ್ಯವಾದ ಪ್ರಕ್ರಿಯೆ.

‘ಅಯ್ಯೋ ನಮ್ಗೂ ಎಷ್ಟು ಸ್ನೇಹಿತ್ರು ಸಹಾಯ ಮಾಡಿದ್ರು ಗೊತ್ತಾ? ನಾವ್ ಮಾಡ್ತಾ ಇರೋದು ಎಲ್ಲೋ ಅಲ್ಪಸ್ವಲ್ಪ’ ಎನ್ನುವ ಕೆಲವರೂ, ‘ನಮಗ್ಯಾರೂ ಸಹಾಯ ಮಾಡ್ಲಿಲ್ಲ. ಆದ್ರೂ, ನಾನು ಬೇರೆಯವರು ನಾನು ಅನುಭವಿಸಿದಷ್ಟು ಕಷ್ಟ ಎದುರಿಸಬಾರದೆಂದು ಬೇರೆಯವರಿಗೆ ಸಹಾಯ ಮಾಡ್ತೀನಿ’ ಎನ್ನುವ ಇನ್ನು ಕೆಲವರೂ ಎಲ್ಲ ಊರುಗಳಲ್ಲೂ ಹೇರಳವಾಗಿ ದೊರಕುತ್ತಾರೆ.

ಊರಿಗೆ ಹೊಸದಾಗಿ ಬಂದವರನ್ನು ಅಥವಾ ಹೊಸ ಊರಿಗೆ ಬಂದವರನ್ನು ಸ್ವಾಗತಿಸುವುದು ಅಗಾಧವಾದ ಒಂದು ಅಪರಿಚಿತ ಭಾವ. ಆಸಕ್ತಿಯುಳ್ಳವರಾಗಿದ್ದರೆ, ಜೀವನ್ಮುಖಿಗಳಾಗಿದ್ದರೆ ಆ ಅಪರಿಚಿತಭಾವವನ್ನು ಮಣಿಸಿ ಊರನ್ನು ತಮ್ಮ ಅನುಭವಕ್ಕೆ ಬಗ್ಗಿಸಿಕೊಳ್ಳುತ್ತಾರೆ. ಆದರೆ, ಸ್ವಲ್ಪ ಅಳ್ಳೆದೆಯವರಾದರೆ ವಾಪಾಸ್ ತಮ್ಮ ಊರಿಗೆ ಗಂಟು ಕಟ್ಟುತ್ತಾರೆ. ಇಲ್ಲದಿದ್ದರೆ ಅಲ್ಲಿರುವಷ್ಟು ಕಾಲವೂ ‘ಇಲ್ಲಿರಲಾರೆ, ಅಲ್ಲಿಗೆ ಹೋಗಲಾರೆ’ ಎಂಬ ಭಾವದಲ್ಲಿ ಬದುಕುತ್ತಾರೆ.

ಇವಳಿಗೆ ಮೈಸೂರಿಗೆ ಬಂದ ತಕ್ಷಣ ಆದ ಜ್ಞಾನೋದಯವೆಂದರೆ ಈ ಊರಿನಲ್ಲಿ ಯಾರೂ ಬೈಗುಳ ಬಳಸುವುದಿಲ್ಲ. ಇಲ್ಲಿ ಹೇಗಪ್ಪಾ ಇರುವುದು ಎನ್ನುವ ಚಿಂತೆಯಲ್ಲಿ ಮೊದಲ ಕೆಲವು ದಿನಗಳು ಕಳೆದವು. ಇದಕ್ಕೆ ಅಡ್ಜಸ್ಟ್ ಆಗುವ ಮನಃಸ್ಥಿತಿಗೆ ಬರುತ್ತಿದ್ದ ಹಾಗೆಯೇ ಅರಿವಾದ ಇನ್ನೊಂದು ಅತಿ ಮುಖ್ಯವಾದ ಸಂಗತಿ—ಹೋಟೆಲ್ಗಳೆಲ್ಲ ಇಳಿಸಂಜೆಗೇ ಬಾಗಿಲು ಮುಚ್ಚುತ್ತವೆ. ಇಡೀ ದಿನ ಮಾನಸ ಗಂಗೋತ್ರಿಯಲ್ಲಿ ಕಳೆಯಬೇಕು. ವಿಜಿ ತಲೆ ಮೇಲೆ ಕೈ ಹೊತ್ತು ಕೂತಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.