ಮಹಿಳೆಯರಿಗೇ ವಿಶಿಷ್ಟವಾದ ಕಲಾಪ್ರಕಾರಗಳು ಇವೆಯೆ ಎನ್ನುವ ಚರ್ಚೆಯೊಂದು ಯಾವಾಗಲೂ ಚಾಲ್ತಿಯಲ್ಲಿದೆ. ಫ್ರೆಂಚ್ ಲೇಖಕಿಯೊಬ್ಬಳು ತನ್ನಷ್ಟಕ್ಕೆ ತಾನೇ ರೂಪಕವಾಗಿರುವ ಹೆಣ್ಣು ಸದಾ ಆ ರೂಪಕವನ್ನು ಇನ್ನೂ ನಿಗೂಢವಾಗಿಸುವ ಪ್ರಯತ್ನದಲ್ಲಿಯೂ ಗಂಡು ಆ ರೂಪಕವನ್ನು ಅರ್ಥೈಸುವ ಪ್ರಯತ್ನದಲ್ಲಿಯೂ ವ್ಯಸ್ತರು ಎಂದು ತಮಾಷೆ ಬೆರೆತ ತಾತ್ವಿಕ ಗಾಂಭೀರ್ಯದಲ್ಲಿ ಹೇಳುತ್ತಾಳೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಪಡೆದ ಮೊದಲ ಘಟ್ಟದಲ್ಲಿ ಮಹಿಳೆಯರ ಮೊದಲ ಆಯ್ಕೆ ಕಾವ್ಯವೋ ಗದ್ಯವೋ ಎನ್ನುವುದನ್ನು ಕುರಿತಂತೆ ಅನೇಕ ಸಾಹಿತ್ಯಕ, ಸಮಾಜಶಾಸ್ತ್ರೀಯ ಮತ್ತು ಮನೋವೈಜ್ಞಾನಿಕ ಅಧ್ಯಯನಗಳು ನಡೆದಿವೆ. ಈ ಯಾವ ಅಧ್ಯಯನಗಳೂ ಇದಮಿತ್ಥಂ ಎನ್ನುವ ಖಾಚಿತ್ಯದಲ್ಲಿ ಏನನ್ನೂ ಸ್ಥಾಪಿಸಲಾಗಿಲ್ಲ ಎನ್ನುವುದು ಬೇರೆಯ ಮಾತು.

ಒಟ್ಟಂದದಲ್ಲಿ ಎಲ್ಲ ಬಗೆಯ ಕಲಾಭಿವ್ಯಕ್ತಿಗಳಲ್ಲೂ ಕಾಣಬಹುದಾದ ಹೆಣ್ಣಿನ ಸಂವೇದನೆಯ ಮತ್ತು ಅಭಿವ್ಯಕ್ತಿಯ ಅನನ್ಯತೆಯೇ ಹೆಣ್ಣಿನ ಭಾಷೆಯಲ್ಲವೇ ಎನ್ನುವ ಮಹತ್ವದ ಪ್ರಶ್ನೆಯೊಂದು ಇತ್ತೀಚಿನ ಅಧ್ಯಯನಗಳ ಮುಖ್ಯ ನೆಲೆಯಾಗಿದೆ. ಇದೊಂದು ಕುತೂಹಲಕರವಾದ ಮತ್ತು ಮಹತ್ವದ ಬೆಳವಣಿಗೆ. ರೂಪಕಗಳು ಹೆಣ್ಣಿನ ಅಡಗುತಾಣವಾಗಿರುವಂತೆಯೇ ತನ್ನದೇ ಆದ, ತನ್ನದಾಗುತ್ತಲೇ ಇತರರದೂ ಎಲ್ಲರದೂ ಆಗಬಹುದಾದ ಭಾಷೆಯನ್ನು ಕಟ್ಟುವ ಪ್ರಯತ್ನವಾಗಿಯೂ ಅವಳ ಅಭಿವ್ಯಕ್ತಿಯನ್ನು ನೋಡಬೇಕೆನ್ನುವ ಮಹತ್ವಾಕಾಂಕ್ಷೆಯ ಪ್ರಯತ್ನ ಇದು. ಕಾವ್ಯದ ಸಾರ್ವತ್ರಿಕ ಸಾರ್ವಕಾಲಿಕ ನೆಲೆಯನ್ನು ಇದು ಒಪ್ಪುತ್ತಲೇ ಅದರೊಂದಿಗೆ ತನ್ನ ತಕರಾರನ್ನು ತೆಗೆಯುತ್ತದೆ. ಗಂಡಿನ ಅನುಭವಲೋಕವನ್ನೇ ಲೋಕಾನುಭವವಾಗಿ, ಮಾನವಾನುಭವವಾಗಿ ಸ್ಥಾಪಿಸಿದ ಬಗೆಯನ್ನು ಕುರಿತ ತಕರಾರು ಇದು.

ಸ್ಥೂಲವಾಗಿ, ಸರಳವಾಗಿ ಹೇಳುವುದಾದರೆ, ವರ್ಡ್ಸ್ವರ್ತ್ ಕಾವ್ಯದ ಬಗ್ಗೆ ‘Man speaking to Men’ ಎಂದು ಮಂಡಿಸುವ ವ್ಯಾಖ್ಯಾನ ಮೊದಲುಗೊಂಡು ಕಾವ್ಯದ ಬಗೆಗಿನ ಯಾವ ಗಂಭೀರವಾದ ವ್ಯಾಖ್ಯಾನಗಳೂ ಗಂಡಿನ ಅನುಭವ ಲೋಕವನ್ನೇ ಮಾನವಾನುಭವವಾಗಿ ನೋಡುವ ದೃಷ್ಟಿಕೋನದವೇ. ಸಾಮಾನ್ಯವಾಗಿ ಇಲ್ಲಿ ಕಾಣಿಸುವ ಹೆಣ್ಣಿನ ಅನುಭವಲೋಕವು ತನ್ನ ಅನನ್ಯತೆಯಲ್ಲಿ ಕಾಣಿಸುವುದು ಅಪರೂಪ. ಬದಲಾದ ದೃಷ್ಟಿಕೋನದಲ್ಲಿ ಅವುಗಳನ್ನು ವ್ಯಾಖ್ಯಾನಿಸುವ ಅನಿವಾರ್ಯತೆಯಲ್ಲಿ ಅವುಗಳನ್ನು ಹೊಸ ಬಣ್ಣದಲ್ಲಿ, ಸ್ವಾಯತ್ತ ನೆಲೆಯಲ್ಲಿ ನಾವು ಗುರುತಿಸಿ ಅವುಗಳನ್ನು ಪುನರ್ ರಚಿಸಿಕೊಳ್ಳ ಬೇಕು, ಇಲ್ಲವಾದಲ್ಲಿ ಅವರು ಮಾಯೆಯಾಗಿಯೂ ಮಾಯಾಪಾಶವಾಗಿಯೂ ಕಾಣಿಸಿಕೊಳ್ಳುತ್ತಾ ಹೋಗು ತ್ತಾರೆ. ಬದುಕಿನ ಶೋಧದಲ್ಲಿನ ಸಹಯಾತ್ರಿಕರ ಹಾಗೆ ಸಹಜ ಗೌರವ ಮತ್ತು ಘನತೆಯಲ್ಲಿ, ‘ನಾನೆನ್ನೆ ನೀನೆನ್ನೆ’ ಎನ್ನುವ ಅಹಂಕಾರವಳಿದ ಸಮಾನ ಆತ್ಮಗೌರವದ ಹೆಣ್ಣು ಮಕ್ಕಳ ಪ್ರಮಾಣ ತೀರವೆಂದರೆ ತೀರ ಕಡಿಮೆ ಎನ್ನುವುದು ಈ ತಾತ್ವಿಕತೆಯ ಮೂಲನಿಲುವು.

ಇದೊಂದು ಕಡೆಯಾದರೆ, ಲೇಖಕಿಯರ ಅನುಭವ ಲೋಕವನ್ನೇ ಕ್ಷುದ್ರಾನುಭವಲೋಕವೆಂದು ಅಳೆದು ಪಕ್ಕಕಿಟ್ಟ ವಿಮರ್ಶೆಯ ದುರಂತ ಇನ್ನೊಂದು ಕಡೆ, ಟೆರ್ರಿ ಈಗಲ್ ಟನ್, ‘ಎರಡೂವರೆ ಲೇಖಕಿಯರನ್ನು ಮುಖ್ಯ ವೆಂದು ಭಾವಿಸಿ ಕಟ್ಟಿದ ಸಾಹಿತ್ಯ ಪರಂಪರೆಯಿಂದ ಇಂಗ್ಲಿಷ್ ವಿಮರ್ಶೆ ಇನ್ನೂ ಚೇತರಿಸಿಕೊಂಡಿಲ್ಲ’ ಎಂದು ಹೇಳುವ ಮಾತು ನೆನಪಾಗುತ್ತದೆ. ಜೇನ್ ಆಸ್ಟಿನ್, ಜಾರ್ಜ್ ಎಲಿಯಟ್ ಮತ್ತು ಆಗಾಗ ಎಮಿಲಿ ಬ್ರಾಂಟೆ ಈ ಎರಡೂವರೆ ಲೇಖಕಿಯರು.

ಇಂಥ ದುರಂತಕ್ಕೆ ಹಲವು ಕಾರಣಗಳಿವೆ. ಮಹಿಳೆಯರು ಎದುರಿಸಿದ ಸವಾಲುಗಳನ್ನು, ಆತಂಕಗಳನ್ನು ಲಘುವಾಗಿ ನೋಡಿದ್ದು ಒಂದು ಕಾರಣವಾದರೆ, ಆ ಎಲ್ಲವುಗಳನ್ನೂ ಪಿತೃಸಂಸ್ಕೃತಿ ತನ್ನ ಪರವಾಗಿ ವಾಲುವಂತೆ ನೋಡಿಕೊಂಡದ್ದು ಇನ್ನೊಂದು ಮುಖ್ಯ ಕಾರಣ. ಈ ಎರಡರ ಜೊತೆ ತನ್ನ ಎದುರಿನ ಸವಾಲುಗಳು ಮತ್ತು ಅವಕಾಶಗಳನ್ನು ಕುರಿತಂತೆ ಹೆಣ್ಣಿನಲ್ಲಿದ್ದ ದ್ವಂದ್ವಗಳು ಅವಳನ್ನು ಕಂಗೆಡಿಸಿದ ಬಗೆ. ‘ದಾರಿಯೆರಡರ ನಡುವೆ ದಟ್ಟ ಮಂಜು’ ಎನ್ನುವುದು ಅಕ್ಷರಶಃ ಅವಳನ್ನು ತಲೆಮಾರುಗಳ ಪರ್ಯಂತ ಕಾಡಿದ ಕ್ರಮವನ್ನು ಗಂಭೀರವಾಗಿ ತೆಗೆದುಕೊಳ್ಳುವಲ್ಲಿ ನಮ್ಮ ವಿದ್ವತ್ ಲೋಕದ ವೈಫಲ್ಯ. ಮತ್ತೆ ಕೆಲವು ಬಾರಿ ಈ ದ್ವಂದ್ವ ಮತ್ತು ಸವಾಲನ್ನು ಅದರ ಎಲ್ಲ ಮಗ್ಗುಲುಗಳಲ್ಲಿ ಕಾಣುವಲ್ಲಿ ಲೇಖಕಿಯರು ವಿಫಲರಾದದ್ದು.

ತ್ರಿವೇಣಿ ಕನ್ನಡದಲ್ಲಿ ವಿಶಿಷ್ಟವಾದ ಹೆಸರು. ಕಾದಂಬರಿಯನ್ನು ಜನಪ್ರಿಯ ಪ್ರಕಾರವಾಗಿ ಮಾಡಿದ್ದು, ಕಾದಂಬರಿಗೂ ಲೇಖಕಿಯರಿಗೂ ಜನ್ಮಜನ್ಮಾಂತರದ ಸಂಬಂಧವೇನೋ ಎನ್ನುವ ಛಾಪು ಮೂಡಿಸಿದ್ದು ತ್ರಿವೇಣಿ. ಅಷ್ಟೇಕೆ, ಕನ್ನಡದಲ್ಲಿ ಅಸಂಖ್ಯಾತ ಕಾದಂಬರಿಕಾರ್ತಿಯರು ಹುಟ್ಟಿದ್ದರ ಹಿಂದೆ ತ್ರಿವೇಣಿಯವರ ದಟ್ಟ ಪ್ರಭಾವವಿದೆ. ತ್ರಿವೇಣಿಯವರ ನೆನಪಿನ ಕಾರ್ಯಕ್ರಮವೊಂದರಲ್ಲಿ, ಪ್ರಸಿದ್ಧ ಲೇಖಕರೊಬ್ಬರು, ಮಹಿಳೆಯರ ಕಾದಂಬರಿಗಳನ್ನು ಓದುವುದು ಅಷ್ಟೇನೂ ಗೌರವದ ವಿಷಯವಾಗಿರದಿದ್ದಾಗ ತಾವೂ ಸೇರಿದಂತೆ ಅನೇಕರು ತ್ರಿವೇಣಿಯವರ ಕಾದಂಬರಿಗಳನ್ನು ಕದ್ದು ಮುಚ್ಚಿ ಓದುತ್ತಿದ್ದುದಾಗಿ ಅಪ್ಪಣೆ ಕೊಡಿಸಿದ್ದರು!

ಹೆಣ್ಣನ್ನು ಬರವಣಿಗೆಯ ಕೇಂದ್ರವಾಗಿಸಿಕೊಂಡ ತ್ರಿವೇಣಿ ಕನ್ನಡಕ್ಕೆ ಹಲವು ಒಳ್ಳೆಯ ಕಾದಂಬರಿಗಳನ್ನು ಕೊಟ್ಟವರು. ‘ಶರಪಂಜರ’ ಕಾದಂಬರಿ ಹೆಣ್ಣಿನ ಅಂತರಂಗದ ತಳಮಳ, ಅದಕ್ಕೆ ಕಾರಣವಾಗುವ ಸಾಮಾಜಿಕ ಪರಿಸ್ಥಿತಿ ಮತ್ತು ಮೌಲ್ಯವ್ಯವಸ್ಥೆಯ ಸೂಕ್ಷ್ಮಗಳನ್ನು ಹೇಳುವ ಕೃತಿ. ಹೆಣ್ಣಿನ ಮನಸ್ಸು ಮತ್ತು ಅಂತರಂಗ, ಸಂಸಾರ ಮತ್ತು ಸಮಾಜ ಗಮನಿಸಬೇಕಾದ ಸಂಗತಿಗಳು ಎನ್ನುವ ಅರಿವನ್ನು ಮೂಡಿಸಿದ ಕಾದಂಬರಿ ಇದು. (ಆದರೆ ಯಾಕೋ ‘ಶರಪಂಜರ’ ಸಿನಿಮಾದಲ್ಲಿನ ಕಲ್ಪನಾರ ಅಭಿನಯ ಮಾತ್ರ ಹೆಣ್ಣಿನ ಸ್ವಮರುಕದ ಪರಾಕಾಷ್ಠೆಯಲ್ಲಿ ಲೋಕಕಾರುಣ್ಯವನ್ನು ದೈನೇಸಿತನದಲ್ಲಿ ಬೇಡುವ ಪಾತ್ರವಾಗಿ ಕಾದಂಬರಿಯ ಮೂಲನೆಲೆಯನ್ನೇ ಪಲ್ಲಟಗೊಳಿಸಿಬಿಟ್ಟಿದೆ).

ಆರಂಭದಲ್ಲಿ ಪ್ರಸ್ತಾಪಿಸಿದ ಹೆಣ್ಣಿನ ಎದುರಿಗಿನ ದ್ವಂದ್ವಗಳು ಅವಳನ್ನು ಕಂಗೆಡಿಸಿದ ಬಗೆಗೆ ತ್ರಿವೇಣಿಯವರ ‘ಅಪಸ್ವರ’ ಮತ್ತು ‘ಅಪಜಯ’ ಕಾದಂಬರಿಗಳ ನಾಯಕಿ ಮೀರ ಅತ್ಯುತ್ತಮ ಉದಾಹರಣೆ. ದ್ವಂದ್ವವನ್ನು ಸವಾಲಾಗಿ ನೋಡಲು ಬೇಕಾಗುವ, ಹೊಸದಾರಿಯ ಸಹಜ ಸವಾಲೆಂದು ನೋಡಲು ಬೇಕಾಗುವ ಭಾವಲೋಕದ ಮತ್ತು ಬೌದ್ಧಿಕ ವಿನ್ಯಾಸದ ಖಾಚಿತ್ಯ ನೆಲೆಗಳು ರೂಪುಗೊಳ್ಳುವುದು ಎಷ್ಟು ಕಷ್ಟಸಾಧ್ಯದವು ಎನ್ನುವುದನ್ನು ಈ ಎರಡೂ ಕಾದಂಬರಿಯಲ್ಲಿ ಮೀರ ಸ್ಪಷ್ಟಪಡಿಸುತ್ತಾಳೆ. ಇದು, ಇದು ಮಾತ್ರ, ಇಷ್ಟು ಮಾತ್ರ ಎನ್ನುವ ಚೌಕಟ್ಟುಗಳು ಹೆಣ್ಣಿನ ಸಮಸ್ತ ವ್ಯಕ್ತಿತ್ವವನ್ನೂ ಅವಳ ನಿದ್ದೆ ಎಚ್ಚರಗಳಲ್ಲಿಯೂ ನಿರ್ದೇಶಿಸುವ, ನಿಯಂತ್ರಿಸುವ ಶಕ್ತಿಯನ್ನು ಪಡೆದಿವೆ. ಎಷ್ಟರ ಮಟ್ಟಿಗೆಂದರೆ, ಅದೆಷ್ಟೋ ಸಂದರ್ಭಗಳಲ್ಲಿ ಅವಳಿಗೆ ಇದು ತನ್ನ ಸ್ವತಂತ್ರ ನಿರ್ಧಾರವೋ, ಸಮಾಜದ ಪರವಾಗಿ ಆದರೆ ತನ್ನದೇ ಎನ್ನುವ ಹೆಸರಿನಲ್ಲಿ ತೆಗೆದುಕೊಳ್ಳುವ ನಿರ್ಧಾರವೋ ಎನ್ನುವುದೇ ಸ್ಪಷ್ಟವಾಗದಷ್ಟು.

‘ಅಪಸ್ವರ’ ಕಾದಂಬರಿಯಲ್ಲಿ, ವಿದ್ಯಾವಂತಳಾದ, ತನ್ನನ್ನು ತಾನು ಆಧುನಿಕ ಎಂದು ತಿಳಿದ ಮೀರ ಹಳ್ಳಿಯಲ್ಲಿ ಕೃಷಿಕನಾಗಿರುವ ಶಾಮುವನ್ನು ಮದುವೆಯಾಗುತ್ತಾಳೆ. ನಗರದಿಂದ ಹಳ್ಳಿಗೆ ವಲಸೆ ಹೋಗುತ್ತಾಳೆ. ಜೀವನದಲ್ಲಿ ತಾನು ಮಾಡಿಕೊಂಡಿರುವುದು ರಾಜಿಯೋ, ಹೆಣ್ಣಿನ ಬದುಕು ಇರಬೇಕಾದುದೇ ಹೀಗೋ ಎನ್ನುವ ಸ್ಪಷ್ಟತೆಯೇ ಇಲ್ಲದೆ, ಈ ಮದುವೆ ತನ್ನ ಬದುಕನ್ನು ಅರ್ಥಪೂರ್ಣವಾಗಿಸುತ್ತಿದೆಯೋ ವ್ಯರ್ಥವಾಗಿಸು ತ್ತಿದೆಯೋ ಎನ್ನುವ ಅಸ್ಪಷ್ಟ ಪ್ರಶ್ನೆಯಲ್ಲಿ ಅವಳ ಬದುಕು ಆರಂಭವಾಗುತ್ತದೆ. ಮಗು ವೀಣಾ ಹುಟ್ಟಿದ ಮೇಲೆ ಅಷ್ಟರಮಟ್ಟಿಗೆ ಪ್ರಶ್ನೆ ಬಗೆಹರಿಯಿತೆಂದೇ ಅವಳು ತಿಳಿಯುತ್ತಾಳೆ. ಮಗುವಿನ ರೂಪದಲ್ಲಿ ಬದುಕಿಗೆ ಕೇಂದ್ರವೊಂದು ಸಿಕ್ಕಿತು ಎನ್ನುವ ಸಮಾಧಾನದಲ್ಲಿ ರುವಾಗಲೇ ಘಟಿಸಿದ ಮಗುವಿನ ಸಾವು ಅವಳನ್ನು ಮತ್ತೆ ಪ್ರಶ್ನೆಗಳ ಚಕ್ರವ್ಯೂಹಕ್ಕೆ ತಳ್ಳುತ್ತದೆ. ಡಾಕ್ಟರಾಗಬೇಕೆನ್ನುವ ತನ್ನ ಅನಾದಿ ಕನಸು ಮುನ್ನೆಲೆಗೆ ಬಂದು, ಅದು ತನ್ನ ಬದುಕಿನ ಕೇಂದ್ರವಾದೀತು ಎನ್ನುವ ಸಾಧ್ಯತೆಯನ್ನು ಅವಳೆದುರಿಗೆ ಒಡ್ಡುತ್ತದೆ.

ಮಗುವಿನ ಸಾವು ಇವಳ ಸಂಸಾರದಲ್ಲಿನ ಅಪಸ್ವರವಾದಂತೆಯೇ ಮದುವೆಯಾದ ಮೇಲೆ ಓದು ಮುಂದುವರಿಸಬೇಕು ಎನ್ನುವುದೂ ಒಂದು ಅಪಸ್ವರವೇ. ಈ ‘ಅಪಸ್ವರ’ಕ್ಕೊಂದು ನೈತಿಕ ಸಮರ್ಥನೆಯೋ ಎನ್ನುವಂತೆ ಮಗುವಿನ ಸಾವು. ಮಗುವಿನ ಸಾವಿನ ದುಖವನ್ನು ಮೀರಲು ತಾನು ಓದುವುದು ಅವಶ್ಯಕ ಎಂದು ಮೀರ ತನ್ನನ್ನೂ, ಗಂಡ ಶಾಮುವನ್ನೂ ಒಪ್ಪಿಸುತ್ತಾಳೆ. ಮದುವೆಯಲ್ಲಿ ಆರಂಭವಾದ ಮೀರಳ ದ್ವಂದ್ವ ಇಲ್ಲಿ ಇನ್ನಷ್ಟು ಸಾಂದ್ರವಾಗುತ್ತದೆ. ಮುಂದಿನ ಓದು ತನ್ನ ಆತ್ಮ ಸಂತೋಷಕ್ಕಾಗಿ ಬೇಕೋ, ಮಗುವಿನ ಸಾವಿನ ದುಃಖವನ್ನು ಮರೆಯುವುದಕ್ಕಾಗಿ ಬೇಕೋ, ತನ್ನ ಬದುಕಿಗೊಂದು ಕೇಂದ್ರವನ್ನು, ಅರ್ಥವನ್ನು ಕಟ್ಟಿಕೊಳ್ಳುವುದಕ್ಕಾಗಿ ಬೇಕೋ ಎನ್ನುವ ಸ್ಪಷ್ಟತೆಯೇ ಇಲ್ಲದೆ ಮೀರ ಒದ್ದಾಡುತ್ತಾಳೆ. ಈ ಅಸ್ಪಷ್ಟತೆ ಮೀರಳದ್ದೆಷ್ಟೋ ಅಷ್ಟೇ ತ್ರಿವೇಣಿಯವರದ್ದೂ ಹೌದು. ಕಾದಂಬರಿಗಳ ಶೀರ್ಷಿಕೆಯೇ ಇದನ್ನು ಸೂಚಿಸುತ್ತದೆ.

ಇಂಥ ತನ್ನೊಳಗಿನ ಮತ್ತು ಪರಿಸರದ ಅಪಸ್ವರದಲ್ಲಿ ಮೀರಳ ವೈದ್ಯಕೀಯ ಅಭ್ಯಾಸ ಆರಂಭವಾಗುತ್ತದೆ. ಹೊರಗಿನ ಅಪಸ್ವರವನ್ನು ಕಡೆಗಣಿಸುವುದು, ನಿಭಾಯಿಸುವುದು ಅಷ್ಟರ ಮಟ್ಟಿಗೆ ಸರಳ, ಒಳಗಿನ ಅಪಸ್ವರಕ್ಕೆ ಹೋಲಿಸಿದರೆ. ತನ್ನೊಳಗೆ ಒಂದು ಸ್ಪಷ್ಟತೆಯನ್ನು ಕಂಡುಕೊಳ್ಳಲು ಅವಳು ಪ್ರಯತ್ನಿಸುತ್ತಾಳೆ ಎನ್ನುವುದು ನಿಜ. ‘...ಮೆಡಿಕಲ್ ಮುಗಿಯುವವರೆಗೆ ನಾನು ಬದುಕಿದ್ದರೆ ಇಲ್ಲಿಗೇ ನಿಮ್ಮಲ್ಲಿಗೇ ಬರುತ್ತೇನೆ. ಹೆಂಡತಿಯಂತಲ್ಲ, ಗೆಳತಿಯ ಹಾಗೆ. ಆದರೆ ನಾನು ಯಾವ ಕೆಲಸವೂ ಇಲ್ಲದೆ ನಿಮ್ಮ ಸುಖವೇ ನನ್ನ ಸುಖ ಎಂದು ತಿಳಿದು ಇಲ್ಲಿಯೇ ಇರಲಾರೆ. ಗಂಡನೇ ನನ್ನ ದೇವರು, ಅವನ ಸುಖ ತನ್ನ ಸುಖ ಎಂದು ಭಾವಿಸುವ ಕಾಲ ಹೋಯಿತು, ಹೆಂಗಸು ತನ್ನ ಪತಿಗಿಂತಲೂ ತನ್ನ ವ್ಯಕ್ತಿತ್ವ, ಅಭಿಪ್ರಾಯ, ಆತ್ಮವನ್ನು ಪ್ರೀತಿಸುತ್ತಾಳೆ. ನನ್ನ ಮಹದಾಸೆಯನ್ನು ನೀವು ಗೌರವಿಸುತ್ತಿರುವುದಕ್ಕಾಗಿ ನಾನು ಅತ್ಯಂತ ಕೃತಜ್ಞಳು’ ಎಂದು ಗಂಡ ಶಾಮುವಿಗೆ ಹೇಳುತ್ತಾಳೆ. ಆದರೆ ಇದೊಂದು ಕಲಿತು ಒಪ್ಪಿಸಿದ ಹೇಳಿಕೆಯಂತೆ ಭಾಸವಾಗುವುದು ಅವಳಿಗೆ ತನ್ನ ಈ ನಿಲುವಿನ ಬಗ್ಗೆಯೇ ಒಳಗಿನಿಂದ ಆಳವಾಗಿ ಹುಟ್ಟುವ ಅನುಮಾನಗಳಿಂದಾಗಿ.

ಇಂಥ ಅನುಮಾನದ ಕಾರಣಕ್ಕಾಗಿಯೇ ಅವಳು ಗಂಡ ಶಾಮುವಿಗೆ ತಾನೇ ಮುಂದೆ ನಿಂತು ಇನ್ನೊಂದು ಮದುವೆ ಮಾಡಿಸುತ್ತಾಳೆ. ತನ್ನಿಂದ ಅವನು ಸಾಂಸಾರಿಕ ಸುಖಕ್ಕೆ ಎರವಾಗಬಾರದು ಎನ್ನುವ ಹೆಣ್ಣಿನ ಅದೇ ಸ್ಥಾಪಿತ ವಿನ್ಯಾಸದ ಮುಂದುವರಿಕೆಯಾಗಿ. ಮೀರ ಗಂಡನಿಗೆ ಮಾಡಿಸುವ ಈ ಮದುವೆಯನ್ನು ತನ್ನೆದುರಿಗಿನ ದ್ವಂದ್ವಕ್ಕೆ ಪರಿಹಾರವಾಗಿ ಎಂದು ಎಣಿಸುತ್ತಾಳೆ.

ತನ್ನ ವಿದ್ಯೆ ಮತ್ತು ಸಮಾಜಮುಖಿಯಾದ ಡಾಕ್ಟರಿಕೆಯಿಂದ ಸಂಸಾರದಲ್ಲೂ ಸಮಾಜದಲ್ಲೂ ವಿಶಿಷ್ಟ ಸ್ಥಾನ ಪಡೆದು ತನ್ನ ಬದುಕಿನ ಸಾರ್ಥಕತೆ ಪಡೆಯಬಹುದೆನ್ನುವ ಅವಳ ಬಯಕೆ ಈಡೇರುವುದಿಲ್ಲ. ಇವಳ ವಿದ್ಯೆ, ಸ್ಥಾನಮಾನಗಳೇ ಇವಳು ಎದುರಿಸಬೇಕಾದ ಬಹುದೊಡ್ಡ ತೊಡಕುಗಳಾಗಿಬಿಡುತ್ತವೆ. ಗಂಡನಿಗೆ ಇನ್ನೊಬ್ಬ ಹೆಂಡತಿ ಸರಸಳಿಂದಾದ ಮಕ್ಕಳನ್ನು ತನ್ನವೆಂದು ತಿಳಿದೂ ಅದನ್ನು ಕಾರ್ಯಗತಗೊಳಿಸಲಾಗದ, ತನ್ನ ವೈದ್ಯಕೀಯ ವೃತ್ತಿಯನ್ನೂ ಗಂಡನ ಮನೆಯಲ್ಲಿದ್ದು ಸಂಪೂರ್ಣವಾಗಿ ನಡೆಸಲಾಗದ ಅಸಹಾಯಕತೆಯಲ್ಲಿ ಮೀರ ಮೈಸೂರಿಗೆ ವಾಪಸಾಗುತ್ತಾಳೆ. ತನ್ನ ಬದುಕನ್ನು ಅವಳು ಅಪಜಯವೆಂದು ತೀರ್ಮಾನಿಸುವುದರಲ್ಲಿ ಕಾದಂಬರಿ ಮುಗಿಯುತ್ತದೆ.

ಆದರೆ ನಮ್ಮ ಪ್ರಶ್ನೆಗಳು ಆರಂಭವಾಗುತ್ತವೆ. ಓದಬೇಕೆನ್ನುವ, ತನ್ನದೇ ವ್ಯಕ್ತಿತ್ವ ಮತ್ತು ಬದುಕನ್ನು ಕಟ್ಟಿಕೊಳ್ಳಬೇಕೆನ್ನುವ ಬಯಕೆಗಳು ಯಾಕೆ ಅಪಸ್ವರವಾಗಿ ಅಪಜಯವಾಗಿ ಕಾಣಬೇಕು? ಲೋಕಕ್ಕಲ್ಲ ನಮಗೇ ಅವು ಅಪಸ್ವರವಾಗಿ ಅಪಜಯವಾಗಿ ಕಾಣುವುದು ಏಕೆ? ಇದಕ್ಕೆ ಯಾರು ಕಾರಣ? ಇನ್ನೂ ಬದಲಾಗದ, ಬೆಳೆಯದ ಹೆಣ್ಣಿನ ಸ್ವಪ್ರಜ್ಞೆಯೆ? ಸವಾಲುಗಳನ್ನು ದ್ವಂದ್ವಗಳಾಗಿ ನೋಡುತ್ತಾ, ಎದುರಿಸುವ ದಾರಿ ಕಾಣದ ಅವಸ್ಥೆಯೆ? ನಮ್ಮೊಳಗಿನ ಹಿಂಜರಿಕೆಗೆ ತೊಡಿಸುವ ಹೊರಗಿನ ವಿರೋಧ ಮತ್ತು ನಿರಾಕರಣೆಯ ವೇಷವೆ?
ಮೀರಳಿಗೆ ಜಯವಾಗಬೇಕಿತ್ತು ಎನ್ನುವುದು ಈ ಪ್ರಶ್ನೆಗಳ ಇರಾದೆಯಲ್ಲ. ಪ್ರಶ್ನೆ ತಾರ್ಕಿಕ, ಮೂರ್ತ ಗೆಲುವಿನದ್ದಲ್ಲವೇ ಅಲ್ಲ.

ದೃಷ್ಟಿಕೋನದ ಮಿತಿಯದು. ಬದಲಾವಣೆಯ ಪ್ರಕ್ರಿಯೆಯ ಸಂದರ್ಭದಲ್ಲಿ ಎದುರಾಗುವ ಅಗ್ನಿದಿವ್ಯಗಳನ್ನು ಕುರಿತಂತೆ ಹೆಣ್ಣಿನಲ್ಲಿರಬೇಕಾದ ಒಳಎಚ್ಚರದ, ಒಳ ತಿಳಿವಿನ ನೋಟದ್ದು. ಈ ಕಾದಂಬರಿಗಳ ಮೀರ ಕೆಲವೊಮ್ಮೆ ಅದೆಷ್ಟು ದುರ್ಬಲಳಾಗಿ ಕಾಣುತ್ತಾಳೆಂದರೆ, ಶಿಕ್ಷಣ ಮತ್ತು ಆಧುನಿಕತೆಯ ಪರಿಸರಗಳೇ ಹೆಣ್ಣನ್ನು ದುರ್ಬಲಗೊಳಿಸಿಬಿಡುತ್ತವೆಯೆ ಎನ್ನುವ ಅನುಮಾನ ನಮ್ಮಲ್ಲಿ ಹುಟ್ಟುವಷ್ಟು. ಮೀರಳ ಸಮಸ್ಯೆ ಮತ್ತು ಮಿತಿಯ ಮೂಲ ಇನ್ನೂ ಒಂದಿದೆ. ಅದು ಮಧ್ಯಮವರ್ಗದ ಹೆಣ್ಣಿನದ್ದು. ಬೇಕು ಬೇಡಗಳ ದ್ವಂದ್ವ, ಬೇಡಗಳ ಕಬಂಧಬಾಹುಗಳ ಹಿಡಿತ ಮಧ್ಯಮವರ್ಗದ ಹೆಣ್ಣನ್ನು ಕುಗ್ಗಿಸುವಷ್ಟು ಮತ್ತ್ಯಾವ ವರ್ಗದ ಹೆಣ್ಣುಗಳನ್ನೂ ಕುಗ್ಗಿಸುವುದಿಲ್ಲ. ತ್ರಿವೇಣಿಯವರ ಕಾದಂಬರಿಗಳಲ್ಲಿನ ಮಧ್ಯಮವರ್ಗದ ಹೆಣ್ಣುಗಳು ವಿಧಿಸಿಕೊಳ್ಳುವ ಸ್ವದಿಗ್ಬಂಧನಗಳು ಲಕ್ಷ್ಮಣರೇಖೆಗಳಿಗಿಂತಲೂ ಬಲವಾದವು.

ಮೀರ ಇಂಥ ಸ್ವದಿಗ್ಬಂಧನಗಳನ್ನೂ ಲಕ್ಷ್ಮಣರೇಖೆಗಳನ್ನೂ ದಾಟುವುದಾಗಿ ಘೋಷಿಸುತ್ತಾಳೆ. ಆದರೆ ದಾಟಬೇಕಾಗಿರುವುದು ಜೀವನ್ಮರಣದ ಪ್ರಶ್ನೆ ಎನ್ನುವುದನ್ನು ಆತ್ಮಗತ ಮಾಡಿಕೊಳ್ಳುವುದರಲ್ಲಿ ಸೋಲುತ್ತಾಳೆ. ಈ ಸೋಲು ತನ್ನದೋ ಪರಿಸರದ್ದೋ ಎನ್ನುವುದನ್ನು ಅರ್ಥಮಾಡಿಕೊಳ್ಳುವುದರಲ್ಲಿಯೂ ಅವಳು ಸೋಲುತ್ತಾಳೆ. ನಿರ್ಣಾಯಕವಾದ ಯುದ್ಧವೊಂದರಲ್ಲಿ, ಸಮಸ್ತವನ್ನೂ ಪಣಕ್ಕಿಟ್ಟು ಹೋರಾಡಬೇಕಾದ ಹೊತ್ತಿನಲ್ಲಿ ಶಸ್ತ್ರತ್ಯಾಗ ಮಾಡಿ ಸೋಲೊಪ್ಪಿಕೊಂಡ, ಏಕಪಕ್ಷೀಯವಾಗಿ ತನ್ನ ಸೋಲನ್ನು ಘೋಷಿಸಿಕೊಂಡವಳ ಹಾಗೆ ಮೀರ ಕಾಣಿಸುತ್ತಾಳೆ. ಧೀರೋದಾತ್ತವಾಗಿ ಹೋರಾಟ ಮಾಡಿ ಸೋತ ಸೋಲಲ್ಲ ಇದು. ನಿಜವೆಂದರೆ ಇದನ್ನು ಸೋಲೆಂದು ತಿಳಿಯುವುದೇ ಹೆಣ್ಣಿನ ಸೋಲು. ಸೋಲು ಗೆಲುವಿನ, ಅಪಸ್ವರ–ಅಪಜಯಗಳ ಘೋಷಿತ ನೆಲೆಗಳನ್ನು ದಾಟಿದ ಮಹಾಸಂಗ್ರಾಮದಲ್ಲಿ ಅನೇಕ ಹೆಣ್ಣುಮಕ್ಕಳು ಇಂಥ ತಾವೇ ಹೆಣೆದುಕೊಳ್ಳುವ ಬಲೆಯಲ್ಲಿ ಬಂಧಿತರು. ಮೀರ ಅವರಲ್ಲೊಬ್ಬಳು. ಅವಳ ಪಾತ್ರ ಹೀಗೆ, ತೆರಣಿಯ ಹುಳುವಿನಂತೆ ತನ್ನ ಸುತ್ತ ತಾನೆ ನೇಯ್ದುಕೊಳ್ಳುವ ಬಲೆಯ ಹೆಣ್ಣುಮಕ್ಕಳ ಪ್ರತಿನಿಧಿ.

ಆದರೆ ಇದು ತ್ರಿವೇಣಿಯವರ ವ್ಯಕ್ತಿಗತ ಮಿತಿ ಎಂದು ಮಾತ್ರ ಹೇಳಲಾಗದು. ದಾಂಪತ್ಯ ಮತ್ತು ಸಂಸಾರವನ್ನು ಕುರಿತಂತೆ, ಅದು ಹೆಣ್ಣಿನ ಅಂತಿಮ ಗಮ್ಯವೆಂಬಂತೆ ರೂಪಿಸಲಾಗಿರುವ ಮನೋವಿನ್ಯಾಸವನ್ನು ದಾಟುವುದು ಅಮೆಜ಼ಾನ್ ನದಿಯನ್ನು ದಾಟಿದಂತೆ. ನಮ್ಮದು ಕೆರೆಗೆ ಹಾರದ ಭಾಗೀರಥಿಯರ ನಾಡು. ನಮಗೆ ನಾವೇ, ‘ಖಂಡವಿದೆಕೊ ಮಾಂಸವಿದೆ ಕೊ’ ಎಂದು ಬಲಿಯಾಗುವುದೇ ಮೌಲ್ಯವೂ ಮಾದರಿಯೂ ಆಗಿರುವ ನಾಡು. ಈ ಮಾದರಿಯ ಎದುರಿಗಿರುವುದು, ಮನದನ್ನೆ ಎಂದು ಹೇಳುತ್ತಲೇ, ‘ಆಡದಿರು ಎನಗೆ ಇದಿರಾಡದಿರು, ಮಾಡದಿರು ಬಾಳನ್ನು ಬೇಳೆಯಂತೆ, ಕೂಡಿರಲಿ ಬಾಳು ಇಡಿಗಾಳಿನಂತೆ’ ಎಂದು ಎಚ್ಚರಿಕೆ ಕೊಡುತ್ತಾ ‘ಮಲಗಿರುವ ಹಾವನ್ನು ಕೆಣಕಬೇಡ, ಕಚ್ಚಿ ವಿಷ ಕಾರಿದರೆ ತಿಣುಕ ಬೇಡ’ ಎಂದು ಹೆಣ್ಣನ್ನು ಹುಲ್ಲೆಯಂತೆ ಹೆದರಿಸಿ ದಾಂಪತ್ಯವನ್ನು ಆಳುವ ಮಾದರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.