ವಿಕ್ರಮ ಮತ್ತು ಬೇತಾಳನ ಕತೆಗೂ ಸ್ತ್ರೀವಾದಿಗಳ ನಿರಂತರ ಪ್ರಯತ್ನಗಳಿಗೂ ರೂಪಕದ ನೆಲೆಯಲ್ಲಿ ಒಂದು ಸಾಮ್ಯವಿದೆ. ವಿಕ್ರಮ ತನ್ನೆಲ್ಲ ಶಕ್ತಿ, ಪ್ರತಿಭೆ, ಪ್ರಾಮಾಣಿಕತೆ ಎಲ್ಲವನ್ನೂ ಬಳಸಿ ಕಥೆ ಹೇಳುತ್ತಲೇ ಹೋದರೂ ಬೇತಾಳ ಏನೋ ಒಂದು ನೆವ ತೆಗೆದು ವಾಪಸ್ ಹೋಗಿ ಮರಕ್ಕೆ ನೇತು ಹಾಕಿಕೊಳ್ಳುವಂತೆ ನಮ್ಮ ಮೌಲ್ಯವ್ಯವಸ್ಥೆ ಸ್ತ್ರೀವಾದದ ಜೊತೆ ನಡೆದುಕೊಳ್ಳುತ್ತಿರುತ್ತದೆ.

ಏನೆಲ್ಲ, ಎಷ್ಟೆಲ್ಲ ಪುರಾವೆಗಳನ್ನು ಕೊಟ್ಟರೂ, ಪ್ರಶ್ನಿಸಲಾಗದ ಪಾರದರ್ಶಕತೆಯಲ್ಲಿ ವಾಸ್ತವವನ್ನು ತೋರಿಸಿದರೂ ನಮ್ಮ ಮೌಲ್ಯವವ್ಯವಸ್ಥೆ ಅಲ್ಲೊಂದು ಕೊಕ್ಕೆ ಹಾಕಿ ವಾಪಸ್ ತನ್ನ ಸ್ಥಾಪಿತ ಚೌಕಟ್ಟಿಗೆ ತಾನೂ ವಾಪಸಾಗುತ್ತಾ ಹೆಣ್ಣನ್ನೂ ಅಲ್ಲಿಗೆ ಎಳೆಯುತ್ತಲೇ ಇರುತ್ತದೆ.

ಸ್ತ್ರೀವಾದವೆಂದರೆ, ಬಹುತೇಕರ ಮಟ್ಟಿಗೆ ಇರುವುದೆಲ್ಲವ ಬಿಟ್ಟು ಇರದುದರೆಡೆಗಿನ ತುಡಿತ. ಹೀಗಾಗಿ ಅದೊಂದು ಮರೀಚಿಕೆಯ ಹಿಂದಿನ ನಡಿಗೆ ಎನ್ನುವವರಿಗೇನೂ ಕಡಿಮೆಯಿಲ್ಲ ನಮ್ಮಲ್ಲಿ. ಹಾಗೆ ನೋಡಿದರೆ ಸ್ತ್ರೀವಾದಿ ತಾತ್ವಿಕತೆಯ ಎದುರಿಗೆ ಇರುವ ಬಹುದೊಡ್ಡ ಸವಾಲು ಅದರ ಸಮರ್ಥನೆಯದಲ್ಲ, ಅದರ ಅಪವ್ಯಾಖ್ಯಾನದ್ದು. ಸ್ತ್ರೀವಾದ ಅಂದರೆ ಏನೇನಲ್ಲ ಎಂದು ಹೇಳುವುದೂ ಒಂದು ವೃತ್ತಿಧರ್ಮವೇ ಆಗಿಬಿಟ್ಟಿದೆ!

ಮಾನವೀಯತೆಯ ಪರವಾದ ಮಾನವ ಕಲ್ಯಾಣದ ಯಾವ ಚಿಂತನೆಯಲ್ಲಿಯೂ ಸ್ತ್ರೀವಾದ ಹಾಸುಹೊಕ್ಕಾಗಿರುತ್ತದೆ. ಅದು ಕಾಣಬಹುದು, ಕಾಣದಿರಬಹುದು. ಅನೇಕ ಬಾರಿ ವ್ಯಕ್ತಿಗತವಾದ ನೆಲೆಯಲ್ಲಿ ವ್ಯಕ್ತಿಗಳು ಹೆಣ್ಣಿನ ವಿರುದ್ಧವಾಗಿದ್ದರೂ, ಅವಳ ಬಗೆಗೆ ಸಾಂಪ್ರದಾಯಿಕವಾಗಿ ಯೋಚಿಸುವಂಥವರೂ ತಮ್ಮ ತಾತ್ವಿಕತೆಯಲ್ಲಿ ಅದನ್ನು ಮೀರಿಕೊಂಡಿರುತ್ತಾರೆ. ಜೈವಿಕ, ಪ್ರಾಕೃತಿಕ ನ್ಯಾಯವೆನ್ನುವುದು ತನ್ನ ಸುಳಿವನ್ನು ಒಂದಲ್ಲ ಒಂದು ರೀತಿಯಲ್ಲಿ ಸತತವಾಗಿ ತೋರಿಸುತ್ತಲೇ ಇರುತ್ತದೆ.

ಕೆಲವು ತಿಂಗಳ ಹಿಂದೆ, ಸಭೆಯೊಂದರಲ್ಲಿ ಚಂದ್ರಶೇಖರ ಕಂಬಾರರು, ‘‘ಸ್ತ್ರೀವಾದವನ್ನು ಒಂದು ವಾಕ್ಯದಲ್ಲಿ ವಿವರಿಸು ಎಂದರೆ, ನೀವು ಹೇಗೆ ವಿವರಿಸುತ್ತೀರಿ’’ ಎಂದು ಕೇಳಿದಾಗ, ನಾನೆಂದೆ, ‘‘ಗಾಂಧಿ ಹೆಣ್ಣನ್ನು ಒಳಗೊಳ್ಳಲು, ಹೆಣ್ಣನ್ನು ಆವಾಹಿಸಿಕೊಳ್ಳಲು ನಡೆಸಿದ ಪ್ರಯತ್ನವೇ ಸ್ತ್ರೀವಾದ’’.

ಈ ಗಾಂಧಿ ಎನ್ನುವ ವ್ಯಕ್ತಿತ್ವ ನಮ್ಮ ಸಮಕಾಲೀನ ಜಗತ್ತಿಗೊಂದು ನಿಕಷ ಮತ್ತು ಕನ್ನಡಿ. ವ್ಯಕ್ತಿ ಸಹಜವಾದ ಮಿತಿಗಳನ್ನು, ದೌರ್ಬಲ್ಯಗಳನ್ನು ತನಗೆ ತಾನೇ ನೋಡಿಕೊಳ್ಳುವ ಪ್ರಕ್ರಿಯೆಯಿಂದ ಆರಂಭಿಸಿ, ಈ ಪ್ರಕ್ರಿಯೆಯೇ ಅದನ್ನು ಮೀರಿಕೊಳ್ಳಬೇಕಾದ ದಾರಿಯನ್ನೂ ತೋರಿಸುತ್ತಾ ಹೋಗುವ ಏಕೈಕ ದಾರಿ ಎನ್ನುವುದನ್ನು ಕಾಣಿಸಿದವರು ಗಾಂಧಿ.

ಮೇಲೊಂದು ಗರುಡ ಹಾರುತಿಹುದು
ಕೆಳಗದರ ನೆರಳು ಓಡುತಿಹುದು
ಅದಕೊ ಅದರಿಚ್ಛೆ ಹಾದಿ
ಇದಕೊ ಹರಿದತ್ತ ಬೀದಿ
ಪುತಿನ ಅವರ ಈ ಸಾಲುಗಳು ಕನ್ನಡವೂ ಸೇರಿದಂತೆ ಯಾವುದೇ ಭಾಷೆಯಲ್ಲಿ ಗಾಂಧಿಯನ್ನು ಕುರಿತ ಅತ್ಯುತ್ತಮ ಅಭಿವ್ಯಕ್ತಿಯಿದ್ದೀತು.

‘ಗಾಂಧಿಯೊಬ್ಬ ಮನುಷ್ಯನೆ’ ಎನ್ನುವುದು ಪ್ರಶ್ನೆಯೂ ಹೌದು, ಉತ್ತರವೂ ಹೌದು. ಬೆರಗೂ ಹೌದು, ವಾಸ್ತವವೂ ಹೌದು. ಗಾಂಧಿಯವರ ವಿಚಾರಗಳನ್ನು ಒಪ್ಪುತ್ತೇವೋ ಇಲ್ಲವೋ ಎನ್ನುವುದಕ್ಕಿಂತ ಮೂಲಭೂತವಾಗಿ ಮನುಷ್ಯರಿಗೆ ಅವರು ತೆರೆದ ಹಲವು ಬಾಗಿಲುಗಳು ಅವರನ್ನು ನಮ್ಮ ನಡುವೆ ಸದಾ ಉಳಿಸುತ್ತವೆ. ಒಂದೆರಡು ವರ್ಷಗಳ ಕೆಳಗೆ ಗೆಳತಿ ಸುರೇಖಾ ‘ಮೆಟ್ರೊ ರಂಗೋಲಿ’ಯಲ್ಲಿ ಒಂದು ವಿನೂತನ ಪ್ರಯೋಗ ಮಾಡಿದರು. ಸೆಪ್ಟೆಂಬರ್ ತಿಂಗಳಲ್ಲಿ ಮೆಟ್ರೊದ ಎದುರಿಗೆ ಒಂದು ಪೋಸ್ಟ್ ಡಬ್ಬ ಸ್ಥಾಪಿಸಿ, ‘ಯಾರು ಬೇಕಾದರೂ ಗಾಂಧಿಗೆ ಪತ್ರ ಬರೆದು ಅದರಲ್ಲಿ ಹಾಕಬಹುದು’ ಎನ್ನುವ ಪ್ರಕಟಣೆಯನ್ನು ಅಲ್ಲಿ ಇರಿಸಿದರು. ಅವರ ನಿರೀಕ್ಷೆಯನ್ನು ಮೀರಿ ಸಾವಿರಾರು ಪತ್ರಗಳು ಬಂದವು.

ಎಳೆಯ ಶಾಲಾ ಮಕ್ಕಳಿಂದ ಹಿಡಿದು ಎಪ್ಪತ್ತು ವರ್ಷದ ವೃದ್ಧರೂ ಗಾಂಧಿಗೆ ಬಹು ಗಂಭೀರವಾದ, ಆಪ್ತವಾದ ಪತ್ರಗಳನ್ನು ಬರೆದಿದ್ದರು. ಅವರ ಮನೆಯ ಸಮಸ್ಯೆಯಿಂದ ಹಿಡಿದು ಈ ದೇಶದ ಮತ್ತು ಜಗತ್ತಿನ ಸಮಸ್ಯೆಗಳನ್ನೆಲ್ಲ ಅಲ್ಲಿ ಚರ್ಚಿಸಲಾಗಿತ್ತು. ಗಾಂಧಿ ವ್ಯಕ್ತಿಯ ನೆಲೆಯನ್ನು ದಾಟಿ ಈ ದೇಶದ ಮಟ್ಟಿಗೆ, ನಮ್ಮನ್ನು ನಾವು ನೋಡಿಕೊಳ್ಳುವ ಕನ್ನಡಿಯಾಗಿ, ನಮ್ಮ ವಿಚಾರಗಳನ್ನು ಪರೀಕ್ಷಿಸಬಹುದಾದ ನಿಕಷವಾಗಿರುವುದು ಎಲ್ಲರ ಅನುಭವಕ್ಕೂ ಬಂದ ಸಂಗತಿ.

ಗಾಂಧಿ ಮತ್ತು ಹೆಣ್ಣನ್ನು ಕುರಿತ ಅವರ ವಿಚಾರಗಳು ಬಹು ಚರ್ಚಿತ ಮತ್ತು ಈಗಲೂ ಅದರ ಚರ್ಚೆ ನಡೆಯುತ್ತಲೇ ಇದೆ. ಪರ ವಿರೋಧದ ನೆಲೆಗಳನ್ನು ಚರ್ಚಿಸುವ ಮೊದಲು ನಾವು ಸ್ಪಷ್ಟಪಡಿಸಿಕೊಳ್ಳಬೇಕಾದ ಸಂಗತಿಯೆಂದರೆ, ಹೆಣ್ಣಿನ ಪ್ರಶ್ನೆಗಳನ್ನು ಗಾಂಧಿ ಅವರ ಇತರ ಪ್ರಶ್ನೆಗಳಷ್ಟೇ ಗಂಭೀರವಾಗಿ ತೆಗೆದುಕೊಂಡಿದ್ದರು ಎನ್ನುವುದು. ಹೆಣ್ಣಿನ ವಿಷಯ, ಹಲವು ಮುಖ್ಯ ನಾಯಕರಲ್ಲಿ ಆಗುವಂತೆ ಆನುಷಂಗಿಕವಾದ, ಉಪ ಎನ್ನಬಹುದಾದ ಸಂಗತಿಯಾಗಿರಲಿಲ್ಲ. ಅವರ ಸಾರ್ವಜನಿಕ ಬದುಕಿನ ಆರಂಭದಿಂದಲೂ ಗಾಂಧಿ ಹೆಣ್ಣಿನ ಪ್ರಶ್ನೆಗಳನ್ನು ತಮ್ಮ ಆದ್ಯತೆಯ ಪ್ರಶ್ನೆಗಳಲ್ಲಿ ಒಂದಾಗಿಯೇ ಉಳಿಸಿಕೊಂಡು ಬಂದರು.

ಲೋಹಿಯಾ ‘ಹೆಣ್ಣು ಮತ್ತು ದೇವರು ಯಾವಾಗಲೂ ಪುರುಷರನ್ನು ಕಾಡುವ ಎರಡು ಮೂಲ ಸಂಗತಿಗಳು’ ಎಂದರು. ಈ ಮಾತು ಯಾವಾಗಲೂ ನನಗೆ ಮಿಶ್ರ ಭಾವಗಳನ್ನು ಒಮ್ಮೆಗೇ ಮೂಡಿಸುತ್ತದೆ. ಈ ಮಾತೇ ಪುರುಷಾಹಂಕಾರದ ಠೇಂಕಾರದ ಉದ್ಗಾರವಾಗಿ ಕಾಣುತ್ತದೆ. ಮೂಲಧಾತುವಾದ ಪ್ರಕೃತಿಯನ್ನು ಹೆಣ್ಣು ಮತ್ತು ದೇವರಾಗಿ ವಿಭಜಿಸಿಕೊಂಡ, ಆ ಎರಡನ್ನೂ ಗೆಲ್ಲಲು ಹೊರಟ ಪುರುಷರ ವ್ಯರ್ಥ ಪ್ರಯತ್ನದ ಉದ್ಗಾರದ ಹಾಗೆಯೂ ಕಾಣುತ್ತದೆ! ಇಷ್ಟಕ್ಕೂ ಯಾವುದನ್ನಾದರೂ ಗೆಲ್ಲಲೇ ಬೇಕು ಎನ್ನುವ ಹಟವಾದರೂ ಏಕೆ?

ನಿಜವೆಂದರೆ ಸ್ತ್ರೀವಾದ ಸೋಲು ಗೆಲುವಿನ ಈ ವ್ಯಾಖ್ಯಾನಗಳನ್ನೆ ತಲೆಕೆಳಗು ಮಾಡುತ್ತದೆ. ನನಗನಿಸುವಂತೆ ಗಾಂಧಿಯೂ ಇದೇ ನಿಲುವಿನ ಆಸುಪಾಸಿನಲ್ಲಿದ್ದಾರೆ. ಹೆಣ್ಣನ್ನು ಕುರಿತ ಗಾಂಧಿಯವರ ವ್ಯಾಖ್ಯಾನಗಳು ಬಲು ಸಂಕೀರ್ಣ. ಈ ಸಂಕೀರ್ಣತೆಗೆ ಒಂದು ಕಾರಣ, ಅವು ಕಾಲಾನುಕಾಲದಲ್ಲಿ ಬದಲಾದ ಮತ್ತು ಬೆಳೆಯುತ್ತಾ ಹೋದ ಪ್ರಕ್ರಿಯೆಯ ಅಭಿವ್ಯಕ್ತಿಗಳಾಗಿವೆ ಎನ್ನುವುದು.

ಆದರೆ ನಾವು ನಿರ್ಣಾಯಕವಾಗಿ ಹೇಳಬಹುದಾದ ಅಂಶವೆಂದರೆ, ಮೋಹನದಾಸ ಕರಮಚಂದ್ ಗಾಂಧಿ ಮಹಾತ್ಮಾ ಗಾಂಧಿಯಾಗುವುದರಲ್ಲಿ ಹೆಣ್ಣಿನ ಪಾತ್ರ ಮುಖ್ಯವಾದುದು. ಯಾವುದನ್ನು ಗಾಂಧಿ ತಮ್ಮ ಬದುಕಿನ ದಾರಿ ಮತ್ತು ಗುರಿಯಾಗಿಸಿಕೊಂಡರೋ ಅವುಗಳನ್ನು ರೂಪಿಸುವಲ್ಲಿ ಹೆಣ್ಣಿನ ಶಕ್ತಿಧಾತುಗಳೇ ಪ್ರಧಾನ. ಇವತ್ತಿನ ಸಂದರ್ಭದಲ್ಲಿ ಯಾರಾದರೂ ಗಾಂಧಿಯ ಜೀವನ ಚರಿತ್ರೆಯನ್ನೋ ಅವರ ವ್ಯಕ್ತಿತ್ವದ ಅಧ್ಯಯನವನ್ನೋ ಮಾಡಿದರೆ ಈ ತನಕದ ಅಧ್ಯಯನಗಳಿಗಿಂತ ಅದು ಸಂಪೂರ್ಣವಾಗಿ ಬೇರೆಯಾಗಬಹುದಾದದ್ದು ಈ ಹಿನ್ನೆಲೆಯಲ್ಲಿ. ಆಫ್ರಿಕಾದಲ್ಲಿ, ಇತರರು ಬಳಸಿದ ಶೌಚಾಲಯವನ್ನು ತಾನು ಸ್ವಚ್ಛಗೊಳಿಸುವುದಿಲ್ಲ ಎಂದ ಕಸ್ತೂರಬಾ ಅವರನ್ನು ಕೈಹಿಡಿದು ಎಳೆದು ‘ಮನೆಬಿಟ್ಟು ಹೋಗು’ ಎಂದ ಗಾಂಧಿಗೂ ಕೊನೆಗಾಲದಲ್ಲಿ ‘ಸಮುದಾಯದ ನೈತಿಕತೆಯನ್ನು ಕಾಪಾಡಬಲ್ಲ ಶಕ್ತಿಯಿದ್ದರೆ ಅದು ಹೆಣ್ಣಿಗೆ ಮಾತ್ರ’ ಎಂದ ಗಾಂಧಿಗೂ ಇರುವ ವ್ಯತ್ಯಾಸವೇ ಗಾಂಧಿ ತನ್ನನ್ನು ತಾನು ‘ಹೆಣ್ಣು’ ಎನ್ನುವ ಪರೀಕ್ಷೆಗೆ ಒಡ್ಡಿಕೊಂಡಿದ್ದರ ಸೂಚನೆ.

ಗಾಂಧಿ ಮತ್ತು ಸ್ತ್ರೀವಾದದ ಬಗ್ಗೆ ಮಾತನಾಡಲು ಒಂದು ವೇದಿಕೆ ಸಿದ್ಧವಾಗುವುದೇ ಗಾಂಧಿ, ಇತರ ಪುರುಷರಿಗಿಂತ ಭಿನ್ನವಾದ ವ್ಯಕ್ತಿತ್ವವನ್ನು ರೂಪಿಸಿಕೊಂಡದ್ದರಿಂದ. ಆತ್ಮವಂಚನೆ ಮತ್ತು ಪುರುಷಾಹಂಕಾರ ಎರಡನ್ನೂ ನೀಗಿಕೊಂಡ ಮನಸ್ಥಿತಿಯನ್ನು ಗಾಂಧಿ ಬೆಳೆಸಿಕೊಳ್ಳುತ್ತಾ ಹೋದರು. ಆದ್ದರಿಂದಲೇ ಇವರ ವಿಚಾರಗಳ ಜೊತೆ ನಮಗೆ ಒಪ್ಪಿಗೆ ಇರದಿದ್ದರೂ ಇವರ ಪ್ರಾಮಾಣಿಕತೆಯನ್ನು ಪ್ರಶ್ನಿಸಲು ನಮಗೆ ಕಾರಣಗಳಿಲ್ಲ ಎನ್ನುವ ನಂಬಿಕೆ ನಮಗೆ ಬೆಳೆಯುತ್ತದೆ.

‘ನಾನು ಅರ್ಧ ಹೆಣ್ಣು’ ಎಂದು ಗಾಂಧಿ ಹೇಳುವ ಮಾತು ಕೇವಲ ಹೇಳಿಕೆಯಲ್ಲ, ಅದೊಂದು ಗಂಡು ತನ್ನನ್ನು ತಾನು ಮರು ವ್ಯಾಖ್ಯಾನಿಸಿಕೊಳ್ಳುವ ರೂಪಾಂತರಿಸಿಕೊಳ್ಳುವ ಅಪೂರ್ವ ಕ್ರಿಯೆ. ಪಿತೃಸಂಸ್ಕೃತಿಯು ತನಗೆ ಕೊಡ ಮಾಡಿದ ಅಸಹಜ, ಅಪ್ರಾಕೃತಿಕ ಅಧಿಕಾರದ ವಿಸರ್ಜನೆಯ ಕ್ರಿಯೆ ಇದು. ಇದು ಸುಲಭಕ್ಕೆ ಸಾಧ್ಯವಾಗುವುದಲ್ಲ. ‘ಗಾಂಧಿಯಂಥ ಧೀರರು ಮಾತ್ರ ದೇವರನ್ನು ನಂಬಬಲ್ಲರು’ ಎನ್ನುವ ಮಾತಿನಂತೆಯೇ ಗಾಂಧಿಯಂಥ ಧೀರರು ಮಾತ್ರ ತಮ್ಮನ್ನು ತಾವು ಇಂಥ ರೂಪಾಂತರಿತ ವ್ಯಕ್ತಿತ್ವಕ್ಕೆ ಸಜ್ಜು ಮಾಡಿಕೊಳ್ಳಬಲ್ಲರು.

ಇಂಥ ಬದಲಾದ ಮನೋವಿನ್ಯಾಸವನ್ನು ಗಾಂಧಿ ಸಾಧಿಸಿಕೊಂಡಿದ್ದರ ಹಿಂದೆ ವೈರುಧ್ಯಗಳ, ಸಂಘರ್ಷದ ಮಹಾಯುದ್ಧವೇ ನಡೆದಿರಬೇಕು ಅವರ ಬುದ್ಧಿ ಭಾವಗಳಲ್ಲಿ. ಕಾರಂತರು ಪ್ರಸ್ತಾಪಿಸುವ ಸನ್ನಿವೇಶವನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಕಾರಂತರು ಸ್ವಾತಂತ್ರ್ಯ ಚಳವಳಿಯಲ್ಲಿ ತೊಡಗಿಸಿಕೊಂಡ ಸಂದರ್ಭದಲ್ಲಿ, ಅವರ ಗೆಳೆಯನ ವಿಧವೆ ಅಕ್ಕನ ಸ್ಥಿತಿ ಕಾರಂತರಲ್ಲಿ ಕೋಲಾಹಲವನ್ನು ಏಳಿಸುತ್ತದೆ. ‘ಎಳೆಹರೆಯದ ಆ ವಿಧವೆಯ ಮುಂದಿನ ಭವಿಷ್ಯವೇನು’ ಎಂದು ಕಾರಂತರು ಗಾಂಧಿಯವರನ್ನು ಕೇಳಿ ಒಂದು ಪತ್ರ ಬರೆಯುತ್ತಾರೆ. ಗಾಂಧಿ ಅದಕ್ಕೆ ಉತ್ತರಿಸಿ ಹೇಳುತ್ತಾರೆ, ‘ಆ ಹೆಣ್ಣು ಮಗಳು ಚರಕವನ್ನು ತನ್ನ ಸಂಗಾತಿಯಾಗಿಸಿಕೊಳ್ಳಲಿ, ಬ್ರಹ್ಮಚರ್ಯವನ್ನು ಆಚರಿಸಲಿ’. ಈ ಉತ್ತರ ನೋಡಿದ ಕಾರಂತರು ತಮಗಾದ ನಿರಾಸೆ, ವ್ಯಗ್ರತೆಯನ್ನು ಅವರ ಆತ್ಮಚರಿತ್ರೆಯಲ್ಲಿ ಪ್ರಸ್ತಾಪಿಸುತ್ತಾರೆ. ತನಗೆ ಸಾಧ್ಯವಾದದ್ದು ಎಲ್ಲರಿಗೂ ಸಾಧ್ಯ ಎಂದು ಈ ಮಹಾತ್ಮರು ಯಾಕೆ ತಿಳಿಯುತ್ತಾರೋ, ಈ ಹೆಣ್ಣು ತನ್ನ ಸಹಜ ದೈಹಿಕ ಆಸೆಗಳನ್ನು ಯಾಕೆ ಹತ್ತಿಕ್ಕಬೇಕು ಎನ್ನುವ ಪ್ರಶ್ನೆ ತಮ್ಮನ್ನು ಕಾಡಿದ್ದನ್ನು ಕಾರಂತರು ಪ್ರಸ್ತಾಪ ಮಾಡುತ್ತಾರೆ.

ಆದರೆ ಇದೇ ಗಾಂಧಿ, ತಮ್ಮ ‘ಯಂಗ್ ಇಂಡಿಯಾ’ದ ಸಂಚಿಕೆಯೊಂದರಲ್ಲಿ ಬಾಲ್ಯವಿವಾಹವನ್ನು ಖಂಡಿಸುತ್ತಾ, ‘ಆ ಎಳೆಯ ಹುಡುಗಿಯರು ವಿಧವೆಯರಾದರೆ, ತಕ್ಷಣ ಅವರಿಗೆ ಮರು ಮದುವೆ ಮಾಡಬೇಕು’ ಎಂದು ಬರೆಯುತ್ತಾ, ‘ಇದು ಮರು ವಿವಾಹವಲ್ಲ, ಮೊದಲ ವಿವಾಹವೇ’ ಎನ್ನುತ್ತಾರೆ. ‘ಏನೂ ಅರಿಯದ ವಯಸ್ಸಿನಲ್ಲಿ ಆ ಹುಡುಗಿಗಾದದ್ದು ಮದುವೆಯಾಗಿರಲು ಸಾಧ್ಯವಿಲ್ಲ’ ಎನ್ನುವ ತೀರ್ಮಾನಕ್ಕೂ ಬರುತ್ತಾರೆ.

ಬ್ರಹ್ಮಚರ್ಯ ಮತ್ತು ಚರಕ ಈ ಎರಡನ್ನೂ ಗಾಂಧಿ ಪರಿಹಾರವಾಗಿಯಾಗಲಿ, ಪರ್ಯಾಯವಾಗಿಯಾಗಲಿ ಬಳಸಲು ಉದ್ದೇಶಿಸಿದ್ದರು ಎಂದು ಹೇಳುವುದು ಸಾಧ್ಯವಿಲ್ಲ. ಈ ಎರಡನ್ನೂ ಅವರು ಕೇವಲ ವೈಯಕ್ತಿಕ, ರಾಜಕೀಯ, ಆರ್ಥಿಕ, ಆಧ್ಯಾತ್ಮಿಕ ಎಂದು ವಿಭಜಿಸಲಾಗದ ಸಂಯೋಜಿತ ನೆಲೆಯಲ್ಲಿ ಬದುಕಿನ ಮಾದರಿಯಾಗಿ ಪ್ರಸುತ ಪಡಿಸುವುದರಲ್ಲಿ ಆಸಕ್ತರಾಗಿದ್ದರು ಎನ್ನುವುದನ್ನು ಒಪ್ಪಿಯೂ ಕಾರಂತರಿಗೆ ಕೊಟ್ಟ ಸಲಹೆಯನ್ನು ನಾವು ಒಪ್ಪಲಾಗುವುದಿಲ್ಲ.

‘ಹರಿಜನ’ ಪತ್ರಿಕೆಯ ಸಂಚಿಕೆಯೊಂದರಲ್ಲಿ ಅತ್ಯಾಚಾರವನ್ನು ಕುರಿತಂತೆ ಗಾಂಧಿ ಹೇಳುವ ಮಾತು ಕೂಡ ನಮ್ಮಲ್ಲಿ ನಿರಾಸೆ ಮತ್ತು ಜಿಗುಪ್ಸೆಯನ್ನ್ನು ಹುಟ್ಟಿಸುತ್ತದೆ. ಹೆಣ್ಣು ತನ್ನ ಮೇಲೆ ಆಕ್ರಮಣವಾಗುತ್ತಿದೆ ಎನ್ನುವ ಸಂದರ್ಭದಲ್ಲಿ ಅದು ಘಟಿಸುವುದಕ್ಕೆ ಮುಂಚೆಯೇ ಅವಳು ಸಾವನ್ನು ಆರಿಸಿಕೊಳ್ಳಬೇಕು ಎನ್ನುತ್ತಾರೆ. ಆದರೆ ಇದೇ ಗಾಂಧಿ ಹೆಣ್ಣು ತನ್ನ ಮೇಲೆ ಆಕ್ರಮಣವಾಗುವ ಸಂದರ್ಭದಲ್ಲಿ ಅವಳಿಗೆ ದೈವದತ್ತವಾಗಿ ದೊರೆತ ಎರಡು ಆಯುಧಗಳಾದ ಹಲ್ಲು ಮತ್ತು ಉಗುರನ್ನು ಬಳಸಿ ಪಾರಾಗಬೇಕೆಂದೂ ಇನ್ನೊಂದು ಲೇಖನದಲ್ಲಿ ಹೇಳುತ್ತಾರೆ!

ಭಾರತದ ಪ್ರಮುಖ ಸ್ತ್ರೀಪಾತ್ರಗಳಾದ ಸೀತೆ, ದ್ರೌಪದಿ, ದಮಯಂತಿ ಇವರೆಲ್ಲರನ್ನೂ ಗಾಂಧಿ ಹೊಸ ಬೆಳಕಿನಲ್ಲಿ ಚರ್ಚಿಸಲು ಪ್ರಯತ್ನಿಸುತ್ತಾರೆ. ಇವರೆಲ್ಲರೂ ಎಲ್ಲ ಬಗೆಯ ಅವಲಂಬನೆಗಳಿಂದ ಮುಕ್ತರಾಗಲು ಹವಣಿಸಿ ಗೆದ್ದವರು ಎನ್ನುವ ತೀರ್ಮಾನಕ್ಕೆ ಗಾಂಧಿ ಬರುತ್ತಾರೆ. ಸೀತೆಯಂತೂ ಅಪ್ಪ್ಪಟ ‘ಸ್ವದೇಶಿ’ ಹೆಣ್ಣಾಗಿ ಗಾಂಧಿಗೆ ಕಾಣಿಸುತ್ತಾಳೆ. ಅವಳ ಉಡುಗೆ ತೊಡುಗೆಯಿಂದ ಹಿಡಿದು ಎಲ್ಲದರಲ್ಲೂ ಅವಳು ಸ್ವದೇಶಿ ಮಾತ್ರವಲ್ಲ, ಸ್ವಾವಲಂಬಿಯೂ ಹೌದು ಎನ್ನುವ ತಮ್ಮ ಅರ್ಥೈಸುವಿಕೆಯ ಮೂಲಕ ಗಾಂಧಿ ಸೀತೆಯನ್ನು ಈ ತನಕ ಯಾರೂ ನೋಡದ ಆಯಾಮದಲ್ಲಿ ಗುರುತಿಸುತ್ತಾರೆ. ಹೀಗೆ ನಾವು ಸಂತೋಷ ಪಡುತ್ತಿರುವಾಗಲೇ ಸಾಂಪ್ರದಾಯಿಕವೆಂದು ಭಾಸವಾಗುವ ಗುಣಗಳ ಮೂಲಕ ಅವರನ್ನು ಪ್ರಸ್ತುತ ಪಡಿಸಲು ಮುಂದಾಗುತ್ತಾರೆ. ಶುದ್ಧ, ಸ್ವಸಂಯಮ ಹಾಗೂ ದೃಢತೆಗಳು ಇವರ ಮೂಲಗುಣಗಳೆಂದು ಹೇಳುತ್ತಾರೆ. ಶುದ್ಧ, ಸ್ವಸಂಯಮ ಈ ಎರಡೂ ನಿಸ್ಸಂದೇಹವಾಗಿ ಪಿತೃಸಂಸ್ಕೃತಿಯ ಕರಾರುಗಳು ಮತ್ತು ಅವು ಹೆಣ್ಣಿಗೆ ಮಾತ್ರ ಸೃಷ್ಟಿಸಲಾದ ಕರಾರುಗಳು.

ವೈರುಧ್ಯಗಳಂತೆ ಕಾಣುವ ಈ ವಿಚಾರಗಳನ್ನು ಬದಲಾಗುತ್ತಿರುವ, ಬದಲಾಗಲು ಯತ್ನಿಸುತ್ತಿರುವ ಮನಸ್ಥಿತಿಯೊಂದರ ಏರಿಳಿತಗಳಂತೆ ನೋಡಬೇಕು. ಮಧುಕೀಶ್ವರ್, ಗಾಂಧಿಯವರ ಹೆಣ್ಣನ್ನು ಕುರಿತ ವಿಚಾರಗಳನ್ನು ಪಿತೃಸಂಸ್ಕೃತಿಯ ಅವತರಣಿಕೆಗಳೆ ಎಂದು ಹೇಳುತ್ತಾ ‘ಅವು ಸಹೋದರಿ ಮತ್ತು ತಾಯಿಯ ಬದಲಾದ ಪರಿವೇಷದಲ್ಲಿ ಕಾಣಿಸುತ್ತವೆಯಷ್ಟೇ ಹೊರತು ನಿಜವಾದ ಬದಲಾವಣೆ ಗಾಂಧಿಯಲ್ಲಿ ಘಟಿಸಿಲ್ಲ’ ಎನ್ನುವ ತೀರ್ಮಾನಕ್ಕೆ ಬರುತ್ತಾರೆ. ನನಗೇನೋ ಇದು ಅವಸರದ ತೀರ್ಪಿನಂತೆ ಕಾಣಿಸುತ್ತದೆ. ಗಾಂಧಿಯವರ ಒಳತೋಟಿಗಳನ್ನು, ಇದರಿಂದ ಅವರ ವ್ಯಕ್ತಿತ್ವದಲ್ಲೇ ಆದ ಕ್ರಾಂತಿಕಾರಕ ಬದಲಾವಣೆಗಳನ್ನೂ ಗಮನಿಸದೇ ತಲುಪಿದ ತೀರ್ಮಾನ ಇದು.

ಏಕೆಂದರೆ ಅಹಿಂಸೆ ಮತ್ತು ಸತ್ಯಾಗ್ರಹಗಳೆರಡೂ ಮೂಲತಃ ಹೆಣ್ಣಿನ ಪರಿಕರಗಳು. ಜೈನಧರ್ಮದ ಹಿನ್ನೆಲೆಯಲ್ಲಿ ಇದನ್ನು ನೋಡಲಾಗಿದೆ, ಅದನ್ನು ಒಪ್ಪಲು ತಕರಾರುಗಳೂ ಇಲ್ಲ. ಆದರೆ, ಇವುಗಳ ಆತ್ಯಂತಿಕ ಪ್ರಯೋಗ ಮತ್ತು ಪ್ರಯೋಜನಗಳನ್ನು ಪ್ರಯೋಗಿಸಿ ಗೆದ್ದವರು ಹೆಣ್ಣುಮಕ್ಕಳೆ ಎನ್ನುವುದರ ಬಗೆಗೂ ಪ್ರಶ್ನೆಗಳಿರಲಾರವು. ಇದಕ್ಕೆ ಸ್ವತಃ ಗಾಂಧಿಯ ಮಾತುಗಳೇ ಸಾಕ್ಷಿ, ‘‘ಹೆಣ್ಣು ಮಕ್ಕಳನ್ನು ಕುರಿತಂತೆ ನನ್ನ ಕೊಡುಗೆಯೆಂದರೆ, ಸತ್ಯ–ಅಹಿಂಸೆಯನ್ನು ಬಳಸಿ ನಡೆಸುವ ಹೋರಾಟದ ನಾಯಕತ್ವ ಹೆಣ್ಣಿನದೇ ಎನ್ನುವುದನ್ನು ಸ್ಥಾಪಿಸಿದ್ದು.

ಮಾನವೀಯ ಪ್ರಕ್ರಿಯೆಯಲ್ಲಿ ಹೆಣ್ಣಿನದೇ ಅಂತಿಮ ಪಾತ್ರ. ಮನುಷ್ಯರನ್ನು ಬದಲಾಯಿಸುವ ಈ ಹೋರಾಟದ ಮುಂಚೂಣಿಯಲ್ಲಿ ಹೆಣ್ಣು ಮಕ್ಕಳಿದ್ದರೆ ಮಾತ್ರ ನಮಗೆ ಜಯ ಸಿಗುವುದು ಸಾಧ್ಯ. ಈ ಪಾತ್ರವನ್ನು ಅವಳಿಗೆ ಕೊಡಬೇಕಾದ್ದು ನಮ್ಮ ಆದ್ಯ ಕರ್ತವ್ಯ. ಇದು ಮಾತ್ರ ಅವಳಲ್ಲಿ ಮನೆ ಮಾಡಿರುವ ಕೀಳರಿಮೆಯನ್ನು ತೊಡೆಯಲು ಸಾಧ್ಯ’’. ಈ ಮಾತುಗಳು ಸ್ತ್ರೀವಾದಿಗಳ ಮಾತುಗಳೆ ಎನಿಸುವುದು, ಅಂತಿಮವಾಗಿ ಸ್ತ್ರೀವಾದವಾದರೂ ಮಾನವೀಯ ಪ್ರಕ್ರಿಯೆಯನ್ನೇ ಉದ್ದೇಶಿಸಿದೆ ಎನ್ನುವ ಕಾರಣಕ್ಕೆ. ತಮ್ಮ ಇನ್ನೊಂದು ಲೇಖನದಲ್ಲಿ ಗಾಂಧಿ, ಕೋಮುವಾದಿ ಸಮಾಜವನ್ನು ಸೆಕ್ಯುಲರ್ ಮಾಡಬಹುದಾದ ಶಕ್ತಿಯೂ ಹೆಣ್ಣಿಗೆ ಮಾತ್ರ ಇದೆ ಎಂದು ವಾದಿಸುತ್ತಾರೆ.

ಗಾಂಧಿಯನ್ನು ಸ್ತ್ರೀವಾದಿ ಎಂದು ಕರೆಯಲು ನಮಗಿರುವ ಆಧಾರಗಳೆಂದರೆ, ಗಂಡು ಮತ್ತು ಹೆಣ್ಣು ಇಬ್ಬರೂ ಈ ಬದಲಾವಣೆಯ ಪ್ರಕ್ರಿಯೆಗೆ ಒಡ್ಡಿಕೊಳ್ಳಬೇಕು ಎನ್ನುವುದರಲ್ಲಿ ಇವರಿಗಿದ್ದ ಅಚಲವಾದ ನಂಬಿಕೆ. ನಡುರಾತ್ರಿಯಲ್ಲಿ ಹೆಣ್ಣೊಬ್ಬಳು ನಿರ್ಭಯವಾಗಿ ನಡೆಯಬಹುದಾದರೆ ಅಂದು ಈ ದೇಶ ನಿಜವಾಗಿ ಸ್ವಾತಂತ್ರ್ಯ ಪಡೆದಂತೆ ಎಂದು ಹೇಳುವ ಗಾಂಧಿಯವರ ಮಾತುಗಳು ಪ್ರಸಿದ್ಧವಾಗಿವೆ. ಈ ಮಾತುಗಳನ್ನು ಜನಪ್ರಿಯ ನಾಯಕನೊಬ್ಬನ ಧರ್ತಿಯಲ್ಲಿ ಗಾಂಧಿ ಹೇಳಿದ್ದಲ್ಲ. ಹೆಣ್ಣಿನ ಬದುಕುವ ಮುಕ್ತ ಅವಕಾಶ ಮತ್ತು ಆದ್ಯತೆಗಳನ್ನು ಮಾನವ ಘನತೆಯಲ್ಲಿ ಗುರುತಿಸಿ ಮಂಡಿಸಿದ ಹಕ್ಕೊತ್ತಾಯದ ಮಾತು.

The wife is not husband's slave but his companion and his life mate and equal partner in all his joys and sorrows... as free as the husband to choose her own path ಎನ್ನುವ ಮಾತುಗಳನ್ನು ಗಾಂಧಿ ವಿಚಾರವಾಗಿ ಮಾತ್ರ ಹೇಳುತ್ತಿಲ್ಲ, ಅದೊಂದು ಘಟಿಸಬೇಕಾದ ಸಂಗತಿ ಎನ್ನುವ ಭವಿಷ್ಯವಾಣಿಯಾಗಿಯೂ ಹೇಳುತ್ತಿಲ್ಲ. ಅದು ಇರುವ, ನಾವು ಅನಾವರಣ ಮಾಡಿಕೊಳ್ಳಬೇಕಾದ ಸಂಗತಿ ಎನ್ನುವ ಸ್ಪಷ್ಟತೆ ಮತ್ತು ನಂಬಿಕೆಯಲ್ಲಿ ಹೇಳುತ್ತಿದ್ದಾರೆ.

ಸ್ವತಃ ಗಾಂಧಿ ಅನೇಕ ಹೆಣ್ಣು ಮಕ್ಕಳ ಜೊತೆ ಹೊಂದಿದ್ದ ಬಹುಮುಖಿ ಸಂಬಂಧಗಳೇ ಇದಕ್ಕೆ ಸಾಕ್ಷಿ. ಕೊನೆಗಾಲದಲ್ಲಿ ಹೆಣ್ಣುಮಕ್ಕಳೊಂದಿಗೆ ಗಾಂಧಿ ನಡೆಸಿದ ಪ್ರಯೋಗಗಳು ವಿವಾದಾಸ್ಪದವೇನೋ ಸರಿ, ಆದರೆ ಅದಕ್ಕೆ ಆ ಹೆಣ್ಣುಮಕ್ಕಳ ಆಕ್ಷೇಪವಿಲ್ಲ ಎಂದಾದರೆ ಅದರ ಬಗ್ಗೆ ಷರಾ ಬರೆಯುವ ಅಧಿಕಪ್ರಸಂಗವನ್ನೂ ನಾವು ಮಾಡಬೇಕಿಲ್ಲ. ಹೆಣ್ಣಿನ ವಿಷಯಕ್ಕೆ ಬೇಕಾದ ತೆರೆದ ಮನಸ್ಸನ್ನು ಕೊನೆಯವರೆಗೂ ಉಳಿಸಿಕೊಂಡ ಕಾರಣಕ್ಕಾಗಿ, ಅವಳನ್ನು ಒಳಗೊಳ್ಳದೆ ಅವನು, ಅವನನ್ನು ಒಳಗೊಳ್ಳದೆ ಅವಳು ಇಬ್ಬರೂ ಅಪೂರ್ಣ ಎನ್ನುವ ಸತ್ಯದ ಜೊತೆಗಿನ ತಮ್ಮ ಪ್ರಯೋಗಕ್ಕಾಗಿ ಗಾಂಧಿ ಒಬ್ಬ ಸ್ತ್ರೀವಾದಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.