ಕನ್ನಡದ ಈ ಅಪೂರ್ವ ಕವಿಯ ಮೇಲೆ ಬರೆಯಬೇಕೆಂದು ಎಂದಿನಿಂದಲೂ ಮನಸಿನಲ್ಲಿದ್ದರೂ ಬರೆಯುವುದು ತಡವಾಯಿತು.

ಯಾವುದೇ ಭಾಷೆಯ ಸಾಹಿತ್ಯ ಮತ್ತು ಕಲೆಯ ಪರಂಪರೆಗಳಲ್ಲೂ ಹೀಗಾಗಿಯೇ ಆಗಿರುತ್ತದೆ. ಕಲಾವಿದರ ನಿಜವಾದ ಸಾಧ್ಯತೆಗಳ ಶೋಧಗಳು ಆಗಿರುವುದೇ ಇಲ್ಲ. ಅಥವಾ ಅವರ ಇನ್ನಿತರ ಆಯಾಮಗಳೇ ಮುನ್ನೆಲೆಗೆ ಬಂದು ಅವರ ಇತರ ಅಷ್ಟೇ ಮುಖ್ಯವಾದ ನೆಲೆಗಳು ನೇಪಥ್ಯದಲ್ಲೇ ಉಳಿದು ಬಿಟ್ಟಿರುತ್ತವೆ.

‘ಒಲವಿನ ಕವಿ’ಯೆಂದು, ‘ಮೈಸೂರ ಮಲ್ಲಿಗೆ’ಯ ಕವಿಯೆಂದು, ‘ಮಲ್ಲಿಗೆಯ ಮಾಲೆ’ಯೆಂದು ಹೇಳುತ್ತಲೇ ಅದು ನರಸಿಂಹಸ್ವಾಮಿಯವರ ಕಾವ್ಯದ ಮಿತಿಯೂ ಶಕ್ತಿಯೂ ಪರಿಧಿಯೂ ಹೌದೆನ್ನುವ ಷರಾವನ್ನೂ ಬರೆಯಲಾಯಿತು. ನವ್ಯರು ಕಟ್ಟಿಕೊಟ್ಟ ಶ್ರೇಷ್ಠ ಕಾವ್ಯಮಾದರಿಯ ಎದುರು ಮಾದರಿ ಎನ್ನುವಂತೆ, ದುರ್ಬಲ ಮಾದರಿ ಎನ್ನುವಂತೆಯೂ ನರಸಿಂಹಸ್ವಾಮಿಯವರ ಕಾವ್ಯವನ್ನು ಕುರಿತ ಮಾತುಗಳು ಎದ್ದವು.

ಈ ಎಲ್ಲ ಉದ್ದೇಶಿತ, ಅನುದ್ದೇಶಿತ ಪ್ರಯತ್ನ ಮತ್ತು ಹುನ್ನಾರಗಳ ನಡುವೆಯೂ, (ಸ್ವತಃ ನರಸಿಂಹಸ್ವಾಮಿಯವರೇ ಕೆಲವೊಮ್ಮೆ ಇದಕ್ಕೆ ಪ್ರತಿಕ್ರಿಯಿಸಿಯೂ (‘ಅಲ್ಲೊಬ್ಬನಿದ್ದ ಕೀಟ್ಸ್ ಇಲ್ಲೊಬ್ಬ ಹಂಸ ಕವಿ’ ಎನ್ನುವ ಅಡಿಗರ ಮಾತಿಗೆ, ‘ನಾನಲ್ಲ ಕೀಟ್ಸ್, ಹಂಸಗಳ ಕನಸು, ಕಲ್ಲುಕುಟಿಗರ ಬದುಕು ನನ್ನ ಕಾವ್ಯ’ ಎಂದು ಉತ್ತರಿಸಿದರು ಕೆಎಸ್ನ) ನರಸಿಂಹಸ್ವಾಮಿ ಅವರ ಕಾವ್ಯ ತನ್ನ ಶಕ್ತಿ ಸೌಂದರ್ಯದ ಹರಹಿನ ವಿಭಿನ್ನ ಮುಖಗಳನ್ನು ಕನ್ನಡದ ಓದುಗರಿಗೆ ನಿರಂತರವಾಗಿ ಕಾಣಿಸುತ್ತಲೇ ಇವೆ.

ಕನ್ನಡದ ಶ್ರೇಷ್ಠ ಕವಿಗಳಲ್ಲೊಬ್ಬರಾದ ಕೆಎಸ್ನ ಅವರ ಕಾವ್ಯದಲ್ಲಿ ಹಲವು ಮೂಲಕ್ಷೇತ್ರಗಳಿವೆ. ಈ ಮೂಲಕ್ಷೇತ್ರಗಳು ಅವರ ಕಾವ್ಯದಲ್ಲಿ ಉದ್ದಕ್ಕೂ ಸಾವಯವ ಬೆಳವಣಿಗೆ ಮತ್ತು ರೂಪಾಂತರಗಳನ್ನು ಕಂಡಿರುವುದೊಂದು ವಿಶೇಷ. ಎಲ್ಲ ಶ್ರೇಷ್ಠ ಬರಹಗಾರರಲ್ಲಿ ಆಗುವಂತೆ ಮೂಲಕ್ಷೇತ್ರಗಳು ಅವುಗಳ ಮೂರ್ತ ಅಮೂರ್ತ ವಲಯಗಳನ್ನು ಶೋಧಿಸಿಕೊಳ್ಳುತ್ತಾ ತಮ್ಮ ಚಹರೆಗಳನ್ನು, ವ್ಯಕ್ತಿತ್ವಗಳನ್ನು ಇನ್ನಷ್ಟು ಸ್ಫುಟಗೊಳಿಸಿಕೊಳ್ಳುತ್ತಾ ಹೋಗುತ್ತವೆ.

ಕೆಎಸ್ನ ಅವರಲ್ಲಿ ಹೀಗೆ ತಮ್ಮ ಅನಂತ ಮುಖಗಳನ್ನು ಕಂಡುಕೊಳ್ಳುವ ಎರಡು ಕ್ಷೇತ್ರಗಳೆಂದರೆ, ಪ್ರಕೃತಿ ಮತ್ತು ಹೆಣ್ಣು. ಈ ಎರಡೂ ಇವರ ಕಾವ್ಯದುದ್ದಕ್ಕೂ ಬೆಳೆಯುತ್ತಾ ಹೋಗುವ ಪರಿಯನ್ನು ಗುರುತಿಸುತ್ತಾ ಹೋಗುವುದೇ ಒಂದು ರೋಮಾಂಚಕಾರಿಯಾದ ಅನುಭವ. ಈ ಪ್ರಕ್ರಿಯೆಯಲ್ಲಿ ಕೆಎಸ್ನ ಒಬ್ಬ ಸ್ತ್ರೀವಾದಿಯಂತೆಯೇ ಕಾಣಿಸುತ್ತಾರೆ. ಇಲ್ಲಿ ಸ್ತ್ರೀವಾದ ಎನ್ನುವ ಪದದಲ್ಲಿ ವಾದ ಎನ್ನುವುದು ಅದರ ತಾರ್ಕಿಕ ಮತ್ತು ವಾಚ್ಯಾರ್ಥದಲ್ಲಿ ಬಳಸುತ್ತಿಲ್ಲ.

ಅದು ವಾದವಲ್ಲ, ಅದೊಂದು ದೃಷ್ಟಿಕೋನ, ಕಣ್ನೋಟ. ಮಿಕ್ಕ ಎಲ್ಲದನ್ನೂ ಅದರ ಧ್ವನ್ಯಾರ್ಥದಲ್ಲಿ, ರೂಪಾಕಾರ್ಥದಲ್ಲಿ ಸಹಜವಾಗಿಯೂ ಬೆರಗಿನಿಂದಲೂ ಕಾಣಲು ಸಾಧ್ಯವಾಗುವುದಾದರೆ, ಇದನ್ನು ಯಾಕೆ ತೆಗೆದುಕೊಳ್ಳಲಾಗುವುದಿಲ್ಲ ಎನ್ನುವುದೊಂದು ಬಗೆ ಹರಿಯದ ಪ್ರಶ್ನೆ. ಸಮಾಜವಾದ ಎನ್ನುತ್ತಿರುವಾಗ ಅದನ್ನು ಒಂದು ತಾತ್ವಿಕ ನಿಲುವಾಗಿ, ಭಿನ್ನ ಸಮುದಾಯದ ಚಹರೆಯ ಘೋಷಣಾ ಹೇಳಿಕೆಯಾಗಿ ತೆಗೆದುಕೊಳ್ಳುವ ಹೊತ್ತಿನಲ್ಲಿ ಎದುರಾಗದ ಸವಾಲು ಸ್ತ್ರೀವಾದಕ್ಕೆ ಯಾಕೆ ಎದುರಾಗಬೇಕು?

ಅಥವಾ ಇದನ್ನು ಹೀಗೂ ಇತ್ಯಾತ್ಮಕವಾಗಿ ನೋಡೋಣವೆ? ಹೆಣ್ಣು ಮತ್ತು ಅವಳು ಪ್ರತಿಪಾದಿಸುತ್ತಿರುವ ಲೋಕದೃಷ್ಟಿಯನ್ನು ಒಂದು ವಾದ ಎಂದು ಮಾತ್ರ ನೋಡಲು ಸಾಧ್ಯವಾಗುತ್ತಿಲ್ಲ, ಸಾಧ್ಯವಾಗುವುದಿಲ್ಲ ಎನ್ನುವ ಅಮೂರ್ತ ವಿಚಾರದ ಅಭಿವ್ಯಕ್ತಿಯಾಗಿ ಈ ವಿರೋಧವನ್ನು ನೋಡಲು ಸಾಧ್ಯವಿದೆಯೆ? ಕೆಲವರ ಮಟ್ಟಿಗೆ ಮಾತ್ರ ಇದು ನಿಜವಿರಬಹುದು. ದೇವನೂರ ಮಹಾದೇವರು ಒಮ್ಮೆ ಈ ಪ್ರಶ್ನೆಯನ್ನು ಎತ್ತಿದರು. ‘ಎಲ್ಲಾ ಸರಿ, ಆದರೆ, ಈ ವಾದ ಎನ್ನುವ ಪದ ಯಾಕೋ ಸರಿ ಕಾಣುತ್ತಿಲ್ಲ’ ಎಂದು. ಸ್ತ್ರೀವಾದದ ಮೂಲಗುಣವನ್ನು ಆಧರಿಸಿ ಈ ಚರ್ಚೆಯನ್ನು ಮುಂದುವರಿಸುವುದಾದರೆ, ಯಾವ ‘ಸರ್ವೋದಯ’ ಎನ್ನುವುದು ದೇವನೂರರ ಅಥವಾ ಒಟ್ಟೂ ಪರ್ಯಾಯ ತಾತ್ವಿಕತೆಯೊಂದರ ಮೂಲಕ ಭಾರತೀಯ ಸಮುದಾಯದ ಮರುನಿರೂಪಣೆಗೆ ಪ್ರಯತ್ನಿಸುತ್ತಿರುವ ಎಲ್ಲ ಪ್ರಜ್ಞಾವಂತರ ಮೂಲ ಗುರಿಯಾಗಿದೆಯೋ ಅದೇ ಸ್ತ್ರೀವಾದದ ಗುರಿಯೂ ಆಗಿದೆ.

ಸ್ತ್ರೀವಾದವಾದರೂ ಅಂತಿಮವಾಗಿ ಉದ್ದೇಶಿಸಿರುವುದು ಸರ್ವೋದಯವನ್ನೇ. ಈ ದೃಷ್ಟಿಯಿಂದ ಸರ್ವೋದಯ ಪರಿಕಲ್ಪನೆಯ ಹರಿಕಾರರಾದ ಗಾಂಧಿಯವರನ್ನೂ ಒಳಗೊಂಡೇ ಸಮಕಾಲೀನ ಸ್ತ್ರೀವಾದ ತನ್ನ ತಾತ್ವಿಕತೆಯನ್ನು ಬೆಳೆಸುತ್ತಿದೆ. ಇದರ ಬಗ್ಗೆ ಇನ್ನೊಮ್ಮೆ ದೀರ್ಘವಾಗಿ ಚರ್ಚಿಸಬಹುದು. ಸದ್ಯಕ್ಕೆ ಇಷ್ಟೇ ಮನವಿ, ಸ್ತ್ರೀವಾದದಲ್ಲಿ ವಾದವಿದ್ದರೂ ಅದು ಯಾರನ್ನೂ ಗೆಲ್ಲುವ, ಸೋಲಿಸುವ ಹಂಬಲದ್ದಲ್ಲ, ಅದು ಎಲ್ಲರನ್ನೂ, ಎಲ್ಲವನ್ನೂ ಒಳಗೊಳ್ಳುತ್ತಲೇ ವಾದಗಳನ್ನು ಮೀರಿದ ಮಾನವೀಯ ಆವರಣದ ಸಮುದಾಯವೊಂದರ ರಚನೆಯ ಮಹಾ ಕನಸು ಮತ್ತು ಕೊನೆಯಿಲ್ಲದ ಹೋರಾಟ. ಇದಕ್ಕೆ ಬೇಕಾದ್ದು ಮನುಷ್ಯ ಘನತೆಯಲ್ಲಿನ ನಂಬಿಕೆ, ಪ್ರೀತಿ ಮತ್ತು ಗೌರವ.

ಕೆಎಸ್ನ ಅವರ ಕಾವ್ಯಕ್ಕೂ ಮಲ್ಲಿಗೆಗೂ ಕೊನೆಯಿಲ್ಲದ ನಂಟು. ಹಾಗೆಯೇ ಮಲ್ಲಿಗೆಗೂ ಹೆಣ್ಣಿಗೂ ಮುಗಿಯದ ನಂಟು ಒಂದಿದೆಯಷ್ಟೆ. ಈ ಅಂಶವೂ ಅವರವರ ಭಾವಕ್ಕೆ ತಕ್ಕಂತೆ ಹೆಣ್ಣನ್ನು ವ್ಯಾಖ್ಯಾನಿಸಲು ಅವಕಾಶ ಮಾಡಿಕೊಡುತ್ತದೆ ಎನ್ನುವುದೂ ಅಷ್ಟೇ ಕುತೂಹಲಕಾರಿಯಾದ ಸಂಗತಿ. ಮಲ್ಲಿಗೆಯ ಸುಕೋಮಲತೆ, ಅದರ ‘ಮೂರು ಘಳಿಗೆಯ ಬದುಕು’ ಘಮಘಮಿಸುವ ಪರಿ, ಅದರ ನಶ್ವರತೆ ಈ ಎಲ್ಲವನ್ನೂ ಹೆಣ್ಣನ್ನು ಗ್ರಹಿಸುವ ಸ್ಥಾಪಿತ ಮಾದರಿಯೊಂದರ ವಿವರಣೆಯೂ ಪ್ರತಿಮೆಯೂ ಆಗುವುದು ಸಾಧ್ಯ.

ಮಹತ್ವದ ಮಾತೆಂದರೆ, ಈ ಮಾದರಿಯನ್ನೇ ಪ್ರತಿಪಾದಿಸುವಂತೆ ಆರಂಭವಾದ ಕೆಎಸ್ನ ಅವರ ಹೆಣ್ಣಿನ ಚಿತ್ರವು ಅವರ ಕಾವ್ಯದಲ್ಲಿ ಅನೂಹ್ಯವಾದ ತಿರುವುಗಳನ್ನು, ಬದಲಾವಣೆಗಳನ್ನು ಪಡೆಯುತ್ತಾ ಮಲ್ಲಿಗೆಯ ಅಪ್ರತಿಮ ಸೌಂದರ್ಯ ಎನ್ನುವುದು, ಅದರ ಸುಗಂಧ ಎನ್ನುವುದು ಹೆಣ್ಣಿನ ವ್ಯಕ್ತಿತ್ವದ ಅನನ್ಯತೆಯನ್ನು ಕುರಿತ ಪ್ರತಿಮೆಯಾಗಿ ಬೆಳೆಯುತ್ತಾ ಹೋಗುತ್ತದೆ. ಅದರ ಸುಕೋಮಲತೆಯು ಅದರ ದೌರ್ಬಲ್ಯವಾಗದೆ, ಅದೇ ಅದರ ವಿಶಿಷ್ಟತೆಯಾಗಿ, ಆ ಸುಗಂಧದ ಸಾಧ್ಯತೆ ಮತ್ಯಾರಿಗೂ ದಕ್ಕದ ಶಕ್ತಿವಿಶೇಷವಾಗಿ, ಆ ಸುಗಂಧವು ಅವಳ ಆತ್ಮದ ಪರಿಮಳವಾಗಿ, ಆ ಸೌಂದರ್ಯವು ಅವಳ ಘನತೆಯ ಚೆಲುವಾಗಿ ಅರಳುತ್ತಾ ಹೋಗುತ್ತದೆ.

ಶಾನುಭೋಗರ ಮಗಳಾಗಿ, ಗೃಹಲಕ್ಷ್ಮಿಯಾಗಿ ಬದುಕುವುದರಲ್ಲಿಯೇ ತನ್ನ ಸಾರ್ಥಕ್ಯ ಕಾಣುತ್ತಿದ್ದ ಹೆಣ್ಣು ‘ಶಿಲಾಲತೆ’ಯಾಗಿ ತನ್ನನ್ನು ತಾನೇ ನಿರ್ಮಿಸಿಕೊಳ್ಳುತ್ತಾ ಹೋಗುವ ಹೆಣ್ಣಿನ ಚಲನವಲನಗಳು, ಹೋರಾಟದ ಆತಂಕ, ಸಂಭ್ರಮಗಳು ಕೆಎಸ್ನ ಅವರ ಕಾವ್ಯದಲ್ಲಿ ಉದ್ದಕ್ಕೂ ಸಿಗುತ್ತವೆ.

ಆದರೆ ಈ ಪ್ರಕ್ರಿಯೆಯಲ್ಲಿ ಹೆಣ್ಣಿನಷ್ಟೇ ಗಂಡೂ ಬದಲಾಗಬೇಕು ಎನ್ನುವ ಅಪೇಕ್ಷೆಗೆ, ವಾಸ್ತವಕ್ಕೆ ಕೆಎಸ್ನ ಅವರ ಕಾವ್ಯದ ಗಂಡು ಒಂದು ಅಪೂರ್ವ ಉದಾಹರಣೆ. ಹೆಣ್ಣು ಬದಲಾಗುತ್ತಲೇ ಗಂಡೂ ಬದಲಾಗುವುದು ಅನಿವಾರ್ಯ ಎನ್ನುವುದರ ಜೊತೆಗೇ ಆ ಬದಲಾವಣೆಗೆ ಬೇಕಾದ ಮನೋವಿನ್ಯಾಸವನ್ನು ಗಂಡು ರೂಪಿಸಿಕೊಳ್ಳುತ್ತಾ ಹೋಗುವ ಕ್ರಿಯೆಯಲ್ಲಿ, ಪರಸ್ಪರರನ್ನು ಅರ್ಥ ಮಾಡಿಕೊಳ್ಳುತ್ತಾ, ಗೌರವಿಸಲು, ಪ್ರೀತಿಸಲು ಬೇಕಾದ ಆವರಣವೂ ಸೃಷ್ಟಿಯಾಗುತ್ತಾ ಹೋಗುತ್ತದೆ. ಕೆಎಸ್ನ ಅವರ ಕಾವ್ಯದ ಮೊದಲ ಮತ್ತು ಎರಡನೆಯ ಘಟ್ಟದ ಮುಖ್ಯ ಕವಿತೆಗಳನ್ನು ಗಮನಿಸಿದರೆ ಈ ಅಂಶ ಸ್ಪಷ್ಟವಾಗುತ್ತಾ ಹೋಗುತ್ತದೆ.

ಶಾನುಭೋಗರ ಮಗಳು, ತಾಯಿಯಿಲ್ಲದ ಹುಡುಗಿ
ರತ್ನದಂತಹ ಹುಡುಗಿ ಊರಿಗೆಲ್ಲ!

ಬಲುಜಾಣೆಯೂ, ಗಂಭೀರೆಯೂ ಆಗಿ, ಹನ್ನೆರಡು ಕಳೆದರೂ ಮದುವೆ ಇಲ್ಲದೇ ಒದ್ದಾಡುತ್ತಿದ್ದರೂ ‘ವೈದಿಕರ ಮನೆಯಲ್ಲಿ ಊಟ ಹೊತ್ತಾಗುವುದು’ ಅದಕ್ಕೇ ವೈದಿಕರ ಮನೆಯ ಹುಡುಗ ಬೇಡ ಎನ್ನುವವಳು. ಕೊನೆಗೆ ಮದುವೆಯಾಗಿ ಗೃಹಲಕ್ಷ್ಮಿಯಾಗಿ–

ಹಸಿರು ಸೀರೆಯನುಟ್ಟು, ಕೆಂಪು ಬಳೆಗಳ ತೊಟ್ಟು
ಹಣೆಯನಾಳುವುದವಳ ಕುಂಕುಮದ ನಿಡುಬಟ್ಟು

ಎನ್ನುವ ಸಾಂಪ್ರದಾಯಿಕ ವೇಷದಲ್ಲಿ, ದಾಂಪತ್ಯದ ತನ್ನ ಪಾತ್ರವನ್ನು ಚಾಚೂ ತಪ್ಪದೆ ಪಾಲಿಸುವ ಶಾರದೆಯೂ ಆಗುತ್ತಾಳೆ.
ಮದುವೆಯಾಗಿ ತಿಂಗಳಿಲ್ಲ,
ನೋಡಿರಣ್ಣ ಹೇಗಿದೆ,!
ನಾನು ಕೂಗಿದಾಗಲೆಲ್ಲ
ಬರುವಳೆನ್ನ ಶಾರದೆ!
ಹಿಂದೆ ಮುಂದೆ ನೋಡದೆ
ಎದುರು ಮಾತನಾಡದೆ.

ದಾಂಪತ್ಯದ ರಮ್ಯ ಚಿತ್ರಗಳಾಗುತ್ತಲೇ ಗಂಡು ಹೆಣ್ಣಿನ ನಡುವಿನ ಅಧಿಕಾರ ಸಂಬಂಧದ ವ್ಯಾಖ್ಯಾನದಂತೆ ಕಾಣಿಸುವ ಇಂಥ ನೆಲೆಯಿಂದ ಕೆಎಸ್ನ ಅವರ ಕಾವ್ಯದ ಗಂಡು ಹೆಣ್ಣು ಸಂಪೂರ್ಣವಾಗಿ ಬದಲಾದ ಚಿತ್ರ ಕಾಣಿಸುವುದು, ಮುಖ್ಯವಾಗಿ ‘ಇಡದಿರು ನನ್ನ ನಿನ್ನ ಸಿಂಹಾಸನದ ಮೇಲೆ’ ಕವಿತೆಯಲ್ಲಿ.

ಗಂಡು ಮತ್ತು ಹೆಣ್ಣು ಇಬ್ಬರೂ ಈ ಕವಿತೆಯಲ್ಲಿ ತಮ್ಮ ತಮ್ಮ ನಿಜದಲ್ಲಿ ಕಾಣಿಸುತ್ತಲೇ ಪರಸ್ಪರರನ್ನು ಅವರವರ ನಿಜದಲ್ಲಿ ಎದುರಾಗುವ ಸಂದರ್ಭವೂ ಇದೆ. ತಾಯ್ತನದ ವ್ಯಾಖ್ಯಾನವೇ ಇಲ್ಲಿ ಬದಲಾಗಿ ಹೋಗಿದೆ. ಈ ವ್ಯಾಖ್ಯಾನದೊಂದಿಗೇ ಮೌಲ್ಯವ್ಯವಸ್ಥೆಯ ನಿರಾಕರಣೆಯೂ ಇಲ್ಲಿ ಘಟಿಸಿ ಕವಿತೆಯನ್ನು ಹೊಸ ಮೌಲ್ಯವ್ಯವಸ್ಥೆಯ ಪರವಾದ ಘೋಷವಾಕ್ಯವಾಗಿಯೂ ಪರಿವರ್ತಿಸುತ್ತದೆ.

ಸಂಕೀರ್ಣವಾದ, ಅಕ್ಷರಶಃ ಹಲವು ಮಜಲುಗಳ ಈ ಕವಿತೆಯ ಒಂದು ಮಗ್ಗುಲನ್ನು ಮಾತ್ರ ಇಲ್ಲಿ ಗಮನಿಸುತ್ತಿರುವುದಕ್ಕೆ ಹಿಂಜರಿಕೆಯಿದ್ದೂ ಅದು ಅಗತ್ಯ, ಮುಖ್ಯ ಎನ್ನುವ ಕಾರಣಕ್ಕೆ ಈ ಪ್ರಯತ್ನವನ್ನು ಇಲ್ಲಿ ಮಾಡುತ್ತಿದ್ದೇನೆ. ಪ್ರಕೃತಿ ಮತ್ತು ಮನುಷ್ಯನ ಸಂಬಂಧವನ್ನು, ಅದರ ಆನುಭಾವಿಕ ನೆಲೆಗಳನ್ನೂ ಈ ಕವಿತೆ ಅಷ್ಟೇ ಆಳವಾಗಿ ಶೋಧಿಸುತ್ತದೆ. ಸಂಬಂಧಗಳ ಸೊಗಸಿನಷ್ಟೇ ಅವುಗಳ ಕಡುಕಷ್ಟವನ್ನೂ ಹೇಳುವಂತಿದೆ ಈ ಕವಿತೆ. ಅಧಿಕಾರ, ಪ್ರಭುತ್ವಗಳು ಮತ್ತು ಪ್ರಕೃತಿಯ ನಡುವಿನ ಸಂಘರ್ಷವನ್ನೂ ಕೆಎಸ್ನ ಈ ಕವಿತೆಯಲ್ಲಿ ಚರ್ಚಿಸುತ್ತಾರೆ. ಇನ್ನೊಂದು ಆಯಾಮದಲ್ಲಿ, ಏನೆಲ್ಲ ಆಮಿಷಗಳ ನಡುವೆಯೂ ತನ್ನತನದ ಪನ್ನತಿಕೆಗಾಗಿ ಆರ್ತವಾಗಿ ಧೀರೋದಾತ್ತವಾಗಿ ಹುಡುಕುವ ಎಲ್ಲ ಮನುಷ್ಯರ ‘ಅವಸ್ಥೆ’ಯನ್ನೂ ಇದು ‘ಕಾಣಿ’ಸುತ್ತಿದೆ.

ಇಡೀ ಕವಿತೆ ಹೊಸ, ಬದಲಾದ ಗಂಡಿನ ಪ್ರತಿನಿಧಿಯಂತೆ ಕಾಣಿಸುವ ‘ಮಗ’ನ ನಿರೂಪಣೆಯಲ್ಲಿ ಬಂದಿರುವುದೇ ಈ ಕವಿತೆಯನ್ನು ಪಲ್ಲಟದ ಪ್ರತಿಮೆಯ ಸ್ಥಾನದಲ್ಲಿ ನಿಲ್ಲಿಸುತ್ತದೆ. ಸಾವಿರ ಸಾವಿರ ಸನ್ನಿವೇಶಗಳಲ್ಲಿ ಆಗುವಂತೆ, ಹೆಣ್ಣನ್ನು ಬಳಸಿ, ಅನುಭವಿಸಿ, ಭೋಗಿಸಿ ನಂತರ ತನ್ನ ಹಕ್ಕು ಮತ್ತು ಸವಲತ್ತು ಎನ್ನುವ ಭಂಡತನದಲ್ಲಿ, ಅಹಂಕಾರದಲ್ಲಿ ಆ ಹೆಣ್ಣಿನಿಂದ ದೂರವಾದ ಗಂಡು ಮತ್ತು ಈ ಸಂಬಂಧದ ಫಲವಾಗಿ ಪಡೆದ ಮಗುವಿನ ತಾಯಿಯ ಕಥನವನ್ನು ಮಗ ತನಗೂ, ತಂದೆಗೂ, ಲೋಕಕ್ಕೂ ಹೇಳುವಂತಿದೆ ಈ ಕವಿತೆ.

ತಾಯಿ ಹೇಳಿದಳು: ನೀನೆಂದೋ ಸೋಕಿದೆಯಂತೆ
ಅವಳ ಮೋಹನ ಭುಜವನು
ನಾನಾಗ ಅಚ್ಚರಿಯ ನಡುವೆ ಹುಟ್ಟಿದೆನಂತೆ
ಮುತ್ತಿಡುತ ಭೂ-ಧ್ವಜವನು.
ಅದೆಂಥ ಮನುಷ್ಯ ಗೌರವದಲ್ಲಿ ಗಂಡು ಹೆಣ್ಣಿನ ಸಂಬಂಧವನ್ನು ಕೆಎಸ್ನ ಗ್ರಹಿಸುತ್ತಿದ್ದಾರೆ ಇಲ್ಲಿ.
ಒಂದು ಹೆಣ್ಣಿಗೊಂದು ಗಂಡು
ಹೇಗೋ ಸೇರಿ ಹೊಂದಿಕೊಂಡು
ಕಾಣದೊಂದು ಕನಸ ಕಂಡು
ದುಃಖ ಹಗುರವೆನುತಿರೆ,
ಎನ್ನುವ ಮಾತಾಗಲೀ
ಯಾರು ಕದ್ದು ನುಡಿದರೇನು
ಊರೆ ಎದ್ದು ಕುಣಿದರೇನು
ಜನರ ಬಾಯಿಗಿಲ್ಲ ಬೀಗ
ಹೃದಯದೊಳಗೆ ಪ್ರೇಮರಾಗ

ಎನ್ನುವ ಮಾತನ್ನಾಗಲೀ ಕೆಎಸ್ನ ಬರೆದದ್ದು ಅವರ ಕಾವ್ಯದ ಮೊದಲ ಘಟ್ಟದಲ್ಲಿ. ಆಗ ರಮ್ಯ ಹೇಳಿಕೆಗಳ ಹಾಗೆ ಕಂಡದ್ದು, ಈ ಕವಿತೆಯ ಹೊತ್ತಿಗೆ, ಬದುಕಿನ ಅದಮ್ಯ ಚೈತನ್ಯದ ದರ್ಶನದಂತೆ ಕಾಣಿಸುತ್ತದೆ. ಅದರ ಜೊತೆಗೇ ಮನುಷ್ಯರೇ ಕಟ್ಟಿಕೊಂಡಿರುವ ಕಟ್ಟುಪಾಡುಗಳ ಎದುರಿಗಿನ ಪಾಡನ್ನೂ ಈ ಕವಿತೆ ಹೇಳುತ್ತಿದೆ.

‘ಬಾಳೆಲೆಯ ಹಾಸುಂಡು ಬೀಸಿ’ ಒಗೆದ ಗಂಡಿನ ನಿರ್ಗಮನದ ನಂತರ ಈ ಮಗುವನ್ನು ಕಟ್ಟಿಕೊಂಡ ಹೆಣ್ಣಿನ ಪಾಡೇನು?
ಯಾವ ಹರುಷವೋ ತಾಯ್ಗೆ ನನ್ನಂಥ ಮಗ ಹುಟ್ಟಿ!-
ಪೊರೆದಳಂತಮೃತವನೆ ಸೂಸಿ

ಹೆಣ್ಣನ್ನು ಕುರಿತ ಗಂಡಿನ ದೃಷ್ಟಿ ಬದಲಾಗುವಲ್ಲಿ ಕಾರಣವಾಗಬಹುದಾದ ಆದಿಮ ರೂಪಕವೆಂದರೆ ತಾಯಿಯದ್ದು. ತನ್ನ ತಾಯ್ತನದ ಹಿನ್ನೆಲೆ, ಕಾರಣ, ಪರಿಣಾಮ ಏನೇ ಇರಲಿ, ಅದನ್ನೆಲ್ಲ ಮೆಟ್ಟಿನಿಲ್ಲುವ ಆದಿಶಕ್ತಿಯಂತೆಯೇ ಪ್ರತಿ ತಾಯಿಯೂ. ಲೋಕ, ಸಮಾಜ, ಅದರ ಗಂಡಿಗೊಂದು, ಹೆಣ್ಣಿಗೊಂದು ನೀತಿ, ಹೆಣ್ಣಿನ ಈ ಅವಸ್ಥೆಯಲ್ಲಿ ತನ್ನ ಸಮ ಪಾಲಿದ್ದೂ ಅದನ್ನು ಸೀದಾ ಹೆಣ್ಣಿನ ಕೊರಳಿಗೆ ಕಟ್ಟಿ, ಅವಳ ಉರುಳನ್ನು ಅದಕ್ಕೆ ಸಿಕ್ಕಿಸುವ ಕ್ರೌರ್ಯ ಮತ್ತು ಧೂರ್ತತನ... ಈ ಎಲ್ಲವನ್ನೂ ತಾಯಿ, ಪ್ರಕೃತಿಯಷ್ಟೇ ಸಹಜತೆಯಿಂದ, ಜೀವನ್ಯಾಯದ ಬಲದಿಂದ, ತನ್ನ ಜೀವದ ಕುಡಿಯ ಬಗೆಗಿನ ಅದಮ್ಯ ಪ್ರೀತಿಯಿಂದ ಎದುರಿಸುತ್ತಾಳೆ. ತಾಯಿಯ ಈ ಶಕ್ತಿಯ ಬಗ್ಗೆ ಅರಿವಿದ್ದೂ ಅದನ್ನು ಮೌಲ್ಯವ್ಯವಸ್ಥೆಗೆ ಬಲಿ ಕೊಡುತ್ತಾ ತನ್ನ ಪಾರಮ್ಯವನ್ನು ಉಳಿಸಿಕೊಳ್ಳಲು ಯತ್ನಿಸುವ ಗಂಡು ಎಷ್ಟು ಹಾಸ್ಯಾಸ್ಪದನಾಗಿ, ಹೆಣ್ಣಿನ ಅನುಕಂಪಕ್ಕೆ ಭಾಜನಾಗುತ್ತಾನೆ ಎನ್ನುವುದನ್ನೂ ಈ ಕವಿತೆ ಸೂಚಿಸುತ್ತದೆ.

ಮರುಭೂಮಿಯಲಿ ನನಗೆ ಮುಗಿಲ ತೊಟ್ಟಿಲ ಕಟ್ಟಿ
ಹಿಮ ಬೆಂಕಿ ಬಿರುಗಾಳಿ ಬೀಸಿ
ತಾಯಿ ತನ್ನನು ಸಾಕಿದಳು ಎಂದು ಹೇಳುವ ಮಗನಿಗೆ ಈ ಕಾರಣಕ್ಕಾಗಿ ತನ್ನ ತಾಯಿಯ ಬಗ್ಗೆ ಅಪಾರ ಗೌರವ.
ಪರ್ವತಾರಣ್ಯಗಳ ಸಿಂಹ ಶಿಬಿರಗಳಲ್ಲಿ ತನ್ನನ್ನು ಸಾಕಿದ ‘ಅಗ್ನಿಕುವರಿ’ಯ ಬಗ್ಗೆ ಮಗನಿಗೆ ಸಕಾರಣ ಹೆಮ್ಮೆ. ಎಂದೋ ಒಮ್ಮೆ ತಂದೆಯಾದನು ಕಾಣಿಸಿಕೊಂಡಾಗ ಮಗನಿಗೆ ಅವನನು ಕೂಗು ಎಂದರೆ, ಧಿಮಾಕಿನಲ್ಲೆ ಮುಖ ತಿರುಗಿಸಿ ಹೋದವನ ಬಗೆಗೂ ತಾಯಿ, ‘ಅನುಕಂಪದಲ್ಲು, ನೋವಿನಲ್ಲಿ,: ಎಂಥವರು ಇವರು’ ಎನ್ನುತ್ತಾಳೆಯೇ ಹೊರತು, ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುವುದಿಲ್ಲ, ಮಗನ ಬಗೆಗಿನ ಪ್ರೀತಿ ಕುಂದುವುದೂ ಇಲ್ಲ.

ತಂದೆಯಾಗಿ ತನ್ನ ಜವಾಬ್ದಾರಿಯಿಂದ ಸುಲಭವಾಗಿ ತಪ್ಪಿಸಿಕೊಂಡು, ಈಗ ತನಗೆ ಅಗತ್ಯವಿದೆಯೆಂದು, ಬಾ ಎಂದು ಆಹ್ವಾನಿಸುವ ತಂದೆಯನ್ನು ಈ ಮಗ ನಿರಾಕರಿಸುತ್ತಾನೆ. ಈಗ ನಿನಗೆ ಉತ್ತರಾಧಿಕಾರಿ ಬೇಕೆಂದು ನನ್ನನ್ನು ಕರೆದರೆ, ನಾನು ಬರಲಾರೆ ಎನ್ನುವ ಮಗ, ಬದುಕಿನ ಯಾವ ಘಳಿಗೆಯಲ್ಲೂ ತನ್ನ ಮಗುವಿನ ಯೋಗಕ್ಷೇಮವನ್ನು ಮರೆಯದ, ಸದಾ ಆ ಮಗುವಿನ ಜೊತೆಗಿರುವ ತಾಯಿಯನ್ನೇ ಆರಿಸಿಕೊಳ್ಳುತ್ತಾನೆ. ಈ ಮೂಲಕ ಅವನು, ತನ್ನ ಹುಟ್ಟು ಮತ್ತು ತಾಯ್ತನ ಎರಡನ್ನೂ ಸುಲಭವಾಗಿ ಅಕ್ರಮವೆಂದೋ ಅನೈತಿಕವೆಂದೋ ವಿರೋಧಿಸುವ, ನಿರಾಕರಿಸುವ ದೃಷ್ಟಿಕೋನವನ್ನೂ ಧಿಕ್ಕರಿಸುತ್ತಾನೆ. ಈ ಧಿಕ್ಕಾರದಲ್ಲಿ ತಾಯ್ತನವನ್ನು ಅದಕ್ಕಿರುವ ಎಲ್ಲ ಹಂಗುಗಳಿಂದಲೂ ಮುಕ್ತಗೊಳಿಸುತ್ತಾನೆ, ಅದೊಂದು ಸ್ವಾಯತ್ತವಾದ ವ್ಯಕ್ತಿತ್ವದ ನೆಲೆ ಎಂದು ಸ್ಥಾಪಿಸುವ ಕೆಚ್ಚೂ ಇಲ್ಲಿದೆ.

ಹೆಣ್ಣಿನ ಈ ಶಕ್ತಿಯನ್ನು ಅವಳ ಹುಟ್ಟುಶಕ್ತಿಯೆನ್ನುವ ನಂಬಿಕೆ ಈ ಮಗನಿಗಿದೆ. ತನಗಾದ ಈ ತಾಯಿಶಕ್ತಿಯ ಸಾಕಾರ ತನ್ನ ತಂದೆಗಾಗಿಲ್ಲ ಎನ್ನುವುದು ಅವನಿಗೆ ಅಚ್ಚರಿಯನ್ನುಂಟು ಮಾಡುತ್ತದೆ.

‘ತಾಯಿ ದೇವರು’ ಎಂದು ತಾರೆಗಳು ಹಾಡಿದವು
‘ಆಕೆ ಮಾಯೆಯೆ’ ಎಂದರರಿಯದವರು
ಅವಳ ಪ್ರೇಮದ ಸವಿಯ ನೀನು ಕಂಡಿರಬಹುದು
ಆ ವಸುಂಧರೆಯ ಮಗ ನಾನು

ಲೋಕ ಹೀಗಳೆಯುವ ತಾಯ್ತನದ ಮಾದರಿಗೆ ತಾನು ಸೇರಿದವನು ಎನ್ನುವ ಭಾವವೇ ಈತನನ್ನು ಬಾಧಿಸುವುದಿಲ್ಲ ಎನ್ನುವ ಅಂಶ, ಹೆಣ್ಣನ್ನು ಕುರಿತ ಕೆಎಸ್ನ ಅವರ ದೃಷ್ಟಿಕೋನದಲ್ಲಿ ಆಗಿರುವ ಕ್ರಾಂತಿಕಾರಕ ಬದಲಾವಣೆಯನ್ನು ಹೇಳುತ್ತದೆ. ಕೊನೆಗೂ ಪೊರೆಯಬಲ್ಲವಳು, ಕಾಪಾಡಬಲ್ಲವಳು ತಾಯಿ ಎನ್ನುವ ಅರಿವು, ಹೆಣ್ಣನ್ನು ಎಲ್ಲ ಬಗೆಯ ಅಧೀನತೆಯಿಂದ ಮುಕ್ತಗೊಳಿಸಿ, ಪರ್ಯಾಯಗಳಿಲ್ಲದ, ಸ್ಪರ್ಧೆಯೇ ಸಾಧ್ಯವಾಗದ ರೂಪ ಮತ್ತು ಶಕ್ತಿಯಲ್ಲಿ ನೋಡಲು ಪ್ರೇರೇಪಿಸುತ್ತದೆ.

ಬಂದ ಬಾಗಿಲು ಮಣ್ಣು: ಬಿಡುವ ಬಾಗಿಲು ಮಣ್ಣು
ನಡುವೆ ಕಾಪಾಡುವುದು ತಾಯ ಕಣ್ಣು
ತಾಯ್ತನವನ್ನು ಅದರ ತುರೀಯಾವಸ್ಥೆಯಲ್ಲಿ ಆನಂದಿಸುವುದನ್ನು ತಾಯಂದಿರೂ ಎಂದೂ ಬಿಟ್ಟುಕೊಡಬೇಕಾದ್ದಿಲ್ಲ, ಎಂಥದೇ ಪರಿಸ್ಥಿತಿಯಲ್ಲೂ ಎನ್ನುವುದನ್ನು ಪೂಜ್ಯತೆಯ ಭಾವನೆಯಲ್ಲಲ್ಲ, ವ್ಯಕ್ತಿತ್ವದ ಧೀಮಂತಿಕೆಯ ನೆಲೆಯಲ್ಲಿ ಈ ಕವಿತೆ ಪ್ರತಿಪಾದಿಸುತ್ತದೆ.

ಕೂಗಿದಾಗಲೆಲ್ಲ ಎದುರು ಮಾತನಾಡದೆ ಬರುತ್ತಿದ್ದ ಶಾರದೆ, ‘ಆ ವಸುಂಧರೆ’ಯಾಗಿ ಪಡೆದ ರೂಪಾಂತರ ಅಸಾಧಾರಣವಾದದ್ದು. ಕೆಎಸ್ನ ಅವರ ಇನ್ನೂ ಎಷ್ಟೋ ಕವಿತೆಗಳು ಇದಕ್ಕೆ ಪೂರಕವಾಗಿವೆ. ಗಂಭೀರ ಅಧ್ಯಯನದ ವಸ್ತುವಾಗುವ ಹರಹು ಈ ವಿಷಯದ್ದು. ‘ದಾರಿದಾರಿಯಲಿ ಹೆಣ್ಣು; ವಜ್ರದ ಕಣ್ಣು’– ಇಂಥ ಮಾತನ್ನು ಕೆಎಸ್ನ ಮಾತ್ರ ಬರೆಯಲು ಸಾಧ್ಯ, ಏಕೆಂದರೆ ಕೊನೆಗೂ ಕೆಎಸ್ನಹೊಳೆದದ್ದು ತಾರೆ, ಉಳಿದದ್ದು ಆಕಾಶ’.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.