women's experience of oppression is the
Authenticating 'touch stone' of women's writing
Breaking rules, breaking boundaries,
crossing over, going where you
have been told not to go has increasingly
figured in the writing of women
Poet as a natural consequence of the restraints placed upon her
as a child being socialized to the female role ..
her class and culture
Mimesis, tell us how to re-evolve with the
definition of the feminine
-Lucy Irigary

ಅಕ್ಷರವೆನ್ನುವುದು ದಮನಿತರ ಪಾಲಿಗೆ ಸ್ಪರ್ಶಮಣಿಯ ಹಾಗೆ. ಅವರ ಇಡೀ ವ್ಯಕ್ತಿತ್ವವನ್ನೇ ಅದು ಬದಲಿಸಿಬಿಡುತ್ತದೆ. ಅವರೊಳಗಿನ ದ್ವಂದ್ವ, ಕೀಳರಿಮೆಗಳನ್ನೆಲ್ಲ ಕಳೆದು, ಆರೋಪಿತ ವ್ಯಕ್ತಿತ್ವದ ವೇಷ, ಭಾರವನ್ನೆಲ್ಲ ಕಳೆದ, ಆತ್ಮಪ್ರಭೆಯಿಂದಲೇ ಬೆಳಗುವ ವ್ಯಕ್ತಿತ್ವದ ಸಾಕ್ಷಾತ್ಕಾರಕ್ಕೆ ಇರುವ ಅರಿವಿನ ದಾರಿ ಇದು.

‘ಮುಸ್ಸಂಜೆಯ ಕಥಾ ಪ್ರಸಂಗ’ದ ಆಣೆಬಡ್ಡಿ ರಂಗವ್ವನಿಗೆ, ‘ಒಡಲಾಳ’ದ ಸಾಕವ್ವನಿಗೆ ಶಿಕ್ಷಣವೇನಾದರೂ ದೊರೆತಿದ್ದರೆ ಅವರು ‘ಮಂಡಲ ಗಿಂಡಲಗಳ ಗಡ ಮುಕ್ಕಿ’ ರಾಜ್ಯದ ಸಾಮ್ರಾಜ್ಯದ ತೆನೆ ಒಕ್ಕುತ್ತಿದ್ದರೆಂದೇ ಅನಿಸುತ್ತದೆ! ನನ್ನ ಆಸ್ತಿಯೆಲ್ಲ ಸ್ವಾರ್ಜಿತ ಕಣ್ಲಾ... ಯಾರಿಗೆ ಬೇಕಾದ್ರೂ ಕೊಡ್ತೀನಿ... ನನಗೂ ಕಾನೂನು ಗೊತ್ತೈತೆ ಎನ್ನುವ ಸಾಕವ್ವ, ಮಗಳು ಸಾವಂತ್ರಿ ಬ್ಯಾಡರ ಮಂಜನನ್ನು ಇಷ್ಟಪಟ್ಟಾಗ ಅನಿವಾರ್ಯತೆಯಲ್ಲೂ ಮಗಳು ಮೆಚ್ಚಿದವನನ್ನು ಮದುವೆಯಾಗಲಿ ಎನ್ನುವ ಕರುಳ ತುಡಿತದಲ್ಲೂ, ಹಾಗೆ ಮದುವೆಯಾದರೆ ಏನು ತಪ್ಪು ಎನ್ನುವ ಒಳದನಿಯ ಒತ್ತಾಯದಲ್ಲೂ ವಿಲಕ್ಷಣ ಸಂದರ್ಭದಲ್ಲಿ ಆ ಮದುವೆಯನ್ನು ಅತ್ಯಂತ ನಾಟಕೀಯವಾಗಿ ಮಾಡುತ್ತಾಳೆ. ಈ ರಂಗವ್ವನಿಗೆ ವಿದ್ಯೆಯೆನ್ನುವ ಅಸ್ತ್ರವೇನಾದರೂ ದೊರೆತಿದ್ದರೆ, ಸಮಾಜವಾದಿಗಳು ಪ್ರತಿಪಾದಿಸುವ ಸಂಪೂರ್ಣ ಕ್ರಾಂತಿ ಅಲ್ಲಿ ಘಟಿಸುತ್ತಿತ್ತು! ಹೆಣ್ಣಿಗೆ ವಿದ್ಯೆಯನ್ನು ಕೊಡುವುದೆಂದರೆ ವಿಶ್ವವಿದ್ಯಾಲಯವೊಂದನ್ನು ತೆರೆದಂತೆ ಎನ್ನುವ ಟ್ಯಾಗೋರರ ಮಾತಿನಿಂದ ಹಿಡಿದು, ಶಿಕ್ಷಣವು ಹೆಣ್ಣಿನ ವ್ಯಕ್ತಿತ್ವಕ್ಕೆ ಕೊಡುವ ನೈತಿಕ ಬಲವನ್ನು ಒಪ್ಪಿ ಗೌರವಿಸುವ ಸಂದರ್ಭ ಸೃಷ್ಟಿಯದಾಗ ನಾಗರಿಕತೆಯ ದಿಕ್ಕೇ ಬದಲಾಗುತ್ತದೆ ಎನ್ನುವ ಸಮಾಜವಿಜ್ಞಾನಿಗಳ ಮಾತಿನ ತನಕ ಯಾವ ವ್ಯಾಖ್ಯಾನಗಳನ್ನು ನೋಡಿದರೂ ಶಿಕ್ಷಣವು ಹೆಣ್ಣಿನ ಮಟ್ಟಿಗೆ ಸ್ಪರ್ಶಮಣಿಯೇ ಎನ್ನುವುದು ಮನದಟ್ಟಾಗುತ್ತದೆ.

ರಮಾಬಾಯಿಯವರು ಶಿಕ್ಷಿತರಾದ ಘಳಿಗೆ ಈ ದೇಶದ ಅಸಂಖ್ಯಾತ ಮಹಿಳೆಯರ ಪಾಲಿನ ಅಮೃತ ಘಳಿಗೆ. ತಮಗೆ ಸಿಗದ ಶಿಕ್ಷಣವೆನ್ನುವ ತವನಿಧಿ ತಮ್ಮ ಮಕ್ಕಳಿಗೆ ದೊರೆಯಲಿ ಎಂದು ಹಂಬಲಿಸಿದ, ಅದಕ್ಕಾಗಿ ಅಹೋರಾತ್ರಿ ಜೀವನಪರ್ಯಂತ ಹೋರಾಡಿದ ‘ತಾಯಿ ಕಥನ’ಗಳನ್ನು ಯಾರಾದರೂ ಬರೆಯಬೇಕು. ಆಧುನಿಕ ಭಾರತದ ಮತ್ತು ಮಹಿಳಾ ಹೋರಾಟದ ನಿರ್ಣಾಯಕ ಪ್ರಕ್ರಿಯೆಯ ಮೂಲಸಾಕ್ಷಿ ಈ ಕಥನಗಳು.

ಶ್ರೀನಗರದಲ್ಲಿ ಮಹಿಳಾ ಭಕ್ತ ಕವಿಗಳನ್ನು ಕುರಿತ ವಿಚಾರ ಸಂಕಿರಣ. ಬುರ್ಖಾ ಧರಿಸಿದ್ದ ಮಹಿಳೆಯೊಬ್ಬಳು ತನ್ನ ಪೇಪರ್ ಮಂಡಿಸಲು ನಿಂತಾಗಿನ ನನ್ನ ಮನಸ್ಥಿತಿಯನ್ನು ವಿವರಿಸುವುದು ಕಷ್ಟ. ಅಲ್ಲಿಗೆ ಬರುವುದಕ್ಕೆ ಮುಂಚೆ ದಾಲ್ ಸರೋವರದಲ್ಲಿ ಮಹಿಳೆಯರೇ ದೋಣಿ ನಡೆಸುತ್ತಾ ಹೋಗುವುದನ್ನು ಕಂಡು ಪಟ್ಟ ಸಂತೋಷವೆಲ್ಲ ಮಟಾಮಾಯಾವಾಗಿ ಹೋಯಿತು. ವಿಶ್ವವಿದ್ಯಾಲಯವೊಂದರಲ್ಲಿ ಪಿಎಚ್.ಡಿ ಗಾಗಿ ಅಭ್ಯಾಸ ನಡೆಸುತ್ತಿದ್ದ ಯುವತಿ ಆಕೆ. ಅವಳೊಂದಿಗೆ ಮಾತನಾಡುತ್ತಿದ್ದಾಗ, ‘ಬುರ್ಖಾ ವಿಷಯಕ್ಕೆ ಸಂಘರ್ಷ ಮಾಡಲು ನನಗೆ ಸಮಯವಿಲ್ಲ, ನನ್ನ ಅಧ್ಯಯನ ನನಗೆ ಮುಖ್ಯ’ ಎಂದಳು. ಶಿವನೆ, ಇದು ಯಾವ ಜನ್ಮದ ಪಾಪ ನಮ್ಮನ್ನು ಹೀಗೆ ಕಾಡುತ್ತಿದೆ ಎನಿಸಿಬಿಟ್ಟಿತು. ಮರುಘಳಿಗೆಯೇ ಪಾಪ ನಮ್ಮದಲ್ಲ, ಅವರ ಪಾಪದ ಕೊಡ ತುಂಬುತ್ತಿದೆ ಎಂದು ಸಮಾಧಾನ ಪಟ್ಟುಕೊಂಡೆ.

ಕರ್ನಾಟಕದ ಮಹಿಳಾ ಹೋರಾಟದಲ್ಲಿ ‘ಲಂಕೇಶ್ ಪತ್ರಿಕೆ’ಗೂ ಒಂದು ಸ್ಥಾನವಿದೆ. ಸಮುದಾಯದ ಬದುಕಿನಲ್ಲಿ ಮಹಿಳಾ ಸಂವೇದನೆಯನ್ನು ಸೃಷ್ಟಿಸಲು, ಹೊಂದಿಸಲು ಅದು ನಡೆಸಿದ ಪ್ರಯತ್ನಗಳು ಇದನ್ನು ಸಮರ್ಥಿಸುತ್ತವೆ. ಇರಲಿ, ಆ ಪತ್ರಿಕೆಯಲ್ಲಿ ಪ್ರಕಟವಾದ ಸಾರಾ ಅಬೂಬಕರ್ ಅವರ ‘ಚಂದ್ರಗಿರಿಯ ತೀರದಲ್ಲಿ’ ಕೃತಿಗೆ ಐತಿಹಾಸಿಕ ಮಹತ್ವವಿದೆ. ಇದು ಅಪರಿಚಿತ ಮುಸ್ಲಿಂ ಮಹಿಳಾ ಲೋಕದ ಪರಿಚಯ ಮಾಡಿಕೊಟ್ಟಿತು ಎನ್ನುವ ಹೇಳಿಕೆ ಇದರ ಬಗೆಗೆ ಮತ್ತೆ ಮತ್ತೆ ಕೇಳಿ ಬರುತ್ತದೆ. ಆದರೆ ಈ ಹೇಳಿಕೆ ಅದರ ಅನುಭವಲೋಕದ ಹೊಸತನವನ್ನು ಮಾತ್ರ ಧ್ವನಿಸಿಬಿಡುವ ಅಪಾಯವಿದೆ. ಈ ಕೃತಿ ಅನಾವರಣಗೊಳಿಸುವ ಅನುಭವ ಲೋಕ ತನ್ನ ಹೊಸತನಕ್ಕಾಗಿ ಮಾತ್ರ ಮುಖ್ಯವಲ್ಲ. ಅದರ ಅನನ್ಯತೆಯ ಜೊತೆಗೇ ಅದರದ್ದೇ ಆದ ತಲ್ಲಣಗಳೂ ಆ ತಲ್ಲಣಗಳು ಸಮುದಾಯದ ವಿಸ್ತಾರದೊಂದಿಗೆ ತಳಕು ಹಾಕಿಕೊಳ್ಳುವ ಗೋಜಲುಗಳು ಎಲ್ಲ ಸೇರಿ ಓದುಗನ ಅನುಭವಕ್ಕೆ ದಕ್ಕುತ್ತಾ ಹೋಗುತ್ತವೆ.

‘ಚಂದ್ರಗಿರಿಯ ತೀರದಲ್ಲಿ’ ಬರೆದಾದ ಮೇಲೆ ಸಾರಾ ಅವರು ‘ಮುಸ್ಲಿಂ ಹುಡುಗಿ ಶಾಲೆ ಕಲಿತದ್ದು’ ಕತೆ ಬರೆದರು. ಚಂದ್ರಗಿರಿಯ ತೀರದಲ್ಲಿ ರಮ್ಯ ನಾಯಕಿಯಾಗಿ ಕಾಣಿಸಿಕೊಂಡ ಹುಡುಗಿ ಈ ಕಥೆಯಲ್ಲಿ ಹೊಸ ದಾರಿಯಲ್ಲಿ ನಡೆದ ಮೊದಲ ಯಾತ್ರಿಕಳ ಹಾಗೆ, ಯುಗಪ್ರವರ್ತಕಳ ಹಾಗೆ ಕಾಣಿಸುತ್ತಾಳೆ. ನಾಯಕಿಯ ಏಕ ಕೇಂದ್ರದಲ್ಲಿ ಕಾಣಿಸುವ ಬರಹಕ್ಕಿಂತ ಮುಸ್ಲಿಂ ಹುಡುಗಿಯ ಅನಾಮಿಕತೆಯಲ್ಲಿ ಅವಳು ಬಹುತ್ವವನ್ನೂ ಪ್ರಾತಿನಿಧಿಕ ಪಾತ್ರವನ್ನೂ ಶಕ್ತವಾಗಿ ನಿಭಾಯಿಸುತ್ತಾಳೆ. ಆತ್ಮಕಥಾನಕ ನಿರೂಪಣೆಯಲ್ಲಿನ ಈ ಮುಸ್ಲಿಂ ಹುಡುಗಿ ಇತರ ಮುಸ್ಲಿಂ ಹುಡುಗಿಯರನ್ನು ಮಾತ್ರವಲ್ಲ ಇಂಥದ್ದೇ ಸ್ಥಿತಿಯಲ್ಲಿರುವ ಅಸಂಖ್ಯಾತ ಹುಡುಗಿಯರ ಆತ್ಮನಿರೂಪಣೆಯೇ ಆಗಿಬಿಡುವುದು ಈ ಕಥನದ ಶಕ್ತಿ. ಈ ಕಥೆಯಲ್ಲಿ ಒಂದು ಕಡೆ ಕತೆಗಾರ್ತಿ, ಓದುಗರೇ ಚಂದ್ರಗಿರಿಯ ತೀರದ ಮೂಲ ಗೊತ್ತಾಯಿತಲ್ಲವೇ ಎಂದು ಉದ್ಗರಿಸುವುದು ವಾಸ್ತವ ಮತ್ತು ಕಥನಗಳನ್ನು ಬೆಸೆಯುವ ಹೊಸ ಬಗೆಯಾಗಿಯೂ ಯಶಸ್ಸು ಪಡೆಯುತ್ತದೆ.

ಹೋರಾಟಗಳ ನಿರೂಪಣೆಯ ಹಲವು ಕ್ರಮಗಳು, ಮಾದರಿಗಳು ಇವೆ. ಓದುಗರಲ್ಲಿ ಬೆರಗು–ಹೆಮ್ಮೆ ಮೂಡಿಸುವ, ಮೈನವಿರೇಳಿಸುವ ನಿರೂಪಣೆಯು ಮೆಚ್ಚುಗೆಯ ಜೊತೆಯಲ್ಲೇ ಅದರ ಅಸಾಧಾರಣತೆಯನ್ನು ಮನದಟ್ಟಾಗಿಸುತ್ತಾ ಹೋಗುತ್ತದೆ. ಆದರೆ ಕೆಲವೊಮ್ಮೆ ಈ ಮಾದರಿ ನಮ್ಮಲ್ಲಿ ಅದರ ಸಾಧ್ಯತೆಯ ಕಷ್ಟವನ್ನೂ ಎಷ್ಟು ಖಚಿತವಾಗಿಸುತ್ತದೆ ಎಂದರೆ ಆ ದಾರಿಯಲ್ಲಿ ನಾವು ಹೋಗುವುದು ಸಾಧ್ಯವಿಲ್ಲವೇನೋ ಎನ್ನುವ ಅನುಮಾನವೂ ನಮ್ಮಲ್ಲಿ ಮೂಡುವಷ್ಟು. ಇದಕ್ಕಿಂತ ಭಿನ್ನವಾದ ಕ್ರಮವೆಂದರೆ, ಇದು ನಮ್ಮ ದಾರಿಯೂ ಆಗಬಲ್ಲದು ಎನ್ನುವ ಭರವಸೆಯನ್ನು ನಮ್ಮಲ್ಲಿ ಮೂಡಿಸಬಲ್ಲದ್ದು. ಸಾರಾ ಅವರ ‘ಮುಸ್ಲಿಂ ಹುಡುಗಿ ಶಾಲೆ ಕಲಿತದ್ದು’ ಈ ಮಾದರಿಗೆ ಸೇರುವ ಕಥೆ. ನಡೆದು ಬಂದ ದಾರಿಯನ್ನು ಆತ್ಮರತಿಯಿಲ್ಲದೆ ಮಂಡಿಸುವ ಬಗೆಯು ಏಕಕಾಲಕ್ಕೆ ಅನೇಕ ಸಾಧ್ಯತೆಗಳನ್ನು ಒಳಗೊಳ್ಳುತ್ತಾ ಹೋಗುತ್ತದೆ. ಆತ್ಮರತಿಯನ್ನು ಮೀರಿಕೊಂಡ ಈ ಕಥನವು ಏಕಮೇವಾದ್ವಿತೀಯ ಎನ್ನುವ ಠೇಂಕಾರವನ್ನು ಬಿಟ್ಟುಕೊಡುತ್ತಲೇ ಇನ್ನೊಂದು ಆಯಾಮವನ್ನು ಸಾಧಿಸಿಬಿಡುತ್ತದೆ. ಅದೆಂದರೆ ಹೊರಗಾಗುವ, ಸಾಧಕಿಯ ಪಟ್ಟದಲ್ಲಿ ಇತರರಿಗಿಂತ ಮೇಲಿನ ಸ್ಥಾನದಲ್ಲಿ ಕುಳಿತು ಹೊರಗೆ ಉಳಿಯದೇ ಇತರರನ್ನೂ ಒಳಗೊಳ್ಳುವ ಕ್ರಮ ಇದು. ಯಾವುದೇ ದಮನಿತರ ಹೋರಾಟದಲ್ಲೂ ಈ ಬಗೆಯ ಒಳಗೊಳ್ಳುವ ಮಾದರಿಗಳು ಹೆಚ್ಚಾದಷ್ಟೂ ಆ ಹೋರಾಟದ ಶಕ್ತಿಯೂ ಹೆಚ್ಚಾಗುತ್ತಾ ಹೋಗುತ್ತದೆ. ಸಾರಾ ಅವರ ಈ ಕಥೆಗೆ ಐತಿಹಾಸಿಕ ಮಹತ್ವವಿದೆ ಎಂದು ಹೇಳಿದ್ದು ಈ ಅರ್ಥದಲ್ಲಿ. ಆ ಕಥೆ ಪ್ರಕಟವಾದಾಗ ಮುಸ್ಲಿಂ ಮಹಿಳೆಯರೂ ಸೇರಿದಂತೆ ಅನೇಕರು ತಮ್ಮನ್ನು ಆ ಕತೆಯ ಜೊತೆಯಲ್ಲಿ ಗುರುತಿಸಿಕೊಂಡದ್ದು ಈ ಕಾರಣಕ್ಕಾಗಿಯೇ.

ಪ್ರಗತಿಪರ ಮನೋಭಾವದ ತಂದೆ ತನ್ನ ಹೆಂಡತಿ ಮತ್ತು ತಾಯಿಯ ವಿರೋಧದ ನಡುವೆಯೇ ಮಗಳನ್ನು ಶಾಲೆಗೆ ಕಳುಹಿಸುವ ನಿರ್ಧಾರ ಮಾಡುತ್ತಾರೆ. ತಾನು ಹೊಸ ದಾರಿಯೊಂದರ ಹರಿಕಾರಳಾಗುತ್ತಿದ್ದೇನೆ ಎನ್ನುವುದರ ಅರಿವಿಲ್ಲದೆಯೇ ಆ ಹುಡುಗಿ ಶಾಲೆಗೆ ಹೋಗಲು ಪ್ರಾರಂಭಿಸುತ್ತಾಳೆ. ಇತರರ ಏರಿದ ಹುಬ್ಬು, ಸ್ವಜನರ ಅಸಹನೆಯ ವಿರೋಧದ ನಡುವೆಯೇ ಆಟದ ಮೈದಾನದ ಆಕರ್ಷಣೆಯಲ್ಲಿ ಹುಡುಗಿಗೆ ಶಾಲೆ, ಓದು ಬರಹದ ಬಗ್ಗೆ ಆಸಕ್ತಿ ಬೆಳೆಯುತ್ತಾ ಹೋಗುತ್ತದೆ. ಹುಡುಗಿಯ ದೊಡ್ಡಣ್ಣನಿಗೆ ತನ್ನ ತಂಗಿ ಬದಲಾವಣೆಯ, ಪ್ರಗತಿಯ ರೂಪಕವಾಗಬೇಕು ಎನ್ನುವ ಮಹತ್ವಾಕಾಂಕ್ಷೆ. ಮಗಳು ವಿದ್ಯಾವಂತಳಾಗಬೇಕು ಎನ್ನುವ ಆಸೆಯ ಜೊತೆಯಲ್ಲೂ ಸಮಾಜವನ್ನು ಸಂಪೂರ್ಣವಾಗಿ ಎದುರು ಹಾಕಿಕೊಳ್ಳಲು ಸಿದ್ಧರಾಗದೇ ಇಟ್ಟ ಮೊದಲ ಹೆಜ್ಜೆ ನಿರ್ವಿಘ್ನವಾಗಿ ಮುಗಿದರೆ ಸಾಕು ಎನ್ನುವ ಸಹಜ ಕಾಳಜಿ. ಎಂತಲೇ ಮಗಳು ಶಾಲೆ ಮುಗಿದ ಮೇಲೆ ಆಟಕ್ಕೆ ಹೋಗದೆ ತೆಪ್ಪಗೆ ಮನೆಗೆ ಬಂದರೆ ಸಾಕು ಎನ್ನುವ ಕಠೋರತೆ. ಈ ಕುರಿತಂತೆ ಶಾಲೆಯ ಮುಖ್ಯೋಪಾಧ್ಯಾಯರಿಗೆ ಪತ್ರ ಬರೆಯಲೂ ಅವರು ಹಿಂಜರಿಯುವುದಿಲ್ಲ. ಸಿನಿಮಾಗೆ ಹೋಗಬಾರದು, ಪಿಕ್ನಿಕ್ಗೆ ಹೋಗಬಾರದು, ಹೆಣ್ಣುಮಕ್ಕಳೆ ಅಭಿನಯಿಸುವ ನಾಟಕದಲ್ಲೂ ಅಭಿನಯಿಸಬಾರದು, ಶಾಲಾ ಸಮಾರಂಭಗಳಿಗೆ ಹೋಗಬಾರದು, ಕೊನೆಗೆ ಒಳ್ಳೆಯ ಬಟ್ಟೆಯನ್ನೂ ಹಾಕಿಕೊಳ್ಳಬಾರದು... ಈ ಬಾರದುಗಳ ಕೊನೆಯಿಲ್ಲದ ಸರಮಾಲೆ ಅವಳೆದುರಿಗೆ. ಆದರೆ ಹುಡುಗಿಯಲ್ಲಿ ವಿದ್ಯೆಯ ಶಕ್ತಿ ನಿಧಾನವಾಗಿ ಮೈಗೂಡುತ್ತಿತ್ತಲ್ಲ. ಸದಾ ಸಣ್ಣಪುಟ್ಟದಕ್ಕೂ ಅಣ್ಣನ ಮೊರೆ ಹೋಗುತ್ತಿದ್ದವಳು, ಎಲ್ಲರ ಮೂದಲಿಕೆಯ ಮಾತನ್ನು ಕೇಳಿ, ಶಾಲೆಯ ಸಹವಾಸವೇ ಬೇಡ ಎಂದು ಆರಂಭದಲ್ಲಿ ನಿರುತ್ಸಾಹಗೊಳ್ಳುತ್ತಿದ್ದವಳು, ಅಧೀರಳಾಗುತ್ತಿದ್ದವಳು ಈಗ ನಿಧಾನವಾಗಿ ಬದಲಾಗುತ್ತಾಳೆ. ತಾನೇ ಪ್ರತಿಭಟನೆಯ ದಾರಿಯನ್ನು ತುಳಿಯುತ್ತಾಳೆ. ಅಪ್ಪ ಅಮ್ಮ ಅಜ್ಜಿಯನ್ನು ಎದುರಿಸುವ ವಿರೋಧಿಸುವ ದಿಟ್ಟತೆಯನ್ನು ಗಳಿಸುತ್ತಾಳೆ. ಇದನ್ನೇ ಶಿಕ್ಷಣದ ಸ್ಪರ್ಶಮಣಿಯ ಮಾಂತ್ರಿಕತೆ ಎಂದು ಕರೆಯಬಹುದು. ಚಹಾ ಲೋಟದಲ್ಲಿ ಎದ್ದ ಅಲೆ ಸಣ್ಣದಾದರೂ ಅಲೆ ಹೌದಷ್ಟೇ? ಎಸ್.ಎಸ್.ಎಲ್.ಸಿ ಗೆ ತನ್ನ ಓದು ಮುಕ್ತಾಯವಾಗುತ್ತದೆ ಎನ್ನುವುದರ ಅರಿವು ಅವಳಿಗಿದೆ. ಅದರ ಮುಂದೆ ತಾನು ಹೋಗಲಾರೆ ಎನ್ನುವ ಸತ್ಯದ ಅರಿವಿದ್ದೂ ಅವಳಿಗೆ ತನ್ನ ಹೋರಾಟದಲ್ಲಿ ನಂಬಿಕೆ ಕುಸಿಯುವುದಿಲ್ಲ.

‘ಇಷ್ಟು ದಿನವೂ ಎಲ್ಲದಕ್ಕೂ ತಲೆ ಬಾಗಿದೆ. ನಾನು ಶಾಲೆಗೆ ಹೋಗುವುದೇ ಆಟವಾಡುವುದಕ್ಕಾಗಿ. ನಾನೆಂದರೆ ಎಲ್ಲರ ಆಸೆ ಆಕಾಂಕ್ಷೆಗಳನ್ನು ಪೂರೈಸಬೇಕಾಗಿರುವ ಒಂದು ಬೊಂಬೆಯಾದೆನೇ ಹೊರತು ನನ್ನನ್ನು ಅರ್ಥ ಮಾಡಿಕೊಳ್ಳಲು ಒಬ್ಬರೂ ಇಲ್ಲವಾದರಲ್ಲ? ನಾನಿನ್ನು ಶಾಲೆಗೇ ಹೋಗುವುದಿಲ್ಲ. ನನ್ನ ವಿದ್ಯೆಯಿಂದ ಯಾರೂ ಉದ್ಧಾರವಾಗುವುದಿಲ್ಲ’ ಎಂದು ಸತ್ಯಾಗ್ರಹ ಮಾಡುತ್ತಾಳೆ ಈ ಹುಡುಗಿ. ‘ಬರೇ ಮಣ್ಣಿನ ಹೆಂಟೆಯಾಗಿ ಎಲ್ಲರಿಂದಲೂ ಒಳ್ಳೆಯವಳು ಎನಿಸಿಕೊಳ್ಳುವುದಕ್ಕಿಂತ, ನನಗೆ ಸರಿ ಎಂದು ತೋಚಿದ್ದನ್ನು ಹಾಗೆಯೇ ಅಂದು, ನನಗೆ ಸರಿ ಕಂಡಂತೆ ಮಾಡಿ, ಎಲ್ಲರಿಂದಲೂ ಕೆಟ್ಟವಳು ಎನಿಸಿಕೊಳ್ಳುವುದೇ ನನಗೆ ಹೆಚ್ಚು ಇಷ್ಟ’ ಎನ್ನುವ ಈ ಹುಡುಗಿಯಲ್ಲಿ ಎಂಥ ಪರಿವರ್ತನೆಯಾಗಿದೆ ನೋಡಿ. ರೂಪಾಂತರ ಹೊಂದಿದ ವ್ಯಕ್ತಿತ್ವದ ಪ್ರಭೆಯಲ್ಲಿ ಈ ಹುಡುಗಿ ಹೊಳೆಯುತ್ತಾಳೆ. ಅಣ್ಣತಮ್ಮಂದಿರ ನಡುವೆ ಮುಚ್ಚಟೆಯಾಗಿ ಬೆಳೆದ, ಕುಸುಮ ಕೋಮಲೆ ಹೇಗೆ ನಿಧಾನವಾಗಿ ಸ್ವಪ್ರಜ್ಞೆಯನ್ನು ಬೆಳೆಸಿಕೊಳ್ಳುತ್ತಾ ಹೋಗುತ್ತಾಳೆ. ತನ್ನ ಆಸೆಗಳನ್ನೂ ಆಯ್ಕೆಗಳನ್ನೂ ಕುರಿತಂತೆ ಅವಳಲ್ಲಿ ಮೂಡುವ ಖಾಚಿತ್ಯ, ಅದನ್ನು ಪಡೆಯಬೇಕೆನ್ನುವ ಬಯಕೆ, ಪಡೆಯಬಲ್ಲೆನೆನ್ನುವ ಆತ್ಮವಿಶ್ವಾಸ, ಅದಕ್ಕಾಗಿ ನಡೆಸಬೇಕಾದ ಹೋರಾಟವನ್ನು ಕುರಿತಂತೆ ಅವಳಲ್ಲಿ ಜಾಗೃತವಾಗುವ ಎಚ್ಚರ– ಈ ಎಲ್ಲವೂ ಆ ಹುಡುಗಿಯನ್ನು ಹೊಸದಾಗಿ ರೂಪಿಸುತ್ತವೆ. ಇದನ್ನು ಹೊಸ ಹುಟ್ಟು ಎನ್ನೋಣವೆ? ಹೆಣ್ಣು ತನ್ನನ್ನು ತಾನು ನಿರ್ಮಿಸಿಕೊಂಡದ್ದು ಎನ್ನೋಣವೆ?

ಈ ಕಥೆಯಲ್ಲಿ ಬರುವ ದೊಡ್ಡಣ್ಣನ ಪಾತ್ರ ತುಂಬ ಕುತೂಹಲಕರ. ಯೌವನಕ್ಕೆ ಸಹಜವಾದ ಆದರ್ಶಗಳನ್ನೆಲ್ಲ ಮೈಗೂಡಿಸಿಕೊಂಡಂತೆ ಕಾಣುವ ಈ ಹುಡುಗ ಪುರುಷರಲ್ಲಿ ಆವಾಹನೆಯಾಗಬೇಕು ಎಂದು ನಾವು ಬಯಸುವ ಹೊಸ ಸಂವೇದನೆಯ ತರುಣನ ಹಾಗೆ ಕಾಣುತ್ತಾನೆ. ಕ್ರಾಂತಿಯೊಂದರ ಆರಂಭ ತನ್ನ ತಂಗಿಯಿಂದಾಗಲಿ ಎಂದು ಬಯಸುವ, ಅದಕ್ಕಾಗಿ ಶ್ರಮಿಸುವ ಈ ಹುಡುಗ ಆಕಸ್ಮಿಕವಾಗಿ ತೀರಿಕೊಳ್ಳುವುದೂ ಓದುಗರಲ್ಲಿ ವಿಷಾದದಷ್ಟೇ ಕುತೂಹಲವನ್ನೂ ಉಳಿಸುತ್ತದೆ. ಬದುಕಿದ್ದಿದ್ದರೆ, ತನ್ನ ಮುಂದಿನ ಘಟ್ಟದಲ್ಲಿಯೂ ಆತ ಅಷ್ಟೇ ತೀವ್ರತೆಯಿಂದ ಹೆಣ್ಣಿನ ಬಿಡುಗಡೆಗಾಗಿ ಶ್ರಮಿಸುತ್ತಿದ್ದನೆ ಎನ್ನುವ ಪ್ರಶ್ನೆ ನಮ್ಮಲ್ಲಿ ಉತ್ತರವಿಲ್ಲದೆ ಉಳಿಯುತ್ತದೆ. ತಂಗಿ ಎಸ್.ಎಸ್.ಎಲ್.ಸಿಯಲ್ಲಿ ಪ್ರಥಮದರ್ಜೆಯಲ್ಲಿ ಪಾಸಾದಾಗ, ಮುಂದೆ ಓದುವ ಅವಕಾಶವೇ ಇಲ್ಲದ ತಂಗಿಗಾಗಿ ಮರುಗುತ್ತಾ ‘ಯಾಕಮ್ಮಾ ಇಷ್ಟು ಮಾರ್ಕು ಪಡೆದೆ’ ಎಂದು ಉದ್ಗರಿಸುವ ಈ ಅಣ್ಣ ನಮ್ಮ ಮನಸಿನಲ್ಲಿ ಸದಾ ಉಳಿಯುತ್ತಾನೆ.

ಈ ಕಥೆಯ ಕೊನೆಯ ಭಾಗವು ಬದಲಾವಣೆಯ ಪ್ರಕ್ರಿಯೆಯ ಪರಮ ಆದರೆ ಅಪ್ರಿಯ ಸತ್ಯವನ್ನು ಎದುರಾಗುತ್ತದೆ. ಈ ಕಥೆ ಬಂದು ಸುಮಾರು ಕಾಲುಶತಮಾನವಾಗಿರಬಹುದು. ಸಾರಾ ವಿದ್ಯಾವಂತರಾಗಿ ಐದಾರು ದಶಕಗಳಾಗಿರಬೇಕು. ಈ ಕಥೆ ಬರೆಯುವ ಕಾಲದಲ್ಲೂ ಹದಿನೆಂಟು ದಾಟಿದ ಮದುವೆಯಾಗದ ಹೆಣ್ಣುಮಕ್ಕಳು ನಮ್ಮ ಊರಿನಲ್ಲಿ ಸಿಕ್ಕುವುದಿಲ್ಲ ಎನ್ನುವ ಸತ್ಯವನ್ನು ಸಾರಾ ಹೇಳುತ್ತಿರುವಾಗ, ಬದಲಾವಣೆಯೆನ್ನುವುದರ ಆಮೆವೇಗ ನಮ್ಮ ಅರಿವಿಗೆ ಬರುತ್ತದೆ. ಆದರೆ ಇದು ನಮ್ಮ ಪ್ರಯತ್ನಕ್ಕಾಗಲಿ ಪ್ರಯಾಣಕ್ಕಾಗಲಿ ಹಿನ್ನೆಡೆ ಎಂದು ನಾವು ಭಾವಿಸಬೇಕಿಲ್ಲ. ‘ಬರುವುದೇನುಂಟೊಮ್ಮೆ ಬರುವ ಕಾಲಕೆ ಬಹುದು’ ಎನ್ನುವುದು ಜೀವನಧರ್ಮವೂ ಹೌದು, ಹೋರಾಟ ಧರ್ಮವೂ ಹೌದು.

ಸಾರಾ ಅವರೂ ಸೇರಿದಂತೆ ನಮ್ಮ ಮುಸ್ಲಿಂ ಲೇಖಕಿಯರನ್ನು ಓದುತ್ತಿದ್ದಾಗ ಅವರ ಸ್ಥಿತಿಗತಿಗಳು ಇತರರಿಗಿಂತ ಭಿನ್ನವೆ, ತೀವ್ರವೆ ಎನ್ನುವ ಪ್ರಶ್ನೆ ಎದುರಾಗಿಯೇ ಆಗುತ್ತದೆ. ನೋವಿನಲ್ಲಿ ಎಲ್ಲ ಹೆಂಗಸರೂ ಸಮಾನರು. ಪಿತೃಸಂಸ್ಕೃತಿ ಸಾರ್ವತ್ರಿಕವಾಗಿ ಕಾಪಾಡಿಕೊಂಡು ಬಂದಿರುವ ಸಮಾನತೆಯ ನೆಲೆ ಇದೊಂದೇ ಇರಬೇಕು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.