ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಧಾರ್ಮಿಕ ಉಗ್ರವಾದಕ್ಕೆ ಕರುಣೆ ಮಾತ್ರವೇ ಉತ್ತರ!

ದೇವರನ್ನೂ ಮಾರುಕಟ್ಟೆ ಪದಾರ್ಥವನ್ನಾಗಿ ಮಾಡಬಲ್ಲದು ರಾಜಕಾರಣ
Last Updated 18 ಜುಲೈ 2018, 19:30 IST
ಅಕ್ಷರ ಗಾತ್ರ

’ಹೇ ರಾಮ್!’ ಎಂಬ ಒಂದು ಸಾಂಸ್ಕೃತಿಕ ಚಳವಳಿಯ ಬಗ್ಗೆ ಈ ಬಾರಿ ಬರೆಯುವವನಿದ್ದೇನೆ. ಇದು, ಧಾರ್ಮಿಕ ಉಗ್ರವಾದಕ್ಕೆ ಪ್ರತಿಯಾದ ಸಾಂಸ್ಕೃತಿಕ ಚಳವಳಿಯೂ ಹೌದು, ಗ್ರಾಮೀಣ ಬಡಜನರ ಪರವಾದ ಸಾಮಾಜಿಕ ಚಳವಳಿಯೂ ಹೌದು. ಈ ಚಳವಳಿಯನ್ನು ನಡೆಸುತ್ತಿರುವವರು ಗ್ರಾಮ ಸೇವಾ ಸಂಘ ಎಂಬ ಹೆಸರಿನ ಒಂದು ಯುವಸಂಘಟನೆಯಾಗಿದೆ. ಚಳವಳಿಯ ವಿಚಾರಗಳು ಇಂದಿಗೆ ತುಂಬ ಪ್ರಸ್ತುತವಾದ್ದರಿಂದ ಈ ಬಾರಿ ಆ ಬಗ್ಗೆಯೇ ಬರೆಯುವವನಿದ್ದೇನೆ.

ಧಾರ್ಮಿಕ ಉಗ್ರವಾದ ಇಂದಿನ ಅತಿ ದೊಡ್ಡ ಸವಾಲಾಗಿದೆ. ಆದರೆ ಉಗ್ರವಾದವನ್ನು ಎದುರಿಸುವಲ್ಲಿರುವ ನಿಜವಾದ ತೊಡಕೆಂದರೆ, ಹೆಚ್ಚಿನ ಉಗ್ರವಾದಿಗಳು ಸ್ವತಃ ಯುವಕರೇ ಆಗಿರುತ್ತಾರೆ ಹಾಗೂ ಬಡವರೇ ಆಗಿರುತ್ತಾರೆ. ಉದಾಹರಣೆಗೆ ಬಾಬರಿ ಮಸೀದಿಯನ್ನು ಕೆಡವಿದ ಹಿಂದೂ ಯುವಕರು ಹೆಚ್ಚಾಗಿ ಗ್ರಾಮೀಣ ಪ್ರದೇಶಗಳಿಂದ ಬಂದಿದ್ದ ಬಡವರಾಗಿದ್ದರು ಹಾಗೂ ಯುವಕರಾಗಿದ್ದರು.

ದಾರಿ ತಪ್ಪಿದ ಮಕ್ಕಳು ಇವರು. ತಿಳಿಯದೆ ಮಾಡುವ ಅವಾಂತರ ಇವರದ್ದು. ಆದರೆ ಇವರನ್ನು ಪ್ರಚೋದಿಸುವ ಧಾರ್ಮಿಕ ರಾಜಕಾರಣವು ತಿಳಿದೂ ತಿಳಿದೂ ಅವಾಂತರ ಮಾಡುತ್ತಿರುತ್ತದೆ. ಧಾರ್ಮಿಕ ರಾಜಕಾರಣದ ಹಳೆಯ ಹುಲಿ ಮಹಮ್ಮದಲಿ ಜಿನ್ನಾ. ಆತ ಒಬ್ಬ ನಿಷ್ಠಾವಂತ ಮುಸಲ್ಮಾನ ಕೂಡ ಆಗಿರಲಿಲ್ಲ. ಆದರೆ ತನ್ನ ಬೇಳೆ ಬೇಯಿಸಿಕೊಳ್ಳಲಿಕ್ಕಾಗಿ ಉಗ್ರವಾದವನ್ನು ದುರ್ಬಳಕೆ ಮಾಡಿದ, ಧಾರ್ಮಿಕ ನಿಷ್ಠೆಯನ್ನು ಸಹ ದುರ್ಬಳಕೆ ಮಾಡಿದ.

ಧಾರ್ಮಿಕ ರಾಜಕಾರಣ ಅಪಾಯಕಾರಿಯಾದದ್ದು. ಅದು, ಇತ್ತ ಉಗ್ರವಾದವನ್ನು ಘೋಷಿಸಿದರೆ ಅತ್ತ ಯಂತ್ರ ನಾಗರಿಕತೆಯನ್ನು ರಕ್ಷಿಸುತ್ತದೆ. ದೇವರ ಹೆಸರಿನಲ್ಲಿ ಎರಡೂ ಕೆಲಸಗಳನ್ನು ಮಾಡುತ್ತದೆ. ಅರ್ಥಾತ್, ದೇವರ ದುರ್ಬಳಕೆ ಮಾಡುತ್ತದೆ ಹಾಗೂ ಗ್ರಾಮ ಜೀವನವನ್ನು ನಾಶಗೊಳಿಸುತ್ತದೆ. ಹಿಂದೂ, ಮುಸಲ್ಮಾನ, ಕ್ರೈಸ್ತ, ಯಹೂದ್ಯ ಇತ್ಯಾದಿ ಎಲ್ಲ ಬಗೆಯ ಧಾರ್ಮಿಕ ಪಕ್ಷಗಳ ಹಣೆಬರಹವೂ ಇಷ್ಟೇ ಆಗಿದೆ. ಧಾರ್ಮಿಕ ರಾಜಕಾರಣವನ್ನು ಬಲಪಂಥ ಅಥವಾ ಮೂಲಭೂತವಾದ ಎಂಬಿತ್ಯಾದಿ ಹೆಸರುಗಳಿಂದ ಕೂಡ ಕರೆಯಲಾಗುತ್ತದೆ.

ಧಾರ್ಮಿಕ ಪಕ್ಷಗಳು ಪ್ರವರ್ಧಮಾನಕ್ಕೆ ಬರಲಿಕ್ಕಿರುವ ಕಾರಣ ಗಮನಾರ್ಹವಾದದ್ದು. ಅದು ಭ್ರಷ್ಟತೆ. ಜಾತ್ಯತೀತ ಎಂದು ಕರೆದುಕೊಳ್ಳುವ ವಿವಿಧ ಬಗೆಯ ಅಧಿಕಾರಾರೂಢ ಪಕ್ಷಗಳು ಭ್ರಷ್ಟವಾದಾಗ ಧಾರ್ಮಿಕ ರಾಜಕಾರಣ ಅಣಬೆಯಂತೆ ಮೇಲೇಳುತ್ತದೆ. ಉದಾಹರಣೆಗೆ, ಭಾರತದಲ್ಲಿ ಕಾಂಗ್ರೆಸ್ ಪಕ್ಷದ ಅವನತಿಗೂ ಧಾರ್ಮಿಕ ರಾಜಕಾರಣದ ಉನ್ನತಿಗೂ ನೇರ ಸಂಬಂಧವಿದೆ. ಗ್ರಾಮ ಸೇವಾ ಸಂಘದ ಯುವಕರು, ಈ ಎಲ್ಲ ಕಾರಣಗಳಿಗಾಗಿ ಪಕ್ಷರಾಜಕಾರಣದಿಂದ ದೂರ ಉಳಿಯುತ್ತಾರೆ ಹಾಗೂ ರಚನಾತ್ಮಕ ಸಾಮಾಜಿಕ– ಸಾಂಸ್ಕೃತಿಕ ಚಳವಳಿಗಳ ಜೊತೆ ಸಂಬಂಧ ಕಾಯ್ದುಕೊಳ್ಳುತ್ತಾರೆ.

ಈಗ ಹಿಂದೂ ಉಗ್ರವಾದಕ್ಕೆ ಬರೋಣ. ಗಾಂಧಿಯವರನ್ನು ಬಲಿ ತೆಗೆದುಕೊಂಡ ನಂತರ, ಹಿಂದೂ ಉಗ್ರವಾದವು ಕೆಲಕಾಲ ಹಿನ್ನೆಲೆಗೆ ಸರಿದಿತ್ತು. ಹಿನ್ನೆಲೆಗೆ ಸರಿಸಲೆಂದೇ ಗಾಂಧೀಜಿ ಹುತಾತ್ಮರಾದದ್ದು ಎಂದು ಅನೇಕರು ಭಾವಿಸುತ್ತಾರೆ. ಅದೇನೇ ಇರಲಿ ಈಗ ಮತ್ತೆ ಹಿಂದೂ ಉಗ್ರವಾದವು ಅತಿ ಉಗ್ರತೆಯಿಂದ ಹಾಗೂ ಅತಿ ಬಲಿಷ್ಠತೆಯಿಂದ ತಲೆಯೆತ್ತಿದೆ. ಜೈ ಶ್ರೀರಾಮ! ಜೈ ಭಜರಂಗಬಲಿ! ಎಂಬಿತ್ಯಾದಿ ಘೋಷಣೆಗಳನ್ನು ಬಳಸಿಕೊಂಡು ರಾಮ, ಹನುಮ, ಬಸವ, ನಾನಕ ಮುಂತಾದ ಸೌಮ್ಯದೇವತೆಗಳು ಹಾಗೂ ಸೌಮ್ಯಸಂತರುಗಳ ಮುಖಕ್ಕೆ ಉಗ್ರತೆಯನ್ನು ಲೇಪಿಸಿ ಪ್ರಜೆಗಳನ್ನು ಉದ್ರೇಕಿಸುತ್ತಿದೆ. ವೋಟಿಗಾಗಿ ಹಾಗೆ ಮಾಡುತ್ತಿದೆ.

ಹಿಂದೂ ಉಗ್ರವಾದದ ಕೋಪಕ್ಕೆ ಗುರಿಯಾಗಿರುವವರು ವಿದೇಶೀಯರಲ್ಲ, ಸ್ವದೇಶೀಯರು. ಅವರು ಭಾರತೀಯ ಪ್ರಜೆಗಳು, ಆದರೆ ಇತರೆ ಧರ್ಮೀಯರು. ಹಾಗೆ ನೋಡಿದರೆ, ಇತರೆ ಧರ್ಮೀಯರ ಬಗೆಗಿನ ಧಾರ್ಮಿಕ ಉಗ್ರವಾದದ ಅಸಹನೆ ಸಂಪೂರ್ಣವಾಗಿ ಕಾರಣರಹಿತವಾದದ್ದೇನಲ್ಲ. ಅತ್ತೆ–ಸೊಸೆಯರ ಜಗಳಗಳಲ್ಲಿರುವಂತೆ ಎಲ್ಲ ಮತೀಯ ಜಗಳಗಳಿಗೂ ಒಂದಿಷ್ಟು ಕಾರಣ ಇದ್ದೇ ಇರುತ್ತದೆ. ಹೆಚ್ಚಿನ ಕಾರಣಗಳನ್ನು ಚರಿತ್ರೆಯಿಂದ ಹೆಕ್ಕಿ ತೆಗೆಯಲಾಗಿರುತ್ತದೆ. ಅಥವಾ ಮಾರುಕಟ್ಟೆಯಲ್ಲಿನ ಸ್ಪರ್ಧಾತ್ಮಕತೆ ಕೂಡ ಕೆಲವೊಮ್ಮೆ ಜಗಳಗಳಿಗೆ ಕಾರಣವಾಗುತ್ತದೆ. ಜರ್ಮನಿ ಹಾಗೂ ಇಟಲಿಗಳಲ್ಲಿ ಈ ಹಿಂದೆ ಕಾಣಿಸಿಕೊಂಡ ಫ್ಯಾಸಿಸಂ ಇರಲಿ, ಅಥವಾ ಮುಸಲ್ಮಾನ ರಾಷ್ಟ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಭಯೋತ್ಪಾದನೆಯಿರಲಿ, ಅಥವಾ ಹಿಂದೂ ಉಗ್ರವಾದವಿರಲಿ, ಹಲವು ಸಮಾನಗುಣಗಳನ್ನು ಹೊಂದಿವೆ.

ಅತ್ತೆ–ಸೊಸೆಯರ ಜಗಳವಿದ್ದಂತೆ ಎಂದೆ. ವಿವರಿಸುತ್ತೇನೆ. ಮನೆಗಳಲ್ಲಿ ಹೇಗೆ ಹಿರಿಯರು, ಅತ್ತೆ–ಸೊಸೆ ಇಬ್ಬರ ನಂಬಿಕೆಯನ್ನೂ ಗಳಿಸಿ, ಅಗತ್ಯಬಿದ್ದರೆ ಇಬ್ಬರ ಕಿವಿಯನ್ನೂ ಹಿಂಡಿ, ಸಮಸ್ಯೆ ಪರಿಹರಿಸುತ್ತಾರೋ ಹಾಗೆಯೇ ದೇಶದ ಪ್ರಜೆಗಳ ನಡುವಿನ ಸಮಸ್ಯೆಯನ್ನೂ ಪರಿಹರಿಸಬೇಕು ದೇಶದ ರಾಜಕಾರಣ. ಆದರೆ, ಉಗ್ರವಾದ ಮೇಲುಗೈ ಸಾಧಿಸಿದ ದೇಶಗಳು ಜಗಳಗಂಟ ಮನೆಗಳಿದ್ದಂತೆ. ಮುರಿದು ಬೀಳುತ್ತವೆ. ಹಿಂದೂ ಉಗ್ರವಾದ ತಾರ್ಕಿಕ ಅಂತ್ಯ ಕಾಣಬೇಕೆಂದರೆ, ಭಾರತದಲ್ಲಿ ಸಾಕಷ್ಟು ದೊಡ್ಡಪ್ರಮಾಣದಲ್ಲಿರುವ ಇತರೆ ಧರ್ಮೀಯರು, ಇಲ್ಲವೇ ಎರಡನೆಯ ದರ್ಜೆಯ ಪ್ರಜೆಗಳಾಗಿ ಬದುಕಬೇಕು, ಇಲ್ಲವೇ ಮತ್ತೊಮ್ಮೆ ದೇಶ ಹೋಳಾಗಬೇಕು. ದೇಶ ಮತ್ತೊಮ್ಮೆ ಹೋಳಾಗುವ ಸಾಧ್ಯತೆಯೇ ಹೆಚ್ಚಾಗಿ ಕಾಣಿಸತೊಡಗಿದೆ.

ಇದು ಹಿನ್ನೆಲೆ. ಈ ಹಿನ್ನೆಲೆಯಲ್ಲಿ, ಗ್ರಾಮ ಸೇವಾ ಸಂಘದ ಯುವಕರು ಅಹಿಂಸಾತ್ಮಕ ಮಾರ್ಗ ಬಳಸಿ ದೇಶವನ್ನು ಅಖಂಡವಾಗಿ ಹಿಡಿದಿಡುವ ಪ್ರಯತ್ನ ಮಾಡುವುದಾಗಿ ಘೋಷಿಸಿದ್ದಾರೆ. ಗಾಂಧಿಯವರ ಹೇ ರಾಮ್! ತಮ್ಮ ಮಂತ್ರವಾಗಲಿದೆ, ಸತ್ಯ ಹಾಗೂ ಅಹಿಂಸೆ ತಮ್ಮ ಮಂತ್ರದಂಡವಾಗಲಿದೆ ಎಂದವರು ಘೋಷಿಸಿದ್ದಾರೆ.
ಹೇ ರಾಮ್! ಎಂಬುದು ಕರುಣೆಯ ಮಂತ್ರ. ಹಂತಕನ ಕಣ್ಣಲ್ಲಿ ಹಿಂಸೆಯನ್ನು ಕಂಡಾಗ, ಹಂತಕನ ಗುಂಡಿಗೆ ಬಲಿಯಾಗುವ ಮೊದಲು ಗಾಂಧೀಜಿ, ಹೇ, ರಾಮ್! ಎಂಬ ಉದ್ಗಾರವನ್ನು ತೆಗೆದಿದ್ದರು. ಗಾಂಧೀಜಿ ಮಾತ್ರವೇ ಏಕೆ, ಹಿಂಸೆಗೆ ಬಲಿಯಾಗುವ ಎಲ್ಲ ಮಾನವರೂ ತೆಗೆಯುವ ಉದ್ಗಾರವಿದು, ’ಅಯ್ಯೋ ಅಮ್ಮ! ಅಯ್ಯೋ ರಾಮ! ಅಯ್ಯೋ ಶಿವನೆ! ಯಾ ಅಲ್ಲಾ! ಓ ಜೀಸಸ್!’ ಇತ್ಯಾದಿ.

ಈ ಉದ್ಗಾರಕ್ಕೊಂದು ವಿಶೇಷ ಗುಣವಿದೆ. ತೀವ್ರ ಸಂಕಷ್ಟದ ಸಂದರ್ಭದಲ್ಲಿ ದೇವರನ್ನು ನೆನೆಯುವ ವಿಧಾನವಿದು. ನಮ್ಮವರು, ಇತರರು ಎನ್ನದೆ ಎಲ್ಲರನ್ನೂ ಸಮಾನವಾಗಿ ತಾಕುವ ಕರುಣೆಯ ಉದ್ಗಾರ ಕೂಡ ಹೌದು ಇದು! ಕರುಣೆಗಿಂತ ಮಿಗಿಲಾದ ಪ್ರತಿಕ್ರಿಯೆ ಉಗ್ರವಾದಕ್ಕೆ ಮತ್ತೊಂದಿಲ್ಲ ಎಂದು ಗ್ರಾಮ ಸೇವಾ ಸಂಘವು ನಂಬುತ್ತದೆ.
ದೀನದಲಿತರ ಉದ್ಗಾರವೂ ಹೌದು ಇದು. ಯಾವುದೋ ಗ್ರಾಮವೊಂದರ ಹತ್ತಿಬೆಳೆಗಾರನೊಬ್ಬ ಆತ್ಮಹತ್ಯೆ ಮಾಡಿಕೊಂಡಾಗ, ಹೆಣವಾಗಿ ನೇತಾಡುತ್ತಿರುವ ಗಂಡನನ್ನು ಮೊದಲ ಬಾರಿ ಕಂಡಾಗ, ಹೆಂಡತಿಯ ಬಾಯಿಂದ ಬರುವ ಉದ್ಗಾರವಿದು. ಅಥವಾ ಯಾವುದೋ ಗ್ರಾಮವೊಂದರ ನೇಕಾರ್ತಿಯೊಬ್ಬಳು ಕೆಮ್ಮಿದಾಗ, ಅವಳ ಬಾಯಿಂದ ಹೊರಚಿಮ್ಮಿದ ಕ್ಷಯದ ರಕ್ತದ ಕಲೆಯನ್ನು ಮೊದಲ ಬಾರಿ ಕಂಡಾಗ, ನೇಕಾರ್ತಿಯ ತಾಯಿಯ ಬಾಯಿಂದ ಹೊರಡುವ ದೇವರನಾಮವಿದು. ಅಥವಾ ಮುದಿ ದನಗಳನ್ನು ಕಸಾಯಿಖಾನೆಗೆ ಸಾಗಿಸುತ್ತಿರುವ ಸಣ್ಣ ವ್ಯಾಪಾರಿಯೊಬ್ಬನನ್ನು ಉಗ್ರವಾದಿಗಳು, ಮುಸಲ್ಮಾನನೆಂದು ತಿಳಿದು ಚಚ್ಚಿ ಸಾಯಿಸುವಾಗ, ಆ ಭಾರತೀಯನ ಬಾಯಿಂದ ಹೊರಡುವ ದೇವರನಾಮವಿದು. ಅಥವಾ ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳು ಕುರಿಯನ್ನೋ ದನವನ್ನೋ ಮೇಯಿಸುತ್ತ ನಿಂತಿರುವಾಗ, ಪರಧರ್ಮೀಯಳು ಎಂದು ತಿಳಿದು, ಅವಳನ್ನೆಳೆದು ತಂದು ಕೂಡಿಹಾಕಿ ಮತ್ತೆ ಮತ್ತೆ ಬಲಾತ್ಕರಿಸುವಾಗ, ಅವಳ ತುಟಿಗಳಿಂದ ಹೊರಡುವ ದೇವರನಾಮವಿದು. ಅಥವಾ ಮನೆಗೆ ಅತಿಥಿಗಳು ಬಂದಿರುವಾಗ, ಅನ್ನಭಾಗ್ಯದ ಅಕ್ಕಿ ಖಾಲಿಯಾಗಿರುವಾಗ, ಅನ್ನ ಬೇಯಿಸುವುದು ಹೇಗೆ ಎಂದು ತಿಳಿಯದ ಗ್ರಾಮೀಣ ಮಹಿಳೆಯ ಬಾಯಿಂದ ಹೊರಡುವ ದೇವರನಾಮವಿದು.

ಕರುಣೆಯ ನಾಮವನ್ನು ನುಡಿಯಲಿಕ್ಕೆ ಮಂದಿರದ ಅಗತ್ಯವಿಲ್ಲ. ಪೂಜಾರಿಯ ಅಗತ್ಯವಿಲ್ಲ. ಆಸ್ತಿ, ಅಧಿಕಾರ, ಜಾತಿ ಇತ್ಯಾದಿ ಯಾವುದರ ಅಗತ್ಯವೂ ಇಲ್ಲ. ಅಷ್ಟೇ ಏಕೆ, ಬಲಾಢ್ಯ ರಾಜಕೀಯ ಪಕ್ಷವೊಂದರ ಬೆಂಬಲದ ಅಗತ್ಯ ಕೂಡ ಇಲ್ಲ. ಆದರೆ ದೇವರ ಅಗತ್ಯವಿದೆ. ಈ ಉದ್ಗಾರವನ್ನು ಎಲ್ಲರೂ ಕೇಳಿಸಿಕೊಂಡರೆ, ಎಲ್ಲರ ಹೃದಯದಲ್ಲಿರುವ ಕರುಣಾಮಯಿ ದೇವರು ಜಾಗೃತನಾಗುತ್ತಾನೆ. ಆಗ, ದ್ರೌಪದಿಯ ಅನ್ನದ ಬಟ್ಟಲಿನಂತೆ ಗ್ರಾಮೀಣ ಮಹಿಳೆಯ ಅನ್ನದ ಬಟ್ಟಲು ಕೂಡ ಅಕ್ಷಯ ಪಾತ್ರೆಯಾಗಬಲ್ಲದು ಎಂದು ನಂಬುತ್ತದೆ ಗ್ರಾಮ ಸೇವಾ ಸಂಘ.

ದುರಂತವೆಂದರೆ, ಭಾರತೀಯರು ಈಗ್ಗೆ ಹಲವಾರು ದಶಕಗಳಿಂದ ಹೃದಯದ ಕರೆಯನ್ನು ಮರೆತಿದ್ದಾರೆ. ಕೇವಲ ಸರ್ಕಾರಿ ಭಾರತೀಯರಾಗಿಬಿಟ್ಟಿದ್ದಾರೆ. ಅನ್ನಭಾಗ್ಯ , ಉದ್ಯೋಗಖಾತ್ರಿ, ಸಾಲಮನ್ನಾ... ಸರ್ಕಾರಿ ಯೋಜನೆಗಳನ್ನು ಮಾತ್ರವೇ ಜಾರಿಗೆ ತರುತ್ತಿದ್ದಾರೆ. ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುತ್ತಿರುವವರು ಸಹ, ಮಾಡುತ್ತಿರುವ ಧರ್ಮಕಾರಣ ಸರ್ಕಾರಿಯೇ ಆಗಿದೆ.

ಬಡವರ ನೈತಿಕ ಸ್ಥ್ಯೆರ್ಯವನ್ನು ಹೆಚ್ಚಿಸುವ ಜನಚಳವಳಿಯೊಂದರ ಅಗತ್ಯವಿದೆ ಇಂದು. ಬಡವರು, ಒಂದೊಮ್ಮೆ, ಬೇಡುವುದೇ ಆದರೆ ದೇವರಲ್ಲಿ ಮಾತ್ರವೇ ಬೇಡಬೇಕು. ಶ್ರೀಮಂತರಲ್ಲಿ, ಶ್ರೀಮಂತ ರಾಜಕಾರಣಗಳಲ್ಲಿ ಅಲ್ಲ. ಅಥವಾ ಶ್ರೀಮಂತರ ಹಿಡಿತಕ್ಕೆ ಸಿಲುಕಿರುವ ಸರ್ಕಾರಗಳಲ್ಲಿ ಕೂಡ ಅಲ್ಲ. ಬೇಡಲಿಕ್ಕೆ ಬಾಯೇ ಇರದ ಪ್ರಾಣಿಪಕ್ಷಿಗಳು ಹಾಗೂ ಪ್ರಕೃತಿ, ಬೇಡದಲೆ ರಕ್ಷಣೆ ಪಡೆಯಬೇಕು ಎಂದೆಲ್ಲ ಗ್ರಾಮ ಸೇವಾ ಸಂಘವು ನಂಬುತ್ತದೆ.

ಉಳ್ಳವರು ಬಡವರ ಸೇವೆ ಮಾಡುವುದೇ ಆದರೆ ಅಜ್ಞಾತವಾಗಿ ಮಾಡಬೇಕು, ವೋಟಿಗಾಗಿ ಅಥವಾ ಅಧಿಕಾರಕ್ಕಾಗಿ ಅಲ್ಲ ಎಂದು ನಂಬುತ್ತಾರೆ ಅವರು. ಧರ್ಮ ಹಾಗೂ ರಾಜಕಾರಣವನ್ನು ಬೆರೆಸುವುದೇ ಆದರೆ ರಾಮರಾಜ್ಯದ ಮಾದರಿಯಲ್ಲಿ ಬೆರೆಸಬೇಕು, ರಾಮರಾಜ್ಯವೆಂದರೆ ಗ್ರಾಮರಾಜ್ಯ ಎಂದು ನಂಬುತ್ತಾರೆ.

ರಾಜಕಾರಣಿ ರಾಮ ಸರಳವಾಗಿ ಬದುಕಿದನು. ರಾಜಕಾರಣಿ ಎಂಬ ಪದವನ್ನು ಇಲ್ಲಿ ಬೇಕೆಂದೇ ಬಳಸಲಾಗಿದೆ. ಇಂದಿನ ರಾಜಕಾರಣಿಗಳಿಗೆ ರಾಜಾರಾಮನ ನೆನಪು ಮಾಡಿಕೊಡಲೆಂದು ಹಾಗೆ ಮಾಡಲಾಗಿದೆ. ರಾಮನ ರಾಜಕಾರಣ ಎಂತಹದ್ದೆಂದರೆ, ತನ್ನನ್ನು ಹಾಗೂ ತನ್ನ ಪತ್ನಿಯನ್ನು ಶಂಕಿಸಿದ ಅಗಸನನ್ನು ಅವನು ಶಿಕ್ಷಿಸಲಿಲ್ಲ, ಬದಲಾಗಿ ತನ್ನನ್ನೇ ಹಾಗೂ ತನ್ನ ಪತ್ನಿಯನ್ನೇ ಶಿಕ್ಷಿಸಿಕೊಂಡ.

ರಾಮನ ಹೆಸರಿನಲ್ಲಿ ನಡೆದಿರುವ ಹಗರಣಗಳಿಗೆ ರಾಮ ಕಾರಣನಲ್ಲ. ತನ್ನದೇ ಪ್ರಜೆಯನ್ನು, ಆತ ಅಗಸನೋ ಪರಧರ್ಮೀಯನೋ ದಲಿತನೋ ಅಪ್ರಾಪ್ತ ವಯಸ್ಸಿನ ಬಾಲಕಿಯೋ ಆಗಿರುವಳೆಂಬ ಕಾರಣಕ್ಕೆ ಚಚ್ಚಿ ಸಾಯಿಸಲಿಲ್ಲ ರಾಮ! ಜನಗಳಿಗೆ ಹಣ ಹಂಚಿ ಚುನಾವಣೆಗಳನ್ನು ಗೆಲ್ಲಲಿಲ್ಲ ರಾಮ. ಜಾತಿಯ ಹೆಸರಿನಲ್ಲಿ ಚುನಾವಣೆಗಳನ್ನು ಗೆಲ್ಲಲಿಲ್ಲ ರಾಮ. ರಾಮನ ಮಕ್ಕಳು ತಾವು ಎಂದು ಹೇಳಿಕೊಂಡು ಅಧಿಕಾರ ಹಿಡಿಯಲಿಲ್ಲ ರಾಮನ ಮಕ್ಕಳಾದ ಲವಕುಶರು. ಅವರು ರಾಜರಾಗಲೇ ಇಲ್ಲ. ರಾಮಾಯಣದ ಸಂದೇಶವನ್ನು ಸಾರುತ್ತ ಋಷಿಮುನಿಗಳಂತೆ ಕಾಲಕಳೆದರು.

ಧಾರ್ಮಿಕ ರಾಜಕಾರಣದ ಬಗ್ಗೆ ಇಲ್ಲಿ ಎತ್ತಲಾಗಿರುವ ತಕರಾರುಗಳು ಮುಸ್ಲಿಂ, ಕ್ರೈಸ್ತ ಇತ್ಯಾದಿ ಧಾರ್ಮಿಕ ರಾಜಕಾರಣಕ್ಕೂ ಸಲ್ಲುತ್ತವೆ. ರಾಮಾಯಣದ ದುರ್ಬಳಕೆ ಮಾಡಿದಂತೆಯೇ, ಮುಸಲ್ಮಾನರು ತಮ್ಮ ಪವಿತ್ರಗ್ರಂಥ ಕುರಾನಿನ, ಕ್ರೈಸ್ತರು ತಮ್ಮ ಪವಿತ್ರಗ್ರಂಥ ಬೈಬಲ್ಲಿನ, ಬಸವಪಂಥಿಯರು ತಮ್ಮ ವಚನಗಳ, ಬೌದ್ಧರು ತಮ್ಮ ದಮ್ಮಪದದ ದುರ್ಬಳಕೆ ಮಾಡಬಲ್ಲರು. ಮಾಡುತ್ತಿದ್ದಾರೆ ಕೂಡ. ಯಂತ್ರನಾಗರಿಕತೆಯೆಂಬ ಯಂತ್ರಕುದುರೆಯನ್ನೇರಿದಾಗ ದೇವರನ್ನೂ ಮಾರುಕಟ್ಟೆ ಪದಾರ್ಥವನ್ನಾಗಿ ಮಾಡಬಲ್ಲದು ರಾಜಕಾರಣ. ದೇವರ ಉಗ್ರಮಾರಾಟವು ಖಂಡಿತವಾಗಿ ಉಗ್ರವಾದಕ್ಕೆ ಎಡೆಗೊಡಬಲ್ಲದು. ಅನುಮಾನವೇ ಬೇಡ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT