ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ | ಮಂಗಳವಾರ, 15–8–1995

Last Updated 14 ಆಗಸ್ಟ್ 2020, 22:34 IST
ಅಕ್ಷರ ಗಾತ್ರ

ಭಯೋತ್ಪಾದನೆ ನಿಗ್ರಹಕ್ಕೆ ರಾಷ್ಟ್ರ ಸಮರ್ಥ– ಶರ್ಮಾ
ನವದೆಹಲಿ, ಆ. 14 (ಪಿಟಿಐ)–
‘ಬಾಹ್ಯ ಕುಮ್ಮಕ್ಕಿನ ಸಂಘಟಿತ ಭಯೋತ್ಪಾದನೆ ಹಾಗೂ ಮಾದಕ ದ್ರವ್ಯ ವ್ಯಾಪಾರದ ಜತೆಗಿನ ಅದರ ಸಂಬಂಧವನ್ನು ಭಾರತವು ದೃಢವಾಗಿ ಎದುರಿಸಿ, ಕೊನೆಗೊಳಿಸಲಿದೆ. ಅಣ್ವಸ್ತ್ರ ಹಾಗೂ ಕ್ಷಿಪಣಿ ತಂತ್ರಜ್ಞಾನದ ಕ್ಷೇತ್ರದಲ್ಲಿ ನಾವು ಯಾವುದೇ ಬಾಹ್ಯ ಒತ್ತಡಗಳಿಗೆ ಬಗ್ಗುವುದಿಲ್ಲ’ ಎಂದು ರಾಷ್ಟ್ರಪತಿ ಡಾ. ಶಂಕರ್‌ ದಯಾಳ್‌ ಶರ್ಮಾ ಅವರು ಇಂದು ಘೋಷಿಸಿದರು.

ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಡಾ. ಶಂಕರ್‌ ದಯಾಳ್‌ ಶರ್ಮಾ, ‘ಭಾರತ ಸಹಿತ ಇಡೀ ಜಗತ್ತು ಇತಿಹಾಸದ ಅತ್ಯವಶ್ಯಕ ರಾಷ್ಟ್ರೀಯ ಕರ್ತವ್ಯದ ಹೊಸ ಅಧ್ಯಾಯವೊಂದನ್ನು ಪ್ರವೇಶಿಸುತ್ತಿದೆ. ಈ ಸಂದರ್ಭದಲ್ಲಿ ಭಾರತವು ಜಗತ್ತಿನ ಎಲ್ಲ ದೇಶಗಳ ಜತೆ, ಮುಖ್ಯವಾಗಿ ಏಷ್ಯಾ ಉಪಖಂಡದ ನೆರೆಹೊರೆಯ ದೇಶಗಳತ್ತ ಶಾಂತಿ, ಗೆಳೆತನ ಮತ್ತು ಸಹಕಾರದ ಮುಕ್ತಹಸ್ತವನ್ನು ಚಾಚುತ್ತದೆ’ ಎಂದು ಹೇಳಿದರು.

ಅಪಹೃತರ ರಕ್ಷಣೆಗೆ ತೀವ್ರ ಯತ್ನ
ಶ್ರೀನಗರ, ಆ. 14 (ಯುಎನ್‌ಐ)–
ಅಲ್‌–ಫರಾನ್‌ ಉಗ್ರಗಾಮಿ ಸಂಘಟನೆ ಅಪಹರಿಸಿರುವ ಉಳಿದ ನಾಲ್ವರು ವಿದೇಶಿ ಪ್ರವಾಸಿಗರ ಭವಿಷ್ಯ ಅನಿಶ್ಚಿತವಾಗಿದ್ದು, ಅವರ ರಕ್ಷಣೆಗೆ ಅಧಿಕಾರಿಗಳು ಶತ ಪ್ರಯತ್ನ ನಡೆಸುತ್ತಿದ್ದಾರೆ.

ಈ ಮಧ್ಯೆ, ಮಂಗಳವಾರ ಇಲ್ಲಿ ನಡೆಯಲಿರುವ ಸ್ವಾತಂತ್ರ್ಯ ದಿನಾಚರಣೆ ವೇಳೆ ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸದಂತೆ ಭದ್ರತಾ ಪಡೆಗಳು ತೀವ್ರ ನಿಗಾ ವಹಿಸುತ್ತಿವೆ.

ಸರ್ಕಾರ ಬಂಧನದಲ್ಲಿಟ್ಟಿರುವ 15 ಉಗ್ರಗಾಮಿಗಳನ್ನು ಬಿಡುಗಡೆ ಮಾಡಲು ಅಲ್‌–ಫರಾನ್‌ ನೀಡಿರುವ ಗಡುವು ನಿನ್ನೆಗೇ ಮುಗಿದಿದೆ. ಅಪಹೃತರ ಪೈಕಿ ನಾರ್ವೆಯ ಹ್ಯಾನ್ಸ್‌ ಕ್ರಿಸ್ಟಿನ್‌ ಒಸ್ರೊ ಎಂಬವರ ಶಿರಚ್ಛೇದ ಮಾಡಿರುವ ಉಗ್ರಗಾಮಿಗಳು ಉಳಿದ ನಾಲ್ವರನ್ನೂ ಇದೇ ರೀತಿ ಮಾಡುವುದಾಗಿ ಬೆದರಿಕೆ ಒಡ್ಡಿದ್ದಾರೆ.

19 ಮಂದಿಗೆ ಭಾಷಾಂತರ ಪ್ರಶಸ್ತಿ
ನವದೆಹಲಿ, ಆ. 14–
ಇಬ್ಬರು ಕನ್ನಡ ಲೇಖಕರು ಸೇರಿದಂತೆ ವಿವಿಧ ಭಾಷೆಗಳ ಹತ್ತೊಂಬತ್ತು ಅನುವಾದಕರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಇಂದು 1994ನೇ ಸಾಲಿನ ಭಾಷಾಂತರ ಪ್ರಶಸ್ತಿ ನೀಡಿ ಗೌರವಿಸಿತು.

ಪ್ರಧಾನ ಗುರುದತ್‌ ಅವರು ಕನ್ನಡಕ್ಕೆ ಅನುವಾದಿಸಿರುವ ರಾಹುಲ ಸಾಂಕೃತ್ಯಾಯನ ಅವರ ‘ಜಯಯೋಂದೆಯ’ ಹಿಂದಿ ಕೃತಿಗೆ ಮತ್ತು ದೆಹಲಿಯಲ್ಲಿ ನೆಲೆಸಿರುವ ಮತ್ತೊಬ್ಬ ಕನ್ನಡಿಗ ಬಿ.ಆರ್‌. ನಾರಾಯಣ ಅವರು ಶಾಂತಿನಾಥ ದೇಸಾಯಿ ಅವರ ಕನ್ನಡ ಕೃತಿ ‘ಕ್ಷಿತಿಜ’ವನ್ನು ಹಿಂದಿಗೆ ಮಾಡಿರುವ ಅನುವಾದಕ್ಕಾಗಿ ಪ್ರಶಸ್ತಿ ಸಿಕ್ಕಿದೆ.

ಡಾ. ಯು. ಆರ್‌. ಅನಂತಮೂರ್ತಿ ಅವರ ‘ಸಂಸ್ಕಾರ’ವನ್ನು ಕೊಂಕಣಿಗೆ ಅನುವಾದ ಮಾಡಿರುವ ಕೊಂಕಣಿ ಲೇಖಕ ಪ್ರಕಾಶ್‌ ಜಿ. ಥಾಲಿ ಮತ್ತು ಗಿರೀಶ್‌ ಕಾರ್ನಾಡ್‌ ಅವರ ‘ಹಯವದನ’ ನಾಟಕವನ್ನು ಮಣಿಪುರಿಗೆ ಭಾಷಾಂತರಿಸಿರುವ ಎಲಾಂಗಂಬ ದಿನಮಣಿ ಸಿಂಗ್‌ ಅವರು ಪ್ರಶಸ್ತಿ ‍ಪಡೆದವರಲ್ಲಿ ಪ್ರಮುಖರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT