ಶುಕ್ರವಾರ, ಸೆಪ್ಟೆಂಬರ್ 24, 2021
27 °C

ಮಂಗಳವಾರ, 3–5–1994

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚುನಾವಣೆ ಮುಂದೂಡಿಕೆಗೆ ಪ್ರತಿಪಕ್ಷದ ಉಗ್ರ ಟೀಕೆ

ಬೆಂಗಳೂರು, ಮೇ 2– ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಯನ್ನು ಮುಂದೂಡಿದ ರಾಜ್ಯ ಸರ್ಕಾರದ ಕ್ರಮವನ್ನು ಪ್ರತಿಪಕ್ಷದ ನಾಯಕರು ಇಂದು ಇಲ್ಲಿ ಕಟುವಾಗಿ ಟೀಕಿಸಿದರು. ಕಳೆದ ನಾಲ್ಕು ವರ್ಷಗಳ ನಿಷ್ಕ್ರಿಯ ಆಡಳಿತದ ಫಲವಾಗಿ ಕಾಡುತ್ತಿರುವ ಭೀಕರ ಸೋಲಿನ ಭಯದಿಂದ, ಜನರನ್ನು ಎದುರಿಸಲು ಹೆದರಿ ಸರ್ಕಾರ ಹೇಡಿತನ ಪ್ರದರ್ಶಿಸಿದೆ ಎಂದು ಅವರೆಲ್ಲರ ಒಕ್ಕೊರಲಿನ ಆರೋಪ.

ಚುನಾವಣೆಯ ದಿನಾಂಕ ಘೋಷಣೆ ಮುಂದೂಡಿಕೆ: ಮತ್ತೊಂದು ದಿನಾಂಕ ಪ್ರಕಟಣೆ. ಚಿನ್ನಪ್ಪ ರೆಡ್ಡಿ ವರದಿ ಜಾರಿ. ತಡೆಯಾಜ್ಞೆ ತರಲು ಹೂಡಿದ ತಂತ್ರ– ಸುಗ್ರೀವಾಜ್ಞೆ ಮೂಲಕ ಅನಿರ್ದಿಷ್ಟ ಕಾಲ ಚುನಾವಣೆ ಮುಂದೂಣಿಕೆ ಹೀಗೆ ಈ ಘಟನೆಗಳ ಸರಣಿ ಸರ್ಕಾರ ಜನರೊಡನೆ ಕಣ್ಣಾಮುಚ್ಚಾಲೆಯಾಡಿ ಅವರನ್ನು ಮೋಸಗೊಳಿಸಿದೆ ಎಂಬುದಕ್ಕೆ ಸಾಕ್ಷಿ ಎಂದು ವಿರೋಧಿ ನಾಯಕರು ಹೇಳಿದ್ದಾರೆ.

ವಿಜಯದ ಹೊಸ್ತಿಲಲ್ಲಿ ಎಎನ್‌ಸಿ

ಜೋಹಾನ್ಸ್‌ಬರ್ಗ್, ಮೇ 2 (ಪಿಟಿಐ)– ದಕ್ಷಿಣ ಆಫ್ರಿಕದ ಮೊಟ್ಟಮೊದಲ ಮುಕ್ತ ಚುನಾವಣೆಯಲ್ಲಿ ನೆಲ್ಸನ್ ಮಂಡೇಲಾ ನಾಯಕತ್ವದ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ (ಎಎನ್‌ಸಿ) ಎಣಿಕೆ ಮುಗಿದ 9.27 ದಶಲಕ್ಷ ಮತಗಳಲ್ಲಿ ಶೇಕಡಾ 62 ಮತಗಳನ್ನು ಪಡೆದು ಅಧಿಕಾರದತ್ತ ಮುನ್ನಡೆದಿದೆ. ಆ ಪಕ್ಷ ಇಂದು ರಾತ್ರಿಯ ವೇಳೆಗೆ ವಿಜಯ ಘೋಷಣೆ ಮಾಡುವ ಸಂಭವವಿದೆ.

ಡಿ ಕ್ಲರ್ಕ್ ಅವರ ನ್ಯಾಷನಲ್ ಪಾರ್ಟಿ ಶೇಕಡಾ 24.2 ಮತ ಪಡೆದಿದೆ. ಎಎನ್‌ಸಿ ವಿಜಯ ಸಾಧಿಸಿದೆ ಎಂಬುದನ್ನು ಒಪ್ಪಿಕೊಂಡಿರುವ ಡಿಕ್ಲರ್ಕ್ ನೆಲ್ಸನ್ ಮಂಡೇಲಾ ಅವರನ್ನು ಅಭಿನಂದಿಸಿದ್ದಾರೆ.

ರೋರಿಕ್ ದಂಪತಿಗಳ ರೂ. 20 ಕೋಟಿ ಆಸ್ತಿ ಲೂಟಿ

ಬೆಂಗಳೂರು, ಮೇ 2– ವಿಶ್ವವಿಖ್ಯಾತ ಕಲಾವಿದ ರೋರಿಕ್ ಹಾಗೂ ಭಾರತ ಚಲನಚಿತ್ರ ರಂಗದ ಮಿನುಗುತಾರೆ ದೇವಿಕಾ ರಾಣಿ ಅವರ ತಾತಗುಣಿ ಎಸ್ಟೇಟ್‌ನಲ್ಲಿದ್ದ ಸುಮಾರು 20 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಅಮೂಲ್ಯ ಕಲಾಕೃತಿಗಳು, ವಜ್ರ, ಬಂಗಾರ, ಬೆಳ್ಳಿ ಆಭರಣಗಳು ಕಣ್ಮರೆಯಾಗಿವೆ.

ಬೆಂಗಳೂರಿಗೆ ಸುಮಾರು 13 ಕಿ.ಮೀ. ದೂರದಲ್ಲಿರುವ ತಾತಗುಣಿ ಎಸ್ಟೇಟ್‌ನಲ್ಲಿರುವ ಬಂಗಲೆಯ ಬೀಗ ಒಡೆದು ಪೊಲೀಸರು ಅಲ್ಲಿದ್ದ ವಸ್ತುಗಳನ್ನು ಪಟ್ಟಿ ಮಾಡಿದಾಗ ಈ ಅಂಶ ಬೆಳಕಿಗೆ ಬಂದಿದೆ. ಈ ತಪಾಸಣೆ ಕಾರ್ಯ ಏಪ್ರಿಲ್ 23 ರಿಂದ 29ರ ವರೆಗೆ ಏಳು ದಿನಗಳ ಕಾಲ ನಡೆಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು