ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೂರು ಘಾತಕ ಡ್ರೋನ್‌ಗಳು ಭಾರತೀಯ ಸೇನೆಯ ಬತ್ತಳಿಕೆಗೆ ಸೇರ್ಪಡೆ: ಏನು ವಿಶೇಷತೆ?

Last Updated 14 ಏಪ್ರಿಲ್ 2022, 14:32 IST
ಅಕ್ಷರ ಗಾತ್ರ

ಕಳೆದ ತಿಂಗಳು ಲಡಾಖ್‌ನ ನುಬ್ರಾ ಕಣಿವೆಯಲ್ಲಿ ಮೂರು ಭಿನ್ನ ರೀತಿಯ ಡ್ರೋನ್‌ ಮತ್ತು ಬಾಂಬ್‌ಗಳ ಪರೀಕ್ಷೆ ನಡೆಸಲಾಯಿತು. ಈ ಅಸ್ತ್ರಗಳ ಸುರಕ್ಷತಾ ಮಾನದಂಡಗಳ ಮೌಲ್ಯಮಾಪನಕ್ಕಾಗಿ ಸೇನೆಯ ವಿನ್ಯಾಸ ವಿಭಾಗ ಈ ಪರೀಕ್ಷೆಯನ್ನು ಆಯೋಜಿಸಿತ್ತು. ಅವಕಾಶಕ್ಕಾಗಿ ಕಾದು ನಿಂತು ಶತ್ರುವಿಗೊಂದು ಗತಿ ಕಾಣಿಸುವ ಬಾಂಬ್‌ಗಳು ಇವು. ಸಂಪೂರ್ಣ ಸ್ವದೇಶಿನಿರ್ಮಿತವಾಗಿವೆ.

ಇದೇ ಮೊದಲ ಬಾರಿಗೆ ಭಾರತದಲ್ಲಿ ಈ ಬಗೆಯ ಹೊಂಚಿ ಹೊಡೆಯುವ ಬಾಂಬ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ.

ಈ ಡ್ರೋನ್‌ಗಳ ಪೈಕಿ ಮೊದಲನೆಯದು ಆತ್ಮಹತ್ಯಾ ಡ್ರೋನ್. ಇದು ತನಗೆ ವಹಿಸಿದ ಶತ್ರು ಸಂಹಾರ ಕಾರ್ಯವನ್ನು ಮುಗಿಸಿ ತಾನೂ ನಾಶ ಹೊಂದುತ್ತದೆ. ಶತ್ರುಗಳ ಪಾಲಿಗೆ ಮಾರಕವಾದ, ಶತ್ರುಗಳ ಯುದ್ಧ ಟ್ಯಾಂಕ್‌ಗಳು ಮತ್ತು ಕ್ಷಿಪಣಿ ಉಡಾವಣಾ ಸಾಧನಗಳನ್ನು ಧ್ವಂಸಗೊಳಿಸುವ ಚಲನಶೀಲ ಆತ್ಮಹತ್ಯಾ ಡ್ರೋನ್‌ಗಳಿವು. ಇತ್ತೀಚಿನ ಮಿಲಿಟರಿ ಸಂಘರ್ಷಗಳಲ್ಲಿ ಇವುಗಳ ಬಳಕೆಯಾಗುತ್ತಿದೆ. 15,000 ಅಡಿಗಳ ಎತ್ತರದಲ್ಲಿ ಈ ಡ್ರೋನ್‌ಗಳನ್ನು ಪರೀಕ್ಷಿಸಲಾಗಿದ್ದು ಗಡಿಯಲ್ಲಿ ಸೇನಾಪಡೆಗಳಿಗೆ ಹೊಸ ಬಗೆಯ ಯುದ್ಧ ಸಾಮರ್ಥ್ಯವನ್ನು ಒದಗಿಸುತ್ತದೆ.

ಎರಡನೆಯದು, ಸೈನಿಕರು ಬಳಸುವ ಬಾಂಬರ್ ಡ್ರೋನ್‌. ಇದು 4 ಕೆ.ಜಿ ತೂಕದ ಪೇಲೋಡ್ (ಬಾಂಬ್‌) ಹೊತ್ತುಕೊಂಡು ಒಂದು ಗಂಟೆಯ ಕಾಲ ಹಾರಾಡಬಲ್ಲವು ಮತ್ತು ಸಮಯ ನೋಡಿ ಹೊಂಚು ಹಾಕಿ ಗುರಿಯನ್ನು ಉಡಾಯಿಸಬಲ್ಲವು. ನೆಲದ ಮೇಲಿನ ಗುರಿಯನ್ನು ನೂರಕ್ಕೆ ನೂರರಷ್ಟು ನಿಖರತೆಯೊಂದಿಗೆ ಧ್ವಂಸ ಮಾಡಬಲ್ಲವು. ಯುದ್ಧದಲ್ಲಿ ಸಾಂಪ್ರದಾಯಿಕ ಗುರಿಗಳಾದ ಬಂಕರ್‌ಗಳು, ಕಮಾಂಡ್‌ ಸೆಂಟರ್‌ಗಳು, ಫಿರಂಗಿಗಳು (ಆರ್ಟಿಲರಿ) ಮತ್ತು ಸಶಸ್ತ್ರ ವ್ಯೂಹಗಳನ್ನು ಎಗ್ಗಿಲ್ಲದೇ ಪುಡಿಗಟ್ಟಬಲ್ಲವು. ಈ ಡ್ರೋನ್‌ಗಳು ಕ್ಷಿಪಣಿಗಳಿಗಿಂತಲೂ ಅಗ್ಗವಾಗಿವೆ ಮತ್ತು ನಿಖರವಾಗಿವೆ.

ಬೆಂಗಳೂರು ಮೂಲದ ಝಡ್‌ ಮೋಶನ್‌ ಅಟೋನೋಮಸ್ ಸಿಸ್ಟಮ್ಸ್‌ ಪ್ರೈವೇಟ್ ಲಿಮಿಟೆಡ್‌ ಎಂಬ ಸ್ಟಾರ್ಟಪ್‌ ಉದ್ಯಮದ ಸಹಯೋಗದೊಂದಿಗೆ ಎಕನಾಮಿಕ್ ಎಕ್ಸ್‌ಪ್ಲೋಸಿವ್‌ ಲಿ. ಈ ಮೂರೂ ಅಸ್ತ್ರಗಳನ್ನು ಅಭಿವೃದ್ಧಿಪಡಿಸಿದೆ. ಮೊದಲ ಎರಡು ಡ್ರೋನ್‌ಗಳು ಫಿಕ್ಸೆಡ್ ವಿಂಗ್ (ರೆಕ್ಕೆಗಳಿರುವ) ಡ್ರೋನ್‌ಗಳಾಗಿದ್ದರೆ, ಮೂರನೆಯದು ಹೆಲಿಕಾಪ್ಟರ್ ಮಾದರಿಯ ಹೆಕ್ಸಾಕಾಪ್ಟರ್‌.

ಇವುಗಳು ಇಸ್ರೇಲ್ ಮತ್ತು ಪೋಲೆಂಡ್‌ನಿಂದ ಆಮದು ಮಾಡಿಕೊಳ್ಳುವ ಅಸ್ತ್ರಗಳಿಗಿಂತ ಶೇ. 40ರಷ್ಟು ಅಗ್ಗವಾಗಿವೆ. ಆಮದು ನಿಷೇಧದ ಪಟ್ಟಿಗೆ ಈ ಬಗೆಯ ಅಸ್ತ್ರಗಳನ್ನು ರಕ್ಷಣಾ ಇಲಾಖೆ ಇತ್ತೀಚೆಗೆ ಸೇರ್ಪಡೆ ಮಾಡಿದೆ.

ಈ ಪರೀಕ್ಷೆಗಳನ್ನು ಮಾರ್ಚ್‌ 21ರಿಂದ 23ರ ವರೆಗೆ ನಡೆಸಲಾಯಿತು. ಮೂರೂ ಬಗೆಯ ಆಯುಧಗಳು ಅತಿ ಎತ್ತರ ಪ್ರದೇಶಗಳಲ್ಲಿ ಹಾರಾಟ ನಡೆಸಿದ ಬಳಿಕವೂ ನಿರೀಕ್ಷಿತ ಬಾಳಿಕೆ ಮತ್ತು ತಾಳಿಕೆಯ ಅಗತ್ಯಗಳನ್ನು ಪೂರೈಸಿವೆ.

ವಿದೇಶಿ ಪೂರೈಕೆದಾರರ ಮೇಲಿನ ಅವಲಂಬನೆ ತಗ್ಗಿಸಲು ಬಯಸುತ್ತಿರುವ ಸಚಿವಾಲಯವು ಈ ವರ್ಷ ದೇಶೀಯ ಖಾಸಗಿ ವಲಯದಿಂದ ಯುದ್ಧ ಸಾಮಗ್ರಿಗಳು ಮತ್ತು ಅಸ್ತ್ರಗಳ ಖರೀದಿಗಾಗಿ ತನ್ನ ದೇಶೀಯ ಉಳಿತಾಯ ಸಂಗ್ರಹಣೆ ಮೊತ್ತದಿಂದ ಶೇ. 25ರಷ್ಟನ್ನು (21,149 ಕೋಟಿ ರೂ) ಮೀಸಲಿಟ್ಟಿದೆ.

-ಗಿರೀಶ್ ಲಿಂಗಣ್ಣ
ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT