ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಗರ್ಭಪಾತ ಮತ್ತು ಕಾನೂನಿನ ಬಲ

ಗರ್ಭಪಾತದ ಅವಧಿ ವಿಸ್ತರಣೆ ಅವಕಾಶದಿಂದ ಹೆಣ್ಣು ಭ್ರೂಣಹತ್ಯೆ ಹೆಚ್ಚಾಗಬಹುದೆಂಬ ಭಯ ಸಲ್ಲ
Last Updated 18 ಮಾರ್ಚ್ 2021, 19:31 IST
ಅಕ್ಷರ ಗಾತ್ರ

ವಿಶೇಷ ಪ್ರಕರಣಗಳಲ್ಲಿ, ಗರ್ಭಪಾತ ಮಾಡಿಸಬಹುದಾದ ಗರ್ಭಾವಸ್ಥೆಯ ಕಾಲವನ್ನು 20 ವಾರಗಳಿಂದ 24 ವಾರಗಳಿಗೆ ಹೆಚ್ಚಿಸಲು ಅವಕಾಶ ಕಲ್ಪಿಸುವ ಮಸೂದೆಗೆ ರಾಜ್ಯಸಭೆ ಮಂಗಳವಾರ ಅಂಗೀಕಾರ ನೀಡಿದೆ. ವೈದ್ಯಕೀಯ ಗರ್ಭಪಾತ (ತಿದ್ದುಪಡಿ) ಮಸೂದೆ– 2020ರ (The Medical Termination of Pregnancy (Amendment)– 2020) ಮೂಲಕ ಮಹಿಳೆಯರಿಗೆ ಸುರಕ್ಷಿತ, ಕಾನೂನುಬದ್ಧ ಗರ್ಭಪಾತದ ಸೇವೆಗಳನ್ನು ಚಿಕಿತ್ಸಕ- ಮಾನವೀಯ ನೆಲೆಯಲ್ಲಿ ದೊರಕಿಸುವ ಪ್ರಮುಖ ಕ್ರಮ ಇದು ಎಂದು ಸರ್ಕಾರ ತಿಳಿಸಿದೆ.

ಈ ಮಸೂದೆಯು ಲೋಕಸಭೆಯಲ್ಲಿ ಕಳೆದ ವರ್ಷವೇ ಅಂಗೀಕಾರ ಪಡೆದಿದೆ. ಮಸೂದೆಯನ್ನು ಆಯ್ಕೆ ಸಮಿತಿಗೆ ಒಪ್ಪಿಸಬೇಕು ಎಂದು ಕೆಲವು ಸದಸ್ಯರು ಆಗ್ರಹಿಸಿದರಾದರೂ ಅದೃಷ್ಟವಶಾತ್‌ ಅವರ ಆಗ್ರಹ ಫಲಿಸಿಲ್ಲ. ಇಲ್ಲವಾದಲ್ಲಿ ಮಸೂದೆಯು ಮತ್ತಷ್ಟು ಕಾಲ ನನೆಗುದಿಯಲ್ಲಿ ಉಳಿಯುವಂತಾಗುತ್ತಿತ್ತು.

ಆಯ್ಕೆ ಸಮಿತಿಗೆ ಒಪ್ಪಿಸಬೇಕೆಂದು ರಾಜ್ಯಸಭೆಯಲ್ಲಿ ಆಗ್ರಹಿಸಿದ ಸದಸ್ಯರಂತೆ ಬಹುತೇಕರಿಗೆ, ಗರ್ಭಪಾತ ಮಾಡಿಸಬಹುದಾದ ಗರ್ಭಾವಧಿಯ ಮಿತಿಯನ್ನು ಏರಿಸಿರುವ ಸಂಗತಿ ಎಷ್ಟು ಮಹತ್ವದ್ದು ಎಂಬುದರ ಅರಿವು ಇರಲಾರದು. ಅಂತಹ ಅರಿವು ಮೂಡಿಸದೆ, ಕಾನೂನು ಎಷ್ಟೇ ‘ಪ್ರಬಲ’ ಎನಿಸಿದರೂ ವ್ಯರ್ಥ ಎಂದೆನಿಸಿಬಿಡುತ್ತದೆ.

ಮಹಿಳೆಯರಿಗೆ ಸಂಬಂಧಿಸಿದ ಎಲ್ಲವೂ ಅಂದರೆ ಉಡುಗೆ-ತೊಡುಗೆ, ಮುಟ್ಟು, ದೇವಾಲಯ ಪ್ರವೇಶ- ನಿಷಿದ್ಧ, ವಿವಾಹವಾಗುವಿಕೆ- ಆಗದಿರುವಿಕೆ, ಲೈಂಗಿಕತೆ... ಚರ್ಚೆಯ ವಿಷಯಗಳಾಗುವುದು ಸಾಮಾನ್ಯ. ಆದರೆ ‘ಗರ್ಭಪಾತ’ದ ವಿಷಯದಲ್ಲಿ ಇದು ಇನ್ನೂ ಒಂದು ಮೆಟ್ಟಿಲು ಹೆಚ್ಚು. ಮುಂದುವರಿದ ಯುರೋಪಿಯನ್ ರಾಷ್ಟ್ರಗಳೂ ಇದಕ್ಕೆ ಹೊರತಲ್ಲ. ಮತದಾನದ ಹಕ್ಕನ್ನು ಮಹಿಳೆಗೆ ನಿರಾಕರಿಸಿದಂತೆ, ಗರ್ಭಪಾತದ ಹಕ್ಕನ್ನೂ ಆಕೆಗೆ ಬಹುಕಾಲ ನೀಡಿರಲಿಲ್ಲ. ಐರ್‍ಲೆಂಡ್‍ನಲ್ಲಿ ಸೋಂಕುಂಟಾಗಿ ಗರ್ಭಪಾತಕ್ಕೆ ಅನುಮತಿ ಸಿಗದೆ ಮೃತಪಟ್ಟ ದಂತವೈದ್ಯೆ, ಕನ್ನಡತಿ ಸವಿತಾ ಹಾಲಪ್ಪನವರ ಅವರ ನಗುಮುಖ ನನಗಿನ್ನೂ ನೆನಪಿನಲ್ಲಿದೆ. ಅವರ ಮರಣದಿಂದ ಉಂಟಾದ ಕ್ರಾಂತಿ, ಕೊನೆಗೂ ಗರ್ಭಪಾತವನ್ನು ಮಹಿಳೆಯರ ಹಕ್ಕನ್ನಾಗಿ ಐರ್‍ಲೆಂಡ್ ಒಪ್ಪಿಕೊಳ್ಳುವಂತೆ ಮಾಡಿತು ಎನ್ನುವುದು ಒಂದು ಐತಿಹಾಸಿಕ ಸತ್ಯ.

ಗರ್ಭಪಾತ ಎನ್ನುವುದು ಮುಖ್ಯವಾಗಿ ಚರ್ಚೆಯಾಗುವುದು ಅದರಲ್ಲಿ ಹುದುಗಿರುವ ಮಹಿಳೆಯ ‘ವೈಯಕ್ತಿಕ ಆಯ್ಕೆ’ (pro choice) ಮತ್ತು ಭ್ರೂಣದ ‘ಜೀವ ಪರ’ (Pro life) ಎಂಬ ಎರಡು ಅಂಶಗಳ ಮಧ್ಯದ ಸಂಘರ್ಷದಿಂದ. ಜೊತೆಗೂಡುವ ಧರ್ಮ- ನೈತಿಕತೆ- ಕಾನೂನು- ಆರೋಗ್ಯಗಳು ಈ ಚರ್ಚೆಯನ್ನು ಮತ್ತಷ್ಟು ಜಟಿಲವಾಗಿಸಿಬಿಡುತ್ತವೆ. ಮಹಿಳೆಯ ಲೈಂಗಿಕತೆ- ಗರ್ಭಧಾರಣೆ- ದೈಹಿಕ- ಮಾನಸಿಕ ಆರೋಗ್ಯದ ಹಕ್ಕುಗಳು ಇಂತಹ ಚರ್ಚೆಗಳಲ್ಲಿ ನಿರ್ಲಕ್ಷ್ಯ, ಗೇಲಿಗೆ ಒಳಗಾಗುವುದು ಹೆಚ್ಚು. ಕಾನೂನನ್ನು ಮಾಡುವವರೂ ಪಾಲಿಸುವವರೂ ಇದಕ್ಕೆ ಹೊರತಲ್ಲ.

ಭಾರತದಲ್ಲಿ ಪ್ರತೀ ಮೂವರು ಗರ್ಭಿಣಿಯರಲ್ಲಿ ಒಬ್ಬರು ಗರ್ಭಪಾತಕ್ಕೀಡಾಗುವ ಪರಿಸ್ಥಿತಿಯಿದೆ. ಭಾರತದ ಈ ಬಗೆಗಿನ ಅತಿ ದೊಡ್ಡ ಅಧ್ಯಯನ ‘ಬೇಡದ ಗರ್ಭಧಾರಣೆ ಮತ್ತು ಗರ್ಭಪಾತ’– 2017, ಪ್ರಮುಖ ಜರ್ನಲ್ ‘ಲ್ಯಾನ್ಸೆಟ್’ನಲ್ಲಿ ಪ್ರಕಟವಾಗಿದೆ. ಅದರಂತೆ, 2015ರಲ್ಲಿ ನಡೆದ ಗರ್ಭಪಾತಗಳ ಸಂಖ್ಯೆ 1.56 ಲಕ್ಷ. ಹೀಗಿರುವಾಗ ಗರ್ಭಪಾತ ಎಂಬುದು ಒಂದು ಗಂಭೀರ, ಗಮನಾರ್ಹ ಆರೋಗ್ಯಕ್ಕೆ ಸಂಬಂಧಿಸಿದ ವಿಷಯ ಎಂಬುದರಲ್ಲಿ ಎರಡು ಮಾತಿಲ್ಲ.

1972ರಲ್ಲಿ ಭಾರತವು ವೈದ್ಯಕೀಯ ಗರ್ಭಪಾತ ಮಸೂದೆಯನ್ನು (Medical Termination of Pregnancy– MTP) ಜಾರಿಗೆ ತಂದಿತು. ಅದರ ಅರ್ಥ ಅಲ್ಲಿಯವರೆಗೆ ಗರ್ಭಪಾತಗಳು ನಡೆಯುತ್ತಿರಲಿಲ್ಲ ಎಂದಲ್ಲ. ಅಸುರಕ್ಷಿತವಾಗಿ, ಹೇಗಾದರೂ ಯಾರಿಂದಲಾದರೂ ನಡೆಯುತ್ತಿದ್ದ ಗರ್ಭಪಾತಗಳಿಂದ ಭ್ರೂಣದ ಜೀವವಷ್ಟೇ ಅಲ್ಲ, ಎಷ್ಟೋ ಬಾರಿ ತಾಯಿಯ ಜೀವವೂ ಹರಣವಾಗುತ್ತಿತ್ತು. ‘ವೈಯಕ್ತಿಕ ಆಯ್ಕೆ’, ‘ಜೀವದ ಪ್ರಶ್ನೆ’ಗಳೆರಡೂ ಉತ್ತರವೇ ಇರದಂತೆ ಮಾಯವಾಗಿ ಹೋಗುತ್ತಿದ್ದವು. 1975ರಲ್ಲಿ, ನಂತರ 2002ರಲ್ಲಿ (27 ವರ್ಷಗಳ ವಿರಾಮದ ನಂತರ!) ತಿದ್ದುಪಡಿಗಳೊಂದಿಗೆ ಅಂತೂ ಇಂತೂ ಎಂಟಿಪಿ ಕಾಯ್ದೆ ಬಲವಾಗಿ ನಿಂತಿತು. ಈ ಕಾಯ್ದೆಯು ‘ಬೇಡದ’, ಅಂದರೆ ಪರಿಸ್ಥಿತಿಯ ಕಾರಣದಿಂದ ಮುಂದುವರಿಸಲು ಸಾಧ್ಯವಿರದ ಗರ್ಭ, ಗರ್ಭನಿರೋಧಕಗಳ ಬಳಕೆಯ ವೈಫಲ್ಯ, ಅತ್ಯಾಚಾರದಂತಹ ಸಂದರ್ಭಗಳಲ್ಲಿ, ಒಂದೊಮ್ಮೆ ಆನುವಂಶಿಕ ಕಾಯಿಲೆಯ ಅಪಾಯ ಭ್ರೂಣಕ್ಕಿದ್ದರೆ, ಮಾನವೀಯತೆಯ ದೃಷ್ಟಿಯಿಂದ ಸುರಕ್ಷಿತ ಗರ್ಭಪಾತಕ್ಕೆ ಕಾನೂನುಬದ್ಧವಾದ ಅವಕಾಶ ನೀಡಿತು.

ಸುರಕ್ಷಿತ ಗರ್ಭಪಾತ ಉದ್ದೇಶದ ಈ ಕಾಯ್ದೆಗೂ ಭ್ರೂಣಲಿಂಗ ಪತ್ತೆ ಹಚ್ಚುವುದನ್ನು ನಿಷೇಧಿಸುವ ಪಿಎನ್‌ಡಿಟಿ ಕಾಯ್ದೆಗೂ ಕೊಂಡಿ ಏರ್ಪಟ್ಟಿದ್ದು ಅಚ್ಚರಿಯ ಮಾತೇನಲ್ಲ. ಅಂದರೆ, ಪಿಎನ್‌ಡಿಟಿ ಕಾಯ್ದೆಯ ಬಗ್ಗೆ ಆಡಳಿತ ವ್ಯವಸ್ಥೆ ಅಷ್ಟೇನೂ ಜಾಗ್ರತೆ ವಹಿಸದೇ ಇದ್ದಾಗ, ಎಂಟಿಪಿ ಕಾಯ್ದೆಯಡಿಯಲ್ಲಿ ನಡೆದ ಗರ್ಭಪಾತಗಳಿಗೆ ಲೆಕ್ಕವಿಲ್ಲ! ಕ್ರಮೇಣ ಪಿಎನ್‌ಡಿಟಿ ಕಾಯ್ದೆಯನ್ನು ಪ್ರಬಲವಾಗಿ ಜಾರಿಗೆ ತರಲಾರಂಭಿಸಿದಾಗ, ಹೆಣ್ಣು ಮಕ್ಕಳನ್ನು ಉಳಿಸುವ ಪ್ರಕ್ರಿಯೆ ಸಾಧ್ಯವಾಯಿತು ಎನ್ನುವುದು ನಿಜಸಂಗತಿ.

ಡಾ. ಕೆ.ಎಸ್.ಪವಿತ್ರ
ಡಾ. ಕೆ.ಎಸ್.ಪವಿತ್ರ

ದಿನನಿತ್ಯ ಹೆರಿಗೆಗಳನ್ನು ಮಾಡಿಸುವ, ಗರ್ಭಿಣಿಯರಿಗೆ ಆರೈಕೆ ಮಾಡುವ, ಚಿಕಿತ್ಸೆ ನೀಡುವ, ಗರ್ಭಪಾತಗಳನ್ನು ಮಾಡಿಸುವ ವೈದ್ಯ-ವೈದ್ಯೆಯರು ಹೇಳುವ ಪ್ರಕಾರ, ‘ಎಷ್ಟೋ ಬಾರಿ ಅಂಗವೈಕಲ್ಯದಿಂದ ಭ್ರೂಣದ ಪತ್ತೆಯಾಗುವುದು 20 ವಾರಗಳ ಗರ್ಭಾವಸ್ಥೆಯ ನಂತರವೇ. ಮಗು ಆರೋಗ್ಯವಾಗಿ ಇರುವುದಿಲ್ಲವೆಂದು, ತಾಯಿ-ಮಗು ಇಬ್ಬರೂ ಇಡೀ ಜೀವನ ನರಳಬೇಕಾಗುತ್ತದೆಂದು ನಮಗೆ ಗೊತ್ತಿದ್ದರೂ ಈಗಿರುವ ಕಾನೂನಿನ ಪ್ರಕಾರ ನಾವು ಗರ್ಭಪಾತ ಮಾಡುವ ಹಾಗಿಲ್ಲ. ತಂದೆ-ತಾಯಿಗೆ ಈ ಸತ್ಯವನ್ನು ನಾವು ಹೇಳಲೇಬೇಕು. ತಾಯಿಯ ಸಂಕಟವನ್ನು ನಮ್ಮ ಯಾವ ಸಮಾಧಾನದ ಮಾತು ಕಡಿಮೆ ಮಾಡೀತು? ನಾವು ‘ಮಗುವಿನ ಜೀವ’ದ ಬಗ್ಗೆ ಯೋಚಿಸಬೇಕೋ ತಾಯಿಯ ಮಾನಸಿಕ ಆರೋಗ್ಯ- ಅದರ ಹದಗೆಡುವಿಕೆ, ಇಡೀ ಕುಟುಂಬ, ಆ ತಾಯಿಗೆ ಇರಬಹುದಾದ ಇತರ ಮಕ್ಕಳು, ಅವರ ಬೆಳವಣಿಗೆಗಳ ಬಗ್ಗೆ ಯೋಚಿಸಬೇಕೋ?’

2017ರಿಂದ 2019ರ ನಡುವೆ ನಡೆದ ವಿಶ್ಲೇಷಣೆಯ ಪ್ರಕಾರ, ಅತ್ಯಾಚಾರದಂತಹ ದೌರ್ಜನ್ಯದ ಕಾರಣಗಳಿಂದ ಗರ್ಭ ಧರಿಸಿದಾಗ ಗರ್ಭಪಾತಕ್ಕೆಂದು ನ್ಯಾಯಾಲಯದ ಮೆಟ್ಟಿಲು ಹತ್ತಿದವರಲ್ಲಿ ಶೇ 41ರಷ್ಟು ಮಂದಿ 24 ವಾರಗಳನ್ನು ಮೀರಿದ ಗರ್ಭಾವಸ್ಥೆಯಲ್ಲಿದ್ದದ್ದು ಕಂಡುಬಂದಿದೆ. ಇನ್ನೂ ಹುಟ್ಟದ ಭ್ರೂಣದ ಬಗ್ಗೆ ಮಾನವೀಯ ದೃಷ್ಟಿಯಿಂದ ಯೋಚನೆ-ವಾದ ಮಾಡುವ ಜಗತ್ತು, ಅದೇ ಮಾನವೀಯ ದೃಷ್ಟಿಯನ್ನು, ದೇಹ-ಮನಸ್ಸುಗಳ ಮೇಲೆ ನಡೆದ ಅತ್ಯಾಚಾರದ ಫಲವನ್ನು ಮುಂದುವರಿಸಲೇಬೇಕೆಂಬ ಒತ್ತಾಯ ಹೇರುವ ಅಪಾಯದ ಕಡೆಗೇಕೆ ವಿಸ್ತರಿಸಲಾರದು? ಬೇಡದ ಗರ್ಭವನ್ನು ಮುಂದುವರಿಸುವ ಮನಃಸ್ಥಿತಿಯಾಗಲೀ, ಗರ್ಭಪಾತ ನಂತರದ ಮಾನಸಿಕ ಸ್ಥಿತಿಯಾಗಲೀ ತಾಯಿಯ ಆರೋಗ್ಯಕ್ಕೆ ಸಂಬಂಧಿಸಿದ್ದು ಎಂಬ ಬಗ್ಗೆ ಆಡಳಿತ ವ್ಯವಸ್ಥೆಗೆ ಅರಿವಿದ್ದಂತಿಲ್ಲ. ಹಾಗಾಗಿಯೇ ಸರ್ಕಾರ ಈ ಮಸೂದೆಯನ್ನು ತರುವ ಮುನ್ನ ಸಲಹೆ ಪಡೆದುಕೊಂಡ ಪರಿಣತರ ಪಟ್ಟಿಯಲ್ಲಿ ಮನೋವೈದ್ಯರು ಸೇರಿದಂತಿಲ್ಲ! ಕೆಲವು ಅತ್ಯಾಚಾರದ ಪ್ರಕರಣಗಳಲ್ಲಿ 24 ವಾರಗಳ ನಂತರವೂ ಗರ್ಭಪಾತಕ್ಕೆ ಸುಪ್ರೀಂ ಕೋರ್ಟ್‌ ಅನುಮತಿ ನೀಡಿದೆ. ಆದರೆ ಅದಕ್ಕಾಗಿ ಬಹಳಷ್ಟು ಹೋರಾಟದ ಹಂತಗಳನ್ನು ಆ ಮಹಿಳೆಯರು ಎದುರಿಸಬೇಕಾಯಿತು ಎನ್ನುವುದು ಗಮನಾರ್ಹ.

ವೈದ್ಯಕೀಯ ವಿಜ್ಞಾನ ನಿಂತ ನೀರಲ್ಲ. ಹೆರಿಗೆ ಮಾಡಿಸುವ ವಿಧಾನಗಳಂತೆಯೇ ಗರ್ಭಪಾತದ ವಿಧಾನಗಳು ಸುಧಾರಿಸಿವೆ. ಹೆಣ್ಣು ಭ್ರೂಣಹತ್ಯೆಯನ್ನು ತಡೆಯಬಲ್ಲ ಆತ್ಮಸಾಕ್ಷಿ ಬಲವಾಗತೊಡಗಿದೆ. ಹಾಗಾಗಿ ಗರ್ಭಪಾತದ ಮಸೂದೆಯ ಈ ತಿದ್ದುಪಡಿ ಸ್ವಾಗತಾರ್ಹ. ತಿದ್ದುಪಡಿಯು ಮಹಿಳಾ ಮಾನಸಿಕ ಆರೋಗ್ಯದ ಬಗೆಗೆ ಸಂಶೋಧನೆ- ಅಧ್ಯಯನ- ಚಿಕಿತ್ಸೆ ನಡೆಸುವ ನನ್ನಂತಹ ಹಲವರಿಗೆ ಸಮಾಧಾನ ತಂದಿದೆ. ಇದರಿಂದ ಹೆಣ್ಣು ಭ್ರೂಣಹತ್ಯೆ ಹೆಚ್ಚಾಗಬಹುದೆಂಬ ಭಯ ನನಗಿಲ್ಲ. ಹೆಣ್ಣು ಭ್ರೂಣಹತ್ಯೆಯ ವಿರುದ್ಧದ ಹೋರಾಟದ ಬಗ್ಗೆ ಅರಿವು ಮೂಡಿಸಲು ನಾವು, ನಮ್ಮಂತಹ ಹಲವರು ಸಿದ್ಧರಿದ್ದೇವೆ. ಹಾಗಾಗಿ, ಬಹು ಬೇಗ ಈ ಮಸೂದೆಯು ಕಾಯ್ದೆಯಾಗಲಿ. ನಮ್ಮ ಆಡಳಿತ ವ್ಯವಸ್ಥೆ ಕಾಲಕಾಲಕ್ಕೆ ವೈಜ್ಞಾನಿಕ ಪ್ರಗತಿ, ಅಧ್ಯಯನಗಳನ್ನು ಆಧರಿಸಿ ಸೂಕ್ತ ತಿದ್ದುಪಡಿಗಳನ್ನು ತರುವಂತಹ ಪ್ರಯತ್ನ ಮಾಡಲಿ.

ಲೇಖಕಿ: ಮನೋವೈದ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT