ಶುಕ್ರವಾರ, 8 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವಿವೈವಿಧ್ಯ: ಮನುಕುಲ ಉಳಿಸುವ ದಿವ್ಯೌಷಧ! ಅಖಿಲೇಶ್‌ ಚಿಪ್ಪಳಿ ಲೇಖನ

ಹವಾಮಾನ ವೈಪರೀತ್ಯವೆಂಬ ವಿಷ ಮತ್ತು ಜೀವಿವೈವಿಧ್ಯವೆಂಬ ಅಮೃತ
Last Updated 6 ಮಾರ್ಚ್ 2022, 21:15 IST
ಅಕ್ಷರ ಗಾತ್ರ

ಹವಾಗುಣ ಬದಲಾವಣೆ ಕುರಿತಾಗಿ ಜಾಗತಿಕ ಮಟ್ಟದಲ್ಲಿ ಹೆಚ್ಚಿನ ಚರ್ಚೆಯಾಗುತ್ತಿದೆ. ಭೂಮಿಯೆಂಬ ಬೃಹತ್ ಕಾಯಕ್ಕೆ ಬಂದಿರುವ ಜ್ವರದ ಸೂಚ್ಯಂಕವನ್ನು ಏರದ ಹಾಗೆ ನೋಡಿಕೊಳ್ಳುವುದು ಹೇಗೆ ಎಂದು ವಿಜ್ಞಾನಿಗಳು ತಲೆಕೆಡಿಸಿಕೊಂಡಿದ್ದಾರೆ. ಹವಾಗುಣ ಬದಲಾವಣೆ ಮತ್ತು ಜೀವಿವೈವಿಧ್ಯ ಸಂರಕ್ಷಣೆ ವಿಷಯಗಳನ್ನು ಇಷ್ಟು ವರ್ಷ ಬೇರೆ ಬೇರೆಯಾಗಿ ನೋಡಲಾಗುತ್ತಿತ್ತು. ಆದರೆ, ಅದು ಸರಿಯಾದ ಕ್ರಮವಲ್ಲ. ಎರಡೂ ಗಂಭೀರ ವಿಷಯಗಳು ಒಂದಕ್ಕೊಂದು ನಂಟು ಹಾಕಿಕೊಂಡಿವೆ. ಅವುಗಳನ್ನು ಬಿಡಿ ಬಿಡಿಯಾಗಿ ಪರಿಗಣಿಸಿದ್ದರಿಂದಲೇ ಎರಡು ಸಮಸ್ಯೆಗಳಿಗೂ ಪರಿಹಾರ ಮರೀಚಿಕೆಯಾಗಿದೆ. ಇದಕ್ಕೆ ಪರಿಹಾರವೆಂದರೆ, ಎರಡನ್ನೂ ಕ್ರೋಡೀಕರಿಸಿ ಏಕತ್ರ ಸಮಸ್ಯೆಯೆಂದೇ ಪರಿಗಣಿಸಿದಲ್ಲಿ ಪರಿಹಾರ ಸಾಧ್ಯ ಎಂಬ ವಾದ ಮುನ್ನೆಲೆಗೆ ಬಂದಿದೆ. ಅದು ಹೇಗೆ ಎಂಬುದನ್ನು ಕೊಂಚ ವಿವರವಾಗಿ ನೋಡೋಣ.

2020ರ ಡಿಸೆಂಬರ್ ತಿಂಗಳಲ್ಲಿ ಐಪಿಸಿಸಿ (ಹವಾಮಾನ ಬದಲಾವಣೆ ಕುರಿತ ಇಂಟರ್‌ಗವರ್ನಮೆಂಟಲ್‌
ಪ್ಯಾನಲ್‌) ಸಭೆಯಲ್ಲೇ ಈ ವಿಷಯ ಚರ್ಚೆಯಾಗಿತ್ತು. ಜಗತ್ತಿನ ಎಲ್ಲ ದೇಶಗಳೂ ಈ ಎರಡೂ ಸಮಸ್ಯೆಗಳನ್ನು
ಸಂಯೋಜಿತ ನೆಲೆಯಲ್ಲೇ ಪರಿಗಣಿಸಬೇಕು ಮತ್ತು ಪ್ರಕೃತಿ ಆಧಾರಿತ ಪರಿಹಾರಗಳನ್ನು ಕಂಡುಕೊಳ್ಳಬೇಕು. ಹವಾಮಾನದಲ್ಲಿ ಕ್ಷಿಪ್ರವಾಗಿ ಬಿಸಿ ಹೆಚ್ಚಾಗುತ್ತಿದೆ. ಭೂಬಿಸಿ ಏರಿಕೆಯಿಂದಾಗಿ ಪ್ರಕೃತಿ ವಿಕೋಪಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ನೈಸರ್ಗಿಕ ವಿಪತ್ತನ್ನು ಎದುರಿಸುವುದು ಮತ್ತು ಅದರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಬದುಕುವುದು ಹೇಗೆ ಎಂದು ಪ್ರತೀ ದೇಶ ಆಂತರಿಕವಾಗಿ ರಾಷ್ಟ್ರೀಯ ಹೊಂದಾಣಿಕೆ ಯೋಜನೆಯನ್ನು ರೂಪಿಸುತ್ತಿದೆ. ಈ ಯೋಜನೆಗಳು ನಿಸರ್ಗ ಆಧಾರಿತ
ವಾಗಿರಬೇಕು ಎಂದು ಐಪಿಸಿಸಿ ಸಲಹೆ ನೀಡಿದೆ.

ಹವಾಮಾನ ವೈಪರೀತ್ಯ ಎಂಬುದು ಜಾಗತಿಕ ಸಮಸ್ಯೆಗಳನ್ನು ಬಹುಸ್ತರಗಳಲ್ಲಿ ಕಾಡಲಿದೆ. ಜೀವಿವೈವಿಧ್ಯ ತಾಣಗಳು ಈಗಾಗಲೇ ಒತ್ತಡದಿಂದ ಬಳಲುತ್ತಿವೆ. ಸಮುದ್ರ ಮಟ್ಟ ಏರುತ್ತಿರುವುದರಿಂದಾಗಿ ಹವಳ ದಿಬ್ಬಗಳು ಸಾಯುತ್ತಿವೆ. ಇದೊಂದು ಉದಾಹರಣೆಯಷ್ಟೆ.
ಜಾಗತಿಕ ಜೀವಿವೈವಿಧ್ಯ ಖಜಾನೆ ಬಹಳ ವೇಗವಾಗಿ ಬರಿದಾಗುತ್ತಿದೆ. ತಮ್ಮ ಆವಾಸಸ್ಥಾನ ವಾಸಕ್ಕೆ ಯೋಗ್ಯ
ವಾಗಿಲ್ಲವೆಂದರೆ ಅನೇಕ ಜೀವಿಗಳು ವಿನಾಶ ಹೊಂದಲಿವೆ.

ಈಗಿನ ತುರ್ತುಪರಿಸ್ಥಿತಿಯಲ್ಲಿ ಜಾಗತಿಕವಾಗಿ ಎಲ್ಲಾ ಜೀವಿವೈವಿಧ್ಯವನ್ನು ಉಳಿಸಲು ಸಾಧ್ಯವಿಲ್ಲದೇ ಇದ್ದರೂ ಜಗತ್ತಿನ ಎಲ್ಲ ನಾಗರಿಕರೂ ಏಕತ್ರವಾಗಿ ಒಂದೊಂದು ಗುಳಿಗೆಯಂತೆ ವರ್ತಿಸಿದರೆ ಜೀವಿವೈವಿಧ್ಯವನ್ನು ಉಳಿಸಬಹುದು ತನ್ಮೂಲಕ ಹವಾಮಾನ ವೈಪರೀತ್ಯದ ಪರಿಣಾಮಗಳನ್ನು ಇಳಿಸಬಹುದು. ಇದೊಂದೇ ಈಗ ಉಳಿದಿರುವ ಏಕೈಕ ಆಶಾಕಿರಣ.

ಕೈಗಾರಿಕಾಪೂರ್ವ ಯುಗಕ್ಕೆ ಹೋಲಿಸಿದರೆ ಭೂಮಿಯ ಸರಾಸರಿ ಉಷ್ಣಾಂಶ ಈಗಾಗಲೇ 1 ಡಿಗ್ರಿ ಸೆಲ್ಸಿಯಸ್‌ನಷ್ಟು ಏರಿಕೆಯಾಗಿದೆ. ಇದು ಇಡೀ ಜೀವಿವೈವಿಧ್ಯದ ಮೇಲೆ ಅಗಾಧ ದುಷ್ಪರಿಣಾಮ ಬೀರಿದೆ. ಉತ್ತರ- ದಕ್ಷಿಣ ಧ್ರುವಗಳ ಹಿಮ ಕರಗುವಿಕೆಯಿಂದಾಗಿ
ಹಿಮಕರಡಿಗಳು ಆವಾಸಸ್ಥಾನ ಕಳೆದುಕೊಂಡಿವೆ. ಧ್ರುವ ಪ್ರದೇಶದಲ್ಲಿ ವಾಸಿಸುವ ಪ್ರಾಣಿಗಳು, ಪಕ್ಷಿಗಳು, ಜಲಚರಗಳು ನೂರಾರು ಕಿಲೊಮೀಟರ್ ದೂರದಲ್ಲಿ ಸುರಕ್ಷಿತ ಸ್ಥಳಗಳನ್ನು ಅರಸಿ ವಲಸೆ ಪ್ರಕ್ರಿಯೆ ಪ್ರಾರಂಭಿಸಿವೆ. ತಮ್ಮದಲ್ಲದ ಆವಾಸಸ್ಥಾನದಲ್ಲಿ ಹೊಂದಿಕೊಳ್ಳುವುದು ಅವುಗಳಿಗೆ ಕಷ್ಟವಾಗುತ್ತಿದೆ. ಆಳದ ಸಮುದ್ರದಲ್ಲಿ ಆಮ್ಲಜನಕ ಕೊರತೆ ಪ್ರದೇಶ ವಿಸ್ತರಣೆಯಾಗುತ್ತಿದೆ. ಬೆಚ್ಚಗಿನ ನೀರಿನಲ್ಲಿ ಆಮ್ಲಜನಕ ಬೇಗ ಕರಗುವುದಿಲ್ಲ. ಈ ವಿದ್ಯಮಾನವು ನೀಲಿ ತಿಮಿಂಗಿಲದಂತಹ ಜಲಚರಗಳನ್ನು ಅನಿವಾರ್ಯವಾಗಿ ನೀರಿನ ಮೇಲ್ಮಟ್ಟಕ್ಕೆ ಬರುವ ಹಾಗೆ ಮಾಡಿದೆ. ಇದರಿಂದ ಅವು ಮೀನುಗಾರರ ಯಾಂತ್ರಿಕ ದೋಣಿಗಳಿಗೆ ಸಿಕ್ಕಿ ಅಸುನೀಗುತ್ತಿವೆ.

ಸಮುದ್ರ ಮಟ್ಟದಿಂದ ಬರೀ ಎರಡು ಮೀಟರ್ ಎತ್ತರದಲ್ಲಿರುವ ಕಿರಿಬಾಟಿ ಎಂಬ ದ್ವೀಪ ಸಮೂಹ ಮುಳುಗುತ್ತಿದೆ. ಒಂದು ಲಕ್ಷಕ್ಕಿಂತ ತುಸು ಹೆಚ್ಚು ಜನಸಂಖ್ಯೆ ಹೊಂದಿರುವ ಚಿಕ್ಕ ದೇಶವಾದ ಕಿರಿಬಾಟಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಇನ್ನಿಲ್ಲದಂತೆ ಹೆಣಗುತ್ತಿದೆ. ಜೋರಾಗಿ ಅಪ್ಪಳಿಸುವ ಸಮುದ್ರದ ಅಲೆಗಳು ದ್ವೀಪದ ಒಳಭಾಗಕ್ಕೆ ಬಂದು ಅಲ್ಲಿನ ಸಿಹಿನೀರನ್ನು ಕಲುಷಿತಗೊಳಿಸುತ್ತಿವೆ. ಅಲ್ಲಿನ ಮುಖ್ಯ ಕಸುಬು ಕೃಷಿ, ಮೀನುಗಾರಿಕೆ ಮತ್ತು ಪ್ರವಾಸೋದ್ಯಮ. ಸಮುದ್ರಮಟ್ಟದಏರಿಕೆಯಿಂದಾಗಿ ಮುಳುಗುತ್ತಿರುವ ದೇಶವನ್ನುಉಳಿಸಿಕೊಳ್ಳಲು ಅಲ್ಲಿನ ಅಧ್ಯಕ್ಷ ಮಾಮವೋ ಅವರು ದ್ವೀಪದ ಎತ್ತರವನ್ನೇ ಇನ್ನಷ್ಟು ಎತ್ತರಿಸಲು ಯೋಜನೆ ರೂಪಿಸಿದ್ದಾರೆ. ಹೊರಗಿನಿಂದ ಮರಳು- ಮಣ್ಣು ತಂದು ದ್ವೀಪ ಎತ್ತರಿಸುವ ದುಬಾರಿ ಯೋಜನೆ ಎಷ್ಟರಮಟ್ಟಿಗೆ ಫಲ ನೀಡುವುದೋ ಕಾಲವೇ ಉತ್ತರಿಸಬೇಕು.

ಈಶಾನ್ಯ ಭಾರತ ಹಾಗೂ ಬಾಂಗ್ಲಾದೇಶದಗುಂಟ ಇರುವ ಕಾಂಡ್ಲಾ ಕಾಡುಗಳು ನಾಶವಾಗುತ್ತಿರುವ
ಹಿನ್ನೆಲೆಯಲ್ಲಿ, ನೆಲವಾಸಿಯಾದ ಸುಂದರಬನದ ಬೆಂಗಾಲ್ ಟೈಗರ್‌ಗಳ ಆವಾಸಸ್ಥಾನ ಇಲ್ಲವಾಗುತ್ತಿದೆ. ಇದರಿಂದಾಗಿ, 2070ರ ಹೊತ್ತಿಗೆ ಈ ಸುಂದರ ಪ್ರಾಣಿಗಳು ವಿನಾಶದ ಅಂಚಿಗೆ ತಲುಪಲಿವೆ. ಭೂಬಿಸಿ ಏರಿಕೆ ಎಲ್ಲ ಪ್ರಾಣಿಗಳಿಗೂ ಕೆಡುಕನ್ನುಂಟು ಮಾಡುವುದಿಲ್ಲ. ಪೀಡೆ ಎಂದು ಕರೆಯಲಾಗುವ ಸೊಳ್ಳೆ, ತೊಗಟೆ- ಕಾಂಡಕೊರಕ ಕೀಟ, ಜೆಲ್ಲಿ ಫಿಶ್ ಮುಂತಾದವುಗಳ ಸಂಖ್ಯೆ ಏರಲಿದೆ.

ಇಂತಹ ಕ್ಲಿಷ್ಟ ಪರಿಸ್ಥಿತಿಯಲ್ಲೂ ಕೆಲವು ಪ್ರಭೇದಗಳು ಹೊಂದಾಣಿಕೆಯ ಪ್ರಯತ್ನ ಮುಂದುವರಿಸಿವೆ. ಉದಾಹರಣೆಗೆ, ಫಿನ್ಲೆಂಡ್‌ನ ಬಿಳಿಬಣ್ಣದ ಗೂಬೆಗಳು ಅಲ್ಲಿನ ಬಿಳಿಯ ಹಿಮಕವಚಗಳು ಕ್ಷೀಣಿಸುತ್ತಿರುವುದರಿಂದಾಗಿ ತಮ್ಮ ಬಣ್ಣವನ್ನು ಬೂದು ಬಣ್ಣಕ್ಕೆ ಬದಲಾಯಿ
ಸಿಕೊಂಡಿವೆ. ಈ ಭಾಗ್ಯ ಎಲ್ಲ ಜೀವಿಗಳಿಗೂ ಇರುವುದಿಲ್ಲ. ಗರ್ಭಾವಧಿ ಹೆಚ್ಚಿರುವ ಪ್ರಾಣಿಗಳು ಬದಲಾಗುವ ಹವಾಮಾನಕ್ಕೆ ಬೇಗ ಹೊಂದಿಕೊಳ್ಳುವ ಸಾಮರ್ಥ್ಯ ಹೊಂದಿಲ್ಲ. ಏರುತ್ತಿರುವ ಬಿಸಿಯನ್ನು 2070ರ ಹೊತ್ತಿಗೆ 1.5 ಡಿಗ್ರಿ ಸೆಲ್ಸಿಯಸ್‌ಗೆ ಸೀಮಿತಗೊಳಿಸದಿದ್ದಲ್ಲಿ,
ಭೂಮಂಡಲದ ಮೂರನೇ ಒಂದು ಭಾಗದಷ್ಟು ಜೀವಿವೈವಿಧ್ಯ ಶಾಶ್ವತವಾಗಿ ನಶಿಸಿಹೋಗಲಿದೆ.

ಸಮುದ್ರಮಟ್ಟ ಏರುವುದರಿಂದ ತೀರ ಪ್ರದೇಶದಲ್ಲಿ ವಾಸಿಸುವವರ ಆವಾಸಸ್ಥಾನಗಳು ಮುಳುಗಿಹೋಗಲಿದ್ದು,
ಆ ಜನಸಂಖ್ಯೆ ಘಟ್ಟ ಪ್ರದೇಶಗಳತ್ತ ವಲಸೆ ಬರಬೇಕಾಗುತ್ತದೆ. ಭಾರತದಂತಹ ಹೆಚ್ಚು ಜನಸಂಖ್ಯೆಯ ದೇಶದಲ್ಲಿ, ಲಕ್ಷಾಂತರ ಜನರ ಘಟ್ಟ ವಲಸೆ ಮತ್ತಷ್ಟು ಜೀವಿವೈವಿಧ್ಯ ನಾಶಕ್ಕೆ ಕಾರಣವಾಗುತ್ತದೆ. ಹವಾಮಾನ ವೈಪರೀತ್ಯ ಮತ್ತು ಜೀವಿವೈವಿಧ್ಯ ನಾಶ ಎರಡೂ ಪರಸ್ಪರ ಅವಲಂಬಿತ ಸಮಸ್ಯೆಗಳು ಹಾಗೂ ಪರಿಹಾರವೂ ಪರಸ್ಪರ ಅವಲಂಬಿತವೇ ಆಗಿದೆ. ಜೀವಿವೈವಿಧ್ಯವನ್ನು ಉಳಿಸದೇ ಉಷ್ಣಾಂಶಕ್ಕೆ ಅಂಕುಶ ಹಾಕಲು ಸಾಧ್ಯವಿಲ್ಲ ಹಾಗೂ ಜೀವಿವೈವಿಧ್ಯದ ನೆರವಿಲ್ಲದೇ ಉಷ್ಣಾಂಶ ಏರಿಕೆಯು ನಿಯಂತ್ರಣಕ್ಕೆ ಒಳಪಡದು.

ಭೂಬಿಸಿ ಏರಿಕೆ ತಡೆಯಲು ಅನೇಕ ನೀತಿ ನಿಯಮಗಳನ್ನು ಜಗತ್ತಿನ ಎಲ್ಲ ದೇಶಗಳೂ ರೂಪಿಸಿವೆ ಹಾಗೂ ಜೀವಿವೈವಿಧ್ಯ ಸಂರಕ್ಷಣೆಗಿಂತ ಹೆಚ್ಚು ಒತ್ತು ನೀಡಿವೆ. ಪರಿಸರಸ್ನೇಹಿ ಎಂದು ಜೈವಿಕ ಇಂಧನಗಳಿಗೆ ಒತ್ತು ನೀಡಲಾಗುತ್ತಿದೆ. ಆದರೆ, ಆಗ್ನೇಯ ಏಷ್ಯಾದ ಜೀವಿವೈವಿಧ್ಯದ ತವರಾದ ದಟ್ಟಾರಣ್ಯಗಳನ್ನು ಸವರಿ ಅಲ್ಲಿ ಪಾಮ್ ಎಣ್ಣೆ ಬೆಳೆದು, ಅದನ್ನು ಆಸ್ಟ್ರೇಲಿಯಾದ ಕಾರುಗಳಿಗೆ ಬಳಸಿದರೆ ಅದು ಹೇಗೆ ಪರಿಸರಸ್ನೇಹಿ ಇಂಧನವಾದೀತು ಎಂದು ಪ್ರಶ್ನಿಸುತ್ತಾರೆ ಪ್ರಿನ್ಸ್‌ಟನ್ ವಿಶ್ವವಿದ್ಯಾಲಯದ ವಿಜ್ಞಾನಿ ಡಾ. ಸರ್ಚಿಂಜರ್. ಜೈವಿಕ ತ್ಯಾಜ್ಯದಿಂದ ಜೈವಿಕ ಇಂಧನ ಮಾತ್ರ ಪರಿಸರಸ್ನೇಹಿ ಆಗಬಲ್ಲದು.

ಕೈಗಾರಿಕೋತ್ತರ ನವನಾಗರಿಕತೆಯ ವಿಜ್ಞಾನ, ತಂತ್ರಜ್ಞಾನಗಳ ದಾಂಗುಡಿ, ಅಭಿವೃದ್ಧಿಯ ನಾಗಾಲೋಟ, ದುರಾಸೆಯ ಒತ್ತುವರಿ, ಅಣೆಕಟ್ಟುಗಳು, ರೈಲು- ಹೆದ್ದಾರಿ ಮಾರ್ಗಗಳು ಹೀಗೆ ಹತ್ತು ಹಲವು ಮಾನವ ನಿರ್ಮಿತ ಮತ್ತು ಕೇಂದ್ರಿತ ಯೋಜನೆಗಳೇ ಇಂದು ಈ ಪರಿಸ್ಥಿತಿಗೆ ಕಾರಣವಾಗಿವೆ. ಭೂಜ್ವರದ ತಾಪ ಮನೆಮನೆಗೂ ತಟ್ಟುತ್ತಿದೆ. ಸಾಗರ ತಾಲ್ಲೂಕಿನ ಚಿಪ್ಪಳಿಯ ಹುಣಸೆಕಟ್ಟೆ ಕೆರೆಗೆ ಉತ್ತರ ಭಾರತದಿಂದ ಹತ್ತಾರು ಸಾವಿರ ಸಂಖ್ಯೆಯಲ್ಲಿ ವಲಸೆ ಬರುತ್ತಿದ್ದ ಕಬ್ಬಕ್ಕಿಗಳು ಈ ವರ್ಷ ಬರಲೇ ಇಲ್ಲ. ನಾಗಸಂಪಿಗೆ ಮರ ಹೂ ಬಿಡಲಿಲ್ಲ. ಗುಡ್ಡೇಗೇರು ಹಣ್ಣಾಗಲೇ ಇಲ್ಲ. ಇಂತಹ ನೂರಾರು ವೈಪರೀತ್ಯಗಳು ನಮ್ಮ ನಡುವೆ ನಡೆಯುತ್ತಿವೆ. ಗಮನಿಸಬೇಕಾದ ಕಣ್ಣುಗಳು ಹಿಜಾಬು– ಕೇಸರಿ ಗಲಾಟೆಯಲ್ಲಿ ಮಗ್ನವಾಗಿವೆ. ಪರಿಹಾರ ಹುಡುಕಬೇಕಾದ ಅಧಿಕಾರಿ ವರ್ಗಕ್ಕೆ ಇಂತಹ ಸೂಕ್ಷ್ಮಗಳು ಕಾಣುವುದೇ ಇಲ್ಲ.

ಒಂದು ಅಧ್ಯಯನದ ಪ್ರಕಾರ, ಈ ಭೂಮಿಯ ಜ್ವರವನ್ನು ಕಡಿಮೆ ಮಾಡಬೇಕೆಂದರೆ, ಪ್ರಪಂಚದ ಒಟ್ಟೂ ಭೌಗೋಳಿಕ ಪ್ರದೇಶದ ಅರ್ಧ ಭಾಗದಲ್ಲಿ ಜೀವಿವೈವಿಧ್ಯ ಸಂರಕ್ಷಣೆಯಾಗಬೇಕು. ಜೀವಿವೈವಿಧ್ಯವೆಂಬ ಗಂಟೇ ಮನುಕುಲದ ಉಳಿವಿಗೆ ಏಕೈಕ ಮಾರ್ಗ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT