ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಡಿಟಿವಿ ವಿದ್ಯಮಾನ: ಯಾರಿಗೂ ಇರದ ಸವಾಲು ಮುಕ್ತ ಮಾಧ್ಯಮಕ್ಕಿದೆ

ಎನ್‌ಡಿಟಿವಿ ವಿದ್ಯಮಾನದಲ್ಲಿ ಬರಿಗಣ್ಣಿಗೆ ಕಾಣುವುದಕ್ಕಿಂತ ಮಿಗಿಲಾದುದು ಬೇರೆ ಏನಾದರೂ ಇದೆಯೇ?
Last Updated 9 ಡಿಸೆಂಬರ್ 2022, 19:30 IST
ಅಕ್ಷರ ಗಾತ್ರ

ಎನ್‌ಡಿಟಿವಿ ಪ್ರವರ್ತಕ ಕಂಪನಿಗೆ ಪ್ರಣಯ್ ರಾಯ್ ಹಾಗೂ ರಾಧಿಕಾ ರಾಯ್ ರಾಜೀನಾಮೆ ಸಲ್ಲಿಸಿರುವುದು ಸ್ವತಂತ್ರ ಟಿ.ವಿ. ವಾಹಿನಿಯೊಂದರ ಅಂತ್ಯವೇ? ಇದು ಸಂಭಾವಿತ ಚರ್ಚೆಗಳ ಕೊನೆಯೇ? ಎನ್‌ಡಿಟಿವಿ ಸಂಸ್ಥಾಪಕ ಪ್ರಣಯ್ ಅವರು ಯಾವಾಗಲೂ ಶಾಂತಚಿತ್ತ ರಾಗಿ ಇರುತ್ತಿದ್ದರು. ಚರ್ಚೆ ಕಾವೇರಿದ್ದರೂ ಅವರು ಮಾತ್ರ ಸಂಯಮದಿಂದ ಇರುತ್ತಿದ್ದರು. ಬಲ ಹಾಗೂ ಎಡ ಪಂಥಗಳಿಗೆ ಸೇರಿದ, ತೀಕ್ಷ್ಣ ನಿಲುವುಗಳನ್ನು ಹೊಂದಿದ್ದ ಅತಿಥಿಗಳೂ ಪ್ರಣಯ್ ಅವರೆದುರು ಶಾಂತರಾಗುತ್ತಿ
ದ್ದರು. ಏಕೆಂದರೆ ಪ್ರಣಯ್ ಅವರು ತಮ್ಮಲ್ಲಿ ಚರ್ಚೆಯಲ್ಲಿ ಪಾಲ್ಗೊಳ್ಳುವ ಅತಿಥಿಗಳನ್ನು ಮೂರ್ಖರೆಂಬ ರೀತಿಯಲ್ಲಿ ಕಾಣುತ್ತಿರಲಿಲ್ಲ.

ಈ ಮಾತನ್ನು ನಾವು ಇತರ ನಿರೂಪಕರ ಬಗ್ಗೆಯೂ ಹೇಳಬಹುದೇ? ಅವರಲ್ಲಿ ಹಲವರು ಎಲ್ಲ ಅತಿಥಿಗಳ ಅಭಿಪ್ರಾಯ ಕೇಳುವ ಬದಲು, ಅವರ ಅಭಿಪ್ರಾಯವು ತಮ್ಮ ಅಭಿಪ್ರಾಯಕ್ಕೆ ವಿರುದ್ಧವಾಗಿದ್ದರೆ ಅವರನ್ನು ಗದರಿಸಲು ಆರಂಭಿಸುತ್ತಾರೆ! ಎನ್‌ಡಿಟಿವಿ ವಾಹಿನಿಯಲ್ಲಿ ಪ್ರಣಯ್ ಅವರಿಗಿಂತ ಕಿರಿಯರಾಗಿದ್ದ ಹಲವರು ಬಿಜೆಪಿ ವಕ್ತಾರರ ಎದುರು ವಾದಕ್ಕೆ ನಿಂತಿದ್ದು, ಚರ್ಚೆಯ ನಡುವೆಯೇ ಬಿಜೆಪಿ ವಕ್ತಾರರು ಹೊರನಡೆದಿದ್ದು ಆಗಿದೆ.

ಆರ್ಥಿಕ ನೀತಿಗಳು, ಅಲ್ಪಸಂಖ್ಯಾತರಿಗೆ ಆದ ಅನ್ಯಾಯ ಅಥವಾ ಆಡಳಿತದಲ್ಲಿನ ಲೋಪಗಳ ವಿಚಾರದಲ್ಲಿ ಎನ್‌ಡಿಟಿವಿ ನಿರೂಪಕರು ಬಿಜೆಪಿ ನೇತೃತ್ವದ ಸರ್ಕಾರದ ನೀತಿಗಳನ್ನು ಬಹಿರಂಗವಾಗಿ ಪ್ರಶ್ನಿಸುತ್ತಿದ್ದರು. ಎನ್‌ಡಿಟಿವಿ ಹಿಂದಿ ವಾಹಿನಿಯ ನಿರೂಪಕರಾಗಿದ್ದ, ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ರವೀಶ್ ಕುಮಾರ್ ಅವರು ಹಿಂದಿ ನೆಲದಲ್ಲಿ ಬೆಂಬಲಿಗರ ಸಮೂಹವನ್ನು ಹೊಂದಿದ್ದಾರೆ. ಅಧಿಕಾರದಲ್ಲಿರುವ ಪಕ್ಷ ಯಾವುದೇ ಆಗಲಿ, ಮುಕ್ತ ಮಾಧ್ಯಮವು ಅಧಿಕಾರಸ್ಥರು ತಪ್ಪು ಮಾಡದಂತೆ ಕಾಳಜಿ ವಹಿಸುವ ಕಾವಲು ನಾಯಿಯಂತೆ ಇರಬೇಕು. ಬಿಜೆಪಿ ಬೆಂಬಲಿಗರು ಎನ್‌ಡಿಟಿವಿ ಮತ್ತು ಪ‍್ರಣಯ್ ಅವರನ್ನು ಮೋದಿ ವಿರೋಧಿ ಹಾಗೂ ಕಾಂಗ್ರೆಸ್ ಪರವೆಂಬಂತೆ ಕಾಣುತ್ತಾರೆ. ರೋಮನ್ ಸಾಮ್ರಾಟ ಸೀಸರನ ಪತ್ನಿಯಂತೆಯೇ ಪತ್ರಕರ್ತರು ಕೂಡ ಸಂಶಯಗಳಿಗೆ ಅತೀತರಾಗಿರ
ಬೇಕು. ಪತ್ರಕರ್ತ ಆಡಳಿತ ಪಕ್ಷವನ್ನು ಟೀಕಿಸಿದ ತಕ್ಷಣ, ಆತ ವಿರೋಧ ಪಕ್ಷಗಳ ಹಿತಾಸಕ್ತಿಗೆ ಪೂರಕವಾಗಿ ಕೆಲಸ ಮಾಡುತ್ತಿದ್ದಾನೆ ಎಂಬಂತೆ ಕಾಣಲಾಗುತ್ತದೆ. ಯುಪಿಎ ಆಡಳಿತದ ಅವಧಿಯಲ್ಲಿ ಕಾಂಗ್ರೆಸ್‌ ಬಗ್ಗೆ ಮೃದು ಧೋರಣೆ ಹೊಂದಿದ್ದ ಆರೋಪವನ್ನು ನಿರಾಕರಿಸಲು ಎನ್‌ಡಿಟಿವಿಗೆ ಸಾಧ್ಯವಾಗಲಿಕ್ಕಿಲ್ಲ.

ಆರೋಪಗಳು ಏನೇ ಇದ್ದರೂ, ಪ್ರಣಯ್ ಅವರು ಟಿ.ವಿ. ವಾಹಿನಿಗಳ ವರದಿಗಾರಿಕೆಯಲ್ಲಿ, ಚುನಾವಣೆಗಳ ಫಲಿತಾಂಶ ಅಂದಾಜಿಸುವುದರಲ್ಲಿ ಕ್ರಾಂತಿಯನ್ನು ತಂದವರು.

ರಾಯ್ ಅವರ ಕಂಪನಿಯು ರಿಲಯನ್ಸ್ ಇಂಡ ಸ್ಟ್ರೀಸ್‌ಗೆ ಸೇರಿದ್ದ ಕಂಪನಿಯೊಂದರಿಂದ ಹಿಂದೆ ಸಾಲ ಪಡೆಯುವಾಗ ಷೇರುಗಳನ್ನು ಅಡ ಇರಿಸಿತ್ತು. ಅಡ ಇರಿಸಿದ್ದ ಷೇರುಗಳನ್ನು ಗೌತಮ್ ಅದಾನಿ ಸ್ವಾಧೀನಕ್ಕೆ ತೆಗೆದುಕೊಂಡರು. ಮುಕ್ತ ಮಾರುಕಟ್ಟೆಯಿಂದ ಇನ್ನಷ್ಟು ಷೇರುಗಳನ್ನು ಖರೀದಿಸಿದರು. ಷೇರುಗಳು ಒಂದು ಕಂಪನಿಯಿಂದ ಇನ್ನೊಂದು ಕಂಪನಿಗೆ ಹಸ್ತಾಂತರವಾಗು ವುದಕ್ಕೆ ಇಷ್ಟೊಂದು ಸದ್ದು ಏಕೆ ಎಂಬ ಕುತೂಹಲ ಉಂಟಾಗಬಹುದು. ಮುಕ್ತ ಮಾಧ್ಯಮವನ್ನು ಆರಾಧಿ ಸುವ ಉದಾರವಾದಿಗಳಿಂದ ಶೋಕಸಂದೇಶ ಏಕೆ? ಖ್ಯಾತ ಪತ್ರಕರ್ತರೊಬ್ಬರು, ‘ಮುಕೇಶ್ ಅಂಬಾನಿ ಅವರ ಕೈಯಲ್ಲಿ ಎನ್‌ಡಿಟಿವಿ ಮುಕ್ತವಾಗಿತ್ತು ಎಂದಾದರೆ, ಗೌತಮ್ ಅದಾನಿ ಅದನ್ನು ಖರೀದಿಸಿದಾಗ ಈ ಶ್ರದ್ಧಾಂಜಲಿ ಏಕೆ? ಟಿ.ವಿ.ಗಳು ಆದಾಯ ಪಡೆಯುವ ಮಾದರಿಯು ಹಾಳಾಗಿದೆ ಎಂಬುದೇ ದೊಡ್ಡ ಸಮಸ್ಯೆ’ ಎಂದು ಟ್ವೀಟ್ ಮಾಡಿದ್ದರು.

ಇಲ್ಲಿ ಒಂದು ವ್ಯತ್ಯಾಸವಿದೆ. ಅಡ ಇರಿಸಿದ್ದ ಷೇರು ಗಳನ್ನು ರಿಲಯನ್ಸ್ ಕೂಡ ಸ್ವಾಧೀನಕ್ಕೆ ತೆಗೆದುಕೊಳ್ಳ
ಬಹುದಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ. ಇಲ್ಲಿ ಬರಿಗಣ್ಣಿಗೆ ಕಾಣುವುದಕ್ಕಿಂತ ಮಿಗಿಲಾದುದು ಬೇರೆ ಏನಾದರೂ ಇದೆಯೇ? ರಿಲಯನ್ಸ್‌ ಬಳಿ ಸಿಎನ್‌ಎನ್‌–ಐಬಿಎನ್, ಸಿಎನ್‌ಬಿಸಿ, ಈ ಟಿವಿ ಸಮೂಹ, ಮನಿ ಕಂಟ್ರೋಲ್ ಮತ್ತು ಇತರ ಕೆಲವು ಮಾಧ್ಯಮ ಕಂಪನಿ ಗಳು ಇವೆ. ಅವು ಸರ್ಕಾರ ಹಾಗೂ ಬಲಪಂಥದ ಪರ ಇರುವುದು ಸ್ಪಷ್ಟ. ರಿಲಯನ್ಸ್‌ ಕಂಪನಿಯು ಎನ್‌ಡಿಟಿವಿ ಕಡೆಯಿಂದ ಹಣ ವಾಪಸ್ ಕೇಳದೆ, ಬಿಜೆಪಿಯನ್ನು ಟೀಕಿಸುತ್ತ, ವಿರೋಧ ಪಕ್ಷಗಳ ಬಗ್ಗೆ ಮೃದು ಧೋರಣೆ ಅನುಸರಿಸಲು ಪ್ರಣಯ್ ಅವರನ್ನು ಮುಕ್ತವಾಗಿ ಬಿಡುತ್ತದೆ ಎಂದಾದರೆ ಅದು ಶಕ್ತಿಶಾಲಿ ಕಾರ್ಪೊರೇಟ್ ಸಂಸ್ಥೆಯೊಂದರ ದೀರ್ಘಾವಧಿಯ ಜಾಣ ಕಾರ್ಯತಂತ್ರ ಎನ್ನಬೇಕಾಗುತ್ತದೆ. ವಿರೋಧ ಪಕ್ಷವು ಮುಂದೊಂದು ದಿನ ಅಧಿಕಾರ ಹಿಡಿಯುವ ಕಾಲಕ್ಕಾಗಿ ಮಾಡಿಕೊಳ್ಳುವ ವಿಮೆ ಇದ್ದಂತೆ ಅದು. ದೇಶದ ಬೃಹತ್ ಕಂಪನಿಗಳು ಒಂದಕ್ಕಿಂತ ಹೆಚ್ಚು ಕುದುರೆಗಳ ಮೇಲೆ ಜೂಜು ಕಟ್ಟುತ್ತವೆ. ಅಂತಿಮವಾಗಿ, ಅವುಗಳ ನಿಷ್ಠೆ ಇರುವುದು ತಮ್ಮ ಸಾಮ್ರಾಜ್ಯದ ಮೇಲೆಯೇ ವಿನಾ ಅಧಿಕಾರದಲ್ಲಿರುವ ವ್ಯಕ್ತಿ ಅಥವಾ ಪಕ್ಷಕ್ಕೆ ಅಲ್ಲ.

ಗೌತಮ್ ಅದಾನಿ ಅವರು ನೇಮಿಸುವ ಆಡಳಿತ ಮಂಡಳಿಯು ಆಡಳಿತ ಪಕ್ಷಕ್ಕೆ ಅನುಗುಣವಾಗಿ ಕೆಲಸ ಮಾಡಲಿದೆಯೇ ಅಥವಾ ನಿಷ್ಪಕ್ಷಪಾತ ನಿಲುವು ತಾಳು ವುದೇ? ಕಾಲವೇ ಇದಕ್ಕೆ ಉತ್ತರ ಹೇಳುತ್ತದೆ. ಮುಕ್ತ ಮಾಧ್ಯಮವು ಅಧಿಕಾರದಲ್ಲಿ ಇರುವವರನ್ನೂ ವಿರೋಧ ಪಕ್ಷದಲ್ಲಿ ಇರುವವರನ್ನೂ ಕಾಯುತ್ತದೆ. ಎನ್‌ಡಿಟಿವಿ ವಿದ್ಯಮಾನದಲ್ಲಿ ಹಲವು ಪ್ರಶ್ನೆಗಳು ಇವೆ. ಪತ್ರಿಕಾ
ಸ್ವಾತಂತ್ರ್ಯವನ್ನು ಎತ್ತಿಹಿಡಿಯುವ ಉತ್ಸಾಹದಿಂದ ಮಾಧ್ಯಮ ಕಂಪನಿ ಆರಂಭಿಸುವವರು ಅದು ಆರ್ಥಿಕ ವಾಗಿ ಕುಸಿಯದಂತೆ ಹಾಗೂ ಬೇರೊಬ್ಬರ ಕೈವಶ ಆಗ ದಂತೆ ಹೇಗೆ ನೋಡಿಕೊಳ್ಳುತ್ತಾರೆ? ಟಿ.ವಿ., ಇಂಟರ್ನೆಟ್‌ ಹಾಗೂ ಮುದ್ರಣ ಕ್ಷೇತ್ರದಲ್ಲಿ ಹಲವು ಸಂಸ್ಥೆಗಳು ಹುಟ್ಟಿಕೊಂಡಿವೆ. ಕೆಲವನ್ನು ಹೊರತುಪಡಿಸಿದರೆ ಹೆಚ್ಚಿನವು ಅಧಿಕಾರದಲ್ಲಿ ಇರುವವರನ್ನು ಹೊಗಳುತ್ತಿರುತ್ತವೆ. ಅಧಿಕಾರ ಕೈಬದಲಾದಾಗ ಇವೂ ತಮ್ಮ ಸೈದ್ಧಾಂತಿಕ ನಿಲುವು ಬದಲಿಸುತ್ತವೆ. ಇವು ನಿಷ್ಪಕ್ಷಪಾತ ಮಾಧ್ಯಮ ಸಂಸ್ಥೆಗಳು ಹಾಗೂ ವ್ಯಕ್ತಿಗಳಿಗೆ ದೊಡ್ಡ ಅಪಾಯ.

ಕೃತಘ್ನರ ಜಗತ್ತಿನಲ್ಲಿ ಬಾಳಲು ಧೈರ್ಯ ಹಾಗೂ ದೇಶಭಕ್ತಿ ಮಾತ್ರವೇ ಸಾಕಾಗದು. ಯಾವುದೇ ಕಂಪನಿ ಯಂತೆ ಮಾಧ್ಯಮ ಸಂಸ್ಥೆ ಕೂಡ ತನ್ನ ಹಣಕಾಸಿನ ಸ್ಥಿತಿ ಯನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು. ಅನ್ಯಾಯದ ವಿರುದ್ಧ ಧೈರ್ಯವಾಗಿ ಮಾತನಾಡುವ ಮಾಧ್ಯಮ ಸಂಸ್ಥೆಯು ಇತರ ಸಂಸ್ಥೆಗಳಿಗೆ ಇರದ ಅಪಾಯಗಳನ್ನು ಎದುರಿಸಬೇಕಾಗು ತ್ತದೆ. ಇಂತಹ ಸಂಸ್ಥೆಗಳು ಕಿರುಕುಳ, ಹಿಂಸೆ, ಸರ್ಕಾರಿ ಜಾಹೀರಾತು ಸ್ಥಗಿತದಂತಹ ಅಪಾಯಗಳನ್ನು ಎದುರಿಸು ತ್ತಿರುತ್ತವೆ.

ಮಾಧ್ಯಮ ಸಂಸ್ಥೆಗಳಿಗೆ ಇರುವ ಮುಖ್ಯ ಆದಾಯ ಮೂಲ ಎರಡು– ಜಾಹೀರಾತುಗಳು ಹಾಗೂ ಚಂದಾ ದಾರರು ಕೊಡುವ ಹಣ. ತೀವ್ರ ಸ್ಪರ್ಧೆಯನ್ನು ಕಾಣುವ ಯಾವುದೇ ಉದ್ಯಮ ಕ್ಷೇತ್ರದಲ್ಲಿರುವಂತೆ ಇಲ್ಲಿಯೂ ಸವಾಲುಗಳಿವೆ. ವಸ್ತುನಿಷ್ಠ ವರದಿಗಾರಿಕೆಗಾಗಿ ವಿಶ್ವಾ ಸಾರ್ಹ ಬ್ರ್ಯಾಂಡ್‌ ಕಟ್ಟುವುದು, ವರದಿಗಾರಿಕೆಯಲ್ಲಿ ಅತ್ಯುತ್ತಮ ಮಟ್ಟ ತಲುಪುವುದು, ಹೊಸ ತಂತ್ರಜ್ಞಾನ
ವನ್ನು ಅಳವಡಿಸಿಕೊಳ್ಳುವುದು, ಹೊಸತನವನ್ನು ನಿರಂತರವಾಗಿ ಅರಸುತ್ತಿರುವುದು ಯಶಸ್ಸಿಗೆ ಮೆಟ್ಟಿಲುಗಳು. ಇವೆಲ್ಲ ಸುಲಭದ ಕೆಲಸವಲ್ಲ. ಆಡಳಿತದಲ್ಲಿ ಇರುವವರನ್ನು ಮೆಚ್ಚಿಸಲು ಹೆಚ್ಚಿನವರು ಪ್ರಯತ್ನಿಸುತ್ತಿರುವ ಭಾರತದ ಟಿ.ವಿ. ಉದ್ಯಮ ಕ್ಷೇತ್ರದಲ್ಲಿ, ನಿರ್ಭೀತ ವರದಿಗಾರಿಕೆಯ ಮೂಲಕ ವಿಶ್ವಾಸಾರ್ಹತೆ ಗಳಿಸುವುದು ಹಾಗೂ ಪಕ್ಷಪಾತ ಧೋರಣೆಯಿಂದ ದೂರವಿರುವುದು ವೀಕ್ಷಕರನ್ನು, ಓದುಗರನ್ನು ಮತ್ತು ಹೆಚ್ಚಿನ ಆದಾಯವನ್ನು ಗಳಿಸಲು ಇರುವ ಮಾರ್ಗ. ತಲ್ಲಣಗಳಿಂದ ಕೂಡಿದ್ದ ಡೊನಾಲ್ಡ್‌ ಟ್ರಂಪ್ ಆಡಳಿತಾವಧಿಯಲ್ಲಿನ ನಿರ್ಭೀತ ವರದಿಗಾರಿಕೆಯ ಮೂಲಕ ಲಾಭದ ಹಳಿಗೆ ಬಂದ ‘ನ್ಯೂಯಾರ್ಕ್‌ ಟೈಮ್ಸ್‌’ನ ಯಶಸ್ಸು ಹಾಗೂ ಭಾರತದ ಕೆಲವು ಸಣ್ಣ ಮಾಧ್ಯಮ ಸಂಸ್ಥೆಗಳು ಕಂಡುಕೊಂಡಿರುವ ಯಶಸ್ಸು ಇಲ್ಲಿ ಒಂದು ಉದಾಹರಣೆ ಆಗಬಹುದು.

ಇಲ್ಲಿ ಹಲವು ಸವಾಲುಗಳೂ ಇವೆ. ಆದರೆ, ಮಾಧ್ಯಮಗಳ ಮೂಲಕ ಸತ್ಯವನ್ನು ಹೇಳುವ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿರುವವರು ಸಮಾಜದಿಂದ ಎಲ್ಲ ಬಗೆಯ ಗೌರವಗಳಿಗೆ ಅರ್ಹರು. ಏಕೆಂದರೆ ಅವರು ಕಾಪಾಡಲು ಮುಂದಾಗುವುದು ಸಮಾಜವನ್ನೇ. ನಿಷ್ಪಕ್ಷ ಪಾತ ಪತ್ರಿಕಾವೃತ್ತಿಗೆ ಇರುವ ಬೆಲೆಕಟ್ಟಲಾಗದ ಮೌಲ್ಯದ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಸುಲಭದ ಕೆಲಸವಲ್ಲ. ಸುಳ್ಳು ಸುದ್ದಿಗಳ ಅಪಾಯ, ಸತ್ಯ ಹಾಗೂ ಸುಳ್ಳನ್ನು ಬೇರೆ ಮಾಡಿ ನೋಡಬೇಕಿರುವ ಅಗತ್ಯದ ಬಗ್ಗೆ ಅರಿವು ಮೂಡಿಸುವುದು ಕೂಡ ಸುಲಭವಲ್ಲ. ‘ನಿಷ್ಠೆ ಯಾವತ್ತಿಗೂ ಇರಬೇಕಾದುದು ದೇಶಕ್ಕೆ. ಸರ್ಕಾರಕ್ಕೆ ನಿಷ್ಠೆ ತೋರಬೇಕಿರುವುದು ಅದು ಅರ್ಹವಾಗಿದ್ದಾಗ ಮಾತ್ರ’ ಎಂದು ಮಾರ್ಕ್‌ ಟ್ವೇನ್‌ ಹೇಳಿದ್ದ ಮಾತುಗಳು ನಮಗೆ ಪಾಠವಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT