ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ದೆಹಲಿಯ ನವೆಂಬರ್ ವಾಯುಮಾಲಿನ್ಯ

ಕೂಳೆ ಸುಡುವ ಪರಿಪಾಟದ ಹಿಂದಿನ ರಾಜಕಾರಣ ನಿಲ್ಲುವುದೆಂದು?
Last Updated 2 ನವೆಂಬರ್ 2022, 19:45 IST
ಅಕ್ಷರ ಗಾತ್ರ

ತೀವ್ರ ಸ್ವರೂಪದ ವಾಯುಮಾಲಿನ್ಯಕ್ಕೆ ಹೆಸರಾದ ದೇಶದ ರಾಜಧಾನಿ ದೆಹಲಿಯ ನಿವಾಸಿಗಳಿಗೆ ನವೆಂಬರ್ ತಿಂಗಳು ಉಸಿರು ಕಟ್ಟುವ ಸಮಯ. ವಾಯುಮಾಲಿನ್ಯದ ವಾಡಿಕೆಯ ಮೂಲಗಳ ಜೊತೆಗೆ, ಅದೇ ಸಮಯದಲ್ಲಿ ಪಂಜಾಬ್, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದಲ್ಲಿ ವ್ಯಾಪಕವಾಗಿರುವ ಭತ್ತದ ‘ಕೂಳೆ ಸುಡುವ’ ಪರಿಪಾಟವು ದೆಹಲಿಯ ಗಾಳಿಯ ಗುಣಮಟ್ಟವನ್ನು ಅಧೋಗತಿಗೆ ಇಳಿಸಿ ಅತ್ಯಂತ ಅಪಾಯಕಾರಿಯನ್ನಾಗಿ ಮಾಡುತ್ತದೆ. ಈ ಕಾರಣದಿಂದಲೇ ಮೂರು ವರ್ಷಗಳ ಹಿಂದೆ ನವೆಂಬರ್ ತಿಂಗಳಿನಲ್ಲಿ, ಅಂದಿನ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅರುಣ್ ಮಿಶ್ರಾ ‘ದೆಹಲಿಯ ಪರಿಸ್ಥಿತಿ ನರಕಕ್ಕಿಂತಲೂ ಕೆಟ್ಟದಾಗಿದೆ’ ಎಂದು ಟೀಕಿಸಿದ್ದರು. ಹಾಗಾದರೆ ಈ ವರ್ಷದ ನವೆಂಬರ್ ಪರಿಸ್ಥಿತಿ ಹೇಗಿರಲಿದೆ? ಅಂತಹ ಮುನ್ಸೂಚನೆಯನ್ನು ಕಂಡುಕೊಳ್ಳಲೆಂದೇ ಸೆಪ್ಟೆಂಬರ್ 30ರಂದು, ಕೇಂದ್ರ ಪರಿಸರ, ಅರಣ್ಯ ಮತ್ತು ವಾಯುಗುಣ ಬದಲಾವಣೆ ಸಚಿವಾಲಯದಲ್ಲಿ ಸಂಬಂಧಿತ ರಾಜ್ಯ ಸರ್ಕಾರಗಳ ಸಭೆ ನಡೆದು, ಈ ಸಮಸ್ಯೆಯನ್ನು ನಿಯಂತ್ರಿಸಿ, ಪರಿಹರಿಸಲು ಇದುವರೆಗೂ ಕೈಗೊಂಡಿರುವ ವಿವಿಧ ಕ್ರಮಗಳ ವಿಸ್ತೃತ ಪರಿಶೀಲನೆ ನಡೆಯಿತು.

ಪ್ರತಿವರ್ಷ ಸೆಪ್ಟೆಂಬರ್- ಅಕ್ಟೋಬರ್‌ ಅವಧಿಯಲ್ಲಿ ಪಂಜಾಬ್, ಹರಿಯಾಣ, ಉತ್ತರಪ್ರದೇಶ ಮತ್ತು ರಾಜಸ್ಥಾನದ ರೈತರು ಭತ್ತದ ಬೆಳೆಯ ಕಟಾವಿನ ನಂತರ, ಮುಂದಿನ ಬೆಳೆಯ ಸಿದ್ಧತೆಯಾಗಿ, ತಮ್ಮ ಭೂಮಿಯಲ್ಲಿ ಉಳಿದಿರುವ ಕೂಳೆಗಳಿಗೆ ಬೆಂಕಿ ಹಚ್ಚಿ ಸುಡುತ್ತಾರೆ. ಈ ಎರಡು ತಿಂಗಳ ನಡುವಿನ ಸುಮಾರು ಮೂರು ವಾರಗಳ ಅವಧಿಯಲ್ಲಿ ಈ ನಾಲ್ಕೂ ರಾಜ್ಯಗಳಿಂದ ಅಂದಾಜು ಮೂರೂವರೆ ಕೋಟಿ ಟನ್‍ಗಳಷ್ಟು ಕೂಳೆಯನ್ನು ಸುಡಲಾಗುತ್ತದೆ. ಅದರಿಂದ ಹೊರಬರುವ ಹೊಗೆ, ದೂಳು, ರಾಸಾಯನಿಕ ವಸ್ತುಗಳು, ವಿಷಕಾರಿ ಅನಿಲಗಳು ದೆಹಲಿಯತ್ತ ಚಲಿಸಿ, ನಗರವನ್ನು ಆವರಿಸಿ, ದಟ್ಟವಾದ ಹೊಂಜಿಗೆ ಕಾರಣವಾಗಿ ತೀವ್ರ ಸ್ವರೂಪದ ಉಸಿರಾಟದ ತೊಂದರೆಗಳನ್ನು ಉಂಟುಮಾಡುತ್ತವೆ. ಕೂಳೆಗಳಿಗೆ ಬೆಂಕಿ ಹಾಕುವುದನ್ನು ಕಾನೂನುಬಾಹಿರ ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು 2015ರಲ್ಲೇ ನಿಷೇಧಿಸಿದ್ದರೂ ಕಾನೂನನ್ನು ಯಶಸ್ವಿಯಾಗಿ ಜಾರಿಗೊಳಿಸುವುದು ಸಾಧ್ಯವಾಗಿಲ್ಲ.

ಭತ್ತದ ಕಟಾವಿನ ನಂತರ 15ರಿಂದ 25 ಸೆಂ.ಮೀ.
ಎತ್ತರದ ಕೂಳೆಗಳು ಭೂಮಿಯಲ್ಲಿಯೇ ಉಳಿಯುತ್ತವೆ. ಅವುಗಳನ್ನು ಸಂಪೂರ್ಣವಾಗಿ ತೆಗೆಯಲು ಎಕರೆ
ಯೊಂದಕ್ಕೆ ₹ 3,000 ವೆಚ್ಚವಾಗುತ್ತದೆ. ಅದಕ್ಕಿಂತ ಸುಡುವುದೇ ಅಗ್ಗವೆಂಬುದು ರೈತರ ಅಭಿಪ್ರಾಯ. ಹೀಗೆ ಕೂಳೆಗಳನ್ನು ಸುಡುವುದರಿಂದ ನೆಲದಲ್ಲಿನ ಉಪಯುಕ್ತ ಸೂಕ್ಷ್ಮಜೀವಿಗಳು ಸಾಯುವುದರೊಡನೆ, ಸುಟ್ಟ ಪ್ರತೀ ಟನ್ ಕೂಳೆಗೆ 5.5 ಕಿ.ಗ್ರಾಂ ನೈಟ್ರೋಜನ್, 2.5 ಕಿ.ಗ್ರಾಂ ಪೊಟ್ಯಾಷಿಯಂ, 2.13 ಕಿ.ಗ್ರಾಂ ಫಾಸ್ಪರಸ್ ಮತ್ತು 1 ಕಿ.ಗ್ರಾಂನಷ್ಟು ಸಲ್ಫರ್ ಅನ್ನು ಮಣ್ಣು ಕಳೆದುಕೊಳ್ಳುತ್ತದೆ ಎಂಬುದನ್ನು ಕೃಷಿ ವಿಜ್ಞಾನಿಗಳು ಹೇಳುತ್ತ ಬಂದಿದ್ದರೂ ರೈತರು ಅತ್ತ ಗಮನ ಕೊಟ್ಟಿಲ್ಲ.

2018ರಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ಯಾಂತ್ರೀಕೃತ ಕೃಷಿ ಪ್ರೋತ್ಸಾಹ ಯೋಜನೆಯಡಿಯಲ್ಲಿ, ಏಕಕಾಲದಲ್ಲಿ ಭತ್ತದ ಕೂಳೆಯನ್ನು ಕತ್ತರಿಸಿ, ಗೋಧಿಯ ಬೀಜವನ್ನು ಬಿತ್ತಿ, ಅದರ ಮೇಲೆ ಭತ್ತದ ಹುಲ್ಲನ್ನು ಹರಡುವ, ವಿವಿಧೋದ್ದೇಶದ ‘ಹ್ಯಾಪಿಸೀಡರ್’ ಯಂತ್ರವನ್ನು ಬಳಕೆಗೆ ತರಲಾಯಿತು. ಈ ಯಂತ್ರ ಪ್ರಾರಂಭದಲ್ಲಿ ಬಹಳಷ್ಟು ಜನಪ್ರಿಯವಾಯಿತು. ಆನಂತರ ಇದೇ ಉದ್ದೇಶಕ್ಕಾಗಿ ಹಲವಾರು ಸುಧಾರಿತ ಯಂತ್ರಗಳೂ ಬಂದವು. ಈ ಯಂತ್ರಗಳನ್ನು ವ್ಯಾಪಕವಾಗಿ ಬಳಕೆಗೆ ತರಲು ಶೇ 50ರಿಂದ ಶೇ 80ರವರೆಗೂ ಸಬ್ಸಿಡಿ ನೀಡುವ ಯೋಜನೆ ಜಾರಿಗೆ ಬಂದಿತು. ಆ ಯಂತ್ರಗಳನ್ನು ಕೊಳ್ಳಲಾರದ ಸಣ್ಣ ರೈತರಿಗೆ ಬಾಡಿಗೆಗೆ ನೀಡುವ ವ್ಯವಸ್ಥೆಯೂ ಪ್ರಾರಂಭವಾಯಿತು. ಆದರೆ ಯಾವ ವೆಚ್ಚವೂ ಇಲ್ಲದೆ ಕೂಳೆಗಳನ್ನು ಸುಡುವುದೇ ಸುಲಭವಾದ್ದರಿಂದ ಈ ವಿವಿಧ ಯಂತ್ರಗಳು ನಿರೀಕ್ಷಿತ ಮಟ್ಟದಲ್ಲಿ ಬಳಕೆಗೆ ಬಂದಿಲ್ಲ.

2020ರಲ್ಲಿ ದೆಹಲಿಯ ಇಂಡಿಯನ್ ಅಗ್ರಿಕಲ್ಚರಲ್
ರಿಸರ್ಚ್ ಇನ್‌ಸ್ಟಿಟ್ಯೂಟ್ (ಐಎಆರ್‌ಐ), ಎಂಟು ಕಿಣ್ವಕಾರಕ ಜೀವಿಗಳನ್ನು ಒಳಗೊಂಡ ‘ಪೂಸಾ ಕ್ಯಾಪ್ಸೂಲ್’ ಎಂಬ ಜೈವಿಕ ವಿಘಟನಕಾರಿಯನ್ನು (ಬಯೊ ಡೀಕಂಪೋಸರ್) ರೂಪಿಸಿತು. ಈ ಕ್ಯಾಪ್ಸೂಲ್ ಅಥವಾ ಪುಡಿಯನ್ನು ನೀರಿನಲ್ಲಿ ಬೆರೆಸಿ ಕೂಳೆಗಳ ಮೇಲೆ ಸಿಂಪಡಿಸಿದ ಕೆಲವೇ ದಿನಗಳಲ್ಲಿ ಅವು ವಿಘಟನೆಗೊಂಡು, ಮೆದುವಾದ ಹಸಿರು ಗೊಬ್ಬರವಾಗಿ ಮಣ್ಣಿನಲ್ಲಿ ಬೆರೆತು, ಭೂಮಿಯ ಫಲವತ್ತತೆಯನ್ನು ಹೆಚ್ಚಿಸುತ್ತವೆ. ಈ ಜೈವಿಕ ವಿಘಟನಕಾರಿಯನ್ನು ಉತ್ಪಾದಿಸುತ್ತಿರುವ ಯುನೈಟೆಡ್ ಫಾಸ್ಫರಸ್ ಕಂಪನಿ (ಯುಪಿಎಲ್) ಅದನ್ನು ರೈತರಿಗೆ ಉಚಿತವಾಗಿ ವಿತರಿಸುತ್ತಿದೆ.

ಕೂಳೆ ಸುಡುವ ಸಮಸ್ಯೆಗೆ ಉತ್ತಮ ಪರಿಹಾರ ಒದಗಿಸುವ ಸಾಮರ್ಥ್ಯವಿರುವ ಜೈವಿಕ ವಿಘಟನಕಾರಿಯ ಬಳಕೆಯು ಮೂರು ವರ್ಷಗಳಿಂದ ಭರದಿಂದ ಸಾಗಿದೆ. ಸೆಪ್ಟೆಂಬರ್ 30ರ ಸಭೆಯಲ್ಲಿ ಬೆಳಕಿಗೆ ಬಂದ ಅಂಕಿಅಂಶಗಳಂತೆ 2021ರ ಅಕ್ಟೋಬರ್- ನವೆಂಬರ್‌ನಲ್ಲಿ, ಪಂಜಾಬ್ ಮತ್ತು ಹರಿಯಾಣದಲ್ಲಿ 4.2 ಲಕ್ಷ ಎಕರೆಗಳಲ್ಲಿದ್ದ ಕೂಳೆಗಳ ಮೇಲೆ ಈ ಜೈವಿಕ ವಿಘಟನಕಾರಿಯನ್ನು ಸಿಂಪಡಿಸಲಾಯಿತು. ಇದರಲ್ಲಿ 3.8 ಲಕ್ಷ ಎಕರೆಗಳಲ್ಲಿ ಈ ಪ್ರಯೋಗ ಯಶಸ್ವಿಯಾದುದನ್ನು ಐಎಆರ್‌ಐ ಮತ್ತು ಯುಪಿಎಲ್ ದಾಖಲೆಗಳು ತಿಳಿಸುತ್ತವೆ. ಉಳಿದ 0.4 ಲಕ್ಷ ಎಕರೆಗಳಲ್ಲಿ ಪ್ರಯೋಗ ಹಲವಾರು ಕಾರಣಗಳಿಂದ ನಿರೀಕ್ಷಿತ ಫಲಿತಾಂಶ ನೀಡಲಿಲ್ಲ. 3.8 ಲಕ್ಷ ಎಕರೆಗಳಲ್ಲಿದ್ದ ಕೂಳೆಗಳಿಗೆ ಬೆಂಕಿ ಹಾಕದೇ ಪೂಸಾ ಕ್ಯಾಪ್ಸೂಲ್ ದ್ರಾವಣವನ್ನು ಸಿಂಪಡಿಸಿದ್ದ
ರಿಂದ, 10 ಲಕ್ಷ ಟನ್‌ನಷ್ಟು ಕಾರ್ಬನ್ ಡೈ ಆಕ್ಸೈಡ್, 1.41 ಲಕ್ಷ ಟನ್‍ಗಳಷ್ಟು ಬೂದಿ, 42,697 ಟನ್‍ಗಳಷ್ಟು ಕಾರ್ಬನ್ ಮಾನಾಕ್ಸೈಡ್, 2,135 ಟನ್‍ಗಳಷ್ಟು ಕಣ ಮಾಲಿನ್ಯಕಾರಕಗಳ (ಪಾರ್ಟಿಕ್ಯುಲೇಟ್ ಪೊಲ್ಯೂಟೆಂಟ್ಸ್) ಉತ್ಸರ್ಜನೆ ಕಡಿಮೆಯಾಗಿರುವ ಅಂದಾಜಿದೆ.

ಈ ಎರಡು ರಾಜ್ಯಗಳಲ್ಲಿ ಈ ಅವಧಿಯಲ್ಲಿ ಯೂರಿಯಾದ ಬಳಕೆ ಶೇ 20ರಷ್ಟು ಕಡಿಮೆಯಾಗಿದೆ. 2022ರಲ್ಲಿ 20 ಲಕ್ಷ ಎಕರೆಗಳಲ್ಲಿ ಜೈವಿಕ ವಿಘಟನಕಾರಿಯನ್ನು ಸಿಂಪಡಿಸುವ ಗುರಿಯನ್ನು ಕೇಂದ್ರ ಸರ್ಕಾರ ನಿಗದಿಪಡಿಸಿತ್ತು. ಆದರೆ ಪಂಜಾಬ್ ಸರ್ಕಾರ 5.75 ಲಕ್ಷ ಎಕರೆಗಳಲ್ಲಿನ ಕೂಳೆಗೆ ಈ ಕ್ರಮವನ್ನು ವಿಸ್ತರಿಸು
ವಲ್ಲಿ ವಿಫಲವಾಗಿದ್ದು ತೀವ್ರ ಟೀಕೆಗೆ ಒಳಗಾಗಿದೆ. ಇದರಿಂದಾಗುವ ತೊಂದರೆಯನ್ನು ತಪ್ಪಿಸಲು ರೈತರಿಗೆ ಪ್ರೋತ್ಸಾಹಕ ರೂಪದಲ್ಲಿ ಹಣವನ್ನು ನೀಡಿ, ಕೂಳೆ ಸುಡದಂತೆ ಮಾಡಬೇಕೆಂಬ ಆಮ್ ಆದ್ಮಿ ಪಕ್ಷದ ಸಲಹೆಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ.

ರೈತರ ಭೂಮಿಯಲ್ಲಿರುವ ಕೂಳೆಯನ್ನು ಇಂಧನದ ಬಿಲ್ಲೆಗಳಾಗಿ ಪರಿವರ್ತಿಸುವ ತಂತ್ರಜ್ಞಾನ ಇಂದು ಲಭ್ಯ
ವಿದೆ. ಇಂಧನದ ಬಿಲ್ಲೆಗಳನ್ನು ಉತ್ಪಾದಿಸುವ ಉದ್ಯಮಿಗಳು ರೈತರೊಡನೆ ಕೂಳೆಯ ಸರಬರಾಜಿಗೆ ಒಪ್ಪಂದ ಮಾಡಿಕೊಂಡಲ್ಲಿ, ಅಂತಹ ಕಂಪನಿಗಳಿಗೆ ಉತ್ಪಾದನಾ ಸ್ಥಾವರವನ್ನು ಸ್ಥಾಪಿಸಲು ₹ 70 ಲಕ್ಷದಿಂದ 1.4 ಕೋಟಿವರೆಗಿನ ಸಹಾಯಧನವನ್ನು ಸರ್ಕಾರ ಪ್ರಕಟಿಸಿದೆ.

ಈ ಎಲ್ಲ ಕ್ರಮಗಳ ಫಲವಾಗಿ ಈ ವರ್ಷದ ನವೆಂಬರ್ ತಿಂಗಳು ದೆಹಲಿಯ ನಿವಾಸಿಗಳಿಗೆ ಹೆಚ್ಚು ಸಹ್ಯವಾಗಬಲ್ಲದೇ? ಅಂತಹ ಆಶಯ ಸಹಜವಾದರೂ ಅದರ ಸಾಧ್ಯತೆ ಬಹು ಕಡಿಮೆ. ದೆಹಲಿಯ ವಾಯುಮಾಲಿನ್ಯಕ್ಕೆ ಹಲವಾರು ಕಾರಣಗಳಿವೆ. ಆದರೆ ನವೆಂಬರ್ ತಿಂಗಳ ಮಧ್ಯಭಾಗದ ವೇಳೆಗೆ ಪರಿಸ್ಥಿತಿ ತೀರಾ ವಿಕೋಪಕ್ಕೆ ಹೋಗಲು ಕಾರಣ ಕೂಳೆ ಸುಡುವ ಅಭ್ಯಾಸ. ಆ ಸಮಯದಲ್ಲಿ ದೆಹಲಿಯ ವಾಯುಮಂಡಲದಲ್ಲಿರುವ ಒಟ್ಟು ಕಣ ಮಾಲಿನ್ಯಕಾರಕಗಳ ಸುಮಾರು ಅರ್ಧಭಾಗ ಕೂಳೆ ಸುಡುವುದರಿಂದ ಬರುತ್ತದೆ. ಅದನ್ನು ಕಡಿಮೆ ಮಾಡುವುದು ಸರ್ಕಾರಗಳ ಮುಂದಿರುವ ಸವಾಲು. ಈ ಪರಿಸ್ಥಿತಿಗೆ ಕಾರಣವಾಗಿರುವ ನಾಲ್ಕೂ ರಾಜ್ಯಗಳು ರಾಜಕಾರಣ ಮಾಡುವುದನ್ನು ನಿಲ್ಲಿಸಿ, ಪರಸ್ಪರ ದೋಷಾರೋಪವನ್ನು ಕೈಬಿಟ್ಟು, ಸಹಕರಿಸಿ ಶ್ರಮಿಸಿದರೆ, ಮುಂದಿನ ನಾಲ್ಕೈದು ವರ್ಷಗಳಲ್ಲಿ ದೆಹಲಿಯ ನಿವಾಸಿಗಳಿಗೆ ನವೆಂಬರ್ ತಿಂಗಳು ನರಕವಾಗುವುದನ್ನು ತಪ್ಪಿಸಬಹುದು ಎಂಬುದು ತಜ್ಞರ ಖಚಿತ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT