ಭಾನುವಾರ, ಮಾರ್ಚ್ 26, 2023
25 °C
ನಮ್ಮ ಭೂಪಾರಂಪರಿಕ ತಾಣಗಳನ್ನು ರಕ್ಷಿಸಬೇಕಾದ ತುರ್ತು ಅಗತ್ಯ ಇದೆ

ಭೂರಮೆಯ ಚಿತ್ತಾರ- ರಕ್ಷಿಸೋಣ ಬನ್ನಿ- ವಿಶ್ಲೇಷಣೆ ಲೇಖನ

ಡಾ. ಬಿ.ಸಿ.ಪ್ರಭಾಕರ್ ಡಾ. ಕೆ.ಎನ್.ರಾಧಿಕಾ Updated:

ಅಕ್ಷರ ಗಾತ್ರ : | |

Prajavani

ಇಂದು ಭೂದಿನ. ಗಾಳಿ, ನೀರು ಮತ್ತು ಮಣ್ಣಿನ ಮಹತ್ವವನ್ನು ಅರಿಯಬೇಕಾದ ದಿನ. ಮನುಷ್ಯನ ಚಿಂತನೆಗಳಿಗೆ, ಅನೇಕ ಪ್ರೇರಣೆಗಳಿಗೆ ಮತ್ತು ಕಲೆಯ ಆಸ್ವಾದನೆಗೆ ನಿಸರ್ಗ ಶಿಲಾ ವೈವಿಧ್ಯಗಳು ಕಾರಣವಾಗಿವೆ. ಹಾಗೆ ನೋಡಿದರೆ ಆದಿಮಾನವನಿಂದ ಆಧುನಿಕ ಮಾನವನವರೆಗೆ ಅವನು ವಿಕಾಸಗೊಂಡಿರುವುದಕ್ಕೆ ಅಸಂಖ್ಯ ಭೂಕ್ರಿಯೆಗಳು ಮತ್ತು ಭೂಪ್ರದೇಶಗಳೇ ಕಾರಣ. ಈ ಎಲ್ಲಾ ಭೂಪ್ರದೇಶಗಳನ್ನು ಕಾಪಾಡಿಕೊಳ್ಳುವ ಬಗ್ಗೆ ಇಂದು ಜಾಗೃತಿ ಮೂಡಿದೆ.

ಯುನೆಸ್ಕೊ ಅಡಿಯಲ್ಲಿ ಈವರೆಗೆ ಒಟ್ಟು 44 ಸದಸ್ಯ ದೇಶಗಳಲ್ಲಿ 161 ಭೂವನಗಳನ್ನು ಗುರುತಿಸಿ ಅಭಿವೃದ್ಧಿ
ಪಡಿಸಲಾಗಿದ್ದು, ಅವು ಪ್ರವಾಸಿಗರ ಆಕರ್ಷಣೆಯ ಕೇಂದ್ರಗಳಾಗಿವೆ.

ಭಾರತದಲ್ಲಿ ಹಲವಾರು ಭೂಪಾರಂಪರಿಕ ತಾಣಗಳನ್ನು ಗುರುತಿಸಲಾಗಿದ್ದರೂ, ಒಂದೇ ಒಂದು ಭೂವನವನ್ನೂ ಗುರುತಿಸಿಲ್ಲ. ಕೊರಿಯಾ, ಜಪಾನ್‌ನಂತಹ ಸಣ್ಣ ದೇಶಗಳೂ ತಮ್ಮ ಭೂವನಗಳನ್ನು ಅಭಿವೃದ್ಧಿಪಡಿಸಿ ಪ್ರವಾಸಿ ಆಕರ್ಷಣೆಯ ತಾಣಗಳನ್ನಾಗಿಸಿವೆ. ನಮ್ಮಲ್ಲಿ ಭೂಸರ್ವೇಕ್ಷಣಾ ಇಲಾಖೆಯ ಪ್ರಯತ್ನದಿಂದ ಇದುವರೆಗೆ ಕೇವಲ 34 ಭೂಪಾರಂಪರಿಕ ಜಾಗಗಳನ್ನು ಗುರುತಿಸ
ಲಾಗಿದ್ದರೂ ಅವುಗಳ ನಿರ್ವಹಣೆಗೆ ಸರ್ಕಾರಗಳು ಸೂಕ್ತ ಕ್ರಮ ಕೈಗೊಂಡಿಲ್ಲ. ದೇಶದ ಭೂವೈಶಾಲ್ಯವನ್ನು ಗಮನಿಸಿದಾಗ, ಇವುಗಳ ಸಂಖ್ಯೆ ಏನೇನೂ ಅಲ್ಲ ಎಂಬುದು ಸ್ಪಷ್ಟವಾಗುತ್ತದೆ.

ಕರ್ನಾಟಕದಲ್ಲಿ ಸುಮಾರು 400 ಕೋಟಿ ವರ್ಷಗಳ ಹಿಂದಿನ ಶಿಲಾ ಸಮೂಹಗಳಿಂದ ಹಿಡಿದು ಸುಮಾರು 6 ಕೋಟಿ ವರ್ಷಗಳ ಹಿಂದಷ್ಟೇ ಉಂಟಾದ ಬೆಸಾಲ್ಟ್‌ಗಳೂ ಇವೆ. ಅಷ್ಟೇ ಅಲ್ಲದೆ ವೈವಿಧ್ಯಮಯ ಶಿಲೆಗಳು, ಅವುಗಳ ಮೇಲ್ಮೈಯಲ್ಲಿ ಉಂಟಾದ ವಿಶಿಷ್ಟ ರಚನೆಗಳು, ಅನೇಕ ಬಗೆಯ ಶಿಲಾ ಚಿತ್ತಾರಗಳು ಹಾಗೂ ಜೀವ ವಿಕಸನದ ಆರಂಭದಲ್ಲಿ ಉದ್ಭವವಾದಸ್ಟ್ರೊಮ್ಯಾಟೊಲೈಟ್ ಎಂಬ ಪಳೆಯುಳಿಕೆಗಳು ಇಲ್ಲಿವೆ. ಆದರೆ ಇದುವರೆಗೆ ಕೇವಲ ನಾಲ್ಕು ತಾಣಗಳನ್ನು, ಅಂದರೆ ಲಾಲ್‌ಬಾಗಿನ ಪೆನೆನ್ಸುಲಾರ್ ನೈಸ್, ಮರಡಿ
ಹಳ್ಳಿಯ ಪಿಲ್ಲೋ ಲಾವಾಗಳು, ಸೇಂಟ್ ಮೇರಿ ದ್ವೀಪದ ಕಂಬಾಕೃತಿಯ ಬೆಸಾಲ್ಟ್ ಶಿಲೆಗಳು ಮತ್ತು ಕೆಜಿಎಫ್ ಬಳಿಯ ಪೈರೋಕ್ಲಾಸ್ಟಿಕ್ ಲಾವಾ ಶಿಲೆಗಳನ್ನು ಗುರುತಿಸಲಾಗಿದೆ.

ಈ ಹಿನ್ನೆಲೆಯಲ್ಲಿ, ಭೂಪರಂಪರೆಯ ತಾಣಗಳೆಂದು ರಾಜ್ಯದಲ್ಲಿ ಘೋಷಿಸಿ ಅಭಿವೃದ್ಧಿಪಡಿಸಬಹುದಾದ ಕೆಲವು ವಿಶಿಷ್ಟ ತಾಣಗಳನ್ನು ಹೀಗೆ ಗುರುತಿಸಬಹುದಾಗಿದೆ:

lಸಂಡೂರಿನ ಕಂಗೊಳಿಸುವ ಕಾಡುಗಳು, ಗಿರಿ ಶಿಖರಗಳು, ಸಿಹಿನೀರ ಬುಗ್ಗೆಗಳು, ನದಿಗಳು ನಯನ ಮನೋಹರವಾದವು. ಆದ್ದರಿಂದಲೇ ಈ ತಾಣವನ್ನು ‘ಬಳ್ಳಾರಿಯ ಕಾಶ್ಮೀರ’ ಎಂದು ಕರೆಯುತ್ತಾರೆ. ಸಂಡೂರಿನಿಂದ 5 ಕಿ.ಮೀ. ದೂರದಲ್ಲಿರುವ ಭೀಮನ
ಗಂಡಿ ಕಂದರದ ಮೂಲಕ ಹರಿಯುವ ಝರಿಯು ಮುಂದೆ ಸಾಗಿ ನಾರಿಹಳ್ಳವನ್ನು ಸೇರಿ ಮತ್ತೊಂದು ನಯನ ಮನೋಹರವಾದ ಕಣಿವೆ ಸೃಷ್ಟಿಯಾಗಿದೆ. ಇಲ್ಲಿ ಒಂದು ಸಣ್ಣ ಅಣೆಕಟ್ಟನ್ನು ಕೂಡಾ ನಿರ್ಮಿಸಿದ್ದು ಅದರ ಹಿನ್ನೀರಿನಲ್ಲಿ ಈ ಕಣಿವೆ ಸುಂದರವಾಗಿ ಕಾಣು
ತ್ತದೆ. ಪ್ರವಾಸಕ್ಕೆ ಮತ್ತು ಭೂವಿಜ್ಞಾನ ವಿದ್ಯಾರ್ಥಿಗಳ ಅಧ್ಯಯನಕ್ಕೆ ಇವು ಹೇಳಿ ಮಾಡಿಸಿದ ತಾಣಗಳಾಗಿವೆ. ವ್ಯಾಪಕ ಗಣಿಗಾರಿಕೆಯಲ್ಲಿ ತೊಡಗಿರುವ ಅನೇಕರಿಗೆ ಈ ಸ್ಥಳಗಳ ಮಹತ್ವದ ಅರಿವಿಲ್ಲದ ಕಾರಣ, ಅವುಗಳನ್ನು ತುರ್ತಾಗಿ ಸಂರಕ್ಷಿಸಬೇಕಾಗಿದೆ.

lರಾಮನಗರದ ಗ್ರಾನೈಟ್ ಶೃಂಗಗಳ ಬೃಹತ್ ಗಾತ್ರ, ಕಡಿಬಂಡೆಗಳು, ಗೋಲಾಕೃತಿಯ ಆಕಾರಗಳು, ಕಡಿದಾದ ಇಳಿಜಾರುಗಳು ನೋಡುಗರನ್ನು ವಿಸ್ಮಯಗೊಳಿಸುತ್ತವೆ. ಈ ಶೃಂಗಶ್ರೇಣಿಯ ಅನೇಕ ಸ್ಥಳಗಳಲ್ಲಿ ಗುಡಿ ಗೋಪುರಗಳು, ಕೋಟೆ ಕೊತ್ತಲಗಳು ಇವೆ. ಇತ್ತೀಚಿನ ವರ್ಷಗಳಲ್ಲಿ ಟ್ರೆಕ್ಕಿಂಗ್‌ಗಾಗಿಯೂ ಈ ಶಿಖರಗಳು ಆಕರ್ಷಣೆಯ ಕೇಂದ್ರಗಳಾಗಿವೆ. ರಾಮನಗರದ ಸುತ್ತಮುತ್ತ ಈ ಶಿಲಾಸಮೂಹವು ಸುಮಾರು 50 ಚದರ ಕಿ.ಮೀ.ನಷ್ಟು ವ್ಯಾಪಿಸಿದೆ. ಬೆಂಗಳೂರು– ಮೈಸೂರು ನಡುವಿನ ಪ್ರದೇಶ ಬಹಳ ವೇಗವಾಗಿ ನಗರೀಕರಣಗೊಳ್ಳುತ್ತಿದ್ದು ಅಭಿವೃದ್ಧಿಯ ಹೆಸರಲ್ಲಿ ನಿಸರ್ಗ ಸಂಪತ್ತು ನಾಶವಾಗುತ್ತಿದೆ. ಗ್ರಾನೈಟ್ ಬಂಡೆಗಳಂತೂ ಕ್ರಶರ್‌ಗಳಿಗೆ ಸಿಲುಕಿ ಪುಡಿಪುಡಿಯಾಗುತ್ತಿವೆ. ಇಂತಹ ಚಟುವಟಿಕೆಗಳಿಂದ ರಾಮನಗರದ ಶೃಂಗಗಳನ್ನು ರಕ್ಷಿಸದಿದ್ದರೆ ನಮ್ಮ ಭವ್ಯ ನಿಸರ್ಗ ಪರಂಪರೆಯನ್ನು ಕಳೆದುಕೊಳ್ಳುತ್ತೇವೆ.

ರಾಯಚೂರು ಜಿಲ್ಲೆಯ ಲಿಂಗಸುಗೂರಿನಿಂದ ತಾವರಗೇರಕ್ಕೆ ಹೋಗುವ ರಸ್ತೆಯ ಮಾರ್ಗದಲ್ಲಿ ಚಿತ್ತಾಕಾರದ ಬಂಡೆಗಳಿವೆ. ಅವು ಕೋಟ್ಯಂತರ ವರ್ಷಗಳ ಸವಕಳಿಯಿಂದ ಅನೇಕ ರೂಪಗಳನ್ನು ಪಡೆದುಕೊಂಡು ನೋಡುಗರನ್ನು ಚಕಿತಗೊಳಿಸುತ್ತವೆ. ಸುಮಾರು ಹತ್ತು ಚದರ ಕಿ.ಮೀ. ಪ್ರದೇಶದಲ್ಲಿ ಇವು ಹರಡಿವೆ. ಈ ತಾಣದ ಪ್ರಾಮುಖ್ಯತೆ ತಿಳಿಯದ ಅನೇಕ ಸ್ಥಳೀಯರು ಇವುಗಳನ್ನು ಮನೆಯ ಕಟ್ಟಡಕ್ಕೋ ರಸ್ತೆಗೆ ಜಲ್ಲಿಗಾಗಿಯೋ ಒಡೆದು ಹಾಳು ಮಾಡುತ್ತಿದ್ದಾರೆ. ಇವುಗಳನ್ನು ರಕ್ಷಿಸುವ ಕೆಲಸ ತುರ್ತಾಗಿ ಆಗಬೇಕಾಗಿದೆ.

lಸ್ಪಿನಿಫೆಕ್ಸ್ ಟೆಕ್ಸ್‌ಚರ್ ಎನ್ನುವುದು ಅತ್ಯಂತ ಪುರಾತನ ಶಿಲೆಗಳಲ್ಲಿ ಮಾತ್ರ ಕಂಡುಬರುವ ಒಂದು ರೀತಿಯ ಶಿಲಾ ವಿನ್ಯಾಸ. ಇಂತಹ ವಿಶಿಷ್ಟ ಶಿಲೆಗಳು ತುಮಕೂರು ಜಿಲ್ಲೆಯ ಬಾಣಸಂದ್ರದ ಹತ್ತಿರ ಮತ್ತು ಚಿತ್ರದುರ್ಗ ಜಿಲ್ಲೆಯ ಗಟ್ಟಿಹೊಸಹಳ್ಳಿ ಎಂಬಲ್ಲಿ ಕಂಡುಬಂದಿವೆ. ಈ ಅಮೂಲ್ಯ ಶಿಲೆಗಳ ಬಗ್ಗೆ ಅರಿವಿಲ್ಲದ ಜನರು ಅನೇಕ ಕಡೆ ಅವುಗಳನ್ನು ಒಡೆದುಹಾಕಿ ಹಾಳುಮಾಡಿದ್ದಾರೆ. ಅಳಿದುಳಿದವುಗಳನ್ನಾದರೂ ರಕ್ಷಿಸಿಕೊಳ್ಳಬೇಕಾಗಿದೆ. ಸ್ಥಳೀಯರಿಗೆ ಇವುಗಳ ಬಗ್ಗೆ ಜಾಗೃತಿ ಮೂಡಿಸುವುದೂ ಅಷ್ಟೇ ಮುಖ್ಯ.

lಭೂಮಿಯ ಮೇಲಿನ ಜೀವ ವಿಕಾಸದ ಅನೇಕ ಕುರುಹುಗಳಲ್ಲಿ ಚಿತ್ರದುರ್ಗದ ಹಸಿರುಬೆಟ್ಟ ಶ್ರೇಣಿಯಸ್ಟ್ರೊಮ್ಯಾಟೊಲೈಟ್‌ಗಳು ಅಥವಾ ಪಳೆಯುಳಿಕೆಗಳು ಸೇರಿವೆ. ಚಿತ್ರದುರ್ಗದ ಕೊಂಡ್ಲಿ ಕ್ರಾಸ್‌ನಿಂದ ಸುಮಾರು 8 ಕಿ.ಮೀ. ದೂರದಲ್ಲಿರುವ ಓಬಳಾಪುರದ ಬಳಿ ಸುಣ್ಣದಕಲ್ಲು ನಿಕ್ಷೇಪಗಳಿರುವ ಪ್ರದೇಶದಲ್ಲಿ ಇವು ಕಂಡುಬಂದಿವೆ. ಸುಮಾರು ಒಂದು ಚದರ ಕಿ.ಮೀ. ವ್ಯಾಪ್ತಿಯಲ್ಲಿ ಹರಡಿರುವ ಇವು ಸಿಲಿಕಾನ್ ಬೆರೆತ ಸುಣ್ಣದಕಲ್ಲಿನಲ್ಲಿ ಹರಡಿಕೊಂಡಿದ್ದು ವಿವಿಧ ವಿನ್ಯಾಸಗಳನ್ನು ಕಾಣಬಹುದಾಗಿದೆ. ಈಗಾಗಲೇ ಇಲ್ಲಿ ಸುಣ್ಣದ ಕಲ್ಲಿಗಾಗಿ ಗಣಿಗಾರಿಕೆ ನಡೆಯುತ್ತಿದೆ. ಈ ಪಳೆಯುಳಿಕೆಗಳ ಮಹತ್ವ ತಿಳಿಯದ ಕೆಲಸಗಾರರು ಇವುಗಳನ್ನು ಒಡೆದುಹಾಕುವ ಅಪಾಯವಿದೆ.

ರಾಜ್ಯದಾದ್ಯಂತ ಇಂತಹ ಅನೇಕ ತಾಣಗಳಿದ್ದು, ತುರ್ತಾಗಿ ಅವುಗಳ ರಕ್ಷಣೆಗೆ ಮುಂದಾಗದಿದ್ದರೆ ಅವುಗಳನ್ನು ಶಾಶ್ವತವಾಗಿ ಕಳೆದುಕೊಳ್ಳ ಬೇಕಾಗಬಹುದು. ದೇಶದ ಭೂಪಾರಂಪರಿಕ ತಾಣಗಳನ್ನು ಗುರುತಿಸಿ ಘೋಷಿಸುವ ಹೊಣೆ ಭೂಸರ್ವೇಕ್ಷಣಾ ಇಲಾಖೆಯದು. ಆದರೆ ಅಗಾಧ ಕಾರ್ಯಬಾಹುಳ್ಯದ ದೆಸೆಯಿಂದ ಅದು ಈ ವಿಷಯಕ್ಕೆ ಹೆಚ್ಚು ಒತ್ತು ಕೊಟ್ಟಂತೆ ಕಾಣುತ್ತಿಲ್ಲ. ಆದ್ದರಿಂದ ಈ ಇಲಾಖೆಯ ಜೊತೆಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆ, ಶೈಕ್ಷಣಿಕ ಸಂಸ್ಥೆಗಳ ಭೂವಿಜ್ಞಾನ ವಿಭಾಗಗಳು, ಗಣಿ ಕಂಪನಿಗಳು ಸೇರಿದಂತೆ ಭೂವಿಜ್ಞಾನ ದಲ್ಲಿ ಆಸಕ್ತಿ ಹೊಂದಿರುವ ಎಲ್ಲರೂ ಕೈಜೋಡಿಸಬೇಕಾಗುತ್ತದೆ.

ಹಿಂದೆಲ್ಲ ವರ್ಷಕ್ಕೋ ಎರಡು ವರ್ಷಕ್ಕೋ ಪ್ರವಾಸ ಹೋಗುತ್ತಿದ್ದ ಭಾರತೀಯ ಕುಟುಂಬಗಳು ಇಂದು ವಾರಾಂತ್ಯದ ಪ್ರವಾಸ ಸಂಸ್ಕೃತಿಗೆ ಬದಲಾಗುತ್ತಿವೆ. ನಿಸರ್ಗವನ್ನು ಅನ್ವೇಷಿಸುವ ಕುತೂಹಲ ಯುವಜನರಲ್ಲಿ ಹೆಚ್ಚಾಗುತ್ತಿದೆ. ಈ ಬದಲಾವಣೆಯನ್ನು ಈಗ ಭೂವಿಜ್ಞಾನಿಗಳು ಉಪಯೋಗಿಸಿಕೊಂಡು, ಹೆಚ್ಚುಹೆಚ್ಚು ಪ್ರವಾಸಿಗರನ್ನು ಭೂಪಾರಂಪರಿಕ ತಾಣಗಳತ್ತ ಸೆಳೆಯುವಂತೆ ಮಾಡಿದರೆ, ನಿಸರ್ಗದ ಕೌತುಕಗಳನ್ನು ಸಾಮಾನ್ಯ ಜನರೂ ಆಸ್ವಾದಿಸಿದಂತೆ ಆಗುತ್ತದೆ, ಈ ಸ್ಥಳಗಳ ಸಂರಕ್ಷಣೆಯೂ ಆಗುತ್ತದೆ.

ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿಯ ಗುರಿಗಳಲ್ಲಿ, ಭೂಪಾರಂಪರಿಕ ತಾಣಗಳನ್ನು ಸಂರಕ್ಷಿಸುವ ಉದ್ದೇಶವೂ ಸೇರಿದೆ. ಹೇಗೆ ಅನೇಕ ಭೂಕ್ರಿಯೆಗಳು ಮನುಷ್ಯನ ಮತ್ತು ಅಸಂಖ್ಯ ಜೀವರಾಶಿಯ ಅಸ್ತಿತ್ವಕ್ಕೆ ಕಾರಣವಾಗಿ, ಭೂಮಿಯ 450 ಕೋಟಿ ವರ್ಷಗಳ ಇತಿಹಾಸವನ್ನು ಬಿಂಬಿಸುತ್ತವೆ ಎಂಬುದನ್ನು ಸಾರಲು ಇವು ಬಹಳ ಮುಖ್ಯ. ಆದ್ದರಿಂದ ಇವು ಸ್ಥಳೀಯವಾಗಿ ಅಥವಾ ದೇಶಕ್ಕಷ್ಟೇ ಅಲ್ಲದೆ ವಿಶ್ವದ ಸೀಮಾತೀತ ಭೂಪಾರಂಪರಿಕ ತಾಣಗಳೂ ಹೌದು.

ಲೇಖಕರು: ಭೂವಿಜ್ಞಾನಿಗಳು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು