ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಬ್ಯಾಂಕ್‌, ವಂಚನೆ ಮತ್ತು ಖಾಸಗೀಕರಣ

ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಆಡಳಿತದಲ್ಲಿ ಸುಧಾರಣೆ ತರುವುದು ಹೇಗೆ?
Last Updated 24 ಜುಲೈ 2022, 19:30 IST
ಅಕ್ಷರ ಗಾತ್ರ

ದೇಶದ ಇಬ್ಬರು ಪ್ರಮುಖ ಅರ್ಥಶಾಸ್ತ್ರಜ್ಞರಾದ ಅರವಿಂದ ಪನಗರಿಯಾ ಮತ್ತು ಪೂನಮ್ ಗುಪ್ತ ಅವರು ನೀತಿ ನಿರೂಪಣೆಗೆ ಸಂಬಂಧಿಸಿದ ವರದಿಯೊಂದರಲ್ಲಿ, ‘ಭಾರತೀಯ ಸ್ಟೇಟ್ ಬ್ಯಾಂಕ್ ಹೊರತುಪಡಿಸಿ, ದೇಶದ ಸರ್ಕಾರಿ ಸ್ವಾಮ್ಯದ ಎಲ್ಲ ಬ್ಯಾಂಕ್‌ಗಳನ್ನು ಖಾಸಗಿಯವರಿಗೆ ಮಾರಾಟ ಮಾಡಬೇಕು’ ಎಂದು ಶಿಫಾರಸು ಮಾಡಿದ್ದಾರೆ.

ಪನಗರಿಯಾ ಅವರು ನೀತಿ ಆಯೋಗದ ಮಾಜಿ ಉಪಾಧ್ಯಕ್ಷ. ಪೂನಮ್ ಅವರು ಪ್ರಧಾನ ಮಂತ್ರಿಯವರ ಆರ್ಥಿಕ ಸಲಹಾ ಮಂಡಳಿಯ ಸದಸ್ಯೆ. ಕೇಂದ್ರ ಸರ್ಕಾರವು ಅವರ ಮಾತುಗಳನ್ನೆಲ್ಲ ಕೇಳಿಸಿಕೊಳ್ಳುತ್ತದೆ ಎಂದಾದರೆ ಅವರು ಎಸ್‌ಬಿಐ ಅನ್ನೂ ಖಾಸಗಿಯವರಿಗೆ ಮಾರಾಟ ಮಾಡಿ ಎಂದು ಹೇಳುತ್ತಿದ್ದರೇನೋ. ‘ಭಾರತದ ಆರ್ಥಿಕ ಚೌಕಟ್ಟಿನ ಮಿತಿಯಲ್ಲಿ, ದೇಶದ ರಾಜಕೀಯ ಮೌಲ್ಯಗಳ ವ್ಯಾಪ್ತಿಯಲ್ಲಿ ಯಾವ ಸರ್ಕಾರವೂ ಸರ್ಕಾರಿ ಸ್ವಾಮ್ಯದ ಬ್ಯಾಂಕ್ಒಂದೂಇಲ್ಲದಂತೆ ಮಾಡಿಕೊಳ್ಳಲು ಬಯಸುವುದಿಲ್ಲ’ ಎಂದು ಅವರು ವರದಿಯಲ್ಲಿ ಹೇಳಿದ್ದಾರೆ.

ಪನಗರಿಯಾ ಮತ್ತು ಪೂನಮ್ ಅವರು ಮುಕ್ತ ಮಾರುಕಟ್ಟೆ ವ್ಯವಸ್ಥೆಯ, ಮಾರುಕಟ್ಟೆಯ ದಿನನಿತ್ಯದ ಚಟುವಟಿಕೆಗಳಲ್ಲಿ ಸರ್ಕಾರದ ಹಸ್ತಕ್ಷೇಪ ಇರಲೇಬಾರದು ಎನ್ನುವ ತತ್ವದ ಬಹುದೊಡ್ಡ ಪ್ರತಿಪಾದಕರು. ಹೀಗಾಗಿ, ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳನ್ನು ಖಾಸಗಿಯವರಿಗೆ ಮಾರಾಟ ಮಾಡಬೇಕು ಎಂದು ಅವರು ಹೇಳುವುದರಲ್ಲಿ ವಿಶೇಷವೇನೂ ಇಲ್ಲ. ಆದರೆ, ಬ್ಯಾಂಕ್‌ಗಳ ಖಾಸಗೀ ಕರಣದ ವಿಚಾರದಲ್ಲಿ ಅವರ ವಾದವು ಅತ್ಯಂತ ದುರ್ಬಲ ನೆಲೆಗಟ್ಟನ್ನು ಹೊಂದಿದೆ.

ಅವರ ಮೊದಲ ವಾದ ಹೀಗಿದೆ: ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಲ್ಲಿ ವಂಚನೆ ಆಗುವ ಸಾಧ್ಯತೆ ಇರುತ್ತದೆ. ಅವರಿಗೆ ನಮ್ಮ ಪ್ರಶ್ನೆ ಹೀಗಿದೆ: ಬ್ಯಾಂಕ್‌ಗಳನ್ನು ಖಾಸಗಿ ಯವರಿಗೆ ಮಾರಾಟ ಮಾಡಿದರೆ ವಂಚನೆ ಆಗುವ ಸಾಧ್ಯತೆ ಇರುವುದಿಲ್ಲವೇ? ಖಾಸಗಿ ಬ್ಯಾಂಕ್‌ಗಳಲ್ಲಿ ವಂಚನೆ ನಡೆದಿಲ್ಲವೇ? ಪನಗರಿಯಾ ಅವರು ಬೋಧನೆಯ ವೃತ್ತಿಯಲ್ಲಿ ತೊಡಗಿಕೊಂಡಿರುವುದು ಅಮೆರಿಕದಲ್ಲಿ. ಅದು ಮುಕ್ತ ಮಾರುಕಟ್ಟೆ ವ್ಯವಸ್ಥೆಯ ಬಹುದೊಡ್ಡ ಸಾಮ್ರಾಜ್ಯ. ಅಲ್ಲಿನ ಖಾಸಗಿ ಹಣಕಾಸು ಸಂಸ್ಥೆಗಳಲ್ಲಿ ಸರಿ ಸುಮಾರು ಹದಿನೈದು ವರ್ಷಗಳ ಹಿಂದೆ ಬಹುದೊಡ್ಡ ಪ್ರಮಾಣದ ವಂಚನೆ ನಡೆಯಿತು. ಆ ವಂಚನೆಯು ಜಾಗತಿಕ ಹಣಕಾಸು ವ್ಯವಸ್ಥೆಯನ್ನು ಅಸ್ಥಿರಗೊಳಿಸಿತು. ಆಗ ಬಿದ್ದ ಏಟಿನಿಂದ ಜಗತ್ತು ಇನ್ನೂ ಚೇತರಿಸಿಕೊಂಡಿಲ್ಲ. ಅಂದಹಾಗೆ ನಾವು ಇಲ್ಲಿ ಅಮೆರಿಕದ ಖಾಸಗಿ ಬ್ಯಾಂಕಿಂಗ್ ವ್ಯವಸ್ಥೆಯ ಬಗ್ಗೆ ಮಾತನಾಡುತ್ತಿಲ್ಲ. ಯೆಸ್ ಬ್ಯಾಂಕ್‌ನ ಮಾಜಿ ವ್ಯವಸ್ಥಾಪಕ ನಿರ್ದೇಶಕ ರಾಣಾ ಕಪೂರ್ ಎಸಗಿದ ವಂಚನೆ ನಮಗೆ ನೆನಪಿಲ್ಲವೇ? ರಿಯಾಲ್ಟಿ ವಲಯದ ಒಂದು ಕಂಪನಿಗೆ ಸಾಲ ಮಂಜೂರು ಮಾಡಿ, ದೆಹಲಿಯಲ್ಲಿ ₹ 400 ಕೋಟಿ ಮೌಲ್ಯದ ಆಸ್ತಿಯನ್ನು ತಮ್ಮ ಪತ್ನಿಯ ಹೆಸರಿನಲ್ಲಿ ಪಡೆದುಕೊಂಡಿದ್ದ ಆರೋಪ ಅವರ ಮೇಲಿದೆ.

ಐಸಿಐಸಿಐ ಬ್ಯಾಂಕ್‌ನ ಸಿಇಒ ಆಗಿದ್ದ ಚಂದಾ ಕೊಚ್ಚರ್ ಅವರು ಎಸಗಿದ ವಂಚನೆ ನಮಗೆ ನೆನಪಿಲ್ಲವೇ? ಚಂದಾ ಅವರು ವೇಣುಗೋಪಾಲ್ ಧೂತ್ ಅವರ ವಿಡಿಯೊಕಾನ್ ಇಂಟರ್‌ನ್ಯಾಷನಲ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‌ ಕಂಪನಿಗೆ ಎಲ್ಲ ನಿಯಮಗಳನ್ನು ಉಲ್ಲಂಘಿಸಿ ₹ 300 ಕೋಟಿ ಸಾಲ ಮಂಜೂರು ಮಾಡಿದರು. ನಂತರ ಧೂತ್ ಅವರು ನ್ಯೂಪವರ್ ರಿನಿವೆಬಲ್ಸ್ ಪ್ರೈ.ಲಿ. ಕಂಪನಿಗೆ ₹ 64 ಕೋಟಿ ವರ್ಗಾವಣೆ ಮಾಡಿದರು ಎಂಬ ಆರೋಪ ಇದೆ. ನ್ಯೂಪವರ್ ಕಂಪನಿಯು ಚಂದಾ ಅವರ ಪತಿ ದೀಪಕ್ ಕೊಚ್ಚರ್ ಅವರಿಗೆ ಸೇರಿದ್ದು. ಚಂದಾ ಅವರು ಅಧಿಕಾರದಲ್ಲಿದ್ದ ಅವಧಿಯಲ್ಲಿ ಹಲವು ಸಾಲಗಳ ಮಂಜೂರಾತಿ ಪ್ರಕ್ರಿಯೆಯಲ್ಲಿ ನಿಯಮ ಉಲ್ಲಂಘಿಸಿದ್ದಾರೆ ಎಂಬುದನ್ನು ತನಿಖಾ ಸಂಸ್ಥೆಗಳು ಪತ್ತೆ ಮಾಡಿವೆ.

ಪನಗರಿಯಾ ಮತ್ತು ಪೂನಮ್ ಅವರು ಹೇಳು ತ್ತಿರುವ ಎರಡನೆಯ ಅಂಶ, ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ ಗಳಲ್ಲಿ ಕಾರ್ಪೊರೇಟ್ ಆಡಳಿತ ಚೆನ್ನಾಗಿಲ್ಲ ಎಂಬುದು. ಹಾಗಾದರೆ, ಚಂದಾ ಕೊಚ್ಚರ್ ಪ್ರಕರಣವು ಐಸಿಐಸಿಐ ಬ್ಯಾಂಕ್‌ನಲ್ಲಿನ ಹಾಗೂ ರಾಣಾ ಕಪೂರ್ ಪ್ರಕರಣವು ಯೆಸ್ ಬ್ಯಾಂಕ್‌ನಲ್ಲಿನ ಕಾರ್ಪೊರೇಟ್ ಆಡಳಿತವು ಬಹಳ ಚೆನ್ನಾಗಿತ್ತು ಎಂದು ಹೇಳುತ್ತಿವೆಯೇ? ವಾಸ್ತವದಲ್ಲಿ, ಅತ್ಯುನ್ನತ ಅಧಿಕಾರಿಗಳು ಹಾಗೂ ಕಿಡಿಗೇಡಿ ಸಾಲಗಾರರ ನಡುವೆ ಹೊಂದಾಣಿಕೆ ಇದ್ದ ಪಕ್ಷದಲ್ಲಿ ಖಾಸಗಿ ಬ್ಯಾಂಕ್‌ ಗಳಲ್ಲಿಯೂ ವಿವೇಕ, ದಕ್ಷತೆ ಎಂಬ ಗುಣಗಳು ಕಾಣೆಯಾಗಬಹುದು ಎನ್ನುವುದನ್ನು ಈ ಪ್ರಕರಣಗಳು ತೋರಿಸಿಕೊಟ್ಟಿವೆ. ಅದೃಷ್ಟದ ಸಂಗತಿಯೆಂದರೆ, ಯೆಸ್ ಬ್ಯಾಂಕ್ ಹಾಗೂ ಐಸಿಐಸಿಐ ಬ್ಯಾಂಕ್‌ಗಳಲ್ಲಿ ನಡೆದ ಅಕ್ರಮಗಳು ಆ ಬ್ಯಾಂಕ್‌ಗಳನ್ನು ದಿವಾಳಿಯೆಡೆಗೆ ಒಯ್ಯುವಷ್ಟು ದೊಡ್ಡ ಪ್ರಮಾಣದಲ್ಲಿ ಇರಲಿಲ್ಲ. ಆದರೆ, ಖಾಸಗಿ ವಲಯದ ಗ್ಲೋಬಲ್ ಟ್ರಸ್ಟ್‌ ಬ್ಯಾಂಕ್ ಹಾಗೂ ಲಕ್ಷ್ಮೀ ವಿಲಾಸ ಬ್ಯಾಂಕ್‌ನಲ್ಲಿ ನಡೆದ ಅಕ್ರಮಗಳು ಆ ಬ್ಯಾಂಕ್‌ಗಳು ಕುಸಿದುಬೀಳುವಂತೆ ಮಾಡಿದವು.

ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಲ್ಲಿನ ಎನ್‌ಪಿಎ ಪ್ರಮಾಣವು ಖಾಸಗಿ ಬ್ಯಾಂಕ್‌ಗಳಲ್ಲಿನ ಎನ್‌ಪಿಎ ಪ್ರಮಾಣ ಕ್ಕಿಂತ ಹೆಚ್ಚಿತ್ತು ಎಂಬುದು ನಿಜ. 2017ರ ಡಿಸೆಂಬರ್‌ ವೇಳೆಗೆ ಕೊಟ್ಟ ಸಾಲದ ಮೊತ್ತಕ್ಕೆ ಪ್ರತಿಯಾಗಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಲ್ಲಿನ ಎನ್‌ಪಿಎ ಪ್ರಮಾಣ ಶೇಕಡ 13.5ರಷ್ಟಿತ್ತು. ಈ ಪ್ರಮಾಣವು ಖಾಸಗಿ ಬ್ಯಾಂಕ್‌ಗಳಲ್ಲಿ ಶೇ 3.8ರಷ್ಟಿತ್ತು. ಎರಡೂ ವಲಯಗಳ ಬ್ಯಾಂಕ್‌
ಗಳಲ್ಲಿಯೂ ಎನ್‌ಪಿಎ ಇದೆ. ಆದರೆ ಅದರ ಪ್ರಮಾಣವು ಸರ್ಕಾರಿ ಬ್ಯಾಂಕ್‌ಗಳಲ್ಲಿ ಹೆಚ್ಚಿದೆ. ಅಂದರೆ, ಸರ್ಕಾರಿ ಬ್ಯಾಂಕ್‌ಗಳಲ್ಲಿನ ಆಡಳಿತ ವ್ಯವಸ್ಥೆಯನ್ನು ಇನ್ನಷ್ಟು ಉತ್ತಮಪಡಿಸಬೇಕು ಎಂಬುದನ್ನು ಇದು ಹೇಳುತ್ತದೆ. ವ್ಯವಸ್ಥೆಯನ್ನು ಉತ್ತಮಪಡಿಸುವ ಕೆಲಸವನ್ನು ಅವುಗಳನ್ನು ಖಾಸಗಿಯವರಿಗೆ ಮಾರದೆಯೂ ಮಾಡ ಬಹುದು. ಅಂದಹಾಗೆ, 2022ರ ಮಾರ್ಚ್‌ ವೇಳೆಗೆ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಒಟ್ಟು ಎನ್‌ಪಿಎ ಪ್ರಮಾಣವು ಶೇ 5.9ಕ್ಕೆ ಇಳಿಕೆಯಾಗಿದೆ.

ಹೀಗಿದ್ದರೂ, ಇವರು ಮಾತ್ರವೇ ಅಲ್ಲದೆ, ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೂಡ ಬ್ಯಾಂಕ್‌ಗಳ ಖಾಸಗೀಕರಣದ ಬಗ್ಗೆ ಮಾತನಾಡುತ್ತಿದೆ. 2021– 22ನೆಯ ಸಾಲಿನ ಬಜೆಟ್ ಮಂಡನೆ ವೇಳೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸರ್ಕಾರಿ ಸ್ವಾಮ್ಯದ ಎರಡು ಬ್ಯಾಂಕ್‌ಗಳನ್ನು ಖಾಸಗಿ ಯವರಿಗೆ ಮಾರಾಟ ಮಾಡುವ ಘೋಷಣೆಯನ್ನು ಮಾಡಿದರು. ಬ್ಯಾಂಕ್‌ಗಳು ಯಾವುವು ಎಂಬುದನ್ನು ಅವರು ಹೇಳಲಿಲ್ಲ. ಖಾಸಗೀಕರಣಕ್ಕೆ ಸಂಬಂಧಿಸಿದ ಮಸೂದೆಯು ಮುಂಗಾರು ಅಧಿವೇಶನದಲ್ಲಿ ಮಂಡನೆ ಆಗಬೇಕಿತ್ತು. ಆದರೆ ನಿರ್ಮಲಾ ಅವರು ಅದನ್ನು ಮುಂದಕ್ಕೆ ಹಾಕಿರುವಂತೆ ಕಾಣುತ್ತಿದೆ.

ಮೋದಿ ಅವರ ವ್ಯಕ್ತಿತ್ವವು ದಕ್ಷ ಆಡಳಿತದ ಜೊತೆ ಬೆಸೆದುಕೊಂಡಿದೆ. ಅಂದರೆ, ಭ್ರಷ್ಟಾಚಾರಕ್ಕೆ ಅವಕಾಶ ಇಲ್ಲದ, ಸೇವೆಗಳನ್ನು ಪರಿಣಾಮಕಾರಿಯಾಗಿ ಒದಗಿಸುವ ಆಡಳಿತ ಅದು. ಅವರ ಆಡಳಿತ ಈ ರೀತಿ ಇದೆ ಎಂದಾದರೆ, ಮೋದಿ ನೇತೃತ್ವದ ಸರ್ಕಾರವು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಲ್ಲಿನ ಆಡಳಿತ ವ್ಯವಸ್ಥೆಯನ್ನು ಸುಧಾರಿಸಬಾರದೇಕೆ? ಬೃಹತ್ ಗಾತ್ರದ ಸರ್ಕಾರವನ್ನು ದಕ್ಷವಾಗಿ ನಡೆಸಲು ಸಾಧ್ಯವಾಗುತ್ತದೆ, ಹನ್ನೆರಡು ಸರ್ಕಾರಿ ಬ್ಯಾಂಕ್‌ಗಳನ್ನು ಚೆನ್ನಾಗಿ ನಡೆಸಲು ಸಾಧ್ಯವಿಲ್ಲ ಎನ್ನಲಾದೀತೇ?

ಬ್ಯಾಂಕ್‌ಗಳಲ್ಲಿ ಒಳ್ಳೆಯ ಆಡಳಿತ ಅಂದರೆ, ದುರುದ್ದೇಶ ಹೊಂದಿರುವ ಯಾವುದೇ ಸಾಲಗಾರನ ಬೇಡಿಕೆಗಳಿಗೆ ಮಣಿಯಲು ಬ್ಯಾಂಕ್‌ನ ಯಾವುದೇ ಭ್ರಷ್ಟ ಅಧಿಕಾರಿಗೆ ಸಾಧ್ಯವಾಗದಂತೆ ನಿಯಮಗಳನ್ನು ರೂಪಿಸಿ, ಅನುಷ್ಠಾನಕ್ಕೆ ತರುವುದು. ಅಂದರೆ, ಬ್ಯಾಂಕ್‌ನ ಅಧ್ಯಕ್ಷ ಸ್ಥಾನಕ್ಕೆ ಅರ್ಹತೆಯ ಆಧಾರದಲ್ಲಿ ನೇಮಕಾತಿ ನಡೆಸುವುದು. ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳನ್ನು ಕೂಡ ಅರ್ಹತೆಯನ್ನು ಆಧರಿಸಿ ನೇಮಿಸುವುದು. ಬ್ಯಾಂಕ್‌ನ ಆಡಳಿತ ಮಂಡಳಿಗಳಿಗೆ ಪ್ರಾಮಾಣಿಕರನ್ನು ನಿರ್ದೇಶಕರನ್ನಾಗಿ ನೇಮಿಸುವುದು. ಬ್ಯಾಂಕ್‌ನ ಲೆಕ್ಕಪತ್ರ ನಿರ್ವಹಣೆಯನ್ನು ಪ್ರಾಮಾಣಿಕವಾಗಿ ನಡೆಸುವುದು.

ಅರುಣ್ ಸಿನ್ಹಾ
ಅರುಣ್ ಸಿನ್ಹಾ

ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ ಮುಖ್ಯಸ್ಥರನ್ನು ನೇಮಕ ಮಾಡಲು ಕೇಂದ್ರ ಸರ್ಕಾರವು ಸ್ವಾಯತ್ತ ಸಂಸ್ಥೆಯೊಂದನ್ನು – ಹಣಕಾಸು ಸೇವಾ ಸಂಸ್ಥೆಗಳ ಬ್ಯೂರೊ ರಚಿಸಿದೆ. ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಲ್ಲಿ ನಾಯಕತ್ವ ಬೆಳೆಸಲು ಇಂಡಿಯನ್ ಬ್ಯಾಂಕ್ ಅಸೋಸಿಯೇಷನ್ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುತ್ತಿದೆ. ವಂಚನೆಗಳಿಂದ ಪಾಠ ಕಲಿತಿರುವ ಆರ್‌ಬಿಐ, ಆಂತರಿಕ ಹಾಗೂ ಬಾಹ್ಯ ನಿಯಂತ್ರಣ ಕ್ರಮಗಳನ್ನು ಜಾರಿಗೆ ತಂದಿದೆ. ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಆಡಳಿತದಲ್ಲಿ ಸುಧಾರಣೆ ಆಗುತ್ತಿದೆ. ಬ್ಯಾಂಕ್‌ಗಳನ್ನು ಖಾಸಗಿಯವರಿಗೆ ಮಾರಾಟ ಮಾಡುವ ಬದಲು ಕೇಂದ್ರ ಸರ್ಕಾರವು ಬ್ಯಾಂಕ್ ಆಡಳಿತ ಸುಧಾರಣೆಗೆ ಒತ್ತಾಸೆಯಾಗಿ ನಿಲ್ಲಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT