ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎ. ಸೂರ್ಯಪ್ರಕಾಶ್ ಬರಹ: ಬ್ರಿಟನ್ನಿನ ರಾಜಪ್ರಭುತ್ವ, ಭಾರತದ ಪ್ರಜಾಪ್ರಭುತ್ವ

ಪ್ರಭುತ್ವ ಹಾಗೂ ಧರ್ಮವು ಪರಸ್ಪರ ಪ್ರತ್ಯೇಕ ಎಂಬುದು ಮಹತ್ವದ ವಿಚಾರ
Last Updated 22 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ಪಾಶ್ಚಿಮಾತ್ಯ ಮಾಧ್ಯಮಗಳಾದ ಬಿಬಿಸಿ, ಸಿಎನ್‌ಎನ್‌ ವಾಹಿನಿ ನಿರೂಪಕರು ಹಲವು ಕಾರಣಗಳನ್ನು ಮುಂದಿಟ್ಟುಕೊಂಡು ಭಾರತದ ಬಗ್ಗೆ ಹಗುರವಾಗಿ, ನಕಾರಾತ್ಮಕವಾಗಿ ಮಾತನಾಡುವುದು ಭಾರತೀಯರಿಗೆ ಸಹಜವಾಗಿಬಿಟ್ಟಿದೆ. ಅವರು ಇಂತಹ ಮಾತುಗಳನ್ನು ಸಾಮಾನ್ಯವಾಗಿ ಹಿಂದೂ ಧಾರ್ಮಿಕ ಮತ್ತು ಸಾಮಾಜಿಕ ಆಚರಣೆಗಳ ಬಗ್ಗೆ ಆಡುತ್ತಾರೆ. ಆದರೆ ಈ ವಾಹಿನಿಗಳು ತಮ್ಮ ಸಮಾಜದ ಬಗ್ಗೆ ಗಮನಹರಿಸುವುದು, ಆಧುನಿಕ ಜಗತ್ತಿಗೆ ಸರಿಹೊಂದದ ಅಲ್ಲಿನ ಆಚರಣೆಗಳ ಬಗ್ಗೆ ಅವಲೋಕನ ನಡೆಸುವುದು ಅಪರೂಪ.

ಬ್ರಿಟನ್ನಿನ ರಾಣಿ ಎಲಿಜಬೆತ್‌ ಸಾವಿನ ಕುರಿತು ಈ ಮಾಧ್ಯಮಗಳಲ್ಲಿ ಹತ್ತು ದಿನಗಳವರೆಗೆ, ಹಗಲು–ರಾತ್ರಿ ಪ್ರಸಾರವಾದ ವರದಿಗಳು, ಅಲ್ಲಿನ ರಾಜಪ್ರಭುತ್ವದ ಕುರಿತ ‍ಪ್ರಶಂಸೆಯ ಅಭಿಪ್ರಾಯಗಳು, ರಾಜಕುಮಾರ ಚಾರ್ಲ್ಸ್‌ ಅವರನ್ನು ರಾಜನಾಗಿ ಆಡಂಬರದಿಂದ ನೇಮಕ ಮಾಡಿದ ವಿದ್ಯಮಾನ ಇಲ್ಲಿ ಗಮನಿಸಬೇಕಾದ ವಿಷಯ.

ಮೂರನೆಯ ಚಾರ್ಲ್ಸ್‌ ಅವರನ್ನು ರಾಜ ಎಂದು ಘೋಷಿಸುವ ಸಮಾರಂಭದಲ್ಲಿ ಅವರು ಧರಿಸಿದ್ದ ಉಡುಗೆ, ಅಲ್ಲಿನ ರಾಜಪ್ರಭುತ್ವದ ಚಿಹ್ನೆಗಳನ್ನು ಕಂಡ ಭಾರತೀಯರಿಗೆ ಇವೆಲ್ಲಾ ಯಾವುದೋ ಕಾಲದ್ದು ಎಂದು ಅನ್ನಿಸಿರಬಹುದು. ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಪರಿಶ್ರಮದ ಕಾರಣದಿಂದಾಗಿ ಭಾರತೀಯರು ತಮ್ಮ ರಾಜರು ಮತ್ತು ರಾಣಿಯರಿಗೆ 75 ವರ್ಷಗಳ ಹಿಂದೆಯೇ ಶುಭವಿದಾಯ ಹೇಳಿಯಾಗಿದೆ. ಸಾಮಾಜಿಕ ಜಾಲತಾಣಗಳು ಹಾಗೂ ಇಂಟರ್ನೆಟ್‌ನ ಈ ಯುಗದಲ್ಲಿ, ರಾಜನಾಗಿ ಅಧಿಕಾರ ಸ್ವೀಕರಿಸಿದ ಘೋಷಣೆಯನ್ನು ಬೇರೆ ಬೇರೆ ಕಡೆಗಳಲ್ಲಿ ಹೊರಡಿಸಿದ್ದು ಅಸಹಜವಾಗಿತ್ತು. ಅದೇನೇ ಇರಲಿ, ಕಳೆದುಹೋದ ಕಾಲದಲ್ಲಿಯೇ ಇರಲು ಬ್ರಿಟಿಷರು ಬಯಸಿದ್ದರೆ ಅದನ್ನು ದೂಷಿಸಲು ನಾವು ಯಾರು?!

ಬದಲಾವಣೆಗೆ ಸಂಬಂಧಿಸಿದ ಪ್ರಕ್ರಿಯೆಗಳು ಹಾಗೂ ಆಚರಣೆಗಳು ಹಲವು ಸಂಗತಿಗಳಲ್ಲಿ ವಿಸ್ತರಿಸಿ
ಕೊಂಡಿವೆ. ಬ್ರಿಟಿಷ್‌ ಕರೆನ್ಸಿ ಹಾಗೂ ಅಂಚೆ ಚೀಟಿಗಳ ಮೇಲೆ ರಾಣಿಯ ಬದಲು ರಾಜನ ಚಿತ್ರ ಛಾಪಿಸುವುದು, ರಾಷ್ಟ್ರಗೀತೆಯಲ್ಲಿ ಹೆಸರು ಬದಲಾಯಿಸುವುದು ಕೂಡ ಇದರಲ್ಲಿ ಸೇರಿವೆ. ಆದರೆ ಭಾರತದಲ್ಲಿನ ಸಂಪ್ರದಾಯ ಮಾತ್ರ ಇದಕ್ಕೆ ವಿರುದ್ಧ. ನಾವು ನಾಯಕರೊಬ್ಬರು ಮೃತ ಪಟ್ಟ ನಂತರದಲ್ಲಿ ಅವರ ಕೆಲಸಗಳನ್ನು ನೆನಪಿಸಿಕೊಳ್ಳಲು ಅಂಚೆ ಚೀಟಿ ಹೊರತರುತ್ತೇವೆ. ಬ್ರಿಟನ್ನಿನಲ್ಲಿ ರಾಷ್ಟ್ರಗೀತೆ ‘ಗಾಡ್‌ ಸೇವ್‌ ದಿ ಕ್ವೀನ್‌’ ಎಂದು ಇದ್ದಿದ್ದು, ‘ಗಾಡ್ ಸೇವ್ ದಿ ಕಿಂಗ್’ ಎಂದು ಬದಲಾಗಿದೆ. ಸಮಾನತೆ, ಸ್ವಾತಂತ್ರ್ಯ, ಭ್ರಾತೃತ್ವ, ತಾರತಮ್ಯದಿಂದ ರಕ್ಷಣೆಯಂತಹ ಪ್ರಜಾತಂತ್ರದ ಅತ್ಯುತ್ತಮ ಸಂಪ್ರದಾಯದಲ್ಲಿ ಬೆಳೆದುಬಂದ ಭಾರತೀ ಯರಿಗೆ, ಬ್ರಿಟನ್ನಿನ ಪ್ರಧಾನಿ, ಮಾಜಿ ಪ್ರಧಾನಿಗಳು ಸೇರಿದಂತೆ ಅಲ್ಲಿನ ಪ್ರಮುಖ ರಾಜಕೀಯ ನಾಯಕರು ಮುಂದಿನ ಸಾಲಿನಲ್ಲಿ ನಿಂತುಕೊಂಡು, ಮೂರನೆಯ ಚಾರ್ಲ್ಸ್‌ ಅವರನ್ನು ಉತ್ತರಾಧಿಕಾರಿ ಎಂದು ಘೋಷಿಸಿದ ಹೊತ್ತಿನಲ್ಲಿ ‘ಗಾಡ್ ಸೇವ್ ದಿ ಕಿಂಗ್’ ಎಂದು ಹಾಡುವುದನ್ನು ಕಂಡು ಅದನ್ನು ಅರ್ಥ ಮಾಡಿ ಕೊಳ್ಳುವುದು ಕಷ್ಟವಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಭಾರತದಲ್ಲಿನ ಘೋಷವಾಕ್ಯ ‘ಭಾರತ್ ಮಾತಾ ಕಿ ಜೈ’ ಎಂಬುದಾಗಿರುತ್ತದೆ. ಅಮೆರಿಕನ್ನರು ಇಂತಹ ಸಂದರ್ಭಗಳಲ್ಲಿ ‘ಗಾಡ್ ಸೇವ್ ಅಮೆರಿಕ’ ಎಂದು ಹೇಳುತ್ತಾರೆ.

ಜಗತ್ತಿನ ಅತ್ಯಂತ ದೊಡ್ಡ ಹಾಗೂ ಅತ್ಯಂತ ಚೈತನ್ಯ
ಶಾಲಿಯಾದ ಪ್ರಜಾತಂತ್ರ ವ್ಯವಸ್ಥೆಯಾಗಿರುವ ಭಾರತವನ್ನು ಪಾಶ್ಚಿಮಾತ್ಯ ಮಾಧ್ಯಮಗಳಲ್ಲಿನ ನಿರೂಪಕರು ‘ತಾವೇ ಶ್ರೇಷ್ಠರು’ ಎಂಬ ಭಾವನೆಯಿಂದಲೇ ಕಾಣುವುದಿದೆ. ಈಗಿನ ರಾಜಕೀಯ ಹಾಗೂ ಸಾಮಾಜಿಕ ಬಿಕ್ಕಟ್ಟು
ಗಳನ್ನು ಉಲ್ಲೇಖಿಸಿ ಅವರು ಭಾರತೀಯರು ಉದಾರ ವಾದ, ಧರ್ಮನಿರಪೇಕ್ಷ ತತ್ವ ಮತ್ತು ಪ್ರಜಾತಂತ್ರದ ಬಗ್ಗೆ ಹೊಂದಿರುವ ಬದ್ಧತೆಯನ್ನು ಪ್ರಶ್ನಿಸುತ್ತಾರೆ. ಆದರೆ, ಭಾರತವು ಪರಿಪೂರ್ಣ ಪ್ರಜಾತಂತ್ರ ವ್ಯವಸ್ಥೆಯನ್ನು ಹೊಂದಿದೆ, ಇದು ಗಣರಾಜ್ಯವೂ ಹೌದು, ಕಾನೂನಿನ ಎದುರು ಎಲ್ಲರೂ ಸಮಾನರು ಎಂಬ ತತ್ವ ಇಲ್ಲಿದೆ ಮತ್ತು ಧರ್ಮ ಹಾಗೂ ಪ್ರಭುತ್ವ ಇಲ್ಲಿ ಪರಸ್ಪರ ಬೇರೆಬೇರೆ ಇರುತ್ತವೆ ಎಂಬುದನ್ನು ಅವರು ಗ್ರಹಿಸುವುದಿಲ್ಲ. ಬ್ರಿಟನ್ ಅಥವಾ ಯುರೋಪಿನ ಹಲವು ದೇಶಗಳಲ್ಲಿನ ವ್ಯವಸ್ಥೆ ಈ ರೀತಿ ಇಲ್ಲ. ಭಾರತದಲ್ಲಿನ ಈ ಮೌಲ್ಯಗಳು
ಸಂವಿಧಾನದಲ್ಲಿ ಗಟ್ಟಿಯಾಗಿ ಅಡಕವಾಗಿವೆ. ಇವು ಭಾರತದ ಅಡಿಪಾಯಗಳಿದ್ದಂತೆ. ಆದರೆ, ಪ್ರಜಾತಂತ್ರದ ಮೂಲ ಅಗತ್ಯಗಳಾಗಿರುವ ಈ ಮೌಲ್ಯಗಳು ಬ್ರಿಟನ್ನಿನಲ್ಲಿ ಇಲ್ಲ.

ಈ ವಿಚಾರವಾಗಿ ಒಂದಿಷ್ಟು ವಿವರ ನೀಡಬೇಕು. ಗಣರಾಜ್ಯವು (ಇಲ್ಲಿ ಪ್ರಭುತ್ವದ ಮುಖ್ಯಸ್ಥರು ಚುನಾಯಿತ ರಾಗಿರುತ್ತಾರೆ) ಪ್ರಜಾತಾಂತ್ರಿಕ ಪರಂಪರೆಗಳಿಗೆ ರಾಜ
ಪ್ರಭುತ್ವಕ್ಕಿಂತಲೂ ಹೆಚ್ಚು ಹತ್ತಿರವಾಗಿರುತ್ತದೆ. ರಾಜಪ್ರಭುತ್ವದಲ್ಲಿ ರಾಜ ಅಥವಾ ರಾಣಿ ಇತರರಿಗಿಂತ ದೊಡ್ಡದಾದ ಸ್ಥಾನಮಾನ ಹೊಂದಿರುತ್ತಾರೆ. ಆದರೆ ನಮ್ಮ ದೇಶದ ಮುಖ್ಯಸ್ಥರು– ಅಂದರೆ ರಾಷ್ಟ್ರಪತಿ– ಎಲ್ಲ ರಾಜ್ಯಗಳ ಶಾಸಕರು ಮತ್ತು ಸಂಸದರ ಮೂಲಕ ಚುನಾಯಿತ ಆಗುತ್ತಾರೆ. ರಾಷ್ಟ್ರಪತಿ ಹುದ್ದೆ
ವಂಶಪಾರಂಪರ್ಯವಾಗಿ ಬರುವುದಲ್ಲ; ಈ ಸ್ಥಾನಕ್ಕೆ ಏರುವ ಬಯಕೆಯನ್ನುಭಾರತೀಯರೆಲ್ಲರೂ ಇರಿಸಿಕೊಳ್ಳ
ಬಹುದು. ಭಾರತವು ಬೇರೆ ಬೇರೆ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ಧಾರ್ಮಿಕ ಹಿನ್ನೆಲೆಗಳ ರಾಷ್ಟ್ರಪತಿಗಳನ್ನು ಈವರೆಗೆ ಕಂಡಿದೆ. ಬೇರೆ ಬೇರೆ ಪ್ರದೇಶಗಳು ಹಾಗೂ ಧರ್ಮಗಳಿಗೆ ಸೇರಿದವರು ನಮ್ಮ ರಾಷ್ಟ್ರಪತಿ ಆಗಿದ್ದಾರೆ– ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ, ಹಿಂದೂ, ಮುಸ್ಲಿಂ, ಸಿಖ್... ಹೀಗೆ ಹಲವು ಹಿನ್ನೆಲೆಗಳಿಗೆ ಸೇರಿದವರು ಈ ಹುದ್ದೆಗೆ ಏರಿದ್ದಾರೆ. ವೈವಿಧ್ಯಮಯವಾಗಿರುವ ಹಿಂದೂ ಸಮಾಜದ ಬೇರೆ ಬೇರೆ ಜಾತಿಗಳಿಗೆ, ಸಮುದಾಯಗಳಿಗೆ ಸೇರಿದವರು ರಾಷ್ಟ್ರಪತಿ ಆಗಿದ್ದಾರೆ. ಕಾಯಸ್ಥ, ರೆಡ್ಡಿ, ದಲಿತ, ಬ್ರಾಹ್ಮಣ ಸಮುದಾಯಗಳಿಗೆ ಸೇರಿದವರು ಈ ಹುದ್ದೆಗೆ ಏರಿದ್ದಾರೆ. ಈಗ ನಮ್ಮ ರಾಷ್ಟ್ರಪತಿ ಆಗಿರುವ ದ್ರೌಪದಿ ಮುರ್ಮು ಅವರು ಆದಿವಾಸಿ ಸಮುದಾಯಕ್ಕೆ ಸೇರಿದವರು. ಹೀಗಾಗಿ, ಈ ಸ್ಥಾನವು ಎಲ್ಲರಿಗೂ ಮುಕ್ತವಾಗಿದೆ. ಇದು ಒಂದು ಧರ್ಮ ಅಥವಾ ಒಂದು ವಂಶಕ್ಕೆ ಮೀಸಲಾಗಿರುವುದಲ್ಲ.

ಆದರೆ, ಬ್ರಿಟಿಷ್ ರಾಜನು ಚರ್ಚ್‌ ಆಫ್‌ ಇಂಗ್ಲೆಂಡ್‌ಗೆ ನಿಷ್ಠೆ ತೋರಬೇಕಾಗುತ್ತದೆ. ‘ನಾನು ಧರ್ಮವನ್ನು ರಕ್ಷಿಸುತ್ತೇನೆ’ ಎಂಬ ಪ್ರಮಾಣ ಸ್ವೀಕರಿಸಬೇಕಾಗುತ್ತದೆ. ರೋಮನ್ ಕ್ಯಾಥೊಲಿಕ್ ಸಂಪ್ರದಾಯಕ್ಕೆ ಸೇರಿದವರು ಬ್ರಿಟನ್ನಿನ ಸಿಂಹಾಸನ ಏರುವಂತಿಲ್ಲ ಎಂಬುದು ಭಾರತ ದಲ್ಲಿ ಹಲವರಿಗೆ ಗೊತ್ತಿರಲಿಕ್ಕಿಲ್ಲ. ಅಲ್ಲಿನ ರಾಜನು ತಾನು ಪ್ರೊಟೆಸ್ಟೆಂಟ್‌ ಪಂಥಕ್ಕೆ ಸೇರಿದವನು, ಚರ್ಚ್‌ ಆಫ್‌ ಇಂಗ್ಲೆಂಡ್‌ಗೆ ನಿಷ್ಠೆ ಹೊಂದಿರುವವನು ಎಂದು ಘೋಷಿಸ ಬೇಕಾಗುತ್ತದೆ. ಬ್ರಿಟನ್ನಿನ ರಾಜ ಆಗಿರುವವರು 16ನೆಯ ಶತಮಾನದಿಂದಲೇ ಚರ್ಚ್ ಆಫ್‌ ಇಂಗ್ಲೆಂಡ್‌ನ ಅತ್ಯುನ್ನತ ನಾಯಕ ಆಗಿಯೂ ಕೆಲಸ ಮಾಡುತ್ತ ಬಂದಿದ್ದಾರೆ. ಭಾರತದಲ್ಲಿ ವಿವಾಹದ ವಿಚಾರದಲ್ಲಿ ಸಂವಿಧಾನ ಯಾವುದೇ ನಿರ್ಬಂಧ ಹೇರುವುದಿಲ್ಲ. ಆದರೆ, ಬ್ರಿಟನ್ನಿನ ಸಿಂಹಾಸನ ಏರಲಿರುವ ವ್ಯಕ್ತಿಯು ರಾಜನ ಅನುಮತಿ ಇಲ್ಲದೆ ಮದುವೆ ಆಗುವಂತಿಲ್ಲ. ಇದನ್ನು ಉಲ್ಲಂಘಿಸಿದರೆ ಸಿಂಹಾಸನ ಏರುವ ಹಕ್ಕನ್ನು ಕಳೆದುಕೊಳ್ಳುತ್ತಾರೆ. ಇವೆಲ್ಲ ಅದೆಷ್ಟರಮಟ್ಟಿಗೆ ಉದಾರವಾದಿ, ಧರ್ಮನಿರಪೇಕ್ಷ ಹಾಗೂ ಪ್ರಜಾತಾಂತ್ರಿಕ?

‍ಪ್ರಭುತ್ವ ಹಾಗೂ ಧರ್ಮವು ಪರಸ್ಪರ ಪ್ರತ್ಯೇಕ ಎಂಬುದು ಮಹತ್ವದ ವಿಚಾರ. ಭಾರತದ ಸಂವಿಧಾನವು, ಸರ್ಕಾರದ ಅನುದಾನದಲ್ಲಿ ನಡೆಯುವ ಶಿಕ್ಷಣ ಸಂಸ್ಥೆಗಳಲ್ಲಿ ಧಾರ್ಮಿಕ ನಿರ್ದೇಶನಗಳು ಇರುವಂತಿಲ್ಲ ಎಂದು ಗಟ್ಟಿಯಾಗಿ ಹೇಳುತ್ತದೆ (ಸಂವಿಧಾನದ 28ನೇ ವಿಧಿ). ಭಾರತದ ರಾಷ್ಟ್ರಪತಿಯು ‘ಸಂವಿಧಾನವನ್ನು ರಕ್ಷಿಸುವ’ ಪ್ರಮಾಣ ಮಾಡುತ್ತಾರೆ. ಬ್ರಿಟಿಷ್ ರಾಜ ‘ಧರ್ಮವನ್ನು ರಕ್ಷಿಸುವ’ ಪ್ರಮಾಣ ಸ್ವೀಕರಿಸುತ್ತಾರೆ. ಚರ್ಚ್‌ ಆಫ್‌ ಸ್ಕಾಟ್ಲೆಂಡ್‌ ಅನ್ನು ರಕ್ಷಿಸುವ ಪ್ರಮಾಣವನ್ನು ಕೂಡ ಅವರು ಮಾಡುತ್ತಾರೆ.

ಭಾರತವು ಗಣರಾಜ್ಯವಾದ ನಂತರ ಜನಿಸಿದ ಮೂರು ತಲೆಮಾರುಗಳ ಜನ, ಇಷ್ಟೆಲ್ಲ ಸಂಭ್ರಮ ಏಕೆ ಎಂದು ಪ್ರಶ್ನಿಸಬಹುದು. ಸೆಪ್ಟೆಂಬರ್‌ನಲ್ಲಿ ಬ್ರಿಟನ್ನಿನಿಂದ ಬಂದ ವರ್ತಮಾನವು ನಮಗೆ ನಮ್ಮ ಪ್ರಜಾತಂತ್ರವು ಅದೆಷ್ಟು ಪ್ರಗತಿಪರವಾಗಿದೆ ಎಂಬ ಬಗ್ಗೆ ಅವಲೋಕನ ನಡೆಸಲು ಪ್ರೇರಣೆ ನೀಡಬೇಕು. ಭಾರತವು ವಿಶ್ವದ ಅತಿದೊಡ್ಡ ಪ್ರಜಾತಂತ್ರ ಮಾತ್ರವೇ ಅಲ್ಲ, ಇದು ವಿಶ್ವದ ಅತ್ಯಂತ ಹೆಚ್ಚು ವಿಕಾಸ ಹೊಂದಿದ ಪ್ರಜಾತಂತ್ರವೂ ಹೌದು ಎಂಬುದರಲ್ಲಿ ಅನುಮಾನ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT