ಸೋಮವಾರ, ಜನವರಿ 25, 2021
27 °C
ನಿರ್ದಿಷ್ಟ ಜಾತಿಗೆ ವಿಶೇಷ ಸೌಲಭ್ಯ ಕಲ್ಪಿಸುವುದು ಸಂವಿಧಾನದ 14ನೇ ವಿಧಿಯ ಉಲ್ಲಂಘನೆ

ಅನುಭವ ಮಂಟಪ: ಜಾತಿ ಆಧಾರದ ನಿಗಮ ಸಲ್ಲದು

ಕೆ.ವಿ. ಧನಂಜಯ Updated:

ಅಕ್ಷರ ಗಾತ್ರ : | |

ವೀರಶೈವ– ಲಿಂಗಾಯತರಿಗಾಗಿ ಪ್ರತ್ಯೇಕ ನಿಗಮವನ್ನು ರಚಿಸುವ ವಿವಾದಾತ್ಮಕ ತೀರ್ಮಾನವನ್ನು ಕರ್ನಾಟಕ ಸರ್ಕಾರವು ಇತ್ತೀಚೆಗೆ ಕೈಗೊಂಡಿದೆ. ನಿರೀಕ್ಷೆಯಂತೆ, ತಮಗೂ ಪ್ರತ್ಯೇಕ ನಿಗಮವನ್ನು ರಚಿಸುವಂತೆ ಇತರ ಜಾತಿಗಳವರು ಬೇಡಿಕೆ ಇಟ್ಟಿದ್ದಾರೆ.

ಯಾವುದೇ ಒಂದು ಜಾತಿಗಾಗಿ ನಿಗಮ ರಚಿಸಬಾರದು ಎಂದು ನಿರ್ದಿಷ್ಟವಾಗಿ ಸಂವಿಧಾನದಲ್ಲಿ ಹೇಳಿದ್ದಾಗಲಿ, ಸಂಸತ್ತು ಅಥವಾ ಕರ್ನಾಟಕ ವಿಧಾನಸಭೆಯು ಕಾನೂನು ರೂಪಿಸಿದ್ದಾಗಲಿ ಇಲ್ಲ. ವಾಸ್ತವದಲ್ಲಿ, ಯಾವುದೇ ನಿರ್ದಿಷ್ಟ ಜಾತಿಗೆ ವಿಶೇಷ ಸವಲತ್ತುಗಳನ್ನು ನೀಡಬಾರದು ಎಂದು ಸಂವಿಧಾನವಾಗಲೀ ಯಾವುದೇ ಕಾನೂನಾಗಲೀ ಹೇಳುವುದಿಲ್ಲ. ವೀರಶೈವ– ಲಿಂಗಾಯತ ನಿಗಮ ರಚಿಸುವಂತೆ ಸರ್ಕಾರಕ್ಕೆ ಸಲಹೆ ನೀಡಿದವರು ಯಾರೇ ಇರಲಿ, ಅವರು ತಮ್ಮ ಸಮರ್ಥನೆಗೆ ಈ ಕಾರಣವನ್ನೇ ಹೇಳಿರಬಹುದು. ಆದರೆ, ಕರ್ನಾಟಕ ಸರ್ಕಾರ ಮತ್ತು ಅದರ ವಕೀಲರು ಸಂಪೂರ್ಣವಾಗಿ ಎಡವಿದ್ದಾರೆ. ಅಲ್ಲದೆ, ಸಂವಿಧಾನ ಕುರಿತ ಅವರ ತಿಳಿವಳಿಕೆ ಅತ್ಯಲ್ಪವಾದುದು.

ನಮ್ಮ ಸಂವಿಧಾನವು ನಾಗರಿಕರಿಗೆ ಹಲವು ಮೂಲಭೂತ ಹಕ್ಕುಗಳನ್ನು ನೀಡುತ್ತದೆ. ಅದರಲ್ಲಿ ಮೊದಲನೆಯದ್ದು ಮತ್ತು ಅತ್ಯಂತ ಪ್ರಮುಖವಾದದ್ದು ಕಾನೂನಿನ ಮುಂದೆ ಸಮಾನತೆ ಹಾಗೂ ಕಾನೂನುಗಳಡಿ ಸಮಾನ ರಕ್ಷಣೆಯ ಹಕ್ಕು (ವಿಧಿ 14). ಆದ್ದರಿಂದ ಯಾವುದೇ ಜಾತಿಯ ಪರ ವಹಿಸುವುದು ಅಥವಾ ವಿಶೇಷ ಸೌಲಭ್ಯಗಳನ್ನು ನೀಡುವುದು ಸಂವಿಧಾನದ 14ನೇ ವಿಧಿಯ ಉಲ್ಲಂಘನೆಯಾಗುತ್ತದೆ. ಈ ಕಾರಣದಿಂದ ವೀರಶೈವ– ಲಿಂಗಾಯತ ನಿಗಮವನ್ನು ನ್ಯಾಯಾಲಯವು ರದ್ದುಪಡಿಸಬಹುದು.

ಹಾಗಿದ್ದರೆ, ಒಂದು ನಿರ್ದಿಷ್ಟ ಜಾತಿಯ ಬದಲು, ಹಿಂದುಳಿದಿರುವಿಕೆಯ ಆಧಾರದಲ್ಲಿ ಹಲವು ಜಾತಿಗಳು ಅಥವಾ ಪಂಗಡಗಳನ್ನು ಸೇರಿಸಿದ ಒಂದು ವರ್ಗದ ಪರವಾಗಿ ಕಾನೂನು ರೂಪಿಸಬಹುದೇ? ಸಂವಿಧಾನದ ವಿಧಿ 15 ಮತ್ತು 16ರ ಉದ್ದೇಶವೇ ಇದಾಗಿದೆ. ಶಿಕ್ಷಣ ಹಾಗೂ ಸಾರ್ವಜನಿಕ ಕ್ಷೇತ್ರದ ಉದ್ಯೋಗಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗದವರಿಗೆ ವಿಶೇಷ ಅವಕಾಶಗಳನ್ನು ಕಲ್ಪಿಸಲು ಅನುಕೂಲವಾಗುವ ಕಾನೂನು ರೂಪಿಸಲು ಇವು ರಾಜ್ಯ ಸರ್ಕಾರಗಳಿಗೆ ಅವಕಾಶ ನೀಡುತ್ತವೆ. ಪರಿಶಿಷ್ಟ ಜಾತಿ ಎಂಬುದು ಒಂದು ನಿರ್ದಿಷ್ಟ ಜಾತಿಯಲ್ಲ. ವಾಸ್ತವದಲ್ಲಿ ‘ಪರಿಶಿಷ್ಟ ಜಾತಿ’ ಎಂಬ ಹೆಸರಿನ ಒಂದು ಜಾತಿಯೇ ಈ ದೇಶದಲ್ಲಿಲ್ಲ. ಅದು ಜಾತಿಯೊಂದರ ಕಾನೂನಾತ್ಮಕ ಪರಿಭಾಷೆಯಷ್ಟೇ.

ಜನಸಂಖ್ಯೆಯ ಒಂದು ವರ್ಗದ ಹಿಂದುಳಿದಿರುವಿಕೆಯನ್ನು ಗುರುತಿಸಿ ಆ ವರ್ಗವನ್ನು ಇತರ ವರ್ಗದವರ ಸರಿಸಮಕ್ಕೆ ತರಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಮತ್ತು ಅದಕ್ಕಾಗಿ ಕಾನೂನು ರೂಪಿಸಲು ಸಂವಿಧಾನವು ಸರ್ಕಾರಕ್ಕೆ ಅವಕಾಶ ನೀಡುತ್ತದೆ.

ಹಿಂದುಳಿದಿರುವಿಕೆಯನ್ನು ಗುರುತಿಸಲು, ಒಂದು ಜಾತಿ ಅಥವಾ ಬುಡಕಟ್ಟಿನ ಬಹುಸಂಖ್ಯೆಯ ಜನರ ಹಿಂದುಳಿದಿರುವಿಕೆಯ ಒಟ್ಟಾರೆ ಪ್ರಮಾಣವು ಅತ್ಯುತ್ತಮ ಮಾಪಕ ಎಂಬ ವಿಚಾರದಲ್ಲಿ ನಮ್ಮ ಸಂವಿಧಾನ ಹುಟ್ಟುವುದಕ್ಕೂ ಮೊದಲೇ ಒಮ್ಮತವಿತ್ತು. ಆದ್ದರಿಂದ, ಹಿಂದುಳಿದಿರುವಿಕೆಯ ಮಾನದಂಡವನ್ನು ಮೊದಲು ನಿರ್ಧರಿಸಿ, ಆನಂತರ ಅರ್ಹ ಜಾತಿಗಳವರನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಲ್ಲಿ ವಸ್ತುನಿಷ್ಠವಾಗಿ ವರ್ಗೀಕರಿಸಲಾಯಿತು.

ಹಿಂದುಳಿದಿರುವಿಕೆಯ ಮಾನದಂಡವನ್ನು ನಿಗದಿ ಮಾಡುವಲ್ಲಿಗೆ ರಾಜಕೀಯವು ಸೀಮಿತವಾಗಬೇಕು. ಇಂಥ ಮಾನದಂಡಗಳು ನಿಗದಿಯಾದ ನಂತರ ಒಂದು ಜಾತಿ ಅಥವಾ ಬುಡಕಟ್ಟನ್ನು ಈ ವರ್ಗದೊಳಗೆ ಸೇರಿಸುವ ಅಥವಾ ಹೊರಗಿಡುವ ಪ್ರಕ್ರಿಯೆಯು ವಸ್ತುನಿಷ್ಠ ಹಾಗೂ ದೃಢೀಕರಿಸಬಹುದಾದ ಅಂಶಗಳನ್ನು ಹೊಂದಿರಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ನಮ್ಮ ಸಂವಿಧಾನದಲ್ಲಿಯೇ ಮಾನ್ಯತೆ ನೀಡಲಾಗಿದೆ. 

ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ಜಾತಿಗಳನ್ನು ಈ ವ್ಯಾಪ್ತಿಯೊಳಗೆ ತರುವ ಅಗತ್ಯವು ಸಂವಿಧಾನ ಜಾರಿಯಾಗಿ ಕೆಲವು ದಶಕಗಳೊಳಗೆ ಕಾಣಿಸಿತು. ಆದರೆ, ಇಂಥ ಯಾವ ಸಂದರ್ಭದಲ್ಲೂ ಒಂದು ಜಾತಿಯನ್ನು ಆಧಾರವಾಗಿಟ್ಟು ಕಾನೂನು ರೂಪಿಸಿದ್ದಾಗಲಿ, ಆಯೋಗ ರಚಿಸಿದ್ದಾಗಲಿ ಕಾಣಸಿಗುವುದಿಲ್ಲ.

ಇದಕ್ಕೆ ಕಾರಣ ಸರಳವಾಗಿದೆ, ಜಾತಿ ಎಂಬುದು ಮೂಲದಲ್ಲಿಯೇ ವಿಭಜಕ ಮತ್ತು ಹೊರಗಿಡುವಿಕೆಯ ಸಂಕೇತವಾಗಿದೆ. ಯಾವುದೇ ಒಂದು ಜಾತಿಗೆ ಸರ್ಕಾರದ ಪೋಷಣೆ ಬೇಕಾಗಿದೆ ಎಂಬ ಕಾರಣವನ್ನು ಮುಂದಿಟ್ಟು, ಆ ಜಾತಿಗಾಗಿ ನಿಗಮವೊಂದನ್ನು ರಚಿಸಿ, ಹೆಚ್ಚಿನ ಅನುದಾನವನ್ನು ನೀಡಬೇಕೇ? ಇಂತಹ ಕ್ರಮವು ಇತರ ಜಾತಿಗಳಲ್ಲಿ ಬಹಿರಂಗವಾಗಿಯೇ ಅಸಮಾಧಾನ ಉಂಟು ಮಾಡುತ್ತದೆ. ಸಮಾನತೆಯ ತತ್ವದ ಉಲ್ಲಂಘನೆಯ ಈ ನಡೆಯನ್ನೇ ಸಂವಿಧಾನದ 14ನೇ ವಿಧಿಯು ನಿಷೇಧಿಸುತ್ತದೆ. 

ವೀರಶೈವ– ಲಿಂಗಾಯತ ಸಮುದಾಯವು ವಿಶೇಷ ಸೌಲಭ್ಯಗಳಿಗೆ ಅರ್ಹವಾಗಿದೆ ಎಂಬುದಕ್ಕೆ ಸರ್ಕಾರವು ಒಂದಲ್ಲ ಒಂದು ಕಾರಣ ಅಥವಾ ವಾದವನ್ನು ಮಂಡಿಸಬಹುದು. ಆದರೆ, ಇಂತಹುದೇ ಲಕ್ಷಣಗಳಿರುವ ಬೇರೆ ಜಾತಿಗಳು ಅಥವಾ ಗುಂಪುಗಳು ರಾಜ್ಯದಲ್ಲಿ ಯಾವುವು ಇವೆ ಮತ್ತು ಆ ಜಾತಿಗಳಿಗೆ ನಿಗಮಗಳನ್ನು ಯಾಕೆ ರಚಿಸಿಲ್ಲ ಎಂಬ ಪ್ರಶ್ನೆಗಳನ್ನು ಕೇಳಲು ಸಂವಿಧಾನದ 14ನೇ ವಿಧಿಯು ಅವಕಾಶ ಒದಗಿಸುತ್ತದೆ. ಅರ್ಹವಾದ ಪ್ರತಿ ಜಾತಿಗೂ ನಿಗಮವನ್ನು ರಚಿಸುವವರೆಗೆ ವೀರಶೈವ–ಲಿಂಗಾಯತರಿಗಾಗಿ ನಿಗಮ ರಚಿಸುವುದು ಸಾಧ್ಯವಿಲ್ಲ ಅಥವಾ ಅದು ಕಾರ್ಯಸಾಧ್ಯವಲ್ಲ. ವೀರಶೈವ–ಲಿಂಗಾಯತ ನಿಗಮ ರಚನೆಯ ಸರ್ಕಾರದ ಕ್ರಮವು ಸಂವಿಧಾನದ 14ನೇ ವಿಧಿಯ ಉಲ್ಲಂಘನೆ. ಆ ಕಾರಣಕ್ಕಾಗಿಯೇ, ವೀರಶೈವ–ಲಿಂಗಾಯತ ನಿಗಮ ರಚನೆಯು ಅಸಾಂವಿಧಾನಿಕ ಮತ್ತು ಕಾನೂನುಬಾಹಿರ. ಇಲ್ಲಿ ಇರುವ ಒಂದೇ ಪ್ರಶ್ನೆ ಏನೆಂದರೆ, ಸಾಂವಿಧಾನಿಕ ನ್ಯಾಯಾಲಯವೊಂದು ಈ ನಿಗಮವನ್ನು ಎಷ್ಟು ಬೇಗನೆ ರದ್ದು ಮಾಡಲಿದೆ ಎಂಬುದಷ್ಟೇ ಆಗಿದೆ.

(ಲೇಖಕ ಸುಪ್ರೀಂ ಕೋರ್ಟ್‌ನಲ್ಲಿ ವಕೀಲ)

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು