ಮಂಗಳವಾರ, ಮಾರ್ಚ್ 28, 2023
31 °C
ಕೋವಿಡ್‌ ಮೂರನೇ ಅಲೆ ಅಪ್ಪಳಿಸುವ ಮುನ್ಸೂಚನೆ ಇದ್ದರೂ ಜನರ ನಿರ್ಲಕ್ಷ್ಯದ ವರ್ತನೆಗೆ ಕಾರಣವೇನು?

ವಿಶ್ಲೇಷಣೆ: ಕೋವಿಡ್ ಎಂಬ ನಾಗರಿಕತೆಯ ರೋಗ

ಡಿ.ಎಸ್.ನಾಗಭೂಷಣ Updated:

ಅಕ್ಷರ ಗಾತ್ರ : | |

Prajavani

‘ಕೋವಿಡ್ 3ನೇ ಅಲೆಯ ತೂಗುಕತ್ತಿ’ ಎಂಬ ಮುಖ್ಯ ಶೀರ್ಷಿಕೆಯಡಿ ಕೋವಿಡ್ ಪಿಡುಗಿನ ಇನ್ನೂ ಕೊನೆಗಾಣದ ಅಪಾಯದ ಬಗ್ಗೆ ಪತ್ರಿಕೆಯು ಮುಖಪುಟದ ಪ್ರಧಾನ ಸುದ್ದಿ (ಪ್ರ.ವಾ., ಜುಲೈ 13) ಮಾಡಿದೆ. ಈ ಸುದ್ದಿಯ ಮೇಲ್ಭಾಗದಲ್ಲೇ ಈ ಸುದ್ದಿಯ ಭಾಗವಾಗಿ, ಭಯ ಬಿಟ್ಟು ಬೀದಿಗಿಳಿದ ಜನ ಮತ್ತು ‘ಆರೋಗ್ಯ ಸುಧಾರಣೆ ವ್ಯವಸ್ಥೆಗಾಗಿ ₹ 1,500 ಕೋಟಿ ಕ್ರಿಯಾ ಯೋಜನೆ’ ಎಂಬ ಉಪಶೀರ್ಷಿಕೆಗಳ ಎರಡು ಸುದ್ದಿಗಳಿವೆ. ಈ ಸುದ್ದಿ ವಿನ್ಯಾಸವೇ ನಮ್ಮ ಸಮೂಹ ಮಾಧ್ಯಮಗಳೂ ಸೇರಿದಂತೆ ಇಂದಿನ ‘ವ್ಯವಸ್ಥೆ’ ಕೋವಿಡ್ ಮಹಾಮಾರಿಯನ್ನು ನಿಭಾಯಿಸಲು ಅಳವಡಿಸಿಕೊಂಡಿರುವ ಮಾರ್ಗದ ಪರಿಚಯ ಮಾಡಿಕೊಡುವಂತಿದೆ.

ಇತ್ತೀಚೆಗೆ ತಾನೇ ಕೋವಿಡ್‍ನ ಎರಡನೆಯ ಅಲೆಗೆ ಸಿಕ್ಕಿ ಲಕ್ಷಾಂತರ ಜನ ಸಾವನ್ನಪ್ಪಿದ್ದಾರೆ. ಇವರಲ್ಲಿ ಹೆಚ್ಚೂಕಡಿಮೆ ಪ್ರತೀ ಕುಟುಂಬದ ಹತ್ತಿರದ ಅಥವಾ ದೂರದ ಒಬ್ಬಿಬ್ಬರು ಬಂಧುಗಳಾದರೂ ಸೇರಿದ್ದಾರೆ. ಹಾಗೇ ಈ ಸಾವು ಇವರಲ್ಲಿ ಕೆಲವರ ಅಂತಿಮ ಮುಖದರ್ಶನವಾಗಲೀ ಸಮರ್ಪಕ ಸಂಸ್ಕಾರವಾಗಲೀ ಸಾಧ್ಯವಾಗದ ಪರಿಸ್ಥಿತಿಯನ್ನೂ ಜನ ಕಂಡಿದ್ದಾರೆ. ಉತ್ತರ ಭಾರತದಲ್ಲಂತೂ ಸಾವಿನ ವೇಗ ಮತ್ತು ಭಯಂಕರತೆ ಹೇಗಿತ್ತೆಂದರೆ, ಸಂಬಂಧಿಕರಿಗೆ ಸೂಕ್ತ ಸಂಸ್ಕಾರ ನೆರವೇರಿಸಲು ಸ್ಮಶಾನದಲ್ಲಿ ಜಾಗ ಅಥವಾ ಅವಕಾಶ ಸಿಗಲಿಲ್ಲವೆಂತಲೋ ಹಣಕಾಸಿನ ಕೊರತೆಯಿಂದಲೋ ಅವರು ಸತ್ತ ತಮ್ಮ ಆಪ್ತರ ಶವಗಳನ್ನು ನದಿಗಳಿಗೆ ಎಸೆದುಹೋದ ಅಥವಾ ನದಿಗಳ ಮರಳಿನಲ್ಲಿ ಹುಗಿದ ಸುದ್ದಿಯನ್ನೂ ನೋಡಿದ್ದೇವೆ.

ಸತ್ತವರ ಮೇಲೆ ಮತ್ತು ಬದುಕುಳಿದವರ ಮೇಲೆ ಅವರ ಬಂಧುಗಳು ಲಕ್ಷಾಂತರ ರೂಪಾಯಿಗಳನ್ನು ವೈದ್ಯಕೀಯ ವೆಚ್ಚವಾಗಿ ಖರ್ಚು ಮಾಡಿದ್ದಾರೆ. ಇದ ರಿಂದಾಗಿ ಲಕ್ಷಾಂತರ ರೂಪಾಯಿಗಳ ವೈದ್ಯಕೀಯ ವಿಮೆ ಮಾಡಿದವರೂ ಸೇರಿದಂತೆ ಸಾವಿರಾರು ಕುಟುಂಬಗಳು ದರಿದ್ರಾವಸ್ಥೆ ತಲುಪಿವೆ. ಮೊದಲೇ ಇದ್ದ ಮತ್ತು ಆನಂತರ ಸಾಕಷ್ಟು ವ್ಯಾಪಕಗೊಳಿಸಿದ ಅತ್ಯಾಧುನಿಕ ಆರೋಗ್ಯ ಸೌಲಭ್ಯಗಳ, ಔಷಧ, ವೆಂಟಿಲೇಟರ್ ಮತ್ತು ಆಮ್ಲಜನಕ ಪೂರೈಕೆಯ ಸುಧಾರಣೆ ಹಾಗೂ ಕೋಟ್ಯಂತರ ರೂಪಾಯಿ ಮೌಲ್ಯದ ವೈದ್ಯಕೀಯ ವಿಮೆ ವ್ಯವಸ್ಥೆಯನ್ನು ಅಣಕಿಸುವಂತೆ ಕೋವಿಡ್ ಮಹಾಮಾರಿ ನಮ್ಮ ಕಣ್ಮುಂದೆಯೇ ಮಹಾದುರಂತವನ್ನು ಎಸಗಿಹೋಗಿದೆ. ರೋಗಕ್ಕೆ ಸಂಪೂರ್ಣವಲ್ಲದಿದ್ದರೂ ಒಂದು ಮಿತಿಯವರೆಗೆ ಮಾತ್ರ ರಕ್ಷಣೆ ಕೊಡು ವುದೆಂದು ಹೇಳಲಾಗುವ ಎರಡು ಸರದಿಗಳ ಲಸಿಕೆಗಳ ಪೈಕಿ ಮೊದಲ ಸರದಿಯೇ ನಮ್ಮ ಜನಸಮುದಾಯದ ಕನಿಷ್ಠ ಕ್ಷೇಮಕರ ಮಟ್ಟವನ್ನೂ ಮುಟ್ಟಿಲ್ಲ.

ಇಂತಹ ಅನಿಶ್ಚಯದ ಮತ್ತು ಆತಂಕದ ಪರಿಸ್ಥಿತಿ ಯಲ್ಲೂ ಜನ, ರೋಗದ ಸೋಂಕಿನ ವೇಗ ಸ್ವಲ್ಪ ತಹಬಂದಿಗೆ ಬಂದಿದೆ ಎಂಬ ವರದಿ ಪ್ರಕಟವಾಗಿ, ಸರ್ಕಾರ ಜನಜೀವನದ ಮೇಲಿನ ತನ್ನ ಕೆಲ ನಿರ್ಬಂಧಗಳನ್ನು ಸಡಿಲಗೊಳಿಸುತ್ತಿದ್ದಂತೆ, ತಡೆಯಿಂದ ಮುಕ್ತಗೊಳಿಸಲ್ಪಟ್ಟ ಪ್ರವಾಹದೋಪಾದಿಯಲ್ಲಿ ಕಂಡ ಕಂಡ ಕಡೆ ಸಂದಣಿ ನಿರ್ಮಿಸುತ್ತಿದ್ದಾರೆ ಎಂದರೆ ಏನು ಹೇಳುವುದು? ಇದಕ್ಕೇನು ಕಾರಣ? ಇದನ್ನು ಯೋಚಿಸದೆ ಜನಸಂದಣಿಯ ಬಗ್ಗೆ ಆತಂಕ ಸೃಷ್ಟಿಸಿದರೆ ಪ್ರಯೋಜನವೇನು? ಸೋಂಕಿನ ಮತ್ತು ಸೋಂಕು ತಂದೊಡ್ಡುವ ಸಾವಿನ ಭಯದಿಂದ ತಾವೀಗ ಪಾರಾಗಿಬಿಟ್ಟಿದ್ದೇವೆ ಎಂದು ಜನ ಭಾವಿಸಿಬಿಟ್ಟಿದ್ದಾರೆಯೇ? ಪತ್ರಿಕೆಯ ಪ್ರಧಾನ ಸುದ್ದಿಯೇ ತಿಳಿಸುತ್ತಿರುವಂತೆ, ಇನ್ನೊಂದೆರಡು ತಿಂಗಳಲ್ಲಿ ರೋಗದ ಮೂರನೆಯ ಅಲೆ ಅಪ್ಪಳಿಸುವ ಮುನ್ಸೂಚನೆಯನ್ನು ಹಲವು ವಿಜ್ಞಾನಿಗಳು ಮತ್ತು ಸರ್ಕಾರಗಳು ನೀಡಿವೆ. ಆದರೂ ಜನರ ಈ ವರ್ತನೆಗೆ ಕಾರಣವೇನು?

ಇದಕ್ಕೆ ಮುಖ್ಯ ಕಾರಣ, ಜನರಿಗೆ ಕೋವಿಡ್‍ನ ಮೂಲ ಕಾರಣವಾವುದು ಎಂದು ಸ್ಪಷ್ಟವಾಗಿ ವಿವರಿಸದಿರುವುದು. ಈ ರೋಗವನ್ನು ಈವರೆಗೆ, ಬಂದು ಹೋಗುವ, ಕೆಲವು ತಾತ್ಪೂರ್ತಿಕ ಭೌತಿಕ ರಕ್ಷಣಾ ಕ್ರಮಗಳ ಮತ್ತು ಔಷಧೋಪಚಾರಗಳ ಮೂಲಕ ನಿವಾರಿಸಿಕೊಳ್ಳಬಹುದಾದ ರೋಗವೆಂದು ನಿರೂಪಿಸಿರುವುದು. ಹಾಗಾಗಿಯೇ ಜನ ಇತರ ರೋಗಗಳು ವಾಸಿಯಾದ ನಂತರ ಸಾಮಾನ್ಯ ಜೀವನಕ್ಕೆ ಮರಳುವಂತೆ ಮರಳುತ್ತಿದ್ದಾರೆ. ಆದರೆ ಕೋವಿಡ್ ಹೀಗೆ ನಿಜವಾಗಿಯೂ ವಾಸಿಯಾಗುವ ಸಾಮಾನ್ಯ ರೋಗವೇ? ಈ ರೋಗವನ್ನು ಕುರಿತ ಮಾಹಿತಿ ಹಾಗೆ ಸೂಚಿಸುತ್ತಿಲ್ಲ.

ಇಂದಿನ ಕೊರೊನಾವು ಕೋವಿಡ್ ಕುಲದ ವೈರಾಣುವಿನ ಇತ್ತೀಚಿನ ರೂಪಾಂತರವಷ್ಟೆ. ವೈರಾಣುಗಳ ನಿವಾರಣೆಗೆ ಮನುಷ್ಯನ ವೈದ್ಯಕೀಯ ಪ್ರಯೋಗಗಳು ಹೆಚ್ಚಿದಂತೆ, ಅದಕ್ಕೆ ಸಡ್ಡು ಹೊಡೆದಂತೆ ಈ ರೂಪಾಂತರಗಳೂ ಹೆಚ್ಚುತ್ತಿವೆ. ಕೊರೊನಾ ವೈರಾಣು ವಿನ ಜೈವಿಕ ಉತ್ಪತ್ತಿಯ ಮೂಲ ಏನೇ ಇರಲಿ ಇದರ ರೋಗಶಕ್ತಿಯ ಅವತಾರ ಮೊದಲು ಕಂಡದ್ದು ಜಗತ್ತಿನ ಅತಿ ಕೈಗಾರಿಕೀಕೃತ ಮತ್ತು ಜನಸಂದಣಿಯ ನಗರ ಎನಿಸಿರುವ ಚೀನಾದ ವುಹಾನ್‍ನಲ್ಲಿ. ಇದು ರವಾನೆಯಾದದ್ದು ಅಲ್ಲಿಂದ ವಿಮಾನಗಳ ಮೂಲಕ ವಿವಿಧ ಉದ್ದೇಶಗಳಿಂದ ಇಟಲಿಯ ವಿವಿಧೆಡೆಗೆ ಪ್ರವಾಸಕ್ಕೆ ಹೊರಟ ಉಳ್ಳವರ ಮೂಲಕ (ಈ ಹಿಂದೆ ಸ್ವಲ್ಪ ಕಾಲ ಇಟಲಿಯಲ್ಲಿ ಕಮ್ಯುನಿಸ್ಟ್ ನೇತೃತ್ವದ ಸರ್ಕಾರ ವಿದ್ದಾಗ ಚೀನಾ ಆ ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡಿದ್ದರಿಂದಾಗಿ, ಆ ದೇಶ ದೊಡ್ಡ ಸಂಖ್ಯೆಯಲ್ಲಿ ಚೀನೀ ಉದ್ಯಮ ಮತ್ತು ಉದ್ಯಮಿಗಳ ಬೀಡಾಗಿದೆ ಎಂದು ಹೇಳಲಾಗುತ್ತದೆ.) ಜಗತ್ತಿನ ಅತಿ ದೊಡ್ಡ ಪ್ರವಾಸೀ ಆಕರ್ಷಣೆಯ ತಾಣವಾದ ಇಟಲಿ ಈ ರೋಗದ ಜಾಗತಿಕ ಪ್ರಸರಣ ಕೇಂದ್ರವಾಯಿತು. ಸೋಂಕು ಹರಡಿದ್ದು ವಿಮಾನ ಪ್ರಯಾಣಿಕರ ಮೂಲಕ. ಇದು ಭಾರತಕ್ಕೆ ಬಂದದ್ದು ಈ ಮಾರ್ಗದ ಮೂಲಕವೇ. ನಂತರ ಹಿಡಿದದ್ದು ಬೇರೆ ವಿವಿಧ ಮಾರ್ಗಗಳನ್ನು. ಜನರ ವಿವಿಧ ಉದ್ದೇಶಗಳ ಪ್ರಯಾಣದ ಮೂಲಕ.

ಮೇಲಿನ ವಿವರಗಳನ್ನು ಸಮಗ್ರವಾಗಿ ನೋಡಿದ ಯಾವುದೇ ಸೂಕ್ಷ್ಮ ಗ್ರಹಿಕೆಯ ಮನಸ್ಸಿಗೆ ಅನ್ನಿಸುವುದೇನೆಂದರೆ, ಈ ಕೋವಿಡ್ ವ್ಯಕ್ತಿಗತವಾಗಿ ನೋಡಿದಾಗ ಒಂದು ದೈಹಿಕವಾದ ರೋಗವಾಗಿ ಕಂಡರೂ ಸಾಮಾ ಜಿಕವಾಗಿ, ಜಾಗತಿಕವಾಗಿ ನೋಡಿದಾಗ ಇದೊಂದು ಜೀವನದೃಷ್ಟಿಯ, ಜೀವನಕ್ರಮದ, ಒಂದು ನಾಗರಿ ಕತೆಯ ರೋಗ ಎನ್ನುವುದು. ಇದರ ಮೊದಲ ಅವತಾರ ಕಂಡದ್ದು ಅತಿ ಕೈಗಾರಿಕೀಕೃತ ನಗರದಲ್ಲಿ. ನಂತರ ಇದು ಹರಡಿದ್ದು ಅಂತರರಾಷ್ಟ್ರೀಯ ಪ್ರವಾಸೋದ್ಯಮವೂ ಸೇರಿದಂತಿರುವ ಜಾಗತಿಕ ಉದ್ಯಮಶೀಲತೆಯ ಸಾಧನವಾದ ವಿಮಾನಗಳ ಮೂಲಕ. ಜಾಗತಿಕವಾಗಿ ರೋಗ ಹರಡುವ ವ್ಯವಹಾರವನ್ನು ಉದ್ಯಮಶೀಲತೆ ಎಂದು ಕರೆಯಬೇಕೋ ದಂಧೆ ಎಂದು ಕರೆಯಬೇಕೋ ಅದರಿಂದ ಸಂಕಷ್ಟಕ್ಕೊಳಗಾಗಿರುವ ಜನಸಮುದಾಯ ತೀರ್ಮಾನಿಸುವ ಕಾಲವೀಗ ಬಂದಿದೆ. ಆದರೆ ಜನಕ್ಕೆ ಇದರ ಪರಿವೆಯೇ ಇಲ್ಲ. ಏಕೆಂದರೆ ದಂಧೆ ಒಂದು ಉದ್ಯಮ ಎಂಬ ಹೆಸರು ಪಡೆದು ಇಂತಹ ಉದ್ಯಮಶೀಲತೆಯ ಹೆಚ್ಚಳವೇ ದೇಶವೊಂದರ ಪ್ರಗತಿ ಸೂಚಕವೆಂಬ ನಂಬಿಕೆ ಯನ್ನು ಜಗತ್ತಿನ ವಿವಿಧ ರೂಪಗಳ ಮತ್ತು ಹಂತಗಳ ಉದ್ಯಮಿಗಳು ಬಿತ್ತಿದ್ದಾರೆ. ಇದನ್ನು ಜಾಗತೀಕರಣವೆಂದು ಕರೆಯಲಾಗಿದೆ.

ನಮ್ಮ ದೇಶವೂ ಸರ್ಕಾರಗಳೂ ಜನರೂ ಇದಕ್ಕೆ ಹೊರತಲ್ಲ. ಏಕೆಂದರೆ ಜನ ನೋಡಿ ಹೇಗೆ ಬೀದಿಗಳನ್ನು ತುಂಬುತ್ತಿದ್ದಾರೆ. ಅದು ಅಂಗಡಿ, ಮಾಲ್‌ಗಳಾಗಿರಬಹುದು, ಪ್ರವಾಸಿ ತಾಣಗಳಾಗಿರಬಹುದು. ಜಿಮ್, ಈಜುಕೊಳ, ಧಾರ್ಮಿಕ ತಾಣಗಳಾಗಿರಬಹುದು. ಎಲ್ಲದರ ಹಿಂದಿರುವುದು ಈ ಜಾಗತೀಕೃತ ಉದ್ಯಮಶೀಲತೆಯ ಹೆಗ್ಗುರುತಾದ ವಿವಿಧ ರೂಪಗಳ ಕೊಳ್ಳುಬಾಕ ಸಂಸ್ಕೃತಿಯೇ. ಜನ ಪೂಜಾಸ್ಥಳಗಳಿಗೆ ಹೋಗುವುದೂ ಯಶಸ್ಸನ್ನು, ಅದರಿಂದ ಸಿಗುವ ‘ಶಾಂತಿ’ಯನ್ನು ಕೊಳ್ಳಲೆಂದೇ ಅಲ್ಲವೇ? ಯಶಸ್ಸನ್ನು ಅವಲಂಬಿಸದ ಶಾಂತಿ ಅಥವಾ ನೆಮ್ಮದಿಗೆ ಈ ಧಾರ್ಮಿಕ ಪೂಜಾಸ್ಥಳಗಳೇನೂ ಅವಶ್ಯಕವಿಲ್ಲವಲ್ಲವೇ?

ನಮ್ಮ ಸರ್ಕಾರ ಇಷ್ಟೆಲ್ಲ ಯೋಚಿಸುವ ಸ್ಥಿತಿಯಲ್ಲಿ ಇಲ್ಲ. ಏಕೆಂದರೆ ಅದಕ್ಕೆ ಕಾರಣವಾದ ರಾಜಕಾರಣ ನಿಂತಿರುವುದೇ ಇಂತಹ ಎಲ್ಲ ರೂಪಗಳ ಉದ್ಯಮಶೀಲತೆ ಗಳ ಮೇಲೇ; ಅರ್ಥಾತ್ ದಂಧೆಗಳ ಮೇಲೇ. ಮಂಡ್ಯ ಜಿಲ್ಲೆಯ ಬೇಬಿ ಬೆಟ್ಟದಲ್ಲಿನ ಗಣಿಗಾರಿಕೆ ಎಂಬೊಂದು ಪುಟ್ಟ ‘ಉದ್ಯಮಶೀಲತೆ’ಯ ಬಗ್ಗೆ ಅದು ವರ್ಷಗಟ್ಟಲೆ ಬಗೆ ಹರಿಯದಂತೆ ಹೇಗೆ ವಾದ-ವಿವಾದಗಳ ಹುತ್ತ ನಿರ್ಮಿಸಿಬಿಡಲಾಗಿದೆ ಎಂಬುದೇ ಒಂದು ಪುಟ್ಟ ಉದಾಹರಣೆ.

ಕೋವಿಡ್‍ನ ಮುಖ್ಯ ಸಮಸ್ಯೆ ಎಂದರೆ, ಸರ್ಕಾರಕ್ಕಾಗಲೀ ಜನಗಳಿಗಾಗಲೀ ಅದು ತಾವು ಶಾಶ್ವತವಾಗಿ ಮುಕ್ತವಾಗಬೇಕಾದ ರೋಗವಾಗಿ ಕಂಡಿಲ್ಲ. ಹಾಗಾಗಿಯೇ ನಮ್ಮ ಸರ್ಕಾರ ಈಗ ಮತ್ತೊಂದು ಸಾವಿರದ ಐದುನೂರು ಕೋಟಿ ರೂಪಾಯಿಗಳ ವೆಚ್ಚದ ಆರೋಗ್ಯ ಸುಧಾರಣೆಯ ವೈದ್ಯಕೀಯ ಕ್ರಿಯಾಯೋಜನೆಯನ್ನು ಪ್ರಕಟಿಸಿದೆ. ಇದಕ್ಕೆ ಬೇಕಾದ ಹಣವನ್ನು ಸರ್ಕಾರಕ್ಕೆ ಒದಗಿಸುವ ವಿವಿಧ ಚಟುವಟಿಕೆಗಳಿಗಾಗಿ ಜನ ಬೀದಿಗೆ ನುಗ್ಗುತ್ತಿದ್ದಾರೆ. ಇದೊಂದು ವಿಷವ್ಯೂಹವಷ್ಟೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು