ಗುರುವಾರ , ಜೂನ್ 24, 2021
24 °C
ಪೇಟೆಂಟ್ ಸಡಿಲಗೊಳಿಸುವ ವಿಷಯ ಬಂದಾಗ ಔಷಧ ಕಂಪನಿಗಳು ವಿಭಿನ್ನವಾಗಿ ವರ್ತಿಸುವುದೇಕೆ?

ವೈ.ಜಿ.ಮುರಳೀಧರನ್ ಬರಹ: ಪೇಟೆಂಟ್‌ ವ್ಯೂಹದಲ್ಲಿ ಕೋವಿಡ್ ಲಸಿಕೆ

ವೈ.ಜಿ.ಮುರಳೀಧರನ್ Updated:

ಅಕ್ಷರ ಗಾತ್ರ : | |

ಕೋವಿಡ್ ಎರಡನೇ ಅಲೆಗೆ ತತ್ತರಿಸಿರುವ ಭಾರತ, ಚಿಕಿತ್ಸೆಗೆ ತನ್ನಲ್ಲಿರುವ ಎಲ್ಲ ಅಸ್ತ್ರಗಳನ್ನೂ ಬಳಸುತ್ತಿದೆ. ಆದರೆ ಈಗಿರುವ ಗಂಭೀರ ಪರಿಸ್ಥಿತಿ ಮತ್ತು ಮೂರನೇ ಅಲೆಯ ಸಾಧ್ಯತೆ ಬಗ್ಗೆ ಈಗಾಗಲೇ ತಜ್ಞರ ಅನಿಸಿಕೆ ವ್ಯಕ್ತವಾಗುತ್ತಿರುವುದರಿಂದ, ಕೋವಿಡ್ ನಿಯಂತ್ರಿಸಲು ಲಸಿಕೆಯ ಉತ್ಪಾದನೆ ಮತ್ತು ವಿತರಣೆಯತ್ತ ಹೆಚ್ಚು ಗಮನ ಹರಿಸಬೇಕಿದೆ. ಆದರೆ ಭಾರತ ತಕ್ಷಣ ಲಸಿಕೆಯ ಉತ್ಪಾದನೆಯನ್ನು ಹೆಚ್ಚಿಸಲು ಸಾಧ್ಯವಿಲ್ಲ.

ವರದಿಯೊಂದರ ಪ್ರಕಾರ, ಸುಮಾರು 16 ಕೋಟಿ ಜನರು (ಜನಸಂಖ್ಯೆಯಲ್ಲಿ ಶೇ 2.4ರಷ್ಟು ಮಂದಿ ಎರಡು ಡೋಸ್ ಹಾಗೂ ಶೇ 9.7ರಷ್ಟು ಮಂದಿ ಒಂದು ಡೋಸ್) ಲಸಿಕೆ ತೆಗೆದುಕೊಂಡಿದ್ದಾರೆ. ದೇಶದ ಒಟ್ಟು ಜನಸಂಖ್ಯೆಯನ್ನು ಪರಿಗಣಿಸಿದರೆ ಈ ಸಾಧನೆ ತೃಪ್ತಿಕರವಲ್ಲ.

ವಿಶ್ವದಾದ್ಯಂತ ಕೋವಿಡ್ ಲಸಿಕೆ ಉತ್ಪಾದನೆಯ ಸ್ಥಿತಿಯೂ ಆಶಾದಾಯಕವಾಗಿಲ್ಲ. ಲಸಿಕೆಯ ಉತ್ಪಾದನೆ ಕೆಲವೇ ಬಹುರಾಷ್ಟ್ರೀಯ ಔಷಧ ಕಂಪನಿಗಳ ವಶದಲ್ಲಿದ್ದು, ಇತರ ಕಂಪನಿಗಳಿಗೆ ಅನುಮತಿ ನೀಡದಿದ್ದಲ್ಲಿ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುವ ಸಾಧ್ಯತೆ ಇದೆ.

ಕಳೆದ ಅಕ್ಟೋಬರ್‌ನಲ್ಲಿ ಭಾರತ ಮತ್ತು ಆಫ್ರಿಕಾ ಕೋವಿಡ್ ಔಷಧ ಹಾಗೂ ಲಸಿಕೆಯ ಕೊರತೆ ನೀಗಿಸಲು ಅವುಗಳ ಮೇಲಿನ ಬೌದ್ಧಿಕ ಆಸ್ತಿ ಹಕ್ಕು (ಪೇಟೆಂಟ್) ರದ್ದುಪಡಿಸುವಂತೆ ವಿಶ್ವ ವ್ಯಾಪಾರ ಸಂಘಟನೆಯಲ್ಲಿ (ಡಬ್ಲ್ಯುಟಿಒ) ಪ್ರಸ್ತಾವ ಸಲ್ಲಿಸಿದವು. ಬಹುತೇಕ ಶ್ರೀಮಂತ ರಾಷ್ಟ್ರಗಳು ಪ್ರಸ್ತಾವವನ್ನು ವಿರೋಧಿಸಿದ್ದರೂ ನೂರಕ್ಕೂ ಹೆಚ್ಚು ಬಡ ರಾಷ್ಟ್ರಗಳು ಭಾರತದ ನಿಲುವನ್ನು ಸ್ವಾಗತಿಸಿದವು.

ಆರಂಭದಲ್ಲಿ ಪೇಟೆಂಟ್ ರದ್ದುಪಡಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಅಮೆರಿಕ ಈಗ ತನ್ನ ನಿಲುವನ್ನು ಬದಲಾಯಿಸಿದೆ. ಅಧ್ಯಕ್ಷ ಜೋ ಬೈಡನ್ ಅವರ ಇತ್ತೀಚಿನ ಹೇಳಿಕೆಯು ಪ್ರಸ್ತಾವಕ್ಕೆ ಜೀವ ತಂದಿದೆ. ಅಮೆರಿಕವು ಕೋವಿಡ್ ಲಸಿಕೆಗೆ ಮಾತ್ರ ಸೀಮಿತ ಅವಧಿಗೆ ಪೇಟೆಂಟ್ ರದ್ದುಗೊಳಿಸಲು ಅವಕಾಶ ದೊರಕಿಸಿಕೊಡುವ ಸಂಭವ ಕಾಣುತ್ತಿದೆ. ಪೇಟೆಂಟ್ ವಿಷಯದಲ್ಲಿ ಬಹುರಾಷ್ಟ್ರೀಯ ಔಷಧ ಕಂಪನಿಗಳು ಮತ್ತು ಬಡರಾಷ್ಟ್ರಗಳ ನಡುವೆ ಸಮರ ಆರಂಭವಾಗುವ ಎಲ್ಲ ಸೂಚನೆಗಳೂ ಕಂಡು ಬರುತ್ತಿವೆ.

ಡಬ್ಲ್ಯುಟಿಒ ಒಪ್ಪಂದಗಳಲ್ಲಿ ಬೌದ್ಧಿಕ ಆಸ್ತಿ ಹಕ್ಕು (ಟ್ರಿಪ್ಸ್) ಮುಖ್ಯವಾದದ್ದು. ಟ್ರಿಪ್ಸ್ ಪ್ರಕಾರ ಔಷಧ, ಲಸಿಕೆ ಇತ್ಯಾದಿ ತಯಾರಿಸುವ ಮೂಲ ಕಂಪನಿಗಳಿಗೆ ರಕ್ಷಣೆ ನೀಡಲಾಗಿದೆ. ಸಂಶೋಧನೆ, ಉತ್ಪಾದನೆ ಇತ್ಯಾದಿಗೆ ಕಂಪನಿಗಳು ಕೋಟ್ಯಂತರ ಡಾಲರ್ ವೆಚ್ಚ ಮಾಡಿ ಹೊಸ ಮಾಲಿಕ್ಯೂಲ್ (ಔಷಧ) ತಯಾರಿಸುತ್ತವೆ. ಅದಕ್ಕಾಗಿ ಅವು ವರಮಾನ ಅಪೇಕ್ಷಿಸುವುದು ತಪ್ಪಲ್ಲ. ಆದ್ದರಿಂದ ಆ ಕಂಪನಿಗಳಿಗೆ ಪೇಟೆಂಟ್ ನೀಡಲಾಗುತ್ತದೆ. ಇನ್ಯಾವುದೇ ಕಂಪನಿ ಈ ಔಷಧವನ್ನು ಉತ್ಪಾದನೆ ಮಾಡುವಂತಿಲ್ಲ. ಹಾಗೊಮ್ಮೆ ಮಾಡಬೇಕಾದರೆ ಮೂಲ ಕಂಪನಿ ಜೊತೆ ಒಪ್ಪಂದ ಮಾಡಿಕೊಂಡು ಅದಕ್ಕೆ ಸೂಕ್ತ ಗೌರವಧನ ನೀಡಬೇಕಾಗುತ್ತದೆ. ಪ್ರಸ್ತುತ ಈ ರೀತಿಯ ಒಪ್ಪಂದಗಳು ಬಹಳಷ್ಟಿವೆ.

ಕೋವಿಡ್‍ಗೆ ಸಂಬಂಧಪಟ್ಟಂತೆ ಹೇಳುವುದಾದರೆ, ಬ್ರಿಟನ್ ಮೂಲದ ಆಸ್ಟ್ರಾಜನಿಕಾ ಕಂಪನಿಯೊಂದಿಗೆ ಪುಣೆಯಲ್ಲಿರುವ ಸೀರಂ ಇನ್‍ಸ್ಟಿಟ್ಯೂಟ್ ಒಪ್ಪಂದ ಮಾಡಿಕೊಂಡು ಲಸಿಕೆ ಉತ್ಪಾದಿಸುತ್ತಿದೆ. ಆದರೆ ಅತ್ಯಂತ ಪರಿಣಾಮಕಾರಿ ಲಸಿಕೆ ತಯಾರಿಸುತ್ತಿರುವ ಫೈಜರ್ ಮತ್ತು ಮೊಡೆರ್ನಾ ಕಂಪನಿಗಳು ಒಪ್ಪಂದ ಮಾಡಿಕೊಳ್ಳುವುದಕ್ಕೆ ಸಿದ್ಧವಿಲ್ಲ. ನೊವಾವ್ಯಾಕ್ಸ್ ಸೇರಿದಂತೆ ಬಲಿಷ್ಠ ಔಷಧ ಸಂಸ್ಥೆಗಳು ಭಾರತದ ಈ ನಿಲುವನ್ನು ವಿರೋಧಿಸಿವೆ. ನೊವಾವ್ಯಾಕ್ಸ್ ಕಂಪನಿಯು ಹೇಳಿಕೆಯೊಂದನ್ನು ನೀಡಿ, ಭಾರತದ ಈ ಪ್ರಸ್ತಾವವನ್ನು ಒಪ್ಪಿಕೊಂಡಲ್ಲಿ ಲಸಿಕೆ ಉತ್ಪಾದನೆಗೆ ಧಕ್ಕೆ ಉಂಟಾಗುತ್ತದೆ ಎಂದು ಹೇಳಿದೆ.

ಲಸಿಕೆ ಉತ್ಪಾದಿಸುವ ಕಂಪನಿಗಳು ಉದಾರ ನೀತಿಯನ್ನು ಅನುಸರಿಸಿ ಇತರ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಲ್ಲಿ ಲಸಿಕೆಯ ಅಭಾವ ಕೊನೆಗೊಳ್ಳುತ್ತದೆ. ಆದರೆ ಔಷಧ ಕಂಪನಿಗಳು, ಅದರಲ್ಲಿ ಆಸಕ್ತಿ ಇರುವ ರಾಜಕೀಯ ಪಕ್ಷಗಳು ಡಬ್ಲ್ಯುಟಿಒದಲ್ಲಿ ತಮ್ಮ ಹಿತ ರಕ್ಷಿಸಿಕೊಳ್ಳುವಲ್ಲಿ ಅಮೆರಿಕದ ಮೇಲೆ ಪ್ರಭಾವ ಉಂಟು ಮಾಡುತ್ತಿವೆ. ಈ ಮಧ್ಯೆ ‘ಕೋವಿಡ್-19 ವ್ಯಾಕ್ಸಿನ್ಸ್‌ ಗ್ಲೋಬಲ್ ಆ್ಯಕ್ಸೆಸ್’ (ಕೋವ್ಯಾಕ್ಸ್) ಎಂಬ ಸಂಸ್ಥೆಯು ಎಲ್ಲ ಕಂಪನಿಗಳಿಂದ ಲಸಿಕೆ ಪಡೆದು, ಅವಶ್ಯಕತೆ ಇರುವ ಸ್ಥಳಗಳಿಗೆ ಆದ್ಯತೆಯ ಮೇರೆಗೆ ಪೂರೈಸುತ್ತಿದೆ. ಔಷಧ ಕಂಪನಿಗಳು ಕೋವ್ಯಾಕ್ಸ್‌ಗೆ ಒಂದಿಷ್ಟು ಲಸಿಕೆಯನ್ನು ನೀಡಿ, ತಮ್ಮ ಸಾಮಾಜಿಕ ಜವಾಬ್ದಾರಿ ಮುಗಿಯಿತೆಂದು ಹೇಳಿಕೊಳ್ಳುತ್ತಿವೆ.

ಆದರೆ ಒಪ್ಪಂದದ ಅನ್ವಯ, ಸಾಂಕ್ರಾಮಿಕ ರೋಗದಂಥ ತುರ್ತು ಪರಿಸ್ಥಿತಿಯಲ್ಲಿ ಔಷಧ ತಯಾರಿಕೆಗೆ ಇತರ ಕಂಪನಿಗಳಿಗೆ ಕಡ್ಡಾಯವಾಗಿ ಅವಕಾಶ ನೀಡಲು, ಪೇಟೆಂಟ್‌ ಪಡೆದ ಕಂಪನಿಗಳಿಗೆ ನಿರ್ದೇಶಿಸುವುದೊಂದೇ ಭಾರತಕ್ಕೆ ಈಗ ಇರುವ ದಾರಿ. ಡಬ್ಲ್ಯುಟಿಒ ಪೇಟೆಂಟ್ಸ್ ನಿಯಮದಲ್ಲಿ ಹೀಗೆ ಕಡ್ಡಾಯ ಪರವಾನಗಿ ನೀಡುವುದಕ್ಕೆ ಅವಕಾಶವಿದೆ. ಭಾರತದ ಪೇಟೆಂಟ್ ಕಾಯ್ದೆಯಲ್ಲೂ ಇದಕ್ಕೆ ಅವಕಾಶವಿದೆ. ಸುಪ್ರೀಂ ಕೋರ್ಟ್ ಸಹ ಕಡ್ಡಾಯ ಪರವಾನಗಿ ನೀಡುವುದರ ಬಗ್ಗೆ ಸರ್ಕಾರ ಗಮನ ಹರಿಸಬೇಕೆಂದು ಇತ್ತೀಚೆಗೆ ಸೂಚಿಸಿದೆ.

ಕೆಲವು ವರ್ಷಗಳ ಹಿಂದೆ ಕಡ್ಡಾಯ ಪರವಾನಗಿ ನೀಡುವ ಅವಕಾಶವನ್ನು ಭಾರತ ಸರ್ಕಾರ ಉಪಯೋಗಿಸಿಕೊಂಡಿತ್ತು. ಜರ್ಮನಿಯ ಬೇಯರ್ ಕಂಪನಿಯು ನಕ್ಸಾವರ್ ಎಂಬ ಔಷಧಿಗೆ ಪೇಟೆಂಟ್ ಹೊಂದಿತ್ತು. ಕಿಡ್ನಿ ಕ್ಯಾನ್ಸರ್‌ನಿಂದ ಬಳಲುತ್ತಿರುವವರಿಗೆ ಈ ಔಷಧ ನೀಡಲಾಗುತ್ತದೆ. ಸರ್ಕಾರವು ಸ್ಥಳೀಯ ನಾಟ್ಕೊ ಕಂಪನಿಗೆ ಕಡ್ಡಾಯ ಪರವಾನಗಿ ನೀಡಿತ್ತು.

ಕೆಲವು ವರ್ಷಗಳ ಹಿಂದೆ ಎಚ್‍ಐವಿ ಸೋಂಕಿನಿಂದ ಬಳಲುತ್ತಿದ್ದ ಲಕ್ಷಾಂತರ ಬಡ ರೋಗಿಗಳ ಜೀವ ಉಳಿಸಿದ್ದು ಈ ಕಡ್ಡಾಯ ಪರವಾನಗಿ. ಆ ಸಂದರ್ಭದಲ್ಲಿ ಡಬ್ಲ್ಯುಟಿಒದ ಎಲ್ಲ ರಾಷ್ಟ್ರಗಳು ಕಡ್ಡಾಯ ಪರವಾನಗಿ ನೀಡಲು ಒಪ್ಪಿಗೆ ಸೂಚಿಸಿದ್ದವು.

ಲಸಿಕೆ ಅಥವಾ ಇನ್ಯಾವುದೇ ಅಧಿಕ ಬೆಲೆಯ ಔಷಧ ತಯಾರಿಸಲು ಕಡ್ಡಾಯ ಪರವಾನಗಿ ನೀಡಲು ಔಷಧ ಕಂಪನಿಗಳು ಸಿದ್ಧವಿಲ್ಲ. ಈ ಔಷಧ ತಯಾರಕರಿಗೆ ತಮ್ಮ ಕಂಪನಿಯ ಲೆಕ್ಕಪತ್ರದ ಆರೋಗ್ಯ ಮುಖ್ಯವೇ ವಿನಾ ಜನರ ಆರೋಗ್ಯವಲ್ಲ. ಪರವಾನಗಿ ನೀಡಿದಲ್ಲಿ ತಮ್ಮ ಆದಾಯ ಕಡಿಮೆಯಾಗಿ, ಅದರಿಂದ ಮುಂದಿನ ಸಂಶೋಧನೆಗೆ ಪೆಟ್ಟು ಬೀಳುತ್ತದೆ ಎಂಬುದು ಕಂಪನಿಗಳ ವಾದ. ಇತರ ಕಂಪನಿಗಳಿಗೆ ಗುಣಮಟ್ಟದ ಲಸಿಕೆ ಅಥವಾ ಔಷಧ ಉತ್ಪಾದಿಸುವಷ್ಟು ತಾಂತ್ರಿಕ ಸಾಮರ್ಥ್ಯವಿಲ್ಲ ಎಂಬುದು ಮತ್ತೊಂದು ವಾದ. ಆದರೆ ಇದು ಆಧಾರವಿಲ್ಲದ್ದು.

ಏಕಸ್ವಾಮ್ಯ ಹೊಂದಿರುವ ಔಷಧ ಕಂಪನಿಗಳು ಇತರ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡರೂ ಗೌರವಧನ ನೀಡಬೇಕಾಗುತ್ತದೆ. ಮೂಲ ಕಂಪನಿಗೆ ದೊಡ್ಡ ಮಟ್ಟದಲ್ಲಿ ನಷ್ಟವಾಗುವುದಿಲ್ಲ. ಬಡ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಶ್ರೇಷ್ಠ ಮಟ್ಟದ ಲಸಿಕೆ ಅಥವಾ ಔಷಧ ತಯಾರಿಸುವಷ್ಟು ಅನುಕೂಲ ಮತ್ತು ಸಂಪನ್ಮೂಲ ಇದೆ ಎಂಬುದನ್ನು ಸೀರಂ ಸಂಸ್ಥೆ ತೋರಿಸಿಕೊಟ್ಟಿದೆ. ಜೊತೆಗೆ ಬಲಿಷ್ಠ ಔಷಧ ಕಂಪನಿಗಳು ಪೇಟೆಂಟ್ ರಕ್ಷಿತ ಔಷಧಗಳನ್ನು ತಯಾರಿಸಲು ಹಿಂದುಳಿದ ರಾಷ್ಟ್ರಗಳೊಂದಿಗೆ ಈಗಾಗಲೇ ಒಪ್ಪಂದ ಮಾಡಿಕೊಂಡಿವೆ. ಈ ರಾಷ್ಟ್ರಗಳಲ್ಲಿ ಉತ್ಪಾದನಾ ವೆಚ್ಚ, ಕೆಲಸಗಾರರ ಸಂಬಳ ಇತ್ಯಾದಿ ಕಡಿಮೆ ಇದ್ದು, ಇದರ ಲಾಭವನ್ನು ಮೂಲ ಕಂಪನಿಗಳು ಪಡೆದುಕೊಳ್ಳುತ್ತಿವೆ. ಪೇಟೆಂಟ್ ಸಡಿಲಗೊಳಿಸುವ ವಿಷಯ ಬಂದಾಗ ಔಷಧ ಕಂಪನಿಗಳು ವಿಭಿನ್ನವಾಗಿ ವರ್ತಿಸುತ್ತವೆ.

ಕಡ್ಡಾಯ ಪರವಾನಗಿ ನೀಡಿದಲ್ಲಿ ಚೀನಾ ದೇಶವು ತಂತ್ರಜ್ಞಾನವನ್ನು ಕದ್ದು ಅದರ ಲಾಭವನ್ನು ಪಡೆದುಕೊಳ್ಳುತ್ತದೆ ಎಂಬುದು ಅಮೆರಿಕದ ಬಹುರಾಷ್ಟ್ರೀಯ ಔಷಧ ಕಂಪನಿಗಳ ಮತ್ತೊಂದು ವಾದ. ಆದರೆ ಲಸಿಕೆಯು ಅಮೆರಿಕದ ಕಂಪನಿಗಳ ಕೊಡುಗೆಯಲ್ಲ. ಇದರಲ್ಲಿ ಅನೇಕ ರಾಷ್ಟ್ರಗಳ ವಿಜ್ಞಾನಿಗಳ ಪಾತ್ರವಿದೆ. ಬಹುತೇಕ ಲಸಿಕೆಗಳ ಅಭಿವೃದ್ಧಿಗೆ ಸಾರ್ವಜನಿಕ ಹಣ ಖರ್ಚು ಮಾಡಲಾಗಿದೆ. ಅಲ್ಲದೆ ಈಗಾಗಲೇ ಪ್ರಸಿದ್ಧ ಔಷಧ ಕಂಪನಿಯೊಂದು ಚೀನಾ ದೇಶದ ಕಂಪನಿಯೊಂದಿಗೆ ಲಸಿಕೆ ಉತ್ಪಾದಿಸಲು ಒಪ್ಪಂದ ಮಾಡಿಕೊಂಡಿದೆ.

ಈಗಿರುವ ಗಂಭೀರ ಪರಿಸ್ಥಿತಿ ಮತ್ತು ಮುಂದಿನ ಜನಾಂಗದ ಹಿತವನ್ನು ದೃಷ್ಟಿಯಲ್ಲಿಟ್ಟುಕೊಂಡು ಭಾರತವು ಇತರ ರಾಷ್ಟ್ರಗಳ ಸಹಾಯದಿಂದ ಕಡ್ಡಾಯ ಪರವಾನಗಿ ನೀಡುವ ಪ್ರಸ್ತಾವವನ್ನು ಡಬ್ಲ್ಯುಟಿಒದಲ್ಲಿ ಬಲವಾಗಿ ಪ್ರತಿಪಾದಿಸಬೇಕು. ಕಡ್ಡಾಯ ಪರವಾನಗಿ ನೀಡಬೇಕಾದಲ್ಲಿ ಮೂಲ ಪೇಟೆಂಟ್ ಹೊಂದಿರುವ ಕಂಪನಿಯೊಂದಿಗೆ ದೀರ್ಘ ಚರ್ಚೆ, ವಿಚಾರ ವಿನಿಮಯ ಅಗತ್ಯ. ಆದರೆ ಕೋವಿಡ್ ಅದಕ್ಕೆ ಆಸ್ಪದ ಕೊಡುತ್ತಿಲ್ಲ. ಆದಷ್ಟು ಶೀಘ್ರವಾಗಿ ಈ ಕೆಲಸ ಆಗಬೇಕಿದೆ.


ವೈ.ಜಿ.ಮುರಳೀಧರನ್

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು