ಮಂಗಳವಾರ, ನವೆಂಬರ್ 24, 2020
21 °C
ಕೋಮು ಬಹುಮತ ರಾಜಕೀಯದ ಯಶಸ್ವಿ ಅಲ್ಪಸಂಖ್ಯಾತರು, ಶೋಷಿತರ ಕಲ್ಯಾಣದಲ್ಲಿದೆ

PV Web Exclusive: ಬಹುಮತ ರಾಜಕೀಯದೊಳಗಿನ ಬಿಕ್ಕಟ್ಟು

ಓದೇಶ ಸಕಲೇಶಪುರ Updated:

ಅಕ್ಷರ ಗಾತ್ರ : | |

Prajavani

ಭಾರತ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಇಲ್ಲಿನ ಪ್ರಜಾಪ್ರಭುತ್ವ ಮಾದರಿಯಾದ್ದುದ್ದೇ ಆದರೂ, ಧರ್ಮ ಮತ್ತು ಜಾತಿ ಅದರ ಆಶಯಗಳ ಪರಿಣಾಮಕಾರಿ ಜಾರಿಗೆ ಇರುವ ಸವಾಲುಗಳು. ಇದು ಕೇವಲ ಭಾರತದ ಸಮಸ್ಯೆಯೊಂದೇ ಅಲ್ಲ. ಅಭಿವೃದ್ಧಿಯತ್ತ ಹೆಜ್ಜೆ ಹಾಕುತ್ತಿರುವ ಅನೇಕ ರಾಷ್ಟ್ರಗಳ ಸಮಸ್ಯೆ.

ಪ್ರಜಾಪ್ರಭುತ್ವ ಎಂದರೆ ಬಹುಮತ. ಜನರು ಯಾರಿಗೆ ಹೆಚ್ಚು ಬಹುಮತ ಕೊಟ್ಟು ಆರಿಸುತ್ತಾರೊ ಅವರಿಗೇ ಅಧಿಕಾರ. ಆದರೆ, ಪ್ರಜೆಗಳು ನೀಡುವ ಈ ಬಹುಮತದ ಪ್ರಾಮಾಣಿಕತೆ ಪ್ರಶ್ನಾತೀತವಾಗಿ ಉಳಿದಿಲ್ಲ. ಅಭಿವೃದ್ಧಿಯ ದೂರದೃಷ್ಟಿ, ರಾಜಕೀಯ ಪ್ರಬುದ್ಧತೆ, ಧರ್ಮ ಸಾಮರಸ್ಯ, ಸಾಮಾಜಿಕ ನ್ಯಾಯ, ವಿಶ್ವಾಸಾರ್ಹತೆ ಹಾಗೂ ಪ್ರಾಮಾಣಿಕತೆ ಜನಪ್ರತಿನಿಧಿಗಳ ಆಯ್ಕೆಯ ಮಾನದಂಡಗಳಾಗಿ ಉಳಿದಿಲ್ಲ. ಬದಲಿಗೆ ಧರ್ಮ, ಜಾತಿ, ಹಣ ಬಲ ಹಾಗೂ ತೋಳ್ಬಲ ಪ್ರಜಾಪ್ರಭುತ್ವದ ಮೇಲೆ ಸವಾರಿ ಮಾಡುತ್ತಿವೆ. ಹಾಗಾಗಿ, ಬಹುಮತದ ವ್ಯಾಖ್ಯಾನವೂ ತೆಳುವಾಗುತ್ತಿದೆ.

ಬಹುಮತ ಒಂದು ರೀತಿಯಲ್ಲಿ ದೀಪವಿದ್ದಂತೆ. ಸುತ್ತಲೂ ಕಾಣುವ ಅದರ ಬೆಳಕು ಪ್ರಜಾಪ್ರಭುತ್ವದ ಆದರ್ಶದಂತೆ ಎಲ್ಲರಿಗೂ ಗೋಚರಿಸುತ್ತದೆ. ಆದರೆ, ದೀಪದ ಕೆಳಗಿರುವ ಕತ್ತಲನ್ನು ಯಾರೂ ಗಮನಿಸುವುದಿಲ್ಲ. ಧರ್ಮ, ಜಾತಿ ಹಾಗೂ ಹಣ ಬಲದ ರಾಜಕಾರಣದ ಸಂಕೇತದಂತಿರುವ ಆ ಕತ್ತಲು, ಆದರ್ಶದ ಬೆಳಕನ್ನು ಮಸುಕುಗೊಳಿಸುತ್ತಿದೆ. ಈ ಕತ್ತಲು ನಿವಾರಣೆಯಾಗದಿದ್ದರೆ ಬೆಳಕಿನ ಪ್ರಖರ ಕುಂದುತ್ತಾ ಹೋಗುತ್ತದೆ. ಇದಕ್ಕೆ ಮದ್ದಿಲ್ಲವೆಂದಲ್ಲ. ಆದರೆ, ಭಾರತದ ಮಟ್ಟಿಗೆ ಅದನ್ನು ಸ್ವೀಕರಿಸುವ ಮನಸ್ಥಿತಿ ಪ್ರಜೆಗಳು ಹಾಗೂ ಪ್ರತಿನಿಧಿಗಳಿಗೆ ಸದ್ಯಕ್ಕಂತೂ ಇಲ್ಲ.

ದೇಶದಲ್ಲಿ ಈಗ ಇರುವುದು ಬಹುಮತ ಆಧರಿತ ಧರ್ಮ ಅಥವಾ ಕೋಮು ಪ್ರಜಾಪ್ರಭುತ್ವ. ಇದನ್ನು ಹಿಂದೂ ಬಹುಮತ ರಾಜಕಾರಣ ಎಂದೂ ಹೇಳಬಹುದು. ಹಿಂದೂಗಳೇ ಬಹುಸಂಖ್ಯಾತರಾಗಿರುವ ದೇಶದಲ್ಲಿ ಅಂತಹ ರಾಜಕಾರಣ ಇರುವುದು ಸ್ವಾಭಾವಿಕವಲ್ಲವೇ? ಅದರಲ್ಲಿ ತಪ್ಪೇನಿದೆ? ಎಂಬ ಪ್ರಶ್ನೆ ಉದ್ಭವಿಸಬಹುದು. ಆದರೆ, ಈ ಬಹುಮತ ವ್ಯವಸ್ಥೆಯಲ್ಲಿ ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ಹಿಂದೂ ಧರ್ಮದೊಳಗಿನ ಕೆಳ ಜಾತಿಗಳಗಳು ನಿರಾತಂಕವಾಗಿವೆಯೇ ಎಂಬುದು ಇಲ್ಲಿನ ಪ್ರಮುಖ ಪ್ರಶ್ನೆ.

ದೇಶಕ್ಕೆ ಸ್ವಾತಂತ್ರ್ಯ ಬಂದು 73 ವರ್ಷಗಳಾದರೂ, ಕೋಮು ಗಲಭೆಗಳು ಮತ್ತು ಜಾತಿ ದೌರ್ಜನ್ಯಗಳು ಇಂದಿಗೂ ಈ ನೆಲದ ಸಾಮಾನ್ಯ ಘಟನೆಗಳಂತೆ ನಡೆಯುತ್ತಿವೆ. ಧಾರ್ಮಿಕ ಅಲ್ಪಸಂಖ್ಯಾತರಾದಿಯಾಗಿ, ಹಿಂದೂ ಧರ್ಮದೊಳಗಿನ ಪರಿಶಿಷ್ಟ ಜಾತಿ, ಪಂಗಡ, ಆದಿವಾಸಿ ಹಾಗೂ ಹಿಂದುಳಿದವರ ಆತಂಕ ಹಿಂದೂ ರಾಜಕಾರಣದಲ್ಲಿ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಕೋಮು ಗಲಭೆಗಳು ಹಾಗೂ ಜಾತಿ ದೌರ್ಜನ್ಯಗಳಲ್ಲಿ ಇವರಿಗೆ ‘ನ್ಯಾಯ’  ಇಂದಿಗೂ ಗಗನ ಕುಸುಮ. ತಪ್ಪಿತಸ್ಥರಿಗೆ ಶಿಕ್ಷೆಯಾಗುವುದಕ್ಕಿಂತ ಖುಲಾಸೆಯಾಗುವುದೇ ಹೆಚ್ಚು. ಇದರ ಕಂಬಂಧ ಬಾಹು ಇದೀಗ ಎಲ್ಲಾ ಕ್ಷೇತ್ರಗಳನ್ನೂ ಚಾಚುತ್ತಿದೆ. ಇದು ಕೋಮು ಬಹುಮತ ಪ್ರಭುತ್ವ ತಂದೊಡ್ಡಿರುವ ಅಪಾಯ.

ಅಭಿವೃದ್ಧಿಗಿಂತ ‘ಹಿಂದುತ್ವ’ವೇ ಪ್ರಮುಖ ಅಜೆಂಡಾವಾಗಿರುವ ಬಿಜೆಪಿ ಎರಡನೇ ಸಲ ದೇಶದ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಪಕ್ಷದ ಎಂಜಿನ್ ಹಿಂದುತ್ವವೇ ಶ್ರೇಷ್ಠ ಎಂದು ನಂಬಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌) ಎಂಬುದು ಗುಟ್ಟಾಗಿ ಉಳಿದಿಲ್ಲ. ಪಕ್ಷದ ಬಾಹು ರಾಜ್ಯಗಳಿಗೂ ವ್ಯಾಪ್ತಿಸುತ್ತಿದೆ. ಕೆಲವೆಡೆ ಒಂಟಿಯಾಗಿ, ಉಳಿದೆಡೆ ಮೈತ್ರಿ ನೆರವಿನಿಂದ ರಾಜ್ಯಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಿದೆ. ಹಾಗಾಗಿ, ಸ್ಥಳೀಯ ವಿಷಯಗಳನ್ನು ಇಟ್ಟುಕೊಂಡು ಅಸ್ಮಿತೆಯ ರಾಜಕಾರಣ ಮಾಡುತ್ತಿದ್ದ, ಪ್ರಾದೇಶಿಕ ಪಕ್ಷಗಳ ಶಕ್ತಿ ಕುಂದುತ್ತಿದೆ. ಹಿಂದೂ ರಾಜಕಾರಣ ರಾಜ್ಯಗಳಲ್ಲೂ ನೆಲೆಯೂರತೊಡಗಿದೆ.

ಈ ಬಗೆಯ ರಾಜಕಾರಣದ ಅಥವಾ ಪ್ರಭುತ್ವದ ಅಪಾಯವನ್ನು ಮೊದಲೇ ಊಹಿಸಿದ್ದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ (ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಮಗ್ರ ಬರಹಗಳು ಮತ್ತು ಭಾಷಣಗಳ ಸಂಪುಟ–1,  ಕೋಮು ಪ್ರಾತಿನಿಧ್ಯದ ಬಿಕ್ಕಟ್ಟು: ಒಂದು ಪರಿಹಾರ ಮಾರ್ಗ) ಹೀಗೆ ಹೇಳಿದ್ದಾರೆ.

‘ಭಾರತದಲ್ಲಿ ಬಹುಮತವೆಂದರೆ ರಾಜಕೀಯ ಬಹುಮತವಲ್ಲ. ಭಾರತದಲ್ಲಿ ಬಹುಮತ ಹುಟ್ಟುತ್ತದೆಯಾದರೂ, ಅದು ರೂಪಿತವಾಗುವುದಿಲ್ಲ. ಕೋಮುವಾದಿ ಬಹುಮತ ಮತ್ತು ರಾಜಕೀಯ ಬಹುಮತದ ನಡುವೆ ವ್ಯತ್ಯಾಸವಿಷ್ಟೇ. ರಾಜಕೀಯ ಬಹುಮತವು ನಿಗದಿಪಡಿಸಿದ ಅಥವಾ ಶಾಶ್ವತ ಬಹುಮತವಲ್ಲ. ಅದು ಯಾವಾಗಲೂ ರೂಪಿತವಾಗುವ ವಿರೂಪಿತವಾಗುವ ಮತ್ತು ಪುನಃ ರೂಪಿತವಾಗುವ ಬಹುಮತ. ಕೋಮು ಬಹುಮತ ಶಾಶ್ವತವಾಗಿದ್ದು, ತನ್ನ ಮನೋಭಾವನೆಯಲ್ಲಿ ಅದು ನಿಶ್ಚಲವಾದದ್ದು. ಅದನ್ನು ನಾಶ ಮಾಡಬಹುದೇ ಹೊರತು, ಬದಲಾಯಿಸಲು ಸಾಧ್ಯವಿಲ್ಲ’.

ಕೋಮು ಬಹುಮತ ರಾಜಕಾರಣ ಕುರಿತು ಬಿಜೆಪಿಯ ಹಿರಿಯ ನಾಯಕ ಎಲ್‌.ಕೆ. ಅಡ್ವಾಣಿ ಅವರ ಆಪ್ತರಾಗಿದ್ದ ಸುಧೀಂದ್ರ ಕುಲಕರ್ಣಿ ಅವರ ಮಾತು ದೇಶದ ಪ್ರಸ್ತುತ ಸ್ಥಿತಿಗೆ ಕನ್ನಡಿ ಹಿಡಿಯುವಂತಿದೆ; ‘ಮುಸ್ಲಿಮರ ಪಕ್ಷವು ಮಾತ್ರ ಮುಸ್ಲಿಮರನ್ನು ಪ್ರತಿನಿಧಿಸಬಹುದು ಅಥವಾ ಅವರ ಹಿತ ರಕ್ಷಿಸಬಹುದು ಎಂಬ ನಂಬಿಕೆಯು, ಹಿಂದೂಗಳ ಪಕ್ಷದಿಂದ ಮಾತ್ರ ಹಿಂದೂಗಳನ್ನು ಪ್ರತಿನಿಧಿಸಲು ಮತ್ತು ಅವರ ಹಿತ ರಕ್ಷಿಸಲು ಸಾಧ್ಯ ಎಂಬ ನಂಬಿಕೆಯಷ್ಟೇ ಅಸಂಗತವಾದುದು. ಇಂತಹ ಎರಡೂ ನಂಬಿಕೆಗಳು ಭಾರತದ ಪ್ರಜಾಪ್ರಭುತ್ವಕ್ಕೆ ಹಾನಿ ಉಂಟು ಮಾಡುತ್ತದೆ’.

ಪ್ರಜಾಪ್ರಭುತ್ವದಲ್ಲಿ ಪ್ರಭುಗಳೆನಿಸಿಕೊಂಡಿರುವ ಪ್ರಜೆಗಳು ಯಾವುದೇ ಆತಂಕವಿಲ್ಲದೆ ಇರಬೇಕು. ಆದರೆ, ಅವರ ಧಾರ್ಮಿಕ ಹಾಗೂ ಬದುಕಿನ ಅಸ್ತಿತ್ವದ ಬಗ್ಗೆ ಆತಂಕವಿದ್ದರೆ, ಅದು ಪ್ರಜಾಪ್ರಭುತ್ವದ ಅಣಕವಲ್ಲದೆ ಬೇರೇನೂ ಅಲ್ಲ. ಬಹುಸಂಖ್ಯಾತರು ಆಳುವ ದೇಶವೊಂದರ ಅಭಿವೃದ್ಧಿಯ ಮಾನದಂಡ, ಆ ದೇಶದಲ್ಲಿರುವ ಅಲ್ಪಸಂಖ್ಯಾತರ ಸ್ಥಿತಿಯನ್ನು ಕೂಡ ಅಲವಂಬಿಸಿರುತ್ತದೆ. ಭಾರತದ ಮಟ್ಟಿಗೆ ಆ ಮಾನದಂಡಕ್ಕೆ, ಅಸ್ಪೃಶ್ಯರು ಹಾಗೂ ಕೆಳ ಜಾತಿಗಳನ್ನೂ ಸೇರಿಸಿಕೊಂಡು ನೋಡಬೇಕಾಗುತ್ತದೆ. ಕೋಮು ಬಹುಮತ ರಾಜಕೀಯದ ಯಶಸ್ವಿ ಇರುವುದು ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ಶೋಷಿತರ ಆತಂಕರಹಿತ ಬದುಕು ಹಾಗೂ ಕಲ್ಯಾಣದಲ್ಲಿದೆ. ಇಲ್ಲದಿದ್ದರೆ, ಬಹುಸಂಖ್ಯಾತರ ಶೋಷಣೆಯ ಇತಿಹಾಸ ಮರುಕಳಿಸುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು