ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಸಂಸ್ಕೃತಿ, ಧರ್ಮ ಮತ್ತು ಆರ್ಥಿಕತೆ

ಧರ್ಮದ ವಿಕಾಸವು ಸಂಸ್ಕೃತಿಯಿಂದ, ಸಂಸ್ಕೃತಿಯ ಉಳಿವು ಆರ್ಥಿಕತೆಯಿಂದ
Last Updated 18 ಡಿಸೆಂಬರ್ 2020, 19:31 IST
ಅಕ್ಷರ ಗಾತ್ರ

‘ಓಂ ಸಹನಾವವತು, ಸಹನೌ ಭುನಕ್ತು...’ ಈ ಶ್ಲೋಕದ ತತ್ವ ಸಹಜೀವನದ ಪ್ರಜ್ಞೆಯೇ ಆಗಿದೆ. ಇದು, ಹಿಂದೂ ಧರ್ಮವು ಬಯಸುವ ಸಂಸ್ಕೃತಿ. ಇಸ್ಲಾಂನಲ್ಲಿ ರಮ್ಜಾನ್ ತಿಂಗಳು ಎಂದರೆ ಹಸಿವಿನ ಮೌಲ್ಯ, ಬಡವರ ಬಗೆಗಿನ ಕಾಳಜಿ ಮತ್ತು ಆತ್ಮಶುದ್ಧಿಯ ತತ್ವವನ್ನು ಆಧರಿಸಿದ್ದಾಗಿದೆ. ಕೆಲಸಗಾರನ ಬೆವರು ಆರುವ ಮೊದಲು ಕೂಲಿಯನ್ನು ಕೊಡಬೇಕು ಎನ್ನುವುದು ಇಸ್ಲಾಂನಲ್ಲಿರುವ ಆಶಯ. ದುರ್ಬಲರ ಕಲ್ಯಾಣಕ್ಕಾಗಿ ಕೆಲಸ ಮಾಡುವುದು ಕ್ರೈಸ್ತ ಧರ್ಮದ ಪ್ರಮುಖ ತತ್ವ.

ಈ ಎಲ್ಲ ತತ್ವಗಳೂ ಸಾಧಿಸಲ್ಪಟ್ಟಿವೆ ಎಂದಲ್ಲ. ದುರ್ಬಳಕೆಯಾಗಿವೆ. ಅಂದಮಾತ್ರಕ್ಕೆ ಧರ್ಮಗಳ ಕಾಳಜಿಗಳು ಬದಲಾಗಿವೆ ಎಂದಲ್ಲ. ಧರ್ಮಗಳ ಆಶಯ ಅದೇ ಇದೆ.

ವರ್ತಮಾನದ ಭಾರತದಲ್ಲಿ‌ ಮಾತ್ರವಲ್ಲ, ಜಾಗತಿಕ ವಾಗಿಯೇ ಧರ್ಮಗಳು ಚರ್ಚೆಯ ಪ್ರಧಾನ ಸ್ತರದಲ್ಲಿ ಇವೆ. ಹೀಗಿರುವಾಗ, ಧರ್ಮಗಳ ಆಶಯಗಳ ಈಡೇರಿಕೆ ಬಗ್ಗೆ ಅಲ್ಪ ಪ್ರಯತ್ನಗಳಾದರೂ ನಡೆಯಬೇಕಲ್ಲ. ಕ್ರೈಸ್ತರಲ್ಲಿ ಸೇವಾ ಕಾರ್ಯಗಳು ಜಾಸ್ತಿಯಾಗಿವೆಯೇ? ಮುಸ್ಲಿಮರಲ್ಲಿ ಬಡತನ ನಿರ್ಮೂಲನೆಯ ಕೆಲಸಗಳು ಹೆಚ್ಚಾಗಿವೆಯೇ? ಹಿಂದೂಗಳಲ್ಲಿ ಎಲ್ಲರೂ ಒಟ್ಟಾಗಿ ದುಡಿಯುವ, ಒಟ್ಟಾಗಿ ಊಟ ಮಾಡುವ ಸಾಂಘಿಕ ಜೀವನದ ನಡವಳಿಕೆಗಳು ಹೆಚ್ಚಾಗಿವೆಯೇ? ಈ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳಬೇಕಾದರೆ ಸಂಸ್ಕೃತಿ ಮತ್ತು ಆರ್ಥಿಕತೆಯ ನಡುವಿನ ಸಂಬಂಧಗಳನ್ನು ಅರ್ಥ ಮಾಡಿಕೊಳ್ಳಬೇಕು.

ಭಾರತದಲ್ಲಿ ಬಹು ಸಂಸ್ಕೃತಿಗಳಿವೆ. ಈ ಎಲ್ಲ ಬಹು ಸಂಸ್ಕೃತಿಗಳನ್ನು ರೂಪಿಸಿದ್ದು ಬಹು ಬೆಳೆಯ ಕೃಷಿ ಪದ್ಧತಿ. ಸುಗ್ಗಿ ಬೆಳೆ ಇರುವುದರಿಂದ ಸುಗ್ಗಿ ಕುಣಿತ ಇರುತ್ತದೆ. ಆಗ ಅದು ಸಂಸ್ಕೃತಿಯಾಗಿರುತ್ತದೆ‌. ಸುಗ್ಗಿ ಬೆಳೆಯನ್ನೇ ನಾಶ ಮಾಡಿ ಸುಗ್ಗಿ ಕುಣಿತವನ್ನು ಉಳಿಸಿಕೊಂಡರೆ ಸುಗ್ಗಿ ಕುಣಿತ ಕೇವಲ ಕಲೆಯಾಗಿ ಉಳಿಯುತ್ತದೆಯೇ ವಿನಾ ಸಂಸ್ಕೃತಿಯಾಗಿ ಉಳಿಯುವುದಿಲ್ಲ. ಸಂಸ್ಕೃತಿ ಬಾಳುವುದಕ್ಕಾಗಿ ಹಾಗೂ ಕಲೆ ಪ್ರದರ್ಶಿಸಲಿಕ್ಕಾಗಿ ಇರುವಂಥವಾಗಿವೆ. ಧರ್ಮವನ್ನು ಆಧರಿಸುವುದು ಸಂಸ್ಕೃತಿಯೇ ಹೊರತು ಕಲೆ ಅಲ್ಲ.

‘ಸಹನಾವವತು...’ ಎನ್ನುವುದು ಧರ್ಮದ ಆಶಯ. ತಾನು ಬೆಳೆದ ಬೆಳೆಯ ಹೊಸ ಅಕ್ಕಿ ಊಟವನ್ನು ಎಲ್ಲರನ್ನೂ ಆಹ್ವಾನಿಸಿ ಮಾಡುವ ಪದ್ಧತಿಯಲ್ಲಿ ಧರ್ಮದ ಆಶಯ ಉಳಿಯುತ್ತದೆ. ಇದು ಸಂಸ್ಕೃತಿಯ ಮೂಲಕ ಧರ್ಮದ ಆಶಯ ಉಳಿಯುವ ವಿಧಾನವಾಗಿದೆ. ಬದಲಿಗೆ, ತಾನು ಯಾವ ಬೆಳೆಯನ್ನೂ ಬೆಳೆಯದೆ ಹೊಸ ಬೆಳೆ ಬೆಳೆದವನಿಂದ ಹಣಕ್ಕೆ ಅಕ್ಕಿ ಖರೀದಿಸಿ ಹೊಸ ಅಕ್ಕಿಯ ಊಟ ಮಾಡುವುದು ಆಚರಣೆ ಮಾತ್ರ ಆಗಿರುತ್ತದೆಯೇ ಹೊರತು ಸಂಸ್ಕೃತಿ ಆಗಿರುವುದಿಲ್ಲ. ಆಚರಣೆಯು ಒಂದು ಪ್ರದರ್ಶನವೇ ವಿನಾ ಸಂಸ್ಕೃತಿ ಅಲ್ಲ. ಧರ್ಮದ ವಿಕಾಸ ಆಗುವುದು ಸಂಸ್ಕೃತಿಯಿಂದ. ಸಂಸ್ಕೃತಿ ಉಳಿಯುವುದು ಆರ್ಥಿಕ ವ್ಯವಸ್ಥೆಯಿಂದ.

ತಂತ್ರಜ್ಞಾನವು ಬದಲಾವಣೆಯನ್ನು ತರುತ್ತದೆ. ಬದಲಾವಣೆ ಅನಿವಾರ್ಯ. ಆಗ ಕೆಲವು ಸಂಸ್ಕೃತಿಗಳು ನಶಿಸಿ ಹೊಸ ಸಂಸ್ಕೃತಿಗಳು ಉದಯಿಸುತ್ತವೆ ಅಥವಾ ಹೊಸ ಸಂಸ್ಕೃತಿ ಉದಯಿಸದೆಯೂ ಇರಬಹುದು. ಉದಾಹರಣೆಗೆ, ಕಾರ್ಪೊರೇಟ್ ರಂಗವನ್ನು ಬೆಳೆಸಿದಾಗ ಪದ್ಧತಿಗಳು ಬದಲಾಗುತ್ತವೆ‌. ಆದರೆ ಅವು ಪೋಷಕ ರೂಪದಲ್ಲಿ ಬರುವುದಿಲ್ಲ. ಆದ್ದರಿಂದ ಅದನ್ನು ಸಂಸ್ಕೃತಿ ಎನ್ನಲು ಬರುವುದಿಲ್ಲ.

‘ಸಹಕಾರಿ ಬೇಸಾಯ’ ಎಂಬ ಒಂದು ಆರ್ಥಿಕ ಪದ್ಧತಿ ಇದೆ. ಅದು ಒಂದು ಸಂಸ್ಕೃತಿಯನ್ನು ಹುಟ್ಟಿಸುತ್ತದೆ ಮತ್ತು ‘ಸಹನಾವವತು’ ಎಂಬ ಧಾರ್ಮಿಕ ಆಶಯಕ್ಕೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತದೆ. ಬಹುಮಟ್ಟಿಗೆ ಸಂಸ್ಕೃತಿಯನ್ನು ರೂಪಿಸುವುದು ಮತ್ತು ಧಾರ್ಮಿಕ ಆಶಯವನ್ನು ಕಾಪಾಡಿಕೊಳ್ಳುವುದು ಕೃಷಿ ರಂಗವೇ. ಕಾಡೇ ಇಲ್ಲದಿದ್ದರೆ ತಪಸ್ಸು ಮಾಡಲು ಜಾಗವಿಲ್ಲ. ನದಿಯೇ ಇಲ್ಲದಿದ್ದರೆ ನದಿಗೆ ಬಾಗಿನ ಕೊಡಲು ಬರುವುದಿಲ್ಲ. ಆದ್ದರಿಂದ ಧರ್ಮವನ್ನು ರಕ್ಷಿಸಬೇಕಾದರೆ ಧರ್ಮದ ಶಕ್ತಿಯಾಗಿರುವ ಸಂಸ್ಕೃತಿಯನ್ನೂ ಸಂಸ್ಕೃತಿಯ ಶಕ್ತಿಯಾಗಿರುವ ಆರ್ಥಿಕತೆಯನ್ನೂ ಉಳಿಸಿಕೊಳ್ಳಬೇಕಾಗುತ್ತದೆ; ಎಷ್ಟರಮಟ್ಟಿಗೆ ಸಾಧ್ಯವೊ ಅಷ್ಟರಮಟ್ಟಿಗೆ. ಕನಿಷ್ಠಪಕ್ಷ ವಿಪುಲವಾಗಿ ಧಾರ್ಮಿಕ ಚರ್ಚೆಗಳು ನಡೆಯುತ್ತಿರುವಾಗಲಾದರೂ ಆರ್ಥಿಕತೆಯ ಮೂಲಕ ಧರ್ಮವನ್ನು ಪೋಷಿಸುವ ಕೆಲಸ ನಡೆಯುತ್ತಿದೆ ಎಂಬುದು ಅನುಭವಕ್ಕೆ ಬರಬೇಕು.

ಅನುಭವಕ್ಕೆ ಬಂದದ್ದೆಲ್ಲವೂ ಸಾಧಿಸಲ್ಪಡುತ್ತದೆ ಎಂದಲ್ಲ. ಉದಾಹರಣೆಗೆ, ಗಾಂಧೀಜಿಯವರ ಆರ್ಥಿಕ ತತ್ವಗಳು ಧರ್ಮಪೋಷಕವಾಗಿದ್ದವು. ಗಾಂಧಿ, ಸರ್ಕಾರೀಕರಣದ ಪ್ರತಿಪಾದಕರಲ್ಲ‌. ಸಾಮೂಹಿಕ ಒಡೆತನದ ಘಟಕಗಳಿಗೂ ಗಾಂಧಿ ಚಿಂತನೆಯಲ್ಲಿ ಅವಕಾಶವಿದೆ. ಬಂಡವಾಳಶಾಹಿತ್ವಕ್ಕೂ ಅವಕಾಶವಿದೆ. ಆದರೆ ಅಲ್ಲಿ ಸಾಮೂಹಿಕ ಒಡೆತನದ ಹಿಂದೆ ಸಾಮೂಹಿಕ ಉತ್ತರದಾಯಿತ್ವವೂ ಇದೆ. ಬಂಡವಾಳಶಾಹಿತ್ವದ ಹಿಂದೆ ಧರ್ಮದರ್ಶಿ ತತ್ವವೂ ಇದೆ. ಗಾಂಧಿ ಆರ್ಥಿಕತೆ ಸಾಧ್ಯವಾಗಿಲ್ಲದಿರಬಹುದು‌. ಆದರೆ ಗಾಂಧಿ ಆರ್ಥಿಕ ಚಿಂತನೆಯಲ್ಲಿ ಧಾರ್ಮಿಕ ಸದಾಶಯಗಳ ಕಲ್ಪನೆ ಇರುವುದು ಸ್ಪಷ್ಟವಾಗಿ ಕಾಣಿಸುತ್ತದೆ. ಆಗ ಅವರು ಧಾರ್ಮಿಕರು ಎಂದು ಭಾವಿಸಲು ಸಾಧ್ಯವಾಗುತ್ತದೆ. ಧಾರ್ಮಿಕ ಚಿಂತನೆಯೂ ಆರ್ಥಿಕ ಚಿಂತನೆಯೂ ಹೊಂದಾಣಿಕೆಯೇ ಆಗದಿದ್ದರೆ ಆ ಚಿಂತನೆಯನ್ನು ಧಾರ್ಮಿಕ ಚಿಂತನೆ ಎಂದು ಭಾವಿಸುವುದು ಹೇಗೆ?

ನಮ್ಮಲ್ಲಿ ಧಾರ್ಮಿಕ ಚಿಂತನೆ ಎಂದರೆ ಕೆಲವು ಆರಾಧನಾ ಕ್ರಮಗಳ ಪ್ರತಿಪಾದನೆ ಎಂಬಂತಾಗಿದೆ. ಮುಸ್ಲಿಮರು, ಕ್ರೈಸ್ತರು ಸಾಮೂಹಿಕ ಪ್ರಾರ್ಥನೆ ಮಾಡುವುದರಲ್ಲಿ ಎಲ್ಲರೂ ಒಟ್ಟು ಸೇರಿ ಸಮುದಾಯದ ಉನ್ನತಿಯ ಚರ್ಚೆ ಮಾಡಿ ಅನುಷ್ಠಾನಗೊಳಿಸಿದಾಗ ಧಾರ್ಮಿಕ ಆಶಯ ಈಡೇರಲು ಸಾಧ್ಯ. ಸುಮ್ಮನೇ ಪ್ರಾರ್ಥನೆ ಮಾಡಿ ಬಂದರೆ ಸಂಪ್ರದಾಯದ ಪಾಲನೆಯಾಯಿತೇ ವಿನಾ ಧಾರ್ಮಿಕ ಆಶಯ ಈಡೇರಿದಂತಲ್ಲ.

ಭಾರತೀಯ ಸಂಜಾತ ಧರ್ಮಗಳು ದೇವಸ್ಥಾನರೂಪಿ ವ್ಯವಸ್ಥೆಗೆ ಹೊಂದಿಕೊಂಡವುಗಳು. ದೇವಸ್ಥಾನದ ವಾಸ್ತು ಏನಿರಬೇಕೆಂದು ‘ಮಯ ಮತ’ ಮತ್ತು ‘ಸಮರಾಂಗಣ ಸೂತ್ರಧಾರ’ ಗ್ರಂಥಗಳು ಹೇಳುತ್ತವೆ. ಜನವಸತಿಯಿಂದ ಎತ್ತರದ ಸ್ಥಳದಲ್ಲಿರಬೇಕು. ಅಂದರೆ, ನೆರೆ ಬಂದರೆ ಊರಿನ ಜನರಿಗೆ ದೇವಸ್ಥಾನವು ಆಶ್ರಯ ಒದಗಿಸಬೇಕು. ದೇವಸ್ಥಾನವಿರುವ ಸ್ಥಳದಲ್ಲಿ ನಿಂತಾಗ ಎಂಟು ದಿಕ್ಕುಗಳಲ್ಲೂ ದಿಗಂತವೇ ಕಾಣಬೇಕು ಹೊರತು ತಡೆಗಳಿರಬಾರದು. ಅಂದರೆ ಬಹು ದೂರದಿಂದ ಶತ್ರುಸೈನ್ಯ ಬರುವುದಿದ್ದರೆ ಕಾಣಬೇಕು. ಈ ವಿಚಾರಕ್ಕೆ ಈಗ ಮಹತ್ವವಿಲ್ಲ. ದೇವಸ್ಥಾನದ ಎದುರು ಪುಷ್ಕರಿಣಿ ಇದ್ದು ವರತೆಯ ಧಾರೆ ಬರಬೇಕು. ಅಂದರೆ ಊರಿನಲ್ಲಿ ಬರ ಬಂದಾಗಲೂ ದೇವಸ್ಥಾನದಲ್ಲಿ ನೀರು ದೊರೆಯಬೇಕು. ಹೀಗಿರುವ ದೇವಸ್ಥಾನದಲ್ಲಿ ಪುರಾಣ ವಾಚನವಿದೆ. ಅಂದರೆ ಸಾಹಿತ್ಯ ಪರಿಚಯವಾಗಬೇಕು. ಸನ್ನಡತೆ ಬೆಳೆಯಬೇಕು. ಕಲಾ ಪ್ರದರ್ಶನಗಳಿವೆ. ಅಂದರೆ ಮನರಂಜನೆ ದೊರೆಯಬೇಕು. ಇದೆಲ್ಲವೂ ಸಾಧ್ಯವಾದಾಗ ದೇವಸ್ಥಾನವು ಧಾರ್ಮಿಕ ಆಶಯವನ್ನು ಈಡೇರಿಸಿದಂತಾಗುತ್ತದೆ.

ರಾಷ್ಟ್ರವು ಸಂವಿಧಾನದ ಪ್ರಕಾರ ನಡೆಯುತ್ತದೆ. ಜಾಗತೀಕರಣ ಬಂದ ನಂತರ ಸಮಾಜವಾದಿ ತತ್ವ ಹೊರಟುಹೋಗಿದೆ ಎಂದುಕೊಳ್ಳಲಾಗಿದೆ. ಆದರೆ ಹೊರಟುಹೋಗಿಲ್ಲ. ಜಾಗತೀಕರಣ ಎನ್ನುವುದು ಸರ್ಕಾರದ ನೀತಿ. ಸಮಾಜವಾದ ಎನ್ನುವುದು ಸಂವಿಧಾನದ ಕಾಳಜಿ. ಜಾಗತೀಕರಣದ ಮೂಲಕವೂ ಸಂವಿಧಾನದ ಆಶಯವೇ ಈಡೇರಬೇಕು. ಯಾರು ಆರ್ಥಿಕ ದುರ್ಬಲರಿದ್ದಾರೋ ಅವರ ಉತ್ಪಾದನೆಗಳಿಗೆ ಅಂತರರಾಷ್ಟ್ರೀಯ ಮಾರುಕಟ್ಟೆಯನ್ನು ಒದಗಿಸಲು ಸಾಧ್ಯವಾದಾಗ ಜಾಗತೀಕರಣವೂ ಸಂವಿಧಾನದ ಆಶಯವನ್ನು ಈಡೇರಿಸಲು ಸಾಧ್ಯವಾಗುತ್ತದೆ.

ನಿಜವಾಗಿ ಇಲ್ಲಿ ಇದನ್ನು ಸಂವಿಧಾನವು ಸಮಾಜವಾದ ಎಂದು ಹೇಳಬೇಕಾಗಿಯೇ ಇಲ್ಲ. ಪಕ್ಕದಲ್ಲಿ ಹಸಿದವನಿದ್ದಾಗ ಅವನಿಗೆ ಕೊಡದೆ ತಾನು ಊಟ ಮಾಡಲು ಮನುಷ್ಯರಿಂದ ಸಾಧ್ಯವಾಗುವುದಿಲ್ಲ. ಸಂವಿಧಾನ ಹೇಳದೆ ಇದ್ದರೂ ಇದು ಸಾಮಾನ್ಯ ಜ್ಞಾನಕ್ಕೆ ಹೊಳೆಯುವ ವಿಚಾರವಾಗಿದೆ. ಮನುಷ್ಯರ ಸಾಮಾನ್ಯ ಜ್ಞಾನವನ್ನು ಬೆಳೆಸಿರುವುದರಲ್ಲಿ ಧರ್ಮ ಮತ್ತು ಸಂಸ್ಕೃತಿಯ ಪಾತ್ರವೇ ದೊಡ್ಡದು‌. ತಾನೇ ತಾನಾಗಿ ಅದು ಸಂವಿಧಾನದ ಆಶಯವೂ ಆಗುತ್ತದೆ.

ನಮ್ಮ ನಡವಳಿಕೆ ಮತ್ತು ಆರ್ಥಿಕ ಚಟುವಟಿಕೆಗಳಲ್ಲಿ ಈ ಸಾಮಾನ್ಯಜ್ಞಾನದ ಪಾತ್ರ ಎಷ್ಟಿದೆ ಎಂಬ ಆತ್ಮಾವಲೋಕನದ ಅಗತ್ಯವಿದೆ. ಏಕೆಂದರೆ ಸಾಮಾನ್ಯಜ್ಞಾನ ಹೊರಟು ಹೋದರೆ ಸಂವಿಧಾನದ ಆಶಯವೂ ಉಳಿಯುವುದಿಲ್ಲ, ‌ಧಾರ್ಮಿಕ ಆಶಯಗಳೂ ಉಳಿಯುವುದಿಲ್ಲ. ಈ ಆಶಯಗಳನ್ನು ಉಳಿಸಿಕೊಳ್ಳದಿದ್ದರೆ ಧರ್ಮದ ಕುರಿತಾಗಿ ನಡೆಯುವ ಬೃಹತ್ ಚರ್ಚೆಗಳು ಏನನ್ನು ಚರ್ಚಿಸುತ್ತಿವೆ ಎಂಬುದಕ್ಕೆ ಮೊದಲು ಉತ್ತರವನ್ನು ಕಂಡುಕೊಳ್ಳಬೇಕಾದ ಅಗತ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT