ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ನಾವು ಖರೀದಿಸುವ ಸಾಮಗ್ರಿಗಳ ಗುಣಮಟ್ಟ ನಮಗೆಷ್ಟು ಗೊತ್ತು?

ಅಂತರರಾಷ್ಟ್ರೀಯ ಗುಣಮಟ್ಟಗಳ ದಿನ
Last Updated 14 ಅಕ್ಟೋಬರ್ 2020, 10:10 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು: ಬೆಳಿಗ್ಗೆ ಎದ್ದು ಹಲ್ಲುಜ್ಜಲು ಬಳಸುವ ಟೂತ್‌ಪೇಸ್ಟ್‌ನಿಂದ ಹಿಡಿದು, ರಾತ್ರಿ ಮಲಗುವಾಗ ಹೊದ್ದುಕೊಳ್ಳುವ ಹೊದಿಕೆವರೆಗೆ ನಿತ್ಯ ನೂರಾರು ಸರಕು ಸಾಮಗ್ರಿಗಳನ್ನು ನಾವು ಬಳಸುತ್ತೇವೆ. ಪೊಟ್ಟಣಗಳಲ್ಲಿ ತುಂಬಿಸಿ ಮಾರಾಟ ಮಾಡುವ ಆಹಾರ ಪದಾರ್ಥಗಳು, ಚಿನ್ನಾಭರಣಗಳು, ನಾವು ಸೇವಿಸುವ ಔಷಧಗಳು, ನಾವು ಓಡಾಡಲು ಬಳಸುವ ವಾಹನಗಳು, ಅವುಗಳ ಬಿಡಿಭಾಗಗಳು ನಿಜಕ್ಕೂ ಗುಣಮಟ್ಟದಿಂದ ಕೂಡಿವೆಯೇ?

ಅಷ್ಟಕ್ಕೂ ಇವುಗಳ ಗುಣಮಟ್ಟಗಳನ್ನು ನಿರ್ಧರಿಸುವವರು ಯಾರು? ಅವುಗಳ ನಿಯಂತ್ರಣ ವ್ಯವಸ್ಥೆ ಹೇಗಿದೆ, ಗುಣಮಟ್ಟಗಳನ್ನು ಕಾಪಾಡುವಲ್ಲಿ ಸರ್ಕಾರಗಳ ಪಾತ್ರವೇನು? ವಸ್ತುಗಳು ಗುಣಮಟ್ಟದಿಂದ ಕೂಡಿಲ್ಲವಾದರೆ ನಾವೇನು ಮಾಡಬಹುದು? ಈ ಬಗ್ಗೆ ದೂರು ನೀಡಲು ವ್ಯವಸ್ಥೆ ಇದೆಯೇ ಎಂಬ ಬಗ್ಗೆ ನಿಮಗೆ ಕುತೂಹಲವಿರಬಹುದು.

ಇಂಟರ್‌ನ್ಯಾಷನಲ್‌ ಎಲೆಕ್ಟ್ರೋಟೆಕ್ನಿಕಲ್‌ ಕಮಿಷನ್‌ (ಐಇಸಿ), ಇಂಟರ್‌ನ್ಯಾಷನಲ್‌ ಆರ್ಗನೈಸೇಷನ್‌ ಫಾರ್‌ ಸ್ಟ್ಯಾಂಡರ್ಡ್ಸ್‌ (ಐಎಸ್‌ಒ) ಹಾಗೂ ಇಂಟರ್‌ನ್ಯಾಷನಲ್‌ ಟೆಲಿಕಮ್ಯುನಿಕೇಷನ್‌ ಯೂನಿಯನ್‌ (ಐಟಿಯು)ಗಳು ಜಗತ್ತಿನ ವಿವಿಧ ಸರಕು ಸಾಮಗ್ರಿಗಳ ಗುಣಮಟ್ಟವನ್ನು ನಿರ್ಧರಿಸುವ ಪ್ರಮುಖ ಸಂಸ್ಥೆಗಳು. ಭೂಮಿಯ ಮೇಲೆ ಮಾನವ ಹಸ್ತಕ್ಷೇಪ ಕಡಿಮೆಗೊಳಿಸುವ ಉದ್ದೇಶದಿಂದ ಈ ಮೂರು ಜಾಗತಿಕ ಸಂಘಟನೆಗಳು ಸರಕು ಸಾಮಾಗ್ರಿಗಳ ಗುಣಮಟ್ಟಗಳನ್ನು ನಿರ್ಧರಿಸುತ್ತವೆ. ಗುಣಮಟ್ಟ ಸಂರಕ್ಷಣೆಗೆ ಸಂಬಂಧಿಸಿದ ಮಾನದಂಡಗಳನ್ನು ನಿಗದಿಪಡಿಸುತ್ತವೆ. ಗುಣಮಟ್ಟ ಕಾಪಾಡುವ ವಿಧಾನಗಳನ್ನು ಗುಣಮಟ್ಟ ಸಂರಕ್ಷಣೆಯ ತಾಂತ್ರಿಕ ಸವಾಲುಗಳಿಗೆ ಪರಿಹಾರೋಪಾಯಗಳನ್ನು ಸೂಚಿಸುತ್ತವೆ. ಈ ಕುರಿತ ಜ್ಞಾನವನ್ನು ಹಂಚಿಕೊಳ್ಳುವ ಮೂಲಕ ಸದಸ್ಯ ರಾಷ್ಟ್ರಗಳಿಗೆ ನೆರವಾಗುತ್ತವೆ.

ಈ ಸಂಸ್ಥೆಗಳು ನಿರ್ಧರಿಸುವ ಗುಣಮಟ್ಟವು ಇಂಧನ ಉಳಿತಾಯ, ನೀರಿನ ಸಂರಕ್ಷಣೆ ಹಾಗೂ ವಾತಾವರಣದ ಗುಣಮಟ್ಟಕ್ಕೆ ಸಂಬಂಧಿಸಿದ ವಿವಿಧ ಆಯಾಮಗಳನ್ನು ಒಳಗೊಂಡಿರುತ್ತದೆ. ಇವು ಕೈಗಾರಿಕಾ ಉತ್ಪನ್ನಗಳ ಉತ್ಪಾದನೆ, ಸಂಸ್ಕರಣೆಗಳಿಂದ ಪರಿಸರದ ಮೇಲಾಗುವ ದುಷ್ಪರಿಣಾಮಗಳ ನಿಯಂತ್ರಣಕ್ಕೆ ನೆರವಾಗುತ್ತದೆ. ಇವು ಕೆಲವು ಪದಾರ್ಥಗಳ ಮರುಬಳಕೆಗೆ ಉತ್ತೇಜನ ನೀಡುವ ಮೂಲಕ ಇಂಧನ ದಕ್ಷತೆಯನ್ನು ಸಾಧಿಸುವಲ್ಲಿಯೂ ಪ್ರಯೋಜನಕಾರಿ.

ನಮ್ಮ ದೇಶದಲ್ಲಿ ರಾಷ್ಟ್ರೀಯ ಗುಣಮಟ್ಟಗಳ ಸಂಸ್ಥೆಯಾಗಿ 'ಭಾರತೀಯ ಗುಣಮಟ್ಟಗಳ ಬ್ಯೂರೊ' (ಬಿಐಎಸ್‌) ಕಾರ್ಯನಿರ್ವಹಿಸುತ್ತಿದೆ. ಇದು ಗುಣಮಟ್ಟ ಸಂರಕ್ಷಣೆ ಮತ್ತು ಸುಧಾರಣೆಗಾಗಿ ಕೆಲಸ ಮಾಡುತ್ತದೆ. ಇದಕ್ಕೂ ಮುನ್ನ, 1947ರಲ್ಲಿ ಸ್ಥಾಪನೆಯಾಗಿದ್ದ ಇಂಡಿಯನ್‌ ಸ್ಟ್ಯಾಂಡರ್ಡ್‌ ಇನ್‌ಸ್ಟಿಟ್ಯೂಷನ್‌ (ಐಎಸ್‌ಐ) ಗುಣಮಟ್ಟಗಳನ್ನು ನಿರ್ಧರಿಸುವ ಸಂಸ್ಥೆಯಾಗಿತ್ತು. 1952ರ ಐಎಸ್‌ಐ ಕಾಯ್ದೆ ಅಡಿ ಐಎಸ್‌ಐ ಪ್ರಮಾಣೀಕೃತ ಗುರುತುಗಳನ್ನು ಒದಗಿಸುವ ಕಾರ್ಯ ಮಾಡುತ್ತಿತ್ತು. 1986ರಲ್ಲಿ ಸಂಸತ್ತಿನಲ್ಲಿ ಹೊಸ ಕಾಯ್ದೆ ಅಂಗೀಕರಿಸುವ ಮೂಲಕ ಬಿಐಎಸ್‌ ಅನ್ನು ಸ್ಥಾಪಿಸಲಾಯಿತು. ಪ್ರಸ್ತುತ 2016ರ ಭಾರತೀಯ ಗುಣಮಟ್ಟಗಳ ಕಾಯ್ದೆ ಪ್ರಕಾರ ಬಿಐಎಸ್‌ ಕಾರ್ಯನಿರ್ವಹಿಸುತ್ತಿದೆ. ಪರಿಕರಗಳು ಹಾಗೂ ಪದಾರ್ಥಗಳು, ಕೈಗಾರಿಕಾ ಉತ್ಪನ್ನಗಳಿಗೆ ಗುಣಮಟ್ಟವನ್ನು ನಿಗದಿಪಡಿಸುವುದು, ಈ ಕುರಿತ ಚಟುವಟಿಕೆ ಹಮ್ಮಿಕೊಳ್ಳುವುದು, ಸರಕುಗಳ ಗುಣಮಟ್ಟ ಹಾಗೂ ಗುರುತುಗಳಿಗೆ ಸಂಬಂಧಿಸಿದಂತೆ ಪ್ರಮಾಣಪತ್ರಗಳನ್ನು ಒದಗಿಸುವುದು ಬಿಐಎಸ್‌ನ ಮುಖ್ಯ ಉದ್ದೇಶ. ಗುಣಮಟ್ಟಕ್ಕೆ ಸಂಬಂಧಿಸಿದ ಪರೀಕ್ಷೆಗಳನ್ನು ನಡೆಸಿ ಪ್ರಮಾಣಪತ್ರಗಳನ್ನು ಒದಗಿಸುವ ಮೂಲಕ ಸರಕುಗಳು ನಂಬಿಕಾರ್ಹವಾದ ಗುಣಮಟ್ಟ ಹೊಂದಿರುವಂತೆ ನೋಡಿಕೊಳ್ಳುವುದು, ಅವುಗಳ ಬಳಕೆಯಿಂದ ಗ್ರಾಹಕರ ಆರೋಗ್ಯದ ಮೇಲಾಗುವ ಅಪಾಯಗಳನ್ನು ತಡೆಯುವುದು ಈ ಸಂಸ್ಥೆಯ ಪ್ರಮುಖ ಕಾರ್ಯ.

ಬಿಐಎಸ್‌ನ ಕಾರ್ಯಚಟುವಟಿಕೆಗಳು

* ಗುಣಮಟ್ಟ ನಿರ್ಧರಿಸುವುದು

* ಉತ್ಪನ್ನಗಳಿಗೆ ಪ್ರಮಾಣಪತ್ರ ನೀಡುವುದು

* ಕಡ್ಡಾಯ ನೋಂದಣಿ ಅನುಷ್ಠಾನ

* ಹಾಲ್‌ ಮಾರ್ಕ್‌ಗಳನ್ನು ನೀಡುವುದು

* ಪ್ರಯೋಗಾಲಯಗಳಿಗೆ ಸಂಬಂಧಿಸಿದ ಸೇವೆಗಳು

* ಪ್ರಯೋಗಾಲಯಗಳಿಗೆ ಮಾನ್ಯತೆ ನೀಡುವುದು

* ಭಾರತೀಯ ಗುಣಮಟ್ಟದ ಪ್ರಚಾರ

* ಗ್ರಾಹಕರ ವ್ಯವಹಾರಕ್ಕೆ ಸಂಬಂಧಿಸಿ ಚಟುವಟಿಕೆ ಹಮ್ಮಿಕೊಳ್ಳುವುದು

* ಗುಣಮಟ್ಟ ಕಾಪಾಡುವ ಕುರಿತ ಪ್ರಚಾರ ಕಾರ್ಯ

* ತರಬೇತಿ ನೀಡುವುದು

* ಮಾಹಿತಿ ಪೂರೈಸುವುದು

ಬಿಐಎಸ್‌ ಕೇಂದ್ರ ಕಚೇರಿ ನವದೆಹಲಿಯಲ್ಲಿದೆ. ಈ ಸಂಸ್ಥೆಯು ಪೂರ್ವ (ಕೊಲ್ಕತ್ತ), ದಕ್ಷಿಣ (ಚೆನ್ನೈ), ಪಶ್ಚಿಮ (ಮುಂಬೈ), ಉತ್ತರ (ಚಂಡೀಗಡ) ಹಾಗೂ ಕೇಂದ್ರ (ನವದೆಹಲಿ) ಸೇರಿದಂತೆ ಐದು ಪ್ರಾದೇಶಿಕ ಕಚೇರಿಗಳನ್ನು ಹೊಂದಿದೆ. ಬೆಂಗಳೂರು ಸೇರಿದಂತೆ 21 ಕಡೆ ಶಾಖಾ ಕಚೇರಿಗಳನ್ನು ಹೊಂದಿದೆ. ಕೈಗಾರಿಕೆಗಳಿಗೆ ಪ್ರಮಾಣಪತ್ರ ವಿತರಣೆಗೆ ಸಂಬಂಧಿಸಿದ ಕೆಲಸಗಳನ್ನು ನಿರ್ವಹಿಸುವ ಈ ಶಾಖಾ ಕಚೇರಿಗಳು ಸರ್ಕಾರ, ಕೈಗಾರಿಕೆಗಳು, ತಾಂತ್ರಿಕ ಸಂಸ್ಥೆಗಳು, ಗ್ರಾಹಕ ಸಂಘಟನೆಗಳ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತವೆ.

ರಾಜ್ಯದಲ್ಲಿ ಹೇಗಿದೆ ಗುಣಮಟ್ಟ ಕಾಪಾಡುವ ವ್ಯವಸ್ಥೆ:

ಗುಣಮಟ್ಟ ಕಾಪಾಡುವುದ ಮೇಲೆ ನಿಗಾ ಇಡುವುದಕ್ಕಾಗಿಯೇ ರಾಜ್ಯದಲ್ಲಿ ಕಾನೂನು ಮಾಪನ ಇಲಾಖೆ ಇದೆ. ರಾಜ್ಯ ಮಟ್ಟದ ನಿಯಂತ್ರಣಾಧಿಕಾರಿಯ ಅಧೀನದಲ್ಲಿ ಈ ಇಲಾಖೆ ಕಾರ್ಯ ನಿರ್ವಹಿಸುತ್ತದೆ. ಜಿಲ್ಲಾ ಮಟ್ಟದಲ್ಲಿ ಸಹಾಯಕ ನಿಯಂತ್ರಕರು ಇಲಾಖೆಯ ಮುಖ್ಯಸ್ಥರು. ಕ್ಷೇತ್ರಗಳಿಗೆ ತೆರಳಿ ತಪಾಸಣೆ ನಡೆಸುವುದಕ್ಕೆ ನಿರೀಕ್ಷಕರು ಇರುತ್ತಾರೆ. ಸರಕುಗಳು ಬಗ್ಗೆ ಗ್ರಾಹಕರಿಂದ ಏನೇ ದೂರು ಬಂದರೂ ತಪಾಸಣೆ ನಡೆಸುವ ಅಧಿಕಾರ ಇವರಿಗೆ ಇದೆ. ಅಗತ್ಯ ಬಿದ್ದರೆ ಸರಕು ಪೂರೈಕೆ ಹಾಗೂ ಮಾರಾಟ ಸಂಸ್ಥೆಗಳ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡು ದಂಡವನ್ನೂ ವಿಧಿಸುವ ಅಧಿಕಾರವೂ ಈ ಇಲಾಖೆಗೆ ಇದೆ.

ಖರೀದಿಸುವ ಪದಾರ್ಥ ಅಥವಾ ಪರಿಕರ ಗುಣಮಟ್ಟದಿಂದ ಕೂಡಿದೆಯೇ, ಸಾಮಗ್ರಿಗಳ ಪೊಟ್ಟಣದಲ್ಲಿ ತೂಕ, ಅದನ್ನು ತಯಾರಿಸಲು ಬಳಸಿದ ಪದಾರ್ಥಗಳ ಪ್ರಮಾಣಗಳ ಬಗ್ಗೆ ಸರ್ಕಾರ ನಿಗದಿ ಪಡಿಸಿರುವ ಘೋಷಣೆಗಳನ್ನು ಪ್ರಕಟಿಸಲಾಗಿದೆಯೇ, ಅದರ ತೂಕದಲ್ಲಿ ವ್ಯತ್ಯಾಸವಿದೆಯೇ ಎಂಬುದನ್ನು ಪರೀಕ್ಷಿಸಬೇಕಾದುದು ಗ್ರಾಹಕರ ಜವಾಬ್ದಾರಿ. ಈ ಬಗ್ಗೆ ಏನಾದರೂ ಸಂದೇಹಗಳಿದ್ದಲ್ಲಿ ಗ್ರಾಹಕರು ಕಾನೂನು ಮಾಪನ ಇಲಾಖೆಗೆ ದೂರು ನೀಡಬಹುದು.

ರಾಜ್ಯದಲ್ಲಿ 3,64,975 ವಾಣಿಜ್ಯೋದ್ಯಮಗಳು, 16,40,826 ತೂಕದ ಸಾಧನಗಳು ಹಾಗೂ 2,12,092 ಅಳತೆ ಸಾಧನಗಳು ಈ ಇಲಾಖೆಯಲ್ಲಿ ನೋಂದಣಿಯಾಗಿವೆ. ಇವುಗಳನ್ನು ಕಾಲಕಾಲಕ್ಕೆ ತಪಾಸಣೆ ನಡೆಸುವ ಹೊಣೆಯೂ ಈ ಇಲಾಖೆಯದ್ದು. ಗುಣಮಟ್ಟ ಪಾಲಿಸದ ಕುರಿತು ಈ ಇಲಾಖೆ ರಾಜ್ಯದಲ್ಲಿ ಒಟ್ಟು 1,17,102 ಪ್ರಕರಣಗಳನ್ನು ಐದು ವರ್ಷಗಳಲ್ಲಿ ದಾಖಲಿಸಿದೆ. ಒಟ್ಟು ₹ 16,76,69249 ದಂಡ ವಿಧಿಸಿದೆ. 2020ರಲ್ಲಿ ಸೆಪ್ಟೆಂಬರ್‌ ಅಂತ್ಯದವರೆಗೆ 11,317 ಪ್ರಕರಣಗಳಲ್ಲಿ ₹ 1,61,68,100 ದಂಡ ವಿಧಿಸಿರುವುದೂ ಇದರಲ್ಲಿ ಸೇರಿದೆ.

‘ಗ್ರಾಹಕರಿಂದ ಬರುವ ಪ್ರತಿಯೊಂದು ದೂರನ್ನೂ ದಾಖಲಿಸಿಕೊಂಡು ನಾವು ತಪಾಸಣೆ ನಡೆಸುತ್ತೇವೆ. ಸರಕು ಸಾಮಗ್ರಿಗಳ ಗುಣಮಟ್ಟದ ಕಾಪಾಡದಿರುವ ಬಗ್ಗೆ ಏನೇ ಸಂದೇಹ ಬಂದರೂ ನಮ್ಮ ಇಲಾಖೆಗೆ ದೂರು ನೀಡಬಹುದು. (ದೂರವಾಣಿ: 080–22253500). ಇ-ಮೇಲ್‌ (clm_lm-ka@nic.in) ಮೂಲಕವೂ ಅಹವಾಲು ಸಲ್ಲಿಸಬಹುದು. ಸರಕು ಸಾಮಗ್ರಿಗಳ ಕಳಪೆ ಗುಣಮಟ್ಟ, ತೂಕ ವಂಚನೆ ಗಮನಕ್ಕೆ ಬಂದರೂ ಬಹುತೇಕ ಗ್ರಾಹಕರು ಈ ಬಗ್ಗೆ ದೂರು ನೀಡಲು ಹಿಂದೇಟು ಹಾಕುತ್ತಾರೆ. ಹೆಚ್ಚು ದೂರುಗಳು ಬಂದರೆ ವಂಚನೆ ಪ್ರಕರಣಗಳಿಗೆ ಕಡಿವಾಣ ಬೀಳಲಿದೆ’ ಎನ್ನುತ್ತಾರೆ ಕಾನೂನು ಮಾಪನ ನಿಯಂತ್ರಕ ವಿ.ಪಾತರಾಜು.

ಈ ಇಲಾಖೆಯು ತೀವ್ರ ಸಿಬ್ಬಂದಿ ಕೊರತೆಯಿಂದ ಬಳಲುತ್ತಿದೆ. ಮಂಜೂರಾದ ಹುದ್ದೆಗಳಲ್ಲಿ ಶೇ 50ರಷ್ಟು ಹುದ್ದೆಗಳು ಖಾಲಿ ಇವೆ. ಸಹಾಯಕ ನಿಯಂತ್ರಕರ 39 ಹುದ್ದೆಗಳಲ್ಲಿ 21 ಹುದ್ದೆಗಳು ಖಾಲಿ ಇವೆ. ಗುಣಮಟ್ಟಕ್ಕೆ ಸಂಬಂಧಿಸಿದಂತೆ ಕ್ರಮಕೈಗೊಳ್ಳಬೇಕಾದ ಜಿಲ್ಲಾ ಮಟ್ಟದ ಅಧಿಕಾರಿಗಳ ಹುದ್ದೆಗಳಲ್ಲೇ ಶೇ 50ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇದ್ದರೆ ಈ ಇಲಾಖೆ ಗ್ರಾಹಕರ ಆಶೋತ್ತರಗಳಿಗೆ ಹೇಗೆ ಸ್ಪಂದಿಸಬಹುದು ಎಂಬುದು ಯಕ್ಷಪ್ರಶ್ನೆ.

ಇಂದು ಅಂತರರಾಷ್ಟ್ರೀಯ ಗುಣಮಟ್ಟ ದಿನ

ಗುಣಮಟ್ಟಗಳ ಬಗ್ಗೆ ಗ್ರಾಹಕರಲ್ಲಿ ಹಾಗೂ ಕೈಗಾರಿಕೆಗಳಲ್ಲಿ ಜಾಗೃತಿ ಮೂಡಿಸುವ ಸಲುವಾಗಿಯೇ ಪ್ರತಿ ವರ್ಷ ಅಕ್ಟೋಬರ್‌ 14ರಂದು ಅಂತರರಾಷ್ಟ್ರೀಯ ಗುಣಮಟ್ಟಗಳ ದಿನಾಚರಣೆಯನ್ನು ಆಚರಿಸಲಾಗುತ್ತದೆ. ‘ಗುಣಮಟ್ಟದ ಮೂಲಕ ಭೂಮಿಯ ಸಂರಕ್ಷಣೆ’ 2020ರ ಅಂತರರಾಷ್ಟ್ರೀಯ ಗುಣಮಟ್ಟ ದಿನಾಚರಣೆಯ ಧ್ಯೇಯವಾಕ್ಯ. 1946ರಲ್ಲಿ ಲಂಡನ್‌ನಲ್ಲಿ ನಡೆದ ಸಮಾವೇಶದಲ್ಲಿ ಭಾಗವಹಿಸಿದ್ದ 25ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಸೇರಿ ಗುಣಮಟ್ಟಗಳನ್ನು ಕಾಪಾಡುವ ವ್ಯವಸ್ಥೆ ರೂಪಿಸುವ ಬಗ್ಗೆ ಚರ್ಚಿಸಿದ್ದರು. ಅದರ ಮರುವರ್ಷ ಐಎಸ್‌ಒ ಅಸ್ತಿತ್ವಕ್ಕೆ ಬಂತು. ಮೊದಲ ಅಂತರರಾಷ್ಟ್ರೀಯ ಗುಣಮಟ್ಟ ದಿನಾಚರಣೆಯನ್ನು 1970ರಲ್ಲಿ ಆಚರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT