ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶತ್ರು ಕ್ಷಿಪಣಿ ಹಿಮ್ಮೆಟ್ಟಿಸಲು ತೇಜಸ್‌ಗೆ ಡಿಆರ್‌ಡಿಒ ಹೊಸ ಚಾಫ್ ತಂತ್ರಜ್ಞಾನದ ಬಲ

Last Updated 18 ಜನವರಿ 2022, 16:10 IST
ಅಕ್ಷರ ಗಾತ್ರ

'ದೇಶದ ಯುದ್ಧವಿಮಾನಗಳನ್ನು ಪ್ರತಿಕೂಲವಾದ ರಾಡಾರ್ ಬೆದರಿಕೆಗಳಿಂದ ರಕ್ಷಿಸಲು ಸುಧಾರಿತ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿರುವುದಾಗಿ' ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಇತ್ತೀಚೆಗೆ ಘೋಷಿಸಿತು. ಎಚ್ಎಎಲ್ ದೇಶೀಯವಾಗಿ ನಿರ್ಮಿಸಿರುವ `ತೇಜಸ್'ನಲ್ಲಿ ಈ ತಂತ್ರಜ್ಞಾನವನ್ನು ಬಳಸಬಹುದು.

ಈ ಯೋಜನೆಯು ಜೋಧ್‌ಪುರದಲ್ಲಿರುವ ಡಿಆರ್‌ಡಿಒದ ರಕ್ಷಣಾ ಪ್ರಯೋಗಾಲಯ ಮತ್ತು ಪುಣೆಯಲ್ಲಿರುವ ಹೈ ಎನರ್ಜಿ ಮೆಟೀರಿಯಲ್ಸ್ ರಿಸರ್ಚ್ ಲ್ಯಾಬೋರೇಟರಿ ಸಹಯೋಗದಲ್ಲಿ ನಡೆದ ಸಂಶೋಧನೆಯ ಫಲಿತಾಂಶವಾಗಿದೆ.

ಅತ್ಯಾಧುನಿಕ ಚಾಫ್ ಮೆಟೀರಿಯಲ್ ಮತ್ತು ಚಾಫ್ ಕಾರ್ಟ್ರಿಡ್ಜ್-118/I ಅಭಿವೃದ್ಧಿಯನ್ನು ಜೋಧ್‌ಪುರದಲ್ಲಿ ಕೈಗೊಳ್ಳಲಾಯಿತು. ರಾಡಾರ್ ತಂತ್ರಜ್ಞಾನದಲ್ಲಿ ಆಗಿರುವ ಇತ್ತೀಚಿನ ಬೆಳವಣಿಗೆಗಳನ್ನು ಪರಿಗಣಿಸಿದರೆ, ಇತ್ತೀಚೆಗೆ ಫೈಟರ್ ಜೆಟ್‌‌ಗಳು ಪಾರಾಗಿ ಮರಳುವುದೇ ಅನುಮಾನ ಎನ್ನಿಸುತ್ತಿದೆ ಎಂದು ಡಿಆರ್‌ಡಿಒ ಕಳವಳ ವ್ಯಕ್ತಪಡಿಸಿತ್ತು.

ಚಾಫ್ ಒಂದು ನಿರ್ಣಾಯಕ ರಕ್ಷಣಾ ತಂತ್ರಜ್ಞಾನವಾಗಿದ್ದು, ಶತ್ರು ರಾಡಾರ್‌ಗಳನ್ನು ಪತ್ತೆ ಮಾಡಲು ಮತ್ತು ಅವುಗಳಿಂದ ಫೈಟರ್ ಜೆಟ್‌ಗಳನ್ನು ರಕ್ಷಿಸಲು ಬಳಸಲಾಗುತ್ತದೆ. ಫೈಟರ್ ಜೆಟ್ ಸುತ್ತಲಿರುವ ಗಾಳಿಯಲ್ಲಿ ಚಾಫ್ ತಂತ್ರಜ್ಞಾನವು ಶತ್ರು ಕ್ಷಿಪಣಿಗಳನ್ನು ವಂಚಿಸಿ ದಿಕ್ಕು ತಪ್ಪಿಸುತ್ತದೆ. ಈ ಮೂಲಕ ಯುದ್ಧ ವಿಮಾನಗಳ ಸುರಕ್ಷತೆಯನ್ನು ಖಾತ್ರಿಗೊಳಿಸುತ್ತದೆ.

ಚಾಫ್ ಮೆಟೀರಿಯಲ್ ಅಲ್ಯೂಮಿನಿಯಂ ಅಥವಾ ಸತು ಲೇಪಿತ ಅನೇಕ ಸೂಕ್ಷ್ಮ ಫೈಬರ್‌ಗಳಿಂದ ಕೂಡಿದ್ದು, ವಿಮಾನದಲ್ಲಿ ಕೊಳವೆಗಳಲ್ಲಿ ಸಂಗ್ರಹಿಸಲಾಗಿರುತ್ತದೆ. ಯಾವುದೇ ರಾಡಾರ್ ಟ್ರ್ಯಾಕಿಂಗ್ ಕ್ಷಿಪಣಿಗಳಿಂದ ವಿಮಾನವು ಅಪಾಯಕ್ಕೆ ಒಳಗಾಗುವ ಸಂಭವ ಎದುರಾದಲ್ಲಿ, ವಿಮಾನದ ಹಿಂಭಾಗದಲ್ಲಿ ಗಾಳಿಯ ಪ್ರಕ್ಷುಬ್ಧ ಹಿನ್ನೆಲೆಯಲ್ಲಿ ಚಾಫ್ ಅನ್ನು ಹೊರಹಾಕಲಾಗುತ್ತದೆ.

ವಿಮಾನವು ಅಲ್ಯೂಮಿನಿಯಂ ಅಥವಾ ಸತುಗಳ ಸಣ್ಣ ಪಟ್ಟಿಗಳನ್ನು ದೊಡ್ಡ ಗೊಂಚಲುಗಳಲ್ಲಿ ಬಿಡುಗಡೆ ಮಾಡುತ್ತದೆ. ಅದು ಲೋಹದ ಒಂದು ಮೋಡದಂತೆ ರೂಪ ತಾಳುತ್ತದೆ. ಈ ಲೋಹೀಯ ಮೋಡಗಳು ಕ್ಷಿಪಣಿಯ ರಾಡಾರ್‌‌ಗೆ ಪ್ರತ್ಯೇಕ ಗುರಿಯಾಗಿ ಗೋಚರಿಸುತ್ತವೆ. ಈ ಮೂಲಕ ಕ್ಷಿಪಣಿಯನ್ನು ಕ್ಷಣಕಾಲ ಗೊಂದಲಕ್ಕೆ ಈಡು ಮಾಡುತ್ತವೆ. ಈ ಸಮಯವನ್ನು ಬಳಸಿಕೊಂಡು ಯುದ್ಧ ವಿಮಾನಗಳು ಅಪಾಯದಿಂದ ಪಾರಾಗುತ್ತವೆ.

'ಭಾರತೀಯ ವಾಯುಪಡೆಯ ವಾರ್ಷಿಕ ಪುನರಾವರ್ತಿತ ಅವಶ್ಯಕತೆಗಳನ್ನು ಪೂರೈಸುವುದಕ್ಕಾಗಿ ಹೆಚ್ಚಿನ ಪ್ರಮಾಣದಲ್ಲಿ ತಯಾರಿಸಲು ಚಾಫ್ ತಂತ್ರಜ್ಞಾನವನ್ನು ಕೈಗಾರಿಕೆಗಳಿಗೆ ವರ್ಗಾಯಿಸಲಾಗಿದೆ' ಎಂದು ಡಿಆರ್‌‌ಡಿಒ ಹೇಳಿದೆ.

ಇದು ಆತ್ಮನಿರ್ಭರ ಭಾರತ್ ಕಡೆಗೆ ಮತ್ತೊಂದು ಹೆಜ್ಜೆಯಾಗಿದೆ.

ರಾಡಾರ್‌ಗಳ ದಾರಿ ತಪ್ಪಿಸಲು ಬಳಸಲಾಗುವ ಅಲ್ಯೂಮಿನಿಯಂ ಅಥವಾ ಸತು ಲೇಪಿತ ಫೈಬರ್‌ಗಳ ಪುಡಿಯಾಗಿರುವ ಚಾಫ್, ಸುರಕ್ಷಿತವೆಂದು ಪರಿಗಣಿತವಾಗಿದೆ. ಆದರೂ, ಮನುಷ್ಯರ ಮೇಲೆ ಅಥವಾ ಪರಿಸರದ ಮೇಲೆ ಅವುಗಳ ಪ್ರಭಾವ ಏನೆಂಬುದರ ಕುರಿತಾಗಿ ಸಂಶೋಧನೆ ನಡೆಯುತ್ತಿದೆ ಎನ್ನುತ್ತಾರೆ ಸರಕಾರಿ ಅಧಿಕಾರಿಗಳು.

ಲೇಖಕರು: ವ್ಯವಸ್ಥಾಪಕ ನಿರ್ದೇಶಕರು, ಎಡಿಡಿ ಇಂಜಿನಿಯರಿಂಗ್ ಇಂಡಿಯಾ(ಇಂಡೋ -ಜರ್ಮನ್ ಸಂಸ್ಥೆ )

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT