ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ಮರುರಚನೆ: ಬೇಕು ಪರಿಕಲ್ಪನೆ

ಕೃಷಿಯೇತರ ಗ್ರಾಮೀಣ ಉತ್ಪನ್ನಗಳಿಗೆ ಕಿಮ್ಮತ್ತು ಬಂದಾಗ ಕೃಷಿರಂಗದ ಸಬಲೀಕರಣ ಸಾಧ್ಯ
Last Updated 2 ಜೂನ್ 2021, 19:30 IST
ಅಕ್ಷರ ಗಾತ್ರ

ಕೊರೊನೋತ್ತರ ಜಗತ್ತು ಈಗ ಇರುವ ಹಾಗೆ ಇರುವುದಿಲ್ಲ. ಆರ್ಥಿಕತೆಯ ಮೇಲೆ ಅದರ ಪ್ರಭಾವ ಖಂಡಿತ ಇರುತ್ತದೆ. ಈಗಾಗಲೇ ಅದು ಅನುಭವಕ್ಕೆ ಬರುತ್ತಿದೆ. ಅದರ ನಿರ್ವಹಣೆಗೆ ಸೂಕ್ತ ಆರ್ಥಿಕ‌ ನೀತಿ ಬೇಕಾಗುತ್ತದೆ.

ನಮ್ಮ ಬಳಿ ಹೆಚ್ಚು ಪ್ರಚಲಿತವಾಗಿರುವ ಆರ್ಥಿಕತೆಯ ಮಾದರಿಗಳು ಮೂರು ರೀತಿಯವು. ಸರ್ಕಾರವೇ
ಆರ್ಥಿಕತೆಯನ್ನು ನಿರ್ವಹಿಸುವ ಸಮಾಜವಾದಿ ಮಾದರಿ. ಎರಡನೆಯದು, ಖಾಸಗಿ ಒಡೆತನವೇ ಪ್ರಧಾನವಾಗಿರುವ ಬಂಡವಾಳವಾದಿ ಮಾದರಿ. ಮೂರನೆಯದು, ಸರ್ಕಾರ ಮತ್ತು ಖಾಸಗಿ ಸಹಭಾಗಿತ್ವ ಹೊಂದಿರುವ, ಆದರೆ ಸರ್ಕಾರದ ಜವಾಬ್ದಾರಿ ಜಾಸ್ತಿ ಇರುವ ಜವಾಹರಲಾಲ್ ನೆಹರೂ ಅವರು ರೂಪಿಸಿದ ಮಿಶ್ರ ಅರ್ಥವ್ಯವಸ್ಥೆಯ ಮಾದರಿ. ಈ ಮಾದರಿಯನ್ನು ಪಿ.ವಿ.ನರಸಿಂಹ ರಾವ್- ಮನಮೋಹನ್ ಸಿಂಗ್ ಆರ್ಥಿಕ ನೀತಿಯು ಬಹುಮಟ್ಟಿಗೆ ಬಂಡವಾಳವಾದಿ ಮಾದರಿಯ ಆರ್ಥಿಕತೆಯಾಗಿ ರೂಪಿಸಿತು. ಆದರೆ ಬದಲಾಗಿರುವ ಸನ್ನಿವೇಶದಲ್ಲಿ ಬಂಡವಾಳವಾದಿ ಮಾದರಿಯು ಯಥಾರೀತಿಯಲ್ಲಿ‌ ಮುಂದುವರಿಯುವುದು ಕಷ್ಟವಾಗುತ್ತದೆ. ಏಕೆಂದರೆ ಕೊರೊನಾದಿಂದ ಆಗಿರುವ ಹಾನಿಗಳು ಅಂತರರಾಷ್ಟ್ರೀಯವಾದವುಗಳು. ಭಾರತದೊಂದಿಗೆ ಆರ್ಥಿಕ ಸಂಬಂಧಗಳು ಹೆಚ್ಚಾಗಿರುವ ರಾಷ್ಟ್ರಗಳು ತಳೆಯುವ ಆರ್ಥಿಕ ಧೋರಣೆಗಳಿಗೆ ಹೊಂದಿಕೊಳ್ಳುವ ಹಾಗೆ ಆರ್ಥಿಕ ಪರಿಕಲ್ಪನೆಗಳನ್ನು ರಚಿಸಬೇಕಾಗುತ್ತದೆ. ಆಗ ಇಡೀ ರಾಷ್ಟ್ರವನ್ನು ಸಮಗ್ರವಾಗಿ ಪ್ರತಿನಿಧಿಸುವ ಒಕ್ಕೂಟ ಸರ್ಕಾರವು ಆರ್ಥಿಕ ಪರಿಕಲ್ಪನೆಗಳ ರೂಪಿಸುವಿಕೆಯ ನಾಯಕತ್ವವನ್ನು ಪಡೆದುಕೊಳ್ಳಬೇಕಾಗುತ್ತದೆ.

ಕುಸಿದ ಅಥವಾ ಕುಸಿಯುತ್ತಿರುವ ಆರ್ಥಿಕತೆಯಲ್ಲಿ ಬಂಡವಾಳವಾದವು ಯಶಸ್ವಿಯಾಗುವುದಿಲ್ಲ ಎನ್ನಲು ವಿಶ್ವದ ಮಹಾನ್ ಬಂಡವಾಳವಾದಿ ಆರ್ಥಿಕತೆಯಾದ ಅಮೆರಿಕದ ಅನುಭವಗಳಿವೆ. 1928ರ ಜಾಗತಿಕ ಆರ್ಥಿಕ ಮುಗ್ಗಟ್ಟು ಸಂಭವಿಸಿದಾಗ ಅಧ್ಯಕ್ಷ ಫ್ರಾಂಕ್ಲಿನ್ ಡಿ ರೂಸ್‌ವೆಲ್ಟ್ ಅವರು ಸಮಾಜವಾದಿ ನಿರ್ಧಾರಗಳನ್ನು ತೆಗೆದುಕೊಂಡರು. ಹತ್ತು ವರ್ಷಗಳ ಅವಧಿಯ ಸಮಾಜವಾದಿ ಕಾರ್ಯಕ್ರಮಗಳ ನಂತರ ಅಲ್ಲಿನ ಆರ್ಥಿಕತೆ ಸ್ಥಿರತೆಗೆ ಬಂತು.‌ ಮತ್ತೆ ಬಂಡವಾಳವಾದಿ ಆರ್ಥಿಕತೆಯನ್ನು ಜಾರಿಗೆ ತರಲಾಯಿತು. ಆರ್ಥಿಕತೆ ಹದಗೆಟ್ಟಾಗ ಯಾವ ಆರ್ಥಿಕತೆಯೂ ಬಂಡವಾಳವಾದಿ ಉಪಕ್ರಮಗಳ ಮೂಲಕವೇ ಮೇಲೆದ್ದ ಉದಾಹರಣೆಗಳಿಲ್ಲ. ಆದರೆ ಈಗ ಜಾಗತಿಕ ಸಂಸ್ಕೃತಿಯೇ ಒಂದು ಮಿಶ್ರ ಸಂಸ್ಕೃತಿಯಾಗಿರುವ ಹಾಗೆ ಆರ್ಥಿಕ ರಚನೆಗಳೂ ಮಿಶ್ರ ಮಾದರಿಯವೇ ಆಗುವುದು ಅವಶ್ಯಕವಾಗಿದೆ.

ಮಿಶ್ರ ಆರ್ಥಿಕತೆಯಾದಾಗಲೂ ನೆಹರೂ ಅವರ ಕಾಲಮಾನದ ಆರ್ಥಿಕತೆಯ ಪರಿಕಲ್ಪನೆಗಳೇ ಈಗ ಉಪಯುಕ್ತವಾಗಲಾರವು. ಅಂದಿನ ಜನಸಂಖ್ಯೆ ಮತ್ತು ಸಂಪನ್ಮೂಲಗಳ ಸ್ವರೂಪ‌ ಇಂದಿಗಿಂತ ಭಿನ್ನವಾಗಿದ್ದವು. ಅಂದಿನ ಕಾಲದಲ್ಲಿ ಉತ್ಪಾದನಾ ಘಟಕಗಳು ಇರಲಿಲ್ಲ.‌ ಆದ್ದರಿಂದ ಘಟಕಗಳ ಸ್ಥಾಪನೆಯಾಗುವ ತನಕ ನಿರ್ವಹಣೆಯ ಜವಾಬ್ದಾರಿ ಇರಲಿಲ್ಲ. ಘಟಕ ಸ್ಥಾಪನೆಯಾದ ಕೂಡಲೇ ಉತ್ಪಾದನೆಯೂ ಪ್ರಾರಂಭ ವಾಯಿತು. ಹೀಗೆ ಅದು ಬೆಳೆಯುತ್ತಾ ಬಂದ ಆರ್ಥಿಕತೆಯಾಗಿತ್ತು. ಈಗಿನ ಸಮಸ್ಯೆ ಅದಲ್ಲ.

ಕಾರ್ಯನಿರ್ವಹಿಸದೆ ಇರುವ ಮತ್ತು ಮುಂದೆಯೂ ತಕ್ಷಣವೇ ಕಾರ್ಯನಿರ್ವಹಿಸಲು ಆಗದ ಉತ್ಪಾದನಾ ಘಟಕಗಳ ನಿರ್ವಹಣಾ ವೆಚ್ಚವೇ ಬಹುದೊಡ್ಡ ಹೊರೆ ಯಾಗುತ್ತದೆ. ಎಂದಾದರೂ ಈ ಘಟಕಗಳೆಲ್ಲ ಪೂರ್ಣ ಪ್ರಮಾಣದಲ್ಲಿ ಮರು ಉತ್ಪಾದನೆಗೆ ತೊಡಗುತ್ತವೆ. ಆದರೆ ಅವುಗಳ ಉತ್ಪಾದನೆಗೆ ಮಾರುಕಟ್ಟೆ ಉಳಿಯುತ್ತದೆ ಎಂಬ ಖಾತರಿ ಇಲ್ಲ. ಏಕೆಂದರೆ ಕೊರೊನಾದ ಪರಿಣಾಮವಾಗಿ ಜನರ ಆದಾಯ ಮತ್ತು ಅಭಿರುಚಿ ಬದಲಾಗುತ್ತವೆ. ಆಗ ಬದಲಾದ ಬೇಡಿಕೆಯ ಸ್ವರೂಪಕ್ಕೆ ಅನುಗುಣವಾಗಿ ಆರ್ಥಿಕ ಘಟಕಗಳನ್ನು‌ ಮರುವಿನ್ಯಾಸಗೊಳಿಸಬೇಕಾಗುತ್ತದೆ. ಆಗ ಕೆಲವೊಂದು ಉತ್ಪಾದನಾ ತಂತ್ರಗಳು ಮತ್ತು ಉತ್ಪಾದನಾ ಯಂತ್ರಗಳು ಬದಲಾಗಲೇಬೇಕು. ತಂತ್ರಗಳು ಬದಲಾದಾಗ ಕೆಲವು ಉದ್ಯೋಗಿಗಳು ಉದ್ಯೋಗ ಕಳೆದುಕೊಳ್ಳುತ್ತಾರೆ. ಕೆಲವರು ಉದ್ಯೋಗ ಪಡೆಯುತ್ತಾರೆ. ಯಂತ್ರಗಳು ಬದಲಾದಾಗ ಹಳೆಯ ಯಂತ್ರಗಳು ನಷ್ಟವಾಗಿ, ಹೊಸ ಯಂತ್ರಗಳು ಬರುವುದ ರಿಂದ ಹಣಕಾಸಿನ ಒತ್ತಡ ಉಂಟಾಗುತ್ತದೆ. ಅದರಿಂದಾಗಿ ಉತ್ಪಾದನಾ ವೆಚ್ಚ ಜಾಸ್ತಿಯಾಗುತ್ತದೆ. ಅದರ ಪರಿಣಾಮ ಬೆಲೆ ಏರಿಕೆ. ಬೆಲೆ ಏರಿಕೆಯನ್ನು ತಡೆದುಕೊಳ್ಳುವ ಹಾಗೆ ವೇತನ ಏರಿಕೆಯಾಗಬೇಕು ಅಥವಾ ದುರ್ಬಲ ಉತ್ಪಾದನಾ ಘಟಕಗಳನ್ನು ಸರ್ಕಾರ ತಾನು ಖರೀದಿಸಿ ಲಾಭದಾಯಕವಾಗುವ ಹಾಗೆ ಮಾಡಬೇಕಾಗುತ್ತದೆ.

ಈ ಸನ್ನಿವೇಶವನ್ನು ನಿರ್ವಹಿಸಲು ಆರ್ಥಿಕತೆಯನ್ನು ಮೂರು ಸ್ವರೂಪಗಳಲ್ಲಿ ರೂಪಿಸಿಕೊಳ್ಳಬೇಕು. ಒಂದು, ಜಾಗತೀಕರಣ ಒಡಂಬಡಿಕೆಗೆ ಅನುಗುಣವಾಗಿ ಅಂತರರಾಷ್ಟ್ರೀಯ ಬಂಡವಾಳವಾದಿ ಮಾದರಿಯದು. ಎರಡನೆಯದು, ನೆಹರೂ ಅವರ ಪರಿಕಲ್ಪನೆಯ ಮಿಶ್ರ ಆರ್ಥಿಕತೆ. ಇದು ಮಧ್ಯಮ ಹಂತದ್ದು. ಮೂರನೆಯದು ತಳಮಟ್ಟದ್ದು. ಇಲ್ಲಿಗೆ ಗಾಂಧೀಜಿಯವರ ಆರ್ಥಿಕ ಪರಿಕಲ್ಪನೆಗಳನ್ನು ಸಹಕಾರಿ ಸಂಘಗಳ ರೂಪದಲ್ಲಿ ತರಬೇಕು.‌ ಸಾಮಾನ್ಯವಾಗಿ ಸಹಕಾರಿ ಸಂಘಗಳು ಮಾರು ಕಟ್ಟೆಯ ಸಮಸ್ಯೆಗಳಿಂದಾಗಿ ಸೋಲುತ್ತವೆ ಎಂಬುದನ್ನು ಗಮನಿಸಬೇಕು. ಈ ಸಮಸ್ಯೆಯನ್ನು ನಿವಾರಿಸಲು ಗ್ರಾಮ ಮತ್ತು ಸಣ್ಣ ಪೇಟೆ ಹಾಗೂ ಜಿಲ್ಲಾ ಕೇಂದ್ರಗಳ ನಡುವೆ ಪಂಚಾಯತ್ ರಾಜ್ ವ್ಯವಸ್ಥೆಯ ಅಧೀನದಲ್ಲಿ ವ್ಯವಸ್ಥೆಯನ್ನು ಸಂಘಟಿಸಬೇಕು. ಅದರ ನಿರ್ವಹಣಾ ಕ್ರಮದ ಉದಾಹರಣೆಯನ್ನು ಈ ಕೆಳಗಿನಂತೆ ಹೇಳ ಬಹುದು:

ಹೋಟೆಲ್ ಮ್ಯಾನೇಜ್‌ಮೆಂಟ್ ಪದವಿ ಪಡೆದು ಬಂದಾಗ ಹೋಟೆಲು‌ ಮಾಣಿ ಎಂಬ ಅಗೌರವದ ಸಂಬೋಧನೆ ಹೊರಟು ಹೋಗಿ, ಅದು ವಿದ್ಯಾವಂತರು ಕೈಗೊಳ್ಳಬಹುದಾದ ಗೌರವಾನ್ವಿತ ಉದ್ಯೋಗವಾಯಿತು. ಇಂದಿನ ಸನ್ನಿವೇಶದಲ್ಲಿ ಜಿಲ್ಲಾ ಮಟ್ಟದಲ್ಲಿ ಕೃಷಿ ಉದ್ಯೋಗಗಳನ್ನು ಕಲಿಸುವ ಡಿಪ್ಲೊಮಾ ಕೋರ್ಸ್‌ನ ರೀತಿಯ ಕೋರ್ಸ್ ಶುರು ಮಾಡಬೇಕು. ‌ಅಲ್ಲಿ ಅಭ್ಯಾಸ ಮಾಡಿ ಬಂದಾಗ ಕೃಷಿ ಕಾರ್ಮಿಕರ ಅಶಿಸ್ತು ಕಡಿಮೆಯಾಗುತ್ತದೆ. ಉದ್ಯೋಗ ಗೌರವಾನ್ವಿತವಾಗುತ್ತದೆ. ಹೀಗೆ ಕಲಿತವರು ಗ್ರಾಮ ಪಂಚಾಯಿತಿಯಲ್ಲಿ ಹೆಸರು ನೋಂದಾಯಿಸಬೇಕು. ಕೃಷಿಕರು ತಮಗೆ ಬೇಕಾಗುವ ಕೆಲಸಗಾರರನ್ನು ಪಂಚಾಯಿತಿಯ ಮೂಲಕ ಪಡೆಯುವಂತೆ ಆಗಬೇಕು. ಆಗ ಗ್ರಾಮ‌ ಪಂಚಾಯಿತಿ ಕೂಡ ಸಶಕ್ತ ಆಗುತ್ತದೆ. ಆರ್ಥಿಕತೆಯ ತಳಮಟ್ಟದಲ್ಲಿ ಉದ್ಯೋಗ ಸೃಷ್ಟಿಯಾಗುತ್ತದೆ.

ಎರಡನೆಯದು ಉತ್ಪಾದನಾ ಘಟಕಗಳು. ಭಾರತದ ಬಳಿ ಈಗಲೂ ಸ್ವಂತ ಕೌಶಲದ ಉತ್ಪಾದನೆಗಳಿವೆ. ಗ್ರಾಮದಲ್ಲಿ ಉತ್ಪಾದನೆ, ತಾಲ್ಲೂಕು ಮತ್ತು ಜಿಲ್ಲಾ ಮಾರುಕಟ್ಟೆ ಇರಬೇಕು. ಜಿಲ್ಲಾ ಮಾರುಕಟ್ಟೆಯಿಂದ ಅಂತರರಾಷ್ಟ್ರೀಯ ಮಾರುಕಟ್ಟೆಗೆ ಒಯ್ಯುವ ವಿಚಾರ ಬಂದಾಗ ಬಹುರಾಷ್ಟ್ರೀಯ ಕಂಪನಿಗಳಿಗೆ ಸಂಪರ್ಕ ಕಲ್ಪಿಸಬೇಕು. ಈಗ ಬಂದಿರುವ ನೂತನ ಕೃಷಿ ಕಾಯ್ದೆಯಲ್ಲಿ ಏನು ಬೆಳೆಯಬೇಕೆಂದು ರೈತರಿಗೆ ಸೂಚಿಸಲು ಕಂಪನಿ ಗಳಿಗೆ ಅವಕಾಶವಿದೆ. ಕೃಷಿಯ ವಿಚಾರಕ್ಕೆ ಕಂಪನಿಗಳು ಸೂಚಿಸಿದಂತೆ ಬೆಳೆಯುವುದು ಸೂಕ್ತವಲ್ಲ. ಆದರೆ ಸೂಚನೆ ಆಧಾರಿತ ಉತ್ಪಾದನೆಯು ಕೃಷಿಯೇತರ ಗ್ರಾಮೀಣ ಉತ್ಪಾದನೆಗಳ ವಿಚಾರದಲ್ಲಿ ಯಶಸ್ವಿಯಾಗುತ್ತದೆ. ಆಗ ಕೃಷಿರಂಗ ತಾನೇ ತಾನಾಗಿ ಸಬಲೀಕರಣವಾಗುತ್ತದೆ. ಆರ್ಥಿಕತೆಯ ತಳಮಟ್ಟದಲ್ಲಿ ಚಟುವಟಿಕೆಗಳು ಜಾಸ್ತಿಯಾಗಿ ಆರ್ಥಿಕತೆಗೆ ಮೇಲ್ಮುಖಿಯಾದ ಚಲನೆ ಸಿಗುತ್ತದೆ.

ಮಧ್ಯದ ಹಂತದಲ್ಲಿ ಆ ಕಡೆ ಈ ಕಡೆ ಎರಡನ್ನೂ ಉಸ್ತುವಾರಿ ಮಾಡಲು ನೆಹರೂ ಅವರ ಪರಿಕಲ್ಪನೆಯ ಮಾದರಿಯ ಆರ್ಥಿಕ ರಚನೆಗಳಿರಬೇಕು. ಈ ಹಂತದಲ್ಲಿ ಮಾರುಕಟ್ಟೆಯ ಮೇಲೆ ಸರ್ಕಾರ ನಿಯಂತ್ರಣವನ್ನು ತಂದುಕೊಳ್ಳಬೇಕಾಗುತ್ತದೆ. ಆಗ ಸರ್ಕಾರದ ವರಮಾನ ಮೂಲದ ಸಮಸ್ಯೆಯನ್ನು‌ ನಿರ್ವಹಿಸಲು ಬರುತ್ತದೆ. ಪ್ರಸ್ತುತ ತಮಿಳುನಾಡು, ತೆಲಂಗಾಣ ಮುಂತಾದೆಡೆ ಜನರಿಗೆ ಕೊಡುಗೆಗಳ ಮೂಲಕ ಪರಿಸ್ಥಿತಿಯ ನಿಭಾವಣೆಗೆ ಆದ್ಯತೆ ಕಾಣಿಸುತ್ತಿದೆ. ಆದರೆ ಕೇರಳದಲ್ಲಿ ಮಾತ್ರ ಮಾರುಕಟ್ಟೆಯ ಮೇಲೆ ಸರ್ಕಾರ ನಿಯಂತ್ರಣ ತೆಗೆದು
ಕೊಳ್ಳುತ್ತಿರುವುದು ಕಾಣಿಸುತ್ತಿದೆ.

ಸದ್ಯಕ್ಕೆ ಒಕ್ಕೂಟ ಸರ್ಕಾರವು ರಾಜ್ಯಗಳ ನಡುವೆ ಸಂಪರ್ಕ ರೂಪದಲ್ಲಿ ಆರ್ಥಿಕ ನಿರ್ವಹಣೆಯನ್ನು ಮಾಡುತ್ತಿದೆ. ಬಹುಶಃ ಇನ್ನೊಂದು ಆರು ತಿಂಗಳಲ್ಲಿ ಒಕ್ಕೂಟ ಸರ್ಕಾರವು ಸೂಕ್ತ ಆರ್ಥಿಕ ನೀತಿ ಮತ್ತು ಕಾರ್ಯಕ್ರಮಗಳೊಂದಿಗೆ ಮಧ್ಯಪ್ರವೇಶಿಸಲೇಬೇಕಾದ ಪರಿಸ್ಥಿತಿ ಬರಲಿದೆ. ರಾಜ್ಯಗಳ ನಡುವಿನ ಅಸಮತೋಲನವನ್ನು ಸಂತುಲಿತ ಸ್ಥಿತಿಗೆ ತಂದು ಭಾರತೀಯ ಒಕ್ಕೂಟ ವನ್ನು ನಡೆಸಿಕೊಂಡು ಹೋಗಲು ಸಮರ್ಪಕ ಆರ್ಥಿಕ ಪರಿಕಲ್ಪನೆಗಳನ್ನು ಸೂಕ್ತ ರೀತಿಯಲ್ಲಿ ಅನುಷ್ಠಾನಗೊಳಿಸ ಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT