ಸೋಮವಾರ, ಮೇ 23, 2022
21 °C
ನಿದ್ದೆಗೂ... ನೋವಿಗೂ...

PV Web Exclusive-ಮನೋಮಯ| ನಿದ್ದಿ ಬಂಗಾರಾದಾಗ... ಬರದಾದಾಗ

ರಶ್ಮಿ ಎಸ್‌ Updated:

ಅಕ್ಷರ ಗಾತ್ರ : | |

Prajavani

ಅದ್ಹಂಗೆ.. ಒಂದು ಕಾಲ ಇತ್ತು, ಯಾವಾಗ ರಾತ್ರಿ ಆಗ್ತದ, ಯಾವಾಗ ದಿಂಬಿಗೆ ತಲಿ ಹಚ್ತೀನಿ, ಕಣ್ಣೆವಿ ಕೆನ್ನಿಗಾನಿ, ಕಣ್ಣಾಲಿ ಚಂದಿರನ ಚಲನೆ ಹೆಚ್ಚಾದಂಗ, ನನ್ನ ಕನಸಿನ ಲೋಕ ಬಿಚ್ತಿತ್ತು. ತುಟಿನಾವಿಯಾಗಿ, ನಗಿ ಸೂಸುಮುಂದ, ನಮ್ಮಪ್ಪಾಜಿ ಹಣಿ ಮ್ಯಾಲೆ ಕೈ ಆಡಿಸಿ ಹೋಗ್ತಿದ್ರು.

ಎಂಥ ನಿದ್ದಿಯದು.. ನಿಗಿನಿಗಿ ಕೆಂಡದ ಪಕ್ಕ ಮಲಗಿದ್ರೂ, ಎಷ್ಟು ಬೆಚ್ಗದ ಅಂತ ಬೆವರು ಒರೆಸಿಕೊಂಡು ಮಲಗ್ತಿದ್ದಂಥ ನಿದ್ದಿ. ಯಾಕ ನಿಗಿನಿಗಿ ಕೆಂಡ ನೆನಪಾಯ್ತು ಅಂದ್ರ, ಬ್ಯಾಸಗಿ ಸೂಟಿಯೊಳಗ ರಾಯಚೂರಿನಂಥ ಊರಾನ ಮಾಳಗಿ ಮ್ಯಾಲೆ ಮಲ್ಕೊಂಡ್ರ, ಮುಂಜೇನೆ ಏಳಕ್ಕ ಸೂರ್ಯ ಕೆನ್ನಿಗೆ ಮುತ್ತಿಡ್ತಿದ್ದ. ಹಂಗಂತ ಕೌದಿ ಮುಸುಕೆಳದು ಕೊಂಡ್ರ ಅದನ್ನೂ ಹಂಚು ಕಾಯಿಸಿದ್ಹಂಗ ಕಾಯಿಸ್ತಿದ್ದ. ಅವಾಗ ಅನಿಸ್ತಿತ್ತು, ನಿಗಿನಿಗಿ ಕೆಂಡದ ಅಡಿಗೆ ಮಲಗಿಕೊಂಡಂಗ.

ನಮ್ಮ ಕಣ್ಣಾಲಿ ಚಂದ್ರ ಓಲಾಡುವಂಥ ನಿದ್ದಿಗೆ ‘ರ್‍ಯಾಪಿಡ್‌ ಐ ಮೂಮೆಂಟ್’ ‘ರ್‍ಯಾಮ್’‌ ಅಂತ ಕರೀತಾರಂತ. ಇಂಥ ಕ್ಷಣದೊಳಗ ಎಂಥ ಚಂದನೆಯ ಕನಸುಗಳವು. ಒಮ್ಮೆ ಮಲಗಿದ್ರ ಆಯ್ತು. ಸೂರ್ಯ ಬಂದು, ನಾನು ಬಂದೇನಿ, ನನ್ನ ಕೆಲಸ ಶುರು ಮಾಡೇನಿ, ನೀವು ಎದ್ದೇಳ್ರಿ, ಅಂತ ಚರ್ಮ ಚುರುಗುಡುಹಂಗ ಮಾಡಿದ್ರೂ, ಬೆನ್ನು ತೋರಿಸಿ, ಮಲಗ್ತಿದ್ವಿ. 

ಆಹಹಾ.. ಎಂಥ ಕಾಲವದು. ಒಮ್ಮೆ ಎಬ್ಬಿಸಿ ಹೋದಾಗ ಬಲಮಗ್ಗುಲಕ ತಿರುಗಿ ಮಲಗೂದು.. ಮತ್ತ ನಿದ್ದಿ... ಇನ್ನೊಮ್ಮೆ ಎಬ್ಬಿಸಿದಾಗ ಎಡ ಮಗ್ಗುಲ್ಕ... ಮೂರನೆಯ ಸಲೆ ಎಬ್ಬಿಸಿದಾಗ, ಅಂಗಾತ ಮಲಗಿ, ಒಂಚೂರು ಭೂಮಿ ಸಾವಕಾಶ ತಿರುಗಾಕ ಏನು ಕಷ್ಟ ಅಂತ, ಭೌತ, ಖಗೋಳ, ಖಭೌತ ಎಲ್ಲವನ್ನೂ ವಿಚಾರ ಮಾಡ್ತಿದ್ವಿ. ಇನ್ನ ನಮ್ಮವ್ವ ಬಂದು ಎಬ್ಬಸ್ತಾಳಂತ ಅಕಿನ ಧ್ವನಿ ಮುಗಿಲು ಮುಟ್ಟುವಷ್ಟು ತಾರಕಕ್ಕ ಏರಿದಾಗ ಖಾತ್ರಿ ಆಗ್ತಿತ್ತು, ಏಳಾಕಬೇಕಂತ. 

ಹಂಗ ಎದ್ದು ಕುಂತ್ರೂ, ಅಲ್ಲೇ ಜೋಲಾಡ್ತಿದ್ವಿ. ಓಲಾಡ್ತಿದ್ವಿ. ಕಣ್ತೆರಿಯಾಕ ಹಟ ಹಿಡೀತಿದ್ವು. ಕಣ್ಣಾಗಿನ ಸಿಳ್ಳುನೂ ‘ಫೆವಿಕಾಲ್‌ ಕಾ ಜೋಡ್‌ ಹೈ.. ಟೂಟೇಗಾ ನಹಿ’ ಸಾಲು ನೆನಪಿಸುವಹಂಗ ಅಂಟ್ಕೊಂಡಿರ್ತಿದ್ವು. ಮತ್ತ ಎವಿ ಮ್ಯಾಲೆ ಸಣ್ಣ ಮುತ್ತು ಪೋಣಿಸಿದ್ಹಂಗ ಬ್ಯಾರೆ ಕಾಣ್ತಿತ್ತು. 

ಆದ್ರೂ ಜಗತ್ತು ನಿಷ್ಕರುಣಿ. ಬೆಳಗಿನ ನಿದ್ದಿಯಿಂದ ಎಬ್ಬಿಸುವ ಮುಂದಂತೂ ಮಹಾ ಅಂತಃಕರುಣೆಯ ಸಾಗರ ಅಮ್ಮನ ಪ್ರೀತಿ ಸೈತ ಅದೆಷ್ಟು ಉಪ್ಪುಪ್ಪು ಅಂತ ನೆನಪಾಗುವ ಹೊತ್ತದು. 

ಹಿಂಗ ದಿನ ಕಳೀತಿದ್ವು. ಹತ್ನೆತ್ತೆ ಬಂದಾಗಲೂ ನಿದ್ದಿಗೆಡಬೇಕು ಅನಿಸಿರಲಿಲ್ಲ. ಪದವಿಗೆ ಬಂದಾಗಲೂ.. ಪದವಿ ಕೊನಿಗೆ ಬಂದಾಗ, ಸ್ವಲ್ಪ ನಿದ್ದಿಗೆಡ್ತಿದ್ವಿ. ಓದಾಕ... ಅಂದ್ರ ಪಠ್ಯ ಅಲ್ಲ... ಭೈರಪ್ಪನವರಿಗೆ, ತೇಜಸ್ವಿಯವರಿಗೆ.. ಓದಾಕ! ಆಮೇಲೆನೂ ಅಷ್ಟೆ. ಅಷ್ಟಷ್ಟೆ ನಿದ್ದಿ ಕಡಿಮಿ ಆಗಕೊಂತ ಹೋಯ್ತು.

ಹಿಂಗ ಕಾಲ ಬದಲಾದಂಗ ಕೈಯ್ಯಾಗಿನ ಪುಸ್ತಕ ಮೇಜಿನ ಮ್ಯಾಲೆ, ಕಪಾಟಿನಾಗ, ದಿಂಬಿನ ಕೆಳಗ, ಮಂಚದ ಪಕ್ಕಕ್ಕಿರುವ ಕಿಟಕಿ ಸರಳನಾಗ ತಾವು ಕಂಡುಕೊಂಡ್ವು. ಕೈಯ್ಯಾಗ ಹೊಳಿಹೊಳಿಯೂ ಫೋನ್‌ ಬಂತು. ಆಮ್ಯಾಲಿನ ಸುದ್ದಿ ಕೇಳಬ್ಯಾಡ್ರಿ.. ನಿದ್ದಿ ಅನ್ನೂದು ಬಂಗಾರ ಆಯ್ತು.

ಕಣ್ಣೆವಿ ಕೆನ್ನಿಗಾನೂದಿಲ್ಲ ಅಂತ ಹಟ ಹಿಡದ್ವು. ತಾರೆಗಳಷ್ಟೇ ಮಿಂಚೂದ್ಯಾಕ? ಅಂತ ಕಂಗಳು ಸೆಡ್ಡು ಹೊಡದು ಮಿಣಮಿಣ ಅಂತ ಹೊಳಿಯಾಕ್ಹತ್ತಿದ್ವು. ಮೊದಲು ಪ್ರೀತಿಸಿದವರ ತೋಳು ಆನಿಕೊಂಡು ಮಲಗಿದ್ರ ನಿದ್ದೆಗೊಮ್ಮೆ ನಿತ್ಯ ಮರಣ ಅನ್ನೂವಷ್ಟು ಹೊಸತನ ಎದ್ದಾಗ ಕಾಣ್ತಿತ್ತು. ಸಂಗಾತಿಯ ಎದೆಗೆ ಕಿವಿಯಾನಿ ಮಲಗಿದಾಗ ಆ ಲಬ್‌ಡಬ್‌ ಸದ್ದು ಜೋಗುಳ ಹಾಡಿದ್ಹಂಗ ಕೂಸಾಗಿ ಮಲಗ್ತಿದ್ವಿ. 

ಹಿಂಗ ಇದ್ದೋರಿಗೆ ಇದ್ದಕ್ಕಿದ್ದಂಗ ನಿದ್ದಿ ಅನ್ನೂದು ನಮ್ಮ ಶತ್ರು ಆದಂಗ ಆಯ್ತು. ನೀ ಇದ್ದಲ್ಲಿ ನಾ ಬರೂದಿಲ್ಲ ಅಂತ ಹಟ ಹಿಡಿಯೂಹಂಗ. ರಾತ್ರಿ ಇಡೀ ನಿಚ್ಚಳ. ಅದೆಷ್ಟು ನಿಚ್ಚಳ ಅಂದ್ರ, ಬೆಳಗ್ಗೆ ಮತ್ತ ನಕ್ಕೊಂತ ಕೆಲಸ ಮಾಡೂದು. ಮೊದಲು ನಿದ್ದಿ ಬರವಲ್ದು ಅಂತ, ಸಿನಿಮಾ ನೋಡಾಕ ಶುರು ಮಾಡಿದ್ವಿ. ಬ್ಯಾಸರ ಆಯ್ತು, ವೆಬಿಸೋಡುಗಳನ್ನು ಬೀಂಜ್‌ ವಾಚ್‌ ಮಾಡೂದು ಕಲತ್ವಿ. ಇದ್ಯಾಕೊ ನಿದ್ದಿ ಬರೂಮಟಾ ನೋಡೂನು ಅನ್ಕೊಂಡೋರು, ಮುಗದ ಮ್ಯಾಲೆ ಮಲಗೂದು ರೂಢಿ ಆಗಲಿಕ್ಹತ್ತಿತು. ಅದೂ ಮಲಗೂದಲ್ಲ, ಮುಗಿಸೀನೆ ಏಳೂದು.. 

ಆಮೇಲೆ ನಿದ್ದಿ ಬರದೇ ಇರೂದು ಸಿನಿಮಾ ಮತ್ತು ವೆಬಿಸೋಡುಗಳ ರೋಚಕತನದಿಂದ ಅಂತ ಅವುಗಳ ಮ್ಯಾಲೆ ನಿಮಿತ್ತ ಹೊರಿಸಿ, ಇನ್ನ ಮ್ಯಾಲೆ ನೋಡೂದು ಬ್ಯಾಡಂತ ನಿರ್ಧರಿಸಿ, ದಿಂಬಿನ ಅಡಿಗೆ ಬೆಚ್ಗ ಮಲಗಿದ್ದ ಪುಸ್ತಕ ತಗದು ದೂಳು ಕೊಡವಿದ್ವಿ. ಓದ್ತೇವಿ, ಓದ್ತೇವಿ.. ಕಣ್ಣಿಗೆ ದಣಿವನ್ನೂದಿಲ್ಲ. ಏನ ತಿಪ್ಪರಲಾಗ ಹಾಕಿದ್ರೂ ಒಂದೆರಡು ತಾಸು ಮೀರಿ ನಿದ್ದಿ ಸುಳಿಯೂದಿಲ್ಲ. ಛೆ.. ಈ ದಿನಮಾನದಾಗ ಅಗ್ದಿ ಚೊಲೊ ಬರೀತಾರ್ರಿ.. ಓದಾಕ ಕುಂತ್ರ ನಿದ್ದಿನ ಬರೂದಿಲ್ಲ ಅಂತ ಬರದೋರ ಪ್ರತಿಭೆಗೂ ಸಲಾಮ್‌ ಹೊಡದು, ಪಾಪ.. ನಮ್ಮದೇನೂ ತಪ್ಪಿಲ್ಲಂತ ಮುಂದಿನ ಕೆಲಸಕ್ಕ ತಯಾರಾಗೂದೆ.

ಇಷ್ಟು ಮಾಡೂದ್ರೊಳಗ, ನಿದ್ದಿಗೆಟ್ಟ ದೇಹ, ರಾತ್ರಿಯನ್ನು ಮೋಹಿಸುವುದನ್ನು ಕಲಿಸಿರ್ತದ. ಮಧುಮೇಹವನ್ನು ಸೆಳೆದು ತಂದಿರ್ತದ. ಹಿಂಗಿದ್ದಾಗ ಈ ನಿದ್ದಿಗೆಡೂದಕ್ಕ, ಇನ್‌ಸೊಮ್ನಿಯಾ ಅಂತ ಸುಮ್ನ ಮಲಗಲಾರದ ಬ್ಯಾನಿ ಹೆಸರಿದು. ಎಷ್ಟು ಚಂದದ ಅಂತ ಗದ್ದಕ್ಕ ಬೆರಳಿಟ್ಟು ಕೇಳಿರ್ತೇವಿ.

 ನಮ್ಮ ನಿದ್ರಾದೇವತೆಯನ್ನು ದೂರದೂಡಿದ ಈ ಚೆಲುವೆಯನ್ನು ಬಿಟ್ಟು, ಮತ್ತ ನಿದ್ದಿ ತೆಕ್ಕಿಯೊಳಗ ಕಣ್ಮುಚ್ಚೂನು ಅಂದ್ರ ಸಂಗೀತದ ಮೊರೆ ಹೋಗ್ತೀವಿ. ಈ ಸಂಗೀತಕ್ಕ ಒಂದು ಜಾದೂ ಅದ. ಹಗುರಕ ಹಾಡ್ಕೊಂತ, ನಮ್ಮ ಭಾವಜಗತ್ತನ್ನು ಪ್ರವೇಶಿಸಿ, ಅವಾಗವಾಗ ಕೊರಳುಬ್ಬಿ ಬಂದು, ತಲೆದಿಂಬು ನೆನಸಿ, ಕಿಡಕಿಯೊಳಗಿಂದ ಆಕಾಶ ನೋಡ್ಕೊಂತ ಸಮಾಧಾನ ಮಾಡ್ಕೊಳ್ಳೂ ಮುಂದ, ರಾಧಿಕಾ ಚೋಪ್ರಾ ತನ್ನ ಮಧುರ ಧ್ವನಿಯೊಳಗ  ಮಖ್ದುಮ್‌ ಮೊಹಿಯುದ್ದಿನ್‌ ಖುದ್ರಿಯ ಹಾಡು.. ‘ಆ‍‍‍ಪ್‌ ಕಿ ಯಾದ್‌ ಆತಿ ರಹಿ... ರಾತ್‌ ಭರ್‌ ಯಾದ್ ಆತಿ ರಹಿ...’ (ನಿಮ್ಮ ನೆನಪು ಕಾಡುತ್ತಲೇ ಇತ್ತು.. ಪೂರ್ತಿ ಇರುಳು... ನೆನಪಿನ ಚಂದ್ರ ಮಿಂಚುತ್ತಲೇ ಇದ್ದ ಇರುಳು ಪೂರ್ತಿ) ಅಂತೆಲ್ಲ ಹಾಡು ಅನುರಣಿಸುವಾಗ, ಹೃದಯದ ನೀರ್ಗಲ್ಲಿನಂತಿದ್ದ ನೆನಪುಗಳು ಕರಗಲಾರಂಭಿಸುತ್ತವೆ.

ಕರಕರಗಿ ಕೊರಗುವಂತಾಗುತ್ತದೆ. ಮತ್ತದೇ ನಿದ್ದಿ ಇಲ್ಲದ ಗುಹೆಯೊಳಗ ಇಳಿಇಳಿದು ಹೋಗ್ತೀವಿ. ಇಂಥ ಸಂದರ್ಭದೊಳಗ ಏನು ಮಾಡ್ಬೇಕು ಅಂತ ತಲಿಮ್ಯಾಲೆ ಕೈ ಹೊತ್ಗೊಂಡು.. ಅಲ್ಲಲ್ಲ.. ಹಣಿಮ್ಯಾಲೆ ಮುಂಗೈ ಇಟ್ಕೊಂಡು, ಫ್ಯಾನಿನ ಮ್ಯಾಲೆ ದೂಳೆಷ್ಟು ಕುಂತದ, ಮನಿ ಸೂರಿನ ಮ್ಯಾಲೆ ಕುಂತ ಹಲ್ಲಿ ಅದೆಷ್ಟು ಸಲ ಕಣ್ಣು ಪಿಳುಕಿಸಿತು ಅಂತೆಲ್ಲ ಎಣಸೂದು ಮಾಡಬಾರದು.

ಮಲಗುವ ಮುನ್ನ ಒಂಚೂರು ಧ್ಯಾನ ಮಾಡಬೇಕು. ಗಸಗಸೆ ಹಾಕಿದ್ದ ಹಾಲು ಕುಡದ್ರೂ ನಿದ್ದಿ ಚೂರು ಚೂರೆ ಸನಿಹಕ್ಕ ಬರ್ತದ. ನಿದ್ದಿ ಬರಲಿ, ಬಿಡಲಿ, ಒಂದು ಹೊತ್ತು ನಿಗದಿ ಮಾಡ್ಕೊಂಡು, ಮನಿ ಕತ್ಲಾ ಮಾಡ್ಕೊಂಡು ಹಾಸಿಗಿಗೆ ಬೆನ್ನಂಟಿಸಿಬಿಡ್ಬೇಕು. ಈ ಇನ್ಸೊಮ್ನಿಯಾ ಇದ್ದೋರು ದಪ್ಪನೆಯ ಕೌದಿಯಂಥ ಹೊದಕಿಗೆ ಕಾಲೊದ್ದು, ಅದನ್ನೆ ಹೊದ್ದು ಮಲಗಬೇಕಂತ್ರಿ. ಅವಾಗ ಹಿತ ಅನಸ್ತದಂತ. ಇನ್ನ ನೆನಪು ಕೆರಳಿಸಿ, ಮನಸು ಅರಳಿಸಿ, ಜೀವ ನರಳಿಸುವ ಹಾಡು ಕೇಳುವ ಬದಲು ಕೊಳಲು, ಪಿಯಾನೊ, ಜಲತರಂಗ್‌ನಂಥ ಹಿತವನಿಸುವ ವಾದ್ಯ ಸಂಗೀತ ಕೇಳಬೇಕು. ಮನಸು ಶಾಂತ ಇಟ್ಕೊಬೇಕು. ಹಲ್ಲಿ ನಮ್ಮನ್ನ ನೋಡಿದ್ರೂ ಚಿಂತಿಲ್ಲ. ಫ್ಯಾನಿನ ರೆಕ್ಕಿಗೆ ಅಂಟಿಕೊಂಡಿರುವ ದೂಳಿನಾಗ ಯಾರ ಸಹಿಯಂಥ ರೂಪ ಕಂಡ್ರೂ ಚಿಂತಿಲ್ಲ. ಕಣ್ಮುಚ್ಕೊಂಡು ನೂರರಿಂದ ಒಂದರತನ ಎಣಸಬೇಕು.

ಈ ಇನ್‌ಸೋಮ್ನಿಯಾ ಸಾವಕಾಶಗೆ ಔಟ್‌ ಆಗ್ತದ. ಅಗತ್ಯ ಇದ್ರ ಆಪ್ತಸಮಾಲೋಚಕರ ಸಹಾಯ ತೊಗೊರಿ. ಮನೋಚಿಕಿತ್ಸಕರಿಂದ ಚಿಕಿತ್ಸೆ ಪಡಿಯಾಕೂ ಹಿಂಜರೀಬೇಕಾಗಿಲ್ಲ. ಯಾಕಂದ್ರ ನಮ್ಮ ದೇಹ ದೇಗುಲ. ದೇಗುಲವನ್ನೂ ರಾತ್ರಿ ಹೊತ್ನಾಗ ಮುಚ್ತೇವಿ. ಅಷ್ಟರ ಮಟ್ಟಿಗೆ ವಿಶ್ರಾಂತಿ ಬೇಕೇಬೇಕು. ದೇಹದ ದುಡಿಮೆ, ದಂಡನೆಯಾಗಬಾರದು ಅಂದ್ರ ದೊಡ್ಡೋರಿಗೆ ಆರರಿಂದ ಎಂಟು ಗಂಟೆ, ಸಣ್ಣೋರಿಗೆ 9 ಗಂಟೆಯ ನಿದ್ದಿ ಅಂತೂ ಬೇಕೆಬೇಕು..

ಅವಾಗ ನಮ್ಮ ಬೇಂದ್ರೆ ಅಜ್ಜಾರ ಕವಿತಾ ‘ನಿದ್ದೆಗೊಮ್ಮೆ ನಿತ್ಯ ಮರಣ, ಎದ್ದ ಸಲ ನವೀನ ಜನನ’ ಅನ್ನುವ ಹಾಡು ನಾವೂ ಹಾಡ್ಕೊಂತ ಏಳಬಹುದು. ಯಾಕಂದ್ರ ಮಲಗಿರ್ತೇವಲ್ಲ!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು