ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೃತ ಹೊನಲು: ಆ ಸೇನಾನಿಯನ್ನು ನೆನೆದು.. ವೆಂಕಟ್ ರಾವ್ ಕೋಲಾಚಲಂ ಬಗ್ಗೆ ಲೇಖನ

Last Updated 14 ಆಗಸ್ಟ್ 2022, 0:30 IST
ಅಕ್ಷರ ಗಾತ್ರ

ಹೌದು, ನಮ್ಮ ಸ್ವತಂತ್ರ ಭಾರತಕ್ಕೆ ಈಗ ಭರ್ತಿ 75 ವರ್ಷ! ಅಮೃತ ಮಹೋತ್ಸವದ ತಿಟ್ಹತ್ತಿ ತಿರುಗಿ ನೋಡಿದರೆ ಸಂಭ್ರಮ, ವಿಷಾದ ಒಟ್ಟೊಟ್ಟಿಗೇ ಆಗುತ್ತವೆ. ಏಳೂವರೆ ದಶಕಗಳ ಪಯಣದ ಹಿನ್ನೋಟದ ಜತೆಗೆ ದೇಶದ ಭವಿಷ್ಯದ ಚಿಂತನೆಗಳು ಪುರವಣಿಯ ಈ ವಾರದ ವಿಶೇಷ...

ಅಂದು 1885ರ ಡಿಸೆಂಬರ್‌ 28.ಪ್ರಸ್ತುತ ವಾಣಿಜ್ಯ ನಗರಿ ಎಂದು ಕರೆಯಲ್ಪಡುವ ಮುಂಬೈ ನಗರದಲ್ಲಿ ಭಾರತದ ವಿವಿಧ ಪ್ರದೇಶವನ್ನು ಪ್ರತಿನಿಧಿಸುವ 72 ಜನರು ಒಂದೆಡೆ ಸೇರಿದ್ದರು. ಅನೌಪಚಾರಿಕವಾಗಿ ನಡೆದಿದ್ದ ಆ ಸಭೆ ನಂತರದಲ್ಲಿ ‘ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಮೊದಲ ಅಧಿವೇಶನ’ವಾಗಿ ಗುರುತಿಸಿಕೊಂಡಿತು. ಈ72ಜನರಪೈಕಿ ‘ಕ್ಯಾನರೀಸ್‌ ಪ್ರದೇಶ’ವನ್ನು(ಇಂದು ಕರ್ನಾಟಕ) ಪ್ರತಿನಿಧಿಸಿ ಕನ್ನಡದಲ್ಲಿ ಸರಾಗವಾಗಿ ಸಂವಹನ ನಡೆಸುವ ಸಾಮರ್ಥ್ಯವಿದ್ದ ವೆಂಕಟ ರಾವ್‌ ಕೋಲಾಚಲಂ ಸಹ ಒಬ್ಬರಾಗಿದ್ದರು.

ಈ ಅಧಿವೇಶನದಲ್ಲಿ ಬೆಳಗಾವಿಯ ಬಾವುಸಾಹೇಬ್‌ ಭಾಟೆ ಹಾಗೂ ಬಳ್ಳಾರಿಯ ಸಭಾಪತಿ ಮೊದಲಿಯಾರ್‌ ಅವರು ಭಾಗವಹಿಸಿದ್ದರೂ ಕ್ರಮವಾಗಿ ಒಬ್ಬರು ಮರಾಠಿ ಭಾಷಿಕರಾದರೆ ಮತ್ತೊಬ್ಬರು ತಮಿಳು ಭಾಷಿಕರಾಗಿದ್ದರು.

ವೆಂಕಟ ರಾವ್‌ ಕೋಲಾಚಲಂ ಬಳ್ಳಾರಿಯ ಹೆಸರಾಂತ ಕುಟುಂಬಕ್ಕೆ ಸೇರಿದವರು. ಅವರ ತಂದೆ ವಿಜಯನಗರ ಸಾಮ್ರಾಜ್ಯದ ಆನೆಗುಂದಿ ಸಂಸ್ಥಾನದ ದಿವಾನರಾಗಿ ಕಾರ್ಯನಿರ್ವಹಿಸಿದವರಾಗಿದ್ದರು. ವೃತ್ತಿಯಲ್ಲಿ ವಕೀಲರಾಗಿದ್ದ ವೆಂಕಟ ರಾವ್‌, ಹೆಚ್ಚಾಗಿ ಬಳ್ಳಾರಿ ಮತ್ತು ಮದ್ರಾಸ್‌ ನ್ಯಾಯಾಲಯಗಳಲ್ಲಿ ವಕೀಲಿ ವೃತ್ತಿ ನಡೆಸುತ್ತಿದ್ದರು. ಅವರ ಕಾರ್ಯವೈಖರಿಯಿಂದಾಗಿ ಅವರಿಗೆ ‘ನ್ಯಾಯವಾದಿ ಕೇಸರಿ’ ಎಂಬ ಬಿರುದು ಬಂದಿತ್ತು.ಭಾರತದಲ್ಲಿ ನೂರು ವರ್ಷದ ಆಳ್ವಿಕೆಯ ಬಳಿಕ ಬ್ರಿಟಿಷ್‌ ಸರ್ಕಾರವು ವೈಸ್‌ರಾಯ್‌ ಲಾರ್ಡ್‌ ರಿಪನ್‌ ಆಡಳಿತದಡಿ, ಸ್ಥಳೀಯ ಆಡಳಿತವನ್ನು (local self-governance) ಎರಡನೇ ಹಂತದ ನಗರಗಳಿಗೆ ವಿಸ್ತರಿಸಲು ನಿರ್ಧರಿಸಿತ್ತು. ಆದರೆ ಈ ಪ್ರಸ್ತಾವದಿಂದ ಆಗ ಬಳ್ಳಾರಿಯನ್ನು ಹೊರಗಿಡಲಾಗಿತ್ತು. ಈ ಅನ್ಯಾಯದಿಂದ ನೊಂದಿದ್ದ ವೆಂಕಟ ರಾವ್‌, ನೇರವಾಗಿ ರಿಪನ್‌ ಬಳಿಗೆ ನಿಯೋಗವೊಂದನ್ನು ಕರೆದೊಯ್ದು ಬಳ್ಳಾರಿಯನ್ನು ಪಾಲಿಕೆಯಾಗಿ ಘೋಷಿಸುವ ಪ್ರಸ್ತಾವವನ್ನು ಮುಂದಿಟ್ಟಿದ್ದರು. ಇದರ ಪರಿಣಾಮವಾಗಿ 1884ರಲ್ಲಿ ಬಳ್ಳಾರಿ ಪುರಸಭೆಯನ್ನು ಘೋಷಿಸಲಾಯಿತು. ನಂತರದ ದಿನಗಳಲ್ಲಿ ಮೊದಲ ಕೌನ್ಸಿಲ್‌ ಚುನಾವಣೆಯೂ ನಡೆಯಿತು. ಬ್ರಿಟಿಷ್‌ ಆಡಳಿತ ಮತ್ತು ಬ್ರಿಟಿಷ್‌ ಅಧಿಕಾರಿಗಳನ್ನು ಪ್ರಶ್ನಿಸಲು ಕೌನ್ಸಿಲ್‌ ಸಭೆಗಳೇ ಸೂಕ್ತ ವೇದಿಕೆ ಎಂದು ಅರಿತಿದ್ದ ವೆಂಕಟ ರಾವ್‌, ಕೌನ್ಸಿಲ್‌ ಸಭೆಗೆ ಆಯ್ಕೆಯಾಗಲು ಜನರನ್ನು ಚುನಾವಣೆಗೆ ನಿಲ್ಲುವಂತೆ ಪ್ರೇರೇಪಿಸುತ್ತಿದ್ದರು. ಈ ನಡೆ ಅವರಿಗೆ ಹೆಚ್ಚು ಜನಪ್ರಿಯತೆಯನ್ನು ತಂದುಕೊಟ್ಟಿತ್ತು.

ವೆಂಕಟ ರಾವ್‌ ಅವರನ್ನು ಬಳ್ಳಾರಿ ಇಂದಿಗೂ ನೆನಪಿಸಿಕೊಳ್ಳುತ್ತಿದೆ ಎಂದರೆ ಅದಕ್ಕೆ ಮತ್ತೊಂದು ಘಟನೆಯ ಹಿನ್ನೆಲೆಯಿದೆ. ಸುಮಾರು 120 ವರ್ಷಗಳ ಹಿಂದೆ, ದಕ್ಷಿಣ ಭಾರತದಲ್ಲಿ ಪ್ಲೇಗ್‌ ಮಹಾಮಾರಿ ಅಟ್ಟಹಾಸ ಮೆರೆದಿತ್ತು. ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯಗಳ ನಡುವೆಯೂ ಇಂದು ಲಕ್ಷಾಂತರ ಜನರನ್ನು ಬಲಿಪಡೆದಿರುವ ಕೋವಿಡ್‌ ಅಂದಿನ ಪ್ಲೇಗ್‌ ರಣಕೇಕೆಯನ್ನು ನೆನಪಿಸಿತ್ತು. ಸೂಕ್ತ ವೈದ್ಯಕೀಯ ಸೌಲಭ್ಯವಿಲ್ಲದ ಕಾಲಘಟ್ಟದಲ್ಲಿ, ಅಂದರೆ 1902ರಲ್ಲಿ ಬಳ್ಳಾರಿಗೂ ಪ್ಲೇಗ್‌ ಕಾಲಿಟ್ಟಿತ್ತು. ಈ ಸಂದರ್ಭದಲ್ಲಿ ಬಳ್ಳಾರಿ ಪುರಸಭೆಯ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದ ವೆಂಕಟ ರಾವ್‌, ಸ್ವಂತ ಆರೋಗ್ಯವನ್ನೂ ಪಣಕ್ಕಿಟ್ಟು, ತಮ್ಮದೇ ಖರ್ಚಿನಲ್ಲಿ ಪ್ಲೇಗ್‌ ಮಹಾಮಾರಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿದ್ದರು. ಈ ಸೇವೆಯನ್ನು ಗುರುತಿಸಿ ಬ್ರಿಟಿಷ್‌ ಸರ್ಕಾರ, ಇಂದಿನ ಅತ್ಯುನ್ನತ ನಾಗರಿಕ ಪ್ರಶಸ್ತಿಗೆ ಸಮನಾದ Right Honorable ಬಿರುದನ್ನು ನೀಡಿತ್ತು.

ಮದ್ರಾಸ್‌ ಸಂಸ್ಥಾನ ಎಂಬ ಹೆಸರಿನಲ್ಲಿ ದಕ್ಷಿಣ ಭಾರತದ ಬಹುತೇಕ ಪ್ರದೇಶವು ಬ್ರಿಟಿಷ್‌ ಆಡಳಿತದಡಿಯಿತ್ತು. ಮದ್ರಾಸ್‌ ಸಂಸ್ಥಾನದ ಮೇಲ್ಮನೆಯಲ್ಲಿ 8ರಿಂದ 12 ಸೀಟುಗಳು ಭಾರತೀಯರಿಗೆ ಮೀಸಲಿದ್ದವು. ಆದರೆ, ಅವರು ಚರ್ಚೆಗಳಲ್ಲಿ ಭಾಗವಹಿಸಬಹುದಿತ್ತೇ ಹೊರತು ತೀರ್ಮಾನ ಕೈಗೊಳ್ಳುವ ಪ್ರಕ್ರಿಯೆಗಳಿಂದ ದೂರ ಇರಬೇಕಿತ್ತು. 1903ರಲ್ಲಿ ಪೂರ್ವ ಜಿಲ್ಲೆಗಳಿಗೆ ಮೇಲ್ಮನೆಯಲ್ಲಿ ಒಂದು ಸ್ಥಾನವನ್ನು ನೀಡಲಾಯಿತು. ಅಂದು ಪೂರ್ವ ಜಿಲ್ಲೆಯ ವ್ಯಾಪ್ತಿಯಡಿ ಇಂದಿನ ಕರ್ನಾಟಕದ ಕೆಲ ಪ್ರದೇಶಗಳಲ್ಲದೆ, ಸಂಪೂರ್ಣ ಆಂಧ್ರಪ್ರದೇಶವೂ ಇತ್ತು. ಈ ಸ್ಥಾನಕ್ಕೆ ಕಾಕಿನಾಡದ ಕೃತಿವೇಂಟಿ ಪೆರ್ರಾಜು ಅವರ ವಿರುದ್ಧ ಸ್ಪರ್ಧಿಸಿ ಗೆದ್ದ ವೆಂಕಟ ರಾವ್‌ 1904ರವರೆಗೆ ಆ ಸ್ಥಾನದಲ್ಲಿ ಮುಂದುವರಿದಿದ್ದರು.

ಭಾರತದಲ್ಲಿರುವ ಬ್ರಿಟಿಷ್‌ ಅಧಿಕಾರಿಗಳು, ಲಂಡನ್‌ನಲ್ಲಿ ಕುಳಿತು ಆದೇಶ ನೀಡುತ್ತಿರುವವರ ಕೈಗೊಂಬೆಗಳಷ್ಟೇ ಎಂದು ಅರಿತ ವೆಂಕಟ ರಾವ್‌, ತಮ್ಮ ಗಮನವನ್ನು ಲಂಡನ್‌ನತ್ತ ಹೊರಳಿಸಿದ್ದರು. ಅಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಬ್ರಿಟಿಷ್‌ ಸಮಿತಿ ಲಂಡನ್‌ನಲ್ಲಿ ಕಚೇರಿ ಹೊಂದಿತ್ತು.ವೆಂಕಟ ರಾವ್‌ ಈ ಸಮಿತಿಯ ಪೋಷಕರಾದರು. ಭಾರತದಲ್ಲಿ ಆಡಳಿತದಲ್ಲಿರುವ ಬ್ರಿಟಿಷ್‌ ಸರ್ಕಾರದ ಅಧಿಕಾರಿಗಳ ದೌರ್ಜನ್ಯದ ಕುರಿತು ಬ್ರಿಟಿಷ್‌ ಪ್ರಜೆಗಳಲ್ಲಿ ಜಾಗೃತಿ ಮೂಡಿಸುವುದು ಈ ಸಮಿತಿಯ ಮೂಲಕಾರ್ಯವಾಗಿತ್ತು. ಈ ಉದ್ದೇಶದಿಂದ ಹಲವು ಬಾರಿ ಲಂಡನ್‌ಗೆ ವೆಂಕಟ ರಾವ್‌ ತೆರಳಿದ್ದರು.

ಬ್ರಿಟಿಷ್‌ ಸಂಸತ್‌ಗೆ ದಕ್ಷಿಣ ಲ್ಯಾಂಬೆತ್‌ ಕ್ಷೇತ್ರದಿಂದ ನಡೆಯುವ ಚುನಾವಣೆಗೆ ದಾದಾಭಾಯಿ ನವರೋಜಿ ಅವರನ್ನು ಬೆಂಬಲಿಸಿ, 1905ರಲ್ಲಿ ಕಾಶಿಯಲ್ಲಿ ನಡೆದಕಾಂಗ್ರೆಸ್‌ನ21ನೇಅಧಿವೇಶನದಲ್ಲಿನಿರ್ಣಯದ ಪ್ರಸ್ತಾಪವನ್ನು ವೆಂಕಟ ರಾವ್‌ ಇರಿಸಿದ್ದರು. 1907ರಲ್ಲಿ ಕಾಂಗ್ರೆಸ್‌ನಲ್ಲಿ ಕಚ್ಚಾಟ, ಒಳಜಗಳ ಆರಂಭವಾದಾಗ ವಿಶ್ವರಾಷ್ಟ್ರೀಯತೆ ಮನೋಭಾವವಿದ್ದ ವೆಂಕಟ ರಾವ್‌ ಕಾಂಗ್ರೆಸ್‌ನಿಂದ ಕ್ರಮೇಣವಾಗಿ ಅಂತರ ಕಾಯ್ದುಕೊಂಡರು. ಜೈಲಿನೊಳಗಡೆ ಬಾಲಗಂಗಾಧರ ತಿಲಕರನ್ನು ಬ್ರಿಟಿಷರು ಕ್ರೂರವಾಗಿ ನಡೆಸಿಕೊಂಡ ರೀತಿಯನ್ನು ಖಂಡಿಸಿ, 1916ರಲ್ಲಿ Right Honorable ಬಿರುದನ್ನು ವೆಂಕಟ ರಾವ್‌ ಹಿಂದಿರುಗಿಸಿದರು.

‘ನಿರ್ಭೀತ’–ಈ ಪದದಿಂದದಲೇ ವೆಂಕಟ ರಾವ್‌ ಗುರುತಿಸಿಕೊಂಡಿದ್ದರು. ಇದಕ್ಕೊಂದು ಉದಾಹರಣೆ ಇಲ್ಲಿದೆ. ‘ಕ್ಷುಲ್ಲಕ ಪ್ರಕರಣಗಳಿಗೆ ನಿಮ್ಮ ಸಮಯವನ್ನೇಕೆ ವ್ಯರ್ಥ ಮಾಡುವಿರಿ’ಎಂದೊಮ್ಮೆ ನ್ಯಾಯಾಧೀಶರಾಗಿದ್ದ ಡಬ್ಲ್ಯು.ಡಬ್ಲ್ಯು. ಫಿಲಿಪ್ಸ್‌, ವೆಂಕಟ ರಾವ್‌ ಅವರನ್ನು ಕೇಳಿದ್ದರಂತೆ. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಅವರು, ‘ನಿಮಗೆ ದೊರೆಯುವುದು ತಿಂಗಳ ಲೆಕ್ಕದ ವೇತನ. ನನಗೆ ಪ್ರತೀ ನಿಮಿಷದ ಲೆಕ್ಕದಲ್ಲಿ ಸಂಭಾವನೆ ದೊರೆಯುತ್ತದೆ. ಹೀಗಾಗಿ ನಿಮ್ಮ ಸಮಯಕ್ಕಿಂತ ನನ್ನ ಸಮಯವೇ ಅತ್ಯಮೂಲ್ಯ’ ಎಂದಿದ್ದರಂತೆ.

ಸಮಾಜ ಸುಧಾರಕರಾಗಿದ್ದ ವೆಂಕಟ ರಾವ್‌ ಅಧ್ಯಕ್ಷತೆಯಲ್ಲೇ 1904ರಲ್ಲಿ ಮದ್ರಾಸ್‌ನಲ್ಲಿ ಭಾರತೀಯ ಸಾಮಾಜಿಕ ಸಮ್ಮೇಳನ ಆಯೋಜಿಸಲ್ಪಟ್ಟಿತ್ತು. ಮಾಧ್ಯಮಗಳಲ್ಲಿ ಪ್ರಕಟಗೊಂಡ ವರದಿಗಳ ಅನ್ವಯ ಈ ಸಮ್ಮೇಳನದಲ್ಲಿ ಭಾಗಹಿಸಿದ್ದ ಜನರ ಸಂಖ್ಯೆ ಕಾಂಗ್ರೆಸ್‌ ಅಧಿವೇಶನಕ್ಕಿಂತಲೂ ಅಧಿಕವಾಗಿತ್ತು. ಸಮುದ್ರಯಾನ ಮಾಡಿದ ಕಾರಣಕ್ಕಾಗಿ ಧರ್ಮದಿಂದಲೇ ಹೊರಹಾಕುವ ಸಂಪ್ರದಾಯವಾದಿ ಸಮುದಾಯಗಳ ಮನೋಧರ್ಮವನ್ನು ತೀವ್ರವಾಗಿ ಪ್ರಶ್ನಿಸಿದ ಈ ಸಮಾವೇಶ, ಆ ಪರಿಪಾಟವನ್ನು ಕೊನೆಗಾಣಿಸುವ ಆಂದೋಲನಕ್ಕೂ ನಾಂದಿ ಹಾಡಿತು. ವೆಂಕಟ್‌ ರಾವ್‌ ಅವರಂತೂ ಆ ಪರಿಪಾಟವನ್ನು ತೀವ್ರವಾಗಿ ನಿಕಷಕ್ಕೆ ಒಡ್ಡಿದ್ದರು.

ವೆಂಕಟ ರಾವ್‌ ಅವರ ಜೊತೆಗೆ ರಾವ್‌ ಬಹದ್ದೂರ್‌ ಕನೇಕಲ್‌ ನೆಟ್ಟಕಲ್ಲಪ್ಪ, ಸಭಾಪತಿ ಮೊದಲಿಯಾರ್‌ ಅವರೂ ಬಳ್ಳಾರಿ ಪುರಸಭೆಯ ಮೊದಲ ಕೌನ್ಸಿಲ್‌ಗೆ ಆಯ್ಕೆಯಾದವರಲ್ಲಿ ಸೇರಿದ್ದರು.ವೆಂಕಟ ರಾವ್‌ ‘ಸುಮನೋರಮ ಸಭಾ’ ಹೆಸರಿನ ನಾಟಕ ಕಂಪನಿಯ ಮಾಲೀಕರಾಗಿದ್ದರು. ಇದರ ವ್ಯವಹಾರವನ್ನು ಅವರ ತಮ್ಮ ನಿರ್ವಹಿಸುತ್ತಿದ್ದರು. 1909ರಲ್ಲಿ ಬೆಂಗಳೂರಿನಲ್ಲಿ ಈ ಕಂಪನಿ ನಾಟಕ ಪ್ರದರ್ಶನ ಏರ್ಪಡಿಸಿದ್ದ ಸಂದರ್ಭದಲ್ಲಿ ಕನೇಕಲ್‌ ನೆಟ್ಟಕಲ್ಲಪ್ಪ ಇದರ ಸಂಯೋಜಕರಾಗಿದ್ದರು. ಹೀಗೆ ವೆಂಕಟ ರಾವ್‌, ರಾಜಕೀಯವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ತಮ್ಮ ನಾಡಿನ ಜನರ ಏಳ್ಗೆಗಾಗಿ ಅವಿರತ ಶ್ರಮ ಹಾಕಿದ್ದರು. ಅವರನ್ನು ನೆನೆಯುವ ಮೂಲಕ ದೇಶದ ಸ್ವಾತಂತ್ರ್ಯಕ್ಕೆ ಹೋರಾಡಿದ ಪ್ರತಿಯೊಬ್ಬ ಸೇನಾನಿಯನ್ನೂ ಸ್ವಾತಂತ್ರ್ಯದ ಈ ಅಮೃತಗಳಿಗೆಯ ಸಂಭ್ರಮದಲ್ಲಿ ನಾವು ಗೌರವದಿಂದ ನೆನೆಯೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT