ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಷ್ಯಾ-ಉಕ್ರೇನ್ ಯುದ್ಧದಿಂದ ಭಾರತಕ್ಕೆ ಭಾರೀ ನಷ್ಟ 

Last Updated 2 ಮಾರ್ಚ್ 2022, 13:05 IST
ಅಕ್ಷರ ಗಾತ್ರ

ಉಕ್ರೇನ್ ಮತ್ತು ರಷ್ಯಾ ನಡುವಿನ ಸಂಘರ್ಷವು ಅನೇಕ ರಾಷ್ಟ್ರಗಳಲ್ಲಿ ದಿಗಿಲು ಮೂಡಿಸಿದೆ. ಯುದ್ಧವನ್ನು ಘೋಷಿಸಿ ಆಕ್ರಮಣಕಾರಿ ರಾಷ್ಟ್ರವಾಗಿರುವ ರಷ್ಯಾ ಶೀಘ್ರದಲ್ಲೇ ಸಾಕಷ್ಟು ನಿರ್ಬಂಧಗಳನ್ನು ಎದುರಿಸಬಹುದು. ಇಂತಹ ಪರಿಸ್ಥಿತಿಯಲ್ಲಿ, ಎಸ್- 400 ವಾಯು ರಕ್ಷಣಾ ವ್ಯವಸ್ಥೆಗಳು, ತಲ್ವಾರ್ (Talwar)ಕ್ಲಾಸ್ ಫ್ರಿಗೇಟ್ ಮತ್ತು ರೈಫಲ್‌ಗಳು ಸೇರಿದಂತೆ ಇತರ ಶಸ್ತ್ರಾಸ್ತ್ರಗಳನ್ನು ಪಡೆಯುವುದಕ್ಕಾಗಿ ರಷ್ಯಾದ ಜತೆಗೆ ಒಪ್ಪಂದಕ್ಕೆ ಸಹಿ ಹಾಕಿರುವ ಭಾರತಕ್ಕೆ ಹೆಚ್ಚು ನಷ್ಟವಾಗುವುದೆಂದು ನಿರೀಕ್ಷಿಸಲಾಗಿದೆ.

ಭಾರತಕ್ಕೆ ಇದು ತಂತಿ ಮೇಲಿನ ನಡಿಗೆ. ಯುದ್ಧದ ವಿಷಯದಲ್ಲಿ ಸದ್ಯಕ್ಕೆ ಅದು ಮೂಕ ಪ್ರೇಕ್ಷಕನಾಗಿ ಉಳಿಯಬಹುದು. ಆದರೆ, ಒಂದು ಕಡೆಯಿಂದ ಚೀನಾ ಭಾರತಕ್ಕೆ ಸವಾಲಾಗಿ ನಿಂತಿದೆ. ಮತ್ತೊಂದು ಕಡೆ ಪಾಕಿಸ್ತಾನವು ತರಬೇತಿ ಪಡೆದಿರುವ ನೂರಾರು ಉಗ್ರಗಾಮಿಗಳನ್ನು ಕಾಶ್ಮೀರದೊಳಗೆ ನುಸುಳುವಂತೆ ಮಾಡಲು ಅವಕಾಶವನ್ನು ಹುಡುಕುತ್ತಿದೆ.

ಹಿಂದೂ ಮಹಾಸಾಗರದ ಮೂಲಕ ನುಸುಳುವಿಕೆಯನ್ನು ತಡೆಯುವ ಮತ್ತು ಅನಪೇಕ್ಷಿತ ಚಟುವಟಿಕೆಗಳ ಮೇಲೆ, ವಿಶೇಷವಾಗಿ ಚಿನಾದ ಪಿಎಲ್‌ಎ (PLA) ನೌಕಾಪಡೆಯ ಮೇಲೆ ನಿಗಾ ಇಡುವ ಕಠಿಣ ಕಾರ್ಯವನ್ನು ಹೊಂದಿರುವ ಭಾರತೀಯ ನೌಕಾಪಡೆಯು, ಇದಕ್ಕಾಗಿ ನಾಲ್ಕು ಸುಧಾರಿತ ತಲ್ವಾರ್ ಕ್ಲಾಸ್ ಫ್ರಿಗೇಟ್‌ಗಳನ್ನು ತಲುಪಿಸಲು 950 ಮಿಲಿಯನ್ ಡಾಲರ್‌ಗಳನ್ನು 2018ರಲ್ಲೇ ಪಾವತಿಸಿದೆ.

ಉಕ್ರೇನಿನ ವಿದ್ಯುತ್ ಸ್ಥಾವರದೊಂದಿಗೆ ಸಂಯೋಜನೆಯಲ್ಲಿ ಕಾರ್ಯನಿರ್ವಹಿಸುವಂತೆ ಈ ಯುದ್ಧನೌಕೆಗಳನ್ನು ವಿನ್ಯಾಸಗೊಳಿಸಲಾಗಿದೆ. ಯಾವುದೇ ಪರ್ಯಾಯ ಆಯ್ಕೆ ಲಭ್ಯವಿಲ್ಲ.

ಕ್ರೈಮಿಯಾ ಬಿಕ್ಕಟ್ಟಿನ ಹೊರತಾಗಿಯೂ ರಷ್ಯಾದಲ್ಲಿ ತಯಾರಾಗುತ್ತಿರುವ ಮೊದಲ ಎರಡು ಹಡಗುಗಳಿಗೆ ಎಂಜಿನ್‌ಗಳನ್ನು ಪೂರೈಸುವಂತೆ ಉಕ್ರೇನ್‌ಗೆ ಮನವರಿಕೆ ಮಾಡಿಕೊಡಲು ಭಾರತವು 2019ರಲ್ಲಿ ತೀವ್ರವಾದ ರಾಜತಾಂತ್ರಿಕ ಕ್ರಮಗಳನ್ನು ಕೈಗೊಳ್ಳಬೇಕಾಯಿತು. ಈ ಝೋರ್ಯಾ ಮಾಶ್‌ಪ್ರೋಕ್ಟ್ ಆರ್‌ಪಿಸಿ (Zorya Mashproekt RPC) ಗ್ಯಾಸ್ ಟರ್ಬೈನ್ ಎಂಜಿನ್‌ಗಳನ್ನು ಕಲಿನಿನ್‌ಗ್ರಾಡ್ ಶಿಪ್‌ಯಾರ್ಡ್‌ಗೆ ತಲುಪಿಸಲಾಗಿದೆ ಮತ್ತು ಯುದ್ಧನೌಕೆಗಳಲ್ಲಿ ಸಂಯೋಜಿಸಲಾಗುತ್ತಿದೆ. ದೀರ್ಘಕಾಲದ ಈ ಬಿಕ್ಕಟ್ಟು ಭವಿಷ್ಯದ ವಿತರಣೆಗಳ ಮೇಲೆ ಪರಿಣಾಮ ಬೀರಬಹುದು.

ಇದರ ಜೊತೆಗೆ, 2021ರ ಕೊನೆಯಲ್ಲಿ ರಷ್ಯಾದಿಂದ ಪ್ರಾರಂಭವಾದ S-400, ವಿಮಾನ ವಿರೋಧಿ ಕ್ಷಿಪಣಿಯ ವಿತರಣೆಯು ಇನ್ನೂ ಪೂರ್ಣಗೊಂಡಿಲ್ಲ. ಭಾರತ-ಚೀನಾ ಗಡಿಗಳಲ್ಲಿ ಪಿಎಲ್‌ಎ ಮತ್ತು ಭಾರತೀಯ ಸೇನೆಗಳು ಪರಸ್ಪರ ಮುಖಾಮುಖಿಯಾಗಿ ತಮ್ಮ ಶಸ್ತ್ರಾಸ್ತ್ರಗಳನ್ನು ಪ್ರದರ್ಶಿಸುವ ಸಂದರ್ಭದಲ್ಲಿ ಇವುಗಳನ್ನು ಅಲ್ಲಿಗೆ ತಲುಪಿಸಲು ಭಾರತವು ಯೋಜಿಸಿತ್ತು.

ಆಗ್ನೇಯ ಏಷ್ಯಾದ ಹಲವು ದೇಶಗಳ ಗಮನ ಸೆಳೆಯುತ್ತಿರುವ ಬ್ರಹ್ಮೋಸ್ ಕ್ರೂಸ್ ಕ್ಷಿಪಣಿಯು ಚೀನಾದ ನಿದ್ದೆಗೆಡಿಸಿದೆ. ಜಂಟಿ ಉದ್ಯಮದಲ್ಲಿ ಅಭಿವೃದ್ಧಿಪಡಿಸಲಾದ ಈ ಕ್ಷಿಪಣಿಯನ್ನು ಪ್ರದರ್ಶಿಸಲಾಗಿದೆ ಮತ್ತು ಅನೇಕ ರಕ್ಷಣಾ ಪಂಡಿತರು ಅದನ್ನು ಪ್ರಶಂಸಿಸಿದ್ದಾರೆ. ವಿಯೆಟ್ನಾಂ, ಫಿಲಿಪೈನ್ಸ್ ಮತ್ತಿತರ ದೇಶಗಳು ಈ ಕುರಿತು ತೀವ್ರ ಆಸಕ್ತಿಯನ್ನು ತೋರಿಸಿವೆ. ಭಾರತ ಅದನ್ನು ಫಿಲಿಪೈನ್ಸ್‌ಗೆ ಮಾರಾಟ ಮಾಡುವ ಹಂತದಲ್ಲಿತ್ತು.

ಮೇಕ್ ಇನ್ ಇಂಡಿಯಾ ಉಪಕ್ರಮದ ಅಡಿಯಲ್ಲಿ ಭಾರತದಲ್ಲಿ ರಷ್ಯಾ ಸಹಯೋಗದಲ್ಲಿ AK-203 ರೈಫಲ್‌ಗಳನ್ನು ಉತ್ಪಾದಿಸುವ ಯೋಜನೆಯನ್ನು ಭಾರತವು ಹೊಂದಿತ್ತು. ಅದೀಗ ಕ್ಲಿಷ್ಟಕರ ಪರಿಸ್ಥಿತಿಯನ್ನು ಎದುರಿಸುವ ಆತಂಕವಿದೆ.

ಆದಾಗ್ಯೂ, ಈ ಪ್ರಕರಣಗಳಲ್ಲಿ ಪರ್ಯಾಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.

ಗೋವಾ ಶಿಪ್‌ಯಾರ್ಡ್‌ನಲ್ಲಿ ರಷ್ಯಾದ ನೆರವಿನೊಂದಿಗೆ ಎರಡು ಹೆಚ್ಚುವರಿ ಹಡಗುಗಳನ್ನು ತಯಾರಿಸಬೇಕಾಗಿದೆ ಮತ್ತು ಅವುಗಳಿಗೆ ವಿದ್ಯುತ್ ಸ್ಥಾವರಗಳನ್ನು ಇನ್ನಷ್ಟೇ ತಲುಪಿಸಬೇಕಾಗಿದೆ. ಉಕ್ರೇನ್‌ನಿಂದ ಅವುಗಳು ಈಗ ಪೂರೈಕೆಯಾಗುವ ಬಗ್ಗೆ ಅನಿಶ್ಚಿತತೆ ಇರುವುದು ಚಿಂತೆ ಮೂಡಿಸಿದೆ, ಇದು ಯೋಜನೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು.

ಭಾರತವು S-400 ವಾಯು ರಕ್ಷಣಾ ವ್ಯವಸ್ಥೆಯ ಮೊದಲ ದಳವನ್ನು ರಷ್ಯಾದಿಂದ ಸ್ವೀಕರಿಸಿದೆ. ಆದರೆ, ಇನ್ನೂ ನಾಲ್ಕು ವಿತರಣೆಯು ಬಾಕಿ ಉಳಿದಿದೆ. ವಿತರಣೆ ವಿಳಂಬವಾಗುವ ಬಗ್ಗೆ ರಷ್ಯಾದ ಕಡೆಯಿಂದ ಇನ್ನೂ ಯಾವುದೇ ಸೂಚನೆಗಳಿಲ್ಲ. ಆದರೆ ಉಕ್ರೇನ್‌ನಲ್ಲಿ ದೀರ್ಘಕಾಲದ ಬಿಕ್ಕಟ್ಟು ಚಿಂತೆಯ ವಿಷಯವಾಗಿದೆ. ಇದರ ಜೊತೆಗೆ, ಅದರ ಸಿಎಎಟಿಎಸ್ಎ (CAATSA- ಕೌಂಟರಿಂಗ್ ಅಮೆರಿಕಾಸ್ ಅಡ್ವರ್ಸರೀಸ್ ಥ್ರೂ ಸ್ಯಾಂಕ್ಷನ್ಸ್ ಆಕ್ಟ್), ಅಮೆರಿಕದ ವಿರೋಧಿಗಳಿಗೆ ನಿರ್ಬಂಧಗಳ ಕಾಯ್ದೆ ಮೂಲಕ ತಿರುಗೇಟು ನೀಡುವ ಅಡಳಿತ ಕ್ರಮದ ಅಡಿಯಲ್ಲಿ ಎಸ್-400 ಖರೀದಿಗಾಗಿ ಭಾರತದ ಮೇಲೆ ಅಮೆರಿಕದ ನಿರ್ಬಂಧಗಳು ಈಗ ಒಂದು ವಿಭಿನ್ನ ಸಾಧ್ಯತೆಯಾಗಿದೆ. ಈ ಹಿಂದೆ ಟರ್ಕಿ ಮತ್ತು ಚೀನಾದ ಮೇಲೆ ವಿಧಿಸಲಾಗಿದ್ದಂತಹ ನಿರ್ಬಂಧಗಳಿಂದ ಭಾರತ ಇಲ್ಲಿಯವರೆಗೆ ಅದು ಹೇಗೋ ಪಾರಾಗಿದೆ.

ಯಾವುದೇ ಯೋಜನೆಗಳು ರದ್ದಾಗಲು ನಿರ್ಬಂಧಗಳು ಕಾರಣವಾಗುವುದಿಲ್ಲ. ಭಾರತವ ರಷ್ಯಾದ ಜತೆಗಿನ ಪಾಲುದಾರಿಕೆಯಲ್ಲಿ ಮುಂದುವರಿಯಲು ನಿರ್ಧರಿಸಿದೆ. ಆದರೆ ಅವು ಪಾವತಿಗಳಲ್ಲಿ ವಿಳಂಬವನ್ನು ಉಂಟುಮಾಡುತ್ತವೆ ಮತ್ತು ಪ್ರಕ್ರಿಯೆಯ ತೊಂದರೆಗಳನ್ನು ಪರಿಹರಿಸಲು ಸಮಯ ತೆಗೆದುಕೊಳ್ಳುತ್ತದೆ. ಮಿಲಿಟರಿ ವ್ಯವಸ್ಥೆಗಳಿಗೆ ಪಾವತಿಯ ಪ್ರಕ್ರಿಯೆಯನ್ನು ವಿಕಸನಗೊಳಿಸುವಲ್ಲಿ ಭಾರತ ಮತ್ತು ರಷ್ಯಾ ಯಶಸ್ವಿಯಾಗಿವೆ. ಅದಕ್ಕಾಗಿ ಎಲ್ಲ ಅಮೆರಿಕ ಪ್ರಭಾವಿತ ಬ್ಯಾಂಕಿಂಗ್ ನಿಯಂತ್ರಣಗಳಿಂದ ಬಾಧಿತವಾಗದ ಪರ್ಯಾಯ ಮಾರ್ಗವನ್ನು ಹುಡುಕಿಕೊಂಡಿವೆ. ಈ ಪಾವತಿಗಳ ಗಮನಾರ್ಹ ಭಾಗವನ್ನು ರೂಪಾಯಿ-ರೂಬಲ್ ಮಾರ್ಗದ ಮೂಲಕ ಮಾಡಲಾಗುತ್ತಿದೆ.

ಕ್ಷಿಪಣಿಗಳು ಮತ್ತು ದಾಳಿ ರೈಫಲ್‌ಗಳನ್ನು ತಯಾರಿಸಲು ರಷ್ಯಾದೊಂದಿಗಿನ ಎರಡು ಜಂಟಿ ಉದ್ಯಮಗಳು ಪರಿಶೀಲನೆಯ ಅಡಿಯಲ್ಲಿ ಬರಬಹುದಾದ ಇತರ ಭಾರತೀಯ ಯೋಜನೆಗಳಾಗಿವೆ.

ಮತ್ತೊಂದು ಜಂಟಿ ಉದ್ಯಮ -AK 203 ದಾಳಿ ರೈಫಲ್ಸ್ ಭಾರತದಲ್ಲಿ ಇನ್ನೂ ಸಂಪೂರ್ಣವಾಗಿ ಟೇಕ್ ಆಫ್ ಆಗಿಲ್ಲ. ಉತ್ಪಾದನೆಯು ಇನ್ನೂ ಶೈಶವಾವಸ್ಥೆಯಲ್ಲಿದೆ.

- ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT