ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ ಉತ್ಪಾದನಾ ವಲಯಕ್ಕೆ ಭಾರತದ ಪೈಪೋಟಿ.. ಜಗತ್ತು ಹೇಗೆ ಗ್ರಹಿಸುತ್ತಿದೆ?

Last Updated 16 ಆಗಸ್ಟ್ 2022, 13:19 IST
ಅಕ್ಷರ ಗಾತ್ರ

ಭಾರತ ಜಗತ್ತಿನ ಮೂರನೇ ಅತಿದೊಡ್ಡ ಶಕ್ತಿ ಸಂಪನ್ಮೂಲಗಳ ಬಳಕೆದಾರ ರಾಷ್ಟ್ರ. ಪ್ರಸ್ತುತ ಜಿ20 ರಾಷ್ಟ್ರಗಳ ಪೈಕಿ ಅತಿ ಹೆಚ್ಚು ಜಿಡಿಪಿ ಹೊಂದಿರುವ ರಾಷ್ಟ್ರವಾಗಿ ಭಾರತ ಮೂಡಿ ಬಂದಿದೆ. 2014ನೇ ಇಸವಿಯ ಬಳಿಕ ಈ ಆರ್ಥಿಕ ಚೈತನ್ಯದ ಜೊತೆಗೆ ಭಾರತದ ಕೈಗಾರಿಕಾ ನೀತಿಯಲ್ಲಿ ಆಮೂಲಾಗ್ರ ಬದಲಾವಣೆಗಳು ಬಂದಿವೆ. ಮೊದಲಿಗೆ ಮೇಕ್ ಇನ್ ಇಂಡಿಯಾ ಯೋಜನೆ ಹಾಗೂ ಬಳಿಕ ಆತ್ಮನಿರ್ಭರ ಭಾರತ ಪರಿಕಲ್ಪನೆಗಳು ಈ ಬದಲಾವಣೆಗೆ ಅಪಾರ ಕೊಡುಗೆ ನೀಡಿವೆ. ಈ ಹಾದಿಯಲ್ಲಿ ಭಾರತ ಎದುರಿಸಬೇಕಾದ ಸವಾಲುಗಳು ಹಲವು ವಿಧದಲ್ಲಿವೆ. ಭಾರತ ಉತ್ಪಾದನಾ ವಲಯದಲ್ಲಿ ಈಗ ಚೀನಾದೊಡನೆ ಸ್ಪರ್ಧಿಸಬೇಕೆಂದು ಬಯಸುತ್ತಿದೆ. ಇಂತಹ ಸಂದರ್ಭದಲ್ಲಿ ಜಗತ್ತು ಈ ಎರಡೂ ಉತ್ಪಾದನಾ ವಲಯಗಳ ರಾಷ್ಟ್ರಗಳನ್ನು ಹೇಗೆ ಗ್ರಹಿಸುತ್ತಿದೆ, ಹೇಗೆ ಹೋಲಿಸುತ್ತಿದೆ ಎಂಬುದನ್ನು ತಿಳಿಯುವುದೂ ಅತ್ಯಂತ ಮಹತ್ವದ್ದಾಗಿದೆ.

ಬೆಲೆಯಲ್ಲಿನ ಸ್ಪರ್ಧಾತ್ಮಕತೆ

ಉತ್ಪಾದನಾ ಕ್ಷೇತ್ರದ ವಿಚಾರಕ್ಕೆ ಬಂದಾಗ, ಅಲ್ಲಿ ಗುಣಮಟ್ಟ, ವಿಶ್ವಾಸಾರ್ಹತೆಮತ್ತು ಸಮಯಪ್ರಜ್ಞೆಗಳು ಅತ್ಯಂತ ಮಹತ್ವದ್ದಾಗಿರುತ್ತವೆ. ಅದರ ಜೊತೆಗೇ, ಭಾರತ ಮತ್ತು ಚೀನಾಗಳನ್ನು ಉತ್ಪಾದನಾ ತಾಣವಾಗಿ ಗುರುತಿಸುವ ಸಂದರ್ಭದಲ್ಲಿ ಎರಡೂ ರಾಷ್ಟ್ರಗಳಲ್ಲಿನ ಉತ್ಪಾದನಾ ವೆಚ್ಚವೂ ಗಣನೆಗೆ ಬರುತ್ತದೆ. ಚೀನಾ ಹಲವು ಕಾರಣಗಳಿಗೆ ಸ್ಪರ್ಧಾತ್ಮಕ ಉತ್ಪಾದನಾ ದರದಲ್ಲಿ ಭಾರತದ ಮೇಲೆ ಮೇಲುಗೈ ಸಾಧಿಸಿದೆ. ಭಾರತದಲ್ಲಿ ಉತ್ಪಾದನಾ ವೆಚ್ಚ ಯಾಕೆ ಇಷ್ಟು ಹೆಚ್ಚಾಗಿದೆ ಎನ್ನಲು ಒಂದು ಪ್ರಮುಖ ಕಾರಣ ಎಂದರೆ ಶಕ್ತಿ ಸಂಪನ್ಮೂಲಗಳ ಬೆಲೆ ಭಾರತದಲ್ಲಿ ಸಾಕಷ್ಟು ಹೆಚ್ಚಾಗಿದೆ ಮತ್ತು ಅದರ ಲಭ್ಯತೆ ಅತ್ಯಂತ ಕನಿಷ್ಠ ಮಟ್ಟದಲ್ಲಿದೆ. ಭಾರತದಲ್ಲಿ ಉತ್ಪಾದನಾ ಘಟಕ ಒಂದನ್ನು ನಡೆಸುವುದು ಅತ್ಯಂತ ವೆಚ್ಚದಾಯಕ. ಮಾತ್ರವಲ್ಲದೆ, ಇಲ್ಲಿ ಲಭ್ಯವಿರುವ ಕೆಲಸದ ಅವಧಿಯೂ ಚೀನಾಕ್ಕಿಂತ ಸಾಕಷ್ಟು ಕಡಿಮೆಯಾಗಿದೆ. ಭಾರತದಲ್ಲಿನ ಕಾರ್ಮಿಕ ವೇತನ (ವೇತನ ಹೆಚ್ಚಾದರೂ ಸಾಮಾನ್ಯವಾಗಿ ಉತ್ಪಾದಕತೆ ಕಡಿಮೆಯಾಗಿರುತ್ತದೆ) ಹಾಗೂ ನಿರ್ಬಂಧಗಳನ್ನೂ ಗಮನಿಸಿದಾಗ ಉತ್ಪಾದನಾ ವೆಚ್ಚ ಚೀನಾದಲ್ಲಿ ಕಡಿಮೆ ಎನಿಸುತ್ತದೆ. ಆದರೆ ಈಗ ಸಾಕಷ್ಟು ಭಾರತೀಯ ಜನ ಪ್ರತಿನಿಧಿಗಳು ಹೆಚ್ಚಿನ ಉತ್ಪಾದನಾ ಘಟಕಗಳನ್ನು ಭಾರತಕ್ಕೆ ಬರುವಂತೆ ಮಾಡಲು ಪ್ರಯತ್ನ ನಡೆಸುತ್ತಿರುವುದರಿಂದ, ಈ ಚಿತ್ರಣ ಮುಂದಿನ ದಿನಗಳಲ್ಲಿ ಬದಲಾಗುವ ಸಾಧ್ಯತೆಗಳಿವೆ.

ಜಾಗತಿಕ ಲಾಜಿಸ್ಟಿಕ್ ವ್ಯವಸ್ಥೆ

ಲಾಜಿಸ್ಟಿಕ್ಸ್ ಮತ್ತು ರವಾನಿಸುವಿಕೆಯ ವಿಚಾರಕ್ಕೆ ಬಂದಾಗ, ಚೀನಾ ಮತ್ತು ಭಾರತಗಳ ಮಧ್ಯೆ ಎರಡು ಧ್ರುವಗಳ ಅಂತರವಿದೆ. ಭಾರತ ಪ್ರಾಥಮಿಕವಾಗಿ ಕಚ್ಚಾ ವಸ್ತುಗಳ ಸಾಗಾಟಕ್ಕಾಗಲಿ ಅಥವಾ ಸಿದ್ಧ ವಸ್ತುಗಳ ಪೂರೈಕೆಗಾಲಿ ತನ್ನ ವಿಶಾಲವಾದ ರಸ್ತೆ ಜಾಲದ ಮೇಲೆ ಆಧಾರಿತವಾಗಿದೆ. ಆದರೆ ಈ ರಸ್ತೆಗಳು ಅತ್ಯಂತ ಸಮರ್ಪಕವಾಗಿಲ್ಲದೆ, ಬೃಹತ್ ವಾಹನಗಳ ಓಡಾಟಕ್ಕೆ ಸಾಕಷ್ಟು ಅಗಲವಾಗಿರದ ಕಾರಣ, ಸರಬರಾಜು ಪ್ರಕ್ರಿಯೆಯಲ್ಲಿ ತಡವಾಗುವ ಅಪಾಯಗಳಿರುತ್ತವೆ. ಉತ್ಪಾದನಾ ಘಟಕಗಳಿರುವ ಪ್ರದೇಶದ ಆಧಾರದ ಮೇಲೆ, ಕಾರ್ಖಾನೆಯ ಸ್ಥಳದಿಂದ ಬಂದರಿಗೆ ಉತ್ಪನ್ನಗಳ ರವಾನೆಗೆ ತಗಲುವ ಸಮಯ ಚೀನಾಕ್ಕೆ ಹೋಲಿಸಿದರೆ ಭಾರತದಲ್ಲಿ ಹೆಚ್ಚಾಗಿರುತ್ತದೆ. ಇನ್ನೊಂದೆಡೆ ಭಾರತ ಸರ್ಕಾರ ದೇಶಾದ್ಯಂತ ಇರುವ ರೈಲ್ವೆ ಜಾಲ, ಹೆದ್ದಾರಿಗಳು, ಬಂದರುಗಳು, ಹಾಗೂ ವಿಮಾನ ನಿಲ್ದಾಣಗಳ ಅಭಿವೃದ್ಧಿಗಾಗಿ ಹೆಚ್ಚಿನ ಹಣ ವೆಚ್ಚ ಮಾಡುತ್ತಿದೆ. ಇದು ಭಾರತದ ಉತ್ಪಾದನಾ ವಲಯ ಮತ್ತು ಆರ್ಥಿಕತೆಗೆ ಹೆಚ್ಚಿನ ಉತ್ತೇಜನ ನೀಡಲಿದ್ದು, ಇದು ಸಾಗಾಣಿಕಾ ವೆಚ್ಚ ಮತ್ತು ಸಾಗಾಣಿಕಾ ಸಮಯದಲ್ಲಿ ಬಹುತೇಕ 20% ಉಳಿತಾಯ ಮಾಡಲಿದೆ ಎನ್ನಲಾಗುತ್ತದೆ. ಚೀನಾದಲ್ಲಿ ಹಲವು ಲಾಜಿಸ್ಟಿಕ್ ಕೇಂದ್ರಗಳಿದ್ದು, ರಸ್ತೆಗಳು, ಮೋಟಾರ್ ವೇಗಳು, ರೈಲ್ವೇ ವ್ಯವಸ್ಥೆ, ನದಿಗಳು ಹಾಗೂ ಆಧುನಿಕ ವಿಮಾನ ನಿಲ್ದಾಣಗಳಿವೆ. ಲಾಜಿಸ್ಟಿಕ್ಸ್ ಪರ್ಫಾಮೆನ್ಸ್ ಇಂಡೆಕ್ಸ್ ಎಂಬ ರಾಂಕಿಂಗ್ ವ್ಯವಸ್ಥೆಯು ಇತರ ವಿಚಾರಗಳ ಜೊತೆಗೆ ಸರಬರಾಜು ವ್ಯವಸ್ಥೆಯನ್ನು ಪ್ರಮುಖವಾಗಿ ಗಮನಕ್ಕೆ ತೆಗೆದುಕೊಳ್ಳುತ್ತದೆ. 2016ರಲ್ಲಿ ಈ ಪಟ್ಟಿಯಲ್ಲಿ ಚೀನಾ 27ನೇ ಸ್ಥಾನದಲ್ಲಿದ್ದರೆ, ಭಾರತ 35ನೇ ಸ್ಥಾನದಲ್ಲಿತ್ತು.

ಆರ್ಥಿಕ ಅಭಿವೃದ್ಧಿ

ಭಾರತ ಸರ್ಕಾರ ಇತ್ತೀಚೆಗೆ ತಂದ ನಿಯಂತ್ರಕ ಬದಲಾವಣೆಗಳ ಪರಿಣಾಮವಾಗಿ ದೇಶದ ತೆರಿಗೆ ವ್ಯವಸ್ಥೆ ಸಾಕಷ್ಟು ಸರಳವಾಗಿದೆ. ಇತ್ತೀಚೆಗೆ ಜಾರಿಗೆ ಬಂದ ಸರಕು ಹಾಗೂ ಸೇವಾ ತೆರಿಗೆ (ಜಿಎಸ್‌ಟಿ) ಭಾರತದ ಸಂಕೀರ್ಣ ತೆರಿಗೆ ವ್ಯವಸ್ಥೆಯನ್ನು ಸರಳೀಕರಿಸುತ್ತದೆ. ಇದು ಒಟ್ಟಾರೆ ತೆರಿಗೆ ಪದ್ಧತಿಯನ್ನು ದಕ್ಷತೆಯನ್ನು ಹೆಚ್ಚಿಸುವ, ಪಾರದರ್ಶಕವಾಗಿಸುವ ಗುರಿಯನ್ನು ಹೊಂದಿದೆ. ಆದರೆ ಇನ್ನೊಂದೆಡೆ ಭಾರತದ ಆರ್ಥಿಕ ಅಭಿವೃದ್ಧಿಯ ಜೊತೆ ಹೋಲಿಸಿದರೆ, ಚೀನಾದ ಆರ್ಥಿಕ ಅಭಿವೃದ್ಧಿಯ ದರ ನಿಧಾನವಾದಂತೆ ತೋರುತ್ತದೆ. ಪ್ರಾಥಮಿಕ ವರದಿಗಳ ಪ್ರಕಾರ, ಚೀನಾದ ಆರ್ಥಿಕ ಅಭಿವೃದ್ಧಿಯ ದರ ನಿರೀಕ್ಷಿತ 1.3%ದ ಬದಲಿಗೆ 1.7% ಆಗಿದ್ದರೂ, ಕಳೆದ ಕೆಲ ತಿಂಗಳುಗಳಲ್ಲಿ ಸಣ್ಣ ಪ್ರಮಾಣದ ಅಭಿವೃದ್ಧಿಯಷ್ಟೇ ಕಂಡುಬಂದಿದೆ. ಒಂದು ವೇಳೆ ಇದೇ ಪ್ರವೃತ್ತಿ ಮುಂದುವರಿದರೆ ಮಾತ್ರ, ಚೀನಾ 2010ರ ಬಳಿಕ ಇದೇ ಮೊದಲ ಬಾರಿಗೆ ವಾರ್ಷಿಕ ಅಭಿವೃದ್ಧಿಯ ಗುರಿಯನ್ನು ಸಾಧಿಸಬಹುದಾಗಿದೆ.

ಉತ್ಪಾದನೆಯ ಪ್ರಮಾಣ ಮತ್ತು ಉತ್ಪಾದನಾ ಹೊಂದಿಕೊಳ್ಳುವಿಕೆ

ಇತ್ತೀಚಿನ ಆರ್ಥಿಕ ಹಿನ್ನಡೆಯ ಹೊರತಾಗಿಯೂ, ಚೀನಾ ಭಾರತೀಯ ಉತ್ಪಾದನಾ ವಲಯಕ್ಕಿಂತ ಕೊಂಚ ಮೇಲುಗೈ ಹೊಂದಿದ್ದು, ಉತ್ಪಾದನಾ ಗುರಿಯನ್ನು ಸಾಧಿಸುವ ಸಾಮರ್ಥ್ಯವನ್ನು ಗಳಿಸಿಕೊಂಡಿದೆ. ಚೀನಾದಲ್ಲಿ ಒಂದೇ ಸಿದ್ಧ ವಸ್ತುವನ್ನು ಹಲವು ಉತ್ಪಾದನಾ ಘಟಕಗಳಲ್ಲಿ ಉತ್ಪಾದಿಸಲಾಗುತ್ತದೆ. ಆ ಮೂಲಕ ಅವುಗಳಲ್ಲಿ ಸಾಮಾನ್ಯ ವೆಚ್ಚವನ್ನು ಹಂಚಿಕೊಳ್ಳುವಂತೆ ಮಾಡಿ, ಒಟ್ಟಾರೆ ಉತ್ಪಾದನಾ ವೆಚ್ಚ ಕಡಿಮೆಯಾಗುವಂತೆ ಮಾಡುತ್ತದೆ.

ಉತ್ಪಾದಕರು, ಪೂರೈಕೆದಾರರು ಹಾಗೂ ಹೂಡಿಕೆದಾರರು ಒಗ್ಗಟ್ಟಾಗುವಂತೆ ಮಾಡಲು ಹಾಗೂ ಅವರಿಗೆ ಹೆಚ್ಚಿನ ಉತ್ತೇಜನ ನೀಡಲು ಚೀನಾ ವಿಶೇಷ ವಿತ್ತ ವಲಯಗಳು ಹಾಗೂ ಕೈಗಾರಿಕಾ ಸಮೂಹಗಳನ್ನು ಸ್ಥಾಪಿಸಿದೆ. ಆದ್ದರಿಂದ ಯಾವುದಾದರೂ ವಿದೇಶೀ ಸಂಸ್ಥೆಗೆ ಒಂದು ಉತ್ಪನ್ನದ ತಯಾರಿಗಾಗಿ ವಿಶೇಷ ವಸ್ತುಗಳ ಅಗತ್ಯ ಎದುರಾದರೆ ಅವರಿಗೆ ಆ ಉತ್ಪನ್ನದ ಕುರಿತು ಜ್ಞಾನ ಹೊಂದಿರುವ ಚೀನೀ ಉತ್ಪಾದಕ ಮಾತ್ರವಲ್ಲದೆ, ಅಗತ್ಯ ವಸ್ತುಗಳು ಸ್ಥಳೀಯವಾಗಿಯೂ ಸಿಗುವ ಸಾಧ್ಯತೆಗಳಿವೆ. ಇದು ಉತ್ಪಾದಕರಿಗೆ ಕಡಿಮೆ ಗುಣಮಟ್ಟ, ಹಿತಕರವಲ್ಲದ ವಸ್ತುಗಳು ಹಾಗೂ ಇತರ ಸಮಸ್ಯೆಗಳನ್ನು ಎದುರಿಸಲು ಸಹಾಯ ಮಾಡುತ್ತದೆ.

ಮಾನವ ಸಂಪನ್ಮೂಲ

ಭಾರತ ಮತ್ತು ಚೀನಾ ಎರಡೂ ರಾಷ್ಟ್ರಗಳ ಬಳಿಯೂ ಅಪಾರ ಮಾನವ ಸಂಪನ್ಮೂಲವಿದ್ದು, ಅವರನ್ನು ಉತ್ಪಾದನಾ ವಲಯದಲ್ಲಿ ಉದ್ಯೋಗಿಗಳಾಗಿ ಬಳಸಿಕೊಳ್ಳಬಹುದು. ಆದರೆ ಕೆಲಸದ ಗುಣಮಟ್ಟ ಯಾವಾಗಲೂ ಒಂದೇ ರೀತಿ ಇರುತ್ತದೆ ಎನ್ನಲು ಸಾಧ್ಯವಿಲ್ಲ. ಉದಾಹರಣೆಗೆ, ಮೆಕ್ ಕಿನ್ಸೀ ಸಂಸ್ಥೆ ಚೀನಾದ ಉತ್ಪಾದಕರು ತಮ್ಮ ಭಾರತೀಯ ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ ಐದು ಪಟ್ಟು ಹೆಚ್ಚು ಉತ್ಪಾದಕತೆ ಹೊಂದಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದರ ಫಲಿತಾಂಶವಾಗಿ, ಭಾರತದಲ್ಲಿ ಉತ್ಪಾದನಾ ಕಾರ್ಮಿಕರಿಗೆ ಪ್ರತಿ ಗಂಟೆಗೆ ಕೇವಲ 92 ಸೆಂಟ್ ವೇತನ ನೀಡಿದರೂ, ಚೀನಾದಲ್ಲಿ 3.52 ಡಾಲರ್ ವೇತನ ನೀಡಿದರೂ, ಉತ್ಪಾದನಾ ವೆಚ್ಚದಲ್ಲಿ ಚೀನಾವೇ ಲಾಭದಾಯಕ ಎನಿಸುತ್ತದೆ.

ಇತ್ತೀಚಿನ ವರ್ಷಗಳಲ್ಲಿ ಚೀನಾದ ಸರಾಸರಿ ವೇತನ ಹೆಚ್ಚಳವಾಗುತ್ತಾ ಬಂದಿದೆ. ಅದು ಚೀನಾದ ಉತ್ಪಾದನಾ ವಲಯದ ಸ್ಪರ್ಧಾತ್ಮಕತೆಯ ಮೇಲೆ ಪರಿಣಾಮ ಬೀರುತ್ತಿದೆ. ಉತ್ಪಾದನಾ ವಲಯದಲ್ಲಿ ಚೀನೀ ಕಾರ್ಮಿಕರ ವೇತನ ಈಗ ಹಿಂದೆಂದಿಗಿಂತಲೂ ಹೆಚ್ಚಳವಾಗಿದೆ. ಮಾರುಕಟ್ಟೆ ಸಂಶೋಧನಾ ಸಂಸ್ಥೆಯೊಂದರ ಪ್ರಕಾರ, ಚೀನೀ ಕಾರ್ಮಿಕರ ಪ್ರತಿ ಗಂಟೆಯ ಸರಾಸರಿ ವೇತನ 3.60 ಡಾಲರ್ ತಲುಪಿದ್ದು, ಇದು 2011ಕ್ಕೆ ಹೋಲಿಸಿದರೆ 64% ಹೆಚ್ಚಳವಾಗಿದೆ. ಇದು ಭಾರತದ ಉತ್ಪಾದನಾ ಕಾರ್ಮಿಕರಿಗೆ ಲಭಿಸುವ ಸರಾಸರಿ ಸಂಬಳದ ಐದು ಪಟ್ಟು ಹೆಚ್ಚಾಗಿದ್ದು, ಈ ವೇತನವನ್ನು ಪೋರ್ಚುಗಲ್ ಹಾಗೂ ದಕ್ಷಿಣ ಆಫ್ರಿಕಾದಲ್ಲಿ ಲಭಿಸುವ ವೇತನಕ್ಕೆ ಹೋಲಿಸಬಹುದು.

ವಿದೇಶೀ ಭಾಷಾ ಕೌಶಲ್ಯ

ವಿದೇಶೀ ಭಾಷೆಯಲ್ಲಿ ಸಂವಹನ ನಡೆಸುವ ವಿಚಾರಕ್ಕೆ ಬಂದಾಗ ಭಾರತ ಚೀನಾದೆದುರು ಮೇಲುಗೈ ಸಾಧಿಸುತ್ತದೆ. ಯಾಕೆಂದರೆ ಭಾರತದಲ್ಲಿ ಇಂಗ್ಲಿಷ್ ಎರಡನೆಯ ಅಧಿಕೃತ ಭಾಷೆಯಾಗಿದ್ದು, ಸಾಕಷ್ಟು ಜನರು ಇಂಗ್ಲಿಷ್ ಮಾತನಾಡಬಲ್ಲರು. ಅದರಲ್ಲೂ ಆಡಳಿತಾತ್ಮಕ ಹುದ್ದೆಯಲ್ಲಿರುವವರು ಇಂಗ್ಲಿಷ್ ಬಲ್ಲವರಾಗಿರುತ್ತಾರೆ. ಭಾರತೀಯರು ಹಲವು ಬ್ರಿಟಿಷ್ ಅಭ್ಯಾಸಗಳು ಹಾಗೂ ಕಾನೂನು ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದು, ಇದು ಚೀನಾ ಎದುರಿಸುತ್ತಿರುವ ಸಾಂಸ್ಕೃತಿಕ ಭಿನ್ನತೆಯ ಸಮಸ್ಯೆ ಭಾರತದಲ್ಲಿ ಎದುರಾಗದಂತೆ ಮಾಡುತ್ತದೆ. ಇನ್ನೊಂದೆಡೆ, ಚೀನಾದಲ್ಲಿ ಇಂಗ್ಲಿಷ್ ಹೊರತುಪಡಿಸಿ ಬೇರೆ ವಿದೇಶೀ ಭಾಷೆ ಮಾತನಾಡುವವರನ್ನು ಹುಡುಕುವುದು ಸುಲಭ ಸಾಧ್ಯ.

ಕಸ್ಟಮ್ಸ್ ನಿಯಮಗಳು

ಕಸ್ಟಮ್ಸ್ ಸಮಸ್ಯೆಗಳನ್ನು ರಫ್ತು ಕಾರ್ಯದಲ್ಲಿ ಸಂಪೂರ್ಣವಾಗಿ ಪರಿಗಣಿಸಬೇಕಾಗುತ್ತದೆ. ಕಸ್ಟಮ್ಸ್ ವಿಚಾರದಲ್ಲಿ ಲಾಜಿಸ್ಟಿಕ್ಸ್ ಪರ್ಫಾಮೆನ್ಸ್ ಇಂಡೆಕ್ಸ್ ಪ್ರಕಾರ ಕಸ್ಟಮ್ಸ್ ಕ್ಲಿಯರೆನ್ಸ್‌ನಲ್ಲಿ ಚೀನಾ 3.32 ಅಂಕ ಸಂಪಾದಿಸಿದರೆ, ಭಾರತ 3.17 ಅಂಕ ಸಂಪಾದಿಸಿದೆ. ಈ ಮೂಲಕ ಕಸ್ಟಮ್ಸ್ ವಿಚಾರದಲ್ಲಿ ಚೀನಾ ಸಣ್ಣ ಮೇಲುಗೈ ಸಾಧಿಸಿದೆ. ಚೀನಾಗೆ ಹೋಲಿಸಿದರೆ ರಫ್ತು ಕಾರ್ಯಾಚರಣೆಯಲ್ಲಿ ಭಾರತದ ಕಸ್ಟಮ್ಸ್ ಕ್ಲಿಯರೆನ್ಸ್ ವಿಧಾನ ಕಡಿಮೆ ಪರಿಣಾಮಕಾರಿಯಾಗಿದ್ದು, ಅಂತರರಾಷ್ಟ್ರೀಯ ವ್ಯವಹಾರದಲ್ಲಿ ಪಾಲ್ಗೊಳ್ಳುವ ಭಾರತದ ಸಾಮರ್ಥ್ಯವನ್ನು ಕುಂಠಿತಗೊಳಿಸುತ್ತದೆ. ಆದರೆ ಎಲ್‌ಪಿಐ (ಲಾಜಿಸ್ಟಿಕ್ಸ್ ಪರ್ಫಾಮೆನ್ಸ್ ಇಂಡೆಕ್ಸ್) ಅಧ್ಯಯನದ ಪ್ರಕಾರ, ಈ ಕ್ಷೇತ್ರದಲ್ಲಿ ಭಾರತ ಪ್ರಗತಿ ಸಾಧಿಸುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ಭಾರತದ ರ್‍ಯಾಂಕಿಂಗ್0.45 ಅಂಕಗಳಷ್ಟು ಹೆಚ್ಚಳ ಕಂಡಿದೆ. ಭಾರತಕ್ಕೆ ಹೋಲಿಸಿದರೆ ಚೀನಾದ ರಾಂಕಿಂಗ್ ಅಷ್ಟೇ ಅವಧಿಯಲ್ಲಿ ಕೇವಲ 0.11 ಅಂಕಗಳಷ್ಟು ಹೆಚ್ಚಳ ಕಂಡಿದೆ. ಎಲ್‌ಟಿಐ ರೇಟಿಂಗಿಗೆ ಪರಿಣಾಮ ಬೀರುವ ವಿಚಾರಗಳೆಂದರೆ ಕಸ್ಟಮ್ಸ್‌ನ ವೇಗ, ಸರಳತೆ ಹಾಗೂ ಊಹಿಸಬಹುದಾದ ಔಪಚಾರಿಕತೆ. ಚೀನಾ ವಸ್ತುಗಳ ರಫ್ತು ವಿಚಾರದಲ್ಲಿ ಪ್ರಸ್ತುತ ಮೇಲುಗೈ ಹೊಂದಿದ್ದರೂ, ಭಾರತ ತನ್ನ ಪೂರೈಕೆ ಸರಪಳಿಯನ್ನು ಭದ್ರಪಡಿಸುವಲ್ಲಿ ದಾಪುಗಾಲಿಡುತ್ತಿದೆ.

ಉತ್ಪಾದನಾ ಪ್ರಕ್ರಿಯೆಗಳು

ಚೀನಾ ಅಥವಾ ಭಾರತ ಎರಡೂ ದೇಶಗಳಲ್ಲಿ ಉತ್ಪಾದನೆ ನಡೆಸಲು ಮುಖ್ಯವಾಗಿ ಎರಡು ವಿಭಿನ್ನ ಉತ್ಪಾದನಾ ಸಂಸ್ಕೃತಿಗಳನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಈ ಎರಡೂ ಸಂಸ್ಕೃತಿಗಳು ಜಗತ್ತಿನಾದ್ಯಂತ ಚಿರಪರಿಚಿತವಾಗಿದ್ದು, ಸಮಯದೊಂದಿಗೆ ತಮ್ಮದೇ ಆದ ರೀತಿಯಲ್ಲಿ ಅಭಿವೃದ್ಧಿ ಹೊಂದಿವೆ.

ಚೀನಾದ ಹಲವು ಉದ್ಯಮಿಗಳು ಉತ್ಪಾದನಾ ವೆಚ್ಚ ಕಡಿಮೆ ಮಾಡಲು ಯೋಚಿಸುತ್ತಿದ್ದಾರೆ. ಅದಕ್ಕಾಗಿ ಅವರು ಉತ್ಪಾದನಾ ವಿಧಾನಗಳನ್ನು ಹಾಗೆಯೇ ಇಟ್ಟುಕೊಂಡು, ಉತ್ಪಾದನಾ ಘಟಕಗಳನ್ನು ಇತರ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಸ್ಥಾಪಿಸುತ್ತಿದ್ದಾರೆ. ಆದರೆ ಇನ್ನೂ ಹಲವು ಉದ್ಯಮಿಗಳು ಇತ್ತೀಚಿನ ದಿನಗಳಲ್ಲಿ ತಮ್ಮ ಎಲ್ಲಾ ವಸ್ತುಗಳೂ ಮೇಡ್ ಇನ್ ಚೀನಾ ವಸ್ತುಗಳಾಗಬೇಕು ಎಂದು ಬಯಸುತ್ತಿದ್ದಾರೆ. ಅದಕ್ಕಾಗಿ ಹೆಚ್ಚಿನ ವೇತನ ಪಡೆಯುವ ಕಾರ್ಮಿಕರ ಬದಲಿಗೆ ಯಂತ್ರಗಳ ಮೂಲಕ ಉತ್ಪಾದನೆ ನಡೆಸಿ, ವೆಚ್ಚ ಕಡಿತಗೊಳಿಸುವ ವಿಧಾನವನ್ನು ಅನುಸರಿಸುತ್ತಿದ್ದಾರೆ. ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಯಶಸ್ಸು ಗಳಿಸಲು ಮತ್ತು ಕಡಿಮೆ ಸಮಯದ ಅವಧಿಯಲ್ಲಿ ಉತ್ಪಾದನಾ ಗುರಿಯನ್ನು ಪೂರೈಸಲು ಅವರ ಉತ್ಪಾದನಾ ವಿಧಾನವನ್ನೂ ಅಭಿವೃದ್ಧಿ ಪಡಿಸಿದ್ದಾರೆ.

ಭಾರತದ ಉತ್ಪಾದನಾ ವಿಧಾನವೂ ಕಾಲದೊಡನೆ ಅಭಿವೃದ್ಧಿ ಹೊಂದುತ್ತಿದೆ. ಆದರೆ ಭಾರತದ ಪರಂಪರೆಯ ಪ್ರಕಾರ ಉತ್ಪಾದನೆ ಯಾವಾಗಲೂ ಪ್ರಾದೇಶಿಕವಾಗಿದ್ದು, ಉತ್ಪಾದನಾ ಪ್ರಕ್ರಿಯೆಯನ್ನು ಅಭಿವೃದ್ಧಿ ಪಡಿಸುವ, ಆಧುನಿಕಗೊಳಿಸುವ ಸಾಧ್ಯತೆ ಕನಿಷ್ಠವಾಗಿದೆ. ಕೌಟುಂಬಿಕ ಮತ್ತು ಪರಂಪರಾಗತ ಮಾಲೀಕತ್ವ ಹೊಂದಿರುವ ಉದ್ಯಮಗಳಿಗೆ ಹೋಲಿಸಿದರೆ ದೊಡ್ಡ ಕಾರ್ಪೋರೇಷನ್ನುಗಳು, ಉದ್ಯಮಿಗಳು ಹಾಗೂ ಹೂಡಿಕೆದಾರರನ್ನು ಕಡಿಮೆಯಾಗಿ ಪರಿಗಣಿಸಲಾಗುತ್ತದೆ. ಇದರ ಪರಿಣಾಮವಾಗಿ ಗ್ರಾಹಕರಿಗೆ ಉತ್ಪನ್ನಗಳಲ್ಲಿ ಗುಣಮಟ್ಟದ ಕೊರತೆ ಮತ್ತು ಉತ್ಪಾದನೆಯಲ್ಲಿ ತಡವಾಗುವಿಕೆ ಸಹಜವಾಗಿರುತ್ತದೆ. ದೊಡ್ಡ ಬೇಡಿಕೆಗಳನ್ನು ಕ್ಲುಪ್ತ ಸಮಯದಲ್ಲಿ ಪೂರೈಸಲು ಸಣ್ಣ ಉದ್ಯಮಗಳು ತಮ್ಮ ಕೆಲಸಗಳನ್ನು ಹೊರಗುತ್ತಿಗೆ ನೀಡುವುದು ಅನಿವಾರ್ಯವಾಗಿದೆ. ಪ್ರತಿಯೊಂದು ಕಾರ್ಖಾನೆಯ ಉತ್ಪಾದನಾ ವಿಧಾನವೂ ಒಂದಕ್ಕಿಂತ ಒಂದು ವಿಭಿನ್ನವಾಗಿದ್ದು, ಅದನ್ನು ನಿಯಂತ್ರಿಸುವುದು ಕಷ್ಟಕರ. ಈ ಕಾರಣದಿಂದಾಗಿ ಉತ್ಪಾದನೆಯ ಪ್ರತಿಯೊಂದು ಹಂತದಲ್ಲೂ ಅದರ ಮೇಲ್ವಿಚಾರಣೆ ನಡೆಸಬೇಕಾಗಿ ಬರುವುದರಿಂದ ಉತ್ಪಾದನಾ ವೆಚ್ಚವೂ ಹೆಚ್ಚಳವಾಗುತ್ತದೆ. ಒಂದು ವೇಳೆ ಪೂರೈಕೆದಾರರ ಬಳಿ ಬೇಡಿಕೆ ಸಲ್ಲಿಸುವ ಮೊದಲೇ ಅವರ ಅರ್ಹತೆಯನ್ನು ಪರಿಶೋಧಿಸದಿದ್ದರೆ ಉಪ ಗುತ್ತಿಗೆ ಇರುವ ಕುರಿತು ಮಾಹಿತಿ ಲಭ್ಯವಾಗದೇ ಹೋಗುತ್ತದೆ. ವಾಸ್ತವವಾಗಿ ಹಲವು ಪೂರೈಕೆದಾರರು ಈ ಮಾಹಿತಿಯನ್ನು ತಮ್ಮ ಗ್ರಾಹಕರಿಂದ ಮುಚ್ಚಿಡಲು ಬಯಸುವುದರಿಂದ, ಈ ಕುರಿತಾದ ಕೂಲಂಕುಷ ಪರಿಶೀಲನೆ ಅವರ ಮೇಲೆ ಒತ್ತಡ ಹೇರಲು ಪರಿಣಾಮಕಾರಿ ಮಾರ್ಗವಾಗಿದೆ.

ಪ್ರತಿಯೊಂದು ದೇಶದಲ್ಲೂ ಉತ್ಪಾದನಾ ಉದ್ಯಮವನ್ನು ಆಯ್ದುಕೊಳ್ಳುವ ವಿಚಾರದಲ್ಲಿ ಆ ಉತ್ಪನ್ನದ ಆಧಾರದಲ್ಲಿ ಭಿನ್ನತೆ ಸಹಜವಾಗಿ ಕಂಡು ಬರುತ್ತದೆ. ಆದರೆ ಚೀನಾ ಅಥವಾ ಭಾರತದಲ್ಲಿ ಉತ್ಪಾದನೆಯಾಗುವ ಗ್ರಾಹಕ ವಸ್ತುಗಳು ಅಪಾರವಾಗಿವೆ. ಚೀನಾದಲ್ಲಿ ಎಲ್ಲಾ ವಿಧದ ಗ್ರಾಹಕ ವಸ್ತುಗಳ ಹೆಚ್ಚಿನ ಆಯ್ಕೆ ಲಭ್ಯವಿದ್ದರೂ, ಹಲವು ಸಲ ಭಾರತದ ಉತ್ಪನ್ನಗಳು ವಿಶೇಷ ಎನಿಸುತ್ತವೆ.

ಚೀನಾದೊಡನೆ ಭಾರತದ ಅಮದು ಮತ್ತು ರಫ್ತು

ಚೀನಾದಿಂದ ಭಾರತ ಕೈಗೊಳ್ಳುವ ಪ್ರಮುಖ ಆಮದಿನಲ್ಲಿ ಖನಿಜ ಇಂಧನಗಳು, ಖನಿಜ ತೈಲಗಳು, ರಾಸಾಯನಿಕಗಳು, ರಸಗೊಬ್ಬರಗಳು, ಪ್ಲಾಸ್ಟಿಕ್, ಕಬ್ಬಿಣ ಹಾಗೂ ಉಕ್ಕು, ವಿದ್ಯುತ್ ಯಂತ್ರೋಪಕರಣಗಳು, ಹಾಗೂ ವೈದ್ಯಕೀಯ ಉಪಕರಣಗಳು ಸೇರಿವೆ. 2020ರ ಹಣಕಾಸು ವರ್ಷದಲ್ಲಿ ಚೀನಾದಿಂದ ಭಾರತದ ಆಮದು 6.21% ಕುಸಿತ ಕಂಡಿತ್ತು. ಆದರೆ 2021ನೇ ಹಣಕಾಸು ವರ್ಷದಲ್ಲಿ ಚೀನಾದಿಂದ ಭಾರತ ಮಾಡಿಕೊಳ್ಳುವ ಆಮದು 4.5% ಏರಿಕೆ ಕಂಡಿದೆ.

2021ನೇ ಹಣಕಾಸು ವರ್ಷದಲ್ಲಿ ಭಾರತದಿಂದ ಚೀನಾಗೆ ಮಾಡುತ್ತಿದ್ದ ರಫ್ತು 33.59% ಹೆಚ್ಚಳ ಕಂಡಿದ್ದು, 2022ನೇ ಹಣಕಾಸು ವರ್ಷದಲ್ಲಿ ಈ ರಫ್ತು 0.61% ಏರಿಕೆ ಕಂಡಿದೆ.

ಭಾರತ ಪ್ರಮುಖವಾಗಿ ಚೀನಾಕ್ಕೆ ಉಕ್ಕು ಮತ್ತು ಕಬ್ಬಿಣ, ಅದಿರುಗಳು, ಸ್ಲ್ಯಾಗ್ ಮತ್ತು ಬೂದಿ, ಸಾವಯವ ರಾಸಾಯನಿಕಗಳನ್ನು ರಫ್ತು ಮಾಡುತ್ತದೆ.

-ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT