ಗುರುವಾರ , ಮಾರ್ಚ್ 23, 2023
28 °C
ಇಂದು ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನ

PV Web Exclusive | ಪ್ರಜಾಪ್ರಭುತ್ವವಾದಿ ದೇಶಗಳ ಸರ್ವಾಧಿಕಾರಿ ಧೋರಣೆ

ಮೋಹನ್ ಕುಮಾರ ಸಿ. Updated:

ಅಕ್ಷರ ಗಾತ್ರ : | |

Prajavani

ಪ್ರಜಾಪ್ರಭುತ್ವ ದೇಶಗಳು ಕೋವಿಡ್‌ ಪಿಡುಗನ್ನು ಹೇಗೆ ನಿಭಾಯಿಸುತ್ತಿವೆ ಎಂಬುದನ್ನು ‘ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನ’ವಾದ ಇಂದು (ಸೆ.15) ನಾವು ಸೂಕ್ಷ್ಮವಾಗಿ ಎಲ್ಲ ಆಯಾಮಗಳಲ್ಲಿ ನೋಡಬೇಕಿದೆ. ಈ ದೇಶಗಳ ಸರ್ಕಾರಗಳು ಕೋವಿಡ್‌ ವಿರುದ್ಧದ ಹೋರಾಟಕ್ಕೆ ತಮ್ಮ ಪ್ರಜೆಗಳನ್ನು ಹೇಗೆ ಅಣಿಗೊಳಿಸಿದವು ಮತ್ತು ಅವರ ರಕ್ಷಣೆಗೆ ಯಾವ ಕ್ರಮಗಳನ್ನು ತೆಗೆದುಕೊಂಡವು ಎಂಬುದನ್ನು ವಿಶ್ಲೇಷಿಸಬೇಕಿದೆ.   

ಜೀವಿಸುವ ಹಕ್ಕು ಮತ್ತು ಸ್ವಾತಂತ್ರ್ಯವನ್ನು ಯಾವುದೇ ಸಂದರ್ಭದಲ್ಲೂ ಕಸಿದುಕೊಳ್ಳದ ಖಾತರಿಯನ್ನು ಪ್ರಜಾಪ್ರಭುತ್ವವಾದಿ ದೇಶಗಳು ತಮ್ಮ ನಾಗರಿಕರಿಗೆ ನೀಡುತ್ತವೆ ಮತ್ತು ಅದನ್ನು ಪ್ರತಿಪಾದಿಸುತ್ತವೆ. ಆದರೆ, ಕೋವಿಡ್‌ ಪಿಡುಗಿನ ಅವಧಿಯಲ್ಲಿ ಪ್ರಜಾಪ್ರಭುತ್ವವಾದಿ ದೇಶಗಳು ನಾಗರಿಕರ ಹಕ್ಕುಗಳನ್ನು ರಕ್ಷಿಸಿವೆಯೇ ಮತ್ತು   ಪ್ರಜಾಪ್ರಭುತ್ವದ ಆಶಯಗಳನ್ನು ಎತ್ತಿ ಹಿಡಿದಿವೆಯೇ ಎಂಬ ಬಗ್ಗೆ ಹುಡುಕಾಟ ನಡೆಸಿದಾಗ ಸಿಗುವುದು ಸರ್ವಾಧಿಕಾರದ ಮಾದರಿಗಳೇ.     

ನಾಯಕ ಕೇಂದ್ರಿತ ಪ್ರಜಾಪ್ರಭುತ್ವ: ಕೋವಿಡ್‌ಗೂ ಮತ್ತು ರಾಜಕೀಯ ಸಿದ್ಧಾಂತಗಳಿಗೂ ಸಂಬಂಧ ಕಲ್ಪಿಸುವುದು ಬಾಲಿಶ ಎನಿಸುತ್ತದೆ. ಆದರೆ, ಸಂಕಷ್ಟದ ಪರಿಸ್ಥಿತಿಯಲ್ಲಿ ಜನರ ಆಶೋತ್ತರಗಳಿಗೆ ನಡೆದುಕೊಳ್ಳುವುದು ಮತ್ತು ಅವರನ್ನು ರಕ್ಷಿಸುವುದು ಚುನಾಯಿತ ಸರ್ಕಾರದ ಜವಾಬ್ದಾರಿ. ಜನರ ಜೀವ ಕಾಪಾಡಬೇಕಾದ ನಿರ್ಣಾಯಕ ಘಳಿಗೆಯಲ್ಲಿ ಆಡಳಿತ ಪಕ್ಷಗಳು ತಮ್ಮ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುವತ್ತ ಆಸಕ್ತಿ ವಹಿಸಿದ್ದವು. ಕೋವಿಡ್‌ ನಿಯಂತ್ರಣಕ್ಕೆ ಈ ಆಡಳಿತದ ಸರ್ಕಾರಗಳು ತೆಗೆದುಕೊಂಡ ಕ್ರಮಗಳು ನಾಯಕ ಕೇಂದ್ರಿತವಾಗಿಯೇ ಉಳಿದವೇ ವಿನಃ ತನ್ನ ಪ್ರಜೆಗಳನ್ನು ಸಂಕಷ್ಟದಿಂದ ಪಾರು ಮಾಡಬೇಕೆಂಬುದಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲೇ ಇಲ್ಲ. ಈ ನಿಟ್ಟಿನಲ್ಲಿ ಪ್ರಜಾಪ್ರಭುತ್ವವಾದಿ ರಾಷ್ಟ್ರಗಳ ನಡೆ ಸರ್ವಾಧಿಕಾರಿ ಧೋರಣೆಯ ರಾಷ್ಟ್ರಗಳಂತೆ ಇದ್ದವು. ಇವು ಮೊದಲ ಮಹಾಯುದ್ಧದ ನಂತರದ ಯೂರೋಪ್‌ ಅನ್ನು ನೆನಪಿಗೆ ತರುತ್ತವೆ. 

ರಾಷ್ಟ್ರೀಯತೆಯ ಪ್ರತಿಪಾದನೆ: ಕೋವಿಡ್‌ ಸಂಕಷ್ಟದ ದಿನಗಳಲ್ಲಿ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಪ್ರಜೆಗಳ ಜೀವಕ್ಕೆ ರಕ್ಷಣೆ ಒದಗಿಸಲು ಆಳುವ ಸರ್ಕಾರಗಳು ಹೇಗೆ ನಡೆದುಕೊಂಡಿವೆ ಎಂಬುದನ್ನು ಗಮನಿಸಿದರೆ ನಿರಾಶೆಯಾಗುತ್ತದೆ. ಅತಿ ಹೆಚ್ಚು ಪ್ರಕರಣಗಳು ದಾಖಲಾದ ಮೊದಲ ಹತ್ತು ರಾಷ್ಟ್ರಗಳನ್ನು ತೆಗೆದುಕೊಂಡಾಗ ಅವುಗಳಲ್ಲಿ ಬಹುತೇಕ  ಪ್ರಜಾಪ್ರಭುತ್ವ ರಾಷ್ಟ್ರಗಳು. ಅಮೆರಿಕ, ಬ್ರೆಜಿಲ್‌, ಭಾರತ, ರಷ್ಯಾ ಮೊದಲ ನಾಲ್ಕು ಸ್ಥಾನಗಳಲ್ಲಿವೆ. ಆಶ್ವರ್ಯಕರ ಅಂಶವೆಂದರೆ ಈ ದೇಶಗಳ ಚುನಾಯಿತ ಸರ್ಕಾರಗಳು ರಾಷ್ಟ್ರೀಯವಾದವನ್ನು ಬಲವಾಗಿ ಪ್ರತಿಪಾದಿಸುವಂಥವು. ದೇಶದ ಚುಕ್ಕಾಣಿ ಹಿಡಿದ ಪಕ್ಷಗಳೂ ತಮ್ಮನ್ನು ಬಲಪಂಥೀಯ ಚಿಂತನೆಗಳಿಂದ ಗುರುತಿಸಿಕೊಂಡವು. ಭಾವನಾತ್ಮಕವಾಗಿ ಜನರನ್ನು ಸೆಳೆಯಲು ತೀವ್ರ ರಾಷ್ಟ್ರವಾದವನ್ನು ಪ್ರತಿಪಾದಿಸುವುದು ಬಲಪಂಥೀಯ ಪಕ್ಷಗಳ ಲಕ್ಷಣ. ಈ ಪಕ್ಷಗಳ ನಡೆಗಳು ಜನಪ್ರಿಯ ಮಾದರಿಗೆ ಗಂಟುಬಿದ್ದಿವೆ ಎಂಬ ವಾದಕ್ಕೆ ಪುಷ್ಠಿ ನೀಡುವಂತೆ ಇತ್ತೀಚೆಗೆ ‘ಲಸಿಕಾ ರಾಷ್ಟ್ರೀಯವಾದ’ದ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಹೇಳಿರುವುದನ್ನು ನಾವು ಸೂಕ್ಷ್ಮವಾಗಿ ಗಮನಿಸಬೇಕಿದೆ.

ಕೋವಿಡ್‌ಗೆ ಲಸಿಕೆಯನ್ನು ಮೊದಲು ತಯಾರಿಸಿದೆವೆಂಬ ಶ್ರೇಯವನ್ನು ಗಿಟ್ಟಿಸಿಕೊಳ್ಳಲು, ಆ ಮೂಲಕ ಇತರ ರಾಷ್ಟ್ರಗಳ ಮೇಲೆ ತಮ್ಮ ಪ್ರಭಾವನ್ನು ಬೀರಲು ಮುಂದುವರಿದ ರಾಷ್ಟ್ರಗಳು ಇದೀಗ ಪೈಪೋಟಿಗೆ ಬಿದ್ದಿವೆ. ಇದನ್ನು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೊಸ್‌ ಅದಾನೊಮ್‌ ಗೆಬ್ರಿಯೆಸಸ್‌ ‘ವ್ಯಾಕ್ಸಿನ್‌ ನ್ಯಾಷ್ನಲಿಸಂ’ ಎಂದು ಕರೆದಿದ್ದಾರೆ. ಕೋವಿಡ್‌ ಮೊದಲ ಪ್ರಕರಣ ವರದಿಯಾಗಿ 8 ತಿಂಗಳು ಕಳೆದಿದೆ. ಲಸಿಕೆ ತಯಾರಿಸಲು ಈ ದೇಶಗಳು ಪ್ರಯತ್ನವನ್ನು ಮುಂದುವರಿಸಿವೆ. ಯಾವೊಂದು ದೇಶವೂ ಲಸಿಕೆ ಕಂಡು ಹಿಡಿಯುವಲ್ಲಿ ಯಶಸ್ವಿಯಾಗಿಲ್ಲ. ಆದರೆ, ಲಸಿಕಾ ಪ್ರಯೋಗದ ಅಡ್ಡ ಪರಿಣಾಮದಿಂದ ಸಾಮಾನ್ಯ ನಾಗರಿಕರು ಜೀವ ಕಳೆದುಕೊಳ್ಳುವಂತಾಗಿದೆ . ಇತ್ತೀಚೆಗೆ ಲಸಿಕೆ ತೆಗೆದುಕೊಂಡ ಅಮೆರಿಕದ ಟೆಕ್ಸಾಸ್‌ನ ಸೋಂಕಿತರೊಬ್ಬರು ಮೃತಪಟ್ಟಿದ್ದಾರೆ. ಈ ಮುಂದುವರಿದ ಮತ್ತು ಪ್ರಜಾಪ್ರಭುತ್ವ ಮಾದರಿ ರಾಷ್ಟ್ರಗಳ ನಾಯಕರು ತಮ್ಮ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳಲು ಕೋವಿಡ್‌ ಅನ್ನು ದಾಳವಾಗಿ ಬಳಸಿಕೊಂಡರು ಎಂಬುದನ್ನು ಸ್ಪಷ್ಟಪಡಿಸಲು ಈ ಒಂದು ಉದಾಹರಣೆಯಷ್ಟೇ ಸಾಕು.

ಮಾದರಿಯಾದ ಸ್ವೀಡನ್‌: ಅಮೆರಿಕ, ರಷ್ಯಾ, ಭಾರತ, ಬ್ರೆಜಿಲ್‌, ದಕ್ಷಿಣ ಆಫ್ರಿಕಾ ಹಾಗೂ ಯೂರೋಪ್‌, ಲ್ಯಾಟಿನ್‌ ಅಮೆರಿಕದ ಹಲವು ರಾಷ್ಟ್ರಗಳಿಗೆ ವ್ಯತಿರಿಕ್ತವಾಗಿ ಫಿನ್‌ಲ್ಯಾಂಡ್‌, ಸ್ವೀಡನ್‌, ನ್ಯೂಜಿಲೆಂಡ್‌, ದಕ್ಷಿಣ ಕೊರಿಯಾಗಳು ದೇಶಗಳು ಜವಾಬ್ದಾರಿಯಿಂದ ನಡೆದುಕೊಂಡಿವೆ. ವಿಶ್ವ ಪ್ರಜಾಪ್ರಭುತ್ವ ಸೂಚ್ಯಂಕದಲ್ಲಿ ಉತ್ತಮ ಶ್ರೇಯಾಂಕವನ್ನು ಇವು ಪಡೆದಿವೆ. ಲಾಕ್‌ಡೌನ್‌ ಅನ್ನು ಹೇರದೆ ಸ್ವೀಡನ್‌, ಕೋವಿಡ್‌ ಅನ್ನು ಸಮರ್ಥವಾಗಿ ಎದುರಿಸಿದೆ. ನ್ಯೂಜಿಲೆಂಡ್‌ ಕೂಡ ಕೋವಿಡ್‌ ಮುಕ್ತ ದೇಶವೆಂದು ಘೋಷಿಸಿಕೊಂಡಿದೆ. ಈ ದೇಶಗಳ ಜನರು ಪರಿಣಾಮಕಾರಿಯಾಗಿ ಕೋವಿಡ್‌ ನಿಯಂತ್ರಿಸಲು ಒತ್ತಾಸೆಯಾಗಿ ಸರ್ಕಾರದ ಪರ ನಿಂತಿದ್ದರು. ಪ್ರಜೆಗಳ ಜವಾಬ್ದಾರಿಯ ಮೇಲೆ ಈ ರಾಷ್ಟ್ರಗಳು ನಂಬಿಕೆ ಇರಿಸಿದ್ದರಿಂದಲೇ ಕೋವಿಡ್‌ ನಿಯಂತ್ರಣದಲ್ಲಿ ಯಶಸ್ಸನ್ನು ಪಡೆದವು.

ಏರುತ್ತಲೇ ಇದೆ ಪ್ರಕರಣ: ಅಮೆರಿಕ 67 ಲಕ್ಷ, ಭಾರತ 48 ಲಕ್ಷ, ಬ್ರೆಜಿಲ್‌ 43, ರಷ್ಯಾ 10 ಲಕ್ಷ, ಪೆರು, ಕೊಲಂಬಿಯಾ, ಮೆಕ್ಸಿಕೊದಲ್ಲಿ 7 ಲಕ್ಷ ಹಾಗೂ ದಕ್ಷಿಣ ಆಫ್ರಿಕಾದಲ್ಲಿ ತಲಾ 6 ಲಕ್ಷ ಕೋವಿಡ್ ಪ್ರಕರಣಗಳು ವರದಿಯಾಗಿವೆ. ದಿನದಿಂದ ದಿನಕ್ಕೆ ಪ್ರಕರಣಗಳು ಈ ರಾಷ್ಟ್ರಗಳಲ್ಲಿ ಹೆಚ್ಚುತ್ತಲೇ ಇವೆ. ಕೋವಿಡ್‌ ನಿಯಂತ್ರಿಸಲು ತೆಗೆದುಕೊಂಡ ನಿರ್ಣಯಗಳು ಸೋಂಕು ಪ್ರಕರಣಗಳ ಏರಿಕೆಯನ್ನು ತಗ್ಗಿಸಲಿಲ್ಲ ಎಂಬುದನ್ನು ಈ ಅಂಕಿ ಅಂಶಗಳು ಸಾಬೀತು ಮಾಡುತ್ತವೆ.

ಬಂಡವಾಳಶಾಹಿ ಪರ ನಿಲುವು: ಉತ್ತಮ ಆರೋಗ್ಯ ವ್ಯವಸ್ಥೆಯನ್ನು ಪ್ರಜಾಪ್ರಭುತ್ವದ ಆಶಯಗಳಿಗೆ ತಕ್ಕಂತೆ ಕಲ್ಪಿಸಬೇಕಾದುದು ಸರ್ಕಾರಗಳ ಕರ್ತವ್ಯ. ಆದರೆ, ಈ ಸರ್ಕಾರಗಳು ಕೋವಿಡ್‌ ಸಂದರ್ಭದಲ್ಲಿಯೇ ಬಂಡವಾಳಶಾಹಿಗಳ ಪರ ನಿಂತಿದ್ದವು. ಒಂದು ಕಡೆ ಈ ರಾಷ್ಟ್ರಗಳ ವೈದ್ಯರು, ಪೊಲೀಸರು ಕೊರೊನಾ ವಿರುದ್ಧದ ಹೋರಾಟದಲ್ಲಿ ಜೀವಗಳನ್ನು ಮುಡಿಪಾಗಿಟ್ಟಿದ್ದಾರೆ. ಇನ್ನೊಂದೆಡೆ ಚಿಕಿತ್ಸೆ ಹೆಸರಿನಲ್ಲಿ ಖಾಸಗಿ ಆಸ್ಪತ್ರೆಗಳು ರೋಗಿಗಳನ್ನು ಸುಲಿಯುತ್ತಿರುವ ಸಂಗತಿಗಳು ಜನರ ಕಣ್ಣ ಮುಂದೆಯೇ ಇವೆ. ಕೋವಿಡ್‌ಗೆ ಔಷಧ ಕಂಡು ಹಿಡಿದಿದ್ದೇವೆಂದು ಕೆಲ ಔಷಧ ಕಂಪನಿಗಳು ಪರಿಸ್ಥಿತಿಯನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳಲು ಯೋಚಿಸಿದ್ದವು. ಒಂದು ಕಂಪನಿಯಂತೂ ಆಯುಷ್‌ ಇಲಾಖೆಯಿಂದ ಅನುಮೋದನೆಯನ್ನು ಪಡೆದುಕೊಂಡಿತ್ತು. ಇದಕ್ಕೆ ವಿರೋಧ ವ್ಯಕ್ತವಾದ ಕಾರಣ ಆಯುಷ್‌ ಅನುಮತಿಯನ್ನು ವಾಪಸ್‌ ಪಡೆಯಿತು. ಹೀಗೆ ಸರ್ಕಾರದ ನಿಯಮಾವಳಿ ಆದೇಶಗಳಲ್ಲಿ ಬಂಡವಾಳಶಾಹಿಗಳು ಹಸ್ತಕ್ಷೇಪ ನಡೆಸಿದ್ದಾರೆ.  

ಕುಸಿದ ಆರ್ಥಿಕ ವ್ಯವಸ್ಥೆ: ಸಂಕಷ್ಟ ಕಾಲದಲ್ಲಿ ಜನರ ಕೈ ಹಿಡಿಯುವುದು ಪ್ರಜಾಸತ್ತಾತ್ಮಕ ಆಡಳಿತ ವೈಖರಿ. ಕೋವಿಡ್‌ ನಿಯಂತ್ರಿಸಲು ಮುಂದಾಲೋಚನೆಯಿಲ್ಲದೆ ತೆಗೆದುಕೊಂಡ ಕ್ರಮಗಳು ಚೀನಾ ಹೊರತುಪಡಿಸಿ ಎಲ್ಲ ರಾಷ್ಟ್ರಗಳ ಆರ್ಥಿಕತೆಯನ್ನು ದುಸ್ಥಿತಿಗೆ ತಳ್ಳಿದೆ. ಇತ್ತೀಚೆಗೆ ಭಾರತದ ಜಿಡಿಪಿ ಬೆಳವಣಿಗೆ –23ರಷ್ಟು ದಾಖಲಿಸಿತು ಎಂಬುದು ನೆನಪಿಸಿಕೊಳ್ಳಬೇಕಾದ ಅಂಶ. ಲಾಕ್‌ಡೌನ್‌ ವೇಳೆ ವಲಸೆ ಕಾರ್ಮಿಕರು ನಗರಗಳಿಂದ ಹಳ್ಳಿಗೆ ಮರಳಿದ್ದರಿಂದ ಉದ್ಯೋಗ ನಷ್ಟವನ್ನು ಅನುಭವಿಸಿದರಲ್ಲದೆ, ಅವರ ಜೀವನ ನಿರ್ವಹಣೆಯೂ ಕಷ್ಟವಾಯಿತು. ಇವರಿಗೆ ಸರ್ಕಾರವೂ ದೊಡ್ಡ ಮಟ್ಟದ ನೆರವಿನ ಪ್ಯಾಕೇಜ್‌ ಘೋಷಿಸಿತ್ತಾದರೂ ಅದು ಎಲ್ಲರಿಗೂ ಪರಿಣಾಮಕಾರಿಯಾಗಿ ತಲುಪಿರುವ ಬಗ್ಗೆ ಸಂದೇಹವೂ ಇದೆ. ಅಲ್ಲದೆ, ಸೇವಾ ವಲಯದ ಬಹುತೇಕ ಮಂದಿ ನೌಕರಿ ಕಳೆದುಕೊಂಡಿದ್ದಾರೆ. ನವೋದ್ಯಮಗಳು, ಕೈಗಾರಿಕೆಗಳು ಮುಚ್ಚಿದವು. ಆರ್ಥಿಕ ಸಮಸ್ಯೆಯನ್ನು ವಿಶ್ವದ ಬಹುತೇಕ ರಾಷ್ಟ್ರಗಳು ಎದುರಿಸಿವೆ.

ಏಕಪಕ್ಷೀಯ ನಡೆ: ಭಾರತವು ಒಕ್ಕೂಟ ವ್ಯವಸ್ಥೆಯ ಮಾದರಿ ಪ್ರಜಾಪ್ರಭುತ್ವ ರಾಷ್ಟ್ರ. ದೇಶವು ಕೋವಿಡ್‌ ನಿಯಂತ್ರಿಸಲು ಕೈಗೊಂಡ ಕಾರ್ಯಕ್ರಮಗಳು ಮಹತ್ವವಾದವೇ. ಕೇಂದ್ರ ಮತ್ತು ರಾಜ್ಯ ಹಾಗೂ ಆಡಳಿತ ಮತ್ತು ವಿರೋಧ ಪಕ್ಷಗಳು ಒಂದಾಗಬೇಕಿತ್ತು. ಆದರೆ, ಇದಕ್ಕೆ ವಿರುದ್ಧವಾಗಿ ನಡೆದುಕೊಂಡವು. ಕೋವಿಡ್‌ ಸಂದರ್ಭದಲ್ಲಿಯೇ ಹೆಚ್ಚು ಮಸೂದೆಗಳನ್ನು ಸಿದ್ಧಪಡಿಸಲಾಯಿತು. ಜಾರಿಗೆ ತರಲು ಸುಗ್ರೀವಾಜ್ಞೆ ಹೊರಡಿಸಲಾಯಿತು. ವಿರೋಧ ಪಕ್ಷಗಳಿಗೆ ಸರ್ಕಾರವನ್ನು ಪ್ರಶ್ನಿಸಲು ಹೆಚ್ಚು ಅವಕಾಶ ಇರುವ ಸಂಸತ್‌ನ ಪ್ರಶ್ನೋತ್ತರ ಅವಧಿಯನ್ನು ರದ್ದು ಮಾಡಲಾಯಿತು ಮತ್ತು ಶೂನ್ಯವೇಳೆಯನ್ನು ಮೊಟಕುಗೊಳಿಸಲಾಯಿತು. ಈ ಅಂಶಗಳು ಪ್ರಜಾಪ್ರಭುತ್ವವನ್ನು ಅಣಕಿಸುವಂತಿವೆ.

ವಿಶ್ವಸಂಸ್ಥೆಯೇ ಕೋವಿಡ್‌ ನಿಯಂತ್ರಣದಲ್ಲಿ ಕೇರಳ ರಾಜ್ಯದ ಮಾದರಿಯನ್ನು ಹೊಗಳಿತ್ತು. ಹಲವು ರಾಜ್ಯಗಳು ಕೇರಳ ಮತ್ತು ದೆಹಲಿ ರಾಜ್ಯಗಳನ್ನು ಅನುಸರಿಸಿದ್ದವು. ಬೆಂಗಳೂರು ಕೂಡ ಕೋವಿಡ್‌ ನಿಯಂತ್ರಣದ ವಿಷಯದಲ್ಲಿ ಇತರ ಮಹಾನಗರಗಳಿಗೆ ಮಾದರಿಯಾಗಿತ್ತು. ಈ ಸಂದರ್ಭದಲ್ಲಿಯೇ ಕೇಂದ್ರವು ರಾಜ್ಯ ಸರ್ಕಾರಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಹಲವು ಏಕಪಕ್ಷೀಯ ನಿರ್ಧಾರವನ್ನು ಕೈಗೊಂಡಿತ್ತು. ಈ ಸಮಯದಲ್ಲಿ ಜನರು ಆಳುವ ಸರ್ಕಾರಕ್ಕೆ ಬೆಂಬಲವಾಗಿ ನಿಂತರು. ನಿಯಮಾವಳಿಗಳನ್ನು ಸ್ಫೂರ್ತಿಯಿಂದ ಪಾಲಿಸಿದರು. ಸರ್ಕಾರಗಳು ಈ ನಂಬಿಕೆಯನ್ನು ತಮ್ಮ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳಲು ಬಳಸಿಕೊಂಡವು. ಇದೀಗ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ  ಡೊನಾಲ್ಡ್‌ ಟ್ರಂಪ್‌ ಕೋವಿಡ್‌ ಚುನಾವಣಾ ಸರಕಾಗಿ ಬಳಸಿಕೊಳ್ಳುತ್ತಿದ್ದಾರೆ. ಅಮೆರಿಕಕ್ಕೆ ಕೋವಿಡ್‌ ಕಾಲಿಟ್ಟಾಗ ವಿರೋಧ ಪಕ್ಷಗಳನ್ನು ಟ್ರಂಪ್‌ ವಿಶ್ವಾಸಕ್ಕೆ ತೆಗೆದುಕೊಳ್ಳದೇ ವಾಗ್ದಾಳಿ ನಡೆಸುತ್ತಿದ್ದರು. ಬ್ರೆಜಿಲ್‌, ದಕ್ಷಿಣ ಆಫ್ರಿಕಾ, ರಷ್ಯಾ ಸೇರಿದಂತೆ ಹಲವು ದೇಶಗಳ ನಾಯಕರು ಟ್ರಂಪ್‌ ಅವರನ್ನೇ ಅನುಸರಿಸಿದ್ದಾರೆ. 

ವೈರಸ್‌ಗೆ ಕೋಮುವಾದದ ಬಣ್ಣ:  ಕೋವಿಡ್‌ನ ಆರಂಭಿಕ ಹಂತದಲ್ಲಿ ಭಾರತದಲ್ಲಿ ತಬ್ಲೀಗ್‌ ಜಮಾತ್‌ ನಂತಹ ಘಟನೆಗಳಿಗೆ ಕೋಮುವಾದದ ಬಣ್ಣ ಬಳಿಯಲಾಯಿತು. ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂದು ಕರೆಯಲಾಗುವ ಪತ್ರಿಕಾರಂಗವು ತನ್ನ ವಸ್ತುನಿಷ್ಠತೆಯನ್ನು ಮರೆತು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ಅಪರಾಧಿ ಸ್ಥಾನಕ್ಕೆ ನಿಲ್ಲಿಸುವ ಪ್ರಯತ್ನಕ್ಕೆ ಮುಂದಾಯಿತು. ಒಂದು ಕಡೆ ಬಾಂಬೆ ಹೈಕೋರ್ಟ್‌ ಈ ಪ್ರಕರಣದಲ್ಲಿ ತಬ್ಲೀಗ್‌ ಜಮಾತ್‌ನ ಅನುಯಾಯಿಗಳನ್ನು ‘ಬಲಿಪಶು’ ಮಾಡಲಾಗಿದೆ ಎಂದು ಹೇಳಿದ್ದಲ್ಲದೆ, ಪ್ರಕರಣವನ್ನು ವಜಾಗೊಳಿಸಿತು. ಇನ್ನೊಂದೆಡೆ ಲಕ್ಷಾಂತರ ಜನ ಸೇರುವ ಪುರಿ ಜಗನ್ನಾಥ ಯಾತ್ರೆಗೆ ಸುಪ್ರೀಂ ಕೋರ್ಟ್‌ ಅನುಮತಿ ನೀಡಿತು.       

ಮಾನವ ಹಕ್ಕುಗಳ ದಮನ: ವರ್ಷದ ಹಿಂದೆ ಆರಂಭವಾಗಿದ್ದ ಶಾಂತಿಯುತ ಪ್ರತಿಭಟನೆಗಳನ್ನು ನಿಯಂತ್ರಿಸಲು ಆಳುವ ಸರ್ಕಾರಗಳು ವಿಫಲವಾಗಿದ್ದವು. ಕೊನೆಗೆ ಈ ಪ್ರತಿಭಟನೆಗಳು ಹಿಂಸಾಚಾರಕ್ಕೂ ತಿರುಗಿ‌ದವು. ನಂತರ ಕೋವಿಡ್‌ನಿಂದಾಗಿ ಈ ಪ್ರತಿಭಟನೆಗಳೇನೊ ನಿಂತವು. ಆದರೆ, ಈ ಸಮಯವನ್ನು ಹೋರಾಟಗಾರರನ್ನು ಹತ್ತಿಕ್ಕಲು ಬಳಸಿಕೊಳ್ಳಲಾಯಿತು. ಹಾಂಗ್‌ಕಾಂಗ್‌ನ‌ ಪ್ರಜಾಸತ್ತಾತ್ಮಕ ಹೋರಾಟವನ್ನು ಚೀನಾ ಹತ್ತಿಕ್ಕಿದಂತೆಯೇ ಭಾರತದಲ್ಲಿ ಅನೇಕ ಚಿಂತಕರು ಮತ್ತು ಸಾಮಾಜಿಕ ಹೋರಾಟಗಾರರನ್ನು ಈ ಸಂದರ್ಭದಲ್ಲಿ ದೇಶದ್ರೋಹ ಪ್ರಕರಣ ದಾಖಲಿಸಿ ಬಂಧಿಸಲಾಯಿತು. ಅವರ ಮೇಲೆ ಹಲವು ಆರೋಪಗಳಿದ್ದು, ವಿಚಾರಣೆ ನಡೆಯುತ್ತಿದೆ.  

ಲಾಭದ ಲೆಕ್ಕಾಚಾರ: ಪ್ರಜಾಪ್ರಭುತ್ವ ರಾಷ್ಟ್ರಗಳು ಕೋವಿಡ್‌ ಸಂಕಷ್ಟದಲ್ಲಿ ಮುಳುಗಿದ್ದ ಲಾಭವನ್ನು ಪಡೆಯಲು ಚೀನಾ ಬಯಸಿತ್ತು. ತನ್ನ ವಿಸ್ತರಣಾವಾದಕ್ಕೆ ಬಳಸಿಕೊಂಡಿತು. ಲಡಾಖ್‌, ದಕ್ಷಿಣ ಚೀನಾ ಸಮುದ್ರದಲ್ಲಿ ತೋರಿದ ಅದರ ಆಕ್ರಮಣಕಾರಿ ನಡೆಯು ಅದರ ವಿಸ್ತರಣಾವಾದದ ಭಾಗವೇ ಆಗಿತ್ತು. ಆಫ್ರಿಕಾ ಮತ್ತು ದಕ್ಷಿಣ ಏಷ್ಯಾ ರಾಷ್ಟ್ರಗಳು ಕೋವಿಡ್‌ನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವುದನ್ನೇ ಚೀನಾ ತನ್ನ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ. ದಶಕದಿಂದಲೂ ಈ ದೇಶಗಳಿಗೆ ಹೆಚ್ಚು ಸಾಲಗಳನ್ನು ನೀಡಿದೆ. ಪ್ರಜಾಪ್ರಭುತ್ವದ ರಾಷ್ಟ್ರಗಳು ಸಂಕಷ್ಟಕ್ಕೆ ಸಿಲುಕಿದಾಗ ಪ್ರಜಾಪ್ರಭುತ್ವ ರಾಷ್ಟ್ರಗಳೇ ನೆರವಿಗೆ ಬರಬೇಕು. ಇತ್ತೀಚೆಗೆ ಭಾರತದ ವಿರುದ್ಧ ಗಡಿ ವಿಚಾರವಾಗಿ ನೇಪಾಳ ತಿರುಗಿಬಿದ್ದಿದೆ. ಇದಕ್ಕೆ ಚೀನಾ ಕುಮ್ಮಕ್ಕು ಇತ್ತು ಎಂಬುದು ತಿಳಿದ ವಿಷಯವೇ ಆಗಿದೆ.

ವಿಶ್ವ ಆರೋಗ್ಯ ಸಂಸ್ಥೆಯು ಅತ್ಯತ್ತಮ ಆರೋಗ್ಯ ಪರಿಸರ ನಿರ್ಮಿಸಲು ವೈದ್ಯಕೀಯ ನೆರವು ಮತ್ತು ಮೂಲ ಸೌಲಭ್ಯಗಳನ್ನು ಒದಗಿಸಲು ರಾಷ್ಟ್ರಗಳ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದೆ. ಆದರೆ, ಸಂಸ್ಥೆಯು ಚೀನಾ ಪರ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೊರನಡೆದಿದ್ದಾರೆ. ಕೊರೊನಾ ವೈರಸ್‌ ಅನ್ನು ಚೀನಾ ವೈರಸ್‌ ಎಂದು ಟ್ರಂಪ್‌ ಕರೆದಿದ್ದರು. ವೈರಸ್‌ ವಿಷಯವನ್ನು ಚೀನಾ ಗೌಪ್ಯವಾಗಿಟ್ಟಿತ್ತು. ವಿಶ್ವ ಆರೋಗ್ಯ ಸಂಸ್ಥೆ ಚೀನಾ ಹೇಳಿದಂತೆ ಕೇಳುತ್ತದೆ. ಹೀಗಾಗಿ ಆರೋಗ್ಯ ಸಂಸ್ಥೆಯೊಂದಿಗಿನ  ಸಂಬಂಧಗಳನ್ನು ಅಮೆರಿಕ ಕಡಿದುಕೊಂಡಿರುವುದಾಗಿ ಘೋಷಿಸಿದರು.  

ಭರವಸೆಯ ನಾಳೆಗಳು: ಪ್ರಜಾಪ್ರಭುತ್ವ ದೇಶಗಳು ಮೊದಲಿನಿಂದಲೂ ಬಡತನ ಹೋಗಲಾಡಿಸಲು, ಉತ್ತಮ ಆರೋಗ್ಯ, ಶಿಕ್ಷಣ ವ್ಯವಸ್ಥೆ ನೀಡಲು, ಜೀವನಮಟ್ಟ ಸುಧಾರಿಸಲು ಹೋರಾಡುತ್ತಿವೆ. ಕೋವಿಡ್‌ ಸಂದರ್ಭವು ಈ ಎಲ್ಲ ಕ್ಷೇತ್ರಗಳ ಅಭಿವೃದ್ಧಿಗೆ ಹಿನ್ನಡೆ ಉಂಟು ಮಾಡಿದೆ. ವೈಯಕ್ತಿಕ ಅಭಿವೃದ್ಧಿಯೊಂದಿಗೆ  ಇಡೀ ಸಮುದಾಯದ ಏಳಿಗೆ ಆಗಬೇಕಾಗಿರುವುದು ಇಂದಿನ ತುರ್ತಾಗಿದೆ. ಕೋವಿಡ್‌ ಕಾರಣ ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿಯ ಗುರಿಗಳಿಗೆ ಮತ್ತಷ್ಟು ಪ್ರಾಮುಖ್ಯತೆ ಸಿಕ್ಕಿದೆ. ದೇಶಗಳ ಆರ್ಥಿಕತೆಯು ಚೇತರಿಕೆಯಾಗದೇ ಯಾವುದೇ ಕ್ಷೇತ್ರದ ಅಭಿವೃದ್ಧಿಯೂ ಸಾಧ್ಯವಿಲ್ಲ. ಹೀಗಾಗಿಯೇ ವಿಶ್ವಸಂಸ್ಥೆಯು ದೇಶಗಳ ಸಮಸ್ಯೆಗಳಿಗೆ ಸ್ಪಂದಿಸುತ್ತಿದೆ. 

ಜಾಗತಿಕ ಪ್ರಜಾಪ್ರಭುತ್ವ ಮತ್ತು ಸಂಸತ್ತಿನ ಕಲ್ಪನೆಯು ಈ ಕೊರೊನಾ ಕಾಲಘಟ್ಟದಲ್ಲಿ ನನಸಾಗುತ್ತಿದೆ. ಇಡೀ ವಿಶ್ವದ ಜನರು ಗೋಡೆಗಳ ನಡುವೆ ಬಂಧಿಯಾಗಿದ್ದರೂ, ಅಂತರ ಹೆಚ್ಚಾಗಿದ್ದರೂ ಮಾನಸಿಕವಾಗಿ ಹತ್ತಿರವಾಗಿದ್ದಾರೆ. ಬುದ್ದಿಜೀವಿಗಳು, ಹೋರಾಟಗಾರರು, ರಾಜಕೀಯ ನಾಯಕರು, ಶಿಕ್ಷಣ ತಜ್ಞರು, ವಿಜ್ಞಾನಿಗಳೂ ಬೌದ್ಧಿಕವಾಗಿ ಕೊಡುಕೊಳ್ಳುವಿಕೆ ನಡೆಸಿದ್ದಾರೆ. ಸಮಸ್ಯೆಗಳ ಬೆಟ್ಟವನ್ನೇ ಕೋವಿಡ್‌ ಸೃಷ್ಟಿಸಿದ್ದು, ಜನರ ಮುಕ್ತ ಸಂವಹನವು ಹಲವು ಪರಿಹಾರ ಕ್ರಮಗಳಿಗೆ ದಾರಿ ಮಾಡಿಕೊಟ್ಟಿದೆ. ಇಂಥ ಪ್ರಜಾಪ್ರಭುತ್ವದ ಆಶಯಗಳು ಭರವಸೆಯ ನಾಳೆಗಳನ್ನು ನೀಡಲಿವೆ.   

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು