ಸೋಮವಾರ, ಡಿಸೆಂಬರ್ 6, 2021
25 °C

ವಿಶ್ಲೇಷಣೆ | ಮಹಿಳೆ ಮತ್ತು ಉದ್ಯಮಶೀಲತೆ

ಡಾ.ಗೀತಾ ಕೃಷ್ಣಮೂರ್ತಿ Updated:

ಅಕ್ಷರ ಗಾತ್ರ : | |

ನವೆಂಬರ್ 19, ಅಂತರರಾಷ್ಟ್ರೀಯ ಮಹಿಳಾ ಉದ್ಯಮಿಗಳ ದಿನ. ಅಂದು, ‘ಒಟ್ಟಿಗೆ ನಾವು ಬೆಳೆಯುತ್ತೇವೆ’ (ಟುಗೆದರ್ ವಿ ಗ್ರೋ) ಎಂಬ ಘೋಷವಾಕ್ಯದ ಅಡಿಯಲ್ಲಿ, ಮಹಿಳಾ ಉದ್ಯಮಿಗಳ ಸಂಸ್ಥೆ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮಹಿಳಾ ಉದ್ಯಮಿಗಳ ಕಿವಿಗಳಿಗೆ ಹಿತವಾದ ಆಶ್ವಾಸನೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡಿದ್ದಾರೆ.

‘ಮಹಿಳಾ ಉದ್ಯಮಿಗಳಿಗೆ ಹಣಕಾಸು ಸೌಲಭ್ಯ ಒದಗಿಸಲು ಒಂದು ಪ್ರತ್ಯೇಕ ಹಣಕಾಸು ಸಂಸ್ಥೆ ಸ್ಥಾಪಿಸಲು ಸರ್ಕಾರ ಚಿಂತನೆ ನಡೆಸಿದೆ. ಸ್ತ್ರೀಶಕ್ತಿ ಸಂಘಗಳು ಹಾಗೂ ಸ್ವಯಂ ಉದ್ಯಮಿಗಳಿಗೆ ನೆರವಾಗುವ ಯೋಜನೆಯಿದು’ ಎಂದಿದ್ದಾರೆ. ಸರ್ಕಾರದ ಸಹಾಯವನ್ನು ಕೋರಿ ಮಹಿಳಾ ಉದ್ಯಮಿಗಳು ಮಾಡಿದ ಮನವಿಗೂ ಅವರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಸರ್ಕಾರದ ಕೈಗಾರಿಕಾ ನೀತಿ– 2025ರಲ್ಲಿ ಮಹಿಳಾ ಉದ್ಯಮಿಗಳಿಗೆ ಪ್ರೋತ್ಸಾಹಧನ ನೀಡುವ ಯೋಜನೆಯನ್ನು ಸೇರಿಸುವುದಾಗಿ ಭರವಸೆ ಕೊಟ್ಟಿದ್ದಾರೆ.

‘ಅತಿಹೆಚ್ಚು ತಲಾವಾರು ಆದಾಯ ಗಳಿಸುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕಕ್ಕೆ ಮೂರನೇ ಸ್ಥಾನವಿದೆ. ಜನಸಂಖ್ಯೆಯ ಸುಮಾರು ಶೇಕಡ 65ರಷ್ಟು ಮಂದಿ ಜಿಡಿಪಿಗೆ ಕೊಡುಗೆ ನೀಡುತ್ತಾರೆ. ಶೇಕಡ 35ರಷ್ಟು ಮಹಿಳೆಯರು ಆರ್ಥಿಕ ಚಟುವಟಿಕೆಯಲ್ಲಿ ತೊಡಗಿದರೆ ಮಹಿಳೆಯರ ಆರ್ಥಿಕ ಸ್ಥಿತಿಯೂ ಉತ್ತಮಗೊಳ್ಳು
ತ್ತದೆ ಮತ್ತು ಕರ್ನಾಟಕದ ತಲಾವಾರು ಆದಾಯವೂ ಹೆಚ್ಚುತ್ತದೆ’ ಎಂದು ಮುಖ್ಯಮಂತ್ರಿ ಅಭಿಪ್ರಾಯ
ಪಟ್ಟಿದ್ದಾರೆ. ಇದು ಮಹಿಳಾ ಸಬಲೀಕರಣದ ದೃಷ್ಟಿಯಿಂದ ಸ್ವಾಗತಾರ್ಹ ಬೆಳವಣಿಗೆ.

‘ಒಬ್ಬಂಟಿಯಾಗಿ ಕೆಲಸ ಮಾಡಿದಲ್ಲಿ, ಮಾಡಲು ಸಾಧ್ಯವಾಗುವುದು ಅತ್ಯಂತ ಕಡಿಮೆ ಕೆಲಸ. ಆದರೆ, ಒಟ್ಟಿಗೆ ಸೇರಿ ಮಾಡಿದರೆ ನಾವು ಬೇಕಾದಷ್ಟು ಕೆಲಸವನ್ನು ಮಾಡಬಹುದು’ ಎಂಬ ಅಮೆರಿಕದ ಲೇಖಕಿ, ಹೆಲೆನ್ ಕೆಲ್ಲರ್ ಅವರ ಪ್ರಖ್ಯಾತ ಹೇಳಿಕೆ ಇಲ್ಲಿಗೆ ಅತ್ಯಂತ ಪ್ರಸ್ತುತ.

ಪ್ರಸ್ತುತ ಸಮಾಜದ ಸಂರಚನೆಯಲ್ಲಿ ಮಹಿಳೆಯರಿಗೆ ಕುಟುಂಬದ ಜವಾಬ್ದಾರಿಗಳು ಪುರುಷರಿಗಿಂತ ಹೆಚ್ಚು ಎಂಬುದನ್ನು ಅಲ್ಲಗಳೆಯುವಂತಿಲ್ಲ. ಹೀಗಿರುವಾಗ, ಕಾರ್ಪೊರೇಟ್ ವಲಯದ ಕೆಲಸದ ಸಂಸ್ಕೃತಿಗೆ ಹೊಂದಿಕೊಂಡು, ಕುಟುಂಬದ ಮತ್ತು ಮಕ್ಕಳ ಜವಾಬ್ದಾರಿಯನ್ನೂ ನಿರ್ವಹಿಸುವುದು ಅವರಿಗೆ ಸವಾಲಿನ ಕೆಲಸ. ಇಂಥ ಪರಿಸ್ಥಿತಿಯಲ್ಲಿ, ಸ್ವಯಂ ಉದ್ಯಮವನ್ನು ಪ್ರಾರಂಭಿಸುವುದು ಸ್ವಾವಲಂಬಿಯಾಗಿರಲು ಬಯಸುವ ಮಹಿಳೆಯರಿಗೆ ಅತ್ಯಂತ ಸೂಕ್ತ ಆಯ್ಕೆ. ಆದರೆ ಅದಕ್ಕೆ ಬೇಕಾದ ಪರಿಸರವನ್ನು ಸೃಷ್ಟಿ ಮಾಡುವುದೂ ಸಮುದಾಯ, ಸಮಾಜ ಹಾಗೂ ಸರ್ಕಾರದ ಜವಾಬ್ದಾರಿಯಾಗಿರುತ್ತದೆ. ಅಷ್ಟೇ ಅಲ್ಲದೆ ಈಗಾಗಲೇ ಯಶಸ್ವಿಯಾಗಿರುವ ಉದ್ಯಮಿಗಳ ಜವಾಬ್ದಾರಿಯೂ ಆಗಿರುತ್ತದೆ.

ಕಳೆದ ಎರಡು ದಶಕಗಳಲ್ಲಿ ಮಹಿಳಾ ಕಾರ್ಮಿಕರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ವಿಶ್ವಬ್ಯಾಂಕ್‍ ಅಂದಾಜಿನ ಪ್ರಕಾರ, 2005ರಲ್ಲಿ, ದುಡಿಯುತ್ತಿದ್ದ ಮಹಿಳಾ ಕಾರ್ಮಿಕರ ಸಂಖ್ಯೆ ಶೇಕಡ 26. ಆದರೆ, 2019ರ ವೇಳೆಗೆ ಅದು ಶೇಕಡ 23.3ಕ್ಕೆ ಇಳಿದಿದೆ. ಇದಕ್ಕೆ ಕಾರಣ ಮಹಿಳೆಯರ ಮೇಲೆ ವಿಧಿಸಲಾಗುವ ಸಾಮಾಜಿಕ ಹಾಗೂ ಸಾಂಸ್ಕೃತಿಕ ನಿರ್ಬಂಧಗಳು ಮತ್ತು ಅವರಿಗೆ ದೊರೆಯುವ ಸೀಮಿತ ಉದ್ಯೋಗಾವಕಾಶಗಳು. ‘ಜಾಗತಿಕವಾಗಿ ಸ್ತ್ರೀ–ಪುರುಷರಲ್ಲಿ ಇರುವ ಅಂತರ’ದ ಬಗೆಗಿನ ವಿಶ್ವ ಆರ್ಥಿಕ ವೇದಿಕೆಯ 2021ರ ವರದಿಯ ಪ್ರಕಾರ, 153 ದೇಶಗಳ ಪಟ್ಟಿಯಲ್ಲಿ ಭಾರತ 143ನೆಯ ಸ್ಥಾನದಲ್ಲಿದೆ! ಹಾಗಾಗಿಯೇ, ಜಿಡಿಪಿಗೆ ಮಹಿಳೆಯರ ಕೊಡುಗೆಯ ಜಾಗತಿಕ ಸರಾಸರಿ ಶೇ 37ರಷ್ಟಾದರೆ ಭಾರತದ ಮಹಿಳೆಯರ ಕೊಡುಗೆ ಕೇವಲ ಶೇ 18.

ಇದಕ್ಕೆ ಕಾರಣ, ಉದ್ಯಮಿಗಳಾಗಿ ತಮ್ಮ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುವ ಮಹಿಳೆಯರ ಸಂಖ್ಯೆ ಕೇವಲ ಶೇ 14. ಕಾರಣ ಮತ್ತಲ್ಲಿಗೇ ಬಂದು ನಿಲ್ಲುತ್ತದೆ. ಹೆಚ್ಚಾದ ಕೌಟುಂಬಿಕ ಕರ್ತವ್ಯಗಳು, ಪ್ರಯಾಣಿಸಲು ಇರುವ ಸೀಮಿತ ಅವಕಾಶಗಳು, ಸಮುದಾಯ ಮತ್ತು ಸಮಾಜ ಮಹಿಳೆಯರ ಮೇಲೆ ಸತತವಾಗಿ ಇಡುವ ಕಣ್ಗಾವಲು. ಇವು, ಮಹಿಳೆಗೆ ತನ್ನ ಆಸಕ್ತಿಯ ಉದ್ಯೋಗವನ್ನು ಆಯ್ಕೆ ಮಾಡಿಕೊಳ್ಳಲು ಮತ್ತು ಆರ್ಥಿಕ ಸ್ವಾವಲಂಬನೆಯನ್ನು ಸಾಧಿಸಲು ಅಡ್ಡಿಯಾಗಿವೆ.

ಭಾರತದ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂರಚನೆಯ ಭಾಗವಾಗಿರುವ ಮತ್ತು ಆಳವಾಗಿ ಬೇರುಬಿಟ್ಟಿರುವ ಪಿತೃಪ್ರಧಾನ ಆಚರಣೆಗಳು ಮತ್ತು ಸಂಪ್ರದಾಯಗಳು, ಕೊರೊನಾದ ಈ ಸಂದರ್ಭದಲ್ಲಿ ಮಹಿಳೆಯರಿಗೆ ಮತ್ತಷ್ಟು ಅನಿರೀಕ್ಷಿತ ಸಂಕಷ್ಟಗಳನ್ನು ತಂದೊಡ್ಡಿವೆ. ರಾಷ್ಟ್ರೀಯ ಮಹಿಳಾ ಆಯೋಗದ ವರದಿಯ ಪ್ರಕಾರ, ಕಳೆದ ಆರು ವರ್ಷಗಳ ಪೈಕಿ 2020ರಲ್ಲಿ ಕೌಟುಂಬಿಕ ದೌರ್ಜನ್ಯಕ್ಕೆ ಸಂಬಂಧಿಸಿ ಅತಿ ಹೆಚ್ಚು ದೂರುಗಳು ದಾಖಲಾಗಿವೆ.

ಭಾರತ ತನ್ನ ಐದು ಲಕ್ಷ ಕೋಟಿ ಡಾಲರುಗಳ ಆರ್ಥಿಕ ಗುರಿಯನ್ನು ತಲುಪಲು, ಮಹಿಳೆಯರು ತಮ್ಮ ಉದ್ಯಮಶೀಲ ಸಾಮರ್ಥ್ಯದಿಂದ ಗಣನೀಯ ಯೋಗದಾನವನ್ನು ಮಾಡಬಲ್ಲರು. ಆದರೆ, ಆರ್ಥಿಕತೆಗೆ ಮಹಿಳೆ ಮತ್ತು ಯುವತಿಯರ ಯಾವ ಕೆಲಸಗಳು ಪೂರಕವಾಗುತ್ತವೆ ಎಂಬ ಬಗ್ಗೆ ಮಾಡಿದ ಒಂದು ಅಧ್ಯಯನದ ಪ್ರಕಾರ, ಭಾರತದಲ್ಲಿ ಶೇಕಡ 91ರಷ್ಟು ಮಹಿಳೆಯರು ಅಸಂಘಟಿತ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾರೆ. ಅವರಿಗೆ ನಿಶ್ಚಿತವಾದ ವೇತನ ಮತ್ತು ಸುಭದ್ರ ಭವಿಷ್ಯ ಇರುವುದಿಲ್ಲ. ಸಾಮಾನ್ಯವಾಗಿ ಶೋಷಣೆಗೆ ಒಳಗಾಗುತ್ತಾರೆ. ತಮಗೆ ಇರುವ ಹಕ್ಕುಗಳ ಬಗ್ಗೆಯಾಗಲೀ ಸೌಲಭ್ಯಗಳ ಬಗ್ಗೆಯಾಗಲೀ ಇವರಿಗೆ ತಿಳಿದಿರುವುದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಆರ್ಥಿಕ ಸೌಲಭ್ಯವನ್ನು ಬಳಸಿಕೊಳ್ಳಲು ಇರುವ ಅಡ್ಡಿ ಅವರ ಉದ್ಯಮಶೀಲತೆಗೆ ಅತಿ ದೊಡ್ಡ ತೊಡಕಾಗಿದೆ. 

ಆದ್ದರಿಂದ, ಮಹಿಳೆಯರನ್ನು ಸಬಲರನ್ನಾಗಿಸಬೇಕು ಮತ್ತು ಸಮರ್ಥರನ್ನಾಗಿಸಬೇಕು ಎಂಬ ನಿಜವಾದ ಕಾಳಜಿಯಿದ್ದಲ್ಲಿ, ಸ್ತ್ರೀ ಅಥವಾ ಪುರುಷ ಎಂಬ ಕಾರಣಕ್ಕೆ ಅವರು ಇಂಥಿಂಥದ್ದೇ ಕೆಲಸ ಮಾಡಬೇಕು ಎಂದು ಸಮಾಜದಲ್ಲಿ ಬೇರೂರಿರುವ ಕಲ್ಪನೆಗಳನ್ನು ಮೊದಲು ತೊಡೆದುಹಾಕುವ ಪ್ರಯತ್ನಗಳನ್ನು ಮಾಡುವುದು, ವಿವಿಧ ಕೌಶಲಗಳಲ್ಲಿ ತರಬೇತಿ ನೀಡುವ ಮೂಲಕ ಅವರನ್ನು ಹುರಿದುಂಬಿಸುವುದು, ಆರ್ಥಿಕ ನೆರವು ಪಡೆಯಲು ಅವಕಾಶ ಕಲ್ಪಿಸುವುದು ಮತ್ತು ಅವರಿಗೆ ಲಭ್ಯವಿರುವ ಕಲ್ಯಾಣ ಯೋಜನೆಗಳನ್ನು ಪಡೆಯಲು ಇರುವ ಹಕ್ಕುಗಳ ಬಗ್ಗೆ ಅರಿವು ಮೂಡಿಸುವುದು ಮಹಿಳಾ ಉದ್ಯಮಶೀಲತೆಯನ್ನು ಬೆಳೆಸುವ ದಿಸೆಯಲ್ಲಿ ಕೆಲಸ ಮಾಡುತ್ತಿರುವವರ ಮೊದಲ ಆದ್ಯತೆಯಾಗಬೇಕು. ಈ ದಿಕ್ಕಿನಲ್ಲಿ, ಮಹಿಳೆಯರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುವ ಮೂಲಕ ಅವರಿಗೆ ಬೆಂಬಲ ನೀಡಬೇಕು, ಅಸಂಘಟಿತ ಕ್ಷೇತ್ರದಲ್ಲಿನ ಮಹಿಳಾ ಉದ್ಯೋಗಿಗಳಿಗೆ ಸೌಲಭ್ಯಗಳು ಮತ್ತು ಆದಾಯ ಭದ್ರತೆಯನ್ನು ಒದಗಿಸುವತ್ತ ಗಮನ ಕೇಂದ್ರೀಕರಿಸಬೇಕು.

ಹೆಚ್ಚಿನ ಔಪಚಾರಿಕ ಶಿಕ್ಷಣವನ್ನು ಪಡೆಯದ ಅನೇಕ ಗ್ರಾಮೀಣ ಮಹಿಳೆಯರು ಇಂಥ ಬೆಂಬಲದ ಪ್ರಯೋಜನ ಪಡೆದು, ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದ ಉದಾಹರಣೆಗಳು ಇವೆ. ಈ ಪ್ರಯತ್ನಗಳು ಫಲ ನೀಡಬೇಕಾದರೆ, ಉದ್ಯಮಶೀಲ ಮಹಿಳೆಯರು ಪರಸ್ಪರ ಸಂಪರ್ಕದಲ್ಲಿರಬೇಕು, ಪರಸ್ಪರರಿಂದ ಸ್ಫೂರ್ತಿ ಪಡೆಯಬೇಕು. ಆಗ ಮಾತ್ರ ಸಾಮರ್ಥ್ಯ ಸಂವರ್ಧನೆ, ಆಶಾವಾದಿತ್ವ, ಧೈರ್ಯ ಮತ್ತು ಸಹಾನುಭೂತಿಯ ಗುಣಗಳನ್ನು ಮೈಗೂಡಿಸಿಕೊಳ್ಳಲು ಸಾಧ್ಯವಾಗುತ್ತದೆ.

ಒಂದು ಸಮೀಕ್ಷೆಯ ಪ್ರಕಾರ, ಸ್ವಯಂ ಉದ್ಯಮದಲ್ಲಿ ತೊಡಗಿಸಿಕೊಂಡ ಮಹಿಳೆಯರಲ್ಲಿ ಶೇಕಡ 90ರಷ್ಟು ಮಂದಿ ಈ ನಿರ್ಧಾರದಿಂದ ತಮಗೆ ಅತ್ಯಂತ ಸಂತೋಷವಾಗಿರುವುದಾಗಿ ಹೇಳಿದ್ದಾರೆ. ಶೇ 80ರಷ್ಟು ಮಹಿಳೆಯರು ತಾವು ಉದ್ಯಮದಲ್ಲಿ ತೊಡಗಿದ ನಂತರ ತಮ್ಮ ಸಮುದಾಯ ಮತ್ತು ಕುಟುಂಬದಲ್ಲಿ ತಮ್ಮ ಸ್ಥಾನಮಾನ ಹೆಚ್ಚಿತೆಂದು ಹೇಳಿದ್ದರೆ, ಶೇ 73ರಷ್ಟು ಮಹಿಳೆಯರು ಆರ್ಥಿಕ ಸ್ವಾವಲಂಬನೆಯಿಂದಾಗಿ ತಮ್ಮ ಆತ್ಮವಿಶ್ವಾಸ ಹೆಚ್ಚಾಗಿದೆಯೆಂದು ಹೆಮ್ಮೆಪಟ್ಟಿದ್ದಾರೆ. ಮಹಿಳಾ ಸಬಲೀಕರಣ ಮತ್ತು ಉದ್ಯಮಶೀಲತೆ ಜೀವನ
ದಲ್ಲಿ ಎಂಥ ಸಕಾರಾತ್ಮಕ ಬದಲಾವಣೆಯನ್ನು ತರಬಲ್ಲದು ಎಂಬುದನ್ನು ಈ ಅಂಕಿ ಅಂಶಗಳ ಮೂಲಕ ಮಹಿಳೆಯರಿಗೆ ಮನದಟ್ಟು ಮಾಡುವ ಕೆಲಸವೂ ಆಗಬೇಕು.

ಈ ಎಲ್ಲ ಪ್ರಯತ್ನಗಳಾದಾಗ ಮಾತ್ರ, ಮಹಿಳೆಯರಿಗೆ ಸಮಾಜೋ ಸಾಂಸ್ಕೃತಿಕ ಹಾಗೂ ಸಮಾಜೋ ಆರ್ಥಿಕ ಅಡಚಣೆಗಳನ್ನು ನಿವಾರಿಸಿಕೊಳ್ಳುವುದು ಸಾಧ್ಯವಾಗುತ್ತದೆ ಮತ್ತು ಆಗಮಾತ್ರ ಮಹಿಳಾ ಉದ್ಯಮಿಗಳಿಗಾಗಿ ಪ್ರತ್ಯೇಕ ಹಣಕಾಸು ಸಂಸ್ಥೆಯನ್ನು ಕಲ್ಪಿಸಲು ಉದ್ದೇಶಿಸಿರುವ ಸರ್ಕಾರದ ಪ್ರಯತ್ನ ಅರ್ಥಪೂರ್ಣ
ಎನಿಸುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು