ಸೋಮವಾರ, ಡಿಸೆಂಬರ್ 6, 2021
23 °C

ವಿಶ್ಲೇಷಣೆ | ಕಲಾಪ: ಕನ್ನಡಕ್ಕೆ ಸಲ್ಲುವುದೇ ನ್ಯಾಯ?

ಕೆ.ಬಿ.ಕೆ. ಸ್ವಾಮಿ Updated:

ಅಕ್ಷರ ಗಾತ್ರ : | |

ರಾಜ್‌ನಾರಾಯಣ್ ಹೆಸರು ನಮ್ಮಲ್ಲಿ ಅನೇಕರಿಗೆ ಪರಿಚಿತ. 1971ರ ಸುಮಾರಿಗೆ ಸಮಾಜವಾದಿ ನಾಯಕ ಮಧು ಲಿಮಯೆ ಮತ್ತು ವೇದಮೂರ್ತಿ ನಡುವಣ ಪ್ರಕರಣದ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ಮಹತ್ವದ ಘಟ್ಟ ತಲುಪಿರುತ್ತದೆ. ಈ ಪ್ರಕರಣದಲ್ಲಿ ತಾನೂ ಒಬ್ಬ ಪಕ್ಷಗಾರನಾಗಿ ಸೇರಿಕೊಂಡು ನ್ಯಾಯಾಲಯಕ್ಕೆ ಸಹಕರಿಸಲು ರಾಜ್‌ನಾರಾಯಣ್ ಮಧ್ಯಂತರ ಅರ್ಜಿಯೊಂದನ್ನು ಸಲ್ಲಿಸುತ್ತಾರೆ. ಅರ್ಜಿಯನ್ನು ಹಿಂದಿಯಲ್ಲೇ ಸಲ್ಲಿಸಲಾಗಿತ್ತು. ವಾದವನ್ನೂ ಹಿಂದಿಯಲ್ಲಿಯೇ ಮಾಡುವಂತೆ ತಮ್ಮ ಪರ ವಕೀಲರಿಗೆ ಅವರು ಸೂಚಿಸಿರುತ್ತಾರೆ. ಆದರೆ ಕಲಾಪದ ಭಾಷೆಯಾದ ಇಂಗ್ಲಿಷ್‌ನಲ್ಲೇ ವಾದ ಮಂಡಿಸಲು ಸುಪ್ರೀಂ ಕೋರ್ಟ್ ತಾಕೀತು ಮಾಡುತ್ತದೆ. ಆಡುಭಾಷೆಯನ್ನು ಬಿಟ್ಟು ಬೇರೆ ಭಾಷೆಯಲ್ಲಿ ವಾದ ಮಂಡಿಸಬಾರದು ಎಂದು ರಾಜ್‌ನಾರಾಯಣ್ ಪಟ್ಟು ಹಿಡಿಯುತ್ತಾರೆ.

ಸಂವಿಧಾನದ 343ನೇ ವಿಧಿಯನ್ನು ಉಲ್ಲೇಖಿಸಿ, ಕಲಾಪವು ಇಂಗ್ಲಿಷ್‌ನಲ್ಲೇ ನಡೆಯಬೇಕು, ಬೇರೆ ಭಾಷೆಯನ್ನು ಬಳಸಲು ಅವಕಾಶವಿಲ್ಲ ಎಂದು ಸುಪ್ರೀಂ ಕೋರ್ಟ್ ಮಧ್ಯಂತರ ಅರ್ಜಿಯ ಮೇಲಿನ ವಿಚಾರಣೆಗೆ ನಿರಾಕರಿಸುತ್ತದೆ. ಈ ತೀರ್ಪು ಬಂದ ಐವತ್ತು ವರ್ಷಗಳ ಕಾಲಾವಧಿಯಲ್ಲಿ ಹೆಚ್ಚಿನ ಬದಲಾವಣೆಯೇನೂ ಕಂಡುಬಂದಿಲ್ಲ.

ರಾಜ್‌ನಾರಾಯಣ್ ಸ್ಥಾನದಲ್ಲಿ ಸಾಮಾನ್ಯ ಬಾಧಿತನನ್ನೂ ಹಿಂದಿಯ ಸ್ಥಾನದಲ್ಲಿ ಕನ್ನಡವನ್ನೂ ಇಟ್ಟು ಹೋಲಿಸಿ ನೋಡಿದರೆ, ಕರ್ನಾಟಕದ ಆಡಳಿತ ಭಾಷೆಯಾದ ಕನ್ನಡದ ಅನುಷ್ಠಾನ ಕೋರ್ಟ್‌ಗಳಲ್ಲಿ ಯಾವ ಮಟ್ಟದಲ್ಲಿದೆ ಎಂಬುದನ್ನು ಅರಿಯಬಹುದಾಗಿದೆ.

ನ್ಯಾಯಾಂಗ ಕ್ಷೇತ್ರದಲ್ಲಿ ಕನ್ನಡವನ್ನು ಅನುಷ್ಠಾನಗೊಳಿಸಲು ಕೆಳ ಹಂತದ ಮತ್ತು ವಿಚಾರಣಾ ನ್ಯಾಯಾಲಯಗಳಲ್ಲಿ ಕನ್ನಡವನ್ನು ಕಲಾಪದ ಭಾಷೆಯನ್ನಾಗಿ ಜಾರಿಗೆ ತರಲಾಗಿದೆ. ಇಷ್ಟಕ್ಕೆ ಮಾತ್ರ ಕನ್ನಡ ಸೀಮಿತವೇ? ನೆಲದ ಭಾಷೆಯನ್ನು ನ್ಯಾಯಾಲಯದ ಕಲಾಪದಲ್ಲಿ ಬಳಸಲು ಯಾವುದೇ ಸಾಂವಿಧಾನಿಕ ತೊಡಕು ಇರದ ರಾಜ್ಯ ಗ್ರಾಹಕರ ವೇದಿಕೆ, ಕರ್ನಾಟಕ ಆಡಳಿತ ನ್ಯಾಯಮಂಡಳಿಗೆ ಏಕೆ ಅನ್ವಯಿಸಬಾರದು?

ಕೆನಡಾದ ನ್ಯಾಯಾಲಯಗಳ ಕಲಾಪದಲ್ಲಿ ಇಂಗ್ಲಿಷ್ ಮತ್ತು ಫ್ರೆಂಚ್ ಭಾಷೆಯನ್ನು ಅಧಿಕೃತವಾಗಿ ಬಳಸಲಾಗುತ್ತಿದೆ. ಸ್ವಿಟ್ಜರ್ಲೆಂಡ್‌ನಲ್ಲಿ ಇಂಗ್ಲಿಷ್, ಫ್ರೆಂಚ್ ಮತ್ತು ಇಟಾಲಿಯನ್ ಅನ್ನು ಅಧಿಕೃತವಾಗಿ ನ್ಯಾಯಾಲಯದಲ್ಲಿ ಅಳವಡಿಸಿಕೊಂಡಿದ್ದಾರೆ. ಅರಬ್ ಎಮಿರೇಟ್ಸ್ ಗಣರಾಜ್ಯದ ಅಬುಧಾಬಿಯಲ್ಲಿ ಅರೇಬಿಕ್, ಇಂಗ್ಲಿಷ್ ಜೊತೆಗೆ ಹಿಂದಿಯನ್ನು ನ್ಯಾಯಾಲಯದ ಅಧಿಕೃತ ಕಲಾಪದ ಭಾಷೆಯಾಗಿ ಅಳವಡಿಸಿಕೊಳ್ಳಲಾಗಿದೆ.

ನ್ಯಾಯ ವಿತರಣೆ ಪ್ರಕ್ರಿಯೆಯನ್ನು ಸರಳಗೊಳಿಸುವ ಮತ್ತು ಕಲಾಪಗಳನ್ನು ಬಾಧಿತರ ಆಡುಭಾಷೆಯಲ್ಲಿಯೇ ನಡೆಸುವ ದಿಸೆಯಲ್ಲಿ ಅಮೆರಿಕದ ಫೆಡರಲ್ ಕೋರ್ಟ್‌ಗಳ ನಿಲುವು ಅನುಕರಣೀಯ. ಅಮೆರಿಕದ ನ್ಯಾಷನಲ್ ಇಂಟರ್‌ಪ್ರಿಟರ್ ಡೇಟಾ ಬೇಸ್‌ನಲ್ಲಿ 3,600 ನೋಂದಾಯಿತ ಭಾಷಾಂತರಕಾರರಿದ್ದು ಜಗತ್ತಿನ 180 ಭಾಷೆಗಳನ್ನು ಅಲ್ಲಿನ ನ್ಯಾಯಾಲಯಗಳಲ್ಲಿ ಸರಾಗವಾಗಿ ರಿಯಲ್ ಟೈಮ್ ಆಧಾರದಲ್ಲಿ ಭಾಷಾಂತರಿಸುತ್ತಾರೆ.

ಭಾಷೆಯು ಅಭಿವ್ಯಕ್ತಿಯ ಪರಿಣಾಮಕಾರಿ ಸಾಧನ. ವ್ಯಕ್ತಿಯೊಬ್ಬನು ತಾನಾಡುವ ಭಾಷೆಯಲ್ಲಿಯೇ ತನ್ನ ನೆಲದ ಕಾನೂನು, ನ್ಯಾಯಾಲಯದ ತೀರ್ಪುಗಳನ್ನು ಬಯಸುವುದು ಸ್ವಾಭಾವಿಕ. ಜನಸಮುದಾಯವು
ಸ್ವಯಂಪ್ರೇರಣೆಯಿಂದ ಸಂವಿಧಾನವನ್ನಾಗಲೀ ಶಾಸನಗಳನ್ನಾಗಲೀ ಅರಿಯಲು ಮುಂದಾಗದಿರಲು ಕಾರಣ ಶಾಸನಗಳಲ್ಲಿ ಬಳಸುವ ಭಾಷೆ, ಕಠಿಣ ಪದಗಳು, ಜಟಿಲವಾದ ವಾಕ್ಯಗಳು. ಶಾಸನಸಭೆಗಳು ರಚಿಸುವ ಶಾಸನಗಳು, ನ್ಯಾಯಾಲಯದ ತೀರ್ಪುಗಳು ಜನರಿಗೆ ತಿಳಿಯದ ಭಾಷೆಯಲ್ಲಿ ಪ್ರಕಟವಾಗುವುದು ಮತ್ತು
ವಿಶ್ಲೇಷಿಸಲ್ಪಡುವುದು, ಸ್ವಾತಂತ್ರ್ಯಾ ನಂತರದಲ್ಲಿ ನಾವೆಲ್ಲರೂ ಸೇರಿ ಪ್ರಜಾಸತ್ತೆಗೆ ಎಸಗಿದ ಬೌದ್ಧಿಕ ವಂಚನೆ ಎಂಬುದನ್ನು ಅಲ್ಲಗಳೆಯಲಾಗದು.

ಭಾಷೆಯ ಆಯಾಮವನ್ನು ಬದಿಗಿಟ್ಟು ನೋಡುವುದಾದರೆ, ನ್ಯಾಯಾಲಯದ ಮೊರೆಹೋದ ಕಕ್ಷಿದಾರ ಮತ್ತು ವಕೀಲರ ನಡುವೆ ಇರುವುದು ಗ್ರಾಹಕ ಮತ್ತು ಸೇವಾ ಪೂರೈಕೆದಾರನ ಸಂಬಂಧ. ಒಬ್ಬ ಗ್ರಾಹಕನಿಗೆ ತಾನು ಕೊಳ್ಳುವ ಸರಕು ಮತ್ತು ಸೇವೆಗಳ ಕುರಿತಾದ ಮಾಹಿತಿಯನ್ನು ತನ್ನ ಭಾಷೆಯಲ್ಲಿಯೇ ಕೇಳಿ ಪಡೆಯಲು ಸಾಧ್ಯವಿರುವಾಗ ಆ ಹಕ್ಕುಗಳು ಕಕ್ಷಿದಾರನಿಗೂ ಲಭಿಸದಂತಹ ವ್ಯವಸ್ಥೆ ನ್ಯಾಯಸಮ್ಮತವಾದದ್ದೇ?!

ಕಕ್ಷಿದಾರನು ತನ್ನ ಆಲೋಚನೆಗಳನ್ನು ಅತ್ಯಂತ ಪರಿಣಾಮಕಾರಿಯಾಗಿಯೂ ಸರಳವಾಗಿಯೂ ಪ್ರಕಟ
ಪಡಿಸಲು ಸಂವಿಧಾನದ ವಿಧಿ 19(1)(ಎ)ಯಲ್ಲಿನ ವಾಕ್‌ ಸ್ವಾತಂತ್ರ್ಯದ ಹಕ್ಕು ಮತ್ತು 21ನೇ ವಿಧಿಯು ಪರಸ್ಪರ ಪೂರಕವಾಗಿವೆ. ರಾಜ್ಯಪಾಲರು ರಾಷ್ಟ್ರಪತಿಯ ಪೂರ್ವಾನುಮತಿಯೊಂದಿಗೆ ಆ ರಾಜ್ಯದ ಭಾಷೆಯನ್ನು ಹೈಕೋರ್ಟಿನ ಆಡಳಿತ ಭಾಷೆಯನ್ನಾಗಿಸಲು ಸಂವಿಧಾನದ ವಿಧಿ 348(2) ಮತ್ತು ಅಫಿಶಿಯಲ್ ಲ್ಯಾಂಗ್ವೇಜ್ ಆ್ಯಕ್ಟ್‌, 1963ರ ಕಲಂ 7 ಅನುವು ಮಾಡಿಕೊಟ್ಟಿವೆ. ಇದನ್ನು ಬಳಸಿಕೊಂಡು ಮಧ್ಯಪ್ರದೇಶ, ಉತ್ತರಪ್ರದೇಶ, ರಾಜಸ್ಥಾನ, ಬಿಹಾರ ಹೈಕೋರ್ಟ್‌ಗಳಲ್ಲಿ ಹಿಂದಿಯನ್ನು ಅಧಿಕೃತವಾಗಿ ಬಳಸಲಾಗುತ್ತಿದೆ.

ಯಾವುದೇ ರಾಜ್ಯದ ಹೈಕೋರ್ಟ್‌ಗಳಲ್ಲಿ ಸ್ಥಳೀಯ ಭಾಷೆಯನ್ನು ಆಡಳಿತ ಭಾಷೆಯಾಗಿ ಜಾರಿಗೆ ತರಲು ಮುಖ್ಯ ನ್ಯಾಯಮೂರ್ತಿಯವರ ಅನುಮೋದನೆ ಪಡೆಯಬೇಕೆಂಬ 1965ರ ಕ್ಯಾಬಿನೆಟ್ ಸಮಿತಿಯ ಆದೇಶ ಇದೆ. ಇದು ಸಂವಿಧಾನಬಾಹಿರ ನಿಯಮ. ಇದನ್ನು ನೆಪ ಮಾಡಿಕೊಂಡು ಕನ್ನಡ, ಬಂಗಾಳಿ, ತಮಿಳು, ಗುಜರಾತಿ ಭಾಷೆಗಳನ್ನು ಆ ರಾಜ್ಯಗಳ ಹೈಕೋರ್ಟ್‌ಗಳಲ್ಲಿ ಬಳಸಲು ಅವಕಾಶ ಕೋರಿ ಸಲ್ಲಿಸಲಾದ ಪ್ರಸ್ತಾವಗಳನ್ನು ಕೇಂದ್ರ ಸರ್ಕಾರವು ನನೆಗುದಿಯಲ್ಲಿರಿಸಿದೆ. ಕನ್ನಡವನ್ನು ಪೂರ್ಣ ಪ್ರಮಾಣದಲ್ಲಿ ಹೈಕೋರ್ಟ್‌ನಲ್ಲಿ ಕಲಾಪದ ಭಾಷೆಯಾಗಿ ಜಾರಿಗೆ ತರುವ ದಿಸೆಯಲ್ಲಿ ಕರ್ನಾಟಕವು 1997, 1999, 2012 ಮತ್ತು 2016ರಲ್ಲಿ ಪ್ರಸ್ತಾವ ಸಲ್ಲಿಸಿದೆ. ಈ ಪ್ರಸ್ತಾವಗಳನ್ನು ಕೇಂದ್ರ ಸರ್ಕಾರ ತಿರಸ್ಕರಿಸಿಲ್ಲ.

ಸಾಂವಿಧಾನಿಕ ಚೌಕಟ್ಟಿನಲ್ಲಿಯೇ ಉತ್ತರಪ್ರದೇಶ, ಮಧ್ಯಪ್ರದೇಶ, ಬಿಹಾರ, ಛತ್ತೀಸಗಡ ಇನ್ನಿತರೇ ಹಿಂದಿ ಭಾಷಿಕ ರಾಜ್ಯಗಳಲ್ಲಿನ ಹೈಕೋರ್ಟ್‌ಗಳಲ್ಲಿ ಹಿಂದಿ ಬಳಕೆಗೆ ಅವಕಾಶ ಮಾಡಿಕೊಡಲು ಸಾಧ್ಯವಾಗುವುದಾದರೆ ಹಿಂದಿಯೇತರ ಭಾಷೆಗಳೆಡೆಗೆ ಈ ತಾರತಮ್ಯವೇಕೆ? ಹಿಂದಿ ಬಳಕೆಯಲ್ಲಿರುವ ಹೈಕೋರ್ಟ್‌ಗಳಿಗೆ ವರ್ಗಾವಣೆ ಯಾಗಿ ಹೋಗುವ ಹಿಂದಿಯೇತರ ರಾಜ್ಯಗಳ ನ್ಯಾಯಮೂರ್ತಿಗಳು ಹೇಗೆ ಕಲಾಪಗಳನ್ನು ನಡೆಸುತ್ತಾರೆ? ಅಂತಹುದೇ ಕ್ರಮಗಳನ್ನು ಹಿಂದಿಯೇತರ ರಾಜ್ಯಗಳ ಹೈಕೋರ್ಟ್‌ಗಳಿಗೆ ಬರುವ ನ್ಯಾಯಮೂರ್ತಿಗಳು ಪಾಲಿಸಲು ಅಸಾಧ್ಯವೇ?!

ದೇಶದಾದ್ಯಂತ ನ್ಯಾಯಾಲಯಗಳಲ್ಲಿನ ಕಂಪ್ಯೂಟರ್ ಕಿಯೋಸ್ಕ್‌ಗಳಲ್ಲಿ, ನ್ಯಾಯಾಲಯದ ಟಿ.ವಿ. ಪರದೆಗಳಲ್ಲಿ ಮತ್ತು ಮೊಬೈಲ್ ಆ್ಯಪ್‌ಗಳಲ್ಲಿನ ಮಾಹಿತಿ ಕೇವಲ ಇಂಗ್ಲಿಷ್‌ನಲ್ಲಿ ಸಿಗುತ್ತದೆ. ಇನ್ನು ನಮ್ಮ ರಾಜ್ಯದ ವಿಚಾರಣಾ ನ್ಯಾಯಾಲಯಗಳಲ್ಲಿ ಕನ್ನಡವೇ ಆಡಳಿತ ಭಾಷೆಯಾಗಿದ್ದರೂ ನ್ಯಾಯಾಲಯಗಳ ಅಧಿಕೃತ ಮಾಹಿತಿ ಜಾಲಗಳಲ್ಲಿ ಕನ್ನಡಕ್ಕೆ ಕಿಂಚಿತ್ತೂ ಅವಕಾಶವಿಲ್ಲ.

ಗ್ರಾಹಕರ ವ್ಯಾಜ್ಯ ಪರಿಹಾರ ವೇದಿಕೆಗಳು ಮತ್ತು ರಾಜ್ಯ ಗ್ರಾಹಕರ ಕಮಿಷನ್‌ಗಳಿಗೆ ಸ್ವತಂತ್ರವಾದ ಅಂತರ್ಜಾಲ ತಾಣವಿಲ್ಲ. ರಾಷ್ಟ್ರೀಯ ಗ್ರಾಹಕರ ಕಮಿಷನ್‌ನ ಅಂತರ್ಜಾಲದ ಜೊತೆಗೆ ಜಿಲ್ಲಾ ಮತ್ತು ರಾಜ್ಯ ಮಟ್ಟದ ವೇದಿಕೆಗಳನ್ನು ಬೆಸೆದಿರುವುದರಿಂದ ಅಂತರ್ಜಾಲ ತಾಣದಲ್ಲಿ ಕನ್ನಡಕ್ಕೆ ಕಿಂಚಿತ್ತೂ ಆಸ್ಪದವಿಲ್ಲ.

ರಾಜ್ಯ ಸರ್ಕಾರಿ ನೌಕರರ ನೇಮಕಾತಿ ಮತ್ತು ಸೇವಾ ಸಂಬಂಧಿತ ವ್ಯಾಜ್ಯಗಳ ವಿಲೇವಾರಿಗಾಗಿ ಕರ್ನಾಟಕ ಆಡಳಿತ ನ್ಯಾಯಮಂಡಳಿಯನ್ನು ಹೊಂದಲಾಗಿದೆ. ಇದರ ಜಾಲತಾಣದಲ್ಲಿ ಕನ್ನಡದಲ್ಲಿ ಮಾಹಿತಿಯೇನೋ ಇದೆ. ಆದರೆ ನ್ಯಾಯಮಂಡಳಿಯ ಕಲಾಪಗಳು, ಕಡತಗಳು, ಆದೇಶಗಳು ಮತ್ತು ತೀರ್ಪುಗಳು ಇಂಗ್ಲಿಷ್‌ನಲ್ಲಿ ಮಾತ್ರ ಲಭ್ಯ. ಸಂವಿಧಾನದ 348(2) ವಿಧಿಯಲ್ಲಿನ ತೊಡಕು ಹೈಕೋರ್ಟ್‌ಗೆ ಮಾತ್ರ ಅನ್ವಯಿಸ
ಲಿದ್ದು ರಾಜ್ಯ ಗ್ರಾಹಕರ ಕಮಿಷನ್ ಮತ್ತು ಆಡಳಿತ ನ್ಯಾಯಮಂಡಳಿ ಇದರಿಂದ ಹೊರತಾಗಿವೆ. ಹಾಗಾಗಿ ಇಲ್ಲಿಯೂ ಕನ್ನಡ ಭಾಷೆಯನ್ನು ಪರಿಣಾಮಕಾರಿಯಾಗಿ ಬಳಸುವಲ್ಲಿ ಮುಂದಾಗದಿರುವುದು ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯ ಧೋರಣೆಯನ್ನು ಎತ್ತಿ ತೋರುತ್ತದೆ.

ಸಂವಿಧಾನೋತ್ತರ ಕಾಲಘಟ್ಟದಲ್ಲಿ ದೇಶದ ಉನ್ನತ ನ್ಯಾಯಾಲಯಗಳ ಕಲಾಪಗಳನ್ನು ಸ್ಥಳೀಯ ಭಾಷೆಯಲ್ಲಿ ನಡೆಸಲು ಸಾಧ್ಯವಾಗದೇ ಹೋದದ್ದು ಒಕ್ಕೂಟ ವ್ಯವಸ್ಥೆಯ ಬಹು ದೊಡ್ಡ ಸೋಲು ಎಂದೇ ಅರ್ಥೈಸಬೇಕು.

ಲೇಖಕ: ಹೈಕೋರ್ಟ್ ವಕೀಲ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು