ಗುರುವಾರ , ಜೂನ್ 24, 2021
25 °C

ಸಚ್ಚಿದಾನಂದ ಸತ್ಯ ಸಂದೇಶ: ಕೊರೊನಾ ಸೋಲಲಿ ಮಾನವತೆ ಗೆಲ್ಲಲಿ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ Updated:

ಅಕ್ಷರ ಗಾತ್ರ : | |

PV Photo

ಭಾರತದ ಜನರೆಲ್ಲಾ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಕಾಲ ಬಂದಿದೆ. ಈಗಲ್ಲದಿದ್ದರೆ ಇನ್ಯಾವತ್ತೂ ನಾವು ನಮ್ಮ ತಪ್ಪಿನ ಪರ್ಯಾವಲೋಕನ ಮಾಡಿಕೊಳ್ಳುವ ಕಾಲ ಬರುವುದಿಲ್ಲ. ಕೊರೊನಾ ಭಾರತವನ್ನು ಇನ್ನಿಲ್ಲದಂತೆ ಕಾಡುತ್ತಿರುವ ಸಂದರ್ಭದಲ್ಲೂ ನಮ್ಮಲ್ಲೇಕೆ ಮಾನವೀಯತೆ ಮರೆಯಾಗಿ, ಮಾಯಾವೀ ಹಣ ಮೆರೆಯುತ್ತಿದೆ ಎಂಬ ಬಗ್ಗೆ ಯೋಚಿಸಬೇಕಿದೆ.

ಧರ್ಮಗಳ ತವರು, ಸಾಂಸ್ಕೃತಿಕ ಪುಣ್ಯಭೂಮಿ ಭಾರತದಲ್ಲೇಕೆ ಮಾನವತೆ ಸಾಯುತ್ತಿದೆ. ನ್ಯಾಯ-ನೀತಿ-ಧರ್ಮಗಳೇಕೆ ನರಳುತ್ತಿವೆ. ಸಾವಿರಾರು ವರ್ಷಗಳಿಂದ ಋಷಿಗಳು-ಯೋಗಿಗಳು-ದಾರ್ಶನಿಕರು ನೂರಾರು ಪವಿತ್ರ ಗ್ರಂಥಗಳನ್ನು ನೀಡಿದರೂ ಭಾರತೀಯರೇಕೆ ಬೌದ್ಧಿಕವಾಗಿಯಾಗಲಿ, ನೈತಿಕವಾಗಿಯಾಗಲಿ, ಶ್ರೀಮಂತರಾಗುತ್ತಿಲ್ಲ? ಇನ್ನೂ ಶಿಲಾಯುಗದ ಮೌಢ್ಯದಲ್ಲೇಕೆ ಕೊಳೆಯುತ್ತಾ, ದಟ್ಟ ದರಿದ್ರಾವಸ್ಥೆಯನ್ನು ತಲಪುತ್ತಿದ್ದಾರೆ. ಯಾವ ಭೂಮಿ ಜಗತ್ತಿನಲ್ಲೇ ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿತ್ತೋ, ಅಂಥ ಪವಿತ್ರ ಭಾರತದ ನೆಲದಲ್ಲಿ ಪಾಪಿಗಳು ಹೇಗೆ ವಿಜೃಂಭಿಸುತ್ತಿದ್ದಾರೆ?

ಅಣುಬಾಂಬ್ ದಾಳಿಗೆ ನಲುಗಿ ಹೋಗಿದ್ದ ಜಪಾನ್ ದಶಮಾನದಲ್ಲಿ ಜಗತ್ತೇ ನಿಬ್ಬೆರಗಾಗುವಂತೆ ಮೇಲೆದ್ದು ನಿಂತಿತು. ಜಾಗತಿಕ ಮಹಾಯುದ್ಧದಲ್ಲಿ ಪುಟ್ಟ ರಾಷ್ಟ್ರ ಜಪಾನಿಗೆ ಸೋತಿದ್ದ ಚೀನಾ ಇಂದು ಜಗತ್ತಿನ ಸರ್ವಶಕ್ತ ರಾಷ್ಟ್ರವಾಗಿದೆ. ಸತತ ಯುದ್ಧದಿಂದ ತತ್ತರಿಸಿದ್ದ ವಿಯೆಟ್ನಾಂ, ನೈತಿಕವಾಗಿ ದಿವಾಳಿ ಅಂಚಿನಲ್ಲಿದ್ದ ಥೈಲ್ಯಾಂಡ್, ಅಪನಂಬಿಕೆಯಲ್ಲೆ ಬೇಯುವ ಉಭಯ ಕೊರಿಯಾ ದೇಶಗಳು ಅಭಿವೃದ್ದಿ ಕಂಡಿವೆ. ಅಷ್ಟೇ ಏಕೆ, ಅರ್ಧ ಶತಮಾನದ ಹಿಂದಷ್ಟೆ ನವನಾಗರಿಕತೆ ಕಂಡ ಕೀನ್ಯಾ ಸುಧಾರಣೆಯ ಹಾದಿಯಲ್ಲಿದೆ. ಆದರೆ, ಐದು ಸಾವಿರ ವರ್ಷಗಳ ಸುದೀರ್ಘ ನಾಗರಿಕತೆ ಮತ್ತು ಧಾರ್ಮಿಕ ಇತಿಹಾಸ ಹೊಂದಿದ ಭಾರತ ಏಕೆ ಹಿಂದುಳಿಯುತ್ತಿದೆ? ಇಡೀ ವಿಶ್ವಕ್ಕೆ ಮಾನವತೆಯ ಧರ್ಮ ಸಾರಿದ ಭಾರತದಲ್ಲೇಕೆ ಮಾನವೀಯತೆ ಸಾಯುತ್ತಿದೆ?

ಏಕೆಂದರೆ, ಭಾರತೀಯರಿನ್ನೂ ನಾಗರಿಕರಾಗಿರುವುದಿರಲಿ, ಮನುಷ್ಯರಾಗೇ ರೂಪುಗೊಂಡಿಲ್ಲ ಎಂದು ಅನಿಸುತ್ತೆ. ಈ ನೆಲದ ಅಂತಃಸತ್ವವಾದ ಸಹಬಾಳ್ವೆಯನ್ನು ಸಹ ಮೈಗೂಡಿಸಿಕೊಂಡಿಲ್ಲ ಅನ್ನೋದು ಕೊರೊನಾ ದಾಳಿಯ ಸಂದರ್ಭದಲ್ಲಿ ನಿರೂಪಿತವಾಗುತ್ತಿದೆ. ಭಾರತೀಯರು ತಮ್ಮ ಧಾರ್ಮಿಕ-ಸಾಂಸ್ಕೃತಿಕ ಗತಕಾಲದ ಬಗ್ಗೆ ಬೂಟಾಟಿಕೆ ಮಾತಾಡುತ್ತಾ, ಅದನ್ನು ಪ್ರದರ್ಶನಕ್ಕಿಡುವ ಆಷಾಢಭೂತಿಗಳಾಗಿದ್ದಾರೆಯೇ ಹೊರತು, ಶ್ರೀಮಂತ ಸಂಸ್ಕೃತಿಯಂತೆ ಧೀಮಂತಿಕೆಯಿಂದ ಬದುಕುವುದನ್ನು ಕಲಿತಿಲ್ಲ. ಯಾರಿಗೂ ಧರ್ಮವಿಚಾರದಲ್ಲಿ ನಂಬಿಕೆ ಇಲ್ಲ; ದೇವರ ಭಯ ಮೊದಲೇ ಇಲ್ಲ. ನುಡಿದಂತೆ ನಡೆಯುವುದಿಲ್ಲ. ಸತ್ಯವಾಗಿ ನಡೆದವರ ಅನುಸರಿಸುವುದಿಲ್ಲ. ಅಧರ್ಮಮಾರ್ಗದಲ್ಲಿ ಸಂಪಾದಿಸುವವರು ಮಾದರಿಯಾಗುತ್ತಿದ್ದಾರೆ.

ಯಾವಾಗ ಭಾರತೀಯ ಸಮಾಜ ಹಣಕ್ಕೆ ಪ್ರಾಮುಖ್ಯವನ್ನು ಕೊಟ್ಟು, ಭ್ರಷ್ಟಾಚಾರ ಸಾಮಾನ್ಯ ಅಂದುಕೊಂಡಾಗಲೇ ಮಾನವತೆ ಅಳಿದುಹೋಯಿತು. ಅದರ ವಿಕಾರ ರೂಪವನ್ನ ಈಗಿನ ಕೊರೊನಾ ಪಿಡುಗಿನ ಕಾಲದಲ್ಲಿ ಕಾಣುತ್ತಿದ್ದೇವೆ. ಕಾಡುನ್ಯಾಯದಂತಿರುವ ಸಮಾಜದಲ್ಲಿ ಅಕ್ರಮವಾಗಿ ಸಂಪಾದಿಸುವ ಶ್ರೀಮಂತನೇ ಎಲ್ಲರಿಗೂ ಶ್ರೇಷ್ಠವಾಗಿದ್ದಾನೆ. ನ್ಯಾಯಮಾರ್ಗದಲ್ಲಿ ದುಡಿವ ಬಡವ ನಿಕೃಷ್ಟನಾಗುತ್ತಿದ್ದಾನೆ. ಇದರಿಂದ ಹಣದ ಮುಂದೆ ಮನುಷ್ಯನ ಜೀವ ಕಾಲಕಸದಂತೆ ತೂರಿ ಹೋಗುತ್ತಿದೆ.

ಭೂಮಿಯ ಮೇಲೆ ಯಾರೂ ಶಾಶ್ವತರಲ್ಲ. ನಾವೆಲ್ಲಾ ಇಂದು ಇದ್ದು ನಾಳೆ ಹೋಗುವ ಅತಿಥಿಗಳಷ್ಟೆ. ಬರಿಗೈಲಿ ಜಗತ್ತಿಗೆ ಬಂದ ನಾವು, ಬರಿಗೈಲೇ ಹೋಗುತ್ತೇವೆ. ಸತ್ತವರಾರೂ ಸಂಪಾದಿಸಿದ್ದನ್ನ ಕೊಂಡೊಯ್ಯುವುದಿಲ್ಲ. ಹೀಗಿದ್ದರೂ, ಹಣಕ್ಕಾಗಿ ಕೊರೋನ ಸಂಕಷ್ಟದಲ್ಲಿ ಬಯಸುವುದು ಪರಮ ಅಸಹ್ಯಕರ. ದೇಶಕ್ಕಾಗಿ ಹೋರಾಡುವ ಯೋಧ, ಹಣಕ್ಕಾಗಿ ಶತ್ರುದೇಶದೊಂದಿಗೆ ಕೈಜೋಡಿಸಿದರೆ ದೇಶದ ಪರಿಸ್ಥಿತಿ ಏನಾಗಬಹುದೋ, ಅದೇ ಆಗುತ್ತಿದೆ ಕೊರೊನಾ ರೋಗಿಗಳ ದೇಹಸ್ಥಿತಿ. ನಮ್ಮಲ್ಲಿ ಉತ್ತಮವಾದುದನ್ನು ಬಳಸುವ ಇಚ್ಛಾಶಕ್ತಿ ಇಲ್ಲದೆ, ಕೊರೊನಾ ವಿರುದ್ಧದ ಹೋರಾಟದಲ್ಲೂ ಸೋಲುತ್ತಿದ್ದೇವೆ. ಕೊರೊನಾ ಸೋತು ಮಾನವತೆ ಗೆಲ್ಲಬೇಕಾದರೆ ನಾವೆಲ್ಲ ಪ್ರಾಮಾಣಿಕವಾಗಿ ಬದುಕುವುದನ್ನು ರೂಢಿಸಿಕೊಳ್ಳಬೇಕು. ಆಗಷ್ಟೆ ಮಾನವತೆಯ ಹಣತೆ ಬೆಳಗಿ, ‘ಸಚ್ಚಿದಾನಂದ’ಭಾವದ ಅನುಭೂತಿ ಪ್ರಾಪ್ತವಾಗುವುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು