ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾತ್ಮ ಗಾಂಧೀಜಿ ಒಡನಾಟದಲ್ಲಿ ಲಂಡನ್‌ & ಬೆಂಗಳೂರು

Last Updated 2 ಅಕ್ಟೋಬರ್ 2021, 19:30 IST
ಅಕ್ಷರ ಗಾತ್ರ

ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದಾಗ, ಅಲ್ಲಿ ಇಂಗ್ಲಿಷ್ ಭಾಷಾ ಉಪನ್ಯಾಸಕರಾಗಿದ್ದ ಪ್ರೊ. ಜೆ.ಜಿ.ಟೇಟ್ ಅವರು ಮಾಸ್ತಿ ಅವರ ಚಿಂತನೆಗಳ ಮೇಲೆ ಗಾಢಪ್ರಭಾವ ಬೀರಿದ್ದರ ಬಗ್ಗೆ ನಾನು ತಿಳಿದಿದ್ದೆ. ಈ ಹಿನ್ನೆಲೆಯಲ್ಲಿ ಟೇಟ್ ಅವರ ಜೀವನ ಮತ್ತು ಚಿಂತನೆಗಳ ಬಗ್ಗೆ ನಾನು ನಡೆಸುತ್ತಿದ್ದ ಅಧ್ಯಯನದ ವಿಷಯ ಅರಿತ ಮಾಸ್ತಿ ಅವರ ಮೊಮ್ಮಗಳು ಡಾ. ವಸಂತಶ್ರೀ, ನನ್ನನ್ನು ಈ ವಿಷಯದ ಅಧ್ಯಯನಕ್ಕೆ ಹಾಗೆಯೇ ಲಂಡನ್ ಮತ್ತು ಬೆಂಗಳೂರಿನ ಒಂದು ತುಲನಾತ್ಮಕ ಅಧ್ಯಯನಕ್ಕೆಂದು ಪ್ರಾಯೋಜಿಸಿ, 2014ರ ಆಗಸ್ಟ್‌ನಲ್ಲಿ ಲಂಡನ್‌ಗೆ ಕಳುಹಿಸಿಕೊಟ್ಟರು. ವೆಸ್ಟ್‌ಕೆನ್ಸಿಂಗ್‍ಟನ್‍ನಲ್ಲಿನ ಭಾರತೀಯ ವಿದ್ಯಾಭವನದಲ್ಲಿ 45 ದಿನಗಳ ಕಾಲ ವಾಸ್ತವ್ಯ ಹೂಡಿ, ಆ ನಗರದ ಬಹುತೇಕ ಸ್ಥಳಗಳಿಗೆ ಹೋಗಿ ಅಧ್ಯಯನ ನಡೆಸಿದ್ದೆ.

ಎರಡನೇ ದಿನ ಮುಂಜಾನೆ, ಭಾರತೀಯ ವಿದ್ಯಾಭವನಕ್ಕೆ ಅನತಿ ದೂರದಲ್ಲೇ ಪಾರಂಪರಿಕ ಶೈಲಿಯ ಕಟ್ಟಡವೊಂದರ ಮುಂಬಾಗಿಲ ಬದಿಗೆ ಇದ್ದ ಫಲಕ ನನ್ನನ್ನು ಆಕರ್ಷಿಸಿತು. ಅದರಲ್ಲಿ GREATER LONDON COUNCIL, MAHATMA GANDHI (1869- 1948) lived here as a law student. ಎಂದು ಬರೆಯಲಾಗಿತ್ತು. ಗಾಂಧೀಜಿ ವಾಸವಿದ್ದ ಮನೆಗೆ ಅಷ್ಟೊಂದು ಸನಿಹದಲ್ಲೇ ಉಳಿದುಕೊಂಡಿದ್ದೇನಲ್ಲ ಎಂದು ಪುಳಕಿತಗೊಂಡೆ.

ಗಾಂಧೀಜಿಗೆ ಬೆಂಗಳೂರಿನೊಂದಿಗಿದ್ದ ಅವಿನಾಭಾವ ಸಂಬಂಧದ ಬಗ್ಗೆ ‘ಡೆಕ್ಕನ್ ಹೆರಾಲ್ಡ್‌’ನಲ್ಲಿ 1995ರಲ್ಲಿ ನನ್ನ ಸುದೀರ್ಘ ಲೇಖನ ಪ್ರಕಟಗೊಂಡಿತ್ತು. ಲಂಡನ್‌ನಲ್ಲಿಯೂ ಅವರ ಒಡನಾಟದ ಬಗ್ಗೆ ನಡೆಸಿದ ಅಧ್ಯಯನದಿಂದ, ಒಂದು ಪುಸ್ತಕವನ್ನೇ ರಚಿಸುವಷ್ಟು ಕುತೂಹಲಕಾರಿ ಮಾಹಿತಿಗಳು ಮತ್ತು ಅಪರೂಪದ ಚಿತ್ರಗಳು ಸಂಗ್ರಹವಾದವು.

ಕಿಂಗ್ಸ್‌ಲೆಯಲ್ಲಿ ಮಕ್ಕಳೊಂದಿಗೆ ಮಹಾತ್ಮ ಗಾಂಧಿ
ಕಿಂಗ್ಸ್‌ಲೆಯಲ್ಲಿ ಮಕ್ಕಳೊಂದಿಗೆ ಮಹಾತ್ಮ ಗಾಂಧಿ

ಗಾಂಧೀಜಿ ಲಂಡನ್ ನಗರಕ್ಕೆ ಐದು ಬಾರಿ (1888ರಿಂದ 1891, 1906, 1909, 1914, 1931) ಆಗಮಿಸಿದ್ದಾರೆ. ಹಾಗೆಯೇ ಬೆಂಗಳೂರಿಗೂ ಐದು ಬಾರಿ (1915, 1920, 1927, 1934 ಮತ್ತು 1936) ಬಂದಿದ್ದಾರೆ. ಅವರ ಬೆಂಗಳೂರು ಭೇಟಿಗಳ ಬಗ್ಗೆ ಇತಿಹಾಸ ಸಂಶೋಧಕ ವೇಮಗಲ್ ಸೋಮಶೇಖರ್ ವಿವರವಾದ ಅಧ್ಯಯನ ನಡೆಸಿ, ‘ಬೆಂಗಳೂರಿನಲ್ಲಿ ಗಾಂಧೀಜಿ’ ಎಂಬ ಪುಸ್ತಕವನ್ನು ಬರೆದಿರುವಂತೆಯೇ ಅವರ ಲಂಡನ್‌ ಭೇಟಿಗಳ ಬಗ್ಗೆ ಜೇಮ್ಸ್ ಹಂಟ್ ಎಂಬ ಲೇಖಕ ‘ಗಾಂಧಿ ಇನ್ ಲಂಡನ್’ ಎಂಬ ಆಕರ್ಷಕ ಕೃತಿಯನ್ನು 1978ರಲ್ಲೇ ರಚಿಸಿದ್ದಾರೆ. ಇದಲ್ಲದೆ ಭಾರತದ ಅರವತ್ತನೆಯ ಗಣರಾಜ್ಯೋತ್ಸವದ ಶುಭ ಸಂದರ್ಭಕ್ಕಾಗಿ ಲಂಡನ್‍ನ ಹೈ ಕಮಿಷನ್ ಆಫ್ ಇಂಡಿಯಾ ‘ಮಹಾತ್ಮ ಗಾಂಧಿ ಇನ್ ಲಂಡನ್’ ಎಂಬ ಹೊತ್ತಿಗೆಯನ್ನು ಪ್ರಕಟಿಸಿದೆ. ಬೆಂಗಳೂರಿನ ಅಪರಾಧಗಳ ಪತ್ತೆಗೆ ಸಂಬಂಧಿಸಿದಂತೆ ಮೂರು ಸರಣಿ ಕೃತಿಗಳನ್ನು ಬರೆದಿರುವ ಜ್ಯಾಕ್‌ ಓಯ, ಲಂಡನ್‍ನಲ್ಲಿ ಗಾಂಧೀಜಿ ಓಡಾಡಿದ ಎಲ್ಲ ಸ್ಥಳಗಳನ್ನೂ ಪತ್ತೆ ಹಚ್ಚಿ ದಾಖಲಿಸಿದ್ದಾರೆ. ಇನ್ನು, ಗಾಂಧೀಜಿ ಅವರೇ ತಾವು ಕಂಡ ಲಂಡನ್ ನಗರದ ಬಗ್ಗೆ ‘ಎ ಗೈಡ್ ಟು ಲಂಡನ್’ ಎಂಬ ಕಿರುಹೊತ್ತಿಗೆಯನ್ನು ಬರೆದಿದ್ದು, ಅದು ಅವರ ಕೃತಿಗಳ ಸಂಪುಟದಲ್ಲಿ ಪ್ರಕಟಗೊಂಡಿದೆ.

ವಿದ್ಯಾಭ್ಯಾಸಕ್ಕೆಂದು 1888ರ ಅಕ್ಟೋಬರ್‌ 27ರಂದು ಹಡಗಿನ ಮೂಲಕ ಲಂಡನ್‌ಗೆ ಬರುವ ಗಾಂಧೀಜಿ, ‘ದಿ ವಿಕ್ಟೋರಿಯ’ ಎಂಬ ಲಕ್ಷುರಿ ಹೋಟೆಲ್‍ನಲ್ಲಿ ಉಳಿದುಕೊಳ್ಳುತ್ತಾರೆ. ಆದರೆ, ಅಲ್ಲಿನ ದುಬಾರಿ ವೆಚ್ಚವನ್ನು ನಿಭಾಯಿಸಲಾಗದೆ ಈಗಿನ ಭಾರತೀಯ ವಿದ್ಯಾಭವನದ ಬಳಿ, ನಾನು ಆಗಲೇ ಉಲ್ಲೇಖಿಸಿದ ಮನೆಯಲ್ಲಿ ಸುಮಾರು ಒಂಬತ್ತು ತಿಂಗಳ ಕಾಲ ಉಳಿಯುತ್ತಾರೆ. ಊಟ, ವಸತಿ ಸೇರಿ ವಾರಕ್ಕೆ ಮೂವತ್ತು ಶಿಲ್ಲಿಂಗ್ ಪಡೆಯುತ್ತಿದ್ದ ಆ ಮನೆಯ ಒಡತಿ ಇವರಿಗೆ ಬೇಯಿಸಿ ಹಾಕುತ್ತಿದ್ದ ಸಸ್ಯಾಹಾರ ರುಚಿಕರವಾಗಿ ಇರುತ್ತಿರಲಿಲ್ಲ. ಆದರೂ ಅದಕ್ಕೆ ಒಗ್ಗಿಕೊಳ್ಳುವ ಗಾಂಧೀಜಿ, ಕಾನೂನು ಕ್ಷೇತ್ರದಲ್ಲಿ ಪದವಿ ಶಿಕ್ಷಣ ಪಡೆಯಲು ಇನ್ನರ್ ಟೆಂಪಲ್ ಕಾಲೇಜಿಗೆ ಸೇರುತ್ತಾರೆ.

ಮೊದಲ ಬಾರಿಗೆ ಅವರು ಹೊರಗೆ ಆಹಾರ ಸೇವಿಸಲು ಪ್ರಯತ್ನ ಮಾಡಿದ್ದು ಹಾಲ್ಬರ್ನ್ ರೆಸ್ಟೊರೆಂಟ್‌ನಲ್ಲಿ. ಅಲ್ಲಿ ಊಟಕ್ಕೆ ಮೊದಲು ನೀಡಿದ ಸ್ಟಾರ್ಟರ್‌ನಲ್ಲಿ ಮಾಂಸಾಹಾರ ಇದೆಯೇ ಎಂದು ಸ್ನೇಹಿತರನ್ನು ಕೇಳಿ ಮುಜುಗರಕ್ಕೆ ಈಡಾಗಿ, ಅಲ್ಲಿಂದ ಹೊರನಡೆದು ಬಿಡುತ್ತಾರೆ. ಆದರೆ, ಮೂರು ವರ್ಷಗಳ ನಂತರ ಗಾಂಧೀಜಿ ಅದೇ ಹೋಟೆಲ್‍ನಲ್ಲಿ ಸ್ನೇಹಿತರಿಗೆ ಭರ್ಜರಿಯಾದ ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸುತ್ತಾರೆ. ನಂತರದ ವರ್ಷಗಳಲ್ಲಿ ಈ ನಗರಕ್ಕೆ ಬಂದಾಗಲೆಲ್ಲ ಈ ರೆಸ್ಟೊರೆಂಟ್‌ಗೆ ಅವರು ತಪ್ಪದೇ ಬರುತ್ತಿದ್ದರು. 1950ರ ದಶಕದಲ್ಲಿ ಹಾಲ್ಬರ್ನ್‌ ಅನ್ನು ಕೆಡವಿ, ಆ ಜಾಗದಲ್ಲಿ ಸೂಪರ್ ಮಾರ್ಕೆಟ್‍ ನಿರ್ಮಿಸಲಾಯಿತು.

ಗಾಂಧೀಜಿ ಭೇಟಿ ನೀಡುತ್ತಿದ್ದ ಎರಡನೇ ಆಹಾರ ಕೇಂದ್ರ ಸೇಂಟ್ ಬ್ರೈಡ್ ಸ್ಟ್ರೀಟ್‍ನಲ್ಲಿ ಇದ್ದ ಸೆಂಟ್ರಲ್ ವೆಜಿಟೇರಿಯನ್ ರೆಸ್ಟೊರೆಂಟ್. ಇದರ ಬದಿಗೇ ಲಂಡನ್ ವೆಜಿಟೇರಿಯನ್ ಸೊಸೈಟಿ ಸಹ ಇತ್ತು. ಮುಂದೆ ಈ ಸಂಸ್ಥೆಯ ಸದಸ್ಯರಾಗುವ ಗಾಂಧೀಜಿ ತಮ್ಮ ಮಾತಿನ ಕಲೆಯನ್ನು ರೂಪಿಸಿಕೊಳ್ಳಲು ಈ ವೇದಿಕೆ ನೆರವಾಯಿತು. ಈ ಕಟ್ಟಡವು ಎರಡನೇ ವಿಶ್ವಸಮರದಲ್ಲಿ ದಾಳಿಗೊಳಗಾಗಿ ಕಣ್ಮರೆಯಾಯಿತು. ಈಗಲೂ ಫ್ಯಾರಿಂಗ್‌ಟನ್‌ ಸ್ಟ್ರೀಟ್‌ ಬದಿಗೇ ಇರುವ ಈ ಸ್ಥಳವನ್ನು ಕಾಣಬಹುದು.

ಬೆಂಗಳೂರಿನ ಲಲಿತ್‌ ಅಶೋಕ್‌ ಹೋಟೆಲ್‌ನ ಆವರಣದಲ್ಲಿರುವ ಗಾಂಧೀಜಿ ಸ್ಮಾರಕ
ಬೆಂಗಳೂರಿನ ಲಲಿತ್‌ ಅಶೋಕ್‌ ಹೋಟೆಲ್‌ನ ಆವರಣದಲ್ಲಿರುವ ಗಾಂಧೀಜಿ ಸ್ಮಾರಕ

ಗಾಂಧೀಜಿ ಎರಡನೇ ಬಾರಿ 1906ರಲ್ಲಿ ಲಂಡನ್‍ಗೆ ಬರುವ ವೇಳೆಗಾಗಲೇ ಒಬ್ಬ ಪ್ರಮುಖ ಲಾಯರ್ ಆಗಿ ರೂಪುಗೊಂಡಿದ್ದರು. ಥೇಮ್ಸ್ ನದಿಯ ವಾಟರ್‍ಲೂ ಸೇತುವೆ ಸನಿಹ ಇದ್ದ ಹೋಟೆಲ್ ಸಿಸಿಲ್‍ನಲ್ಲಿ ಅವರು ಉಳಿದುಕೊಂಡಿದ್ದರು. ಈಗ ಅದರ ಕುರುಹೂ ಇಲ್ಲ. ಈ ಸಂದರ್ಭದಲ್ಲೇ ಕಲೋನಿಯಲ್ ಆಫೀಸ್‍ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವಿನ್ಸ್‌ಟನ್‌ ಚರ್ಚಿಲ್‍ರನ್ನು ಗಾಂಧೀಜಿ ಪ್ರಥಮ ಬಾರಿಗೆ ಭೇಟಿಯಾದದ್ದು.

1909ರಲ್ಲಿ ಮೂರನೇ ಬಾರಿ ಲಂಡನ್‍ಗೆ ಬಂದಾಗ ಗಾಂಧೀಜಿ, ಪಾರ್ಲಿಮೆಂಟ್ ಭವನಕ್ಕೆ ಹತ್ತಿರದಲ್ಲೇ ಕ್ವೀನ್ ಅನೆ ಚೇಂಬರ್ಸ್‌ನಲ್ಲಿ, ದಿ ಸೌತ್ ಆಫ್ರಿಕಾ ಬ್ರಿಟಿಷ್ ಇಂಡಿಯಾ ಕಮಿಟಿ ಕಚೇರಿಯನ್ನು ತೆರೆದಿದ್ದರಲ್ಲದೆ, ಹತ್ತಿರದಲ್ಲೇ ವಿಕ್ಟೋರಿಯ ಸ್ಟ್ರೀಟ್‍ನಲ್ಲಿದ್ದ ವೈಭವದ ವೆಸ್ಟ್ ಮಿನಿಸ್ಟರ್ ಪ್ಯಾಲೆಸ್ ಹೋಟೆಲ್‍ನಲ್ಲಿ ತಂಗಿದ್ದರು. ಈ ಕಟ್ಟಡವೂ ನಂತರದ ವರ್ಷಗಳಲ್ಲಿ ಕಣ್ಮರೆಯಾಯಿತು.

1914ರಲ್ಲಿ ಗಾಂಧೀಜಿ ನಾಲ್ಕನೇ ಬಾರಿ ಈ ನಗರಕ್ಕೆ ಆಗಮಿಸಿದ್ದರು. ಹೋಟೆಲ್ ಸಿಸಿಲ್‍ನಲ್ಲಿ ಅವರ ಗೌರವಾರ್ಥ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಆನಂದ ಕುಮಾರಸ್ವಾಮಿ, ಸರೋಜಿನಿ ನಾಯ್ಡು, ಮೊಹಮದ್ ಅಲಿ ಜಿನ್ನಾರಂತಹ ಗಣ್ಯಾತಿಗಣ್ಯರು ಭಾಗವಹಿಸಿದ್ದರು.
1931ರಲ್ಲಿ ಐದನೇ ಬಾರಿ ಗಾಂಧೀಜಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‍ನ ಪ್ರತಿನಿಧಿಯಾಗಿ, ಭಾರತದಲ್ಲಿ ಸರ್ಕಾರ ರಚನೆಗೆ ಸಂಬಂಧಿಸಿದ ವಿಷಯವನ್ನು ದುಂಡುಮೇಜಿನ ಸಮ್ಮೇಳನದಲ್ಲಿ ಪ್ರಸ್ತಾಪ ಮಾಡಲು ಆಗಮಿಸಿದ್ದರು. ಇವರ ಆತ್ಮೀಯ ಮಿತ್ರರಾದ ಮ್ಯೂರಿಯಲ್ ಲೆಸ್ಟರ್, ಪೂರ್ವ ಲಂಡನ್‍ನಲ್ಲಿನ ತಮ್ಮ ಕಿಂಗ್ಸ್‌ಲೆ ಹಾಲ್‍ನಲ್ಲಿ ಬಂದಿರಲು ಆಹ್ವಾನ ನೀಡಿದರು. ಅದಕ್ಕೊಪ್ಪಿದ ಗಾಂಧೀಜಿ ಅಲ್ಲಿ ಸ್ವಲ್ಪ ಕಾಲ ತಂಗಿದ್ದರು. ಪ್ರಶಾಂತವಾದ ವಸತಿ ಪ್ರದೇಶದಲ್ಲಿರುವ ಈ ಕಟ್ಟಡದಲ್ಲಿ ಎಂ.ಕೆ ಗಾಂಧಿ ಫೌಂಡೇಷನ್ ಸೇವಾ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ. ಅಲ್ಲಿನ ದೊಡ್ಡ ಸಭಾಂಗಣದಲ್ಲಿ ಗಾಂಧೀಜಿಯವರ ಎದೆ ಮಟ್ಟದ ಮೂರ್ತಿಯಿದೆ. ಮೂರನೇ ಮಹಡಿಯಲ್ಲಿ ಅವರು ಉಳಿದುಕೊಂಡಿದ್ದ ಸಣ್ಣ ಕೊಠಡಿಯನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. ಅವರು ಬಳಸುತ್ತಿದ್ದ ಸಣ್ಣ ಚರಕ, ದಿಂಬುಗಳು ಮತ್ತು ಕೂರಲು ಬಳಸಿದ ಕುರ್ಚಿಯಿದೆ. ರಿಚರ್ಡ್ ಅಟೆನ್‌ಬರೊ ತಮ್ಮ ಪ್ರಸಿದ್ಧ ‘ಗಾಂಧಿ’ ಚಿತ್ರಕ್ಕಾಗಿ ಇದೇ ಕೊಠಡಿಯಲ್ಲೇ ಕೆಲವು ದೃಶ್ಯಗಳನ್ನು ಚಿತ್ರೀಕರಿಸಿದ್ದಾರೆ.

ಟಾವಿಸ್ಟಾಕ್ ಪ್ರದೇಶ ಗಾಂಧೀಜಿ ವಿದ್ಯಾರ್ಥಿಯಾಗಿ ನಡೆದಾಡಿದ ಜಾಗವಾದ್ದರಿಂದ ಅದರ ನೆನಪಿನ ಪ್ರತೀಕವಾಗಿ ಅಲ್ಲಿನ ಒಂದು ಪಾರ್ಕ್‌ನ ನಡುವಿನಲ್ಲಿ, ಚಿಂತನೆಯ ಭಂಗಿಯಲ್ಲಿರುವ ಗಾಂಧೀಜಿಯ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಇದನ್ನು ಫ್ರೆಡ್ಡಾ ಬ್ರಿಲಿಯಂಟ್ ಎಂಬ ನುರಿತ ಶಿಲ್ಪಿ ರೂಪಿಸಿದ್ದು, ಬ್ರಿಟನ್‍ ಪ್ರಧಾನಿಯಾಗಿದ್ದ ಹೆರಾಲ್ಡ್ ವಿಲ್ಸನ್ ಅನಾವರಣಗೊಳಿಸಿದ್ದಾರೆ. ಪ್ರತಿಷ್ಠಿತ ಪಾರ್ಲಿಮೆಂಟ್ ಸ್ಕ್ವೇರ್ ಪ್ರದೇಶದಲ್ಲಿರುವ ವಿಶ್ವವಿಖ್ಯಾತ ವ್ಯಕ್ತಿಗಳ ಪ್ರತಿಮೆಗಳಲ್ಲಿ ಗಾಂಧಿ ಅವರದೂ ಸೇರಿದೆ.

ಗಾಂಧೀಜಿ ಬೆಂಗಳೂರಿಗೆ ಮೊದಲು ಬಂದದ್ದು 1915ರಲ್ಲಿ. ಆಗ ಅವರು ಭಾರತ ಯಾತ್ರೆಯ ಸಂಬಂಧವಾಗಿ ಮದ್ರಾಸ್‍ಗೆ ಬರುವ ಕಾರ್ಯಕ್ರಮವಿತ್ತು. ಬೆಂಗಳೂರಿನ ಸಾಮಾಜಿಕ ಕ್ಷೇತ್ರದಲ್ಲಿ ಕಾಳಜಿಯಿದ್ದ ಡಿ.ವಿ.ಗುಂಡಪ್ಪ ಅವರಿಗೆ ಬಾಪೂಜಿಯವರನ್ನು ಬೆಂಗಳೂರಿಗೆ ಕರೆಸಬೇಕೆಂಬ ಅಭಿಲಾಷೆಯಿತ್ತು. 1914ರಲ್ಲಿ ಗಾಂಧೀಜಿಯವರ ದಕ್ಷಿಣ ಆಫ್ರಿಕಾದ ಕೆಲಸಕ್ಕಾಗಿ ನಿಧಿ ಸಂಗ್ರಹ ಕಾರ್ಯ ದೇಶದಾದ್ಯಂತ ನಡೆಯಿತು. ಡಿವಿಜಿ ಅವರು ಇಲ್ಲಿಂದ ಸಂಗ್ರಹಿಸಿದ 1,800 ರೂಪಾಯಿಗಳನ್ನು ಮದ್ರಾಸ್‍ನಲ್ಲಿ ನಿಧಿ ಸ್ವೀಕರಿಸುತ್ತಿದ್ದ ಪತ್ರಕರ್ತ ಜಿ.ಎ.ನಟೇಶನ್ ಅವರಿಗೆ ಕಳುಹಿಸಿದರು. ಬೆಂಗಳೂರಿಗೂ ಬರುವಂತೆ ನಟೇಶನ್‌ ಮೂಲಕ ಕೋರಿದಾಗ ಅದಕ್ಕೊಪ್ಪಿದ ಗಾಂಧೀಜಿ, ಬೆಂಗಳೂರಿಗೆ ಬಂದರು. ಅಂದೇ ಗಾಂಧೀಜಿಯವರ ಮೊದಲ ಸಾರ್ವಜನಿಕ ಸಭೆ ಡಿವಿಜಿಯವರ ಮೈಸೂರು ಸಾಮಾಜಿಕ ಸೇವಾ ಸಂಸ್ಥೆಯಲ್ಲಿ ನಡೆಯಿತು. ಅಲ್ಲಿ ಗಾಂಧೀಜಿ ಅನಾವರಣ ಮಾಡಿದ ಗೋಪಾಲಕೃಷ್ಣ ಗೋಖಲೆ ಅವರ ಭಾವಚಿತ್ರವನ್ನು ಇಂದಿಗೂ ಕಾಣಬಹುದು.

1920ರಲ್ಲಿ ಎರಡನೇ ಬಾರಿ ಬೆಂಗಳೂರಿಗೆ ಬಂದ ಗಾಂಧೀಜಿ, ಕಂಟೋನ್ಮೆಂಟ್‍ನ ಈದ್ಗಾ ಮೈದಾನದಲ್ಲಿ, ಸುರಿಯುತ್ತಿದ್ದ ಮಳೆಯಲ್ಲಿಯೇ ದೊಡ್ಡ ಪ್ರಮಾಣದಲ್ಲಿ ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದರು. 1927ರಲ್ಲಿ ಗಾಂಧೀಜಿ ಆರೋಗ್ಯ ಸುಧಾರಣೆಗಾಗಿ ವಿಶ್ರಾಂತಿ ಪಡೆಯಬೇಕಾಯಿತು. ಆಗ ಮೈಸೂರು ರಾಜ್ಯ ಸರ್ಕಾರ ಅದರ ವ್ಯವಸ್ಥೆಯ ಹೊಣೆ ವಹಿಸಿಕೊಂಡಿತು. ಅದರಂತೆ ಗಾಂಧೀಜಿ ಮೊದಲು ನಂದಿ ಬೆಟ್ಟದಲ್ಲಿ ಸ್ವಲ್ಪಕಾಲವಿದ್ದು ನಂತರ ಬೆಂಗಳೂರಿನ ಕುಮಾರಕೃಪಾ ಅತಿಥಿ ಗೃಹದಲ್ಲಿ ತಂಗಿದ್ದರು. ಆಗ ಈ ನಗರದ ಜನತೆಗೆ ಅವರನ್ನು ಹತ್ತಿರದಿಂದ ಕಾಣುವ, ಅವರ ಮಾತುಗಳನ್ನು ಕೇಳುವ ಭಾಗ್ಯ ದೊರೆತಿತ್ತು. ಗಾಂಧೀಜಿ ಸಭೆಗಾಗಿ ಕೂರುತ್ತಿದ್ದ ಜಾಗವು ಕುಮಾರಕೃಪಾದ ಬದಿಗೇ ಇರುವ ಅಶೋಕ ಹೋಟೆಲ್‍ನ ಆವರಣದಲ್ಲಿದ್ದು, ಅಲ್ಲಿ ಒಂದು ಸ್ಮಾರಕವನ್ನು ನಿರ್ಮಿಸಲಾಗಿದೆ.
ಇಲ್ಲಿನ ಹೈನುಗಾರಿಕೆ ಸಂಶೋಧನಾ ಸಂಸ್ಥೆಗೆ ಸ್ವಲ್ಪಕಾಲ ವಿದ್ಯಾರ್ಥಿಯಾಗಿ ಬಂದಿದ್ದ ಗಾಂಧೀಜಿ ‘ಜಿಲ್’ ಎಂಬ ಹಸುವಿನ ಬಳಿ ನಿಂತು ಫೋಟೊ ತೆಗೆಸಿಕೊಂಡಿದ್ದರು. ಅತಿಥಿಗಳ ಪುಸ್ತಕದಲ್ಲಿ ಸಹಿ ಹಾಕಿದ್ದರು. ಇಂದಿಗೂ ಅಲ್ಲಿ ಗಾಂಧೀಜಿ ಹಸುವಿನೊಂದಿಗಿರುವ ಪ್ರತಿಮೆ ಮತ್ತು ಸಹಿಯನ್ನು ಕಾಣಬಹುದು.

ಇದಾದ ನಂತರ 1934 ಮತ್ತು 1936ರಲ್ಲೂ ಇಲ್ಲಿಗೆ ಬಂದು ಹೋಗಿದ್ದ ಗಾಂಧೀಜಿ, ಪ್ರಾರ್ಥನಾ ಸಭೆಗಳನ್ನು ನಡೆಸಿದ್ದರಲ್ಲದೆ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್, ಮಹಿಳಾ ಸೇವಾ ಸಮಾಜದಂತಹ ಹಲವಾರು ಸ್ಥಳಗಳಿಗೆ ಭೇಟಿ ನೀಡಿದ್ದರು. ಅವರು ಒಮ್ಮೆ ಬೆಂಗಳೂರಿನ ಸೌಂದರ್ಯವನ್ನು ಮುಂಬೈಗೆ ಹೋಲಿಸಿ ‘ಬೆಂಗಳೂರೇ ಸುಂದರ ನಗರ’ ಎಂದು ಶ್ಲಾಘಿಸಿದ್ದರು. ಸಿಟಿ ರೈಲ್ವೆ ಸ್ಟೇಷನ್‍ನ ಪ್ಲಾಟ್‌ಫಾರಂ ಒಂದರಲ್ಲಿ ಗಾಂಧೀಜಿ ಬೆಂಗಳೂರು ಜನತೆಯನ್ನು ಪ್ರಶಂಸಿಸಿರುವ ಒಂದು ಶ್ವೇತ ಶಿಲಾಫಲಕವಿತ್ತು. ನಂತರ ಅದನ್ನು ನಿಲ್ದಾಣದ ಮುಂಭಾಗದ ಸಣ್ಣ ತೋಟಕ್ಕೆ ಸಾಗಿಸಲಾಯಿತು. ಮುಂದೆ ಅದು ಅಲ್ಲಿಂದಲೂ ಕಣ್ಮರೆಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT