ಬುಧವಾರ, ಏಪ್ರಿಲ್ 21, 2021
23 °C

ಅನುಭವ ಮಂಟಪ: ಮೀಸಲಾತಿ ಹೋರಾಟವಲ್ಲ, ಧಮ್ಕಿ

ಜೆ. ಶ್ರೀನಿವಾಸನ್‌ Updated:

ಅಕ್ಷರ ಗಾತ್ರ : | |

ಕುರುಬರು, ಲಿಂಗಾಯತ ಪಂಚಮಸಾಲಿ ಸಮುದಾಯದವರು ಮೀಸಲಾತಿ ಪಟ್ಟಿಯಲ್ಲಿನ ಪರಿಷ್ಕರಣೆ ಹಾಗೂ ಒಕ್ಕಲಿಗರು ಪ್ರಮಾಣ ಹೆಚ್ಚಿಸಬೇಕೆಂಬ ಬೇಡಿಕೆ ಮುಂದಿಟ್ಟು ಹೋರಾಟದ ಹಾದಿ ಹಿಡಿದಿದ್ದಾರೆ. ರಾಜ್ಯ ದಲ್ಲಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ಪ್ರಬಲವಾಗಿರುವ ಈ ಸಮುದಾ ಯಗಳು ಮೀಸಲಾತಿಯಲ್ಲಿ ಹೆಚ್ಚಿನ ಪಾಲು ಕೇಳಿ ನಡೆಸುತ್ತಿರುವ ಚಟುವಟಿಕೆಗಳನ್ನು ಹೋರಾಟ ಎಂದು ವ್ಯಾಖ್ಯಾನಿಸುವುದು ಕಷ್ಟ. ನಿಜವಾದ ಅರ್ಥದಲ್ಲಿ ಈಗ ಪ್ರಬಲ ಸಮುದಾಯಗಳು ಸರ್ಕಾರಕ್ಕೆ ಧಮ್ಕಿ ಹಾಕುವ ಕೆಲಸವನ್ನು ಮಾಡುತ್ತಿವೆ.


ಜೆ. ಶ್ರೀನಿವಾಸನ್‌

‘ಸಾಮಾಜಿಕ ನ್ಯಾಯ’ ಭಾರತದ ಸಂವಿಧಾನದ ಪ್ರಸ್ತಾವನೆಯ ಮೂಲ ಅಂಶ. ಈಗ ಸರ್ಕಾರವು ಒತ್ತಡಗಳಿಗೆ ಮಣಿದು ಪ್ರಬಲ ಸಮುದಾಯಗಳು ಮುಂದಿಟ್ಟಿರುವ ಬೇಡಿಕೆಯನ್ನು ಒಪ್ಪಿಕೊಂಡರೆ ಸಾಮಾಜಿಕ ನ್ಯಾಯದ ಸಮಾಧಿ ಆಗುತ್ತದೆ. ಮೀಸಲಾತಿ ಎಂದರೆ ಸರ್ಕಾರಿ ಮತ್ತು ಅರೆ ಸರ್ಕಾರಿ ವ್ಯವಸ್ಥೆಯಲ್ಲಿ ವಿವಿಧ ಸಮುದಾಯಗಳಿಗೆ ಪ್ರಾತಿನಿಧ್ಯ ಕಲ್ಪಿಸುವುದು. ಈಗ ಶೇಕಡ 50ರ ಮಿತಿಯಲ್ಲಿ ಮೀಸಲಾತಿ ಇದೆ. ಸಮಾಜದ ಅತ್ಯಂತ ಕೆಳ ಸ್ತರದಲ್ಲಿರುವ ಸಣ್ಣ, ಅತಿಸಣ್ಣ ಸಮುದಾಯಗಳು ಸರ್ಕಾರಿ ನೌಕರಿ ಮತ್ತು ಉನ್ನತ ಶಿಕ್ಷಣದಲ್ಲಿ ಅಲ್ಪ ಪ್ರಮಾಣದಲ್ಲಿ ಪ್ರಾತಿನಿಧ್ಯ ಪಡೆಯುವುದಕ್ಕೆ ಮೀಸಲಾತಿ ದಾರಿ ಮಾಡಿಕೊಟ್ಟಿದೆ. ಆದರೆ, ಈಗಿನ ಬೆಳವಣಿಗೆಗಳು ಅಂತಹ ಎಲ್ಲ ಅವಕಾಶಗಳನ್ನೂ ಇಲ್ಲವಾಗಿಸುತ್ತವೆ.

ಈಗಲೇ ಮೀಸಲಾತಿ ಅರ್ಥ ಕಳೆದುಕೊಂಡಂತಾಗಿದೆ. ನ್ಯಾಯಾಂಗ, ಶಾಸಕಾಂಗದಲ್ಲಿ ಮೀಸಲಾತಿ ಇಲ್ಲ. ಕಾರ್ಯಾಂಗದಲ್ಲಿ ಮಾತ್ರ ಮೀಸಲಾತಿ ಇದೆ. ಸರ್ಕಾರಿ ಉದ್ಯೋಗಗಳ ಸಂಖ್ಯೆಯಲ್ಲಿ ಗಣನೀಯ ಕುಸಿತ ಆಗುತ್ತಿದೆ. ಇರುವುದರಲ್ಲೂ ಕೆಳಹಂತದ ಉದ್ಯೋಗಗಳೇ ಹೆಚ್ಚಿನ ಸಂಖ್ಯೆಯಲ್ಲಿವೆ. ಅಲ್ಲಿ ಮಾತ್ರ ಮೀಸಲಾತಿ ನಿರೀಕ್ಷಿಸಬಹುದಾದ ಸ್ಥಿತಿ ಇದೆ. ಸಾರ್ವಜನಿಕ ವಲಯದ ಉದ್ದಿಮೆಗಳಲ್ಲಿ ಕಾಯಂ ನೌಕರರ ನೇಮಕಾತಿ ಸ್ಥಗಿತಗೊಳ್ಳುವ ಹಂತಕ್ಕೆ ತಲುಪಿದೆ. ವಿಮಾನ ನಿಲ್ದಾಣಗಳೂ ಅದಾನಿ, ಅಂಬಾನಿಯಂತಹ ಉದ್ಯಮಿಗಳ ಪಾಲಾಗುತ್ತಿವೆ. ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಹೂಡಿಕೆ ಹಿಂದೆಗೆತ, ಖಾಸಗೀಕರಣ ವೇಗ ಪಡೆದುಕೊಂಡಿದೆ. ಸರ್ಕಾರದಲ್ಲಿ ಬ್ಯಾಕ್‌ಲಾಗ್‌ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನನೆಗುದಿಗೆ ಬಿದ್ದಿದೆ. ಲಭ್ಯವಿರುವ ಸಣ್ಣ ಸಂಖ್ಯೆಯ ಹುದ್ದೆಗಳಲ್ಲೇ ಮೀಸಲಾತಿಯ ಪಾಲು ಪಡೆಯಬೇಕಾದ ಶೋಚನೀಯ ಸ್ಥಿತಿಯಲ್ಲಿ ತಳ ಸಮುದಾಯಗಳು ಇವೆ.

ಮೀಸಲಾತಿ ಎಂಬುದು ಪ್ರಾತಿನಿಧ್ಯ ನೀಡು ವುದಕ್ಕಷ್ಟೇ ಸೀಮಿತವಾದ ವ್ಯವಸ್ಥೆ ಅಲ್ಲ. ಸಮಾನರ ನಡುವೆ ಸ್ಪರ್ಧೆ ಇರಬೇಕೆಂಬ ಮಹತ್ತರವಾದ ಉದ್ದೇಶ ವನ್ನೂ ಹೊಂದಿದೆ. ಈಗ ವಿವಿಧ ಸಮುದಾಯ ಗಳು ಮುಂದಿಟ್ಟಿರುವ ಬೇಡಿಕೆಗಳಿಗೆ ಒಪ್ಪಿಗೆ ದೊರೆತರೆ ಸಮಾನರ ನಡುವೆ ಸ್ಪರ್ಧೆಯ ಬದಲಾಗಿ ಅಸಮಾನರ ನಡುವೆ ಸ್ಪರ್ಧೆಗೆ ಬಾಗಿಲು ತೆರೆದಂತಾಗುತ್ತದೆ. ಎಲ್ಲ ರೀತಿಯಿಂದಲೂ ಪ್ರಬಲವಾಗಿರುವ ಸಮುದಾಯದ ಜನರು ಕೆಳ ಹಂತದಲ್ಲಿರುವ, ಶಕ್ತಿಯೇ ಇಲ್ಲದ ಸಮುದಾಯಗಳ ಜನ ರೊಂದಿಗೆ ಸ್ಪರ್ಧೆಗೆ ಇಳಿಯಲು ಅವಕಾಶ ದೊರೆಯುತ್ತದೆ. ಸಹಜವಾಗಿಯೇ ಎಲ್ಲ ಸೌಲಭ್ಯಗಳೂ ಪ್ರಬಲರ ಪಾಲಾಗುತ್ತವೆ. ಕೆಳಸ್ತರದಲ್ಲಿರುವ ಸಮುದಾಯಗಳು ಮತ್ತಷ್ಟು ಅಂಚಿಗೆ ಸರಿಯುವ ಅಪಾಯ ಇದೆ.

ಪ್ರವರ್ಗಗಳ ಬದಲಾವಣೆ, ಹೆಚ್ಚಿನ ಮೀಸಲಾತಿಯ ಬೇಡಿಕೆ ಇಡುತ್ತಿರುವ ಸಮುದಾಯಗಳಿಗೆ ತಾವು ಏಕೆ ಬೇಡಿಕೆ ಮಂಡಿಸುತ್ತಿದ್ದೇವೆ ಎಂಬುದೇ ಗೊತ್ತಿಲ್ಲ. ಪಂಚಮಸಾಲಿ ಸಮುದಾಯದ ಬೇಡಿಕೆ ಇದಕ್ಕೊಂದು ಉದಾಹರಣೆ. ಪಂಚಸಾಲಿಗಳಿಗೆ ಈಗಾಗಲೇ ಪ್ರವರ್ಗ ‘3ಬಿ’ ಅಡಿಯಲ್ಲಿ ಮೀಸಲಾತಿ ಇದೆ. ಪ್ರವರ್ಗ ‘2ಎ’ ಮೀಸಲಾತಿ ಏಕೆ ಬೇಕು? ಎಂಬುದನ್ನು ಅವರು ಹೇಳುತ್ತಿಲ್ಲ. ‘2ಎ’ ಪ್ರವರ್ಗದಲ್ಲಿ ನಿಬಂಧನೆಗಳೇನೂ ಉದಾರವಾಗಿಲ್ಲ. ಕುರುಬರು ಎಸ್‌.ಟಿ ಪಟ್ಟಿಗೆ ಸೇರಿಸಬೇಕೆಂಬ ಬೇಡಿಕೆಯೂ ತಪ್ಪೇ. ಎಸ್‌.ಟಿ ಪಟ್ಟಿಯಲ್ಲಿ 51 ಜಾತಿಗಳಿವೆ. 2011ರ ಜನಗಣತಿ ಪ್ರಕಾರ, ರಾಜ್ಯದಲ್ಲಿ ಪರಿಶಿಷ್ಟ ಪಂಗಡಗಳ ಜನಸಂಖ್ಯೆ ಸುಮಾರು 50 ಲಕ್ಷದಷ್ಟಿದೆ. ಅದರಲ್ಲಿ ನಾಯಕರು, ಬೇಡರು ಮೀಸಲಾತಿಯಲ್ಲಿ ಹೆಚ್ಚಿನ ಪಾಲು ಪಡೆಯುತ್ತಿದ್ದಾರೆ. ರಾಜಕೀಯದಲ್ಲಿ ಈ ಎರಡೇ ವರ್ಗಗಳ ಪ್ರಾತಿನಿಧ್ಯ ಇದೆ. ದೊಡ್ಡ ಜನಸಂಖ್ಯೆಯನ್ನು ಹೊಂದಿರುವ ಕುರುಬರೂ ಎಸ್‌.ಟಿ ಪಟ್ಟಿ ಸೇರಿದರೆ ಎಸ್‌.ಟಿ ಪಟ್ಟಿಯಲ್ಲಿರುವ ಸೋಲಿಗರು, ಇರುಳಿಗರಂತಹ ಸಣ್ಣ ಸಮುದಾಯಗಳಿಗೆ ಪ್ರಾತಿನಿಧ್ಯವನ್ನು ಊಹಿಸಲೂ ಸಾಧ್ಯವಾಗದು.

ಪ್ರಬಲ ಸಮುದಾಯಗಳ ಬೇಡಿಕೆ ಈಡೇರಿದರೆ ಸ್ಪರ್ಧೆಯ ಸ್ವರೂಪದಲ್ಲಿ ಬದಲಾವಣೆ ಆಗುತ್ತದೆ. ಸಮ ಜೋಡಿಗಳ ನಡುವಿನ ಸ್ಪರ್ಧೆಯ ಬದಲಾಗಿ ಸಣ್ಣವರ ಜತೆ ಪ್ರಬಲರ ಸ್ಪರ್ಧೆಗೆ ಅವಕಾಶ ಸಿಗುತ್ತದೆ. ಅತ್ಯಂತ ಕಡಿಮೆ ಜನಸಂಖ್ಯೆ ಇರುವವರು, ಆರ್ಥಿಕ, ಶೈಕ್ಷಣಿಕ ಶಕ್ತಿಯೇ ಇಲ್ಲದ ಸಮುದಾಯಗಳು ಮುಗಿದುಹೋಗುತ್ತವೆ. ಚಿನ್ನಪ್ಪರೆಡ್ಡಿ ಆಯೋಗದ ವರದಿಯಲ್ಲಿ ‘ಜನಸಂಖ್ಯೆ ತಿಳಿಯದ ಸಮುದಾಯ’ಗಳ ದೊಡ್ಡ ಪಟ್ಟಿಯೇ ಇದೆ. ಅಂತಹ ಎಲ್ಲ ಸಮುದಾಯಗಳೂ ಹೇಳ ಹೆಸರಿಲ್ಲದಂತಾಗುತ್ತವೆ. ದೊಡ್ಡ ಜಾತಿಗಳು ಹಿಂದುಳಿದ ವರ್ಗಗಳ ‘3ಎ’ ಅಥವಾ ‘3ಬಿ’ ಪ್ರವರ್ಗಗಳಿಂದ ಪ್ರವರ್ಗ ‘2ಎ’ ಪಟ್ಟಿಗೆ ಬರುವುದು ಮತ್ತು ‘2ಎ’ ಪಟ್ಟಿಯಿಂದ ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರುವುದು ಹಿಂದುಳಿದ, ತುಳಿತಕ್ಕೊಳಗಾದ, ದಲಿತ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಜನರ ಹಿತಾಸಕ್ತಿಯ ದೃಷ್ಟಿಯಿಂದ ಅಪಾಯಕಾರಿ ನಡೆ. ದುರ್ಬಲ ವರ್ಗಗಳಿಗೆ ದೊರಕುವ ಸೌಲಭ್ಯಗಳನ್ನು ಪ್ರಬಲ ಸಮುದಾಯಗಳು ಕಬಳಿಸಲು ದಾರಿಯಾಗುತ್ತದೆ. ದೊಡ್ಡ ಸಮುದಾಯಗಳ ಬೇಡಿಕೆ ಈಡೇರಿದಲ್ಲಿ ಸಣ್ಣ ಮತ್ತು ಸಮಾಜದ ಅಂಚಿನಲ್ಲಿರುವ ಸಮುದಾಯಗಳ ಜನರು ಉನ್ನತ ಶಿಕ್ಷಣ, ಸರ್ಕಾರಿ ನೌಕರಿ ಮತ್ತು ದೇಶದ ಸಂಪತ್ತಿನಲ್ಲಿ ಪಡೆಯಬಹುದಾದ ಪಾಲಿನ ಪ್ರಮಾಣ ಕ್ಷೀಣಿಸಲಿದೆ.

ದೊಡ್ಡ ಜಾತಿಗಳು ತಮಗಿರುವ ರಾಜಕೀಯ ಶಕ್ತಿಯನ್ನು ಬಳಸಿಕೊಂಡು ಸರ್ಕಾರವನ್ನು ಬೆದರಿಸುವ ಕೆಲಸಕ್ಕೆ ಇಳಿದಿವೆ. ಸಮುದಾಯದ ಶಾಸಕರನ್ನು ತೋರಿಸುತ್ತಾ, ಮೀಸಲಾತಿಯ ಬೇಡಿಕೆ ಈಡೇರಿಸದಿದ್ದರೆ ಸರ್ಕಾರವನ್ನೇ ಪತನಗೊಳಿಸುವುದಾಗಿ ಧಮ್ಕಿ ಹಾಕುತ್ತಿವೆ. ಸಂವಿಧಾನ, ಸುಪ್ರೀಂ ಕೋರ್ಟ್‌ ಯಾವುದಕ್ಕೂ ಗೌರವ ನೀಡದೆ ಬೆದರಿಸುವ ಕೆಲಸ ನಡೆಯುತ್ತಿದೆ. ಇದರಿಂದಾಗಿ ಸಣ್ಣ ಸಮುದಾಯಗಳ ಅಳಿವು, ಉಳಿವಿನ ಪ್ರಶ್ನೆ ಎದುರಾಗಿದೆ. ಮೀಸಲಾತಿ ಬೇಡಿಕೆಯ ಹುಚ್ಚು ನದಿ ಹರಿಯುತ್ತಿದೆ. ಸರ್ಕಾರ ಎಚ್ಚರ ವಹಿಸದಿದ್ದರೆ, ಸಣ್ಣ, ಅಂಚಿನಲ್ಲಿರುವ ಮತ್ತು ಶೋಷಿತ ಸಮುದಾಯಗಳು ಈ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗುತ್ತವೆ.

ಪ್ರಬಲ ಸಮುದಾಯಗಳ ಬೇಡಿಕೆಯಿಂದ ಸಣ್ಣ, ಶಕ್ತಿರಹಿತ ಸಮುದಾಯಗಳಿಗೆ ಅಪಾಯ ಎದುರಾಗಿರುವುದು ಕಣ್ಣೆದುರಿಗಿನ ಸತ್ಯ. ಈಗ ಅಂತಹ ಆತಂಕವನ್ನು ದೂರ ಮಾಡ ಬೇಕಾದರೆ ಮೀಸಲಾತಿ ಪಟ್ಟಿಯ ಸಮಗ್ರ ಮರು ವಿಂಗಡಣೆಯೊಂದೇ ಪರಿಹಾರ. ಎಲ್ಲ ಪ್ರವರ್ಗಗಳನ್ನೂ ಮರು ವಿಂಗಡಿಸಬೇಕು. ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮೊದಲು ಬಹಿರಂಗಪಡಿಸಬೇಕು. ವರದಿಯಲ್ಲಿ ಪ್ರತಿ ಸಮುದಾಯದ ಜನಸಂಖ್ಯೆ ಮತ್ತು ಸಾಮಾಜಿಕ ಸ್ಥಿತಿಗತಿಗಳ ಖಚಿತ ಅಂಕಿಅಂಶಗಳಿವೆ. ಅದನ್ನು ಆಧಾರವಾಗಿಟ್ಟುಕೊಂಡು ಎಲ್ಲ ಪ್ರವರ್ಗಗಳ ಮರುವಿಂಗಡಣೆ ಮಾಡುವ ಕೆಲಸ ಆಗಬೇಕು. ಸಮಬಲದ ಜಾತಿಗಳನ್ನು ಒಂದು ಪ್ರವರ್ಗಕ್ಕೆ ತರಬೇಕು. ಶಕ್ತಿ ಇಲ್ಲದ, ಸಣ್ಣ, ಅಂಚಿನಲ್ಲಿರುವ ಸಮುದಾಯಗಳನ್ನು ಒಂದೆಡೆ ತರುವ ಕೆಲಸ ಮಾಡಬೇಕು. ಆಗ ಮಾತ್ರ ಎಲ್ಲರನ್ನೂ ರಕ್ಷಿಸಲು ಸಾಧ್ಯವಾಗುತ್ತದೆ.

ಸಬಲೀಕರಣಕ್ಕೆ ಒತ್ತು ದೊರೆಯಬೇಕು

ದೊಡ್ಡ ಸಮುದಾಯಗಳಿಂದಲೂ ಮೀಸಲಾತಿಯ ಬೇಡಿಕೆ ಹೆಚ್ಚಿದಂತೆಲ್ಲ ಸಣ್ಣ ಸಮುದಾಯಗಳ ಅವಕಾಶಗಳು ಕಡಿಮೆಯಾಗುತ್ತಿವೆ. ಅವಕಾಶ ವಂಚಿತ ಸಮುದಾಯಗಳನ್ನು ಶಿಕ್ಷಣದ ಮೂಲಕ ಸಬಲೀಕರಣಗೊಳಿಸುವ ಕೆಲಸಕ್ಕೆ ಹೆಚ್ಚು ಆದ್ಯತೆ ದೊರಕಬೇಕು. ಅದಕ್ಕೆ ಪೂರಕವಾಗಿ ಸರ್ಕಾರಿ ಶಾಲೆಗಳನ್ನು ಬಲಪಡಿಸುವ ಮತ್ತು ವಿದ್ಯಾರ್ಥಿ ನಿಲಯಗಳ ಸಂಖ್ಯೆಯನ್ನು ಹೆಚ್ಚಿಸುವ ಕೆಲಸ ಸರ್ಕಾರದಿಂದ ಆಗಬೇಕು.

(ಲೇಖಕ: ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ)

ನಿರೂಪಣೆ: ವಿ.ಎಸ್. ಸುಬ್ರಹ್ಮಣ್ಯ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು