ಹಲವಾರು ದಶಕಗಳ ನಿರಂತರ ಗಣಿಗಾರಿಕೆಯ ನಂತರ, ಕಲ್ಲಿದ್ದಲು ನಿಕ್ಷೇಪ ಮುಗಿಯುತ್ತ ಬಂದಾಗ ಗಣಿಗಾರಿಕೆಯನ್ನು ನಿಲ್ಲಿಸುವುದರಲ್ಲಿ ಆಶ್ಚರ್ಯವೇನಿಲ್ಲ. ಅದೇ ರೀತಿ ಗಣಿಗಾರಿಕೆಯು ಆರ್ಥಿಕವಾಗಿ ಅನಾಕರ್ಷಕವಾದಾಗ ಅಥವಾ ತೀರಾ ಅಪಾಯಕಾರಿಯಾದಾಗಲೂ ಉತ್ಪಾದನೆ ಯನ್ನು ನಿಲ್ಲಿಸುವುದುಂಟು. ಆದರೆ ಉತ್ಪಾದನೆಯನ್ನು ಸ್ಥಗಿತಗೊಳಿಸುವುದಕ್ಕೂ ಗಣಿಗಳನ್ನು ಕೈಬಿಡುವುದಕ್ಕೂ (ಮೈನ್ ಅಬ್ಯಾಂಡನಿಂಗ್) ಮತ್ತು ಗಣಿಯನ್ನು ಮುಚ್ಚು ವುದಕ್ಕೂ (ಮೈನ್ ಕ್ಲೋಶರ್) ಬಹಳ ವ್ಯತ್ಯಾಸಗಳಿವೆ. 2009ಕ್ಕಿಂತ ಮುಂಚೆ ಉತ್ಪಾದನೆಯನ್ನು ಸ್ಥಗಿತಗೊಳಿಸಿದ ಕಂಪನಿಯು ಗಣಿಗಾರಿಕೆಯ ಯಂತ್ರಗಳೊಡನೆ ಅಲ್ಲಿಂದ ಕಾಲ್ತೆಗೆಯುತ್ತಿದ್ದುದೇ ಹೆಚ್ಚು. ಆನಂತರ ಅಂತಹ ಗಣಿಗಳಲ್ಲಿ ಉಳಿದಿರಬಹುದಾದ ನಿಕ್ಷೇಪಕ್ಕಾಗಿ ಅಕ್ರಮ ಗಣಿಗಾರಿಕೆ ಪ್ರಾರಂಭವಾಗುತ್ತಿತ್ತು. ಯಾವುದೇ ನಿಯಂತ್ರಣವಿಲ್ಲದ ಪರಿಸ್ಥಿತಿಯಲ್ಲಿ ಹಾಗೆ ಬಿಟ್ಟುಹೋದ ಗಣಿಗಳಲ್ಲಿ ನೂರಾರು ಅಪಘಾತಗಳು ನಡೆದ ನಿದರ್ಶನ ಗಳೂ ಉಂಟು.
ವ್ಯವಸ್ಥಿತವಾಗಿ ಗಣಿಯೊಂದನ್ನು ಮುಚ್ಚುವ ಪರಿ ಕಲ್ಪನೆಯೇ ನಮ್ಮ ದೇಶಕ್ಕೆ ಹೊಸದು. ಗಣಿಗಳನ್ನು ಮುಚ್ಚುವ ಸಂದರ್ಭದಲ್ಲಿ ವಿಧಿವತ್ತಾಗಿ ಕೈಗೊಳ್ಳಬೇಕಾದ ಎಲ್ಲ ಕ್ರಮಗಳನ್ನೂ ಒಳಗೊಂಡ ಯೋಜನೆಯೊಂದನ್ನು ಎಲ್ಲ ಕಂಪನಿಗಳೂ ಸಿದ್ಧಪಡಿಸಬೇಕೆಂಬ ಆದೇಶವನ್ನು 2009ರಲ್ಲಿ ಮೊದಲ ಬಾರಿಗೆ ಕೇಂದ್ರ ಸರ್ಕಾರ ಹೊರಡಿ ಸಿತು. ಗಣಿಗಾರಿಕೆಗೆ ಅನುಮೋದನೆ ಪಡೆಯುವ ಸಂದರ್ಭದಲ್ಲೇ ಇಂತಹ ಯೋಜನೆಯ ಸಲ್ಲಿಕೆಯನ್ನು ಕಡ್ಡಾಯ ಮಾಡಿತು. ಆದರೆ ಗಣಿ ಮುಚ್ಚುವ ಅನುಭವವೇ ಇಲ್ಲದ ಪರಿಸ್ಥಿತಿಯಲ್ಲಿ ಈ ಆದೇಶದಿಂದ ಹೆಚ್ಚಿನ ಪ್ರಯೋಜನವಾಗಲಿಲ್ಲ.
ಹೀಗಾಗಿ 2013ರಲ್ಲಿ, ಗಣಿ ಮುಚ್ಚುವ ಯೋಜನೆ ರೂಪಿಸುವುದಕ್ಕೆ ಸಂಬಂಧಿಸಿದಂತೆ ವಿವರವಾದ ಮಾರ್ಗದರ್ಶಿ ಸೂತ್ರಗಳನ್ನು ಕೇಂದ್ರ ಸರ್ಕಾರದ ಕಲ್ಲಿದ್ದಲು ಸಚಿವಾಲಯ ಪ್ರಕಟಿಸಿತು. ಗಣಿಯ ಸದ್ಯದ ಸ್ಥಿತಿಗತಿ, ನಿಕ್ಷೇಪದ ವಿವರ, ಭೂವೈಜ್ಞಾನಿಕ ಮಾಹಿತಿ, ಗಣಿಗಾರಿಕೆಯ ವಿಧಾನ, ಗಣಿಯನ್ನು ಭರ್ತಿಮಾಡಿ ಮುಚ್ಚುವ ರೀತಿ, ಪರಿಸರ ಮಾಲಿನ್ಯ ನಿಯಂತ್ರಣ ಕ್ರಮಗಳು, ಗಣಿಗಾರಿಕೆಯ ಪ್ರದೇಶವನ್ನು ಸೂಕ್ತವಾಗಿ ಉಪಚರಿಸಿ ನೀರು, ಮೇಲ್ಮಣ್ಣು, ಸಸ್ಯಗಳನ್ನು ಸಾಧ್ಯವಾ ದಷ್ಟೂ ಹಿಂದಿನ ಸ್ಥಿತಿಗೆ ತರಲು ಕೈಗೊಳ್ಳುವ ಕ್ರಮಗಳು, ಗಣಿ ಕಾರ್ಮಿಕರ ಮತ್ತು ಸ್ಥಳೀಯ ಸಮುದಾಯದ ಜೀವನೋ ಪಾಯಕ್ಕೆ ಪರ್ಯಾಯ ಮಾರ್ಗಗಳು ಮುಂತಾದ ವಿವರ ಗಳು ಈ ಗಣಿ ಮುಚ್ಚುವ ಯೋಜನೆಯಲ್ಲಿ ಇರುವುದು ಅಗತ್ಯವಾಗಿತ್ತು. ಇಂತಹ ಯೋಜನೆಗೆ ಒಪ್ಪಿಗೆ ನೀಡುವ ಅಧಿಕಾರವನ್ನು ಕಲ್ಲಿದ್ದಲು ಸಚಿವಾಲಯದ ಸ್ಥಾಯಿ ಸಮಿತಿಗೆ ನೀಡಲಾಯಿತು. ಈ ಯೋಜನೆಯನ್ನು ಕಾರ್ಯಗತಗೊಳಿಸುವಾಗ, ಸ್ವತಂತ್ರವಾಗಿ ಅದರ ಮೌಲ್ಯಮಾಪನ ನಡೆಸಿ, ಗುಣಮಟ್ಟದ ಕೆಲಸವನ್ನು ಪ್ರಮಾಣೀಕರಿಸುವ ಜವಾಬ್ದಾರಿಯನ್ನು ರಾಂಚಿಯಲ್ಲಿರುವ ಸೆಂಟ್ರಲ್ ಮೈನ್ ಪ್ಲಾನಿಂಗ್ ಅಂಡ್ ಡಿಸೈನ್ ಇನ್‌ಸ್ಟಿಟ್ಯೂಟ್, ಐಐಟಿ ಖರಗ್‍ಪುರ, ನಾಗಪುರದ ನ್ಯಾಷನಲ್ ಎನ್‍ವೈರನ್‍ಮೆಂಟಲ್ ಎಂಜಿನಿಯರಿಂಗ್ ರಿಸರ್ಚ್ ಇನ್‌ಸ್ಟಿಟ್ಯೂಟ್, ಧನಬಾದ್‌ನ ಇಂಡಿಯನ್ ಸ್ಕೂಲ್ ಆಫ್ ಮೈನ್ಸ್‌ಗೆ ನೀಡಲಾಯಿತು.
ಈ ಮಾರ್ಗದರ್ಶಿ ಸೂತ್ರಗಳ ಆಶಯ ಉತ್ತಮವಾಗಿ ದ್ದರೂ ಅವುಗಳನ್ನು ಉಲ್ಲಂಘಿಸಿದ ಅನೇಕ ನಿದರ್ಶನ ಗಳು ನಮಗೆ ದೊರೆಯುತ್ತವೆ. ಗಣಿ ಮುಚ್ಚುವ ಯೋಜನೆಯನ್ನು ಸಿದ್ಧಪಡಿಸಿ, ಅದಕ್ಕೆ ಅನುಮೋದನೆ ಪಡೆಯುವುದು ಕಡ್ಡಾಯವಾದ್ದರಿಂದ ಬಹುತೇಕ ಕಂಪನಿ ಗಳು ಅನುಮೋದನೆಯನ್ನು ಪಡೆದಿವೆ. ಗಣಿಯನ್ನು ಮುಚ್ಚಿದರೆ ಆ ಪ್ರದೇಶವನ್ನು ಮರಳಿ ಹಿಂದಿನ ಸ್ಥಿತಿಗೇ ತರಬೇಕು. ಇದು ದುಬಾರಿಯ ಕೆಲಸವಾದ್ದರಿಂದ ಹೆಚ್ಚಿನ ಬಂಡವಾಳ ಬೇಕು. ಒಂದು ಕಡೆ ಗಣಿ ಮುಚ್ಚುವುದರಿಂದ ಆಗುವ ನಷ್ಟ. ಇನ್ನೊಂದೆಡೆ ಗಣಿ ಪ್ರದೇಶದ ಪುನರುಜ್ಜೀವನಕ್ಕೆ ಮಾಡಬೇಕಾದ ವೆಚ್ಚ. ಇದರಿಂದ ತಪ್ಪಿಸಿಕೊಳ್ಳಲು ಉತ್ಪಾದನೆಯನ್ನು ನಿಲ್ಲಿಸಿ, ಅದನ್ನು ಕೇವಲ ತಾತ್ಕಾಲಿಕವೆಂದು ಬಿಂಬಿಸಿ, ಕಟ್ಟುನಿಟ್ಟಿನ ಕ್ರಮಗಳಿಂದ ಪಾರಾಗುವ ಒಳದಾರಿಗಳನ್ನು ಬಳಸುವ ಪ್ರಯತ್ನಗಳು ನಡೆದಿವೆ. ತಾತ್ಕಾಲಿಕವಾಗಿ ಉತ್ಪಾದನೆಯನ್ನು ನಿಲ್ಲಿಸಿದರೆ ಗಣಿ ಪ್ರದೇಶವನ್ನು ಪುನರುಜ್ಜೀವನ ಮಾಡಬೇಕಾಗಿಲ್ಲ. ಹೀಗೆ ಉತ್ಪಾದನೆಯನ್ನು ನಿಲ್ಲಿಸಲು ಹಲವು ಕಾರಣಗಳನ್ನು, ನೆವಗಳನ್ನು ನೀಡಲಾಗುತ್ತಿದೆ. ಗಣಿಗಾರಿಕೆ ನಡೆಯದ, ಆದರೆ ಗಣಿಯನ್ನು ಅಧಿಕೃತವಾಗಿ ಮುಚ್ಚದ ಅನೇಕ ನಿದರ್ಶನಗಳು ನಮಗೆ ದೊರೆಯುತ್ತವೆ.
ಗಣಿ ಮುಚ್ಚುವ ಕಾರ್ಯಾಚರಣೆಯನ್ನು ಆರ್ಥಿಕ ಹೊರೆ ಎಂದು ಭಾವಿಸದೇ ಅದು ಒದಗಿಸುವ ಅನೇಕ ಹೊಸ ಅವಕಾಶಗಳನ್ನು ಬಳಸಿಕೊಳ್ಳಬೇಕು. ಗಣಿಯನ್ನು ಮುಚ್ಚಿ, ಹಿಂದಿರುಗಿ ಪಡೆದ ಪ್ರದೇಶವನ್ನು ಸೌರಶಕ್ತಿ ಸ್ಥಾವರಗಳು, ತೋಟಗಾರಿಕೆ, ಕಾಂಪೋಸ್ಟ್ ತಯಾರಿಕೆ, ಪರಿಸರ ಪ್ರವಾಸೋದ್ಯಮ, ನೀರಿನ ಸಂಗ್ರಹ, ಸಂಸ್ಕರಣೆಯಂತಹ ವಿವಿಧ ಉದ್ದೇಶಗಳಿಗೆ ಸಮರ್ಥವಾಗಿ
ಬಳಸಿಕೊಳ್ಳಬಹುದು ಎಂಬುದು ತಜ್ಞರ ಅಭಿಪ್ರಾಯ.
2013ರ ಗಣಿ ಮುಚ್ಚುವ ಯೋಜನೆಗೆ ಸಂಬಂಧಿಸಿದ ಮಾರ್ಗದರ್ಶಿ ಸೂತ್ರಗಳು, ತಾಂತ್ರಿಕ ವಿವರಗಳಿಗೆ ಸೀಮಿತ ವಾಗಿವೆಯೇ ಹೊರತು ಗಣಿ ಕಾರ್ಮಿಕರ ಮತ್ತು ಸ್ಥಳೀಯ ಸಮುದಾಯದ ಪುನರ್ವಸತಿಯ ಬಗ್ಗೆ ಗಮನ ಹರಿಸಿಲ್ಲವೆಂಬುದು ಈ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ಸಂಘಟನೆಗಳ ದೂರು. ಈ ಮಾರ್ಗದರ್ಶಿ ಸೂತ್ರಗಳ 3.10ನೇ ಕಂಡಿಕೆಯಲ್ಲಿ ಪುನರ್ವಸತಿಯ ಬಗ್ಗೆ ಕೆಲವು ಅಂಶಗಳನ್ನು ಪ್ರಾಸಂಗಿಕವಾಗಿ ಸೇರಿಸಲಾಗಿದೆಯೇ ವಿನಾ ಅವುಗಳ ಅನುಷ್ಠಾನದಲ್ಲಿ ಕಂಪನಿಗಳಿಗೆ ಯಾವ ಕಾಳಜಿಯೂ ಇಲ್ಲ ಎಂಬುದು ಈ ಸಂಘಟನೆಗಳ ಅಭಿಪ್ರಾಯ. ಉದಾಹರಣೆಗೆ ಜಾರ್ಖಂಡ್‍ನ ಗೋಪಿನಾಥಪುರಂ ಪಹಾಡಿ ಬಸ್ತಿಯಲ್ಲಿ, ಕಲ್ಲಿದ್ದಲ ಗಣಿಯ ಸ್ವಲ್ಪ ಭಾಗವನ್ನು ಮುಚ್ಚಿರುವ ಈಸ್ಟರ್ನ್ ಕೋಲ್ ಫೀಲ್ಡ್ಸ್ ಕಂಪನಿಯು ಪುನರ್ವಸತಿಯ ಅಂಗವಾಗಿ ಮನೆಗಳನ್ನು ನಿರ್ಮಿಸಿದೆ. ಆದರೆ ಈ ವಸತಿಯ ಕೆಳಭಾಗದ ನೆಲದಾಳದಲ್ಲಿ ಉರಿ ಯುತ್ತಿರುವ ಕಲ್ಲಿದ್ದಲು ಸಂಗ್ರಹವಿದೆ. ಗಣಿಯನ್ನು ಸರಿ ಯಾದ ರೀತಿಯಲ್ಲಿ ಮುಚ್ಚದ ಕಾರಣ ಇಲ್ಲಿನ ಮನೆಗಳಲ್ಲಿ ಬಿರುಕುಗಳು ಕಂಡುಬಂದಿದ್ದು ಅದರಿಂದ ಸದಾಕಾಲ ಹೊಗೆ ಬರುತ್ತದೆ. ಮಳೆ ಬಂದಾಗ ವಿಷಕಾರಿ ಅನಿಲಗಳು ಮತ್ತು ಹಬೆ ಇಡೀ ಕಾಲೊನಿಯನ್ನು ಆವರಿಸುತ್ತದೆ. ಪುನ ರ್ವಸತಿಯ ಪ್ರದೇಶದಲ್ಲಿ ನೆಲದೊಳಗಿನ ಅಂತರ್ಜಲ ಬತ್ತಿಹೋಗಿರುವುದರಿಂದ ಇಲ್ಲಿನ ಜನ ಕುಡಿಯುವ ನೀರಿ ಗಾಗಿ ಪ್ರತಿದಿನವೂ ಎರಡು ಕಿ.ಮೀ. ದೂರದ ತೊರೆಗೆ ಅಲೆಯುತ್ತಾರೆ.
2013ರಲ್ಲಿ ಜಾರಿಗೆ ಬಂದ ಮಾರ್ಗದರ್ಶಿ ಸೂತ್ರಗಳಿಗೆ ಅನುಗುಣವಾಗಿ ನಡೆದಿರುವ ಕೆಲಸಗಳು, ಕಾರ್ಯಾಚರಣೆಯಲ್ಲಿರುವ ಕುಂದುಕೊರತೆಗಳನ್ನು ಸರಿಪಡಿಸಿ, ಗಣಿ ಕಾರ್ಮಿಕರು ಮತ್ತು ಸ್ಥಳೀಯ ಸಮುದಾಯದ ಪುನರ್ವಸತಿಗೆ ಅತಿಹೆಚ್ಚಿನ ಆದ್ಯತೆಯನ್ನು ನೀಡುವ ಉದ್ದೇಶದಿಂದ, ಕಳೆದ ನವೆಂಬರ್‌ನಲ್ಲಿ ಕಲ್ಲಿದ್ದಲು ಸಚಿವಾಲಯ ಹೊಸ ಯೋಜನೆಯ ಪ್ರಸ್ತಾವ
ವೊಂದನ್ನು ಆರ್ಥಿಕ ಸಚಿವಾಲಯಕ್ಕೆ ಸಲ್ಲಿಸಿದೆ. ಜಾರ್ಖಂಡ್‍ನ ಬೊಕಾರೋ ಮತ್ತು ಛತ್ತೀಸಗಡದ ಕೋರಿಯಾ ಜಿಲ್ಲೆಗಳಲ್ಲಿರುವ 18 ಕಲ್ಲಿದ್ದಲು ಗಣಿಗಳನ್ನು ವಿಧಿವತ್ತಾಗಿ ಮುಚ್ಚಿ, ಆ ಪ್ರದೇಶಗಳನ್ನು ಹಿಂದಿನ ಸ್ಥಿತಿಗೆ ತಂದು, ಸ್ಥಳೀಯ ಜನರ ಜೀವನೋಪಾಯಕ್ಕೆ ಪರ್ಯಾಯ ಮಾರ್ಗಗಳನ್ನು ಕಲ್ಪಿಸಿ, ಪುನರ್ವಸತಿಗೆ ಹೆಚ್ಚಿನ ಗಮನ ನೀಡುವುದು ಈ ಪ್ರಾಯೋಗಿಕ ಯೋಜನೆಯ ಉದ್ದೇಶ. ವಿಶ್ವಬ್ಯಾಂಕ್‍ನ ನೆರವು, ಮಾರ್ಗ ದರ್ಶನದಿಂದ ನಡೆಯಲಿರುವ, 8 ವರ್ಷಗಳ ಅವಧಿಯ, ₹ 7,500 ಕೋಟಿ ಅಂದಾಜು ವೆಚ್ಚದ ಈ ಯೋಜನೆ ಯಿಂದ, ಭವಿಷ್ಯದಲ್ಲಿ ಈ ಎಲ್ಲ ಕೆಲಸಗಳನ್ನೂ ಅಚ್ಚು ಕಟ್ಟಾಗಿ ಮಾಡಲು ಬೇಕಾದ ಸಾಮರ್ಥ್ಯ, ಅನುಭವ ಕರಗತವಾಗಬೇಕೆಂಬುದು ಸರ್ಕಾರದ ನಿರೀಕ್ಷೆ.
ಗಣಿಗಳನ್ನು ವ್ಯವಸ್ಥಿತವಾಗಿ ಮುಚ್ಚಿ, ಪುನರ್ವಸತಿಯ ಕೆಲಸಗಳಿಗೆ ಹೆಚ್ಚಿನ ಆದ್ಯತೆ ನೀಡಲು ಪ್ರಯತ್ನಿಸುತ್ತಿರುವ ಸರ್ಕಾರವೇ, ಅಂತಹ ಗಣಿಗಳಲ್ಲಿ ಮತ್ತೊಮ್ಮೆ ಗಣಿಗಾರಿಕೆ ಯನ್ನು ಪ್ರಾರಂಭಿಸುವ ಸೂಚನೆ ನೀಡಿರುವುದು ಗೊಂದಲಕ್ಕೆ ಕಾರಣವಾಗಿದೆ. ಕಲ್ಲಿದ್ದಲು ಖಾತೆ ರಾಜ್ಯ ಸಚಿವ ರಾವ್‌ಸಾಹೇಬ್ ಪಾಟೀಲ್ ದಾನ್ವೆ ಅವರು ಸರ್ಕಾರಿ ಸ್ವಾಮ್ಯದ ಕೋಲ್ ಇಂಡಿಯಾ ಸಂಸ್ಥೆಯ ಅಧೀನದಲ್ಲಿರುವ ಆದರೆ ಗಣಿಗಾರಿಕೆ ನಡೆಯದಿರುವ 20 ಗಣಿಗಳನ್ನು ಖಾಸಗಿ ಕಂಪನಿಗಳಿಗೆ ಹರಾಜಿನ ಮೂಲಕ ನೀಡುವುದಾಗಿ ಇದೀಗ ಘೋಷಿಸಿದ್ದಾರೆ. ಈ ಗಣಿಗಳಲ್ಲಿರುವ 38 ಕೋಟಿ ಟನ್‍ಗಳಷ್ಟು ಕಲ್ಲಿದ್ದಲು ನಿಕ್ಷೇಪದಿಂದ 3ರಿಂದ 4 ಕೋಟಿ ಟನ್‍ಗಳಷ್ಟು ಉತ್ತಮ ಗುಣಮಟ್ಟದ ಕಲ್ಲಿದ್ದಲನ್ನು ಪಡೆದು, ವಾರ್ಷಿಕ 100 ಕೋಟಿ ಟನ್‍ಗಳ ಉತ್ಪಾದನೆಯ ಗುರಿಯತ್ತ ಮುನ್ನಡೆಯಬಹುದೆಂಬುದು ಸರ್ಕಾರದ ವಾದ. ಕಲ್ಲಿದ್ದಲು ಬಳಕೆಯನ್ನು ಹಂತಹಂತ ವಾಗಿ ಕಡಿಮೆ ಮಾಡಿ, 2070ರ ವೇಳೆಗೆ ಶೂನ್ಯ ಉತ್ಸರ್ಜನೆಯನ್ನು ಸಾಧಿಸುವ ಬದ್ಧತೆಯನ್ನು ವ್ಯಕ್ತಪಡಿಸಿರುವ ಸರ್ಕಾರವು ಈ ಗೊಂದಲವನ್ನು ನಿವಾರಿಸುವುದು ಅಗತ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.