ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಗವತ್‌ ಭವಿಷ್ಯವಾಣಿ ಸಾಕಾರವಾದೀತೇ?

‘ಹಿಂದೂ ಅಖಂಡ ಭಾರತ’ ಕಲ್ಪನೆ ಹಾಗೂ ವಸ್ತುಸ್ಥಿತಿ...
Last Updated 27 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

ಮೋಹನ್‌ ಭಾಗವತ್‌ ನಮ್ಮ ದೇಶದ ಒಬ್ಬ ಪ್ರಭಾವಶಾಲಿ ವ್ಯಕ್ತಿ. ರಾಷ್ಟ್ರೀಯ ಸ್ವಯಂಸೇವಕ ಸಂಘದಂಥ ಒಂದು ಬಲಾಢ್ಯ ಸಂಸ್ಥೆಯ ಪ್ರಮುಖರಾಗಿರುವುದರಿಂದ ಅವರ ಪ್ರತಿಯೊಂದು ಮಾತನ್ನೂ ಮಾಧ್ಯಮಗಳು ಜೋರಾಗಿ ಬಿತ್ತರಿಸುತ್ತವೆ. ಆದರೆ ಅವರ ವಿಚಾರಗಳ ಬಗೆಗೆ ಕೂಲಂಕಷವಾದ ವಿಶ್ಲೇಷಣೆ ನಡೆಯುವುದು ಮಾತ್ರ ಕಡಿಮೆಯೇ. ಹರಿದ್ವಾರದಲ್ಲಿ ಇತ್ತೀಚೆಗೆ ನಡೆದ ಹಿಂದೂ ಸಂತ ಸಮ್ಮೇಳನದಲ್ಲಿ ಅವರು, ‘ಮುಂದಿನ 10– 15 ವರ್ಷಗಳಲ್ಲಿ ಅಖಂಡ ಭಾರತದ ನಮ್ಮಕನಸು ನನಸಾಗಲಿದೆ’ ಎಂಬ ಆಶ್ಚರ್ಯಕರವಾದ
ಭವಿಷ್ಯವಾಣಿಯನ್ನು ನುಡಿದರು.

ಈ ಕನಸು ಸಾಕಾರಗೊಳ್ಳುವುದು ಹೇಗೆ? ಇದರ ಬಗ್ಗೆ ಭಾಗವತ್‌ ಅವರು ಹೇಳಿದ್ದು ಹೀಗೆ: ‘ಎಲ್ಲವನ್ನೂ ಒಮ್ಮೆಲೇ ಸಾಧಿಸಲು ಸಾಧ್ಯವಿಲ್ಲ. ಆ ಶಕ್ತಿ ನನ್ನಲ್ಲಿಲ್ಲ. ಆ ಶಕ್ತಿ ಇರುವುದು ಜನರಲ್ಲಿ. ನಾವು ಜನರನ್ನು ತಯಾರು ಮಾಡುತ್ತಿದ್ದೇವೆ. ನಮ್ಮದು ಅಹಿಂಸೆಯ ಭಾಷೆ. ಆದರೆ ನಾವು ಕೈಯಲ್ಲಿ ಬಡಿಗೆ ಹಿಡಿದು ನಡೆಯುವೆವು. ಅದು ಭಾರಿ ದೊಡ್ಡ ಬಡಿಗೆ. ನಮಗೆ ಯಾರ ಬಗ್ಗೆಯೂ ದುರ್ಭಾವನೆ, ವೈರತ್ವ ಇಲ್ಲ. ಆದರೆ ಜಗತ್ತು ತಲೆಬಾಗುವುದು ಬಲದ ಮುಂದೆ ಮಾತ್ರ. ಆದ್ದರಿಂದ ನಮ್ಮ ಬಳಿ ಬಲ ಇರಬೇಕು. ಆ ಬಲ ಎಲ್ಲರಿಗೂ ಕಾಣುವಂತಿರಬೇಕು. ಅಖಂಡ ಭಾರತದ ಮಾರ್ಗದಲ್ಲಿ ಅಡ್ಡ ಬರುವವರು ದೂರ ಸರಿಯಬೇಕು, ಇಲ್ಲವಾದರೆ ಅವರನ್ನು ತಳ್ಳಿಹಾಕುವೆವು’.

ದರ್ಪ ಹಾಗೂ ವಿರೋಧಾಭಾಸದಿಂದ ಕೂಡಿರುವ ಈ ಹೇಳಿಕೆ ಹಲವು ಪ್ರಶ್ನೆಗಳನ್ನು ಹುಟ್ಟಿಸುತ್ತದೆ. 1947ರಲ್ಲಿ ಭಾರತದ ವಿಭಜನೆಯು ಒಂದು ಮಹಾದುರಂತ ಎಂಬುದು ನಿಸ್ಸಂದೇಹ. ನಂತರ 1971ರಲ್ಲಿ ಪಾಕಿಸ್ತಾನದ ವಿಭಜನೆಯಾಗಿ ಬಾಂಗ್ಲಾದೇಶ ಸ್ಥಾಪನೆಯಾಯಿತು. ಆದರೆ ಇಂದು ಸ್ವತಂತ್ರ ಮತ್ತು ಸಾರ್ವಭೌಮವಾಗಿರುವ ಮೂರು ದೇಶಗಳು ಮತ್ತೆ ಒಂದು ರಾಷ್ಟ್ರವಾಗಿ, ಅಂದರೆ ‘ಅಖಂಡ ಭಾರತ’ವಾಗಿ ಒಂದುಗೂಡಲು ಸಾಧ್ಯವೇ? ಸ್ವಾತಂತ್ರ್ಯೋತ್ತರ ಸೆಕ್ಯುಲರ್‌ ಭಾರತವನ್ನೇ ಹಿಂದೂ ರಾಷ್ಟ್ರವನ್ನಾಗಿ ಮಾಡಲು ಹೊರಟಿರುವ ಆರ್‌ಎಸ್‌ಎಸ್‌ ನೇತೃತ್ವದಲ್ಲಿ ನಾಳೆ ಈ ಮೂರು ದೇಶಗಳೂ ಕೂಡಿ ಬೃಹತ್ ‘ಹಿಂದೂ ಅಖಂಡ ಭಾರತ’ ಆಗಲು ಸಾಧ್ಯವೇ? ಇದಕ್ಕೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿನ ಜನತೆ, ಸರ್ಕಾರ ಹಾಗೂ ಸೇನೆಗಳು ಒಪ್ಪಬಹುದೇ? ‘ಭಾರಿ ದೊಡ್ಡ ಬಡಿಗೆ’ ಹಿಡಿದು ತನ್ನ ಬಲಶಾಲಿತ್ವವನ್ನು ತೋರಿಸುತ್ತ ನಿಂತಿರುವ ಆರ್‌ಎಸ್‌ಎಸ್‌ಗೆ ಹೆದರಿ ಈ ನೆರೆಯ ರಾಷ್ಟ್ರಗಳು ‘ಹಿಂದೂ ಅಖಂಡ ಭಾರತ’ದಲ್ಲಿ ವಿಲೀನಗೊಳ್ಳಲು ತಯಾರಾಗಬಹುದೇ?

ಇದಕ್ಕಿಂತ ಮುಖ್ಯವಾದ ಪ್ರಶ್ನೆಯೊಂದಿದೆ. ಇಂದಿನ ಭಾರತದಲ್ಲಿರುವ 15 ಪ್ರತಿಶತ ಮುಸ್ಲಿಮರೇ (ಹಾಗೂ ಸೆಕ್ಯುಲರ್‌ ಹಿಂದೂಗಳು ಕೂಡ) ‘ಹಿಂದೂ ರಾಷ್ಟ್ರ’ದ ಕಲ್ಪನೆಯನ್ನು ವಿರೋಧಿಸುತ್ತಿದ್ದಾರೆ. ನಾಳೆಯ ಕಲ್ಪಿತ ‘ಅಖಂಡ ಭಾರತ’ದಲ್ಲಿಯಂತೂ ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿನ ಪ್ರಜೆಗಳೂ ಸೇರಿ ಮುಸ್ಲಿಮರ ಜನಸಂಖ್ಯೆ 40 ಪ್ರತಿಶತಕ್ಕೂ ಹೆಚ್ಚಾಗುವುದು ಖಚಿತ. ಇದನ್ನು ಆರ್‌ಎಸ್‌ಎಸ್‌ ಸಮರ್ಥಕರು ಸ್ವಾಗತಿಸಿಯಾರೇ?

1947ರ ಪೂರ್ವದಲ್ಲಿ ವಿಭಜನೆಯನ್ನು ನಿಲ್ಲಿಸಲು ಆರ್‌ಎಸ್‌ಎಸ್‌ ಯಾವುದೇ ದೊಡ್ಡ ಪ್ರಯತ್ನ ಮಾಡಿರಲಿಲ್ಲ. ಏಕೆಂದರೆ ಬ್ರಿಟಿಷರ ವಿರುದ್ಧದ ಸ್ವಾತಂತ್ರ್ಯ ಚಳವಳಿಯಲ್ಲಿ ಆರ್‌ಎಸ್‌ಎಸ್‌ ಸಾಮೂಹಿಕವಾಗಿ ಭಾಗವಹಿಸಿರಲೇ ಇಲ್ಲ. 1951ರಲ್ಲಿ ಆರ್‌ಎಸ್‌ಎಸ್‌ ಹುಟ್ಟುಹಾಕಿದ ರಾಜಕೀಯ ಪಕ್ಷವಾದ ಭಾರತೀಯ ಜನಸಂಘ ತನ್ನ ಘೋಷಣಾ ಪತ್ರದಲ್ಲಿ ‘ಅಖಂಡ ಭಾರತ’ದ ಬಗ್ಗೆ ತನ್ನ ಬದ್ಧತೆಯನ್ನು ಪ್ರಕಟಿಸಿತ್ತು. ಆದರೆ ಕೆಲವು ವರ್ಷಗಳ ನಂತರ ಭಾರತ- ಪಾಕಿಸ್ತಾನ ಪುನಃ ಒಂದಾಗಬೇಕು ಎಂಬ ವಿಚಾರವನ್ನು ಜನಸಂಘ ಬಿಟ್ಟುಕೊಟ್ಟಿತು. ಜನಸಂಘದ ನಂತರ ಹೊಸ ರೂಪದಲ್ಲಿ ಹುಟ್ಟಿದ ಭಾರತೀಯ ಜನತಾ ಪಕ್ಷವಂತೂ ಇಲ್ಲಿಯವರೆಗೆ ಎಂದಿಗೂ ‘ಅಖಂಡ ಭಾರತ’ದ ಆಶ್ವಾಸನೆಯನ್ನು ನೀಡಿಲ್ಲ. ಆರ್‌ಎಸ್‌ಎಸ್‌ ಮಾತ್ರ ‘ಅಖಂಡ ಭಾರತ’ದ ಮದ್ದಳೆಯನ್ನು ಬಾರಿಸುತ್ತಲೇ ಇದೆ.

ಭೂತಕಾಲದಲ್ಲಿ ಯಾವುದೇ ಕಾರಣಕ್ಕಾಗಿ ವಿಭಜನೆಗೊಂಡ ರಾಷ್ಟ್ರಗಳು ಮತ್ತೆ ಒಂದು
ಗೂಡಬೇಕಾದರೆ ಅದು ಸ್ವಇಚ್ಛೆಯಿಂದ ಮಾತ್ರ ಸಾಧ್ಯ. ಯುದ್ಧದಿಂದಾಗಲೀ ಬಲಪ್ರಯೋಗದಿಂದಾಗಲೀ ಸಾಧ್ಯವಿಲ್ಲ. ಇಂದು ಭಾರತ ಮತ್ತು ಪಾಕಿಸ್ತಾನ ಎರಡೂ ಅಣ್ವಸ್ತ್ರಸಜ್ಜಿತವಾಗಿರುವುದರಿಂದ ಬಲಪ್ರಯೋಗಕ್ಕೆ ಆಸ್ಪದವೇ ಇಲ್ಲ. ನಾಲ್ಕು ಯುದ್ಧಗಳ ನಂತರ ಪಾಕಿಸ್ತಾನ ನಿಯಂತ್ರಿತ ಕಾಶ್ಮೀರದ (ಪಿಒಕೆ) ಚಿಕ್ಕ ಪ್ರದೇಶವನ್ನೂ ಮರಳಿ ಪಡೆಯಲು ನಮಗೆ ಸಾಧ್ಯವಾಗಿಲ್ಲದಿರುವಾಗ, ನಾವು ಇಡೀ ಪಾಕಿಸ್ತಾನವನ್ನು ‘ಅಖಂಡ ಭಾರತ’ದ ಅಂಗವನ್ನಾಗಿ ಮಾಡಲು ಸಾಧ್ಯವೇ?

ಇನ್ನು ಸ್ವಇಚ್ಛೆಯಿಂದ ಒಂದಾಗುವ ವಿಷಯವನ್ನು ಚರ್ಚಿಸೋಣ. ಇದಕ್ಕಾಗಿ ಮೊದಲು ದಕ್ಷಿಣ ಏಷ್ಯಾದಲ್ಲಿನ ಅತಿ ದೊಡ್ಡ ರಾಷ್ಟ್ರವಾಗಿರುವುದರಿಂದ ಭಾರತ ನೆರೆಹೊರೆಯವರಿಗೆ ಆದರ್ಶವಾಗಬೇಕು. ಸಾಮಾಜಿಕ ನ್ಯಾಯ, ವಿವಿಧ ಜಾತಿ- ಪಂಥಗಳ ನಡುವೆ ಶಾಂತಿ ಮತ್ತು ಸೌಹಾರ್ದ, ಆರ್ಥಿಕ ಸಮಾನತೆ, ಪರಿಪಕ್ವವಾದ ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಸುಶಾಸನ- ಈ ವಿಷಯಗಳಲ್ಲಿ ಭಾರತ ಅನುಕರಣೀಯ ಮಾದರಿಯಾಗಬೇಕು. ಆದರೆ ಇಂದು ನಮ್ಮ ದೇಶದಲ್ಲಿ ನಡೆದಿರುವುದೇನು?

ರಾಮನವಮಿ ಹಾಗೂ ಹನುಮಾನ್‌ ಜಯಂತಿಯ ಉತ್ಸವಗಳಲ್ಲಿ ಉತ್ತರ ಭಾರತದ ಹಲವಾರು ಸ್ಥಳಗಳಲ್ಲಿ ಕೋಮು ಗಲಭೆಗಳು ನಡೆದವು. ಕೆಲ ಹಿಂದೂ ಧರ್ಮಾಂಧರು ಪ್ರಥಮ ಬಾರಿ ಕೈಯಲ್ಲಿ ಬಡಿಗೆಯಷ್ಟೇ ಅಲ್ಲ ಖಡ್ಗ, ಚಾಕು ಮತ್ತು ಬಂದೂಕು ಹಿಡಿದುಕೊಂಡು ಮೆರವಣಿಗೆ ನಡೆಸಿದರು. ಮುಸ್ಲಿಮರನ್ನು ಬೆದರಿಸಿ ‘ಹಿಂದೂಸ್ತಾನ್ ಮೇ ರೆಹನಾ ಹೈ ತೊ ಜೈ ಶ್ರೀರಾಮ್‌ ಕೆಹನಾ ಹೋಗಾ’ (ಭಾರತದಲ್ಲಿ ಇರಬೇಕಾದರೆ ಜೈ ಶ್ರೀರಾಮ್‌ ಅನ್ನಲೇಬೇಕು) ಎಂದು ಕೂಗಿದರು. ದಿಲ್ಲಿಯ ಜಹಾಂಗೀರ್‌ಪುರಿಯಲ್ಲಿ ಬಿಜೆಪಿ ಆಡಳಿತದ ನಗರಪಾಲಿಕೆಯು ಬುಲ್ಡೋಜರ್ ಬಳಸಿ ಪ್ರಮುಖವಾಗಿ ಬಡ ಮುಸ್ಲಿಮರ ಮನೆ- ಅಂಗಡಿಗಳನ್ನು ಧ್ವಂಸಗೊಳಿಸಿತು. ಇದೆಲ್ಲದರ ವಿರುದ್ಧ ಆರ್‌ಎಸ್‌ಎಸ್‌ ಪ್ರತಿಭಟನೆಯ ದನಿ ಎತ್ತಿಲ್ಲ.

ಇದಕ್ಕಿಂತ ಮೊದಲು, ಕಾವಿ ಬಟ್ಟೆ ಧರಿಸಿದ ಹಲವಾರು ನಕಲಿ ಸ್ವಾಮಿಗಳು ಮುಸ್ಲಿಮರ ನರಸಂಹಾರಕ್ಕೆ ಕರೆ ಕೊಟ್ಟ ಆಘಾತಕಾರಿ ಘಟನೆಗಳೂ ನಡೆದಿವೆ. ಮುಸ್ಲಿಂ ವ್ಯಾಪಾರಿಗಳ ವಿರುದ್ಧ ಆರ್ಥಿಕ ಬಹಿಷ್ಕಾರದಂತಹ ದುಷ್ಕೃತ್ಯಗಳೂ ಹೆಚ್ಚಾಗಿವೆ. ಇಂದಿನ ಇಂಟರ್ನೆಟ್ ಯುಗದಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಜನರಿಗೆ ಇದೆಲ್ಲ ಗೊತ್ತಾಗುವುದಿಲ್ಲ ಎಂದು ತಿಳಿದವರು ಮೂರ್ಖರು.

ಮುಸ್ಲಿಂ ಸಮಾಜದಲ್ಲಿಯೂ ಧರ್ಮಾಂಧತೆ, ಆಕ್ರೋಶ ಬೆಳೆಯುತ್ತಿವೆ. ಇದೆಲ್ಲದರಿಂದಾಗಿ ಭಾರತದಲ್ಲಿ ಎರಡೂ ಪಂಥೀಯರ ನಡುವೆ ಮಾನಸಿಕ ವಿಭಜನೆಯ ಪಿತೂರಿ ನಡೆದಿದೆ. ಆರ್‌ಎಸ್‌ಎಸ್‌ ಮನಸ್ಸು ಮಾಡಿದರೆ ಹಿಂದೂ ಉಗ್ರವಾದವನ್ನು ನಿಲ್ಲಿಸಬಹುದು. ಅಷ್ಟು ತಾಕತ್ತು ಸಂಘದ ಬಳಿ ನಿಶ್ಚಿತವಾಗಿಯೂ ಇದೆ. ಆದರೆ ಹೀಗೆ ಮಾಡಿದರೆ ಸಂಘದ ರಾಜಕೀಯ ವಿಭಾಗವಾದ ಬಿಜೆಪಿಗೆ ತನ್ನ ಹಿಂದೂ ವೋಟ್‌ಬ್ಯಾಂಕ್ ಅನ್ನು ಉಳಿಸಿ ಬೆಳೆಸಿ ಅಧಿಕಾರದಲ್ಲಿ ಮುಂದುವರಿಯಲು ಆಗದು.

‘ಅಖಂಡ ಭಾರತ’ ಸದ್ಯಕ್ಕೆ ಸಾಧ್ಯವಿಲ್ಲ. ಕಾಲದ ಗಡಿಯಾರವನ್ನು ಹಿಂದಕ್ಕೆ ತಿರುಗಿಸಲು ಆಗದು. ಆದರೆ ಐರೋಪ್ಯ ಒಕ್ಕೂಟದ ರೀತಿ ತಮ್ಮ ತಮ್ಮ ಪ್ರತ್ಯೇಕ ರಾಷ್ಟ್ರೀಯತೆಯನ್ನು ಕಾಪಾಡಿಕೊಂಡು ಭಾರತ–ಪಾಕ್‌–ಬಾಂಗ್ಲಾ ಸಮೇತವಾಗಿ ‘ದಕ್ಷಿಣ ಏಷ್ಯಾ ಮಹಾಸಂಘ’ (confederation) ಸ್ಥಾಪಿಸುವುದು ಅವಶ್ಯಕವೂ ಅಪೇಕ್ಷಣೀಯವೂ ಹೌದು. ಇದು ಸಮಾನತೆ, ಪರಸ್ಪರ ಆದರ, ಪರಸ್ಪರ ಸಹಕಾರ, ಸರ್ವರಿಗೂ ಶಾಂತಿ ಮತ್ತು ಸುರಕ್ಷೆ, ಯಾವುದೇ ಭೇದಭಾವವಿಲ್ಲದೆ ಸರ್ವರ ಪ್ರಗತಿ– ಈ ತತ್ವಗಳ ಆಧಾರದ ಮೇಲೆ ಮಾತ್ರ ಸಾಧ್ಯ. ಮುಖ್ಯವಾಗಿ, ಎಲ್ಲ ಧರ್ಮಗಳ ಬಗ್ಗೆ ಸಮಾನ ಆದರ, ಸಾಂಸ್ಕೃತಿಕ ವೈವಿಧ್ಯದ ಸಂರಕ್ಷಣೆ ಮತ್ತು ಅನೇಕ ತೊರೆಗಳಿಂದ ಕೂಡಿದ ನಮ್ಮ ಸಾಮೂಹಿಕ ನಾಗರಿಕತೆಯ ಕುರಿತು ಅಭಿಮಾನ ಇವು ಅವಶ್ಯಕ. ಯಾವುದೇ ಧರ್ಮ ಅಥವಾ ಸಂಸ್ಕೃತಿಯ ಹಿರಿಮೆಯ ವಿಚಾರದಲ್ಲಿ ಹಟ ಹಿಡಿದರೆ ಇದು ಸಾಧ್ಯವೇ ಇಲ್ಲ.

ಮೊದಲು ನಮ್ಮ ಮನೆಯನ್ನು ಸರಿಪಡಿಸೋಣ. ಭಾರತದಲ್ಲಿ ಶಾಂತಿ, ನ್ಯಾಯ, ನೆಮ್ಮದಿಯ ಬೀಡನ್ನು ಕಟ್ಟೋಣ. ಆಗಮಾತ್ರ ಮುಂದಿನ ದಶಕಗಳಲ್ಲಿ ಭಾರತೀಯ ಉಪಖಂಡದಲ್ಲಿ ಏಕತೆ ಬೆಳೆದು ಭವಿಷ್ಯ ಉಜ್ವಲವಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT