ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ; ಕಪಿಸೈನ್ಯದ ದಾಳಿಗೆ ಶರಣಾದ ಮಲೆನಾಡು

ನೂರು ಕೋಟಿ ವೆಚ್ಚದ ಮಂಗೋದ್ಯಾನಕ್ಕಿಂತ 3 ಕೋಟಿ ವೈವಿಧ್ಯಮಯ ಸಸಿ ನೆಡುವುದು ಲೇಸು
Last Updated 4 ನವೆಂಬರ್ 2021, 22:30 IST
ಅಕ್ಷರ ಗಾತ್ರ

ಒಂದು ಕಾಲಕ್ಕೆ ಕ್ವಿಂಟಲ್‍ಗಟ್ಟಲೆ ಏಲಕ್ಕಿ ಬೆಳೆಯುತ್ತಿದ್ದ ಮಲೆನಾಡಿನ ರೈತನ ಎಲೆ ಹರಿವಾಣದಲ್ಲಿ ಏಲಕ್ಕಿ ಮಾಯವಾಗಿ ಬಹಳ ಕಾಲವಾಯಿತು. ಕಾರಣ ಮಂಗಗಳ ಬೆಳೆ ದಾಳಿ. ಜುಲೈ- ಆಗಸ್ಟ್ ತಿಂಗಳುಗಳಲ್ಲಿ ಅಡಕೆಗೊನೆಯಲ್ಲಿರುವ ಎಳೆ ಅಡಕೆಗಳನ್ನು ಕಿತ್ತು ಅದರ ಅಮಲು ಬರುವ ರಸವನ್ನು ಹೀರಿ ಕೆಳಗೆಸೆಯುತ್ತವೆ. ಮಂಗಗಳ ಒಂದು ಹಿಂಡು ಒಂದೇ ದಿನದಲ್ಲಿ ಹತ್ತಾರು ಕ್ವಿಂಟಲ್ ತೂಕದ ಅಡಕೆ ಮಿಡಿಯನ್ನು ಹಾಳುಮಾಡಬಲ್ಲದು. ಇದರ ಜೊತೆ ಹವಾಗುಣ ವಿಪರೀತದ ಕಾರಣಕ್ಕೆ, ಎಂದೆಂದೂ ಮುಗಿಯದ ಮಳೆಗಾಲದ ಕಾರಣಕ್ಕೆ ಅತ್ಯಧಿಕ ಕೊಳೆ ರೋಗ.

ಐವತ್ತು ವರ್ಷಗಳ ಹಿಂದೆಯೂ ಮಂಗಗಳಿದ್ದವು. ಅವುಗಳ ಉಪದ್ರವ ಸಹನೀಯವಾಗಿತ್ತು. ಆಗ ಕಾಡಿನಲ್ಲಿ ಮಂಗಗಳ ಆಹಾರಕ್ಕೆ ತೀವ್ರವಾದ ಕೊರತೆ ಕಾಡುತ್ತಿರಲಿಲ್ಲ. ಮಂಗಗಳು ದಾಳಿ ಮಾಡಲು ಬಂದಾಗ ಒಂದು ಗರ್ನಾಲು ಸಿಡಿಸಿದರೂ ಸಾಕಿತ್ತು, ಅವು ಬೆಟ್ಟ ಹತ್ತಿ ಓಡಿಹೋಗುತ್ತಿದ್ದವು.

21ನೇ ಶತಮಾನದ ಮಂಗಗಳು ಯಾವ ರೀತಿ ತಮ್ಮ ನಡವಳಿಕೆಯನ್ನು ಬದಲಾಯಿಸಿಕೊಂಡಿವೆ ಎಂದರೆ, ಹೆಂಚು ಇಳಿಸಿ ಅಡುಗೆ ಮನೆಯಲ್ಲಿರುವ ಪದಾರ್ಥಗಳನ್ನು ಅಪಹರಿಸುವಷ್ಟು. ಮನುಷ್ಯನಿಂದ ದೂರವೇ ಇರಲು ಬಯಸುತ್ತಿದ್ದ ಮಲೆನಾಡಿನ ಮಂಗಗಳು ಗರ್ನಾಲು, ಪಟಾಕಿ, ಏರ್‌ಗನ್ ಇದ್ಯಾವುದಕ್ಕೂ ಬಗ್ಗುತ್ತಿಲ್ಲ. ಇದಕ್ಕೆ ಬಹುಮುಖ್ಯ ಕಾರಣ ನಾವೇ ಆಗಿದ್ದೇವೆ ಎನ್ನುವುದು ಎದೆಗೆ ರಾಚುವ ಸತ್ಯ.

ಬೃಹತ್ ಯಂತ್ರಗಳು ಇವತ್ತು ಮಲೆನಾಡನ್ನು ಅಕ್ಷರಶಃ ಆಳುತ್ತಿವೆ. ರಾತ್ರಿ ಬೆಳಗಾಗುವುದರಲ್ಲಿ ಗುಡ್ಡಗಳು ಮಾಯವಾಗುತ್ತಿವೆ. ಸಮತಟ್ಟು ಮಾಡಿದ ಜಾಗದಲ್ಲಿ ಅಡಕೆ, ಶುಂಠಿ, ಅನಾನಸ್ ಬೆಳೆಯಲಾಗುತ್ತಿದೆ. ಮಧ್ಯ ಪಶ್ಚಿಮಘಟ್ಟ ಭಾಗದ ಹೊಸನಗರ, ಸಾಗರ, ಸೊರಬ ಕ್ಷೇತ್ರಗಳ ಅರಣ್ಯ ಪ್ರದೇಶಗಳು ಒತ್ತುವರಿಯ ಭೀತಿಯನ್ನು ಇನ್ನಿಲ್ಲದಂತೆ ಅನುಭವಿಸುತ್ತಿವೆ. ಈ ಹಿಂದೆಯೇ ಬಗರ್‌ಹುಕುಂ ಯೋಜನೆಯಿಂದಾಗಿ ಲಕ್ಷಾಂತರ ಎಕರೆ ಕಾಡು ಪ್ರದೇಶ ಹೇಳಹೆಸರಿಲ್ಲದಂತೆ ಮಾಯವಾಗಿದೆ. ವರ್ಷಪೂರ್ತಿ ಹಣ್ಣು ಬಿಡುವ ನೈಸರ್ಗಿಕ ಕಾಡು ಮರಗಳು, ಬಳ್ಳಿಗಳು, ಪೊದೆಗಳು ನಾಶವಾಗಿದ್ದರಿಂದ, ಮಂಗಗಳ ಆಹಾರ ಭದ್ರತೆಯನ್ನೇ ಕಸಿದುಕೊಂಡಂತಾಗಿದೆ. ಕಾಡಿನ ಮೇಲೆ ಅವಲಂಬಿತವಾಗಿದ್ದ ಮಂಗಗಳ ಸಮೇತ ಅನೇಕ ಕಾಡುಪ್ರಾಣಿಗಳು ಹಳ್ಳಿಮನೆಗಳಿಗೆ ನುಗ್ಗುತ್ತಿವೆ. ಮಲೆನಾಡಿನಲ್ಲಂತೂ ಮಂಗಗಳು ಥೇಟ್ ಭಯೋತ್ಪಾದಕರಂತೆ ವರ್ತಿಸುತ್ತಿವೆ.

ಪ್ರಾಣಿಗಳ ಆವಾಸಸ್ಥಾನವನ್ನು ಹಾಳು ಮಾಡಿದ ಮನುಷ್ಯನೀಗ ವನ್ಯಪ್ರಾಣಿಗಳ ಮೇಲೆ ತನ್ನ ಆಕ್ರೋಶ ತೋರುತ್ತಿದ್ದಾನೆ. ಮಂಗಗಳಿಗೆ ಸಾಮೂಹಿಕವಾಗಿ ವಿಷ ಹಾಕುವುದು ಮಾಮೂಲಿಯಾಗಿದೆ. ತೋಟಕ್ಕೆ ಬಂದ ಮಂಗಗಳನ್ನು ಕೋವಿಯಿಂದ ಕೊಂದೆಸೆಯುವುದು ಗಂಭೀರವಾದ ವಿಷಯವೇ ಅಲ್ಲವಾಗಿದೆ. ಮಂಗಗಳನ್ನು ಕೊಲ್ಲಲಾರದವರು ಒಂದಿಷ್ಟು ಜನ ಸೇರಿ ಮಂಗಗಳ ನಿಯಂತ್ರಣಕ್ಕೆ ಮಂಕಿಪಾರ್ಕ್ ಮಾಡಿ ಎಂದು ಈ ಹಿಂದೆ ಶಿವಮೊಗ್ಗದಲ್ಲಿ ಮೆರವಣಿಗೆ ಮಾಡಿದ್ದರು. ನೂರು ಕೋಟಿ ರೂಪಾಯಿ ವೆಚ್ಚ ಬೇಡುವ ಈ ಯೋಜನೆ ಸರ್ಕಾರಕ್ಕೆ ಆಕರ್ಷಣೀಯವಾಗಿ ತೋರಿದ್ದರಲ್ಲಿ ಉಪೇಕ್ಷೆಯೇನಿಲ್ಲ. ಒಂದು ನೂರು ಎಕರೆ ಜಾಗವನ್ನು ಹೊಸನಗರ ತಾಲ್ಲೂಕಿನ ಸಂಪೆಕಟ್ಟೆ ಪಂಚಾಯಿತಿ ವ್ಯಾಪ್ತಿಯಲ್ಲಿ ಗುರುತಿಸಿಯಾಗಿದೆ.

ಮಂಗಗಳು ಗುಂಪಿನಲ್ಲಿ ಇರುವ ಮತ್ತು ನಿರ್ದಿಷ್ಟ ಪ್ರದೇಶದಲ್ಲಿ ವಾಸಿಸುವ ಪ್ರಾಣಿಗಳು. ಮತ್ತೊಂದು ಗುಂಪಿನೊಂದಿಗೆ ಸೌಹಾರ್ದ ಸಂಬಂಧ ಅವುಗಳಿಗೆ ಸಾಧ್ಯವಿಲ್ಲ. ಅದು ಹೇಗೆ ಶಿವಮೊಗ್ಗ ಜಿಲ್ಲೆಯಲ್ಲಿರುವ ಅಷ್ಟೂ ಮಂಗಗಳ ಗುಂಪನ್ನು ಒಂದು ನಿರ್ದಿಷ್ಟ ಪ್ರದೇಶದಲ್ಲಿ ಕೂಡಿಹಾಕುತ್ತಾರೆ ಎನ್ನುವುದು ಯಕ್ಷಪ್ರಶ್ನೆ.

ಇಂಥ ಯೋಜನೆಯ ಬದಲಿಗೆ ದೀರ್ಘಕಾಲಿಕ ಶಮನಕ್ಕೆ ಮತ್ತೇನು ಮಾಡಬಹುದು ಎನ್ನುವುದನ್ನು ಕೊಂಚ ನೋಡೋಣ.

ಅತ್ಯಂತ ಹೆಚ್ಚು ಬೆಳೆದಾಳಿ ನಡೆಸುವ ಕೆಂಪುಮೂತಿಯ ವಯಸ್ಕ ಮಂಗವೊಂದಕ್ಕೆ ದಿನಕ್ಕೆ ಸುಮಾರು ಅರ್ಧ ಕೆ.ಜಿ. ಹಸಿ ಆಹಾರ ಸಾಕಾಗುತ್ತದೆ. ಹಲಸು, ಮಾವು, ಹೆಬ್ಬಲಸು, ಕಾಡುಕಣಗಿಲೆ, ಹುಳಿಮುರುಗ, ಉಪ್ಪಾಗೆ, ಸಳ್ಳೆ ಹೀಗೆ ಸುಮಾರು 83 ಜಾತಿಯ ಸಸ್ಯಪ್ರಭೇದಗಳ ಮೇಲೆ ಅವಲಂಬಿತವಾದ ಮಂಗಗಳು, ಅವುಗಳ ಹಣ್ಣು, ಕಾಯಿ, ಎಲೆ, ತೊಗಟೆ, ಹೂ ಇತ್ಯಾದಿಗಳನ್ನು ತಿಂದು ಬದುಕುತ್ತವೆ. ಹಳ್ಳಿಗಾಡಿನ ಜನರು ಹತ್ತಿರದ ಕಾಡಿನ ಕಿರುಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸಿ ಮಾರಾಟ ಮಾಡುತ್ತಾರೆ. ಅರಣ್ಯ ಇಲಾಖೆಯ ಸಮ್ಮತಿಯಿರುವ ಈ ವ್ಯವಹಾರದಲ್ಲಿ ಬಹಳಷ್ಟು ಬಾರಿ, ಕಿರು ಅರಣ್ಯ ಉತ್ಪನ್ನಗಳು ಮಂಗಗಳ ಮುಖ್ಯವಾದ ಆಹಾರವೇ ಆಗಿರುತ್ತವೆ. ಅದರಲ್ಲೂ ಹೆಚ್ಚು ಆಹಾರ ಬೇಡುವ ಮಂಗಗಳ ಸಂತಾನಾಭಿವೃದ್ಧಿ ಸಮಯದಲ್ಲೇ ಅಂದರೆ ಡಿಸೆಂಬರ್-ಏಪ್ರಿಲ್ ತಿಂಗಳುಗಳಲ್ಲೇ ಕಾಡಿನ ಅತಿ ಹೆಚ್ಚು ಉತ್ಪನ್ನಗಳನ್ನು ಸಂಗ್ರಹಿಸಲಾಗುತ್ತದೆ. ಕಾಡಿನಲ್ಲಿ ಆಹಾರದ ಲಭ್ಯತೆ ಕಡಿಮೆಯಾದಾಗ ಸ್ವಾಭಾವಿಕವಾಗಿ ಮಂಗಗಳು ಬೆಳೆ ದಾಳಿ, ಮನೆ ದಾಳಿ ನಡೆಸುವ ಸಾಹಸಕ್ಕೆ ಮುಂದಾಗುತ್ತವೆ.

ಉತ್ತರ ಕನ್ನಡದ ಶಿರಸಿ- ಸಿದ್ದಾಪುರ ಭಾಗದಲ್ಲಿ ನಡೆಸಿದ ಒಂದು ಅಧ್ಯಯನದ ಪ್ರಕಾರ, ಅಲ್ಲಿರುವ 40,000 ಮಂಗಗಳಿಗೆ ವಾರ್ಷಿಕವಾಗಿ 1,875 ಟನ್ ಕಾಡಿನ ಆಹಾರ ಬೇಕಾಗುತ್ತದೆ. ಅದೇ ಸಮಯದಲ್ಲಿ ಆ ಭಾಗದ ಕಾಡಿನಿಂದ 5,000 ಟನ್ನುಗಳಿಗಿಂತ ಹೆಚ್ಚಿನ ಹಸಿ ಪದಾರ್ಥಗಳನ್ನು ಕಿರುಅರಣ್ಯ ಉತ್ಪನ್ನದ ಹೆಸರಿನಲ್ಲಿ ಸಂಗ್ರಹಿಸಲಾಗುತ್ತದೆ. ಇದು ಸಮಸ್ಯೆಯ ಒಂದು ಮುಖ. ಇನ್ನೊಂದು ಮುಖ ಇಲ್ಲಿನ ಕೃಷಿಕರೇ ಆಗಿದ್ದು ಮಾತ್ರ ವಿಪರ್ಯಾಸ. ಮಲೆನಾಡಿನ ಪಾರಂಪರಿಕ ಅಡಕೆ ತೋಟದ ಮೇಲ್ಭಾಗಗಳಲ್ಲಿ ಸೊಪ್ಪಿನಬೆಟ್ಟವೆಂಬ ಸ್ವಾಭಾವಿಕವಾದ ಕಾಡು ಇರುತ್ತದೆ. ಇಲ್ಲಿಂದ ಹಸಿಸೊಪ್ಪು, ಒಣಗಿದ ಎಲೆ, ಕಟ್ಟಿಗೆ ಇವುಗಳನ್ನು ಆಯಾ ಕೃಷಿಕರು ಬಳಸುತ್ತಾರೆ. ಇದೇ ಬೆಟ್ಟದಲ್ಲಿ ಮಂಗಗಳ ಆಹಾರವೂ ಇರುತ್ತದೆ. ಹಸಿಸೊಪ್ಪಿಗಾಗಿ ಕಟ್ಟಿಗೆ ಕಡಿಯುವಾಗ ಮರದ ಅಲ್ಪಾಂಶವನ್ನೂ ಬಿಡದೆ ಕಡಿದು ಹಾಕಿದರೆ, ಅಂತಹ ಮರಗಳಲ್ಲಿ ಹೂ, ಕಾಯಿ, ಹಣ್ಣು, ಎಲೆ ಯಾವುದೂ ಸಿಗುವುದಿಲ್ಲ. ಇದು ಕಾಡಿನ ಜೀವಿಗಳ ಆಹಾರ ಭದ್ರತೆಗೆ ಕೊಡಲಿಯೇಟು. ಜೊತೆಗೆ ಹಣ್ಣು ಬಿಡುವ ಮರವೊಂದು ಸತ್ತು ಹೋದರೆ, ಅದನ್ನು ಮತ್ತೆ ನೆಡುವ ಪರಿಪಾಟ ಬಹುತೇಕ ಕೃಷಿಕರಲ್ಲಿ ಕಂಡು ಬರುವುದಿಲ್ಲ. ಉದಾಹರಣೆಯಾಗಿ, ಮಲೆನಾಡಿನ ಬೆಟ್ಟಗಳಲ್ಲಿ ಮೃದುವಾದ ಕಾಯಿಬಿಡುವ ನಸುಗುನ್ನಿಯೆಂಬ ಬಳ್ಳಿಯೊಂದಿತ್ತು. ಬಹಳ ಪೌಷ್ಟಿಕಾಂಶವಿರುವ ಎಳೆಕಾಯಿ
ಗಳನ್ನು ಮಂಗಗಳು ಬಹಳ ಇಷ್ಟಪಟ್ಟು ತಿನ್ನುತ್ತಿದ್ದವು. ಬಲಿತ ಕಾಯಿಯ ಮೇಲಿರುವ ಅಸಂಖ್ಯಾತ ರೋಮಗಳು ಮನುಷ್ಯನಿಗೆ ತಗುಲಿದರೆ ಅಸಾಧ್ಯ ತುರಿಕೆಯಾಗುತ್ತದೆ. ಇದನ್ನು ಪಿಡುಗು ಎಂದು ಭಾವಿಸಿದ ಇಲ್ಲಿನ ಕೃಷಿಕರು ಅದನ್ನು ಪ್ರತಿವರ್ಷ ಕಡಿದು ನಾಮಾವಶೇಷ ಮಾಡಿ, ಸಸ್ಯಪ್ರಭೇದದ ಕೊಂಡಿಯೊಂದು ಕಳಚುವುದಕ್ಕೆ ಕಾರಣರಾದರು.

ಕೃಷಿಕನಿಗೆ ಇತರೆ ಜೀವಿವೈವಿಧ್ಯದ ಜೀವನಕ್ರಮದ ಅರಿವೂ ಇರಬೇಕು. ಕಾಡಿನ ಪ್ರಾಣಿಗಳು ಅತಿಹೆಚ್ಚು ಬೆಳೆ ದಾಳಿ ಮಾಡಲುಪಕ್ರಮಿಸಿದರೆ, ಅದಕ್ಕೆ ಕಾರಣ ಹುಡುಕಬೇಕು. ಜೀವಜಾಲದ ಸರಪಣಿಯ ಯಾವುದೇ ಕೊಂಡಿ ಕಳಚಿದರೂ, ದೀರ್ಘಾವಧಿಯಲ್ಲಿ ತೊಂದರೆಗೊಳಗಾಗುವವನು ಮಾನವನೇ ಎಂಬ ತಿಳಿವಳಿಕೆ ಬರಬೇಕು.

ಸಾಗರ, ಹೊಸನಗರ, ಸೊರಬ, ತೀರ್ಥಹಳ್ಳಿ ಹೀಗೆ ಪಶ್ಚಿಮಘಟ್ಟಗಳಲ್ಲಿ ಸಾಗುವ ಯಾವುದೇ ರಸ್ತೆಯಲ್ಲಿ ಚಲಿಸಿದರೂ ದಟ್ಟವಾದ ಅರಣ್ಯ ಇಕ್ಕೆಲಗಳಲ್ಲೂ ಕಂಡುಬರುತ್ತದೆ. ರಸ್ತೆಯಿಂದ ಹತ್ತು ಮೀಟರ್ ಒಳಗೆ ಹೋದರೆ ಸಂಪೂರ್ಣ ಕಾಡು ನಾಶವಾದ ಬಯಲು ಪ್ರದೇಶ ಸಿಗುತ್ತದೆ. ವಿವಿಧ ಯೋಜನೆಗಳ ಹೆಸರಿನಲ್ಲಿ ಎಲ್ಲಾ ರಸ್ತೆಗಳನ್ನು ಮೇಲ್ದರ್ಜೆಗೇರಿಸಿ, ಅಗಲೀಕರಣಗೊಳಿಸಲಾಗುತ್ತಿದೆ. ಇದರಿಂದ ರಸ್ತೆ ಇಕ್ಕೆಲಗಳಲ್ಲಿರುವ ಅಳಿದುಳಿದ ಮರಗಳನ್ನು ಕಡಿಯಲಾಗುತ್ತಿದೆ. ಈ ತರಹದ ಒತ್ತುವರಿ ಮತ್ತು ಅಭಿವೃದ್ಧಿ ಕಾರ್ಯಗಳು ವನ್ಯಜೀವಿಗಳ ಆಹಾರ ಭದ್ರತೆಯನ್ನು ಸಂಪೂರ್ಣವಾಗಿ ಕಸಿದುಕೊಳ್ಳುತ್ತಿವೆ.

ಒಂದು ಜಿಲ್ಲೆಯ ಮಂಗಗಳ ದಾಳಿಯನ್ನು ನಿಯಂತ್ರಿಸಲು, ಮಂಗೋದ್ಯಾನವೆಂಬ ಯೋಜನೆಯೊಂದರ ಬದಲಿಗೆ, ಮಂಗಗಳಿಗೆ ಇಡೀ ವರ್ಷ ಕಾಡಿನಲ್ಲೇ ಆಹಾರ ಲಭಿಸುವಂತಹ ಸಸ್ಯಪ್ರಭೇದಗಳನ್ನು ಅರಣ್ಯ ಇಲಾಖೆಯು ರೈತರ ಸಹಯೋಗದೊಂದಿಗೆ ಮರುಸ್ಥಾಪನೆ ಮಾಡಬೇಕು. ನೂರು ಕೋಟಿ ವೆಚ್ಚ ಮಾಡಿ ಮಂಗೋದ್ಯಾನವನ್ನು ಮಾಡುವುದಕ್ಕಿಂತ ಮೂರು ಕೋಟಿ ವೈವಿಧ್ಯಮಯ ಸಸಿಗಳನ್ನು ಊರುವುದು ಲೇಸು.

ಅಖಿಲೇಶ್‌ ಚಿಪ್ಪಳಿ
ಅಖಿಲೇಶ್‌ ಚಿಪ್ಪಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT