ವಿದ್ಯಾರ್ಥಿಗಳಿಗೆ ಶಿಕ್ಷಕರು ಶಿಕ್ಷೆಯನ್ನು ಕೊಡಬಾರದೆಂಬ ವಿಷಯದಲ್ಲಿ ಒಂದಷ್ಟು ಚರ್ಚೆಗಳು ಆಗಿವೆ, ನಿಯಂತ್ರಣ ಕ್ರಮಗಳೂ ಜಾರಿಗೊಂಡಿವೆ. ಮಕ್ಕಳ ಹಕ್ಕುಗಳ ಕಾರ್ಯಕರ್ತರು, ಸ್ವಯಂಸೇವಾ ಸಂಸ್ಥೆಗಳು, ಶಿಕ್ಷಣ ಇಲಾಖೆ... ಈ ಎಲ್ಲವೂ ಸೇರಿ ಒಂದಷ್ಟು ಅರಿವನ್ನು ಮೂಡಿಸಿವೆ. ಆದರೆ, ಇದೆಲ್ಲ ಗೋಚರವಾಗುವ ದೈಹಿಕ ಶಿಕ್ಷೆಗೆ ಸಂಬಂಧಿಸಿದ ವಿಚಾರವಾಯಿತು. ನಿಜವಾಗಿ ಶೈಕ್ಷಣಿಕ ನಿರ್ವಹಣೆಯೇ ಅದರ ಸ್ವರೂಪದಲ್ಲಿ ಶಿಕ್ಷಾತ್ಮಕ ಅನುಭವವನ್ನು ಹೊಂದಿದೆ. ಉದಾಹರಣೆಗೆ, ವರ್ತಮಾನದ ಶಿಕ್ಷಣದ ಏಕೈಕ ಗುರಿ ಫಲಿತಾಂಶವೊಂದೇ.
ಪರೀಕ್ಷಾ ಫಲಿತಾಂಶವು ಸ್ವಾಭಾವಿಕವಾಗಿ ಹೆಚ್ಚು ಮಹತ್ವವನ್ನು ಹೊಂದಿರುತ್ತದೆ. ಆದರೆ ಅದಕ್ಕಾಗಿ ಮಕ್ಕಳನ್ನು ಸಿದ್ಧಪಡಿಸುವ ವ್ಯವಸ್ಥೆ ತೀರಾ ಅವೈಜ್ಞಾನಿಕ ವಾಗಬಾರದು. ಅವೈಜ್ಞಾನಿಕತೆ ಎಲ್ಲಿದೆ ಎಂಬುದಕ್ಕೆ ವರ್ತಮಾನದ ಉದಾಹರಣೆ ಇದೆ. ಕೊರೊನಾ ಸಂದರ್ಭ ದಿಂದಾಗಿ ಬೋಧನೆಗಳು ಸಹಜವಾಗಿ ನಡೆದಿಲ್ಲ. ಆನ್‌ಲೈನ್‌ನಲ್ಲಿ ಒಂದಷ್ಟು ಬೋಧನೆ-ಕಲಿಕೆಯ ಪ್ರಕ್ರಿಯೆ ನಡೆದಿದೆ. ನಂತರ ತರಗತಿಗಳು ಆರಂಭವಾದಾಗ ಕಡಿತಗೊಂಡಿದೆ ಎಂದು ಹೇಳಲಿಕ್ಕಾಗಿ ಸೀಮಿತ ಪಾಠಗಳ ಕಡಿತವೂ ಆಯಿತು. ಬಹುಮಟ್ಟಿಗೆ ಹತ್ತು ತಿಂಗಳ ಬೋಧನೆಗಾಗಿ ರಚಿಸಲ್ಪಟ್ಟ ಪಠ್ಯವನ್ನು ಐದು ತಿಂಗಳ ಅವಧಿಯಲ್ಲಿ ಬೋಧಿಸಿ ಮುಗಿಸಬೇಕು ಎನ್ನುವುದೇ ಅವೈಜ್ಞಾನಿಕವಾಗಿದೆ. ಈ ಸಮಸ್ಯೆಯು ಕೊರೊನಾರಹಿತ ವರ್ಷಗಳಲ್ಲೂ ಇದೆ. ಪಠ್ಯಪುಸ್ತಕ ಬೋಧನೆಗೆ ಕಾಲಾವಧಿಯು ಜೂನ್‌ನಿಂದ ಮಾರ್ಚ್‌ವರೆಗೆ ಇದ್ದರೆ ಡಿಸೆಂಬರ್‌ನಲ್ಲಿ ಪಾಠಗಳನ್ನು ಮುಗಿಸಿ ನಂತರ ಪರೀಕ್ಷೆಗೆ ಸಿದ್ಧಪಡಿಸಲು ಗಮನ ಕೊಡಬೇಕೆಂಬ ಒತ್ತಡ ಸೃಷ್ಟಿ
ಯಾಗುತ್ತದೆ. ಅದೂ ಅವೈಜ್ಞಾನಿಕವೇ.
ಆದರೆ ಈಗ ನಡೆಯುತ್ತಿರುವುದು ಅದಕ್ಕಿಂತಲೂ ಹೆಚ್ಚು ಅವೈಜ್ಞಾನಿಕವಾದುದು. ಮಾರ್ಚ್, ಏಪ್ರಿಲ್, ಮೇ ತಿಂಗಳಿನಲ್ಲಿ ಬೋಧನೆ-ಕಲಿಕೆಯ ಪ್ರಕ್ರಿಯೆ ನಡೆಸ ಬೇಕು. ಅತ್ಯಧಿಕ ಉಷ್ಣತೆಯ ಕಾಲವಿದು. ಬಹಳ ಬೇಗ ಆಯಾಸವಾಗುತ್ತದೆ. ಜೊತೆಗೆ ಪಾಠಗಳನ್ನು ಬೇಗ ಮುಗಿಸುವ ಒತ್ತಡ ಇರುತ್ತದೆ. ಇದರ ನಡುವೆ ಪರೀಕ್ಷೆಗಳು. ಎಡೆಬಿಡದೆ ಕೆಲವು ಶಾಲಾ ಕಾಲೇಜುಗಳಲ್ಲಿ ಪರೀಕ್ಷೆಗಳು ನಡೆಯುತ್ತವೆ. ಪಾಠವನ್ನೇ ಮಾಡಿ ಮುಗಿಸದೆ ಪರೀಕ್ಷೆಯನ್ನು ಹೇಗೆ ಮಾಡಲು ಸಾಧ್ಯ ಎಂದು ಕೇಳಿದರೆ, ತಾಂತ್ರಿಕವಾಗಿ ಪಾಠ ಮುಗಿದಿದೆ ಎನ್ನಲು ಬೇಕಾದ ದಾಖಲೆ ಇರುತ್ತದೆ. ಆದರೆ ಒಂದು ಶೈಕ್ಷಣಿಕ ವರ್ಷಕ್ಕಾಗಿನ ಪಠ್ಯವನ್ನು ಶಿಕ್ಷಣ ಶಾಸ್ತ್ರವು ಹೇಳುವ ಬೋಧನಾ ಪದ್ಧತಿಯಲ್ಲಿ ಮಾಡಿ ಮುಗಿಸಲು ಒಂದೂವರೆಯಿಂದ ಎರಡು ಶೈಕ್ಷಣಿಕ ವರ್ಷಗಳು ಬೇಕಾಗುವಷ್ಟು ದೊಡ್ಡ ಗಾತ್ರದ ಪಠ್ಯಪುಸ್ತಕಗಳು ನಮಗೀಗ ಇರುವುದು. ಆ ಪಠ್ಯವನ್ನು ಸರಿಯಾದ ಬೋಧನಾ ಪದ್ಧತಿಯಲ್ಲಿ ಐದು ತಿಂಗಳುಗಳಲ್ಲಿ ತಾನು ಮಾಡಿದ್ದೇನೆ ಎಂದು
ಆತ್ಮಸಾಕ್ಷಿಗನುಗುಣವಾಗಿ ಹೇಳಲು ಯಾವ ಶಿಕ್ಷಕರಿಂದಲೂ ಸಾಧ್ಯವಿಲ್ಲ. ಇದನ್ನು ದುರಿತ ಕಾಲದ ಅನಿವಾರ್ಯ ಎಂದು ಒಪ್ಪಿಕೊಳ್ಳಬೇಕಾಗುತ್ತದೆ. ಆದರೆ ಪರೀಕ್ಷೆಗಳ ಹಾವಳಿಯನ್ನು ಹೇಗೆ ಒಪ್ಪಿಕೊಳ್ಳುವುದು?
ಮುಂಬರಲಿರುವ ಅಂತಿಮ ಪರೀಕ್ಷೆಯಲ್ಲಿ ಶೇಕಡ ನೂರು ಫಲಿತಾಂಶಕ್ಕಾಗಿ ತರಬೇತಿಯ ರೂಪದಲ್ಲಿ ನಡೆಯುವ ಪರೀಕ್ಷೆಗಳು ನಾನಾ ವಿಧಗಳಲ್ಲಿವೆ. ಒಂದಷ್ಟು ಸಂಸ್ಥೆಗಳು ಸೇರಿ ಸಾಮಾನ್ಯ ಪ್ರಶ್ನೆಪತ್ರಿಕೆ ರೂಪಿಸಿ ನಡೆಸುವ ಪರೀಕ್ಷೆಗಳು, ಒಂದೇ ಸಂಸ್ಥೆ ತನಗಾಗಿಯೇ ಪ್ರಶ್ನೆಪತ್ರಿಕೆ ರೂಪಿಸಿಕೊಂಡು ನಡೆಸುವ ಪರೀಕ್ಷೆಗಳು, ಶಿಕ್ಷಕರಿಗೇ ಎಲ್ಲವನ್ನೂ ಬಿಟ್ಟಿದ್ದು, ಪ್ರತಿದಿನ ಶಿಕ್ಷಕರು ಈ ಪಾಠವನ್ನು ಓದಿ ಬನ್ನಿ ಎಂದು ತಿಳಿಸಿ ಮರುದಿನ ಪರೀಕ್ಷೆ ನಡೆಸುವ ರೀತಿಯ ಪರೀಕ್ಷೆಗಳು. ಇವೆಲ್ಲವೂ ಅಂತಿಮ ಪರೀಕ್ಷೆಗಾಗಿ ಕವಾಯತಿನ ಮಾದರಿಯ ಪರೀಕ್ಷೆಗಳಾಗಿರುತ್ತವೆ.
ಪರೀಕ್ಷೆ ನಡೆಸಬೇಕಾದರೆ ಕಲಿಕೆ ನಡೆಯಬೇಕು. ಕಲಿಕೆ ನಡೆಯಬೇಕಾದರೆ ವಿಚಾರದ ಗ್ರಹಿಕೆ, ಗ್ರಹಿಸಿದ ವಿಚಾರವನ್ನು ಮನಸ್ಸಿನಲ್ಲಿ ದೃಢೀಕರಿಸಿಕೊಳ್ಳುವುದು, ದೃಢೀಕರಣಗೊಂಡದ್ದನ್ನು ಧಾರಣೆ ಮಾಡಿಕೊಳ್ಳುವುದು- ಈ ಮೂರು ಪ್ರಕ್ರಿಯೆಗಳು ಆಗಿರಬೇಕು. ಈ ಪ್ರಕ್ರಿಯೆಗಳು ನಡೆದಿದ್ದಾಗ ಪರೀಕ್ಷೆಯಲ್ಲಿ ಕಲಿಕಾ ಪ್ರಕ್ರಿಯೆಯ ಕೊನೆಯ ವ್ಯವಸ್ಥೆಯಾದ ಪುನರುತ್ಪತ್ತಿ ಸಾಧ್ಯ. ಮೊದಲ ಮೂರು ಹಂತಗಳು ಆಗಬೇಕಾದರೆ ವಿಚಾರದ ಮೇಲಿನ ಸಂವಾದದಿಂದ ಅಥವಾ ಬೋಧನೆಯಿಂದ ಅಥವಾ ದೃಕ್-ಶ್ರವಣ ಮಾಧ್ಯಮದಿಂದ ಮಕ್ಕಳು ತಿಳಿದಿರಬೇಕು.
ತಾತ್ವಿಕವಾಗಿ ಹೀಗೆ ತಿಳಿದುಕೊಂಡದ್ದು ಗ್ರಹಿಕೆಯಾಗಿ, ದೃಢೀಕರಣವಾಗಿ, ಧಾರಣೆಯಾಗಿದೆ ಎನ್ನುವುದನ್ನು ಶಿಕ್ಷಕರು ಮನವರಿಕೆ ಮಾಡಿಕೊಂಡ ನಂತರ ಪರೀಕ್ಷೆ ಮಾಡಬೇಕು. ಆದರೆ ಇಲ್ಲಿ ಪಾಠವನ್ನೇ ಸರಿಯಾಗಿ ಮಾಡಲು ಆಗುತ್ತಿಲ್ಲವೆಂದು ಗೊತ್ತಿರುವಾಗ ಮಕ್ಕಳಿಗೆ ಇರುವುದು ಸ್ವಯಂ ಕಲಿಕೆಯ ಅವಕಾಶವಾಗಿರುತ್ತದೆ. ಅದು ತನಗೆ ತಾನೇ ಪಾಠವನ್ನು ಓದಿಕೊಳ್ಳುವ ಮೂಲಕ ನಡೆಯಬೇಕು. ಇಲ್ಲೀಗ ಓದಲಿಕ್ಕೂ ಸಮಯವಿಲ್ಲದ ಹಾಗೆ ಪರೀಕ್ಷಾ ಡ್ರಿಲ್‌ಗಳು ನಡೆಯುತ್ತಾ ಹೋದರೆ ಓದುವುದು ಯಾವಾಗ? ಮಕ್ಕಳಿಗೆ ಓದಿಕೊಳ್ಳಲಿಕ್ಕೂ ಬಿಡದೆ ಪರೀಕ್ಷೆ ಗಳನ್ನು ಹೇರುವ ಶಿಕ್ಷಣದ ನಿರ್ವಹಣೆಗಿಂತ ಜಾಸ್ತಿ ಶಿಕ್ಷೆಯನ್ನು ಯಾರೂ ಕೊಡಲು ಸಾಧ್ಯವಿಲ್ಲ.
ಈ ವಿಚಾರವನ್ನು ಹೇಳಿದರೆ, ಮಕ್ಕಳಿಗೆ ಪರೀಕ್ಷೆ ಮಾಡದಿದ್ದರೆ ಅವರು ಓದುವುದಿಲ್ಲ ಎಂಬ ಉತ್ತರ ಬರುತ್ತದೆ. ಈ ವಿಚಾರದಲ್ಲಿ ಸತ್ಯಾಂಶವಿದೆ. ಪರೀಕ್ಷೆ ಇದೆ ಎಂಬ ಕಾರಣಕ್ಕಾಗಿಯೇ ಓದುವ ಮಕ್ಕಳು ಸುಮಾರು ಶೇ 10-20ರಷ್ಟು ಇರುತ್ತಾರೆ. ಅನುತ್ತೀರ್ಣತೆಯ ಸಂಭವನೀಯತೆ ಇರುವ ಮಕ್ಕಳು ಇವರು. ಇವರು ಉತ್ತೀರ್ಣರಾದರೂ ಆಗಲಿಕ್ಕಾಗಿ ಪರೀಕ್ಷಾ ಅಭ್ಯಾಸ ಅನಿವಾರ್ಯ ಎನ್ನುವುದನ್ನು ಒಪ್ಪಬಹುದು. ಆದರೆ ಈ ಮಕ್ಕಳು ಉತ್ತೀರ್ಣರಾದರೂ ಅದಕ್ಕಾಗಿ ತೆಗೆದುಕೊಳ್ಳುವ ಕ್ರಮಗಳನ್ನು ಎಲ್ಲ ವಿದ್ಯಾರ್ಥಿಗಳಿಗೂ ಅನ್ವಯಿಸಿ, ಶೇ 90ರಷ್ಟು ಅಂಕಗಳನ್ನು ಪಡೆಯಬಲ್ಲ ವಿದ್ಯಾರ್ಥಿಗಳು ಶೇ 70ರ ಮಟ್ಟಕ್ಕೆ ಬರುವ ಹಾಗೆ ಯಾಕೆ ಮಾಡಬೇಕು? ಸ್ವ ಇಚ್ಛೆಯಿಂದಲೇ ಓದಿಕೊಳ್ಳುವ ಮಕ್ಕಳಿಗೆ ನಾಳೆ ಈ ಪಾಠದ ಪರೀಕ್ಷೆಗೆ ಸಿದ್ಧರಾಗಿ ಬನ್ನಿ ಎನ್ನುವುದು ಹಿಂಸೆಯ ಅನುಭವವಾಗಿರುತ್ತದೆ. ಏಕೆಂದರೆ ಮಕ್ಕಳಿಗೆ ಓದಿಕೊಳ್ಳಲು ಇರುವ ಸ್ವಾತಂತ್ರ್ಯವನ್ನೂ ಈ ಪದ್ಧತಿಯು ಕಸಿಯುತ್ತದೆ. ಪ್ರತಿವರ್ಷ ಜಿಲ್ಲೆ ಜಿಲ್ಲೆಗಳ ನಡುವೆ ಏರ್ಪಡುವ ಫಲಿತಾಂಶ ‘ಯುದ್ಧ’ಕ್ಕೆ ಈ ವರ್ಷ ಅನಧಿಕೃತ ಪರೀಕ್ಷೆಗಳೂ ಹೆಚ್ಚುವರಿಯಾಗಿ ಸೇರ್ಪಡೆಯಾಗಿವೆ.
ಇದನ್ನೆಲ್ಲ ಕಾನೂನೇ ಸರಿ ಮಾಡಲು ಆಗುವುದಿಲ್ಲ. ಎಷ್ಟು ಕಾನೂನು ಮಾಡಿದರೂ ಕಾನೂನಿನಿಂದ ಬಚಾವಾಗಲು ದಾರಿಗಳ ಹುಡುಕಾಟ ಹೆಚ್ಚುತ್ತದೆಯೇ ಹೊರತು ಉಪಯೋಗ ಆಗುವುದಿಲ್ಲ. ಇದು ಆಡಳಿತ ಮಂಡಳಿಗಳು, ಶಿಕ್ಷಕರು ಮತ್ತು ಮುಖ್ಯವಾಗಿ ಪಾಲಕರು ಶೈಕ್ಷಣಿಕ ಅರಿವಿನಿಂದ ಬೆಳೆಸಿಕೊಳ್ಳಬೇಕಾದ ತಿಳಿವಳಿಕೆ ಯಾಗಿದೆ. ಸ್ವಇಚ್ಛೆಯಿಂದಲೇ ಓದಿಕೊಳ್ಳುವ ಮಕ್ಕಳ ಪಾಲಕರಿಗೆ ಅತಿಯಾದ ಪರೀಕ್ಷೆಗಳು ಅವರ ಮಕ್ಕಳಿಗೆ ಸಹಜವಾಗಿ ಬರಬಹುದಾದ ಜಾಸ್ತಿ ಅಂಕಗಳನ್ನು ನಿರ್ಬಂಧಿಸಿ ಕಡಿಮೆ ಅಂಕಗಳನ್ನು ಪಡೆಯಲು ಕಾರಣವಾಗುತ್ತವೆ ಎಂದು ಗೊತ್ತಾಗಬೇಕು.
ಸಮರ್ಥ ವಿದ್ಯಾರ್ಥಿಗಳಿಗೆ ಬರೆಸುವಿಕೆ ಅತಿಯಾದಾಗ ಬರೆಯುವಿಕೆಯೇ ಹಿಂಸೆ ಎನಿಸಿ ಕ್ರಮೇಣ ಸಾಮರ್ಥ್ಯ ಕುಗ್ಗುವ ಸಂಭವನೀಯತೆ ಜಾಸ್ತಿ ಇರುತ್ತದೆ. ಏಕೆಂದರೆ ‘ಓದಿಸುವುದು- ಪರೀಕ್ಷೆಗಳಿಗೆ ಬರೆಸಿ ಬರೆಸಿ ಯಾಂತ್ರಿಕ ಅಭ್ಯಾಸ ಮಾಡಿಸುವುದು’ ಎಂಬ ಈ ಪ್ರಕ್ರಿಯೆಯಲ್ಲಿ ಕಲಿಕಾ ಹಿಂದುಳಿದವರಿಗೆ, ಸಾಮಾನ್ಯ ಮಟ್ಟದವರಿಗೆ, ಪ್ರತಿಭಾವಂತರಿಗೆ ಬೇರೆ ಬೇರೆ ಪದ್ಧತಿಗಳು ಬೇಕು. ಕಲಿಕಾ ಹಿಂದುಳಿದವರಿಗಾಗಿನ ಪದ್ಧತಿಯನ್ನು ಎಲ್ಲರಿಗೂ ಅನ್ವಯಿ ಸುವುದರಿಂದ ಪ್ರತಿಭಾವಂತರಿಗೆ ಅದು ಸತ್ಪರಿಣಾಮ
ವನ್ನು ಉಂಟು ಮಾಡುವುದಿಲ್ಲ.
ಅದೇಕೋ ಬಹುತೇಕ ಪೋಷಕರಿಗೆ ಕಲಿಕೆಯ ಹೆಸರಿನಲ್ಲಿ ಮಕ್ಕಳಿಗೆ ಹೆಚ್ಚು ಹಿಂಸೆ ಕೊಡುತ್ತಿರುವುದು ಗಮನಕ್ಕೆ ಬಂದಷ್ಟೂ ಸಂತೋಷವಾಗುವ ಪ್ರವೃತ್ತಿ ಹೆಚ್ಚು. ಅದರಿಂದ ಮಕ್ಕಳು ಉನ್ನತ ಮಟ್ಟಕ್ಕೆ ಬೆಳೆಯುತ್ತಾರೆ ಎಂಬುದು ಅವರ ಭಾವನೆ. ಉನ್ನತ ಮಟ್ಟ ಎಂದರೇನು? ಅಮೆರಿಕದಲ್ಲಿ ದೊಡ್ಡ ಉದ್ಯೋಗ ಪಡೆಯುವುದು! ಹಿಂದೆಯೆಲ್ಲ ಅಂತಿಮ ಪರೀಕ್ಷೆಯಲ್ಲಿ ಪಕ್ಕದ ವಿದ್ಯಾರ್ಥಿಗಿಂತ ಎರಡು ಅಂಕ ಕಡಿಮೆ ಬಂದಾಗ ತಮ್ಮ ಮಕ್ಕಳನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದ ಪಾಲಕರು ಈಗ ಅಭ್ಯಾಸಕ್ಕಾಗಿ ನಡೆಸುವ ಈ ರೀತಿಯ ಪರೀಕ್ಷೆಗಳಲ್ಲೂ ಎರಡು ಅಂಕಗಳು ಕಡಿಮೆ ಬಂದರೆ ತರಾಟೆಗೆ ತೆಗೆದುಕೊಳ್ಳಲು ಶುರು ಮಾಡಿದ್ದಾರೆ. ಅತಿಯಾದ ಪರೀಕ್ಷೆಗಳನ್ನು ಕಡಿತ ಮಾಡುವ ಶಕ್ತಿ ಮತ್ತು ಮಾಡಿಸ ಬೇಕಾದ ಜವಾಬ್ದಾರಿ ಎರಡೂ ಇರುವುದು ಪಾಲಕರಿಗೇ ಆಗಿದೆ. ಅತಿ ಪರೀಕ್ಷೆಗಳ ಹಾನಿಯು ಮೊದಲು ಅರ್ಥವಾಗಬೇಕಾದದ್ದು ಪಾಲಕರಿಗೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.