ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಪಂಜಾಬಿನಲ್ಲಿ ಮೋದಿ ಸತ್ಯಪರೀಕ್ಷೆ

ತಮ್ಮ ಹತ್ಯೆಗೆ ಸಂಚು ನಡೆದಿತ್ತು ಎಂಬ ಪ್ರಧಾನಿ ಆರೋಪ ನಾನಾ ಪ್ರಶ್ನೆಗಳಿಗೆ ಎಡೆಮಾಡಿದೆ
Last Updated 14 ಜನವರಿ 2022, 19:30 IST
ಅಕ್ಷರ ಗಾತ್ರ

ಭಾರತದ ಮಹಾನ್ ಸಂವಿಧಾನ ನಿರ್ಮಾತೃಗಳ ಅಗಾಧ ಪ್ರಜ್ಞಾವಂತಿಕೆಯ ಎದುರು ನಾವು ನಿಜವಾಗಿಯೂ ತಲೆಬಾಗಬೇಕು. ಅವರು ನಮ್ಮ ದೇಶದ ಧ್ಯೇಯೋಕ್ತಿಯಾಗಿ ಸ್ವೀಕರಿಸಿದ್ದು ಮುಂಡಕ ಉಪನಿಷತ್ತಿನಲ್ಲಿಯ ‘ಸತ್ಯಮೇವ ಜಯತೆ’ (ನಾನೃತಮ್) ಎಂಬ ಮಂತ್ರವನ್ನು. ‘ಸತ್ಯಕ್ಕೆ ಮಾತ್ರ ಜಯ’ ಎಂಬ ಈ ಮಂತ್ರದ ಮಥಿತಾರ್ಥವನ್ನು ‘ನಾನೃತಮ್’ (ಸುಳ್ಳಿಗೆ ಎಂದಿಗೂ ಜಯವಿಲ್ಲ) ಎಂಬ ಶಬ್ದವು ಮತ್ತಷ್ಟು ಎತ್ತಿ ತೋರಿಸುತ್ತದೆ. ಈ ಮಂತ್ರವನ್ನು ನಮ್ಮ ದೇಶದ ನಾಲ್ಕು ಸಿಂಹಗಳ ಲಾಂಛನದ ಕೆಳಗೆ ದಾಖಲಿಸಿರುವುದರಿಂದ ಅದರ ಮಹತ್ವ ಇನ್ನಷ್ಟು ಮೇಲೇರಿದೆ. ಈ ಲಾಂಛನದಲ್ಲಿ ಹಾಗೂ ಭಾರತದ ರಾಷ್ಟ್ರಧ್ವಜದಲ್ಲಿ ಸಾಮ್ರಾಟ ಅಶೋಕನ ಧರ್ಮಚಕ್ರವೂ ಇದೆ. ಸತ್ಯ ಮತ್ತು ಧರ್ಮ ಬೇರೆಯಲ್ಲ ಎಂದು ಸಾರಿದವರು ರಾಷ್ಟ್ರಪಿತ ಮಹಾತ್ಮ ಗಾಂಧಿ. ಆದ್ದರಿಂದ ಸತ್ಯ, ಧರ್ಮ ಎಂಬುದು ರಾಷ್ಟ್ರದ ಅಡಿಪಾಯ. ಈ ಅಡಿಪಾಯವನ್ನು ದುರ್ಬಲಗೊಳಿಸುವುದೆಂದರೆ ರಾಷ್ಟ್ರವನ್ನು ಬಲಹೀನಗೊಳಿಸಿದಂತೆಯೇ.

ಭಾರತಕ್ಕೆ ಇಷ್ಟೊಂದು ಉದಾತ್ತವಾದ ನೈತಿಕ ಪರಂಪರೆಯಿರುವಾಗ, ಈ ಪರಂಪರೆಗೆ ನಮ್ಮ ದೇಶದ ಪ್ರಧಾನಿಯವರೇ ಧಕ್ಕೆ ತರುತ್ತಿದ್ದಾರೆಯೇ ಎಂಬ ಸಂದೇಹ ಇತ್ತೀಚಿನ ಘಟನೆಗಳಿಂದ ಮೂಡುತ್ತದೆ. ಜನವರಿ 5ರಂದು ತಮ್ಮ ಪಂಜಾಬ್‌ ಪ್ರವಾಸದ ಸಮಯದಲ್ಲಿ ಬಟಿಂಡಾದಿಂದ ಫಿರೋಜ್‌ಪುರಕ್ಕೆ ಕಾರಿನಲ್ಲಿ ಹೋಗುವಾಗ ಮಧ್ಯದಲ್ಲಿ ನರೇಂದ್ರ ಮೋದಿ ಅವರು 15- 20 ನಿಮಿಷಗಳವರೆಗೆ ನಿಲ್ಲಬೇಕಾಯಿತು ಹಾಗೂ ನಂತರ ಬಟಿಂಡಾಕ್ಕೆ ವಾಪಸ್ ಹೋಗಬೇಕಾಯಿತು. ಕಾರಣ ಮುಂದೆ ಸ್ವಲ್ಪ ದೂರದಲ್ಲಿ– ಪಂಜಾಬ್‌ ಮುಖ್ಯಮಂತ್ರಿ ಚರಣಜಿತ್ ಸಿಂಗ್‌ ಚೆನ್ನಿ ಅವರ ಹೇಳಿಕೆಯಂತೆ ಒಂದು ಕಿಲೊ ಮೀಟರ್‌ ದೂರದಲ್ಲಿ– ಪ್ರದರ್ಶನಕಾರರ ಗುಂಪೊಂದು ನಿಂತಿತ್ತು. ಇದರಿಂದ ಕ್ರೋಧಗೊಂಡ ಮೋದಿಯವರು ‘ನಾನು ಜೀವಂತವಾಗಿ ಮರಳಿ ಬಂದಿದ್ದಕ್ಕಾಗಿ ಮುಖ್ಯಮಂತ್ರಿಯವರಿಗೆ ಧನ್ಯವಾದಗಳು’ ಎಂದು ವ್ಯಂಗ್ಯವಾಗಿ ಹೇಳಿದರು.

ನಿಜವಾಗಿಯೂ ಅವರ ಹತ್ಯೆಗೆ ಪಿತೂರಿ ನಡೆದಿದ್ದರೆ ಇದೊಂದು ಅತ್ಯಂತ ಗಂಭೀರವಾದ ವಿಷಯ. ಇದರ ಸತ್ಯಾಸತ್ಯತೆಯ ತನಿಖೆ ಆಗಲೇಬೇಕು. ಈ ಹಿಂದೆ ಭಾರತದ ಇಬ್ಬರು ಪ್ರಧಾನಿಗಳು ಕೊಲೆಯ ಕುತಂತ್ರಕ್ಕೆ ಬಲಿಯಾಗಿದ್ದಾರೆ ಎಂಬುದನ್ನು ನಾವು ಮರೆಯಲೇಕೂಡದು. ಆದರೆ ಈ ತನಿಖೆಯ ಮುಖ್ಯ ವಿಷಯ ತಾಂತ್ರಿಕ ಲೋಪಗಳಿಗಷ್ಟೇ ಸೀಮಿತವಾಗಿರಬಾರದು. ಪ್ರಧಾನಿಯವರ ಜೀವಕ್ಕೆ ಧಕ್ಕೆ ತರುವಂಥ ಕುತಂತ್ರವಿತ್ತೋ ಇಲ್ಲವೋ ಎಂಬುದೇ ತನಿಖೆಯ ಕೇಂದ್ರಬಿಂದುವಾಗಿರಬೇಕು. ಏಕೆಂದರೆ ಮೋದಿಯವರ ಆರೋಪ ಸೂಚಿಸುವುದು ಇದನ್ನೇ.

ಹೀಗೆ ಹೇಳುವುದರ ಹಿಂದೆ ಕಾರಣವಿದೆ. ಪ್ರಧಾನಿಯವರ ಸುರಕ್ಷಾ ವ್ಯವಸ್ಥೆಯಲ್ಲಿ ಈ ಮೊದಲು ಕೂಡ ಉಲ್ಲಂಘನೆಯಾಗಿದೆ. ಕೆಲವು ಬಾರಿ ಮೋದಿಯವರೇ ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್‌ನ (ಎಸ್‌ಪಿಜಿ) ನಿಯಮ, ನಿರ್ಬಂಧಗಳನ್ನು ಪಾಲಿಸಿಲ್ಲ. ಆಗ ಪ್ರಧಾನಿಯವರಾಗಲೀ, ಗೃಹ ಸಚಿವ ಅಮಿತ್ ಶಾ ಅವರಾಗಲೀ ಅಥವಾ ಬಿಜೆಪಿಯ ಯಾವ ಮುಖಂಡರೇ ಆಗಲಿ ಅವರ ಜೀವ ಗಂಡಾಂತರದಲ್ಲಿತ್ತು ಎಂದು ಆಪಾದಿಸಲಿಲ್ಲ ಹಾಗೂ ಸಂಬಂಧಿಸಿದ ರಾಜ್ಯ ಸರ್ಕಾರಗಳನ್ನು ತರಾಟೆಗೆ ತೆಗೆದುಕೊಳ್ಳಲಿಲ್ಲ. ಉದಾಹರಣೆಗೆ, ಲೋಕಸಭೆಯಲ್ಲಿ ತಾವು
ಪ್ರತಿನಿಧಿಸುತ್ತಿರುವ ಕ್ಷೇತ್ರವಾದ ವಾರಾಣಸಿಗೆ ಡಿಸೆಂಬರ್‌ನಲ್ಲಿ ಭೇಟಿ ನೀಡಿದಾಗ ಮೋದಿ ಅವರು ಶಹರದ ಅತ್ಯಂತ ಕಿರಿದಾದ ಓಣಿಗಳಲ್ಲಿ ರೋಡ್‌ಷೋ ಮಾಡಿದರು. ರಸ್ತೆಯ ಎರಡೂ ಮಗ್ಗುಲಿನ ಮೂರು-ನಾಲ್ಕು ಮಜಲಿನ ಮನೆಗಳಿಂದ ನೂರಾರು ಜನ ಅವರ ಮೇಲೆ ಪುಷ್ಪವೃಷ್ಟಿ ಸುರಿಸಿದರು. ಒಂದು ಕಡೆಯಂತೂ ಮೋದಿಯವರೇ ಕಾರನ್ನು ನಿಲ್ಲಿಸಿ, ತಮ್ಮ ಪ್ರಶಂಸಕರನ್ನು ಭೇಟಿಯಾದರಷ್ಟೇ ಅಲ್ಲ ಅವರಿಂದ ಪೇಟ ಮತ್ತು ಕೊರಳು ಅಲಂಕರಿಸುವ ವಸ್ತ್ರವನ್ನೂ ಸ್ವೀಕರಿಸಿದರು. ಪ್ರಧಾನಿಯವರಿಗೆ ಇಷ್ಟೊಂದು ಸಮೀಪ ದಲ್ಲಿ, ನೂರಾರು ಜನರ ಉಪಸ್ಥಿತಿಯಲ್ಲಿ ಸುರಕ್ಷಾ ವ್ಯವಸ್ಥೆಯ ಸ್ಪಷ್ಟ ಉಲ್ಲಂಘನೆಯಾದರೂ ‘ನಾನು ಜೀವಂತವಾಗಿ ವಾಪಸ್ ಬಂದೆ’ ಎಂದು ಅವರು ದೂರಲಿಲ್ಲ. ಆದರೆ ಪಂಜಾಬಿನಲ್ಲಿ ಮಾತ್ರ ಆ ರೀತಿ ಆರೋಪಿಸಿದರು. ಮೋದಿ ಅವರ ಬೆಂಬಲಿಗರಂತೂ ರಾಜಧಾನಿ ದೆಹಲಿಯ ಬಳಿ ನಡೆದ ಸುದೀರ್ಘ ಹಾಗೂ ಶಾಂತಿಯುತ ರೈತ ಆಂದೋಲನದ ಸಮಯದಲ್ಲೂ ಪಂಜಾಬ್‌ ಮತ್ತು ಸಿಖ್‌ ಸಮುದಾಯದ ವಿರುದ್ಧ ‘ಇವರು ಖಲಿಸ್ತಾನಿ ಸಮರ್ಥಕರು, ಮೋದಿ ನೇತೃತ್ವದ ಸರ್ಕಾರವನ್ನು ಅಸ್ಥಿರಗೊಳಿಸಲು ಕುತಂತ್ರ ನಡೆಸಿದ್ದಾರೆ’ ಎಂದು ಪ್ರಚಾರ ನಡೆಸಿದ್ದರು. ಆದ್ದರಿಂದ ಇದು ಹಲವು ಗಂಭೀರ ಪ್ರಶ್ನೆಗಳಿಗೆ ಎಡೆಮಾಡಿಕೊಡುತ್ತದೆ.

ಪ್ರಶ್ನೆ ಒಂದು: ವಾರಾಣಸಿಯಲ್ಲಿ ಸುರಕ್ಷಾ ವ್ಯವಸ್ಥೆಯನ್ನು ತಾವೇ ಉಲ್ಲಂಘಿಸಿ ತಮ್ಮ ಅಭಿಮಾನಿಗಳನ್ನು ಹತ್ತಿರ ಬರಮಾಡಿಕೊಂಡ ಪ್ರಧಾನಿ, ಪಂಜಾಬಿನಲ್ಲಿ ಪ್ರದರ್ಶನಕಾರರ ಬಳಿ ಏಕೆ ಹೋಗಲಿಲ್ಲ? ಕನಿಷ್ಠಪಕ್ಷ ಅವರ ಕೆಲವು ಪ್ರನಿನಿಧಿಗಳನ್ನು ಭದ್ರತಾ ತಪಾಸಣೆ ನಂತರ ತಮ್ಮ ಬಳಿ ಕರೆಸಿಕೊಂಡು ಅವರ ಮಾತು ಕೇಳಿ ಶಾಂತಗೊಳಿಸಬಹುದಿತ್ತಲ್ಲ? ಹಾಗೆ ಮಾಡಿದ್ದರೆ ಪಂಜಾಬ್‌ ಮತ್ತು ದೇಶದಾದ್ಯಂತ ಅವರನ್ನು ಜನ ಮೆಚ್ಚುತ್ತಿರಲಿಲ್ಲವೇ?

ಪ್ರಶ್ನೆ ಎರಡು: ತಾವು ದೇಶದ ‘ಪ್ರಧಾನ ಸೇವಕ’ ಎಂದು ಮೋದಿಯವರೇ ಹೇಳಿಕೊಳ್ಳುತ್ತಾರೆ. ಹೀಗಿರುವಾಗ ಪ್ರಜಾಪ್ರಭುತ್ವದಲ್ಲಿ ಪ್ರಧಾನಿ ತಮ್ಮ ಪ್ರಶಂಸಕರನ್ನು ಮಾತ್ರ ಹತ್ತಿರ ಕರೆಯುವುದು ಹಾಗೂ ವಿರೋಧಿಗಳನ್ನು ದೂರ ಇಡುವುದು ಸರಿಯೇ? ಈ ರೀತಿಯ ಭೇದಭಾವ ‘ರಾಜಧರ್ಮ’ದ ಉಲ್ಲಂಘನೆಯಲ್ಲವೇ?

ದೆಹಲಿಯ ಬಳಿ ಲಕ್ಷಾಂತರ ರೈತರು ಒಂದು ವರ್ಷಕ್ಕೂ ಹೆಚ್ಚು ಕಾಲ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದರು. ಸುಮಾರು 700 ಜನ ಸಾವಿಗೀಡಾದರು. ಆದರೆ ಒಂದು ಸಲ ಕೂಡ ಮೋದಿಯವರು ಆ ಸ್ಥಳಕ್ಕೆ ಹೋಗಿ ಪ್ರತಿ
ಭಟನಾಕಾರರನ್ನು ಭೇಟಿಯಾಗಲಿಲ್ಲ ಅಥವಾ ಅವರ ಪ್ರತಿನಿಧಿಗಳನ್ನು ತಮ್ಮ ಕಚೇರಿಗೆ ಆಮಂತ್ರಿಸಿ ಮಾತನಾಡಲಿಲ್ಲ. ಇದು ಅಹಂಕಾರದ, ಅಸಂವೇದನಾಶೀಲ, ಪ್ರಧಾನಿ ಪದಕ್ಕೆ ಶೋಭೆ ತಾರದ ನಡೆಯಲ್ಲವೇ?

ಪ್ರಶ್ನೆ ಮೂರು: ಪ್ರಜಾಪ್ರಭುತ್ವದಲ್ಲಿ ಪ್ರಜೆಗಳಿಗೆ ಪ್ರತಿಭಟನೆಯ ಅಧಿಕಾರವಿಲ್ಲವೇ? ತಮ್ಮ ಬೇಡಿಕೆ-ಬೇಗುದಿಗಳನ್ನು ವ್ಯಕ್ತಪಡಿಸುವ ಹಕ್ಕಿಲ್ಲವೇ? ಅಥವಾ ತಮ್ಮ ವಿರುದ್ಧದ ಎಲ್ಲ ಪ್ರತಿಭಟನಾಕಾರರೂ ವಿಶೇಷವಾಗಿ ಪಂಜಾಬಿಗಳು ತಮ್ಮ ಜೀವಕ್ಕೆ ಅಪಾಯಕಾರಿ ಎಂದು ಮೋದಿಯವರು ನಂಬಿದ್ದಾರೆಯೇ?

ಪ್ರಶ್ನೆ ನಾಲ್ಕು: ಪಂಜಾಬಿನ ಘಟನೆಗೆ ಮುಖ್ಯಮಂತ್ರಿ ಚೆನ್ನಿಯವರಷ್ಟೇ ಜವಾಬ್ದಾರರೇ? ಬಟಿಂಡಾದಿಂದ ಫಿರೋಜ್‌ಪುರಕ್ಕೆ ಹೆಲಿಕಾಪ್ಟರ್‌ ಮೂಲಕ ಹೋಗುವ ಯೋಜನೆ ಮೊದಲಿತ್ತು. ಕೊನೆಯ ಕ್ಷಣದಲ್ಲಿ ಅದನ್ನು ಬದಲಿಸಿ 110 ಕಿಲೊ ಮೀಟರ್‌ ದೂರವನ್ನು ಕಾರಿನಲ್ಲಿ ಪ್ರಯಾಣಿಸುವ ನಿರ್ಣಯ ಮಾಡಿದವರು ಪ್ರಧಾನಿಯವರಲ್ಲವೇ?

ಪ್ರಶ್ನೆ ಐದು: ಇದು ಮೋದಿ ಸಮರ್ಥಕರಿಗೆ– ವಿಶೇಷವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ನೇತಾರರಿಗೆ- ಕೇಳಲಾದ ಪ್ರಶ್ನೆ. ಸತತವಾಗಿ ಪಂಜಾಬ್‌ ಮತ್ತು ಸಿಖ್‌ ಸಮುದಾಯವನ್ನು ಈ ರೀತಿ ಸಂಶಯದ ದೃಷ್ಟಿಯಿಂದ ನೋಡುವುದರ ದೂರಗಾಮಿ ಪರಿಣಾಮಗಳ ಬಗ್ಗೆ ಅವರು ಚಿಂತಿಸಿದ್ದಾರೆಯೇ? ಯಾವಾಗಲೂ ‘ದೇಶದ ಆಂತರಿಕ ಶತ್ರುಗಳು’ ಎಂಬ ರೀತಿಯಲ್ಲಿ ಮುಸಲ್ಮಾನರು, ಕ್ರೈಸ್ತರು ಹಾಗೂ ಸಿಖ್ಖರ ಕಡೆಗೆ ನೋಡಿದರೆ, ಅವರ ದೇಶಭಕ್ತಿಯನ್ನು ಪ್ರಶ್ನಿಸಿದರೆ, ಅವರ ಸಾಂವಿಧಾನಿಕ ಅಧಿಕಾರಗಳನ್ನು ತಿರಸ್ಕರಿಸಿದರೆ, ಭಾರತವು ಕೇವಲ ಅಥವಾ ಮುಖ್ಯವಾಗಿ ಹಿಂದೂಗಳದು ಎಂದು ಸಾರಿದರೆ ನಮ್ಮ ದೇಶದ ಏಕತೆ ಉಳಿದೀತೇ?

ಸುಧೀಂದ್ರ ಕುಲಕರ್ಣಿ
ಸುಧೀಂದ್ರ ಕುಲಕರ್ಣಿ

ಭಾರತದ ಪ್ರಧಾನಿಯವರ ಜೀವ ಬಹುಮೂಲ್ಯ. ಅವರು ಯಾವ ಪಕ್ಷದವರೇ ಆಗಿರಲಿ, ಅವರ ಸುರಕ್ಷಾ ವ್ಯವಸ್ಥೆ ಎಲ್ಲರ ಜವಾಬ್ದಾರಿ. ಆದರೆ ಪಂಜಾಬಿನ ಘಟನೆಯಲ್ಲಿ ಮೋದಿ ಅವರ ಹತ್ಯೆಯ ಸಂಚಿತ್ತು ಎಂಬುದನ್ನು ಸಾಬೀತುಪಡಿಸುವ, ಆ ಆಪಾದನೆಯ ಸತ್ಯವನ್ನು ಬಹಿರಂಗಗೊಳಿಸುವ ಜವಾಬ್ದಾರಿ ಅವರ ನೇತೃತ್ವದ ಸರ್ಕಾರದ್ದು. ಅವರು ಹಾಗೆ ಮಾಡಿದರೆ ಈ ವಿವಾದ ನಿಲ್ಲುತ್ತದೆ. ಇಲ್ಲವಾದರೆ ಮೋದಿಯವರು ತಮ್ಮ ರಾಜಕೀಯ ಲಾಭಕ್ಕಾಗಿ ನಾಟಕೀಯವಾಗಿ ವರ್ತಿಸಿದರು, ಸತ್ಯಕ್ಕೆ ಅಪಮಾನ ಮಾಡಿದರು ಎಂದಾಗುತ್ತದೆ. ಹೀಗಾದರೆ ಜನ ಅವರನ್ನು ಯಾವ ದೃಷ್ಟಿಯಿಂದ ನೋಡಿಯಾರು, ಅವರ ರಾಜಕೀಯ ಜೀವನದ ಮೇಲೆ ಅದರಿಂದ ಏನು ಪರಿಣಾಮವಾದೀತು, ಇತಿಹಾಸವು ಅವರ ಯೋಗ್ಯತೆಯ ಬಗ್ಗೆ ಏನು ತೀರ್ಮಾನ ಕೊಟ್ಟೀತು, ಇದು ಒಂದು ವಿಷಯ. ಆದರೆ ಇದಕ್ಕೂ ಮಹತ್ವದ್ದೆಂದರೆ, ಮುಖಂಡರೇ ಅಸತ್ಯದ ಹಾದಿ ಹಿಡಿದರೆ ನಮ್ಮ ಸಮಾಜದ, ಪ್ರಜಾಪ್ರಭುತ್ವದ ಗತಿ ಏನಾದೀತು ಎಂಬುದು. ಇದರ ಬಗ್ಗೆ ಎಲ್ಲರೂ ಚಿಂತಿಸಬೇಕಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT