ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive| ಚುನಾವಣೆ ಸ್ಪರ್ಧೆ-ಪ್ರಚಾರದ ಖಯಾಲಿ

Last Updated 30 ಮಾರ್ಚ್ 2021, 10:51 IST
ಅಕ್ಷರ ಗಾತ್ರ

‘ಜನಪ್ರತಿನಿಧಿ ಆಗಬೇಕು’ ಎಂಬ ಉಮೇದಿನಿಂದ ಚುನಾವಣೆಗೆ ಕಣಕ್ಕಿಳಿಯುವವರು ಒಂದೆಡೆಯಾದರೆ,ಪ್ರಚಾರ ಪಡೆಯಲು ಹಾಗೂ ಸ್ಪರ್ಧೆಯ ‘ದಾಖಲೆ’ ಬರೆಯಲು ಚುನಾವಣೆಗೆ ಸ್ಪರ್ಧಿಸುವ ಗೀಳು ಅಂಟಿಸಿಕೊಂಡವರು ಇನ್ನೊಂದೆಡೆ.

ಇದಕ್ಕೆ ತಾಜಾ ಉದಾಹರಣೆ ಇಲ್ಲಿದೆ.

ಕಾಂಗ್ರೆಸ್‌ ಪಕ್ಷದಿಂದ ಗೆದ್ದಿದ್ದ ಬಿ.ನಾರಾಯಣರಾವ್‌ ಅವರ ನಿಧನದಿಂದ ತೆರವಾಗಿರುವ ಬೀದರ್‌ ಜಿಲ್ಲೆಯ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುತ್ತಿದೆ.ಈ ಕ್ಷೇತ್ರಕ್ಕೆ ‘ಸ್ವಾಮೀಜಿ’ ಮತ್ತು ‘ಮೌನಿಬಾಬಾ’ ನಾಮಪತ್ರ ಸಲ್ಲಿಸಿದ್ದಾರೆ. ಇವರಲ್ಲಿ ‘ಸ್ವಾಮೀಜಿ’ ಸಲ್ಲಿಸಿರುವಆಸ್ತಿ ಪ್ರಮಾಣಪತ್ರದಲ್ಲಿರುವ ಅಂಶಗಳು ‘ಕುತೂಹಲಕಾರಿ’ಯಾಗಿವೆ.

ಚುನಾವಣೆಗೆ ಸ್ಪರ್ಧಿಸುವವರು ನಾಮಪತ್ರದ ಜೊತೆ ತಮ್ಮ ಆಸ್ತಿ ವಿವರ ಮತ್ತು ತಮ್ಮ ವಿರುದ್ಧ ಮೊಕದ್ದಮೆ ದಾಖಲಾಗಿದ್ದರೆ ಅದರ ಮಾಹಿತಿ ನೀಡುವುದು ಕಡ್ಡಾಯ.

ಬಹುಪಾಲು ಅಭ್ಯರ್ಥಿಗಳು ಆಸ್ತಿ ಮಾಹಿತಿಯನ್ನು ‘ಮುಚ್ಚಿಡುತ್ತಾರೆ’ ಎಂಬುದು ಪ್ರಮುಖವಾಗಿ ಕೇಳಿಬರುತ್ತಿರುವ ಆರೋಪ. ಕೆಲವೊಂದು ಸ್ವಯಂ ಸೇವಾ ಸಂಸ್ಥೆಗಳು ಗೆದ್ದವರ ಪ್ರಮಾಣಪತ್ರಗಳನ್ನು ಇಟ್ಟುಕೊಂಡು ಅವರ ಆಸ್ತಿ ಮೌಲ್ಯಮಾಪನ ಮಾಡಿ, ಆಸ್ತಿ ಇಷ್ಟು ಹೆಚ್ಚಳವಾಗಿದೆ ಎಂದು ಹೇಳುವ ಪರಿಪಾಠವೂ ಇದೆ. ಆದರೆ, ಈ ‘ಸ್ವಾಮೀಜಿ’ಸಲ್ಲಿಸಿರುವ ಆಸ್ತಿಯ ಮಾಹಿತಿಇದಕ್ಕೆ ವ್ಯತಿರಿಕ್ತ ಎಂಬಂತಿದೆ.

ಹೆಸರು:ಶ್ರೀ ವೆಂಕಟೇಶ್ವರ ಮಹಾಸ್ವಾಮೀಜಿ.ಕೇರ್‌/ಆಫ್‌:ಬಾಲಾಜಿ ಟ್ರಸ್ಟ್‌,ನಂ.351,ವಿಶ್ವದ ದೊಡ್ಡ ಮತ್ತು ಎತ್ತರದ153ಅಡಿ ಬಾಲಾಜಿ ಪ್ರತಿಮೆ ಮತ್ತು ದೇವಾಲಯ ಹತ್ತಿರ. ಬರಡೋಲ ಗ್ರಾಮ.ಚಡಚಣ ತಾಲ್ಲೂಕು.ವಿಜಯಪುರ ಜಿಲ್ಲೆ. ಇದು ಇವರ ವಿಳಾಸ.ಪತ್ನಿ ಮತ್ತು ನಾಲ್ವರು ಅವಲಂಬಿತರು ಇದ್ದಾರೆ.ಹಿಂದೂಸ್ತಾನ್‌ ಜನತಾ ಪಾರ್ಟಿಯಿಂದ ನಾಮಪತ್ರ ಸಲ್ಲಿಸಿದ್ದಾರೆ.

‘ಸ್ವಂತದ ಚರಾಸ್ತಿಯ ಒಟ್ಟು ಮೌಲ್ಯ ₹35.87ಕೋಟಿ ಮತ್ತು ಸ್ಥಿರ ಆಸ್ತಿಯ ಮೌಲ್ಯ ₹1ಕೋಟಿ.ಬ್ಯಾಂಕ್‌,ಹಣಕಾಸು ಸಂಸ್ಥೆಗಳು ಮತ್ತು ಇತರೆ ಮೂಲಗಳಿಂದ ಪಡೆದ ಸಾಲ ₹37ಕೋಟಿ,ಇದರಲ್ಲಿ ಮುಂಬೈನ ಡೆವಲಪರ್‌ ಒಬ್ಬರಿಂದ ಪಡೆದ ಕೈಸಾಲ ₹10.97ಕೋಟಿ.ತಮ್ಮ ಬಳಿ ಇರುವ ನಗದು ₹93ಲಕ್ಷ. ತಮ್ಮ ಬಳಿ45ಕೆ.ಜಿ.ಚಿನ್ನ ಮತ್ತು19ಕೆ.ಜಿ. ಬೆಳ್ಳಿ ಇದೆ’ ಎಂದೂ ಅವರು ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ.

‌ಇಷ್ಟೊಂದು ‘ಆಸ್ತಿ ಒಡೆಯ’ನಾಗಿರುವ ಇವರ ಬಳಿ ಇರುವುದು ಒಂದೇ ಒಂದು ದ್ವಿಚಕ್ರವಾಹನ.ಸುಮಾರು10ಎಕರೆ ಕೃಷಿ ಜಮೀನು. ಆದರೆ,ಇವರು ಆದಾಯ ತೆರಿಗೆ ಇಲಾಖೆಗೆ ವಾರ್ಷಿಕ ರಿಟರ್ನ್‌ ಸಲ್ಲಿಸಿದ್ದು,ತಮ್ಮ ಆದಾಯ ಶೂನ್ಯ ಎಂದೂ ಪ್ರಮಾಣಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಅಭ್ಯರ್ಥಿಗಳು ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣ ಪತ್ರಗಳಲ್ಲಿರುವ ಮಾಹಿತಿಯನ್ನೇ ಪರಿಗಣಿಸುವುದಾದರೆ,ಬಸವ ಕಲ್ಯಾಣ ಕ್ಷೇತ್ರದಲ್ಲಿ ಸ್ಪರ್ಧಿಸಿರುವವರ ಪೈಕಿ ಅತೀ ಹೆಚ್ಚು ಆಸ್ತಿ ಮತ್ತು ಅತೀ ಹೆಚ್ಚು ಸಾಲ ಹೊಂದಿರುವ ಅಭ್ಯರ್ಥಿ ಇವರು!

ಇದೇ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿರುವ ಬೆಂಗಳೂರಿನ ‘ಮೌನಿ ಬಾಬಾ’ ‘ಬಡವ’.ಬೆಂಗಳೂರಿನವರಾದ ಪರಿಸರವಾದಿ ಅಂಬ್ರೋಸ್ ಡಿ ಮೆಲ್ಲೊ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ತಮ್ಮಬಳಿ ಅಲ್ಪ ಪ್ರಮಾಣದ ನಗದು ಬಿಟ್ಟರೆ ಬೇರೆ ಆಸ್ತಿ ಇಲ್ಲ ಎಂದು ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ. ಇವರು ಮೌನವ್ರತ ಪಾಲಿಸುತ್ತಿದ್ದು, ತಮ್ಮ ವಿಚಾರಗಳನ್ನು ಸ್ಲೇಟಿನಲ್ಲಿ ಬರೆದು ತಿಳಿಸುತ್ತಾರೆ. ಆದ್ದರಿಂದ ಇವರನ್ನು ‘ಮೌನಿ ಬಾಬಾ’ ಎಂದೇ ಗುರುತಿಸಲಾಗುತ್ತದೆ. ಇವರಿಗೆ ಚುನಾವಣೆಯಲ್ಲಿ ಸ್ಪರ್ಧಿಸುವುದು ಹವ್ಯಾಸವಂತೆ.

ಚುನಾವಣೆಗೆ ಕಣಕ್ಕೆ ಇಳಿಯುವುದು ಕೆಲವರಿಗೆ ಹವ್ಯಾಸದಂತಾಗಿದೆ.ಸ್ಪರ್ಧಿಸಲು ಠೇವಣಿ ಹಣ ಕಡಿಮೆ ಇರುವುದು ಹಾಗೂ ದಾಖಲೆ ಮಾಡಬೇಕು ಹಾಗೂ ಪ್ರಚಾರ ಗಿಟ್ಟಿಸಿಕೊಳ್ಳಬೇಕು ಎಂಬ ಹಂಬಲವೂ ಇದಕ್ಕೆ ಕಾರಣ.

25ವರ್ಷ ಪೂರೈಸಿದ ಭಾರತೀಯ ನಾಗರಿಕ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಅರ್ಹರು.ರಾಜ್ಯದ ಯಾವುದೇ ಮತಕ್ಷೇತ್ರದಲ್ಲಿ ಮತದಾರರ ಪಟ್ಟಿಯಲ್ಲಿ ಅವರ ಹೆಸರು ಇರಬೇಕು.ಮಾನಸಿಕವಾಗಿ ಸ್ವಸ್ಥರಿರಬೇಕು. ಯಾವುದೇ ಅಪರಾಧಿ ಕೃತ್ಯಗಳಲ್ಲಿ ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾಗಿರಬಾರದು ಎಂಬುದು ನಿಯಮ.ಹೀಗೆ ಸ್ಪರ್ಧಿಸುವವರಿಗೆ ಆ ಕ್ಷೇತ್ರದ10ಜನ ಮತದಾರರು ಸೂಚಕರಾಗಿರಬೇಕು ಎಂಬುದು ನಿಯಮ.

ಆದರೆ,ಇಂತಹ ಬಹುಪಾಲು ಅಭ್ಯರ್ಥಿಗಳಿಗೆ ಸೂಚಕರೇ ಇರುವುದಿಲ್ಲ.ನಾಮಪತ್ರ ಸ್ವೀಕರಿಸುವ ಮುನ್ನ ನಾಮಪತ್ರದಲ್ಲಿಯ ಮಾಹಿತಿಯನ್ನು ಪರಿಶೀಲಿಸಿ, ನಿಯಮಬದ್ಧವಾಗಿರುವ ನಾಮಪತ್ರಗಳನ್ನು ಮಾತ್ರ ಸ್ವೀಕರಿಸುವ ವ್ಯವಸ್ಥೆ ಇಲ್ಲ.ನಾಮಪತ್ರ ಸಲ್ಲಿಕೆಯ ಕೊನೆಗೆ ಅವುಗಳ ಪರಿಶೀಲನೆ ನಡೆಸಲಾಗುತ್ತದೆ. ಪರಿಶೀಲನೆ ಸಂದರ್ಭದಲ್ಲಿ ಅಭ್ಯರ್ಥಿ ಅಗತ್ಯ ದಾಖಲೆ ಮತ್ತು ನಿಯಮಗಳನ್ನು ಪಾಲನೆ ಮಾಡದಿದ್ದರೆ ಆ ಅಭ್ಯರ್ಥಿಯ ನಾಮಪತ್ರ ತಿರಸ್ಕೃತಗೊಳ್ಳುತ್ತದೆ. ಅಷ್ಟೊತ್ತಿಗಾಗಲೇ ಆ ಅಭ್ಯರ್ಥಿ ಪ್ರಚಾರ ಗಿಟ್ಟಿಸಿಕೊಂಡು ಬಿಟ್ಟಿರುತ್ತಾರೆ. ಇದು ಚುನಾವಣಾ ವ್ಯವಸ್ಥೆಯ ಲೋಪ ಎನ್ನುತ್ತಾರೆ ಹೆಸರು ಬಹಿರಂಗ ಪಡಿಸಲು ಒಲ್ಲದ ಕಂದಾಯ ಇಲಾಖೆಯ ಅಧಿಕಾರಿಯೊಬ್ಬರು.

ನಾಮಪತ್ರ ಕ್ರಮಬದ್ಧವಾಗುವುದು–ಗೆಲ್ಲುವುದು ಬಿಡಿ. ನಾಮಪತ್ರ ಸಲ್ಲಿಸಿ ಪ್ರಚಾರ ಪಡೆದ ಖುಷಿಯಲ್ಲಿ ಇಂತಹ ಅಭ್ಯರ್ಥಿಗಳು ಮುಂದಿನ ಚುನಾವಣೆಗೆ ಅಣಿಯಾಗುತ್ತಿರುತ್ತಾರೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT