ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನದಿ ಪುನರುಜ್ಜೀವನಕ್ಕೆ ಅರಣ್ಯೀಕರಣ: ಡಾ. ಎಚ್.ಆರ್.ಕೃಷ್ಣಮೂರ್ತಿ ಲೇಖನ

ಯೋಜನಾ ವರದಿಯಲ್ಲಿನ ಎರಡು ಅಂಶಗಳು ತೀವ್ರ ಸ್ವರೂಪದ ವಾದ-–ವಿವಾದಗಳಿಗೆ ಎಡೆಮಾಡಿವೆ
Last Updated 17 ಏಪ್ರಿಲ್ 2022, 19:08 IST
ಅಕ್ಷರ ಗಾತ್ರ

ಈ ವರ್ಷದ ಮಾರ್ಚ್ 14ರಂದು, ಕೇಂದ್ರ ಪರಿಸರ, ಅರಣ್ಯ ಮತ್ತು ವಾಯುಗುಣ ಬದಲಾವಣೆ ಸಚಿವಾಲಯವು ಅರಣ್ಯೀಕರಣದ ಮೂಲಕ ನಮ್ಮ ದೇಶದ 13 ಪ್ರಮುಖ ನದಿಗಳ ಪುನರುಜ್ಜೀವನಕ್ಕಾಗಿ ಯೋಜನೆಯೊಂದನ್ನು ಪ್ರಕಟಿಸಿದೆ. ನದಿಯ ಪಥದುದ್ದಕ್ಕೂ ಎರಡೂ ದಂಡೆಗಳಲ್ಲಿ ಮರ ಗಿಡಗಳನ್ನು ಬೆಳೆಸುವುದು, ನಿಗದಿತ ಜಾಗಗಳಲ್ಲಿ ನದೀತಟವನ್ನು ಆಕರ್ಷಕವಾಗಿ ಅಭಿವೃದ್ಧಿಪಡಿಸುವುದು ಮತ್ತು ಪರಿಸರ ಉದ್ಯಾನಗಳನ್ನು ನಿರ್ಮಿಸುವುದು ಈ ಯೋಜನೆಯ ಮೂರು ಮುಖ್ಯ ಗುರಿಗಳು. ಝೀಲಮ್, ರಾವಿ, ಚೀನಾಬ್, ಬೀಯಾಸ್, ಸಟ್ಲೆಜ್, ಯಮುನಾ, ಬ್ರಹ್ಮಪುತ್ರ, ಲೂನಿ, ನರ್ಮದಾ, ಗೋದಾವರಿ, ಮಹಾನದಿ, ಕೃಷ್ಣಾ ಮತ್ತು ಕಾವೇರಿ ನದಿಗಳಿಗೆ ಅನ್ವಯಿಸುವಂತೆ 24 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಾರ್ಯಗತವಾಗಲಿರುವ ಈ ಯೋಜನೆಯ ಅಂದಾಜು ವೆಚ್ಚ₹19,300 ಕೋಟಿ.

ನಮ್ಮ ದೇಶದ ಅರ್ಧಕ್ಕೂ ಹೆಚ್ಚಿನ ಭೌಗೋಳಿಕ ಪ್ರದೇಶಕ್ಕೆ ನೀರನ್ನೊದಗಿಸಿ, 42,830 ಕಿ.ಮೀ.ಗಳ ಉದ್ದಕ್ಕೆ ಪ್ರವಹಿಸುವ ಈ 13 ಮುಖ್ಯ ನದಿಗಳಲ್ಲಿ ವರ್ಷವಿಡೀ ತಕ್ಕಮಟ್ಟಿಗೆ ನೀರಿರುವಂತೆ ನೋಡಿಕೊಳ್ಳುವುದೇ ಈ ಯೋಜನೆಯ ಅತಿ ಮುಖ್ಯ ಉದ್ದೇಶ. ಈ ಸಂಬಂಧ ವಿವರವಾದ ವರದಿಯನ್ನು ಸಿದ್ಧಪಡಿಸಿರುವ, ‘ದಿ ಇಂಡಿಯನ್ ಕೌನ್ಸಿಲ್ ಆಫ್ ಫಾರೆಸ್ಟ್ರಿ ರಿಸರ್ಚ್ ಆ್ಯಂಡ್ ಎಜುಕೇಶನ್’ ಸಂಸ್ಥೆ (ಐಸಿಎಫ್‍ಆರ್‌ಇ) ನದಿಯ ಎರಡೂ ದಂಡೆಗಳ ಮೇಲೆ ಮರಗಿಡಗಳನ್ನು ಬೆಳೆಸುವುದರ ಮೂಲಕವಾಗಿ ಯೋಜನೆಯ ಉದ್ದೇಶವನ್ನು ಸಾಧಿಸಬಹುದೆಂಬ ಅಭಿಪ್ರಾಯವನ್ನು ಪ್ರತಿಪಾದಿಸಿದೆ.

ಈ ಸಸ್ಯಸಮೂಹವು ಮಳೆಯ ನೀರನ್ನು ನೆಲದಲ್ಲಿ ಇಂಗಿಸಿ, ಅಂತರ್ಜಲದ ಮರುಪೂರಣೆ ಮಾಡಿ, ನದಿ, ತೊರೆಗಳಲ್ಲಿ ವರ್ಷವಿಡೀ ನೀರಿರುವಂತೆ ಮಾಡಲಿದೆ ಎಂಬುದೇ ಈ ಇಡೀ ಯೋಜನೆಯ ಆಧಾರ ತತ್ವ. ಈ ನದಿಗಳು ಹಾದುಹೋಗುವ ಮಾರ್ಗಗಳನ್ನು ನೈಸರ್ಗಿಕ, ಕೃಷಿ ಮತ್ತು ನಗರ- ಪಟ್ಟಣ ಭೂದೃಶ್ಯಗಳೆಂದು (ಲ್ಯಾಂಡ್ ಸ್ಕೇಪ್) ವಿಂಗಡಿಸಲಾಗಿದ್ದು, ಅವುಗಳಿಗೆ ಸರಿ ಹೊಂದುವಂತಹ ಮಾದರಿಯ ನೆಡುತೋಪುಗಳನ್ನು ಬೆಳೆಸಲಾಗುತ್ತದೆ. ನದಿಯ ದಂಡೆಗಳ ರೈತರಿಗೆ ಅಗತ್ಯ ಸಸ್ಯಗಳ ವಿತರಣೆ, ಹಣ್ಣು ಮತ್ತು ಚೌಬೀನೆ ಉತ್ಪಾದಿಸುವ ಮರಗಳನ್ನು ಬೆಳೆಸುವುದು, ಮಣ್ಣು ಮತ್ತು ನೀರಿನ ಸಂರಕ್ಷಣೆಗೆ ಕ್ರಮಗಳು, ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮುಂತಾದವುಗಳಿಗೆ ಯೋಜನೆಯಲ್ಲಿ ಗಮನ ನೀಡಲಾಗಿದೆ.

ಐಸಿಎಫ್‍ಆರ್‌ಇ ಸಿದ್ಧಪಡಿಸಿರುವ ‘ನದಿಗಳ ಪುನರುಜ್ಜೀವನ’ ವರದಿಯಲ್ಲಿರುವ ಎರಡು ಅಂಶಗಳು ತೀವ್ರ ಸ್ವರೂಪದ ವಾದ-ವಿವಾದಗಳಿಗೆ ದಾರಿ ಮಾಡಿಕೊಟ್ಟಿವೆ. ಈ ಇಡೀ ಯೋಜನೆ ‘ಗಂಗಾ ನದಿಯ ಪುನರುಜ್ಜೀವನ ಕಾರ್ಯಕ್ರಮದಲ್ಲಿ, ನದಿಯ ದಡದಲ್ಲಿ ಪ್ರಾಯೋಗಿಕವಾಗಿ ನಡೆಸಿದ ಅರಣ್ಯೀಕರಣದ ಯಶಸ್ಸಿನ ಮೇಲೆ ರೂಪುಗೊಂಡಿದೆ’ ಎಂಬ ಘೋಷಣೆ ಮೊದಲನೆಯದು. ಎರಡನೆಯದು, ‘ನದಿಯ ದಂಡೆಯ ಮೇಲೆ ಮರಗಳನ್ನು ಬೆಳೆಸುವುದರಿಂದ ನದಿಯಲ್ಲಿ ವರ್ಷವಿಡೀ ನೀರಿರುವಂತೆ ಮಾಡುವುದು ಸಾಧ್ಯ’ ಎಂಬ ಬಲವಾದ ಪ್ರತಿಪಾದನೆ.

ಗಂಗಾ ಮತ್ತು ಅದರ ಉಪನದಿಗಳ ದಂಡೆಯಲ್ಲಿ ಮರಗಿಡಗಳನ್ನು ಬೆಳೆಸುವ ಯೋಜನೆ ರೂಪುಗೊಂಡದ್ದು 2015ರಲ್ಲಿ. ಡೆಹ್ರಾಡೂನ್‍ನ ಅರಣ್ಯ ಸಂಶೋಧನಾ ಸಂಸ್ಥೆ ಸಿದ್ಧಪಡಿಸಿದ ಈ ಯೋಜನೆ ಕಾರ್ಯಗತವಾಗಿದ್ದು, ಗಂಗಾ ನದಿ ಪ್ರವಹಿಸುವ ರಾಜ್ಯಗಳ ನದಿಯ ದಡದಲ್ಲಿನ 1,34,100 ಹೆಕ್ಟೇರ್ ಪ್ರದೇಶದಲ್ಲಿ 43 ವಿವಿಧ ಮಾದರಿಯ ನೆಡುತೋಪುಗಳನ್ನು ಬೆಳೆಸಲಾಗಿದೆ. ಆದರೆ ಗಂಗಾ ನದಿಯನ್ನು ಮಾಲಿನ್ಯಮುಕ್ತವನ್ನಾಗಿ ಮಾಡಿ, ನೀರಿನ ಗುಣಮಟ್ಟಉತ್ತಮಪಡಿಸುವ ಒಟ್ಟಾರೆ ಉದ್ದೇಶಕ್ಕೆ ಅರಣ್ಯೀಕರಣ ಯೋಜನೆಯ ಕೊಡುಗೆ ನಗಣ್ಯವೆನ್ನುವುದು ಪರಿಣತರ ಅಭಿಪ್ರಾಯ. ಆರು ವರ್ಷಗಳ ಅರಣ್ಯೀಕರಣ ಯೋಜನೆಯನ್ನು ಪರಿಶೀಲಿಸಿರುವ ಸ್ವತಂತ್ರ ಪರಿಣತರ ತಂಡ, ಅದು ಯಶಸ್ವಿಯಾಯಿತೆಂಬುದಕ್ಕೆ ವಿಶ್ವಾಸಾರ್ಹ ಸಾಕ್ಷ್ಯಾಧಾರಗಳಿಲ್ಲ ಎಂಬ ನಿರ್ಧಾರಕ್ಕೆ ಬಂದಿದೆ. ಯಾವ ಮಾನದಂಡದಿಂದ ಈ ಯೋಜನೆ ಇದೀಗ ಅನುಕರಣೀಯ ಮಾದರಿಯಾಗಲಿದೆ ಎಂಬುದು ಸ್ಪಷ್ಟವಾಗಿಲ್ಲ.

ನದಿಯ ದಂಡೆಗುಂಟ ಬೆಳೆಸುವ ಮರಗಿಡಗಳು ನದಿಯಲ್ಲಿ ನೀರಿನ ಹರಿವನ್ನು ಹೆಚ್ಚಿಸಿ, ವರ್ಷವಿಡೀ ನೀರಿರುವಂತೆ ಮಾಡಬಲ್ಲವೇ? ಈ ವಿಷಯದ ಬಗ್ಗೆ ವ್ಯಾಪಕ ಚರ್ಚೆ ಪ್ರಾರಂಭವಾದದ್ದು 2017ರಲ್ಲಿ. ಸದ್ಗುರು ಜಗ್ಗಿ ವಾಸುದೇವ್ ಅವರು, ನಮ್ಮ ದೇಶದ ನದಿಗಳ ದಂಡೆಯ 20,000 ಕಿ.ಮೀ.ಗಳ ಉದ್ದಕ್ಕೂ, 16 ವಿವಿಧ ಪ್ರಭೇದಗಳ ಮರಗಿಡಗಳನ್ನು ಬೆಳೆಸುವ ಯೋಜನೆಯ ವಿವರಗಳನ್ನು ಪ್ರಧಾನ ಮಂತ್ರಿಗಳಿಗೆ ಸಲ್ಲಿಸಿದ ನಂತರ.

ಮರಗಿಡಗಳ ಬೇರುಗಳು ಮಣ್ಣಿನಲ್ಲಿ ಸೃಷ್ಟಿಸುವ ರಂಧ್ರಗಳು ಹಾಗೂ ಸೂಕ್ಷ್ಮ ಜಲಮಾರ್ಗಗಳ ಮೂಲಕ ಮಳೆಯ ನೀರು ನೆಲದೊಳಗೆ ಇಳಿದು, ಅಂತರ್ಜಲವಾಗಿ, ನಿಧಾನವಾಗಿ ಚಲಿಸಿ, ಕಡೆಗೊಮ್ಮೆ ನದಿತೊರೆಗಳಿಗೆ ಸೇರುತ್ತದೆಂಬುದು ತಿಳಿದ ವಿಷಯ. ಆದರೆ ದಂಡೆಯ ಮೇಲೆ ಮರಗಿಡಗಳ ಸಂಖ್ಯೆ, ದಟ್ಟಣೆ ಹೆಚ್ಚಾದರೆ ನದಿಗೆ ಸೇರುವ ನೀರಿನ ಪ್ರಮಾಣ ಹೆಚ್ಚುತ್ತದೆಂಬುದಕ್ಕೆ ಯಾವ ವೈಜ್ಞಾನಿಕ ಆಧಾರವೂ ಇಲ್ಲವೆಂಬುದು ಬೆಂಗಳೂರಿನ ‘ಅಶೋಕ ಟ್ರಸ್ಟ್ ಫಾರ್ ರಿಸರ್ಚ್ ಇನ್ ಇಕಾಲಜಿ ಆ್ಯಂಡ್ ಎನ್ವೈರನ್‍ಮೆಂಟ್’ ಸಂಸ್ಥೆಯ ವಿಜ್ಞಾನಿಗಳ ಅಭಿಪ್ರಾಯ.

ಅರಣ್ಯೀಕರಣದಿಂದ ನಮಗೆ ದೊರೆಯುವ ನೀರಿನ ಪ್ರಮಾಣ ಹೆಚ್ಚುವುದೆಂಬುದು ಸಾಮಾನ್ಯ ನಂಬಿಕೆ. ಆದರೆ ಲಭ್ಯವಾಗುವ ನೀರಿನ ಪ್ರಮಾಣವನ್ನು ನಿರ್ಧರಿಸುವ ನಿರ್ಣಾಯಕ ಅಂಶವೆಂದರೆ ಆವಿಬಾಷ್ಪ ವಿಸರ್ಜನೆ (ಎವಾಪೋಟ್ರಾನ್ಸ್‌ಪಿರೇಶನ್). ಆವೀಕರಣ
ದಲ್ಲಿ ಜಲ ಆಕರಗಳಿಂದ ಮತ್ತು ಮಣ್ಣಿನಿಂದ ನೀರು ಆವಿಯಾಗುತ್ತದೆ. ಬಾಷ್ಪ ವಿಸರ್ಜನೆಯಲ್ಲಿ ಸಸ್ಯಗಳಿಂದ, ಅವುಗಳಲ್ಲಿರುವ ಪತ್ರರಂಧ್ರಗಳಿಂದ ನೀರು ಆವಿಯಾಗುತ್ತದೆ. ಶುಷ್ಕ ಪ್ರದೇಶದಲ್ಲಿ ಅರಣ್ಯೀಕರಣವನ್ನು ಕೈಗೊಂಡಾಗ ಅಥವಾ ತ್ವರಿತಗತಿಯಲ್ಲಿ ಬೆಳೆಯುವ, ನೆಲದಾಳಕ್ಕೆ ಬೇರುಗಳನ್ನಿಳಿಸುವ ಪ್ರಭೇದಗಳನ್ನು ಬಳಸಿದಾಗ, ಅವು ನೆಲದಿಂದಲೇ ಹೆಚ್ಚಿನ ಪ್ರಮಾಣದ ನೀರನ್ನು ಸೆಳೆದುಕೊಂಡು ಅಂತರ್ಜಲದ ಮಟ್ಟವನ್ನು ತಗ್ಗಿಸಿ, ನದಿತೊರೆಗಳನ್ನು ಒಣಗಿಸಿರುವ ಅನೇಕ ನಿದರ್ಶನಗಳಿವೆ.

ಪ್ರಪಂಚದ ವಿವಿಧ ಭೌಗೋಳಿಕ, ವಾಯುಗುಣ ಪ್ರದೇಶಗಳಲ್ಲಿ ನಡೆದಿರುವ ಅಧ್ಯಯನಗಳಿಂದ ಶೇ 70ರಷ್ಟು ಪ್ರಕರಣಗಳಲ್ಲಿ ನದಿಯ ದಡದಲ್ಲ ಅರಣ್ಯೀಕರಣದಿಂದ ಮರಗಳ ಸಂಖ್ಯೆ ಹೆಚ್ಚಿದಷ್ಟೂ ನದಿಯ ನೀರಿನ ಪ್ರಮಾಣ ಕಡಿಮೆಯಾಗುವುದುದಾಖಲಾಗಿದೆ. ಈ ವಾದವನ್ನು ಸಮರ್ಥಿಸುವ ಪರಿಸರ ತಜ್ಞ ಅ.ನ.ಯಲ್ಲಪ್ಪ ರೆಡ್ಡಿ, ‘ಮರಗಿಡಗಳು, ಹುಲ್ಲು ಮತ್ತು ಪೊದೆ ಹೊದರುಗಳ ಸಂಯೋಜನೆಯನ್ನು ಸ್ಥಳೀಯ ವಾಯುಗುಣ, ಮಣ್ಣಿನ ಗುಣಲಕ್ಷಣಗಳಿಗೆ ಹೊಂದುವಂತೆ ಎಚ್ಚರದಿಂದ ಆಯ್ಕೆ ಮಾಡಿ, ಸೂಕ್ತ ದಟ್ಟಣೆಯಲ್ಲಿ ಬೆಳೆಸಿದರೆ ಮಾತ್ರ ಅರಣ್ಯೀಕರಣ ಮತ್ತು ನದಿಗಳಲ್ಲಿ ನೀರಿನ ಲಭ್ಯತೆಯ ನಡುವಿನ ಸೂಕ್ಷ್ಮ ಹಾಗೂ ಸಂಕೀರ್ಣ ಸಂಬಂಧವನ್ನು ಕಾಪಾಡುವುದು ಸಾಧ್ಯ’ ಎನ್ನುತ್ತಾರೆ. ನದಿಗಳ ದಂಡೆಯ ಉದ್ದಕ್ಕೂ ಬೆಳೆಸುವ ಮರಗಿಡಗಳಿಂದ ಸ್ಥಳೀಯ ಮಳೆಯ ಸ್ವರೂಪದಲ್ಲಿ ಬದಲಾವಣೆ ಬರುತ್ತದೆ ಎಂಬ ನಿರೀಕ್ಷೆ ವೈಜ್ಞಾನಿಕವಲ್ಲ ಎಂಬುದು ವಿಜ್ಞಾನಿಗಳ ಅಭಿಮತ.

ಬೃಹತ್ ಪ್ರಮಾಣದ ಅರಣ್ಯೀಕರಣವೊಂದರಿಂದಲೇ ಪ್ರಮುಖ ನದಿಗಳಲ್ಲಿ ವರ್ಷವಿಡೀ ನೀರಿನ ಹರಿವನ್ನು ಕಾಯ್ದುಕೊಳ್ಳುವುದು ಅಸಾಧ್ಯ. ನಮ್ಮ ಕಾವೇರಿಯನ್ನೇ ನೋಡಿ. ಕರ್ನಾಟಕ, ತಮಿಳುನಾಡಿನ ಒಟ್ಟು ಸುಮಾರು 800 ಕಿ.ಮೀ.ಗಳ ಕಾವೇರಿಯ ಪಥದಲ್ಲಿ 96 ಅಣೆಕಟ್ಟೆಗಳು, 10 ಬ್ಯಾರೇಜ್‍ಗಳು, 15 ಜಲವಿದ್ಯುತ್ ಸ್ಥಾವರಗಳು, 54 ಜಲಾಶಯಗಳಿವೆ. 9,000 ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳಿವೆ. ಈ ಎಲ್ಲವೂ ನೀರನ್ನು ಹಿಡಿದಿಟ್ಟು, ನೀರಿನ ಪ್ರಮಾಣವನ್ನು ಇಳಿಸುತ್ತವೆ. ಪಶ್ಚಿಮ ಘಟ್ಟಗಳ ಗುಡ್ಡಗಾಡು ಪ್ರದೇಶಗಳಲ್ಲಿ ನಡೆಯುತ್ತಿರುವ ತ್ವರಿತಗತಿಯ ನಗರೀಕರಣ, ಜಲಾನಯನ ಪ್ರದೇಶದಲ್ಲಿ ಮಾಯವಾಗುತ್ತಿರುವ ಹಸಿರು ಹೊದಿಕೆ, ನದೀಪಾತ್ರವನ್ನು ಹಾಳುಗೆಡವುತ್ತಿರುವ ಮರಳು ಗಣಿಗಾರಿಕೆ ಮುಂತಾದವು ಕೂಡ ಬೇಸಿಗೆಯಲ್ಲಿ ನದಿಯ ಅನೇಕ ಭಾಗಗಳನ್ನು ಸಂಪೂರ್ಣವಾಗಿ ಒಣಗಿಸುತ್ತಿವೆ. ಬಂಗಾಳ ಕೊಲ್ಲಿಯ ಲವಣಯುಕ್ತ ನೀರು ಕಾವೇರಿ ನದಿಯೊಳಗೆ 17 ಕಿ.ಮೀ.ಗಳವರೆಗೂ ಹರಿಯುವುದು ಸಾಮಾನ್ಯವಾಗಿದೆ.

ಬಹುತೇಕ ಎಲ್ಲ ನದಿಗಳ ಕಥೆಯೂ ಇದೇ. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳದೆ, ವರ್ಷವಿಡೀ ನದಿಯಲ್ಲಿ ನೀರು ಹರಿಸಲು ಕೇವಲ ಅರಣ್ಯೀಕರಣದಂತಹ ಯೋಜನೆಗಳನ್ನು ಕೈಗೊಳ್ಳುವುದರಿಂದ ಯಾವ ಹೆಚ್ಚಿನ ಪ್ರಯೋಜನವೂ ಇಲ್ಲವೆಂಬುದು ಪರಿಸರ ವಿಜ್ಞಾನಿಗಳು, ಸಂಘಟನೆಗಳ ಖಚಿತ ನಿಲುವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT