ಶುಕ್ರವಾರ, ಅಕ್ಟೋಬರ್ 23, 2020
21 °C
ಮುಖಕ್ಕೆ ಮಸಿ ಬಳಿದುಕೊಳ್ಳುವ ಇಂತಹ ಕೆಲಸ ಬೇಕಿತ್ತೇ?

ಡಾ. ಬಸವರಾಜ ಸಾದರ ವಿಶ್ಲೇಷಣೆ: ಮುಖವಾಡದ ಮರೆಯ ಅಸಲಿ ಮುಖ

ಡಾ. ಬಸವರಾಜ ಸಾದರ Updated:

ಅಕ್ಷರ ಗಾತ್ರ : | |

ಇಪ್ಪತ್ತೈದು-ಮೂವತ್ತು ವರ್ಷ ಪರ್ಯಂತ ಬಸವಣ್ಣನವರ ಪಾತ್ರ ಮಾಡುತ್ತ ಬಂದಿದ್ದ ಆ ಹಿರಿಯ ಕಲಾವಿದ
ರನ್ನು ಆಕಾಶವಾಣಿಗಾಗಿ ಸಂದರ್ಶಿಸುತ್ತಿದ್ದೆ. ಮಾತುಕತೆಯ ನಡುವೆ ಅವರಿಗೆ ನಾನು ಹಾಕಿದ ಏಕಾಏಕಿ ಪ್ರಶ್ನೆ- ‘ನಿಮ್ಮನ್ನು ಜನ ಸಾಕ್ಷಾತ್ ಬಸವಣ್ಣನೇ ಅಂತಾರೆ, ನೀವು ಬಸವಣ್ಣನಿಂದ ಕಲಿತ ಪಾಠ ಏನು’ ಅಂತ. ಪ್ರಶ್ನೆ ಕಿವಿಗೆ ಬಿದ್ದಕೂಡಲೇ ಅವರ ಕಣ್ತುಂಬಿ ಬಂದು, ‘ಕಲಿಯೂದು ಏನ್ ಬಂತ್ರೀ, ಅವನs ಎಲ್ಲಾ ಕಲಿಸಿಬಿಟ್ಟ ಪುಣ್ಯಾತ್ಮ. ನಾ ಈಗ ಏನದೇನಲ್ಲಾ, ಅದೆಲ್ಲಾನೂ ಬಸವಣ್ಣಂದs ನೋಡ್ರಿ. ಇದರಾಗ ನಂದನ್ನೂದು ಏನೂ ಉಳದಿಲ್ಲಾ. ಈಗ ಹೊರಗ ಮಾತ್ರ ಕಲಾವಿದ ಅದಾನ, ಒಳಗ ಅವನs ತುಂಬ್ಕೊಂಡಾನ’. ಹೀಗೆ ಭಾವಾವೇಶದಿಂದ ಉತ್ತರಿಸುತ್ತಿದ್ದಾಗಲೇ, ನಾನು ನಡುವೆಯೇ ಬಾಯಿ ಹಾಕಿ, ‘ಯಾವ್ದಾದ್ರೂ ಒಂದ್ ಮರೀಲಾರದ ಘಟನಾ ಹೇಳಬೌದಾ’ ಎಂದು ಮತ್ತೊಂದು ಪ್ರಶ್ನೆ ಕೇಳಿದ್ದೆ. ಅದಕ್ಕೆ ಅವರು ಕೊಟ್ಟ ಉತ್ತರ ಇದು-

‘ಹುಬ್ಬಳ್ಳ್ಯಾಗ ಜಗಜ್ಯೋತಿ ಬಸವಣ್ಣನವರು ನಾಟಕದ ಕ್ಯಾಂಪ್ ಹಾಕಿದ್ವಿ. ಸುತ್ತ ಐವತ್ತರವತ್ತು ಮೈಲಿಂದ ಜನಾ ನೋಡಾಕ್ ಬರತಿದ್ರರಿ. ಹಂಗ್ ಬಂದವ್ರು ರಾತ್ರಿ ನಾಟಕ ಮುಗದಿಂದ್ ಊರಿಗೆ ವಾಪಸ್ಸು ಹೋಗಾಕ ಅಕ್ಕಿದ್ದಿಲ್ಲ. ಅಲ್ಲೇ ಥೇಟರ್ ಒಳಗ ಮಲಕೊಂಡು, ಮುಂಜೇಲೆದ್ದು, ಮಕಾ ತೊಕ್ಕೊಂಡು, ಒಂದ್ ಸಿಂಗಲ್ ಚಾ ಕುಡದು ಹೊಳ್ಳಿ ಹೊಕ್ಕಿದ್ರರಿ. ಅವತ್ತ ಹಂಗ್ ಒಂದೂರಿನ ಮಂದೀ ಮುಂಜೇಲೆ ಚಾ ಕುಡ್ಯಾಕಂತ ಆ ಹೊಟೇಲ್ಲಿಗೆ ಬಂದಿದ್ರರಿ. ನಾನೂ ಒಂದಿಬ್ರು ಸಹನಟರ ಜೊತೀಗೆ ಚಾ ಕುಡ್ಯಾಕಂತ್ ಅಲ್ಗೆ ಹೋದ್ಯಾ. ಮಕದ ಮ್ಯಾಲಿನ ಬಣ್ಣ ಇನ್ನೂ ಬರೋಬ್ಬರಿ ಅಳಿಕಿದ್ದಿಲ್ರಿ. ಆ ಮಂದಿ, ಎರಡು ಟೇಬಲ್ಲಿನ ಅಚ್ಚೀಕಡೆ ಕುಂತಿದ್ರು, ನಾ ಇಚ್ಚೀಕಡೆ ಇದ್ದೆ’.

‘ಹಂಗ್ ಚಾ ಕುಡ್ಯಾಕ್ ಕುಂತವ್ರೊಳಗ ಒಬ್ಬಾಂವ, ಅಲ್ಲಿಂದನs ನನ್ನ ಕಡೆ ನೋಡ್ಕೊಂತ್, ತನ್ನ ಮಗ್ಗಲ್ಕಿದ್ದವ್ರಿಗೆ
‘ಏ ಅಲ್ನೋಡ್ರ್ಯೋ ಬಸವಣ್ಣನೂ ಚಾ ಕುಡ್ಯಾಕ್ಹತ್ಯಾನ!’ ಅಂದದ್ದು ನನ್ನ ಕಿಂವೀಗೆ ಮೆಲ್ಲಕs ಕೇಳಿಸ್ತಿರಿ. ಆ ಮಾತು ಕೇಳಿದ್ದೊಂದs ತಡಾ, ನನ್ನೊಳಗ ಬಸವಣ್ಣನ್ನ ಕಾಣೂ ಈ ಜನಕ್ಕ ನಾನು ಮೋಸಾ ಮಾಡಾಕತ್ತೇನೆಲ್ಲ ಅನಿಸಿ ಹೊಟ್ಟ್ಯಾಗ ಸಂಗಟನs ಸುರುವಾತ್ ನೋಡ್ರಿ. ಅಷ್ಟೊತ್ಗೆ ಚಾ ಒಂದ್ ಸುರಿಕೀ ಕುಡದಿದ್ದ್ಯಾ. ಬಾಳ ನೋವನಿಸಿ, ಅರ್ಧಾ ಆಗಿದ್ದ ಕಪ್ಪು ಟೇಬಲ್ ಮ್ಯಾಗಿಟ್ಟು, ಕೈ ಮುಕ್ಕೊಂಡು ಒಂದs ಏಟ್ಗೇ ಹೋಟೆಲ್ಲಿಂದ ಹೊರಗ ಬಂದ್ ಬಿಟ್ಟ್ಯಾ ನೋಡ್ರಿ. ನಾನು ಚಾ ಕುಡದಿದ್ದು ಅವತ್ತs ಕಡೇದ್ದು. ಆಮ್ಯಾಲ ಚಾ ಮುಟ್ಟಲಿಲ್ಲ. ಬರೇ ಚಾ ಅಷ್ಟs ಅಲ್ರಿ, ಬಸವಣ್ಣನೊಳಗ ಜನಾ ಏನೇನ್ ಕಾಣ್ತಿದ್ರಲ್ಲಾ ಅದನ್ನೆಲ್ಲಾ ಪಾಲಸಾಕ್ ಸುರೂ ಮಾಡಿದ್ಯಾರೀ. ಆ ಘಟನಾ ನನ್ನ ಒಳಗಿದ್ದ ಕಲಾವಿದನನ್ನ ಕರೇವಂದ್ರೂ ಬಸವಣ್ಣನ್ನ ಮಾಡ್ತಿ ನೋಡ್ರಿ’.

ಮರೆಯಲಾರದ ಇಂಥ ಜೀವನ ಕಲಾನುಭವವನ್ನು ಹಂಚಿಕೊಂಡವರು, ಉತ್ತರ ಕರ್ನಾಟಕದ ರಂಗಕಲಾವಿದ ಏಣಗಿ ಬಾಳಪ್ಪನವರು. ಒಬ್ಬ ಶ್ರೇಷ್ಠ ಕಲಾವಿದ, ಪಾತ್ರವನ್ನು ಮಾಡುತ್ತ ಮಾಡುತ್ತ ಆ ಪಾತ್ರವೇ ಆಗಿಬಿಡುವ ಈ ಪರಿವರ್ತನೆ ಕಲಿಸುವ ಬಹುದೊಡ್ಡ ಪಾಠವೆಂದರೆ, ರಂಗಸ್ಥಳ ಅಥವಾ ಕಲಾವಿದರ ಬದುಕು ಬರೀ ಬಣ್ಣ ಹಚ್ಚಿಕೊಂಡು ಪಾತ್ರ ಮಾಡುವುದಕ್ಕಷ್ಟೇ ಅಲ್ಲ, ಮಾಡುವ ಪಾತ್ರಗಳ ಆದರ್ಶ ಮತ್ತು ಮೌಲ್ಯಗಳನ್ನು ತಮ್ಮ ಬದುಕುಗಳಲ್ಲೂ ತಂದುಕೊಳ್ಳುವ ಪ್ರಯೋಗಶಾಲೆ ಹಾಗೂ ಭೂಮಿಕೆ ಅದಾಗಬೇಕು ಎಂಬುದು.

ನಮ್ಮ ನಾಡಿನ ಅನೇಕ ಹಿರಿಯ ರಂಗ ಹಾಗೂ ಸಿನಿಮಾ ಕಲಾವಿದರ ಬದುಕುಗಳು ಬಡವಾಗಿದ್ದವು. ಆದರೆ ಅವರ ಮನಸ್ಸು, ನಡೆ, ಶೀಲ ಮತ್ತು ವ್ಯಕ್ತಿತ್ವಗಳು ಶ್ರೀಮಂತವಾಗಿದ್ದವು. ರಂಗಭೂಮಿ ಎಂದರೆ ಅದೊಂದು ಪವಿತ್ರ ಸ್ಥಳ, ಆ ವೇದಿಕೆಯನ್ನು ಏರುವಾಗ ತಮ್ಮ ವ್ಯಕ್ತಿತ್ವವೂ ಅಷ್ಟೇ ಶುದ್ಧವಾಗಿರಬೇಕೆಂಬ ಆತ್ಮಸಾಕ್ಷಿ ಅವರಿಗಿತ್ತು. ಅಂಥ ನಟರ ನಡಾವಳಿಗಳಿಂದ ಎಷ್ಟೋ ಜನ ತಮ್ಮ ಬದುಕು- ವ್ಯಕ್ತಿತ್ವ ಬದಲಿಸಿಕೊಂಡದ್ದುಂಟು.

‘ಬಂಗಾರದ ಮನುಷ್ಯ’ ಸಿನಿಮಾ ಬಿಡುಗಡೆಯಾದಾಗ ನಮ್ಮ ರಾಜ್ಯದ ಎಷ್ಟೋ ರೈತರಿಗೆ ಶ್ರಮ ಮತ್ತು ಬೆವರಿನ ಬೆಲೆ ಗೊತ್ತಾಯಿತಷ್ಟೇ ಅಲ್ಲ, ಮೈಮುರಿದು ದುಡಿದರೆ ಭೂಮಿತಾಯಿ ಮನಸ್ಸು ತುಂಬಿ ಕೊಡುತ್ತಾಳೆ ಎಂಬ ಸತ್ಯ ಅರಿವಾದದ್ದು ದೊಡ್ಡ ಕ್ರಾಂತಿ. ಅದನ್ನು ಸ್ವತಃ ರೈತನಾಗಿ ತೋರಿಸಿದ ಡಾ. ರಾಜಕುಮಾರ್ ಅವರು ಇಡೀ ರೈತ ಸಮೂಹಕ್ಕೆ ಒಂದು ಆಶಾಕಿರಣವಾದರು. ರೈತನ ಪಾತ್ರವೊಂದೇ ಅಲ್ಲ, ತಾವು ಮಾಡಿದ ಎಲ್ಲ ಪಾತ್ರಗಳ ಮೂಲಕವೂ ಅವರು ಜನತೆಗೆ ನೈತಿಕ ಪಾಠಗಳನ್ನು, ಆದರ್ಶದ ಪಥವನ್ನು ತೋರಿದರು. ಹೀಗಾದದ್ದು ಅವರ ನಟನೆಯಿಂದ ಮಾತ್ರವಲ್ಲ, ಸ್ವತಃ ಅವರ ಬದುಕೇ ಹಾಗಿತ್ತು ಎಂಬ ಕಾರಣಕ್ಕಾಗಿ.

ಶುದ್ಧ ವ್ಯಕ್ತಿತ್ವದ ಇಂಥ ಅನೇಕ ಮೇರುಕಲಾವಿದರಿಂದ ಪವಿತ್ರ ವೇದಿಕೆಯೆಂದೇ ಹೆಸರು ಪಡೆದ ಸಿನಿಮಾ ಪ್ರಪಂಚದಲ್ಲಿ ಇದೀಗ ಹೊರಬೀಳುತ್ತಿರುವ ಕೆಲವು ಯುವನಟ-ನಟಿಯರ ಡ್ರಗ್ಸ್ ಹಗರಣಗಳನ್ನು ನೋಡಿದರೆ, ನಿಜಕ್ಕೂ ವಾಕರಿಕೆ ಬರುತ್ತದೆ. ಬಹುದೊಡ್ಡ ಪರಂಪರೆಯ ವಾರಸುದಾರರಾಗಬೇಕಿದ್ದ ಈ ‘ಕೆಲವರು’ ವೈಯಕ್ತಿಕವಾಗಿ ಅನೈತಿಕ ಕೆಲಸಕ್ಕೆ ಇಳಿದುದಷ್ಟೇ ಅಲ್ಲ, ಇನ್ನೂ ಹಲವು ಯುವಕರಿಗೆ ದುಶ್ಚಟಗಳ ರುಚಿ ಹಚ್ಚಿಸಿ, ಇಡೀ ಚಿತ್ರರಂಗಕ್ಕೇ ಮಸಿ ಬಳಿಯುತ್ತಿರುವ ಆರೋಪ ಕೇಳಿಬಂದಿರುವುದು ನಿಜಕ್ಕೂ ಅವಮಾನಕರ.


ಡಾ. ಬಸವರಾಜ ಸಾದರ

ಅಚ್ಚರಿ ನೋಡಿ, ಇವರಲ್ಲಿ ಕೆಲವರ ತಂದೆ-ತಾಯಿ, ‘ನಮ್ಮ ಮಕ್ಕಳು ಏನೂ ಮಾಡಿಲ್ಲ, ಅವರ ಮೇಲೆ ಸುಳ್ಳು ಆರೋಪ ಹೋರಿಸುತ್ತಿದ್ದಾರೆ’ ಎಂದೂ ಮತ್ತೆ ಕೆಲವರು ‘ನಮ್ಮ ಮಕ್ಕಳು ಡ್ರಗ್ಸ್ ಸೇವಿಸಿಲ್ಲ, ಬರೀ ಕುಡಿಯುತ್ತಿದ್ದರು’ ಎಂದೂ ಇನ್ನೂ ಕೆಲವರು ‘ನಮ್ಮ ಮಕ್ಕಳು ಅದಾವುದನ್ನೂ ಸೇವಿಸುವವರಲ್ಲ, ಅವರು ಬರೀ ಅವುಗಳ ವ್ಯಾಪಾರ ಮಾಡುತ್ತಿದ್ದರು’ ಎಂದೂ ವಿಚಿತ್ರ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೆಲ್ಲ ಗಮನಿಸಿದರೆ, ಈ ಜಾಲ ಆ ಪಾತ್ರಧಾರಿಗಳಿಗಷ್ಟೇ ಸೀಮಿತವಾಗಿಲ್ಲವೆಂಬ ಸಂಶಯ ಕಾಡದಿರದು.

ಅಂಗೈ ಹುಣ್ಣಿಗೆ ಕನ್ನಡಿ ಬೇಕೇ? ಎಲ್ಲವೂ ಸಾಕ್ಷ್ಯಸಹಿತ ಹೊರಬೀಳುತ್ತಿರುವಾಗ ಮತ್ತು ತಾವು ಮಾಡಿದ್ದು ತಪ್ಪು ಎಂದು ಬಂಧಿತ ಆರೋಪಿಗಳೇ ಒಪ್ಪಿಕೊಳ್ಳುತ್ತಿರುವಾಗ, ತಾಯ್ತಂದೆಯ ಇಂಥ ಹೇಳಿಕೆಗಳು ಏನನ್ನು ಸೂಚಿಸುತ್ತವೆ? ಇಂಥವರ ಮಕ್ಕಳಿಗೆ ಹಣ ಮಾಡಲು ಬೇರೆ ಪ್ರಾಮಾಣಿಕ ಮಾರ್ಗಗಳೇ ಕಾಣಲಿಲ್ಲವೇ ಎಂಬ ಪ್ರಶ್ನೆ ಹುಟ್ಟುತ್ತದೆ. ಆದರೆ ಇದು ಹಣದ ಪ್ರಶ್ನೆ ಮಾತ್ರವಲ್ಲ, ನಶೆ ಹಾಗೂ ಅಮಲಿನ ಗಮ್ಮತ್ತೂ ಹೌದು.

ಈ ಕೆಲವು ನಟರು ಸಿನಿಮಾಗಳಲ್ಲಿ ಸಮಾಜ ಸುಧಾರಕರ, ವಿವಿಧ ಅಧಿಕಾರಿಗಳ, ಕ್ರಾಂತಿಕಾರಿ ಯುವಜನರ ಪಾತ್ರ ವಹಿಸಿ, ಇಡೀ ವ್ಯವಸ್ಥೆಯನ್ನೇ ಬದಲಿಸಿಬಿಡುವ ವೀರಾವೇಶದ ಹಾಗೂ ಆದರ್ಶದ ಡೈಲಾಗ್ ಹೊಡೆದು ಪ್ರೇಕ್ಷಕರಿಂದ ಚಪ್ಪಾಳೆಯನ್ನೂ ಗಿಟ್ಟಿಸಿಕೊಂಡಿದ್ದಾರೆ. ಆದರೆ ಸಿನಿಮಾದಲ್ಲಿ ಹಾಗೆ, ನಿಜಜೀವನದಲ್ಲಿ ಹೀಗೆ! ಈಗ ಅಂಥವರ ನಿಜವಾದ ಮುಖವಾಡಗಳು ಬಯಲಾಗುತ್ತಿವೆ. ಮುಖಕ್ಕೆ ಮಸಿ ಬಳಿದುಕೊಳ್ಳುವ ಇಂಥ ಅನೈತಿಕ ಕೆಲಸ ಇವರಿಗೆ ಅಗತ್ಯವಿತ್ತೇ?

ಸಣ್ಣ ಮಕ್ಕಳು ಹಾಗೂ ವಿದ್ಯಾರ್ಥಿಗಳೂ ಈ ಜಾಲದಲ್ಲಿ ಬೀಳುತ್ತಿರುವ ವರದಿಗಳನ್ನು ನೋಡಿದರೆ, ಜನಪ್ರಿಯತೆಯ ಅಮಲಿನಲ್ಲಿರುವ ಇಂಥ ಕೆಲವು ಪಾತ್ರಧಾರಿಗಳು ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿದ್ದಾರೆ ಎಂದು ಭಾಸವಾಗುತ್ತದೆ. ಇದು, ‘ರಕ್ತಬೀಜಾಸುರ’ ಸಂತತಿಯಾಗಿ ಬೆಳೆಯುವ ಮೊದಲೇ ನಮ್ಮ ವ್ಯವಸ್ಥೆಯು ಯಾರ ಮುಲಾಜೂ ಇಲ್ಲದೆ ತಪ್ಪಿತಸ್ಥರನ್ನು ಶಿಕ್ಷಿಸಲು ಮುಂದಾಗಬೇಕಿದೆ. ಈಗಿರುವ ಮಾರ್ಗ ಅದೊಂದೇ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು