ಗುರುವಾರ, 8 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ – ನಾವು ಮೊದಲಿನಿಂದಲೂ ಪ್ರಶ್ನಿಸುತ್ತ ಬಂದವರು...

ಜ್ಞಾನದ ಒರತೆಗೆ ಪ್ರತೀ ತಲೆಮಾರೂ ತನ್ನದೇ ಆದ ಕೊಡುಗೆ ನೀಡಿದೆ
Last Updated 11 ಜುಲೈ 2021, 19:30 IST
ಅಕ್ಷರ ಗಾತ್ರ

ಪ್ರಧಾನಿ ನರೇಂದ್ರ ಮೋದಿ ಅವರು ಆಧುನಿಕರಂತೆ ಕಾಣಿಸುತ್ತಾರೆ. ಮೂಢನಂಬಿಕೆಗಳಲ್ಲಿ ಮುಳುಗಿರುವವರಂತೆಯೂ ಕಾಣಿಸುತ್ತಾರೆ. ಚಂದ್ರನಲ್ಲಿ ಶೋಧ ಕೈಗೊಳ್ಳುವುದನ್ನು ಬೆಂಬಲಿಸುತ್ತಾರೆ, ಅತ್ಯಾಧುನಿಕ ಯುದ್ಧ ವಿಮಾನ ಖರೀದಿಗೆ ಆದೇಶಿಸುತ್ತಾರೆ, ದೇಶದ ಮೊದಲ ಬುಲೆಟ್ ರೈಲು ಯೋಜನೆ ಆರಂಭಿಸುತ್ತಾರೆ, ಭಾರತವು ವಿಶ್ವಕ್ಕೆ ಲಸಿಕೆಗಳನ್ನು ಪೂರೈಸುವ ಶಕ್ತಿಕೇಂದ್ರವೆಂದು ಹೆಮ್ಮೆಯಿಂದ ಹೇಳುತ್ತಾರೆ. ಇವೆಲ್ಲವೂ ಆಧುನಿಕ ವಿಜ್ಞಾನದ ಕೊಡುಗೆಗಳು.

ಮೋದಿ ಅವರು ನಕಲಿ ವಿಜ್ಞಾನದ ಬೆನ್ನನ್ನೂ ತಟ್ಟುತ್ತಾರೆ. ಪುರಾತನ ಸಂಖ್ಯಾಶಾಸ್ತ್ರ ಆಧರಿಸಿ, ಕೊರೊನಾ ವೈರಾಣು ಹೊಡೆದೋಡಿಸಲು ಶುಭ ವೇಳೆಯಲ್ಲಿ ಗಂಟೆ ಬಡಿಯಬೇಕು, ಶಂಖ ಊದಬೇಕು ಎಂದು ಅವರು ಜನರಲ್ಲಿ ಹೇಳುತ್ತಾರೆ. ಪುರಾಣ ಕಾಲದಲ್ಲಿ ಭಾರತವು ವೈಜ್ಞಾನಿಕವಾಗಿ ಬಹಳಷ್ಟು ಸಾಧನೆ ಮಾಡಿತ್ತು ಎಂದು ಉತ್ಸಾಹದಿಂದ ಅವರು ಹೇಳುತ್ತಾರೆ. ಗಣಪತಿಗೆ ಆನೆಯ ತಲೆಯನ್ನು ಜೋಡಿಸಿದ್ದು ಪ್ಲಾಸ್ಟಿಕ್ ಸರ್ಜರಿಯನ್ನು ಪಶ್ಚಿಮದ ದೇಶಗಳು ಅನ್ವೇಷಿಸುವುದಕ್ಕೂ ಮೊದಲೇ ಆಗಿದ್ದ ಬಹುದೊಡ್ಡ ಬೆಳವಣಿಗೆ ಎಂದು ಮೋದಿ ಅವರು ಹೇಳುತ್ತಾರೆ.

ತಮ್ಮಲ್ಲಿ ವಿಶೇಷ ಶಕ್ತಿ ಇದೆ ಎಂದು ಹೇಳಿಕೊಳ್ಳುವವರ ಸಂಖ್ಯೆ ಭಾರತದಲ್ಲಿ ಜಾಸ್ತಿಯೇ ಇದೆ. ಬೇರೆ ಬೇರೆ ವರ್ಗಗಳಿಗೆ ಸೇರಿದ ದೇವಮಾನವರು, ಸಾಧುಗಳು ಇದ್ದಾರೆ, ಪ್ರಾದೇಶಿಕ ಆಹಾರ ಪದ್ಧತಿಯನ್ನು ಪ್ರತಿಪಾದಿಸುತ್ತ ಸ್ವಯಂಘೋಷಿತ ವೈದ್ಯರಾಗಿರುವವರು ಇದ್ದಾರೆ, ಕಾಯಿಲೆಗಳಿಗೆ ತಮ್ಮಲ್ಲಿ ಔಷಧಿ ಇದೆ ಎಂದು ಸುಳ್ಳು ಹೇಳುವವರು ಇದ್ದಾರೆ. ಪಾರಂಪರಿಕ ವೈದ್ಯ ಪದ್ಧತಿ ಅನುಸರಿಸುವ ಕೆಲವರು ಸಣ್ಣ ಪ್ರಮಾಣದಲ್ಲಿಯಾದರೂ ‍ಪ್ರಯೋಗಾಲಯ ಸ್ಥಾಪಿಸಿ, ರಕ್ತದೊತ್ತಡ ಹಾಗೂ ಕೊಬ್ಬಿನ ಅಂಶವನ್ನು ಪತ್ತೆ ಮಾಡುತ್ತಾರೆ. ಪಾಶ್ಚಿಮಾತ್ಯ ವೈದ್ಯ ಪದ್ಧತಿಯಲ್ಲಿ ಇರುವಂತೆ ತಾವೂ ಎಕ್ಸ್‌–ರೇ ಯಂತ್ರಗಳನ್ನು ಹಾಗೂ ಇಸಿಜಿ ಯಂತ್ರಗಳನ್ನು ಇಟ್ಟುಕೊಂಡು ತಾವು ಅನುಸರಿಸುತ್ತಿರುವುದಕ್ಕೆ ವಿಜ್ಞಾನದ ಹೊದಿಕೆ ಹಾಕಲು ಯತ್ನಿಸುತ್ತಾರೆ. ಕೆಲವರಿಗೆ ಮಾತ್ರ ಅರ್ಥವಾಗುವ ಆಹಾರ ಕ್ರಮವನ್ನು ಪ್ರತಿಪಾದಿಸುವುದರಿಂದ ಆರಂಭಿಸಿ, ಸಗಣಿ ಹಾಗೂ ಗೋಮೂತ್ರದವರೆಗೆ ಸಲಹೆ ನೀಡುತ್ತಾರೆ. ಇವು ಕೋವಿಡ್–19 ಸೇರಿದಂತೆ ಎಲ್ಲ ಕಾಯಿಲೆಗಳನ್ನೂ ಗುಣಪಡಿಸಬಲ್ಲವು ಎಂದು ಹೇಳುತ್ತಾರೆ. ರೋಗನಿರೋಧಕ ಶಕ್ತಿಯನ್ನು, ಪುರುಷರ ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸಲು ವೇದಗಳಲ್ಲಿ ಉಲ್ಲೇಖವಾಗಿವೆ ಎನ್ನಲಾದ ಔಷಧಗಳನ್ನು ಕೂಡ ಇವರು ಮಧ್ಯಮ ವರ್ಗದ ಜನರಿಗೆ ನೀಡುತ್ತಾರೆ. ತಕ್ಷಣವೇ ‘ನಿರ್ವಾಣ’ವನ್ನು ನೀಡುವ ಶಕ್ತಿಯೂ ತಾವು ಕೊಡುವ ಔಷಧಿಗಳಿಗೆ ಇದೆ ಎನ್ನುತ್ತಾರೆ.

ಕೆಲವು ಮನೆ ಮದ್ದುಗಳು ಬಹಳ ಪ್ರಯೋಜನಕಾರಿ ಎಂಬುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ತೀರಾ ಕೆಟ್ಟ ಶೀತವಿದ್ದರೆ, ಬಿಸಿ ಹಾಲಿಗೆ ಕಾಳುಮೆಣಸಿನ ಪುಡಿ ಹಾಗೂ ಅರಿಸಿನ ಬೆರೆಸಿ ಕುಡಿದರೆ ಆರಾಮ ಆಗುತ್ತದೆ. ಹೊಟ್ಟೆ ಉಬ್ಬಿದಾಗ ಮಜ್ಜಿಗೆಗೆ ಬೆಳ್ಳುಳ್ಳಿ ಮತ್ತು ಶುಂಠಿ ಬೆರೆಸಿ ಸೇವಿಸಿದರೆ ಸಮಾಧಾನ ಸಿಗುತ್ತದೆ. ಅಂಗಾಲಿನಲ್ಲಿ ಒಂದು ಬಗೆಯ ಗಡ್ಡೆ ಆದಾಗ ಅಲ್ಲಿಗೆ ಸುಣ್ಣ ಹಚ್ಚಿ, ಬಾಳೆಹಣ್ಣಿನ ಸಿಪ್ಪೆಯನ್ನು ಪಟ್ಟಿಯ ರೀತಿಯಲ್ಲಿ ಕಟ್ಟಿಕೊಂಡರೆ ಗುಣವಾಗುವುದಿದೆ. ಕಾಯಿಲೆಗಳನ್ನು ಗುಣಪಡಿಸಲು ಮನೆ ಮದ್ದುಗಳು, ಆಯುರ್ವೇದ ಔಷಧಿಗಳು ಇವೆ. ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿ ಬಳಕೆಯಲ್ಲಿರುವ ಪರ್ಯಾಯ ವೈದ್ಯ
ಪದ್ಧತಿಗಳು, ಆದಿವಾಸಿ ಸಮುದಾಯಗಳು ಬಳಸುವ ಕೆಲವು ಔಷಧಿಗಳು ಪ್ರಯೋಜನಕಾರಿ ಹೌದು, ಅವುಗಳು ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ದಾಟಿಕೊಂಡು ಬಂದಿವೆ. ಆದರೆ ಇಂತಹ ಔಷಧಿಗಳ ಮಿತಿಗಳನ್ನು ಗುರುತಿಸಿ, ಒಪ್ಪಿಕೊಳ್ಳುವ ಕೆಲಸ ಆಗಬೇಕು. ವಿಜ್ಞಾನದ ಕವಲಾಗಿರುವ ಆಧುನಿಕ ವೈದ್ಯಪದ್ಧತಿಯು ನಂಬಿಕೆಗಳು, ಆಚರಣೆಗಳನ್ನು ಪ್ರಶ್ನಿಸಿತು, ಔಷಧವು ಕೆಲಸ ಮಾಡುತ್ತದೆಯೋ ಇಲ್ಲವೋ ಎಂಬು ದನ್ನು ಕಂಡು ಕೊಳ್ಳಲು ಪ್ರಯೋಗಗಳನ್ನು ಕೈಗೊಳ್ಳುವ ಮಾರ್ಗವನ್ನು ಹುಡುಕಿಕೊಂಡಿತು. ಔಷಧವೊಂದು ಪ್ರಯೋಜನಕಾರಿ ಅಲ್ಲವೆಂದಾದರೆ, ಹೊಸದಾಗಿ ಏನು ಮಾಡಬಹುದು ಎಂಬುದನ್ನು ಶೋಧಿಸಲು ಉತ್ತೇಜನ ನೀಡಿತು.

ವಿಜ್ಞಾನಿಗಳು ತಮಗೆ ಗೊತ್ತಿಲ್ಲದ ಸಂಗತಿಗಳನ್ನು ‘ಗೊತ್ತಿಲ್ಲ’ ಎಂದು ಒಪ್ಪಿಕೊಂಡಿದ್ದರಿಂದಾಗಿ, ಕೆಲವು ಸಂಗತಿಗಳ ಬಗ್ಗೆ ಪ್ರಶ್ನಿಸಲು ಹಿಂಜರಿಯದೆ ಇದ್ದ ಕಾರಣದಿಂದಾಗಿ ವೈಜ್ಞಾನಿಕ ಕ್ಷೇತ್ರದಲ್ಲಿ ಪ್ರಗತಿ ಸಾಧ್ಯವಾಗಿದೆ. ಜ್ಞಾನದ ಒರತೆಗೆ ಪ್ರತೀ ತಲೆಮಾರು ಕೂಡ ತನ್ನದೇ ಆದ ಕೊಡುಗೆ ನೀಡಿದೆ. ಆದರೆ, ನಕಲಿ ವಿಜ್ಞಾನಿಗಳು ಸಮಾಜಕ್ಕೆ ಅಪಾಯಕಾರಿ. ಅವರು ತಮ್ಮ ನಕಲಿ ನಂಬಿಕೆಗಳ ಬಗ್ಗೆಯೇ ಅಪಾರವಾದ ವಿಶ್ವಾಸ ಹೊಂದಿರುತ್ತಾರೆ. ಅನುಮಾನಗಳು ಹಾಗೂ ಅನಿಶ್ಚಿತತೆ
ಗಳು ಅವರಿಗೆ ಇಷ್ಟವಾಗುವುದಿಲ್ಲ. ಒಂದು ವಿಚಾರ ನಮಗೆ ಪೂರ್ತಿಯಾಗಿ ಗೊತ್ತಿಲ್ಲ ಎಂಬುದರಲ್ಲಿ ತಪ್ಪು ಇಲ್ಲ. ಎಲ್ಲವೂ ಗೊತ್ತಿದೆ ಎಂಬ ಮನೋಭಾವವು ತಪ್ಪುಗಳನ್ನು ಸರಿ ಮಾಡಿಕೊಳ್ಳುವ ಅವಕಾಶಗಳನ್ನೇ ಇಲ್ಲವಾಗಿಸುತ್ತದೆ, ಪ್ರಗತಿಗೆ ಅಡ್ಡಿಯಾಗುತ್ತದೆ. ಇದು ನಾಗರಿಕತೆಗೇ ಮುಳುವಾಗಬಹುದು.

ಈಗ, ಮೊದಲು ಪ್ರಸ್ತಾಪಿಸಿದ್ದ ವಿಷಯಕ್ಕೆ ಮರಳೋಣ. ಮೋದಿ ಅವರು ವಿಜ್ಞಾನವನ್ನು ಪ್ರತಿ ಪಾದಿಸುವ ವ್ಯಕ್ತಿಯೋ ನಕಲಿ ವಿಜ್ಞಾನವನ್ನು ನಂಬುವ ವ್ಯಕ್ತಿಯೋ ಎಂಬ ಪ್ರಶ್ನೆ ಮೂಡುತ್ತದೆ. ಅವರು ವಿಜ್ಞಾನವನ್ನೂ ನಕಲಿ ವಿಜ್ಞಾನವನ್ನೂ ಬೇರೆ ಬೇರೆ
ಸಂದರ್ಭಗಳಲ್ಲಿ ಏಕೆ ಜನರ ಮುಂದಿರಿಸುತ್ತಿದ್ದಾರೆ? ಆಧುನಿಕ ಹಾಗೂ ವಿಚಾರವಾದಿ ಮತದಾರರನ್ನು, ಸಾಂಪ್ರದಾಯಿಕ ಮತ್ತು ಮೂಢನಂಬಿಕೆಗಳಲ್ಲಿ ನಂಬಿಕೆ ಹೊಂದಿರುವ ಮತದಾರರನ್ನು ಗಮನದಲ್ಲಿ ಇರಿಸಿ ಕೊಂಡು, ಅವರಿಬ್ಬರನ್ನೂ ಸೆಳೆಯುವ ಉದ್ದೇಶದಿಂದ ಮಾಡಿದ ರಾಜಕೀಯ ತಂತ್ರ ಇದು ಎನ್ನುವುದಾದರೆ, ಈಚೆಗಿನ ಕೆಲವು ವಿಧಾನಸಭಾ ಚುನಾವಣೆಗಳ ಫಲಿತಾಂಶ ಗಮನಿಸಿದರೆ ಈ ತಂತ್ರ ನಿರೀಕ್ಷಿತ ಯಶಸ್ಸು ಕಂಡಿಲ್ಲ ಎನ್ನಬೇಕಾಗುತ್ತದೆ. ಭಾರತವನ್ನು ತಾಂತ್ರಿಕವಾಗಿ ಉನ್ನತ ಮಟ್ಟಕ್ಕೇರಿದ ದೇಶಗಳ ಸಾಲಿಗೆ ಕೊಂಡೊಯ್ಯುವ ಅವಸರದಲ್ಲಿ ಇರುವ ವ್ಯಕ್ತಿ ತಾವು ಎಂಬ ಚಿತ್ರಣವನ್ನು ಅವರು ತಮ್ಮ ಬಗ್ಗೆ ಕಟ್ಟಿಕೊಂಡಿದ್ದಾರೆ. ಅವರು ಎರಡೆರಡು ಬಗೆಯ ಸಂದೇಶಗಳನ್ನು ರವಾನಿಸುವುದು, ಮನುಷ್ಯನ ತರ್ಕಕ್ಕೆ ಮೀರಿದ ಸಂಗತಿಗಳನ್ನು ಸಾಂಕೇತಿಕವಾಗಿ ಆಚರಿಸುವುದು ತಮ್ಮ ಬಗ್ಗೆ ಕಟ್ಟಿಕೊಂಡಿರುವ ಚಿತ್ರಣಕ್ಕೆ ಸರಿಹೊಂದುವುದಿಲ್ಲ.

ಕೇಸರಿ ಸಂಘಟನೆಯ ಒಳಗೆ ಹಾಗೂ ಇತರೆಡೆಗಳಲ್ಲಿನ ಮೋದಿ ನಿಷ್ಠರು ಭಾರತವನ್ನು ಕೆಟ್ಟದ್ದಾಗಿ ತೋರಿಸುತ್ತಿದ್ದಾರೆ, ಅಜ್ಞಾನ ಹಾಗೂ ಮೂಢನಂಬಿಕೆಗಳಲ್ಲಿ ಮುಳುಗಿಹೋಗಿರುವ ದೇಶ ಭಾರತ ಎಂಬಂತೆ ಚಿತ್ರಿಸುತ್ತಿದ್ದಾರೆ, ಭಾರತವು ಮತ್ತೆ ಮಧ್ಯಯುಗಕ್ಕೆ ಮರಳುತ್ತಿದೆ ಎಂಬಂತಹ ಭಾವನೆ ಮೂಡಿಸುತ್ತಿ
ದ್ದಾರೆ. ಇದೇ ವೇಳೆ ಮೋದಿ ಅವರ ನೇತೃತ್ವದ
ಸರ್ಕಾರದಲ್ಲಿನ ಆಡಳಿತಗಾರರು ಹಾಗೂ ನೀತಿ ನಿರೂಪ ಕರು ಪ್ರತಿಗಾಮಿ ಶಕ್ತಿಗಳ ಕಾರಣದಿಂದಾಗಿ ಪಾರ್ಶ್ವವಾಯುವಿಗೆ ತುತ್ತಾದವರಂತೆ ಆಗಿದ್ದಾರೆ. ಅವರಿಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶಗಳ ಸಾಲಿಗೆ ಸೇರಿಸಲು ಅಗತ್ಯವಿರುವ ವೈಜ್ಞಾನಿಕ ಪ್ರಗತಿಗೆ ಒತ್ತು ನೀಡಲು ಅಥವಾ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಆಗುತ್ತಿಲ್ಲ. ಭಾರತವು ಇದುವರೆಗೆ ಒಂದು ಮುಂಚೂಣಿಗೆ ಬರುತ್ತಿದ್ದ ಶಕ್ತಿಯಂತೆ ಕಾಣಿಸುತ್ತಿತ್ತು. ಆದರೆ, ವಿಕೋಪದ ಈ ಹೊತ್ತಿನಲ್ಲಿ ದೇಶವು ನಕಲಿ ವಿಜ್ಞಾನದ ಸಾಗರದಲ್ಲಿ ದಿಕ್ಕೆಟ್ಟು ಚಲಿಸುತ್ತಿರುವ, ತೂತು ಬಿದ್ದ ನೌಕೆಯಂತೆ ಆಗಿದೆ.

ಬದುಕಿನ ಅರ್ಥವನ್ನು ಶೋಧಿಸುವ ಕೆಲಸವನ್ನು ಭಾರತದ ನಾಗರಿಕತೆ ಮಾಡಿದೆ. ಆಧುನಿಕ ವಿಜ್ಞಾನವು ಭಾರತೀಯ ಚಿಂತನೆಗಳಿಗೆ ವಿರುದ್ಧವಾದುದಲ್ಲ. ಪ್ರಶ್ನೆ ಮಾಡುವ ಮನೋಭಾವ, ಹೊಸ ಆಲೋಚನೆಗಳನ್ನು ಸ್ವೀಕರಿಸುವುದು, ಹೊಸ ಜ್ಞಾನ ಸಂಪಾದನೆಯ ಮೂಲಕ ವಿಕಾಸ ಹೊಂದುತ್ತ ಸಾಗುವುದು ಉಪನಿಷತ್ತುಗಳ ಕಾಲದಿಂದಲೂ ಭಾರತೀಯರ ಬದುಕಿನ ಮೂಲದ್ರವ್ಯ. ಮೋದಿ ಅವರು ಸಮಯ ವ್ಯರ್ಥ ಮಾಡದೆಯೇ ದೇಶವನ್ನು ವಿಜ್ಞಾನದ ಪಥದಲ್ಲಿ ಮುಂದಕ್ಕೆ ಒಯ್ಯಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT