ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ನದಿಗಳಿಗೂ ತಟ್ಟಲಿದೆ ಬಿಸಿ

ನದಿಗಳ ಬಗೆಗೆ ವಿಜ್ಞಾನಿಗಳು ನುಡಿದಿರುವ ಭವಿಷ್ಯ ನಮಗೊಂದು ಎಚ್ಚರಿಕೆಯ ಗಂಟೆ
Last Updated 3 ಜುಲೈ 2022, 22:30 IST
ಅಕ್ಷರ ಗಾತ್ರ

‘ಒಲೆ ಹತ್ತಿ ಉರಿದೊಡೆ ನಿಲಬಹುದಲ್ಲದೆ, ಧರೆ ಹತ್ತಿ ಉರಿದೊಡೆ ನಿಲಲುಬಾರದು’ ಎಂಬುದು ಬಸವಣ್ಣನವರ ಒಂದು ವಚನದ ಪ್ರಸಿದ್ಧ ಸಾಲು. ಸದ್ಯದ ಸ್ಥಿತಿಯಲ್ಲಿ ವಿಜ್ಞಾನಿಗಳು ಇನ್ನೊಂದು ರೀತಿಯಲ್ಲಿ ಅದನ್ನೇ ಪುನರುಚ್ಚರಿಸುತ್ತಿದ್ದಾರೆ. ಭೂಮಿ ಸುಡುತ್ತಿದೆ, ಸಮುದ್ರವೂ ಬಿಸಿಯಾಗುತ್ತಿದೆ. ಇವೆರಡರ ಫಲವನ್ನು ನಾವು ಈಗಾಗಲೇ ಪ್ರತ್ಯಕ್ಷವಾಗಿ ಅನುಭವಿಸುತ್ತಿದ್ದೇವೆ. ಹೆಚ್ಚುತ್ತಿರುವ ಚಂಡಮಾರುತ, ಅತಿವೃಷ್ಟಿ, ಅನಾವೃಷ್ಟಿ, ಬರ, ಪ್ರವಾಹ ಇವೆಲ್ಲ ಹವಾಗುಣ ಬದಲಾವಣೆಯ ಪ್ರತ್ಯಕ್ಷ ಸಾಕ್ಷಿಗಳು.

ಹವಾಗುಣ ಬದಲಾವಣೆಯ ಸಂಗತಿಯನ್ನು ಭೂತಾಪ ಏರಿಕೆ ವಿಷಯದ ಜೊತೆ ಜೋಡಿಸುತ್ತಲೇ ಬಂದಿದ್ದೇವೆ. ಈಗ ಪರಿಸರದ ಬಗೆಗಿನ ಕಾಳಜಿ ಜಗತ್ತಿನಾ ದ್ಯಂತ ಮೆರವಣಿಗೆ, ಮತಪ್ರದರ್ಶನದಂತಹ ರೂಪಗಳಲ್ಲಿ ಹೊರಬೀಳುತ್ತಿದೆ; ಮಾತೂ ಕಾವೇರುತ್ತಿದೆ. ನೆಲ, ಜಲ ಬಿಸಿಯಾದರೆ ಹರಿಯುವ ನದಿಗಳನ್ನೂ ಇದು ಬಾಧಿಸಲೇಬೇಕಲ್ಲ. ಏಕೆಂದರೆ ನದಿಗಳು ಜಲಚಕ್ರದ ಭಾಗ.

ನದಿಗಳ ಪ್ರಸ್ತಾಪ ಬಂದಾಗಲೆಲ್ಲ ನಾವು ಒಂದೇ ಅಳತೆಗೋಲನ್ನು ಬಳಸಿ ನದಿಮಾಲಿನ್ಯದ ಬಗ್ಗೆ ದಶಕಗಳಿಂದ ಮಾತನಾಡುತ್ತಿದ್ದೇವೆ. ಅದು ಸಹಜವೂ ಹೌದು. ಏಕೆಂದರೆ ನದಿಮಾಲಿನ್ಯ ನೇರವಾಗಿ ಕಣ್ಣಿಗೆ ಕಾಣುತ್ತದೆ, ಅದು ಮಾನವಕೃತ. ಭಾರತದ ಸಂದರ್ಭದಲ್ಲಿ ನದಿಮಾಲಿನ್ಯದಲ್ಲಿ ಎಲ್ಲ ರಾಜ್ಯಗಳ ಪಾಲೂ ಉಂಟು. ಭಾರತದ 351 ಪ್ರಮುಖ ನದಿಗಳಲ್ಲಿನ ಮಾಲಿನ್ಯವು ಪರಾಕಾಷ್ಠೆ ಮುಟ್ಟಿದೆ. ಅದರಲ್ಲಿ ಮಹಾರಾಷ್ಟ್ರಕ್ಕೇ ಮೊದಲ ಸ್ಥಾನ. 53 ನದಿಗಳನ್ನು ಮಲಿನಗೊಳಿಸಲು ಆ ರಾಜ್ಯ ಗುತ್ತಿಗೆ ತೆಗೆದುಕೊಂಡಂತಿದೆ. ನಮ್ಮಲ್ಲಿ ಅತ್ತ ಮಲಪ್ರಭಾ ನದಿಯಿಂದ ಹಿಡಿದು ಇತ್ತ ಕಾವೇರಿ ನದಿಯವರೆಗೆ ಯಾವುದೂ ಶುದ್ಧ ಎನ್ನುವಂತಿಲ್ಲ. ನದಿಗಳ ಆರೋಗ್ಯ ತಪಾಸಣೆ ಮಾಡಿದ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು 2018ರಲ್ಲಿ ವರದಿ ಕೊಟ್ಟಿತ್ತು. ಸ್ಥಿತಿಯಲ್ಲಿ ಈಗಲೂ ಹೆಚ್ಚೇನೂ ಬದಲಾವಣೆ ಆದಂತಿಲ್ಲ.

ಈಗ ನದಿಗಳಿಗೂ ‘ಬಿಸಿ’ ಕಂಟಕ ಎದುರಾಗಿದೆ. ವಿಜ್ಞಾನಿಗಳು ಅವುಗಳ ಭವಿಷ್ಯವನ್ನೂ ನುಡಿದಿದ್ದಾರೆ. ಇದನ್ನು ಬೇಕಾದರೆ ನಿಜವಾದ ‘ಕಾಲಜ್ಞಾನ’ ಎನ್ನಿ. ಇದೇನೂ ಅಳ್ಳೆದೆಯವರನ್ನು ನಡುಗಿಸಲು ಹೆಣೆದ ತಂತ್ರವಲ್ಲ, ವೈಜ್ಞಾನಿಕ ಅಧ್ಯಯನದ ತಳಹದಿಯ ಮೇಲೆ ನಮ್ಮ ಮುಂದಿಟ್ಟಿರುವ ಮಾಹಿತಿ, ಎಚ್ಚರಿಕೆಯ ಗಂಟೆ. ಹರಿಯುವ ಜುಳು ಜುಳು ನದಿ ನೀರಲ್ಲಿ ಕಾಲಿಟ್ಟು ಅಲುಗಿಸುತ್ತ ಮನವನ್ನು ಮುದಗೊಳಿಸಲು ಇನ್ನು ಮುಂದೆ ಸಾಧ್ಯವೇ? ಬಹುಶಃ ನೀವು ಕನಸು ಕಾಣುತ್ತಿದ್ದೀರಿ ಎನ್ನುತ್ತದೆ ‘ಸೈನ್ಸ್‌ ರಿಪೋರ್ಟ್ಸ್’ನಲ್ಲಿ ಪ್ರಕಟವಾಗಿರುವ ಇತ್ತೀಚಿನ ವರದಿ. ವಿಶೇಷವೆಂದರೆ, ಭಾರತದ ನದಿಗಳನ್ನೇ ಅಧ್ಯಯನಕ್ಕೆ ಒಳಪಡಿಸಿ, ‘ನಿಮ್ಮ ನಿಮ್ಮ ನದಿಗಳ ಆರೋಗ್ಯವನ್ನು ವಿಚಾರಿಸಿ’ ಎಂದು ಉಳಿದ ದೇಶಗಳಿಗೆ ಕಿವಿಮಾತು ಹೇಳಿದಂತಿದೆ. ಭವಿಷ್ಯದಲ್ಲಿ ಕುಡಿಯುವ ನೀರಿಗೆ ತತ್ವಾರ ಯಾವುದರಿಂದ ಆಗಬಹುದು ಎಂಬುದರ ಬೆನ್ನುಹತ್ತಿ ಹೊರಟ ವಿಜ್ಞಾನಿಗಳಿಗೆ, ಈಗಿನ ನದಿಗಳಲ್ಲಿ ನೀರು ಮೊದಲಿಗಿಂತ ಹೆಚ್ಚು ಬಿಸಿಯಾಗುತ್ತಿರುವುದು ಕೂಡ ಇದಕ್ಕೆ ಒಂದು ಕಾರಣವಾಗಬಹುದು ಎಂಬ ಅಂಶ ಗಮನಕ್ಕೆ ಬಂದಿತು.ಬಿಸಿ ಹೆಚ್ಚಿದರೆ ನೀರಿನಲ್ಲಿ ವಿಲೀನವಾಗುವ ಆಕ್ಸಿಜನ್‌ ಪ್ರಮಾಣ ಗಣನೀಯವಾಗಿ ಕುಗ್ಗುತ್ತದೆ. ಸಾಮಾನ್ಯವಾಗಿ ಹರಿಯುವ ನೀರಿನಲ್ಲಿ ಆಕ್ಸಿಜನ್‌ ಹೆಚ್ಚು ವಿಲೀನವಾಗುವ ಅವಕಾಶವಿರುತ್ತದೆ. ನಿಂತ ನೀರಿನಲ್ಲಿ ಇದರ ಪ್ರಮಾಣ ಕಡಿಮೆ.

ಅಮೆರಿಕದ ನಾಸಾ ಸಂಸ್ಥೆಯ ಉಪಗ್ರಹಗಳು ಬಿಂಬಿಸಿರುವ ನದಿ ಕಣಿವೆಗಳ ಉಷ್ಣತೆಯ ಸ್ಥಿತಿಗತಿಯನ್ನು ಆಧಾರವಾಗಿ ಇಟ್ಟುಕೊಂಡು ಭಾರತೀಯ ವಿಜ್ಞಾನಿಗಳು ನಮ್ಮ ತುಂಗಭದ್ರಾ, ಸಾಬರಮತಿ, ಮೂಸಿ, ಗಂಗಾ ಮತ್ತು ನರ್ಮದಾ ನದಿ ನೀರಿನ ಉಷ್ಣತೆ ಯಾವ ಪ್ರಮಾಣದಲ್ಲಿ ಏರಬಹುದು ಎಂಬುದನ್ನು ಲೆಕ್ಕ ಹಾಕಿದ್ದಾರೆ. ಈಗಿರುವುದಕ್ಕಿಂತ ಕನಿಷ್ಠ 3.1 ಡಿಗ್ರಿ ಸೆಲ್ಸಿಯಸ್‌ನಿಂದ 7.8 ಡಿಗ್ರಿ ಸೆಲ್ಸಿಯಸ್‌ಗೆ ಏರಬಹುದು. ಆದರೆ ಇದು ದಿಢೀರ್‌ ಆಗುವ ಬದಲಾವಣೆ ಅಲ್ಲ. 2071ರಿಂದ 2100ರ ಕಾಲಘಟ್ಟದಲ್ಲಿ ಎದುರಿಸಬೇಕಾದ ಪರಿಸ್ಥಿತಿ. ಅಂದರೆ ಆಗ ನರ್ಮದಾ ನದಿಯು ಬೇಸಿಗೆಯಲ್ಲಿ 35 ಡಿಗ್ರಿ ಸೆ.ನಷ್ಟು ಉಷ್ಣತೆಯಲ್ಲಿ ಹರಿಯುತ್ತಿರುತ್ತದೆ. ಅಂದರೆ ನೀರಿನಲ್ಲಿ ಆಕ್ಸಿಜನ್‌ ವಿಲೀನವಾಗುವ ಸಾಮರ್ಥ್ಯ ಶೇ 2ರಿಂದ 12ರಷ್ಟು ಕಡಿತ. ಬಿಸಿನೀರಿಗೆ ಹೆಚ್ಚು ಆಕ್ಸಿಜನ್‌ ಹಿಡಿದಿಡುವ ಗುಣವಿರುವುದಿಲ್ಲ.

ತ್ಯಾಜ್ಯದಿಂದ ನದಿಗಳ ಆರೋಗ್ಯ ಕೆಡುತ್ತಿದ್ದರೆ, ಅದನ್ನು ನಿಯಂತ್ರಿಸುವ ಮೂಲಕ ನದಿಗಳ ಆರೋಗ್ಯ ಕಾಪಾಡಿಕೊಳ್ಳಬಹುದು. ಅದು ನಮ್ಮ ಕೈಯಲ್ಲೇ ಇದೆ. ಆದರೆ, ಈ ಸಂಬಂಧ ಕಾನೂನನ್ನು ಬಿಗಿಗೊಳಿಸಬೇಕು ಅಷ್ಟೆ.ಆದರೆ ನಿಸರ್ಗದ ಸಹಜ ಕ್ರಿಯೆಯಾದ ನೀರಿನಲ್ಲಿ ಆಕ್ಸಿಜನ್‌ ವಿಲೀನ ಮಾಡುವುದು ಕಾನೂನು ರೀತ್ಯ ಸಾ‍ಧ್ಯವಾಗದು. ಮುಂದೆ ‘ಗಂಗಾಸ್ನಾನ ತುಂಗಾಪಾನ’ ಎಂಬುದು ಓಬಿರಾಯನ ಕಾಲದ ನುಡಿಗಟ್ಟು ಎನಿಸಬಹುದು. ಭಾರತದಲ್ಲಿ ಸಮಸ್ಯೆ ಇನ್ನೂ ಗಂಭೀರ ಸ್ವರೂಪದ್ದು. ಹೆಚ್ಚಿನ ಪಾಲು ಉಷ್ಣವಲಯದ ನದಿಗಳೇ ಆದ್ದರಿಂದ ಬೇರೆ ಖಂಡಗಳಿಗಿಂತ ಇಲ್ಲಿ ವಿಶೇಷವಾಗಿ ಬೇಸಿಗೆಯಲ್ಲಿ ಸೌರವಿಕಿರಣದ ತೀವ್ರತೆಯು ಜಲಮೂಲಗಳಿಗೆ ತೀವ್ರವಾಗಿಯೇ ತಟ್ಟುತ್ತದೆ. ಅಲ್ಲದೆ ನೀರಿನ ಪ್ರಮಾಣದ ಹರಿವು ಕೂಡ ಗಣನೀಯವಾಗಿ ತಗ್ಗಿರುತ್ತದೆ.

ನದಿ ನೀರಿನಲ್ಲಿ ವಿಲೀನವಾದ ಆಕ್ಸಿಜನ್‌ ಪ್ರಮಾಣ ಕಡಿಮೆಯಾದರೆ ಅದರ ಪರಿಣಾಮ ಇಡೀ ನದಿಯಲ್ಲಿನ ಜಲಚರಗಳ ಮೇಲಾಗುತ್ತದೆ. ಅದರಲ್ಲೂ ಮೀನುಗಳು ಕಡಿಮೆ ಆಕ್ಸಿಜನ್‌ ಇರುವ ನೀರಿನಲ್ಲಿ ಬದುಕುವುದೇ ಇಲ್ಲ. ನೀರಿನಲ್ಲಿ ಆಕ್ಸಿಜನ್‌ ಪ್ರಮಾಣ ಹೆಚ್ಚಾದರೂ ಕಷ್ಟ, ಕಡಿಮೆಯಾದರೂ ಕಷ್ಟ. ಅತಿಯಾದ ಪಾಚಿ ಕೊಳೆತಾಗ ಇಲ್ಲವೇ ಸೂಕ್ಷ್ಮಜೀವಿಗಳ ವಿಘಟನೆ ದೊಡ್ಡ ಪ್ರಮಾಣದಲ್ಲಿ ಆದಾಗ, ಇದ್ದಬದ್ದ ಆಕ್ಸಿಜನ್‌ ಪ್ರಮಾಣವೆಲ್ಲ ಕಡಿತವಾಗಿಬಿಡುತ್ತದೆ.

ನದಿಗಳೂ ಜೀವಿಗಳೇ, ಅವಕ್ಕೂ ಬದುಕುವ ಹಕ್ಕಿದೆ. ಅವುಗಳ ಪಾಡಿಗೆ ಅವುಗಳನ್ನು ಬಿಡಬೇಕು ಅಷ್ಟೆ. ನದಿ ಪರಿಸರವನ್ನು ಆಶ್ರಯಿಸಿದ ಜೀವಿವೈವಿಧ್ಯಕ್ಕೂ ಆವಾಸ ಗಾಸಿಯಾಗದಂತೆ ನೋಡಿಕೊಳ್ಳಬೇಕು ಎಂಬುದನ್ನು ಅಮೆರಿಕ ಮತ್ತು ಯೂರೋಪು ರಾಷ್ಟ್ರಗಳು ಇತ್ತೀಚೆಗೆ ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿದೆ. ಅಣೆಕಟ್ಟು ಗಳನ್ನು ಒಡೆಯುವುದು ಕೂಡ ಅಭಿವೃದ್ಧಿಯ ಒಂದು ಭಾಗ ಎಂದು ಭಾವಿಸಿದಂತಿದೆ. ಹಾಗೆ ನೋಡಿದರೆ ಜಗತ್ತಿನ ಯಾವ ಪ್ರಮುಖ ನದಿಯೂ ಅದು ಹುಟ್ಟಿದ ಜಾಗದಿಂದ ಸಲೀಸಾಗಿ ಹರಿದು ಸಾಗರ ಸೇರಿದ ಉದಾಹರಣೆ ಇಲ್ಲ.

ಮನುಷ್ಯನ ನಾಗರಿಕತೆ ಪ್ರಾರಂಭವಾದದ್ದೇ ನದಿ ತಟಗಳಲ್ಲಿ. ಜಲಮೂಲವಾಗಿ, ಕೃಷಿಮೂಲವಾಗಿ, ಸಾರಿಗೆಗೆ ಒದಗಿಬಂದು ಜಲಚರಗಳ ಸಂಪನ್ಮೂಲವಲ್ಲದೆ ನಮ್ಮೆಲ್ಲರ ಮಾಲಿನ್ಯದ ಗುಡ್ಡೆಗಳನ್ನು ಒಯ್ಯುವ ಗುತ್ತಿಗೆದಾರನಾಗಿ ನದಿಗಳು ವರ್ತಿಸುತ್ತಿವೆ. ಆದರೆ ಈಗ ಅಭಿವೃದ್ಧಿಗೇ ಒತ್ತುಕೊಟ್ಟು ಅಣೆಕಟ್ಟುಗಳನ್ನು ಕಟ್ಟಿರುವಾಗ, ಅವುಗಳನ್ನು ಒಡೆಯುವ ಪ್ರಯತ್ನ ಎಂದರೆ ವಿರೋಧಾಭಾಸವಲ್ಲವೇ ಎನ್ನುವ ಪ್ರಶ್ನೆ ಏಳಬಹುದು. ಸಣ್ಣ ಸಣ್ಣ ಅಣೆಕಟ್ಟುಗಳು ಬಹುಬೇಗ ಹೂಳುತುಂಬಿ ಕಟ್ಟೆ ಒಡೆದು ಪ್ರವಾಹ ಸ್ಥಿತಿ ಸೃಷ್ಟಿಸುತ್ತಿರುವ ನಿದರ್ಶನಗಳು ಅಮೆರಿಕದಲ್ಲೇ ಹೆಚ್ಚಾಗಿ ಕಾಣುತ್ತಿವೆ.

ಅಮೆರಿಕ ಮತ್ತು ಕೆನಡಾದ ಗಡಿಭಾಗದಲ್ಲಿ ಹರಿಯುವ ಎಲ್ವಾ ನದಿಗೆ ಎರಡು ಕಡೆ ಕಟ್ಟಿದ್ದ 32 ಮೀಟರ್‌ ಮತ್ತು 64 ಮೀಟರ್‌ ಎತ್ತರದ ದೊಡ್ಡ ಅಣೆಕಟ್ಟುಗಳನ್ನು 2011 ಮತ್ತು 2014ರ ನಡುವೆ ಒಡೆದುಹಾಕಲು ಸರ್ಕಾರವೇ ಮುಂದಾಗಬೇಕಾಯಿತು. ನದಿಯ ಕೆಳ ಹರಿವಿನಲ್ಲಿ ಪರಿಸರಕ್ಕೊದಗಿದ ಧಕ್ಕೆ ಮತ್ತು ಬುಡಕಟ್ಟು ಸಮುದಾಯಕ್ಕೆ, ಮೀನುಗಾರಿಕೆಗೆ ಕುತ್ತು ಒದಗಿದ್ದು ಇದಕ್ಕೆ ಪ್ರಮುಖ ಕಾರಣ. ಸುರಕ್ಷತೆಯ ದೃಷ್ಟಿಯಿಂದ ಮತ್ತು ಮೂಲ ಪರಿಸರ ಉಳಿಸಿಕೊಳ್ಳುವ ಸಲುವಾಗಿ 2050ರ ಹೊತ್ತಿಗೆ ಸುಮಾರು 10,000 ಅಣೆಕಟ್ಟುಗಳನ್ನು ಒಡೆಯುವ ಯೋಜನೆಯನ್ನು ಅಮೆರಿಕ ಹಾಕಿಕೊಂಡಿದೆ. ಹಾಗೆಂದು ಎಲ್ಲ ದೇಶಗಳೂ ಹೀಗೆಯೇ ಒಡೆಯುತ್ತಾ ಹೋದರೆ ಕೃಷಿ ಮತ್ತು ಆ ಮೂಲದ ಆರ್ಥಿಕತೆ ಏನಾಗಬೇಕು? ಇದನ್ನು ಆಯಾ ದೇಶಗಳು ಯೋಚಿಸಿಯೇ ತೀರ್ಮಾನ ತೆಗೆದುಕೊಳ್ಳಬೇಕು.

– ಟಿ.ಆರ್.‌ಅನಂತರಾಮು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT