ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ಕಡಲಕೊರೆತ: ನಮ್ಮ ಪಾಲೆಷ್ಟು?

ನಿಧಾನಗತಿಯಲ್ಲಾಗುವ ಕಡಲಕೊರೆತದ ನಿರ್ವಹಣೆಗೆ ಪ್ರಾಶಸ್ತ್ಯ ಸಿಗುವುದೂ ನಿಧಾನವಾಗುತ್ತಿದೆ
Last Updated 2 ಮೇ 2022, 19:31 IST
ಅಕ್ಷರ ಗಾತ್ರ

ನೈಸರ್ಗಿಕ ವಿಕೋಪ ಎಂದೊಡನೆ ಥಟ್ಟನೆ ಕಣ್ಣಮುಂದೆ ಬರುವುದು ಅತಿವೃಷ್ಟಿ, ಅನಾವೃಷ್ಟಿ, ಬರ, ಪ್ರವಾಹ, ಚಂಡಮಾರುತ, ಭೂಕುಸಿತ, ಭೂಕಂಪ ಇತ್ಯಾದಿ. ಇವು ಇಡೀ ಭೂಮಿಯ ಎಲ್ಲ ಖಂಡಗಳನ್ನೂ ಪೀಡಿಸುತ್ತಿವೆ. ಕೆಲವಕ್ಕೆ ಹೊಡೆತ ಹೆಚ್ಚು, ಕೆಲವಕ್ಕೆ ಕಡಿಮೆ.

ಸಾಮಾನ್ಯವಾಗಿ ಈ ಪಟ್ಟಿಗೆ ಸೇರಿಸದ, ಆದರೆ ದೊಡ್ಡ ಸಮಸ್ಯೆಯಾಗಿಯೇ ತಲೆದೋರಿರುವ ಮತ್ತೊಂದು ವಿಕೋಪ ಕಡಲಕೊರೆತ. ಇದರ ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಗಳ ಮೌಲ್ಯಮಾಪನ ಹೆಚ್ಚು ನಡೆದಿಲ್ಲ. ಸಮುದ್ರ ತೀರದಲ್ಲಿರುವ ಎಲ್ಲ ಭೂಭಾಗಗಳೂ ಕೊರೆತ ಅನುಭವಿಸುತ್ತವೆ. ಆದರೆ ಪರಿಹಾರದ ಪ್ರಶ್ನೆ ಬಂದಾಗ ಕಡಲಕೊರೆತದಿಂದ ಭೂಮಿಯಷ್ಟೇ ನಷ್ಟವಾಗುತ್ತದೆ, ಜೀವಹಾನಿ ಕಡಿಮೆ ಎಂಬ ನಿಲುವನ್ನು ಇತರ ದೇಶಗಳಂತೆ ನಮ್ಮ ದೇಶವೂ ತಳೆದಿದೆ. ಹೀಗಾಗಿ ಪ್ರವಾಹಪೀಡಿತರಿಗೆ ಸಿಕ್ಕುವ ಪರಿಹಾರವು ಕಡಲಕೊರೆತದ ಪರಿಣಾಮ ಎದುರಿಸುವ ಸಮುದಾಯಕ್ಕೆ ಎಂದೂ ಸಿಕ್ಕುವುದಿಲ್ಲ. ಜೊತೆಗೆ ಇದು ಪ್ರವಾಹದಂತೆ ಥಟ್ಟನೆ ಕಾಣಿಸಿಕೊಳ್ಳುವ ವಿದ್ಯಮಾನವಲ್ಲ, ಬಲು ನಿಧಾನಗತಿಯದು.

ಕಡಲಕೊರೆತ ಅನುಭವಿಸುತ್ತಿರುವ ದೇಶಗಳಲ್ಲಿ ಭಾರತವೂ ಸೇರಿದೆ. ಭೌಗೋಳಿಕವಾಗಿ ತ್ರಿಕೋನಾ ಕಾರದಲ್ಲಿರುವ ಭಾರತದ ಪೂರ್ವ ಮತ್ತು ಪಶ್ಚಿಮ ಕರಾವಳಿಯ ಒಟ್ಟು ಉದ್ದ 6,907 ಕಿಲೊಮೀಟರು. ಎರಡೂ ತೀರಗಳು ಕೊರೆತಕ್ಕೆ ಒಡ್ಡಿಕೊಂಡಿದ್ದರೂ ಪೂರ್ವ ಕರಾವಳಿಯಲ್ಲಿ ಇದರ ದಾಂದಲೆ ಹೆಚ್ಚು. ಏಕೆಂದರೆ ಭಾರತದ ಮಟ್ಟಿಗೆ ಸುನಾಮಿ ಮತ್ತು ಚಂಡಮಾರುತಗಳು ಹೆಚ್ಚು ಏಳುವುದು ಬಂಗಾಳಕೊಲ್ಲಿಯಲ್ಲಿ. ವರ್ಷಕ್ಕೆ ಕನಿಷ್ಠ ನಾಲ್ಕು ಚಂಡಮಾರುತಗಳನ್ನು ಈ ಭಾಗ ಎದುರಿಸುತ್ತಿದೆ. ಇದೊಂದು ಗಂಭೀರ ಸಮಸ್ಯೆ ಎಂಬುದು ಸಂಶೋಧನಾ ಸಂಸ್ಥೆಗಳಿಗೂ ಗೊತ್ತು, ಸರ್ಕಾರಕ್ಕೂ ಗೊತ್ತು.

ಭೂವಿಜ್ಞಾನ ಸಚಿವಾಲಯದಡಿ ಕೆಲಸ ಮಾಡುವ ರಾಷ್ಟ್ರೀಯ ಕಡಲ ಸಂಶೋಧನಾ ಕೇಂದ್ರ ನಾಲ್ಕು ವರ್ಷಗಳ ಹಿಂದೆ ಮಾಡಿದ ಸಂಶೋಧನೆ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಸರ್ಕಾರ ಕೂಡ ಇದರತ್ತ ಗಮನ ಹರಿಸುವಂತೆ ಮಾಡಿದ್ದು ಇತ್ತೀಚೆಗಷ್ಟೇ ಲೋಕಸಭೆಯಲ್ಲಿ ಎತ್ತಿದ ಒಂದು ಪ್ರಶ್ನೆ: ‘ಕಡಲ ಕೊರೆತಕ್ಕೆ ಸರ್ಕಾರ ಕೊಡುತ್ತಿರುವ ಪರಿಹಾರ ಏನು?’

ರಾಷ್ಟ್ರೀಯ ಕಡಲ ಸಂಶೋಧನಾ ಕೇಂದ್ರವು ಉಪಗ್ರಹಗಳು ತೆಗೆದ ಛಾಯಾಚಿತ್ರಗಳು ಹಾಗೂ ಭೌಗೋಳಿಕ ಮಾಹಿತಿ ವ್ಯವಸ್ಥೆಯನ್ನು ಬಳಸಿಕೊಂಡು 1990ರಿಂದಲೂ ಕಡಲಕೊರೆತದ ಬಗ್ಗೆ ಗಾಢ ಸಂಶೋಧನೆ ಮಾಡುತ್ತಿದೆ. ಭಾರತದ ಕಡಲತೀರದ ಶೇ 34ರಷ್ಟು ಭಾಗ ಕೊರೆತದ ಬೇರೆ ಬೇರೆ ತೀವ್ರತೆಯನ್ನು ಅನುಭವಿಸುತ್ತಿದೆ. 1990- 2016ರ ನಡುವೆ ಭಾರತದ ಸುಮಾರು 235 ಚದರ ಕಿಲೊಮೀಟರ್‌ ಭೂಭಾಗವನ್ನು ಅಲೆಗಳು ಕೊಚ್ಚಿಹಾಕಿವೆ. ಅಂದರೆ ಭೋಪಾಲ್‌ ನಗರದ ಅರ್ಧದಷ್ಟು. ಕಾರವಾರ, ಪುದುಚೇರಿ ಸುತ್ತ ಅಲೆಗಳು ಕಡಲ ತೀರವನ್ನು ಕೊಚ್ಚಿ ಹಾಕುತ್ತಿರುವುದನ್ನು ಉಪಗ್ರಹಗಳು ತೋರಿಸಿಕೊಟ್ಟಿವೆ. ಅದರಲ್ಲೂ ಪಶ್ಚಿಮ ಬಂಗಾಳದ ಸುಮಾರು 534 ಕಿಲೊಮೀಟರ್‌ ಉದ್ದದ ಕಡಲಿನಲ್ಲಿ 320 ಮೀಟರ್‌ ತೀರವು ಕಡಲ ಅಲೆಗಳ ಗುದ್ದಾಟದಿಂದ ಸಾಗರದ ಪಾಲಾಗಿದೆ.

ಸುಮಾರು 320 ಕಿಲೊಮೀಟರ್‌ ಉದ್ದವಿರುವ ಕರ್ನಾಟಕದ ಕಡಲ ತೀರವು ಕೊರೆತದಿಂದ ಮುಕ್ತವಾಗಿಲ್ಲ. ಮಂಗಳೂರು ವಿಶ್ವವಿದ್ಯಾಲಯದ ಸಾಗರ ಭೂವಿಜ್ಞಾನ ವಿಭಾಗ ಮತ್ತು ಗೋವಾ ರಾಷ್ಟ್ರೀಯ ಸಾಗರಾಧ್ಯಯನ ಸಂಸ್ಥೆ ಮಾಡಿದ ಸಮೀಕ್ಷೆಯಿಂದ, ಉತ್ತರ ಕನ್ನಡ ಜಿಲ್ಲೆಯ ಭಾವಿಕೇರಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಉಲ್ಲಾಳವು ಕಡಲಕೊರೆತದಿಂದ ಪ್ರತಿವರ್ಷ ಸುಮಾರು ಒಂದೂವರೆ ಮೀಟರು ತೀರವನ್ನು ಶಾಶ್ವತವಾಗಿ ಕಳೆದುಕೊಳ್ಳುತ್ತಿವೆ ಎಂಬುದು ದೃಢಪಟ್ಟಿದೆ. ಅದರಲ್ಲೂ ಉಲ್ಲಾಳದಲ್ಲಿ ಊರೇ ಅಪಾಯಕ್ಕೆ ಸಿಲುಕಿತ್ತು. ಅಲೆ ತಡೆಯಲು 2.50 ಮೀಟರ್‌ ಸಮುದ್ರ ಗೋಡೆ ಏಳಿಸಿದ ಮೇಲೆ ಕೊರೆತಕ್ಕೆ ತಾತ್ಕಾಲಿಕ ತಡೆಯಾಗಿದೆ. ಆದರೆ ಸಾಗರದ ಅಲೆಗಳಿಗೆ ಇದನ್ನೂ ಹೈಜಂಪ್‌ ಮಾಡುವ ಕಲೆ ಗೊತ್ತು. ವಿಶ್ವಸಂಸ್ಥೆಯ ಹವಾಗುಣ ಬದಲಾವಣೆ ಕುರಿತ ಇಂಟರ್‌ಗವರ್ನಮೆಂಟಲ್‌ ಪ್ಯಾನಲ್‌ (ಐಪಿಸಿಸಿ) ಅದನ್ನೇ ಪುನರುಚ್ಚರಿಸಿದೆ. ಅಲೆಗಳ ವಿರುದ್ಧ ಕಟ್ಟುವ ಯಾವುದೇ ಗೋಡೆಯು ರಕ್ಷಣೆಯ ಹುಸಿ ಭರವಸೆ ಕೊಡುತ್ತದೆ ಅಷ್ಟೇ, ಶಾಶ್ವತ ಪರಿಹಾರವನ್ನಲ್ಲ. ಏಕೆಂದರೆ ಭೂಉಷ್ಣತೆ ಏರುತ್ತಿರುವುದರಿಂದ ಸಾಗರ ಉಬ್ಬುತ್ತಿದೆ, ಅಲೆಗಳ ತೀವ್ರತೆ ಹೆಚ್ಚುತ್ತಿದೆ. ಇದರಲ್ಲಿ ನಿಸರ್ಗವನ್ನು ದೂಷಿಸುವುದು ಏನೂ ಇಲ್ಲ, ಇದೆಲ್ಲ ಮಾನವಕೃತ ಎಂದು ಸಾರಿದೆ.

ಮಂಗಳೂರಿನ ಹಳೆಯ ಬಂದರನ್ನು ನಿರ್ಮಿಸು ವಾಗಲೇ ಅಲೆಗಳು ಬಡಿಯದಂತೆ ಅಡ್ಡಡ್ಡವಾಗಿ ತಡೆ ಯನ್ನು ಎಬ್ಬಿಸಲಾಗಿತ್ತು. ಬಂದರೇನೋ ಉಳಿಯಿತು, ಆದರೆ ಅಲೆಗಳ ಅಬ್ಬರ ಉಲ್ಲಾಳ ಭಾಗದಲ್ಲಿ ಹೆಚ್ಚಾಯಿತು ಎನ್ನುವುದು ಸಮೀಕ್ಷೆಗಳು ತಿಳಿಸುವ ಅಂಶ. ಒಂದೆಡೆ ತೀರದ ಮರಳನ್ನು ದೋಚುವುದು, ಇನ್ನೊಂದೆಡೆ ನದಿಗೆ ಅಣೆಕಟ್ಟು ಕಟ್ಟಿ ಹರಿವನ್ನು ನಿಯಂತ್ರಿಸುವುದು ಅಲೆಗಳು ತೀರವನ್ನು ಕೊಚ್ಚಲು ಕಾರಣ ಎಂಬುದು ಸಾಬೀತಾಗಿ ರುವ ಸಂಗತಿ.

‘ಟೌಕ್‌ವೇ’ ಚಂಡಮಾರುತವು ಪಶ್ಚಿಮ ಕರಾವಳಿ ಯಲ್ಲಿ ಮಾಡಿದ ಕೊರೆತದಿಂದಾಗಿ ಸುಮಾರು ಒಂಬತ್ತು ಕಿಲೊಮೀಟರು ಉದ್ದದ ತೀರ ಗಾಸಿಯಾಯಿತು. ಆದ ನಷ್ಟ ₹ 90 ಕೋಟಿ ಎಂದು ಹೇಳಿದರೂ ಅದು ಕಡಿಮೆ ಅಂದಾಜು. ಅತ್ತ ಬಂಗಾಳ ಕೊಲ್ಲಿಯ ಸುಂದರಬನ್ ದ್ವೀಪವು ಕಾಂಡ್ಲಾ ವನಗಳಿಗೆ ಹೆಸರುವಾಸಿ. ಸಮುದ್ರ ಮಟ್ಟದಿಂದ ಕೇವಲ ಐದು ಮೀಟರ್‌ ಎತ್ತರವಿದೆ. ಬಂಗಾಳ ಹುಲಿಗಳಿಗೆ ಏಕೈಕ ಆವಾಸ. ಪಶ್ಚಿಮ ಬಂಗಾಳ- ಬಾಂಗ್ಲಾ ನಡುವೆ ಇದು ಹಂಚಿಕೆಯಾಗಿದೆ. ಕಳೆದ 20 ವರ್ಷಗಳಲ್ಲಿ ಚಂಡಮಾರುತದಿಂದಾಗಿ ಸುಮಾರು 137 ಚದರ ಮೀಟರ್‌ ವಿಸ್ತೀರ್ಣವನ್ನು ಕಳೆದುಕೊಂಡಿದೆ. ಇಲ್ಲಿ ಅಲೆಗಳದ್ದೇ ಅಬ್ಬರ. ಒಡಿಶಾದ ಗಂಜಾಂ ಜಿಲ್ಲೆಯ ತೀರದಲ್ಲಿ ಮೀನುಗಾರರ ವಸಾಹತುಗಳನ್ನು ಮೂಲ ನೆಲೆಯಿಂದ 300 ಮೀಟರ್‌ ಆಚೆಗೆ ವಿಸ್ತರಿಸಬೇಕಾಯಿತು. ಭಾರತದ ಕಡಲ ತೀರದ ಭಾಗಗಳಲ್ಲಿ 42 ಕೋಟಿ ಜನ ವಾಸಿಸುತ್ತಿದ್ದಾರೆ ಎಂಬುದನ್ನು ಮರೆಮಾಚಲಾಗದು.

ಟಿ.ಆರ್.‌ಅನಂತರಾಮು
ಟಿ.ಆರ್.‌ಅನಂತರಾಮು

ವಿಚಿತ್ರವೆಂದರೆ, ಕಡಲ ಕೊರೆತವನ್ನು ನೈಸರ್ಗಿಕ ವಿಕೋಪಗಳ ಪಟ್ಟಿಗೆ ಸೇರಿಸಿಲ್ಲ. ಹೀಗಾಗಿ ಪರಿಹಾರದ ಪ್ರಶ್ನೆ ಬಂದಾಗ, ಯಾವ ಮೂಲದಿಂದ ಕೊಡಬೇಕು ಎಂಬುದರ ಬಗ್ಗೆಯೂ ಸರ್ಕಾರ ನಿರ್ದಿಷ್ಟ ಸೂಚನೆ ಕೊಟ್ಟಿಲ್ಲ. ಭೂಪಾತವಾಗಿ ಜಮೀನನ್ನು ಕಳೆದುಕೊಂಡರೆ ಸರ್ಕಾರ ಎಕರೆಗೆ ₹ 37,500 ಪರಿಹಾರ ಕೊಡುತ್ತದೆ. ಇನ್ನು ನೈಸರ್ಗಿಕ ವಿಕೋಪಗಳಿಗೆ ಬಲಿಯಾದ ಜನರಿಗೆ ಅದಕ್ಕೆಂದೇ ಸ್ಥಾಪಿಸಿರುವ ನಿಧಿ ಇದೆ, ಕೊಡಲು ಅಡ್ಡಿಯಿಲ್ಲ. ಹಾಗೆಂದು ಕಡಲಕೊರೆತದ ಬಗ್ಗೆ ಸರ್ಕಾರ ನಿಗಾ ಇಟ್ಟಿಲ್ಲವೆಂದಲ್ಲ. ಪರಿಸರ ಸಚಿವಾಲಯದಡಿ ಸುಸ್ಥಿರ ಕಡಲ ತೀರದ ನಿರ್ವಹಣಾ ಕೇಂದ್ರವಿದೆ. ಹಾಗೆಯೇ ಜಲಶಕ್ತಿ ಸಚಿವಾಲಯದಡಿ ಕೇಂದ್ರೀಯ ಜಲ ನಿಗಮವಿದೆ. ಇವು ಕಡಲ ತೀರದ ಕೊರೆತ, ಜಲದ ಗುಣಮಟ್ಟ ಮುಂತಾದವುಗಳ ಕುರಿತು ವರದಿ ನೀಡುತ್ತವೆ. ಕಡಲ ತೀರದ ಅಭಿವೃದ್ಧಿಯನ್ನು ನೋಡಿಕೊಳ್ಳಲು ನಿರ್ವಹಣಾ ಕಾನೂನೇ ಇದೆ. ಇಷ್ಟಿದ್ದರೂ ಕಡಲಕೊರೆತದ ಸಮಸ್ಯೆಗೆ ಸಿಕ್ಕಬೇಕಾದ ಪ್ರಾಶಸ್ತ್ಯ ಸಿಕ್ಕಿಲ್ಲ.

ಹದಿನೈದನೇ ಆರ್ಥಿಕ ಆಯೋಗ ಇದನ್ನು ಗಮನಿಸಿತ್ತು. ಹೀಗಾಗಿ ರಾಷ್ಟ್ರೀಯ ವಿಕೋಪ ನಿರ್ವಹಣಾ ನಿಧಿಯಲ್ಲಿ ಈ ಬಾಬತ್ತಿಗೆ ₹ 300 ಕೋಟಿ ತೆಗೆದಿಡಿ ಎಂದು ಸರ್ಕಾರಕ್ಕೆ ಆದೇಶಿಸಿದೆ. ಏಕೆಂದರೆ ಕೇಂದ್ರ ಸರ್ಕಾರದ ಅನುದಾನವನ್ನು ಆಧರಿಸಿ, ರಾಜ್ಯ ಸರ್ಕಾರದಲ್ಲೂ ಈ ನಿಧಿಯನ್ನು ಸ್ಥಾಪಿಸಲಾಗಿದೆ. ಆದರೆ ಇದು ಶಿಫಾರಸೇ ವಿನಾ ಇದಕ್ಕಾಗಿ ಕಾನೂನುಗಳನ್ನು ರೂಪಿಸಿಲ್ಲ.

ಬೇರೆ ವಿಕೋಪಗಳಂತೆ ಜನ, ಜಾನುವಾರು, ಆಸ್ತಿಪಾಸ್ತಿಯ ನಷ್ಟ ಒಡನೆಯೇ ಕಣ್ಣಿಗೆ ಕಾಣುವಂತಿದ್ದರೆ ಸರ್ಕಾರವೂ ತ್ವರಿತವಾಗಿ ಕಡಲಕೊರೆತದ ನಿರ್ವಹಣೆ ಕುರಿತು ಕಾಯ್ದೆ ರೂಪಿಸುತ್ತಿತ್ತೋ ಏನೋ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT