ಗುರುವಾರ , ಜನವರಿ 21, 2021
29 °C
ಚುನಾವಣಾ ಭ್ರಷ್ಟಾಚಾರ ತಡೆಗೆ ಬೇಕು ಪ್ರತ್ಯೇಕ ಕಠಿಣ ಕಾಯ್ದೆ

ಬರಗೂರು ರಾಮಚಂದ್ರಪ್ಪ ಲೇಖನ: ಲಜ್ಜೆಬಿಟ್ಟು ಹೆಜ್ಜೆಯಿಟ್ಟ ಪಕ್ಷಾಂತರ ಪಿಡುಗು

ಬರಗೂರು ರಾಮಚಂದ್ರಪ್ಪ Updated:

ಅಕ್ಷರ ಗಾತ್ರ : | |

‘ಸಂವಿಧಾನ ಎಷ್ಟೇ ಒಳ್ಳೆಯದಾಗಿದ್ದರೂ ಅದನ್ನು ಪಾಲಿಸುವ ಜನ ಕೆಟ್ಟವರಾದರೆ ಸಂವಿಧಾನವು ಅಪ್ರಯೋಜಕವಾಗಿ ಬಿಡುತ್ತದೆ’ ಎಂದು ಡಾ. ಅಂಬೇಡ್ಕರ್ ಅವರು ಹೇಳಿದ್ದರು. ಅಲ್ಲದೆ ‘ಅನುಕೂಲಸಿಂಧು ರಾಜಕಾರಣ ನಡೆದರೆ ಪ್ರಜಾಪ್ರಭುತ್ವಕ್ಕೆ ಹಾನಿ ಕಟ್ಟಿಟ್ಟ ಬುತ್ತಿ’ ಎಂದು ಎಚ್ಚರಿಸಿದ್ದರು. ಗಾಂಧೀಜಿ ‘ಪ್ರಜಾಪ್ರಭುತ್ವದಲ್ಲಿ ನನಗೆ ಅಪಾರ ಪ್ರೀತಿ ಮತ್ತು ಮೆಚ್ಚುಗೆಯಿದೆ. ಆದರೆ ಅನೇಕರು ಸದಾ ಸರಿಯಾದ ನಿಲುವು ತಾಳುತ್ತಾರೆಂಬ ನಂಬಿಕೆ ನನಗಿಲ್ಲ’ ಎಂದದ್ದಲ್ಲದೆ, ‘ಪ್ರಜಾಸತ್ತೆಯಲ್ಲಿ ನಿಷ್ಠೆಯುಳ್ಳವರು ಪೂರ್ಣವಾಗಿ ನಿರಪೇಕ್ಷರಾಗಿರಬೇಕು’ ಎಂದು ಆಶಿಸಿದ್ದರು.

ನೆಹರೂ ಅವರು ‘ಪಟ್ಟಭದ್ರ ಹಿತಾಸಕ್ತಿ ಮತ್ತು ಮತ ಗಳಿಕೆಗಾಗಿ ಜನರನ್ನು ಸ್ವಾರ್ಥಕ್ಕಾಗಿ ಬಳಸಿದರೆ ಅದು ಖಂಡಿತವಾಗಿಯೂ ಧರ್ಮವೆನಿಸುವುದಿಲ್ಲ’ ಎಂದಿದ್ದರು. ನಮ್ಮ ದೇಶದಲ್ಲಿ ಆವರಿಸಿಕೊಂಡಿರುವ ಪಕ್ಷಾಂತರ ಪಿಡುಗಿನ ಸಂದರ್ಭದಲ್ಲಿ ಇವರ ಆತಂಕಗಳು ವಾಸ್ತವವಾಗುತ್ತವೆ. ನೈತಿಕ ಮೌಲ್ಯಗಳ ಜಾಗಕ್ಕೆ ‘ಆರ್ಥಿಕ’ ಮೌಲ್ಯ ಮತ್ತು ಅಧಿಕಾರ ಸ್ವಾರ್ಥ ಬಂದು ಪ್ರಜಾಪ್ರಭುತ್ವವನ್ನು ಅಣಕಿಸುತ್ತಿವೆ. ಅಬ್ಬರಿಸುತ್ತಿವೆ; ಆಳುತ್ತಿವೆ.

ಪಕ್ಷಾಂತರ ಮಾಡುವ ಜನಪ್ರತಿನಿಧಿಗಳಿಗೆ ಅವರದೇ ಆದ ಕಾರಣಗಳಿರುತ್ತವೆ. ತಮ್ಮ ಪಕ್ಷದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾದ ಅಸಮಾಧಾನದಿಂದ ಕೆಲವರು ಪಕ್ಷ ಬಿಡುತ್ತಾರೆ. ಅನೇಕರು, ಅಧಿಕಾರದ ಅವಕಾಶ ಸಿಗದೇ ಇದ್ದಾಗ ಪಕ್ಷಾಂತರ ಮಾಡುತ್ತಾರೆ. ಚುನಾವಣೆಗೆ ತಮ್ಮ ಪಕ್ಷದ ಟಿಕೆಟ್ ಸಿಗದಿದ್ದಾಗ ಇನ್ನೊಂದು ಪಕ್ಷದ ಟಿಕೆಟ್‍ಗಾಗಿ ಪಕ್ಷಾಂತರ ಮಾಡುವ ಮುಂದಾಳುಗಳು ಇದ್ದಾರೆ.

ಅಪರೂಪಕ್ಕೆ ತಮ್ಮ ಪಕ್ಷದ ಕೆಲವು ಸೈದ್ಧಾಂತಿಕ ನಿಲುವುಗಳನ್ನು ಒಪ್ಪದೆ ಪಕ್ಷ ಬಿಟ್ಟವರೂ ಇದ್ದಾರೆ. ಆದರೆ ಇವತ್ತಿನ ಸಂದರ್ಭದಲ್ಲಿ ಸೈದ್ಧಾಂತಿಕ ರಾಜಕಾರಣವನ್ನು ಸಮಯಸಾಧಕ ರಾಜಕಾರಣವೇ ಆಕ್ರಮಿಸಿ ಕೊಂಡಿರುವುದರಿಂದ ನೀತಿ, ನಿಲುವುಗಳ ಕಾರಣಕ್ಕೆ ಪಕ್ಷಾಂತರ ಮಾಡುವವರು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಹಾಗೆಂದು ಪಕ್ಷಾಂತರ ಪಿಡುಗು ಇವತ್ತಿನದು ಮಾತ್ರವಲ್ಲ. ಲಜ್ಜೆಬಿಟ್ಟು ಹೆಜ್ಜೆಯಿಟ್ಟ ಒಂದು ಇತಿಹಾಸವೇ ಪಕ್ಷಾಂತರಕ್ಕಿದೆ.

1967ರಲ್ಲಿಯೇ ಒಟ್ಟು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಆಯ್ಕೆಯಾದ 3,500 ಮಂದಿ ಶಾಸಕರಲ್ಲಿ 550 ಜನ ತಂತಮ್ಮ ಮೂಲ ಪಕ್ಷ ಗಳನ್ನು ಬಿಟ್ಟಿದ್ದರು. ಅದೇ ವರ್ಷ, ಹರಿಯಾಣದ ಗಯಾಲಾಲ್ ಎನ್ನುವವರು ಒಂದೇ ದಿನದಲ್ಲಿ ಮೂರು ಸಾರಿ ಪಕ್ಷಾಂತರ ಮಾಡಿ ದಾಖಲೆ ನಿರ್ಮಿಸಿದ್ದರು! ಗಯಾಲಾಲ್‍ರ ಪಕ್ಷಾಂತರದಿಂದಲೇ ‘ಆಯಾರಾಮ್ ಗಯಾರಾಮ್’ ಎಂಬ ಸೂತ್ರ ವಾಕ್ಯ ಹುಟ್ಟಿ ಚಾಲ್ತಿಗೆ ಬಂದಿತು.

ಪಕ್ಷಾಂತರವನ್ನು ತಡೆಯಲು ಇಂದಿರಾ ಗಾಂಧಿ ನೇತೃತ್ವದ ಅಂದಿನ ಕೇಂದ್ರ ಸರ್ಕಾರವು ಆಸಕ್ತಿ ವಹಿಸಿ ಸಚಿವ ವೈ.ಬಿ.ಚೌಹಾಣ್ ಅವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು 1967ರಲ್ಲಿ ರಚಿಸಿತು. ಈ ಸಮಿತಿಯು 1968ರಲ್ಲಿ ತನ್ನ ವರದಿಯನ್ನು ನೀಡಿತು. ಆಗ ಪಕ್ಷಾಂತರ ನಿಷೇಧ ಮಸೂದೆಯನ್ನು ರೂಪಿಸಿ ಲೋಕಸಭೆಯಲ್ಲಿ ಮಂಡಿಸಲಾಯಿತು. ಚರ್ಚೆ ನಡೆದು ಮಸೂದೆಯನ್ನು ಮರುಪರಿಶೀಲನೆಗಾಗಿ ಜಂಟಿ ಸದನ ಸಮಿತಿಗೆ ಒಪ್ಪಿಸಲಾಯಿತು. ಸರ್ಕಾರದ ಆಸಕ್ತಿ ಅಲ್ಲಿಗೇ ಅಂತ್ಯವಾಯಿತು!

ಮುಂದೆ ರಾಜೀವ್ ಗಾಂಧಿಯವರು ಪ್ರಧಾನಿ ಯಾದಾಗ ಅವರ ಆಸಕ್ತಿಯ ಫಲವಾಗಿ ಪಕ್ಷಾಂತರ ನಿಷೇಧ ಮಸೂದೆಯನ್ನು ಮಂಡಿಸಲಾಯಿತು. 1985ನೇ ಜನವರಿ 30ರಂದು ಲೋಕಸಭೆಯ ಒಪ್ಪಿಗೆ ಸಿಕ್ಕಿತು. ಜನವರಿ 31ರಂದು ರಾಜ್ಯಸಭೆಯಲ್ಲಿ ಅಂಗೀಕಾರವಾಯಿತು. 1985ರ ಫೆಬ್ರುವರಿ 15ರಂದು ರಾಷ್ಟ್ರಪತಿಯವರ ಅಂಕಿತವಾಗಿ ಮಾರ್ಚ್ 18ರಿಂದ ಜಾರಿಗೆ ಬಂದಿತು. ಇದು ಸಂವಿಧಾನದ 52ನೇ ತಿದ್ದುಪಡಿಯಾಗಿ ಹತ್ತನೇ ಶೆಡ್ಯೂಲ್‍ಗೆ ಸೇರಿತು.

ಈ ಪಕ್ಷಾಂತರ ನಿಷೇಧ ಕಾನೂನಿನಲ್ಲಿ ಒಟ್ಟು ಎಂಟು ಭಾಗಗಳಿದ್ದು, ಪಕ್ಷಾಂತರ ನಿಯಂತ್ರಣದ ನಿಯಮಗಳನ್ನು ನಿರೂಪಿಸಲಾಗಿದೆ. ಮುಖ್ಯವಾಗಿ, ಆಯಾ ಪಕ್ಷದ ವಿಪ್ ಉಲ್ಲಂಘಿಸಿದರೆ ಮತ್ತು ಮೂಲಪಕ್ಷ ಬಿಟ್ಟು ಇನ್ನೊಂದು ಪಕ್ಷ ಸೇರಿದರೆ, ಅಂತಹ ಚುನಾಯಿತ ಸದಸ್ಯರು ತಮ್ಮ ಸ್ಥಾನವನ್ನು ಕಳೆದುಕೊಳ್ಳುತ್ತಾರೆ ಮತ್ತು ಸದಸ್ಯತ್ವದ ಉಳಿದ ಅವಧಿಗೆ ‘ಅನರ್ಹ’ರಾಗುತ್ತಾರೆ. ಅನರ್ಹತೆಯ ವಿಷಯದಲ್ಲಿ ಸ್ಪೀಕರ್ ಅಥವಾ ಸಭಾಧ್ಯಕ್ಷರು ತಮ್ಮದೇ ನಿಯಮಾತ್ಮಕ ವಿಧಾನವನ್ನು ರೂಪಿಸಿಕೊಳ್ಳಬಹುದು. ಅನರ್ಹತೆ ವಿಷಯವು ನ್ಯಾಯಾಲಯದ ವ್ಯಾಪ್ತಿಗೆ ಬರುವುದಿಲ್ಲವೆಂದು ಕಾನೂನಿನಲ್ಲಿ ಹೇಳಿದ್ದರೂ ಸಂವಿಧಾನದ 32, 226, 137ನೇ ವಿಧಿಗಳ ಪ್ರಕಾರ ನ್ಯಾಯಾಲಯಗಳು ಮಧ್ಯ ಪ್ರವೇಶಿಸಬಹುದಾಗಿದೆ. ಈ ಅವಕಾಶವನ್ನು ಬಳಸಿಕೊಂಡು ಪಕ್ಷಾಂತರಿಗಳು ಸಭಾಧ್ಯಕ್ಷರ ನಿರ್ಣಯದ ವಿರುದ್ಧ ನ್ಯಾಯಾಲಯಕ್ಕೆ ಹೋಗುತ್ತಾರೆ. 2019ರಲ್ಲಿ ಕರ್ನಾಟಕದ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಪಕ್ಷ ಬಿಟ್ಟು, ಸ್ಪೀಕರ್ ಕ್ರಮವನ್ನು ಪ್ರಶ್ನಿಸಿ, ಸುಪ್ರೀಂ ಕೋರ್ಟಿಗೆ ಹೋದದ್ದನ್ನು ಇಲ್ಲಿ ನೆನೆಯಬಹುದು.

2003ರಲ್ಲಿ ಪಕ್ಷಾಂತರ ನಿಷೇಧ ಕಾನೂನಿಗೆ ತಿದ್ದುಪಡಿ ತರಲಾಯಿತು. ಪ್ರಣವ್ ಮುಖರ್ಜಿಯವರ ಅಧ್ಯಕ್ಷತೆಯಲ್ಲಿ ರಚಿತವಾದ ಸಮಿತಿಯು ಮಾಡಿದ ಶಿಫಾರಸಿನ ಪ್ರಕಾರ, ನಿರ್ದಿಷ್ಟ ಪಕ್ಷದ ಮೂರನೇ ಒಂದರಷ್ಟು ಶಾಸಕರು ಅಥವಾ ಸಂಸದರು ಪಕ್ಷ ತೊರೆದರೆ ಈ ಕಾನೂನಿನಿಂದ ವಿನಾಯಿತಿಯಿದೆ. ಉಳಿದಂತೆ ಪಕ್ಷಾಂತರಿಗಳು ತಮ್ಮ ಅವಧಿ ಮುಗಿಯುವವರೆಗೆ ಸಚಿವ ಅಥವಾ ಲಾಭದಾಯಕ ರಾಜಕೀಯ ಹುದ್ದೆ ಪಡೆಯುವಂತಿಲ್ಲ. ಯಾವುದೇ ಮಂತ್ರಿಮಂಡಲವು ಒಟ್ಟು ಸದಸ್ಯರ ಶೇ 15ರಷ್ಟನ್ನು ಮೀರುವಂತಿಲ್ಲ. ಈ ತಿದ್ದುಪಡಿಗಳನ್ನು 2003ರ ಡಿಸೆಂಬರ್ 16ರಂದು ಲೋಕಸಭೆ ಮತ್ತು 18 ರಂದು ರಾಜ್ಯಸಭೆಯಲ್ಲಿ ಅಂಗೀಕರಿಸಲಾಯಿತು. 2004ರ ಜನವರಿ ಒಂದರಂದು ರಾಷ್ಟ್ರಪತಿಯವರ ಒಪ್ಪಿಗೆ ಸಿಕ್ಕಿತು; ಸಂವಿಧಾನದ 91ನೇ ತಿದ್ದುಪಡಿಯಾಯಿತು.

ಪಕ್ಷಾಂತರ ನಿಷೇಧ ಕಾನೂನಿನ ನಿಯಂತ್ರಣವಿದ್ದರೂ ಪಕ್ಷಾಂತರಗಳು ಅನಿಯಂತ್ರಿತವಾಗಿ, ಅನೈತಿಕವಾಗಿ ನಡೆಯುತ್ತಿವೆ. ಯಾರು ಏನೇ ಕಾರಣ ಕೊಟ್ಟುಕೊಂಡರೂ ಬಹುಪಾಲು ಅಧಿಕಾರ ಲಾಲಸೆಯೇ ಪಕ್ಷಾಂತರದ ಕೇಂದ್ರವಾಗಿದೆ. ಈ ನಿಟ್ಟಿನಲ್ಲಿ ಪಕ್ಷಾಂತರ ನಿಷೇಧ ಕಾನೂನನ್ನು ನಿರ್ಣಯಾತ್ಮಕ ‘ನ್ಯಾಯಾಲಯ’ವಾಗುವಂತೆ ಬಿಗಿಗೊಳಿಸಬೇಕಾಗಿದೆ.


ಬರಗೂರು ರಾಮಚಂದ್ರಪ್ಪ

ಈಗಿರುವ ಪಕ್ಷಾಂತರ ನಿಷೇಧ ಕಾನೂನು ಚುನಾ ವಣೆ ನಂತರದ ವ್ಯಾಪ್ತಿಯನ್ನು ಒಳಗೊಂಡಿದ್ದು, ಚುನಾ ಯಿತ ಪ್ರತಿನಿಧಿಗಳಿಗೆ ಮಾತ್ರ ಸಂಬಂಧಿಸಿದೆ. ಆದರೆ ಚುನಾವಣೆಗೆ ಮೊದಲೇ ‘ಕಾಲಜ್ಞಾನ’ ಪರಿಣತಿಯಿಂದ ಪಕ್ಷಾಂತರ ಮಾಡುವ ಟಿಕೆಟ್ ನಾಯಕರಿಗೂ ನಿಯಂತ್ರಣ ಬೇಕು. ಇನ್ನೊಂದು ಪಕ್ಷಕ್ಕೆ ಸೇರುವ ಸಮಯ ಸಾಧಕತನವನ್ನು ಚುನಾವಣೆ ದಿನಾಂಕ ಪ್ರಕಟಣೆಯಾದ ದಿನದಿಂದಲೇ ನಿಯಂತ್ರಿಸಬೇಕು. ಬೇರೆ ಪಕ್ಷ ಸೇರಿದರೂ ಆಗಿನ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶವಿರಬಾರದು. ಚುನಾಯಿತರಾದವರ ಪಕ್ಷಾಂತರವಾದಾಗ ಆಗಿನ ಅವಧಿ ಮುಗಿಯುವವರೆಗೆ ಮತ್ತೆ ಸ್ಪರ್ಧಿಸುವ ಅವಕಾಶ ಕೊಡದಂತೆ ನಿರ್ಣಯಾತ್ಮಕ ನಿಯಮ ರೂಪಿಸಬೇಕು. ಪೂರ್ಣಾವಧಿಗಾಗಿಯೇ ಜನರು ವೋಟು ಕೊಟ್ಟಿರುತ್ತಾರೆ ಎಂಬುದನ್ನೇ ಮುಖ್ಯ ಮಾನದಂಡವೆಂದು ಪರಿಗಣಿಸಬೇಕು. ಆದ್ದರಿಂದ ಪಕ್ಷಾಂತರದ ‘ಸ್ವಾತಂತ್ರ್ಯ’ ಪಡೆದರೂ ಸ್ಪರ್ಧಿಸುವ ಸ್ವಾತಂತ್ರ್ಯ ಇರಬಾರದು.

ಚುನಾವಣೆಯಲ್ಲಿ ಹಣ ಮತ್ತು ಮದ್ಯ ಹಂಚುವುದಕ್ಕೆ, ಜಾತಿ ಸಮಾವೇಶ ನಡೆಸುವುದಕ್ಕೆ, ಚುನಾವಣೆ ಘೋಷಣೆ ದಿನದಿಂದಲೇ ನಿಯಂತ್ರಣ ಹೇರುವ, ಹಣ ಕೊಟ್ಟವರು ಹಾಗೂ ಪಡೆದವರಿಬ್ಬರನ್ನೂ ಅಪರಾಧಿಗಳನ್ನಾಗಿಸುವ ಮತ್ತು ಒಟ್ಟು ಚುನಾವಣಾ ಭ್ರಷ್ಟಾಚಾರವನ್ನು ತಡೆಯುವ ಪ್ರತ್ಯೇಕ ಕಠಿಣ ಕಾನೂನು ರೂಪುಗೊಳ್ಳಬೇಕು. ಚುನಾವಣಾ ತಕರಾರುಗಳನ್ನು ಒಂದೆರಡು ತಿಂಗಳಲ್ಲೇ ನಿರ್ಣಯಿಸುವ ಚುನಾವಣಾ ನ್ಯಾಯಾಲಯವೂ ಬೇಕು. ಇಲ್ಲದಿದ್ದರೆ ಪ್ರಜಾಪ್ರಭುತ್ವದ ಹೆಸರು ಹೇಳುತ್ತಲೇ ‘ಪ್ರಭುತ್ವ’ ಮಾತ್ರ ಮುಖ್ಯವಾಗಿ ‘ಪ್ರಜಾ’ ಪ್ರಜ್ಞೆ ಪಾತಾಳಕ್ಕೆ ಹೋಗುತ್ತಲೇ ಇರುತ್ತದೆ. ಕಾನೂನು ಮಾತ್ರದಿಂದಲೇ ಸಂಪೂರ್ಣ ಸುಧಾರಣೆಯಾಗದೆ ಇರಬಹುದಾದರೂ ಅದೊಂದು ಶಾಸನಬದ್ಧ ಅಧಿಕೃತ ಸಾಧನವಂತೂ ಆಗುತ್ತದೆ. ಜನರ ಹೋರಾಟವೂ ಬೇಕಾಗುತ್ತದೆ. ಜನಜಾಗೃತಿ ಮತ್ತು ಕಾನೂನು ಎರಡೂ ಸೇರಿ ಪಕ್ಷಾಂತರಕ್ಕೆ ಕಡಿವಾಣ ಹಾಕಬೇಕಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು