ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ಸಾಮಾಜಿಕ ಜಾಲತಾಣ ಮತ್ತು ಪ್ರಜಾಪ್ರಭುತ್ವ

ತಂತ್ರಜ್ಞಾನದಿಂದಾಗಿ ಹುಟ್ಟಿರುವ ಸಮಸ್ಯೆಗೆ ತಂತ್ರಜ್ಞಾನವೇ ಪರಿಹಾರ ರೂಪಿಸಬಹುದು
Last Updated 5 ಆಗಸ್ಟ್ 2022, 20:45 IST
ಅಕ್ಷರ ಗಾತ್ರ

ಸ್ಮಾರ್ಟ್‌ಫೋನ್‌ಗಳು ಎಲ್ಲರ ಕೈಯಲ್ಲಿ ಬಂದು ಕುಳಿತು ದಶಕ ಸಂದಿದೆ. ಸಾಮಾಜಿಕ ಜಾಲತಾಣಗಳ ಬಳಕೆ ವರ್ಷವರ್ಷಕ್ಕೂ ಹೆಚ್ಚುತ್ತಿದೆ. ಇವು, ಅದರಲ್ಲೂ ಮುಖ್ಯವಾಗಿ ಸಾಮಾಜಿಕ ಜಾಲತಾಣಗಳು, ತಮ್ಮನ್ನು ಬಳಕೆ ಮಾಡುವವರ ಮಾನಸಿಕ ಮತ್ತು ಕೌಟುಂಬಿಕ ಆರೋಗ್ಯ ಹಾಳುಮಾಡುತ್ತಿವೆ, ಹಲವು ದೇಶಗಳ
ಪ್ರಜಾಪ್ರಭುತ್ವವನ್ನೇ ಬುಡಮೇಲು ಮಾಡುವ ಮಟ್ಟಕ್ಕೆ ಬೆಳೆದಿವೆ.

ಇದನ್ನು ಎಲ್ಲರೂ ಆತಂಕದಿಂದ ಗಮನಿಸುತ್ತಿದ್ದಾರೆ. ಜಾಗತಿಕವಾಗಿ ಸಾಮಾಜಿಕ ಜಾಲತಾಣಗಳ ಬಳಕೆ ತುತ್ತತುದಿಯನ್ನು ಈಗಾಗಲೇ ಮುಟ್ಟಿರಬಹುದು ಅನ್ನುವ ವರದಿಯೊಂದನ್ನು ಮಾರುಕಟ್ಟೆ ಮತ್ತು ಗ್ರಾಹಕರ ಅಂಕಿಅಂಶಗಳ ಸುತ್ತ ಕೆಲಸ ಮಾಡುವ ‘ಸ್ಟ್ಯಾಟಿಸ್ಟಾ’ ಸಂಸ್ಥೆ ಈ ಹೊತ್ತಲ್ಲಿ ಹೊರತಂದಿದೆ.

ಸ್ಟ್ಯಾಟಿಸ್ಟಾ ಡಿಜಿಟಲ್ ಎಕಾನಮಿ ಕಂಪಾಸ್ 2021 ಅನ್ನುವ ವರದಿಯ ಪ್ರಕಾರ 2012ರಲ್ಲಿ ಜಾಗತಿಕವಾಗಿ ಸಾಮಾಜಿಕ ಜಾಲತಾಣಗಳನ್ನು ಜನರು ದಿನವೊಂದಕ್ಕೆ ಸರಾಸರಿ 90 ನಿಮಿಷ ಬಳಸುತ್ತಿದ್ದರು. ಇದು ವರ್ಷವೂ ಏರುತ್ತ ಬಂದು 2020ರ ಹೊತ್ತಿಗೆ ದಿನವೊಂದಕ್ಕೆ 145 ನಿಮಿಷಗಳ ಮಟ್ಟಕ್ಕೆ ಬೆಳೆದು ತುದಿ ಮುಟ್ಟಿ, 2021ರ ಹೊತ್ತಿಗೆ 142 ನಿಮಿಷಗಳಿಗೆ ಕುಸಿದಿದ್ದು ಸಾಮಾಜಿಕ ಜಾಲತಾಣಗಳ ಏರುಹಾದಿಯ ಪಯಣ ಮುಗಿದಿರಬಹುದು ಅನ್ನುವ ಅನಿಸಿಕೆಯನ್ನು ವರದಿ ವ್ಯಕ್ತಪಡಿಸಿದೆ.

ಮುಂದುವರಿದ ದೇಶಗಳಲ್ಲಿ ಇದು ನಿಜವಾಗುತ್ತಿರಬಹುದಾದರೂ ಏಳಿಗೆ ಹೊಂದುತ್ತಿರುವ ದೇಶಗಳಲ್ಲಿ ಈಗಷ್ಟೇ ಇಂಟರ್ನೆಟ್ ಮತ್ತು ಸಾಮಾಜಿಕ ಜಾಲತಾಣಗಳಿಗೆ ತೆರೆದುಕೊಳ್ಳುತ್ತಿರುವ ಹೊಸಬರ ಸಂಖ್ಯೆ ದೊಡ್ಡದಿರುವುದರಿಂದ ಈ ಬದಲಾವಣೆಯು ಭಾರತದಂತಹ ದೇಶದಲ್ಲಿ ಕಾಣಿಸಲು ಇನ್ನಷ್ಟು ಸಮಯ ಬೇಕಾಗಬಹುದು. ಸಾಮಾಜಿಕ ಜಾಲತಾಣಗಳ ಒಳಿತು-ಕೆಡುಕುಗಳ ಬಗ್ಗೆ ವಿಮರ್ಶೆ ಮಾಡಲು ಇದು ಸಕಾಲ.

ಸಂಪರ್ಕದ ಸಾಧ್ಯತೆಗಳು ಇತಿಹಾಸದ ಉದ್ದಕ್ಕೂಪ್ರಪಂಚದ ಹಲವು ನಾಗರಿಕತೆಗಳನ್ನು ರೂಪಿಸಿದಂತಹವು. ಅಷ್ಟೇ ಅಲ್ಲ, 18-19ನೇ ಶತಮಾನದ ಹೊತ್ತಿಗೆ ಸಂಪರ್ಕದ ಸಾಧ್ಯತೆಗಳನ್ನು ತಂತ್ರಜ್ಞಾನದ ಮೂಲಕ ಸಮರ್ಥವಾಗಿ ಕೈವಶ ಮಾಡಿಕೊಂಡ ನಾಡುಗಳು ಇತರ ಹಲವು ನಾಡುಗಳನ್ನು ತಮ್ಮ ಸಾಮ್ರಾಜ್ಯ
ಶಾಹಿಯಡಿ ತಂದು ಶೋಷಿಸುವುದಕ್ಕೂ ಅನುಕೂಲ ಮಾಡಿಕೊಟ್ಟಿದ್ದವು. 20ನೇ ಶತಮಾನದಲ್ಲಿ ಎರಡು ವಿಶ್ವಯುದ್ಧಗಳ ನಂತರ ಪ್ರಪಂಚದ ಉದ್ದಗಲಕ್ಕೂ ಹುಟ್ಟಿದ ಹತ್ತಾರು ದೇಶಗಳು, ಹತ್ತಾರು ರಾಷ್ಟ್ರೀಯತೆಗಳನ್ನು ಕಟ್ಟುವಲ್ಲೂ ಆ ಹೊತ್ತಿನ ಸಂಪರ್ಕ ಸಾಧ್ಯತೆಗಳು ದೊಡ್ಡ ಕೊಡುಗೆ ಕೊಟ್ಟಿವೆ.

1990ರ ನಂತರ ಟಿ.ವಿ. ಮಾಧ್ಯಮದ ಬೆಳವಣಿಗೆಯೊಂದಿಗೆ ಕಿವಿ, ಕಣ್ಣುಗಳೆರಡನ್ನೂ ಆವರಿಸಿಕೊಳ್ಳುವ ಹೊಸ ಮಾಧ್ಯಮವೂ ಬೆಳೆಯಿತು. ಆದರೆ ಇದೆಲ್ಲ ಆಗುವಾಗಲೂ ಅವು ಅತ್ಯಂತ ನಿಯಂತ್ರಿತವಾದ ರೀತಿಯಲ್ಲೇ ಕೆಲಸ ಮಾಡುತ್ತಿದ್ದವು. ದ್ವಾರಪಾಲಕರು ಅನ್ನಿಸಿಕೊಂಡವರು ಜನರಿಗೆ ಏನನ್ನು, ಎಷ್ಟರಮಟ್ಟಿಗೆ ಕೊಡಬೇಕು ಎಂದು ನಿರ್ಧರಿಸುತ್ತಿದ್ದರೋ ಅಷ್ಟೇ ಪ್ರಮಾಣದಲ್ಲಿ ಮಾಹಿತಿ, ಸುದ್ದಿ, ಅಭಿಪ್ರಾಯ ಸಂಕಥನ ಜನರಿಗೆ ತಲುಪುತ್ತಿದ್ದವು. ಇದನ್ನು ದೊಡ್ಡ ಮಟ್ಟದಲ್ಲಿ ತಲೆಕೆಳಗಾಗಿಸಿದ್ದು ಕಳೆದ 15-20 ವರ್ಷಗಳಲ್ಲಿ ಹುಟ್ಟಿ, ಹರಡಿಕೊಂಡ ಸಾಮಾಜಿಕ ಜಾಲತಾಣಗಳು.

ಹಿಂದಿನ ಯಾವುದೇ ಸಂಪರ್ಕದ ಕ್ರಾಂತಿಗಿಂತಲೂ ಬೇರಾದ ಬಗೆ ಇದಾಗಿತ್ತು. ಕ್ಷಣ ಮಾತ್ರದಲ್ಲೇ ಯಾರನ್ನು ಬೇಕಿದ್ದರೂ ತಲುಪುವ ಅವಕಾಶ, ಎಲ್ಲರೂ ತೊಡಗಿಕೊಳ್ಳುವ ಆಯ್ಕೆ, ಹೀಗೆ ಸಂಪರ್ಕದ ಸಾಧ್ಯತೆಗಳ ಮೇಲಿದ್ದ ಎಲ್ಲ ನಿಯಂತ್ರಣಗಳನ್ನು ಕಿತ್ತೆಸೆದು ಬಂದ ಈ ಜಾಲತಾಣಗಳು ನಿಜವಾದ ಅರ್ಥದಲ್ಲಿ ಪ್ರಜಾಪ್ರಭುತ್ವದ ಆಶಯಗಳನ್ನು ಪ್ರಪಂಚದೆಲ್ಲೆಡೆ ಎತ್ತಿ ಹಿಡಿಯುವ ಸಾಧನಗಳು ಎಂಬಂತೆಯೇ ಗೋಚರಿಸಿದ್ದವು. ಹಲವು ದೇಶಗಳಲ್ಲಿ ಅತ್ಯಂತ ಸಾಮಾನ್ಯ ಜನರನ್ನು ಜೋಡಿಸಿ ಸರ್ವಾಧಿಕಾರಿಗಳನ್ನು ಕೆಳಗಿಳಿಸುವ ಬದಲಾವಣೆಗೂ ವೇದಿಕೆಯನ್ನು ಈ ತಾಣಗಳು ಒದಗಿಸಿದ್ದನ್ನು ಇಲ್ಲಿ ನೆನೆಯಬಹುದು.

ಇನ್ನು ಕೆಲವು ದೇಶಗಳಲ್ಲಿ ಈ ತಾಣಗಳನ್ನು ಸರಿಯಾಗಿ ಬಳಸಿಕೊಳ್ಳುವ ಚಾಕಚಕ್ಯತೆ ತೋರಿದ ರಾಜಕೀಯ ಪಕ್ಷಗಳನ್ನು ಅಧಿಕಾರದ ದಂಡೆಗೆ ತಲುಪಿಸುವಲ್ಲಿಯೂ ಇವು ನೆರವಾದವು. ಇವುಗಳಿಗಿರುವ ಇಂತಹದೊಂದು ಅಮಿತ ಬಲದ ಕಾರಣಕ್ಕಾಗಿಯೇ ಪ್ರಪಂಚದ ಹಲವೆಡೆಅವುಗಳ ಬಲದಿಂದಲೇ ಅಧಿಕಾರಕ್ಕೆ ಬಂದ ಪಕ್ಷಗಳು ಅವುಗಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಇನ್ನಿಲ್ಲದ ಕಸರತ್ತು ಮಾಡಿದ್ದನ್ನು– ಮಾಡುತ್ತಿರುವುದನ್ನು ಕಾಣಬಹುದು. ಇದು ಅದರ ಒಂದು ಮುಖ.

ಸಾಮಾಜಿಕ ಜಾಲತಾಣಗಳ ಇನ್ನೊಂದು ಮುಖವೆಂದರೆ ಇವುಗಳಲ್ಲಿ ಅತ್ಯಂತ ಜನಪ್ರಿಯವಾದ ತಾಣಗಳು ಒಂದೋ ಅಮೆರಿಕ ಇಲ್ಲವೇ ಚೀನಾ ಮೂಲದವು. ಕೋಟಿಕೋಟಿಗಟ್ಟಲೆ ಜನರ ಬದುಕಿನ ಒಳಗಣ- ಹೊರಗಣವೆಲ್ಲವನ್ನೂ ಬಗೆದು ಮಾಹಿತಿ ಕೂಡಿಡುವ ಇಂತಹ ತಾಣಗಳು ಸಹಜವಾಗಿಯೇ ಈ ದೇಶಗಳ ಪಾಲಿಗೆ ಅತ್ಯಂತ ನವಿರಾದ ಗೂಢಚಾರಿಕೆಯ ಸಾಧನಗಳು. ಈ ತಾಣಗಳನ್ನು ನಡೆಸುವ ಹಲವು ಸಂಸ್ಥೆಗಳು ಜಗತ್ತಿನ ಅತ್ಯಂತ ದೊಡ್ಡ ತಂತ್ರಜ್ಞಾನ ಕಂಪನಿಗಳೂ ಹೌದು.

‘ನಿರಂತರ ಲಾಭ’ ಅವುಗಳ ದಿಕ್ಕನ್ನು ನಿರ್ದೇಶಿಸುವ ಒಂದು ಮಾರುಕಟ್ಟೆ ಮೌಲ್ಯವಾದರೆ, ಜಾಗತಿಕ ರಾಜಕಾರಣದ ಮೇಲಿನ ತಮ್ಮ ಹಿಡಿತ ಹೆಚ್ಚಿಸಿಕೊಳ್ಳಲು ಇವು ಮೊಗೆದು ಕೊಡುವ ಮಾಹಿತಿ ಅಲ್ಲಿನ ಸರ್ಕಾರಗಳ ಪಾಲಿಗೆ ಒಂದು ರಾಜತಾಂತ್ರಿಕ ಮೌಲ್ಯವನ್ನು ಅನಾಯಾಸವಾಗಿ ತಂದುಕೊಟ್ಟಿವೆ.

ಈ ಎರಡೂ ಉದ್ದೇಶಗಳನ್ನು ನಿರಂತರವಾಗಿ ಈಡೇರಿಸುತ್ತಲೇ ಇರಬೇಕು ಅಂದರೆ ಈ ತಾಣಗಳ ಬಳಕೆದಾರರು ಇವುಗಳನ್ನು ನಿರಂತರವಾಗಿ ಬಳಸುತ್ತಲೇ ಇರುವಂತೆ ಮಾಡಬೇಕಾಗುತ್ತದೆ. ಹಾಗೆ ಬಳಸುವುದನ್ನು ಒಂದು ಚಟವಾಗಿಸುವ ರೀತಿಯಲ್ಲೇ ಇವುಗಳನ್ನು ವಿನ್ಯಾಸಗೊಳಿಸಲಾಗಿದೆ. ಸಾರಾಯಿ, ಡ್ರಗ್ಸ್ ತೆಗೆದುಕೊಳ್ಳುವ ಮನುಷ್ಯನ ಮೆದುಳಿನಲ್ಲಿ ಆತನಿಗೆ ಸಂತಸ, ಉತ್ಸಾಹದ ಅನುಭವ ಕೊಡುವುದು ಡೋಪಮೈನ್ ಅನ್ನುವ ನ್ಯೂರೊ ಕೆಮಿಕಲ್. ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿ ಬಾರಿ ನೋಟಿಫಿಕೇಷನ್ ಬಂದಾಗಲೂ ಬಳಸುವವನ ಮೆದುಳಲ್ಲಿ ಒಮ್ಮೆಲೆ ಹೆಚ್ಚುವ ಡೋಪಮೈನ್ ಮಟ್ಟ ಅವನಿಗೆ ಅರೆಗಳಿಗೆಯ ಹುರುಪು ಕೊಡುತ್ತದೆ. ಮೆದುಳು ಬೇಡಿಕೆ ಇಡುವ ಕಾರಣಕ್ಕಾಗಿಯೇ ಬಳಸುವವನು ಮತ್ತೆ ಮತ್ತೆ ಫೋನ್ ತೆರೆಯತ್ತ ತನ್ನ ಕಣ್ಣು ಹಾಯಿಸುತ್ತಾನೆ. ನೋಟಿಫಿಕೇಷನ್ ಕಾಣದಿದ್ದಾಗ ಚಡಪಡಿಸುತ್ತಾನೆ.

ಪ್ರತಿಯೊಬ್ಬ ಬಳಕೆದಾರನ ವೈಯಕ್ತಿಕ ಇಷ್ಟಗಳನ್ನು ತಿಳಿದುಕೊಂಡಿರುವ ಸಾಮಾಜಿಕ ಜಾಲತಾಣಗಳು ತಮ್ಮ ಅಲ್ಗೋರಿದಂಗಳನ್ನು ಬಳಸಿ ಅತ್ಯಂತ ವ್ಯವಸ್ಥಿತವಾಗಿ ಬಳಕೆದಾರನಲ್ಲಿರುವ ಎಲ್ಲ ಪೂರ್ವಗ್ರಹಗಳನ್ನುನಿರಂತರವಾಗಿ ಗಟ್ಟಿಗೊಳ್ಳಿಸುವಂತಹ ವಿಷಯಗಳನ್ನೇ ಆಯ್ದು, ಅವುಗಳ ಸತ್ಯಾಸತ್ಯತೆಯನ್ನು ಪರಿಶೀಲಿಸದೆ ತೋರಿಸುತ್ತ ಆತ ಎಂದೂ ಈ ತಾಣಗಳ ಆಚೆ ಬರದಂತೆ, ಸರಿ-ತಪ್ಪುಗಳ ಕುರಿತು ಸ್ವತಂತ್ರವಾಗಿ ಯೋಚಿಸದಂತೆ ಕಟ್ಟಿಹಾಕುತ್ತವೆ. ಒಂದು ಸತ್ಯದ ಬದಲಾಗಿ
ಪ್ರತಿಯೊಬ್ಬರಿಗೂ ಅವರದ್ದೇ ಸತ್ಯ ಇರುವ ಇವತ್ತಿನ ಸತ್ಯೋತ್ತರ ಕಾಲ ಬಂದಿರುವುದೇ ಇವುಗಳ ಕೃಪೆಯಿಂದ ಅಂದರೆ ತಪ್ಪಾಗದು.

ಇಂತಹ ಏರ್ಪಾಡಿನಿಂದಾಗಿಯೇ ಎಡ-ಬಲ ಅನ್ನುವ ಕಂದರ ಆಳವಾಗಿ ಭಾರತದಲ್ಲಷ್ಟೇ ಅಲ್ಲ, ಪ್ರಪಂಚದ ಬಹುತೇಕ ಪ್ರಜಾಪ್ರಭುತ್ವಗಳಲ್ಲೂ ಮೂಡುತ್ತಿದೆ. ಪರಸ್ಪರ ವಿರುದ್ಧವಾದ ನಿಲುವು, ಅಭಿಪ್ರಾಯಗಳೆರಡೂಸೆಣಸಿ ಒಂದು ಸಮನ್ವಯ ಸಾಧಿಸಿಕೊಳ್ಳುವುದರಲ್ಲಿಪ್ರಜಾಪ್ರಭುತ್ವದ ಬುನಾದಿ ಇದೆ. ಆದರೆ ಇದಕ್ಕೆ ಬೇಕಾದ ಸ್ವತಂತ್ರವಾದ ಚಿಂತನೆಯನ್ನು ಸಾಮಾನ್ಯರಲ್ಲಿ ಹುಟ್ಟದಂತೆ ನೋಡಿಕೊಳ್ಳುವಲ್ಲಿ ಇಂದು ಸಾಮಾಜಿಕ ಜಾಲತಾಣಗಳ ಪಾತ್ರ ದೊಡ್ಡದಿದೆ. ಸಾರ್ವಜನಿಕ ನಿಲುವುಗಳನ್ನು ರೂಪಿಸುವಲ್ಲಿ, ನಿಯಂತ್ರಿಸುವಲ್ಲಿ ಈ ತಾಣಗಳಿಗಿರುವ ಅಂಕೆ ಮೀರಿದ ಶಕ್ತಿಯ ಬಗ್ಗೆ ಇಂದು ಯಾರಿಗೂ ಅನುಮಾನಗಳಿಲ್ಲ.

ಇದು ಯಾವುದೇ ರಾಜಕೀಯ ನಿಲುವುಳ್ಳವರನ್ನು ಯೋಚಿಸುವಂತೆ ಮಾಡಬೇಕು. ಯಾಕೆಂದರೆ ಸ್ವತಂತ್ರ ಚಿಂತನೆ, ವಸ್ತುನಿಷ್ಠತೆಯನ್ನುಹಿಂದಕ್ಕೊಡ್ಡಿ, ಬಳಸುಗನನ್ನು ಕೀಲಿ ಕೊಟ್ಟ ಗೊಂಬೆಯಂತಾಗಿಸುವ ಅಲ್ಗೋರಿದಂಗಳ ಈ ಪ್ರಪಂಚ ಯಾವ ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆಯ ಸ್ಥಿರತೆಗೂ ಇಂದಲ್ಲ ನಾಳೆ ಕುತ್ತು ತರದೇ ಇರುವುದಿಲ್ಲ.

ಇದಕ್ಕೆ ಸುಲಭದ ಪರಿಹಾರವಂತೂ ಇಲ್ಲ. ತಂತ್ರಜ್ಞಾನದ ಬೆಳವಣಿಗೆಯನ್ನು ಯಾರೂ ನಿಯಂತ್ರಿಸಲು ಸಾಧ್ಯವಿಲ್ಲ. ಕಳೆದ ಇನ್ನೂರು ವರ್ಷಗಳಲ್ಲಿ ಮನುಕುಲ ಎದುರಿಸಿರುವ ಬಹು ದೊಡ್ಡ ಸವಾಲುಗಳನ್ನು ದಾಟಲು ಸಾಧ್ಯವಾಗಿದ್ದು ಅವುಗಳನ್ನು ಬಗೆಹರಿಸಿಯೇ ತೀರುತ್ತೇನೆ ಎಂದು ಹೊರಟ ಮನುಷ್ಯನಲ್ಲಿರುವ ಶಕ್ತಿಯಿಂದ.ತಂತ್ರಜ್ಞಾನದಿಂದ ಹುಟ್ಟಿರುವ ಈ ಸಮಸ್ಯೆಗೆ ತಂತ್ರಜ್ಞಾನವೇ ಪರಿಹಾರವನ್ನು ರೂಪಿಸಬಹುದು. ಈ ಹೊತ್ತಿಗೆ ಅದೊಂದೇ ಭರವಸೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT