ಶುಕ್ರವಾರ, ಅಕ್ಟೋಬರ್ 30, 2020
27 °C
ಅಪಾಯದ ಅಂಚು ತಲುಪಿರುವ ಪ್ರವಾಸೋದ್ಯಮ ಪುಟಿದೇಳುವುದು ಯಾವಾಗ?

ವಿಶ್ಲೇಷಣೆ: ಕೊರೊನಾ ಮತ್ತು ಸುಸ್ಥಿರ ಪ್ರವಾಸೋದ್ಯಮ

ವೆಂಕಿ ರಾಘವೇಂದ್ರ - ಭಾರತಿ ಮಣೂರ್ Updated:

ಅಕ್ಷರ ಗಾತ್ರ : | |

‘ನಾವು ಪರಿಚಯಿಸುತ್ತಿದ್ದೇವೆ ದೂರ ಪ್ರವಾಸೋ ದ್ಯಮ!’ ಎಂಬ ಶೀರ್ಷಿಕೆಯೊಂದಿಗೆ 1.38 ನಿಮಿಷದ ಯುಟ್ಯೂಬ್ ವಿಡಿಯೊದಲ್ಲಿ ಫೆರೊ ಐಲ್ಯಾಂಡ್‌ ಪ್ರವಾಸೋದ್ಯಮದ ನಿರ್ದೇಶಕಿ ಗೌರಿಕ್‌ ಹೆಜ್ಗಾರ್ಡ್‌, ಕೋವಿಡ್-‌ 19ರ ಸಮಯದಲ್ಲಿ ತಮ್ಮ ದ್ವೀಪಕ್ಕೆ
ಪ್ರವಾಸಿಗರನ್ನು ವರ್ಚುವಲ್ ಪ್ರವಾಸಕ್ಕಾಗಿ ಆಹ್ವಾನಿಸುತ್ತಾರೆ. ಇದರಲ್ಲಿ ಸ್ಥಳೀಯ ಮಾರ್ಗದರ್ಶಕರು ತಮ್ಮ ತಲೆಗೆ ಕ್ಯಾಮೆರಾಶಿರಸ್ತ್ರಾಣ ಧರಿಸಿ ಪ್ರವಾಸಿ ತಾಣಗಳಲ್ಲಿ ಚಲಿಸುತ್ತಾ, ದೂರದಿಂದ ಈ ತಾಣಗಳನ್ನು ತಮ್ಮ ಮೊಬೈಲ್, ಕಂಪ್ಯೂಟರ್ ಮೂಲಕ ವೀಕ್ಷಿಸುವವರ ಕಣ್ಣಾಗುತ್ತಾರೆ. ಅಷ್ಟೇ ಅಲ್ಲದೆ ಪ್ರವಾಸಿಗರು ವರ್ಚುವಲ್‌ ಕುದುರೆ ಸವಾರಿ, ನೌಕಾಯಾನ ಮಾಡಬಹುದು, ಹೆಲಿಕಾಪ್ಟರ್ ಅನ್ನು ನಿಯಂತ್ರಿಸಬಹುದು. ಇಚ್ಛೆ ಇದ್ದರೆ ನೀವೂ ಈ ಪ್ರವಾಸದ ಅನುಭವ ಪಡೆಯಬಹುದು (https://www.remote-tourism.com/).

ಹೆಜ್ಗಾರ್ಡ್‌ ಇಲ್ಲಿ ಎರಡು ಉದ್ದೇಶಗಳನ್ನು ಕಾಣುತ್ತಾರೆ. ಕೊರೊನಾದಿಂದ ವಿಚಲಿತರಾದ ಪ್ರವಾಸಿಗರು ತಮ್ಮ ಪ್ರವಾಸಿತಾಣಗಳನ್ನು ಮರೆಯದಂತೆ ಮಾಡುವುದು ಮತ್ತು ಕೋವಿಡ್- 19ರ ಭಯದಲ್ಲಿ ದಿನದೂಡುತ್ತಿರುವ ಜನರಿಗೆ ತಮ್ಮ ಕಿಟಕಿಗಳಿಂದ ಹೊರಗೆ ಇಣುಕಲು ಸಹಾಯ ಮಾಡುವುದು. ತೀವ್ರ ಸಂಕಷ್ಟದಲ್ಲಿರುವ ಪ್ರವಾಸೋದ್ಯಮವನ್ನು ಉಳಿಸಿಕೊಳ್ಳಲು ಹೆಜ್ಗಾರ್ಡ್‌ ಮಾಡಿದ ಪ್ರಯತ್ನ ಪ್ರಶಂಸನೀಯ. ಮುಂಬರುವ ಪ್ರವಾಸೋದ್ಯಮವನ್ನು ಕೊರೊನಾ ನಂತರದ ಪ್ರವಾಸೋದ್ಯಮ ಎಂದರೆ ತಪ್ಪಾಗಲಾರದು. ಏಕೆಂದರೆ ಕೋವಿಡ್-‌ 19ರಿಂದ ಅಪಾಯದ ಅಂಚು ತಲುಪಿದ ಉದ್ಯಮಗಳಲ್ಲಿ ಇದೂ ಒಂದು. ಮು೦ದಿನ ದಿನಗಳಲ್ಲಿ ಇದರ ಪುಟಿದೇಳುವಿಕೆಯನ್ನು ಕಾದು ನೋಡಬೇಕು.

ಒಬ್ಬ ವ್ಯಕ್ತಿ ಎಷ್ಟು ವಿದ್ಯಾವಂತ ಎಂಬುದನ್ನು ಅವನು ಕ್ರಮಿಸಿದ ದೂರದಿಂದ ಅರಿಯಬಹುದು ಎಂದು ಪ್ರವಾದಿ ಮೊಹಮ್ಮದರು ಹೇಳಿರುವಂತೆ, ಪ್ರವಾಸದ ಅನುಭವಗಳಿಂದಲೂ ವ್ಯಕ್ತಿ ಪ್ರಜ್ಞಾವಂತನಾಗಬಲ್ಲ. ಅದೇ ಕಾರಣಕ್ಕೆ ಹಿಂದೆಲ್ಲಾ ರಾಜಕುಮಾರರು, ತತ್ವಜ್ಞಾನಿಗಳು ತಮ್ಮ ವಿದ್ಯಾಭ್ಯಾಸದ ಒಂದು ಭಾಗವಾಗಿ ಪ್ರವಾಸ ಕೈಗೊಳ್ಳುತ್ತಿದ್ದರು. ಅದು ಈಗಲೂ ಮುಂದುವರಿದಿದೆ.

‘ದಿ ಕಾನ್ಸಲೇಷನ್ಸ್‌ ಆಫ್ ಫಿಲಾಸಫಿ’ಯ ಕರ್ತೃ ಅಲಾಯನ್ ದೆ ಬತ್ತೋನ್ ಅವರು ಫ್ರೆಂಚ್ ನವೋದಯದ ಪ್ರಖ್ಯಾತ ತತ್ವಜ್ಞಾನಿ ಮೈಕಲ್ ದೆ ಮೊಂಟೆಯ್ನ್‌ ಅವರ ಪ್ರವಾಸವನ್ನು ಅದ್ಭುತವಾಗಿ ಬಿಚ್ಚಿಡುತ್ತಾರೆ. ಮೊಂಟೆಯ್ನ್‌ 17 ತಿಂಗಳುಗಳ ಯಾತ್ರೆಯಲ್ಲಿ 3 ಸಾವಿರ ಮೈಲುಗಳನ್ನು ಕುದುರೆಯ ಮೇಲೆ ಕ್ರಮಿಸಿ ಜರ್ಮನಿ, ಆಸ್ಟ್ರಿಯಾ, ಸ್ವಿಟ್ಜರ್‌ಲ್ಯಾಂಡ್‌ನ ಮೂಲಕ ರೋಮ್‌ ತಲುಪುತ್ತಾರೆ. ಪ್ರಾಂತ್ಯದಿಂದ ಪ್ರಾಂತ್ಯಕ್ಕೆ ಆಚಾರ ವಿಚಾರಗಳು ಹೇಗೆ ತೀಕ್ಷ್ಣವಾಗಿ ಬದಲಾಗುತ್ತವೆ ಎಂಬುದನ್ನು ತಮ್ಮ ಯಾತ್ರೆಯುದ್ದಕ್ಕೂ ಗಮನಿಸುತ್ತಾರೆ. ಸ್ವಿಸ್‌ನ ಜನರು ಮಲಗಲು ಪರದೆಗಳನ್ನು ಹೊಂದಿದ ಕೋಣೆಯಲ್ಲಿ ಹಾಸಿಗೆಯನ್ನು ತಲುಪಲು ಮೆಟ್ಟಿಲು ಹತ್ತುವುದು ಸಾಮಾನ್ಯ. ಆದರೆ ಜರ್ಮನಿಯಲ್ಲಿ ಪರದೆಗಳಿಲ್ಲದ ಕೋಣೆಯಲ್ಲಿ ನೆಲದ ಮೇಲೆ ಹಾಸಿದ ಹಾಸಿಗೆ ಮೇಲೆ ಮಲಗುವುದು ಸಹಜ. ಜರ್ಮನಿಯಲ್ಲಿ ಕೊಠಡಿಯನ್ನು ಬಿಸಿಯಾಗಿಡಲು ಕಬ್ಬಿಣದ ಒಲೆ ಬಳಸುವುದು ಸಾಮಾನ್ಯವಾದರೆ, ಫ್ರಾನ್ಸ್‌ನ ಜನರಿಗೆ ಆ ಒಲೆಯಿಂದ ಬರುವ ಘಾಟು ವಾಸನೆ ತಲೆನೋವು ತರಿಸುತ್ತದೆ. ಮೊಂಟೆಯ್ನ್‌ ಪ್ರವಾಸದಿಂದ ಬಂದಮೇಲೆ ಜರ್ಮನಿಯ ಕಬ್ಬಿಣದ ಒಲೆ ಹಾಗೂ ಫ್ರಾನ್ಸ್‌ನ ತೆರೆದ ಬೆಂಕಿಯ ಒಲೆಗಳನ್ನು ಹೋಲಿಕೆ ಮಾಡಿ, ತಮ್ಮ ಲೈಬ್ರರಿಗೆ ಕಬ್ಬಿಣದ ಒಲೆ ಹಾಕಿಸಿ, ಸಾಮಾನ್ಯ ಎಂಬುದನ್ನು ವಿಶಾಲ ಅರ್ಥದಲ್ಲಿ ವಿವರಿಸುವ ಪ್ರಯತ್ನ ಮಾಡುತ್ತಾರೆ.

‘ಎಲ್ಲ ದೇಶಗಳಿಗೂ ಪ್ರವಾಸಿಗನಾಗಿ ಹೋಗುತ್ತೇನೆ. ಆದರೆ ಭಾರತಕ್ಕೆ ನಾನು ತೀರ್ಥಯಾತ್ರಿಯಾಗಿ ಹೋಗುತ್ತೇನೆ’ ಎಂಬ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಅವರ ಮಾತುಗಳಿಂದ ಭಾರತದ ಪ್ರವಾಸೋದ್ಯಮವನ್ನು ಅರಿಯಬಹುದು. ದೇವರ ಸ್ವಂತ ನಾಡು, ಬೌದ್ಧ ಧರ್ಮದ ಉಗಮದಂತಹ ಸ್ಥಳಗಳ ದರ್ಶನ ಭಾರತದಲ್ಲಿ ಮಾತ್ರ ಸಾಧ್ಯ. ವರ್ಲ್ಡ್ ಎಕನಾಮಿಕ್ ಫೋರಂನ ಪ್ರವಾಸೋದ್ಯಮ ರ‍್ಯಾಂಕಿಂಗ್ ಪ್ರಕಾರ, ವಿಶ್ವದಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸುವ ದೇಶಗಳು ಸ್ಪೇನ್ ಹಾಗೂ ಫ್ರಾನ್ಸ್‌. ಈ ಪಟ್ಟಿಯಲ್ಲಿ ಭಾರತ 34ನೇ ಸ್ಥಾನದಲ್ಲಿದ್ದು, 2018ರ ವರದಿಯಂತೆ, ದೇಶದ ಜಿಡಿಪಿಗೆ ಶೇ 9.2ರಷ್ಟು ಕೊಡುಗೆಯನ್ನು ನೀಡುತ್ತಿದೆ. ಒಟ್ಟು ಉದ್ಯೋಗಗಳ ಶೇ 8.1ರಷ್ಟು ಉದ್ಯೋಗಗಳನ್ನು ಸೃಷ್ಟಿಸುತ್ತಾ ದೇಶದ ಆರ್ಥಿಕತೆಗೆ ಬೆನ್ನೆಲುಬಾಗಿದೆ.

‘ಅತುಲ್ಯ ಭಾರತ’ ಎಂಬ ಝೇಂಕಾರ ಮತ್ತು ‘ಅತಿಥಿ ದೇವೋಭವ’ ಎಂಬ ಧ್ಯೇಯವಾಕ್ಯದೊಂದಿಗೆ ಪ್ರಪಂಚದ ಪ್ರವಾಸೋದ್ಯಮದ ಅಗ್ರ 25 ದೇಶಗಳ ಪಟ್ಟಿಗೆ ಭಾರತ ಸೇರುವ ಕಾಲ ಸನ್ನಿಹಿತವಾಗಿದೆ. ಭಾರತದಲ್ಲಿ ರಾಜಸ್ಥಾನ, ಕೇರಳ ಮತ್ತು ಗೋವಾ ವಿಶಿಷ್ಟವಾಗಿ ವಿವಾಹವಾಗ ಬಯಸುವವರಿಗೆ ಉತ್ತಮ ಆಯ್ಕೆಗಳಾಗಿವೆ. ಅಂತರ್‌ದೇಶೀಯ ಪ್ರವಾಸೋದ್ಯಮ
ದಲ್ಲಿ ತಮಿಳುನಾಡು, ಉತ್ತರಪ್ರದೇಶದ ನಂತರ ಕರ್ನಾಟಕಕ್ಕೆ ಸ್ಥಾನವಿದೆ. ‘ಬನ್ನಿ ಒಮ್ಮೆ ಗುಜರಾತಿಗೆ’ ಎಂದು ಪ್ರವಾಸಕ್ಕೆ ಆಹ್ವಾನಿಸುವ ಮೇರುನಟ ಅಮಿತಾಭ್‌ ಬಚ್ಚನ್ ಆ ರಾಜ್ಯದ ಬ್ರ್ಯಾಂಡ್‌ ರಾಯಭಾರಿಯಾಗಿದ್ದಾರೆ. ನಮ್ಮ ಕರ್ನಾಟಕ ‘ಒಂದು ರಾಜ್ಯ ಅನೇಕ ವಿಶ್ವಗಳು’ ಘೋಷಣೆಯೊಂದಿಗೆ ಪ್ರವಾಸಪ್ರೇಮಿಯನ್ನು ಕೈ ಬೀಸಿ ಕರೆಯುತ್ತಿದೆ.

ಒಬ್ಬ ವ್ಯಕ್ತಿ ಪ್ರವಾಸಿಯಾಗಲು ಇರಬೇಕಾದ ಮುಖ್ಯ ಅರ್ಹತೆಯೆಂದರೆ, ಥಟ್ಟನೆ ನಮಗೆ ಹೊಳೆಯುವುದು ಹಣ ಎಂದು. ಆದರೆ ಅದು ಪೂರ್ಣ ಸತ್ಯವಲ್ಲ. ಬದಲಾಗಿ ‘ತನ್ನ ಆರಾಮ ವಲಯವನ್ನು ಬಿಟ್ಟು ಹೊರಬರುವ ಇಚ್ಛಾಶಕ್ತಿ’ ಎನ್ನುವ ತೊಮಿಸ್ಲಾವ್ ಪೆರ್ಕೊ, ಕನಿಷ್ಠ ಹಣದೊಂದಿಗೆ ವಿಶ್ವ ಪರ್ಯಟನೆಯ ಅನುಭವವನ್ನು ತಮ್ಮ ಟೆಡ್ ಟಾಕ್‌ನಲ್ಲಿ ಹಂಚಿಕೊಂಡಿದ್ದಾರೆ. ಐದು ವರ್ಷಗಳ ಕಾಲ ಅನೇಕ ದೇಶಗಳನ್ನು ಸುತ್ತಿದ ‘1000 ಡೇಸ್ ಆಫ್ ಸ್ಪ್ರಿಂಗ್’ ಪುಸ್ತಕದ ರಚನಕಾರ ಪೆರ್ಕೊ ಅವರ ಅನುಭವದ ಸಾರಾಂಶ, ಮಾಧ್ಯಮಗಳಲ್ಲಿ ಬರುವ ಭಯಾನಕ ವಿಷಯಗಳನ್ನು ನಂಬಬೇಡಿ, ಪ್ರಪಂಚದ ಜನರ ಮತ, ಧರ್ಮ, ಸಂಸ್ಕೃತಿಗಳಲ್ಲಿ ಭೇದವಿದೆ, ಆದರೆ ಜನರಲ್ಲಿಲ್ಲ ಎಂಬುದು ಬಹಳ ಅರ್ಥಪೂರ್ಣವಾಗಿದೆ.

ನಿಮ್ಮ ಪ್ರವಾಸವನ್ನು ವಿಶ್ವದಿಂದಾಚೆ ಮಾಡುವ ಹಿರಿದಾಸೆ ಇದ್ದರೆ ಅದಕ್ಕೂ ಉಪಾಯ ಇದೆ. ರಿಚರ್ಡ್‌ ಬ್ರಾನ್ಸನ್ ಅವರ ವರ್ಜಿನ್ ಗ್ರೂಪ್‌ನ ವರ್ಜಿನ್ ಗ್ಯಾಲಾಕ್ಟಿಕ್ ಕಂಪನಿಯು ಅಂತರಿಕ್ಷ ಪ್ರವಾಸ ಮಾಡಿಸುವ ಕಾರ್ಯಕ್ಕೆ ಕೈ ಹಾಕಿದೆ. ಈ ಕಮರ್ಷಿಯಲ್ ಸ್ಪೇಸ್ ಫ್ಲೈಟ್‌ ಸದ್ಯದಲ್ಲೇ ಕಾರ್ಯ ಆರಂಭಿಸುವ ತಯಾರಿಯಲ್ಲಿದೆ.

‘ಪ್ರವಾಸಿಗರೇ ನಿಮ್ಮ ಮನೆಗೆ ಹೋಗಿ’ ಎಂಬ ಫಲಕದೊಂದಿಗೆ ಬಾರ್ಸಿಲೋನಾದ ಜನ ಬೀದಿಗಿಳಿದು ಪ್ರತಿಭಟನೆ ನಡೆಸಿದರು. ‘ಪ್ರವಾಸಿಗರ ಹೆಚ್ಚಳದಿಂದ ನಮ್ಮ ನೆರೆಹೊರೆ ನಾಶವಾಗುತ್ತದೆ, ನಾವೆಲ್ಲಾ ಗುಲಾಮರಾಗುತ್ತಿದ್ದೇವೆ’ ಎಂಬುದು ಅವರ ಕೂಗಾಗಿತ್ತು. ಇದು ಯಾವುದೋ ಮೂಲೆಯಲ್ಲಿ ಎಲ್ಲಾ ದೇಶಗಳು ಮೌನವಾಗಿ ಅನುಭವಿಸುತ್ತಿರುವ ನೋವಾಗಿದೆ.

ಪ್ರವಾಸೋದ್ಯಮದಿಂದ ಒಂದು ಪ್ರದೇಶ ಖಾಸಗಿತನವನ್ನು ಕಳೆದುಕೊಂಡು ಸಂತೆಯಲ್ಲಿ ನಿಲ್ಲುತ್ತದೆ. ಆದರೆ ಅಪಾರ ಲಾಭವನ್ನು ತಂದುಕೊಡುವ ಪ್ರವಾಸೋದ್ಯಮವನ್ನು ತಿರಸ್ಕರಿಸುವುದಾದರೂ ಹೇಗೆ? ಬದಲಾಗಿ, ಒಂದು ಉಭಯ ಸಾಮಾನ್ಯ ಮಾರ್ಗವನ್ನು ಅನುಸರಿಸುವ ಅನಿವಾರ್ಯವು ಸುಸ್ಥಿರ ಪ್ರವಾಸೋದ್ಯಮಕ್ಕೆ ದಾರಿಯಾಗುತ್ತದೆ. ಸುಸ್ಥಿರ ಪ್ರವಾಸೋದ್ಯಮವು ಸಾರಿಗೆ, ನೈಸರ್ಗಿಕ ಸಂಪತ್ತಿನ ಬಳಕೆ ಮುಂತಾದವುಗಳಿಗೆ ಪರ್ಯಾಯ ಮಾರ್ಗಗಳನ್ನು ಅನುಸರಿಸುತ್ತದಲ್ಲದೆ, ಪ್ರವಾಸಿಗರ ಆನಂದ ಮತ್ತು ಸ್ಥಳೀಯರ ಹಿತ ಎರಡನ್ನೂ ಸರಿದೂಗಿಸುತ್ತದೆ. ಜವಾಬ್ದಾರಿಯುತ ಪ್ರವಾಸಿಗರನ್ನು ಸೃಷ್ಟಿಸಲು ಅವರ ಪ್ರತಿಕ್ರಿಯೆಗಳನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ತೋರುವ ಡಿಜಿಟಲ್ ಸಾಧನಗಳು ಪ್ರವಾಸಿ ಸಂಸ್ಥೆಗಳಿಗೂ ಲಭ್ಯವಾಗಬೇಕು. ಆಗಲೇ ಸುಸ್ಥಿರ ಪ್ರವಾಸೋದ್ಯಮ ಸದೃಢವಾಗಬಲ್ಲದು.

ಪ್ರತಿಯೊಂದು ಪ್ರವಾಸಿ ತಾಣವೂ ತನ್ನದೇ ಆದ ಅನುಭವವನ್ನು ನೀಡುತ್ತದೆ. ಈ ಅನುಭವಗಳಿಗೆ ಜೀವನದ ಬಗೆಗಿನ ನಮ್ಮ ದೃಷ್ಟಿಕೋನವನ್ನು ಬದಲಿಸುವ ಶಕ್ತಿ ಇದೆ ಮತ್ತು ಕಾಲಘಟ್ಟದಲ್ಲಿ ಆ ಅನುಭವಗಳನ್ನು ಸರಿಯಾಗಿ ಬಳಸಿಕೊಳ್ಳುವವನೇ ನಿಜವಾದ ಪ್ರವಾಸಿ. ಕಾದಂಬರಿಕಾರ ಪಾಲ್‌ ಥೆರಾಕ್ಸ್‌ ಅವರು ಹೇಳುವ ಹಾಗೆ, ಪ್ರವಾಸಿಗನಿಗೆ ತಾನು ಎಲ್ಲಿಗೆ ಹೋಗಿದ್ದೆ ಎಂಬುದು ನೆನಪಿರುವುದಿಲ್ಲ, ತಾನು ಎಲ್ಲಿಗೆ ಹೊರಟಿದ್ದೇನೆ ಎಂಬ ಅರಿವಿರುವುದಿಲ್ಲ, ಆದರೆ ಜೀವನದ ಅನನ್ಯ ಅನುಭವಗಳು ಸಿಗುವುದು ಒಬ್ಬ ಪ್ರವಾಸಿಗನು ಪ್ರಯಾಣಿಕನಾದಾಗಲೇ. ಅಂದಹಾಗೆ, ನಾಳೆ (ಸೆ. 27) ವಿಶ್ವ ಪ್ರವಾಸೋದ್ಯಮ ದಿನ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು