ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಶವ ಎಚ್. ಕೊರ್ಸೆ ವಿಶ್ಲೇಷಣೆ: ಬೆಟ್ಟದಡಿ ಹುಲ್ಲಿರದೇ, ಬೆಳೆ ಕೈಗೆ ಬಂದೀತೆ?

ಕೃಷಿಭೂಮಿಗೆ ವನ್ಯಪ್ರಾಣಿ ದಾಳಿ ನಿಯಂತ್ರಿಸಲು ಸಮಗ್ರ ದೃಷ್ಟಿಕೋನದ ಪ್ರಯತ್ನಗಳು ಬೇಕು
Last Updated 16 ಸೆಪ್ಟೆಂಬರ್ 2020, 19:31 IST
ಅಕ್ಷರ ಗಾತ್ರ
ADVERTISEMENT
""

ಮಲೆನಾಡಿನ ಹಲವೆಡೆ ಕ್ಷೇತ್ರ ಅಧ್ಯಯನಕ್ಕಾಗಿ ತೆರಳಬೇಕಾದ ಸಂದರ್ಭ ಇತ್ತೀಚೆಗೆ ಬಂತು. ಕೃಷಿ ಇಲಾಖೆಯಿಂದ ಈ ಹಂಗಾಮಿನ ಬೆಳೆ ಸಮೀಕ್ಷೆ ನಡೆಯುವ ಸಮಯವದು. ಬೆಳೆವೈವಿಧ್ಯ ಹಾಗೂ ಉತ್ಪಾದನೆಯನ್ನು ಅಂದಾಜಿಸುವುದು ಇದರ ಉದ್ದೇಶ. ಬಿತ್ತನೆ, ನಾಟಿ, ಗೊಬ್ಬರ ಹಾಕುವುದು, ಮದ್ದು ಸಿಂಪರಣೆ ಇತ್ಯಾದಿಗಳನ್ನೆಲ್ಲ ಪೂರೈಸಿ, ಒಳ್ಳೆಯ ಇಳುವರಿ ನಿರೀಕ್ಷೆಯಲ್ಲಿರಬೇಕಾದ ರೈತರ ಮೊಗದಲ್ಲಿ ಮಂದಹಾಸ ನಿರೀಕ್ಷಿಸಿದ್ದೆ. ಆದರೆ, ಫಸಲು ಬೆಳೆಯುವ ಮುನ್ನವೇ ಹೊಲಗದ್ದೆಗಳಲ್ಲಿ ಕಾಡುಪ್ರಾಣಿ ಹಾವಳಿ ಸೃಷ್ಟಿಸಿದ ಅಧ್ವಾನಗಳನ್ನು ಎಲ್ಲೆಡೆ ನೋಡಬೇಕಾಯಿತು.

ಹಗಲು ಮಂಗ, ನವಿಲುಗಳ ಕಾಟ. ಸೂರ್ಯಾಸ್ತದ ನಂತರ ರಾತ್ರಿದೃಷ್ಟಿಯುಳ್ಳ ಸಸ್ತನಿಗಳ ದಾಳಿ. ಮಂಗ ತಿಂದ ಬಾಳೆತೋಟ, ಕಾಡೆಮ್ಮೆ ಮೇಯ್ದ ಭತ್ತದ ಗದ್ದೆ, ಜಿಂಕೆ- ಮೊಲಗಳು ಕುಪ್ಪಳಿಸಿದ ತರಕಾರಿ ಪಾತಿಗಳು, ಕಾಡುಹಂದಿ ಅಗೆದ ಅಡಿಕೆ ತೋಟ, ಮುಳ್ಳುಹಂದಿ ಕೊರೆದ ತೆಂಗಿನ ಮರದ ಬುಡಗಳು- ಒಂದೊಂದನ್ನೂ ರೈತರು ನೋವು ಹಾಗೂ ಸಿಟ್ಟಿನಿಂದ ತೋರಿಸುತ್ತಿದ್ದರು.

ಜಮೀನಿನ ಪಕ್ಕದ ಜೀವವೈವಿಧ್ಯಭರಿತ ಕಾಡೆಂದರೆ, ಪೋಷಕಾಂಶ ಹಾಗೂ ಜಲಚಕ್ರ ಪರಿಸರ ವ್ಯವಸ್ಥೆಗಳನ್ನು ನಿರ್ವಹಿಸುತ್ತ ಕೃಷಿಯನ್ನು ಪೋಷಿಸುವ ತಾಯಿಯಂತೆ ಎಂಬ ಪಾರಂಪರಿಕ ರೈತರ ಅರಿವನ್ನು, ಬೆಳೆಹಾನಿಯಿಂದ ಉಕ್ಕಿದ ಕೋಪವು ನುಂಗಿಹಾಕಿದಂತಿತ್ತು! ಇಲ್ಲವಾದರೆ, ತಮ್ಮೆಲ್ಲ ಸಮಸ್ಯೆಗಳಿಗೆ ಕಾಡುಪ್ರಾಣಿಗಳು ಹಾಗೂ ಅವನ್ನು ನಿರ್ವಹಿಸಬೇಕಾದ ಅರಣ್ಯ ಇಲಾಖೆಯೇ ಕಾರಣವೆಂದು ಆರೋಪಿಸುತ್ತಿದ್ದರೇ?

ಇದು ಒಂದೂರಿನ ಸಮಸ್ಯೆಯಲ್ಲ. ಕರಾವಳಿ ಹಾಗೂ ಮಲೆನಾಡಿನೆಲ್ಲೆಡೆ ತೀವ್ರವಾಗುತ್ತಿರುವ ಮಾನವ- ವನ್ಯಜೀವಿ ಸಂಘರ್ಷದ ವಿದ್ಯಮಾನ. ಪ್ರತಿವರ್ಷವೂ ಬೆಳೆಹಾನಿ ಹೆಚ್ಚುತ್ತಿದೆ ಎಂದು ಅಧ್ಯಯನಗಳು ಹೇಳುತ್ತಿವೆ. ‘ರೈತರಿಗೆ ನೀವೇ ಆಸರೆಯಾಗಬೇಕಲ್ಲವೇ’ ಎಂದು ಅರಣ್ಯ ಇಲಾಖೆಯವರನ್ನು ಕೇಳಿದರೆ, ತಾವು ಕೈಗೊಂಡ ಕಾರ್ಯಗಳ ಪಟ್ಟಿಯನ್ನೇ ನೀಡುತ್ತಾರೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ ಅನ್ವಯ ಬೆಳೆಹಾನಿಗೆ ಅನುಕಂಪದಿಂದ ನೀಡಿದ ಹಣಕಾಸು ನೆರವಿನ ಅಂಕಿಅಂಶ ಮುಂದಿಡುತ್ತಾರೆ. ಕಾಡಿನಂಚಲ್ಲಿ ನಿರ್ಮಿಸಿದ ಆನೆ ನಿರೋಧಕ ಕಂದಕ, ಸೌರವಿದ್ಯುತ್ ಆಧಾರಿತ ವಿದ್ಯುತ್ ಬೇಲಿ ರಚಿಸಲು ನೀಡಿದ ಸಹಾಯಧನ, ಅಭಯಾರಣ್ಯದ ಸುತ್ತಲೂ ನಿರ್ಮಿಸಿದ ಬೃಹತ್ ಕಬ್ಬಿಣದ ಕಂಬಿಗಳು ಇತ್ಯಾದಿ ವಿವರಗಳನ್ನೆಲ್ಲ ಒದಗಿಸುತ್ತಾರೆ.

ನ್ಯಾಯಾಲಯದ ಆದೇಶದಂತೆ ರಚಿಸಿದ ‘ಆನೆ-ಕಾರ್ಯಪಡೆ’ಯ ಶಿಫಾರಸಿನಂತೆ, ದಾಳಿಕೋರ ಆನೆಗಳನ್ನು ಬೇರೆಡೆ ಸ್ಥಳಾಂತರಿಸಿಯೂ ಆಗಿದೆ. ಆದರೂ ರೈತರ ಹೊಲಕ್ಕೆ ಕಾಡುಪ್ರಾಣಿಗಳ ದಾಳಿ ಮಾತ್ರ ಮುಂದುವರಿದಿದೆ! ಕೋಟ್ಯಂತರ ರೂಪಾಯಿ ಮೌಲ್ಯದ ಬೆಳೆ ನಷ್ಟವಾಗುತ್ತಿರುವುದನ್ನು ಸ್ಥಳಸಮೀಕ್ಷೆಗಳು ತೋರಿಸುತ್ತಿವೆ. ಬೇಸಿಗೆಯಲ್ಲಿ ನೀರಿನ ಕೊರತೆ ಹಾಗೂ ಮಳೆಗಾಲದ ಪ್ರವಾಹದ ಜೊತೆ ಕಾಡುಪ್ರಾಣಿ ಹಾವಳಿಯೂ ಕೃಷಿ ಉತ್ಪಾದನೆಗೆ ದೊಡ್ಡ ತೊಡಕಾಗಿ ಹೊರಹೊಮ್ಮಿದೆ.

ಹಾಗಿದ್ದಲ್ಲಿ ಸಮಸ್ಯೆಯ ಮೂಲವೇನು ಎಂದು ವನ್ಯಜೀವಿ ಹಾಗೂ ಪರಿಸರ ತಜ್ಞರನ್ನು ಕೇಳಿದರೆ, ಈ ಬಿಕ್ಕಟ್ಟಿನ ಹಿಂದಿರುವ ಬಹುಮುಖಿ ಆಯಾಮಗಳನ್ನು ತೆರೆದಿಡುತ್ತಾರೆ. ಅರಣ್ಯವೆಲ್ಲ ಛಿದ್ರವಾಗುತ್ತಿರುವುದು, ಆನೆಯಂಥ ಸಸ್ತನಿಗಳ ವಲಸೆ ದಾರಿ ತುಂಡಾಗುತ್ತಿರು
ವುದು, ಅಳಿದುಳಿದ ಕಾಡೂ ಅತಿಕ್ರಮಣ ಹಾಗೂ ಬೃಹತ್ ಅಭಿವೃದ್ಧಿ ಯೋಜನೆಗಳಿಗೆ ಬಲಿಯಾಗುತ್ತಿರುವುದು, ಕ್ವಾರಿ- ಗಣಿಗಳು ಹೊಳೆತೊರೆಗಳನ್ನು ಒಣಗಿಸುತ್ತಿರುವುದು, ಗೋಮಾಳ- ಕಿರುಅರಣ್ಯಗಳ ಹುಲ್ಲುಗಾವಲೆಲ್ಲ ಅಕೇಶಿಯಾ, ನೀಲಗಿರಿ ನೆಡುತೋಪಿಗೆ ಬಲಿಯಾಗಿ ಕಾಡಿನಲ್ಲಿ ಮೇವು ಮಾಯವಾಗಿರುವುದು- ಈ ಕುರಿತೆಲ್ಲ ಪ್ರಕಟವಾದ ವೈಜ್ಞಾನಿಕ ವರದಿಗಳನ್ನು ಬಿಚ್ಚಿಡುತ್ತಾರೆ.

ಕಾಡಿನಲ್ಲಿ ಸಹ ವಿಷಕ್ಕೆ ಶವವಾಗುತ್ತಿರುವ ಹುಲಿಗಳು, ಉರುಳಿಗೆ ಕೊರಳೊಡ್ಡಿದ ಹಂದಿ, ಜಿಂಕೆ, ಮೊಲಗಳು, ಬೇಟೆಗೆ ಬಲಿಯಾದ ಕಾಡುಕೋಣ, ಕಡವೆಗಳು, ವಿದ್ಯುತ್ ತಂತಿ ಹಾದು ಜೀವಬಿಟ್ಟ ಆನೆ-ಇಂಥವೆಲ್ಲ ಛಾಯಾಚಿತ್ರಗಳನ್ನು ನೋಡಿದರೆ, ಕಾಡಿನಲ್ಲೂ ಅವು ಸುರಕ್ಷಿತವಾಗಿಲ್ಲ ಎನ್ನುವುದು ಖಚಿತವಾಗುತ್ತದೆ. ಅಭಿವೃದ್ಧಿಯ ಹೆಸರಿನ ಅವೈಜ್ಞಾನಿಕ ಯೋಜನೆಗಳು ಹಾಗೂ ನೈಸರ್ಗಿಕ ಸಂಪನ್ಮೂಲಗಳ ಕುರಿತು ನಿರ್ಲಕ್ಷ್ಯ- ಇವೆರಡೂ ಜೊತೆಯಾದದ್ದರ ಪರಿಣಾಮವಿದು.

ಇತ್ತ ಕೃಷಿ ಕ್ಷೇತ್ರದಲ್ಲೂ ನೆಲಬಳಕೆ ನೀತಿ, ಜಲಾನಯನ ಅಭಿವೃದ್ಧಿ, ಕೃಷಿ ಅರಣ್ಯ ಪದ್ಧತಿ, ಪಾರಂಪರಿಕ ಬೆಳೆವೈವಿಧ್ಯ ಇತ್ಯಾದಿಗಳಿಗೆ ಆದ್ಯತೆ ಇಲ್ಲದಾಗಿ, ಕೃಷಿ ಪರಿಸರದ ಸಂರಚನೆ ಏರುಪೇರಾಗುತ್ತಿದೆ. ಇದರಿಂದಾಗಿ ಬೇಸಾಯ ಕ್ರಮಗಳು ಹಾಗೂ ವನ್ಯಜೀವಿಗಳ ನಡುವೆ ಅನಾದಿಯಿಂದ ವಿಕಸಿತವಾಗಿದ್ದ ಸೂಕ್ಷ್ಮ ಸಮತೋಲನವೇ ಕಡಿದುಬೀಳುತ್ತಿರುವುದನ್ನು ಸಂಶೋಧನೆಗಳು ತೋರಿಸುತ್ತಿವೆ.‌

ಕೇಶವ ಎಚ್. ಕೊರ್ಸೆ

ಈ ಸವಾಲುಗಳನ್ನು ನಿಭಾಯಿಸುವುದು ಹೇಗೆ? ಅಧ್ಯಯನಗಳು ಮೂರು ಆಯಾಮಗಳ ದಾರಿಗಳನ್ನು ಸೂಚಿಸುತ್ತಿವೆ. ಒಂದನೆಯದು, ವನ್ಯಪ್ರಾಣಿ ದಾಳಿಯಿಂದಾದ ವಾಸ್ತವ ಬೆಳೆಹಾನಿಯನ್ನು ಪರಿಗಣಿಸಿ ಸೂಕ್ತ ಪರಿಹಾರವನ್ನು ತಕ್ಷಣ ನೀಡುವ ವೈಜ್ಞಾನಿಕ ವಿಧಾನವನ್ನು ಜಾರಿಗೆ ತರುವುದು. ಕಾಡುಪ್ರಾಣಿ ದಾಳಿಯ ಸ್ವರೂಪ, ತೀವ್ರತೆ ಹಾಗೂ ಆವರ್ತನೆಗಳನ್ನು ಎಲ್ಲೆಡೆ ಅಧ್ಯಯನ ಮಾಡಿ ಸಶಕ್ತ ಮಾಹಿತಿಕೋಶ ರೂಪಿಸಿದರೆ ಇದು ಸುಲಭವಾಗಬಲ್ಲದು. ವನ್ಯಪ್ರಾಣಿ ನಿಯಂತ್ರಣದಲ್ಲಿ ಹಳ್ಳಿಗರ ಪಾಲುಗಾರಿಕೆಯೂ ಆಗ ಹೆಚ್ಚಾಗಬಲ್ಲದು. ಆದರೆ, ಕೇವಲ ಸುತ್ತೋಲೆಗಳನ್ನು ಆಧರಿಸಿಯೇ ಅರಣ್ಯ ಇಲಾಖೆಯು ಈಗ ನೀಡುತ್ತಿರುವ ಪರಿಹಾರದ ನಿಯಮಗಳಲ್ಲಿ ಅನೇಕ ಗೊಂದಲ ಹಾಗೂ ಕೊರತೆಗಳಿವೆ. ಇವನ್ನೆಲ್ಲ ಸರಿಪಡಿಸಿ, ಸಮಗ್ರ ದೃಷ್ಟಿಯುಳ್ಳ ಹೊಸ ಕಾನೂನೊಂದನ್ನು ರೂಪಿಸಬೇಕಾದದ್ದು ಇಂದಿನ ಅಗತ್ಯವಾಗಿದೆ.

ಎರಡನೆಯದು, ಕಾಡುಪ್ರಾಣಿಗಳನ್ನು ಹೊಲಗದ್ದೆಗಳಿಂದ ದೂರವಿಡುವ ಪಾರಂಪರಿಕ ಕೌಶಲಗಳನ್ನು ಮುನ್ನೆಲೆಗೆ ತರುವುದು. ಬೆದರುಗೊಂಬೆಯಿರಿಸಿ ಪಕ್ಷಿ ಓಡಿಸುವುದು, ಶಬ್ದ ಹೊಮ್ಮಿಸಿ ಹಂದಿ, ಜಿಂಕೆಗಳನ್ನು ದೂರವಿಡುವುದು, ಪಟಾಕಿ ಸಿಡಿಸಿ ಆನೆ ಬಾರದಂತೆ ನೋಡಿಕೊಳ್ಳುವುದು, ಒಣಮೀನು-ಮೆಣಸಿನಪುಡಿ ಇಟ್ಟು ಮಂಗನನ್ನು ಹೊರಗಟ್ಟುವಂತಹ ಅನೇಕ ತಂತ್ರಗಳು ಕೃಷಿಕರ ಬಳಿಯಿವೆ. ಗ್ರಾಮಸ್ಥರೇ ರಾತ್ರಿ ಪಹರೆ ಮಾಡುವ ಹಳ್ಳಿಗಳೂ ಇವೆ. ಈ ಬಗೆಯ ಸೂಕ್ತ ಪರಿಸರಸ್ನೇಹಿ ಕ್ರಮಗಳನ್ನು ಹಳ್ಳಿಗರು ಸಾಮೂಹಿಕವಾಗಿ ಅಳವಡಿಸಿಕೊಳ್ಳುವ ವಾತಾವರಣವನ್ನು ರೂಪಿಸಬೇಕಿದೆ.

ನರೇಗಾ ಯೋಜನೆಯಡಿ ರೈತರ ಸ್ವಸಹಾಯ ಗುಂಪುಗಳು ಅಥವಾ ಗ್ರಾಮ ಅರಣ್ಯ ಸಮಿತಿಗಳನ್ನು ಈ ದಿಸೆಯಲ್ಲಿ ಪ್ರೇರೇಪಿಸಲು ಸಾಧ್ಯವಿದೆ. ಪಂಚಾಯಿತಿ ಮಟ್ಟದಲ್ಲಿ ಈ ಬಗೆಯ ನವೀನ ಚಿಂತನೆಗೆ ಆದ್ಯತೆ ದೊರೆತರೆ, ಪರಿಹಾರದ ಹೊಸ ದಾರಿಗಳು ತೆರೆಯಬಲ್ಲವು.

ಅಂತಿಮವಾಗಿ ಹಾಗೂ ಮುಖ್ಯವಾಗಿ ಗಮನಿಸಬೇಕಾದದ್ದು, ಸಶಕ್ತ ಅರಣ್ಯ ಸಂರಕ್ಷಣಾ ನೀತಿಯೊಂದರ ಅನುಷ್ಠಾನದ ಕುರಿತು. ಕಾಡಿನಲ್ಲಿ ಹಣ್ಣುಹಂಪಲು, ಹುಲ್ಲು, ಬಿದಿರು ಇವೆಲ್ಲ ಸಾಕಷ್ಟಿದ್ದರೆ ಹಾಗೂ ಕೆರೆ-ತೊರೆಗಳಲ್ಲಿ ನೀರಿದ್ದರೆ, ಕಾಡುಪ್ರಾಣಿಗಳು ನಾಡಿಗೆ ಬರುವ ಸಂದರ್ಭಗಳು ಕಡಿಮೆಯಾಗುತ್ತವೆ. ಶಿವಮೊಗ್ಗದಂಥ ಜಿಲ್ಲೆಯಲ್ಲಿ ವಿಸ್ತಾರವಾದ ಕಾನು-ಅರಣ್ಯವನ್ನು ರೈತರ ಹೆಸರಿನಲ್ಲಿ ಈಗಲೂ ಬಲಾಢ್ಯರು ಅತಿಕ್ರಮಿಸುತ್ತಿರುವುದನ್ನು ತಡೆಯಬೇಕಿದೆ. ಮೈಸೂರ್‌ ಪೇಪರ್ ಮಿಲ್ಸ್‌, ಗೇರು ಅಭಿವೃದ್ಧಿ ನಿಗಮ, ಹಲವಾರು ಖಾಸಗಿ ಉದ್ಯಮಗಳು ಇವೆಲ್ಲ ಅರಣ್ಯ ಇಲಾಖೆಯಿಂದ ಗುತ್ತಿಗೆ ಅಧಾರದಲ್ಲಿ ಪಡೆದ ವಿಶಾಲವಾದ ಮಳೆಕಾಡಲ್ಲಿ ಸ್ಥಳೀಯ ಪ್ರಭೇದಗಳ ಪೋಷಣೆಗೆ ಆದ್ಯತೆ ನೀಡಬೇಕಿದೆ.

ಸಮಗ್ರ ಹಾಗೂ ದೂರಗಾಮಿ ದೃಷ್ಟಿಕೋನವುಳ್ಳ ನೀತಿಯೊಂದು ಇಂದಿನ ಜರೂರತ್ತಾಗಿದೆ. ಇಲ್ಲವಾದಲ್ಲಿ ‘ಮಂಗನ ಪಾರ್ಕ್‌’ ತರಹದ ಸಾಧುವಲ್ಲದ ಕಲ್ಪನೆಗಳು ತೇಲಿಬರುತ್ತವೆ. ನಾಡಿನಲ್ಲಿರುವ ಲಕ್ಷಾಂತರ ಮಂಗಗಳಿಗೆ ಎಲ್ಲೆಲ್ಲಿ ಎಷ್ಟೆಂದು ಈ ಬಗೆಯ ಪಾರ್ಕುಗಳನ್ನು ನಿರ್ಮಿಸಿ, ನಿರ್ವಹಿಸಬಹುದು? ಕಾಡುಹಂದಿ, ನವಿಲು, ಕೆಂದಳಿಲು, ಬಾವಲಿಯಂಥ ಉಳಿದ ಪ್ರಾಣಿಹಾವಳಿಗೆ ಏನು ಮಾಡುವುದು? ವನ್ಯಜೀವಿಗಳೆಲ್ಲವೂ ಕೃಷಿಗೆ ಮಾರಕವಲ್ಲ ಹಾಗೂ ಅವು ಕಾಡಲ್ಲೇ ಇರುವಂಥ ಪರಿಸರ ನಿರ್ಮಿಸಬೇಕೆಂಬ ವಿವೇಕ ಆಡಳಿತದಲ್ಲಿ ಮೂಡಬೇಕಷ್ಟೇ.

ಕಾಡು- ಗೋಮಾಳಗಳಲ್ಲಿ ಹುಲ್ಲು- ಗಿಡಮರಗಳ ಹಸಿರು ಹಾಗೂ ನೀರಿನ ಹರಿವು ಹೆಚ್ಚತೊಡಗಿದಂತೆಲ್ಲ, ಕೃಷಿಕರ ಕಣಜದಲ್ಲಿ ಫಸಲೂ ತುಂಬತೊಡಗಬಲ್ಲದು. ಸರ್ಕಾರ ನಡೆಸುವ ಬೆಳೆ ಸಮೀಕ್ಷೆಯನ್ನು ರೈತರೂ ಆಗ ಮನಸಾರೆ ಸ್ವಾಗತಿಸಿಯಾರು.

ಲೇಖಕ: ನಿರ್ದೇಶಕ, ಸಂರಕ್ಷಣಾ ಜೀವಶಾಸ್ತ್ರ ಮತ್ತು ಸುಸ್ಥಿರ ಅಭಿವೃದ್ಧಿ ಅಧ್ಯಯನ ಕೇಂದ್ರ, ಶಿರಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT