ಗುರುವಾರ , ಆಗಸ್ಟ್ 11, 2022
23 °C
ನಿರುದ್ಯೋಗ ಏನನ್ನು ಬೇಕಾದರೂ ಮಾಡಿಸುತ್ತದೆ, ಎಂಥ ಶೋಷಣೆಗಾದರೂ ಒಳಗಾಗುತ್ತದೆ

ಕೃಷ್ಣಮೂರ್ತಿ ಹನೂರು ಬರಹ: ಕಟ್ಟಾಳು ಕಡು ಜಾಣನಾದರೂ...

ಕೃಷ್ಣಮೂರ್ತಿ ಹನೂರು Updated:

ಅಕ್ಷರ ಗಾತ್ರ : | |

Prajavani

ಕನ್ನಡಕ್ಕೆ ನಟರಾಜ ಬೂದಾಳು ಅವರಿಂದ ಇತ್ತೀಚೆಗೆ ಅನುವಾದಗೊಂಡಿರುವ ಲಾವೋತ್ಸೆಯ ‘ದಾವ್ ದ ಜಿಂಗ್’ ಕೃತಿಯ ಒಂದು ಸೂಕ್ತಿಯ ಸಾಲುಗಳು ಹೀಗಿವೆ- ‘ನಿಷೇಧಗಳನ್ನು ಹೇರಿದಷ್ಟೂ ಜನ ದರಿದ್ರರಾಗುತ್ತಾರೆ| ಜನ ದರಿದ್ರರಾದಷ್ಟೂ ಆಯುಧಗಳು ಹರಿತವಾಗುತ್ತವೆ| ಸಾಮ್ರಾಜ್ಯಗಳು ಕತ್ತಲಿಗೆ ಸರಿದಷ್ಟೂ| ಆಕರ್ಷಕ ಯೋಜನೆಗಳು ಜಾರಿಯಾಗುತ್ತವೆ| ಎಂದೂ ಕಾಣದ ಪ್ರಯೋಜನಗಳು ದೊರಕುತ್ತವೆ| ಖಜಾನೆ ಭದ್ರವಾದಷ್ಟೂ ಕಳ್ಳರು ಚುರುಕಾಗುತ್ತಾರೆ...’ ಇದೇನು ವರ್ತಮಾನದ ವಿದ್ಯಮಾನ ಮಾತ್ರವಲ್ಲ, ಸಾವಿರಾರು ವರ್ಷಗಳ ಚರಿತ್ರೆಯ ಕಥೆ. ಯಾಕೆಂದರೆ ಲಾವೋತ್ಸೆ ಚೀನಾದಲ್ಲಿ ಇದನ್ನು ಬರೆದದ್ದೇ ಕ್ರಿ.ಪೂ. ಆರನೇ ಶತಮಾನದಲ್ಲಿ!

ಕಳೆದ ಶತಮಾನಗಳ ಸಿಂಹಾಸನಸ್ಥರು ಮುಗ್ಧರ ಕೈಗೆ ಆಯುಧ ಕೊಟ್ಟು ‘ನನಗಾಗಿಯೇ ಯುದ್ಧ ಮಾಡು’ ಎಂದು ಹೇಳಿಕೊಟ್ಟಂತೆ, ಈ ಹೊತ್ತೂ ಯುವಸಮೂಹವನ್ನು ಸನಿಹಕ್ಕೆ ಕರೆದು ತಲೆ ಸವರಿ, ನೀನು ನಿರಂತರ ನನ್ನ ಪರ ಘೋಷಣೆ ಕೂಗುತ್ತಿರು, ಸನ್ಮಾನ ಸಮಾರಂಭಗಳಿಗೆ ಹಾಜರಾಗು, ಚುನಾವಣೆ ಗಳಿಗೆಯಲ್ಲಿ ಹೊಡೆದಾಡು, ಮಿಕ್ಕಂತೆ ನಿರುದ್ಯೋಗಿಯಾಗಿರು ಎನ್ನುವುದು ಹೊಸ ಜಾಯಮಾನವೇನಲ್ಲ. ತನ್ನದೇ ಕಾಯಕ ಎಂಬುದು ಇಲ್ಲವಾದಲ್ಲಿ ನಿರುದ್ಯೋಗ ಏನನ್ನು ಬೇಕಾದರೂ ಮಾಡಿಸುತ್ತದೆ, ಎಂಥ ಶೋಷಣೆಗಾದರೂ ಒಳಗಾಗುತ್ತದೆ.

ಕರ್ನಾಟಕದಲ್ಲಿ ಎಕ್ಸ್‌ಪ್ರೆಸ್ ರೈಲು ಸಂಚಾರ ಈವರೆಗೆ ನಿಂತು ಹೋಗಿತ್ತು. ವೇಗದ ಪ್ರಯಾಣಿಕರ ಮಾತು ಹಾಗಿರಲಿ, ಪ್ಯಾಸೆಂಜರ್ ರೈಲು ನಿಂತಿರುವುದರಿಂದ ಬಡವರ ಬದುಕಿನ ಚಕ್ರವು ಸ್ಥಗಿತಗೊಂಡಿದೆ. ದಕ್ಷಿಣ ಕರ್ನಾಟಕದ ಚಾಮರಾಜನಗರದಿಂದ ಬೆಳಗಿನ ಏಳು ಗಂಟೆಗೆ ಹೊರಡುವ ಪ್ಯಾಸೆಂಜರ್, ದಾರಿಯ ಹತ್ತಾರು ಗ್ರಾಮಗಳ ಜನಸಮೂಹವನ್ನು ಮೈಸೂರಿಗೆ ಹೊತ್ತು ತರುತ್ತದೆ. ರೈಲಿನ ಬೋಗಿಗಳಲ್ಲೆಲ್ಲಾ ಜನ ಕಿಕ್ಕಿರಿದು ತುಂಬಿರುತ್ತಾರೆ.

ಕರ್ನಾಟಕದ ಉತ್ತರ ತುದಿಯ ಕಲಬುರ್ಗಿಯ ಭಾಗದಲ್ಲಿ ಹಾಗೂ ಮಧ್ಯ ಕರ್ನಾಟಕದ ದಾವಣಗೆರೆ, ಹರಿಹರ ಮಾರ್ಗದಲ್ಲಿ ಅದೇ ದೃಶ್ಯವಿದೆ. ಬೆಂಗಳೂರು, ಚಿಕ್ಕಬಳ್ಳಾಪುರ, ಕೋಲಾರ ಮಾರ್ಗದಲ್ಲಿಯೂ ಜನ ನಿತ್ಯ ಸಂಚಾರ ಮಾಡುತ್ತಾರೆ. ಈಗ ಎಂಟು ಒಂಬತ್ತು ತಿಂಗಳಿಂದ ಪ್ಯಾಸೆಂಜರ್ ಸಂಚಾರ ನಿಂತುಹೋಗಿದೆ. ಹಾಗೊಮ್ಮೆ ಈ ಜನ ತಮ್ಮ ಸಂಚಾರದಲ್ಲಿ ಆಡುವ ಮಾತುಕತೆ ಎಂದರೆ, ರೈಲು ನಗರ ಪ್ರವೇಶ ಮಾಡುತ್ತಿದ್ದಂತೆಯೇ ಆಕಾಶ ಮುಟ್ಟುತ್ತಿರುವಂತಹ ಯಾವುದಾದರೂ ಬಹುಮಹಡಿ ಸಮುಚ್ಚಯ ಕಣ್ಣಿಗೆ ಬಿದ್ದಲ್ಲಿ, ‘ಎಲಾ, ಈ ಥರದ ಒಂದು ಬಿಲ್ಡಿಂಗು ಸಿಕ್ಕಿದರೆ ನೋಡಪ್ಪ ಎರಡು ವರ್ಷ ಗಾರೆ ಕೆಲಸ ಗ್ಯಾರಂಟಿ’ ಎಂಬ ಕನಸು ಕಾಣುತ್ತಾರೆ.

ಇಲ್ಲಿ ಪ್ರಸ್ತಾಪಿಸಬೇಕಾದ ಸಂಗತಿ ಎಂದರೆ, ಚಾಮರಾಜನಗರದಿಂದ ಅರವತ್ತು ಮೈಲಿ ದೂರದ ಮೈಸೂರಿಗೆ ಈಗಿರುವ ಪ್ಯಾಸೆಂಜರ್ ರೈಲು ಚಾರ್ಜು ಹದಿನೈದು ರೂಪಾಯಿ. ಬಸ್ ಚಾರ್ಚು ಎಪ್ಪತ್ತು ರೂಪಾಯಿ. ಹಾಗಾಗಿ ತಂತಮ್ಮ ಗ್ರಾಮಗಳಿಂದ ನಾಲ್ಕೈದು ಮೈಲಿ ನಡೆದು, ಬೆಳಗ್ಗೆಯೇ ರೈಲು ಹಿಡಿದು ಮೈಸೂರಿನಲ್ಲಿ ನಾನೂರು, ಐನೂರರ ಕೂಲಿ ಮಾಡಿ ವಾಪಸು ಸಂಜೆ ಏಳರ ಅದೇ ರೈಲಿಗೆ ಊರತ್ತ ಮುಖ ಮಾಡುತ್ತಾರೆ. ಊರ ಬಾಗಿಲು ಸೇರುವುದು ರಾತ್ರಿ ಹತ್ತಾದರೂ ಆಗಬಹುದು.

ಅಲ್ಲಲ್ಲಿಯೇ ಗ್ರಾಮ ಸುತ್ತಿನಲ್ಲಿ ಕೆಲವು ಸೀಸನ್‌ಗಳಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆ ಇದೆ. ಅಲ್ಲಿ ಕೆಲಸ ಮಾಡಲು ಗಂಡಸರಿಗೆ ಇಷ್ಟವಿಲ್ಲ, ಯಾಕೆಂದರೆ ಆ ಕೂಲಿ ಗಿಟ್ಟುವುದಿಲ್ಲ. ಅದನ್ನು ಗ್ರಾಮಸ್ಥರು ಸರ್ಕಾರಿ ಜೆಸಿಬಿ ಯೋಜನೆ ಎನ್ನುವುದುಂಟು. ಈ ಯೋಜನೆಯಿಂದ ಅಲ್ಲಲ್ಲಿ ಸದುಪಯೋಗವೂ ಆಗುತ್ತಿದೆ. ದಕ್ಷಿಣ ಕರ್ನಾಟಕದ ತುತ್ತತುದಿಯ ಈ ಭಾಗದ ಸ್ಥಿತಿಗತಿ ಮಧ್ಯಕರ್ನಾಟಕ, ಉತ್ತರ ಕರ್ನಾಟಕದಲ್ಲಿ ಬೇರೇನೂ ಆಗಿರಲಾರದು. ಐವತ್ತು, ನೂರು ಮೈಲಿ ಪ್ರಯಾಣಕ್ಕೆ ಪ್ಯಾಸೆಂಜರ್ ರೈಲಿನಲ್ಲಿ ಇಪ್ಪತ್ತು ಮೂವತ್ತು ಇರಬಹುದಾದ ಚಾರ್ಜು. ಒಂದು ವೇಳೆ ಇದೇ ಬಡವರ ರೈಲು ಖಾಸಗಿಯವರ ಕೈಗೆ ಹೋದರೆ ಎಷ್ಟಾಗಬಹುದು? ಕೊರೊನಾ ರೋಗಬಾಧೆಯು ಮಕ್ಕಳನ್ನು ಮುದುಕರನ್ನಾಗಿಸಿ, ಮುದುಕರನ್ನು ಸಾವಿನ ಭಯಕ್ಕೆ ತಳ್ಳಿ ಹೈರಾಣಾಗಿಸಿ ಹಟ್ಟಿಯ ಒಳಗೆ ಕೂರಿಸಿದ್ದರೂ ನಿತ್ಯ ಪ್ರಯಾಣದ ಈ ಗ್ರಾಮಸ್ಥರನ್ನು ಅಷ್ಟಾಗಿ ಕಾಡಿದಂತಿಲ್ಲ. ಆದರೆ ಗ್ರಾಮೀಣ ವಿದ್ಯಾವಂತರನ್ನು, ವಯಸ್ಕರನ್ನು ತೀವ್ರ ನಿರುದ್ಯೋಗ ಆವರಿಸಿದೆ. ಈ ವೇಳೆ ರೈಲು ಪ್ರಯಾಣ ಖಾಸಗಿಯವರ ಕೈಗೆ ಹೋದಲ್ಲಿ, ಈಗಾಗಲೇ ಖಾಲಿ ಹೊಡೆಯುತ್ತಿರುವ ಗ್ರಾಮಗಳಲ್ಲಿ ಅಳಿದುಳಿದಿರುವ ಬಡವರು ಅಸ್ತಿತ್ವದಲ್ಲೇ ಇಲ್ಲವಾಗಿ, ಅಮೆರಿಕದ ದೊಡ್ಡಣ್ಣಗಳ ಮುಂದೆ, ನೋಡಿ ನಮ್ಮ ದೇಶದಲ್ಲಿಯೂ ಬಡತನವೆಂಬುದು ಶರವೇಗದಲ್ಲಿ ಕಡಿಮೆಯಾಗುತ್ತಿದೆ ಎಂದು ಹೇಳಿಕೊಳ್ಳಬಹುದು. ಬಡವರ, ಉಳ್ಳವರ ಮಧ್ಯೆ ಗೋಡೆ ಹಾಕಬೇಕಾದ ಪ್ರಮೇಯವೇ ಬರುವುದಿಲ್ಲ.

ನ್ಯೂಯಾರ್ಕ್‌ನಲ್ಲಿ ಸನ್ಮಾನ್ಯ ಡೊನಾಲ್ಡ್ ಟ್ರಂಪ್ ಅವರ ಭಾರಿ ವ್ಯಾಪಾರಿ ಸಮುಚ್ಚಯದ ಗಗನಚುಂಬಿ ಕಟ್ಟಡದ ಅತ್ತತ್ತಲೆ ಜರಾಜೀರ್ಣಶೀರ್ಣ ಸ್ಥಿತಿಯ ಹೆಣ್ಣುಮಗಳು ರಸ್ತೆಯಲ್ಲಿ ಬಿದ್ದಿರುವುದನ್ನು ನೋಡಬಹುದು. ಅಲ್ಲೇ ಇನ್ನಷ್ಟು ದೂರದಲ್ಲಿ ಲೈಟು ಕಂಬದ ಕೆಳಗೆ ಟವೆಲ್ಲು ಹಾಸಿ ಕಾಸು ಕೇಳುವ ಸ್ಪ್ಯಾನಿಷ್‍ನನ್ನು ಕಾಣಬಹುದು. ಅದರಾಚೆಗೆ ದಾರಿಹೋಕರ ಎದುರಿಗೆ ಕುಣಿಯುತ್ತಾ ಕಾಸಿಗೆ ಕೈ ಒಡ್ಡುವ ಆಫ್ರಿಕನ್ ಅಮೆರಿಕನ್ನನ ಮುಖದಲ್ಲಿ ಧಾರಾಕಾರ ಬೆವರು ಸುರಿಯುತ್ತಿರುತ್ತದೆ. ಪಾರ್ಕೊಂದರಲ್ಲಿ ಛಿದ್ರಗೊಂಡ ದೇಹದ ಪ್ರತಿಮೆಯೊಂದನ್ನು ವೀಕ್ಷಿಸಬಹುದು. ಅದರ ಕಥೆಯೇ ಬೇರೆ. ಇದರೊಂದಿಗೆ ಅದೇ ಶ್ರೀಮಂತ ನಾಗರಿಕರ ಅಂತರಂಗದಲ್ಲೇ ಇರಬಹುದಾದ ಕ್ರೌರ್ಯವನ್ನೂ ಆಗಾಗ ಗುರುತಿಸಬಹುದು. ನಮ್ಮ ನಾಯಕರು ಲೋಕ ಮೆಚ್ಚಿಸುವ ಇರಾದೆಯೊಂದಿಗೆ ಪ್ಯಾಸೆಂಜರ್ ಪ್ರಯಾಣಿಕರ ಬದುಕಿನ ಬವಣೆಯನ್ನು ಕಣ್ಣಿಂದ ಕಾಣಿಸಿಕೊಳ್ಳದೆ, ಕಿವಿಯಿಂದ ಕೇಳಿಸಿಕೊಳ್ಳದೆ, ರೈಲ್ವೆ ಉದ್ಯಮವನ್ನು ಖಾಸಗಿಯವರ ಕೈಗಿಡಲು ಹೊರಟರೆ, ಸುಲಭವೆನಿಸುವ ಕೂಲಿ, ರೈಲಿನ ಪ್ರಯಾಣದ ಅನುಕೂಲ ತಪ್ಪಿ, ಇದ್ದ ಬದುಕು ಸಮಾಧಿಯಾಗಬಹುದು.

ಹಸ್ತಿನಾವತಿಯ ಅರಮನೆಯಲ್ಲಿ ಕೃಷ್ಣ ‘ಅರಸುತನ ತನಗಧಿಕವಾಗುತ ಬರಲು ತರಹರಿಸಿ ಕಾಣವು ಕಣ್ಣಾಲಿಗಳು...’ ಎಂದು ನುಡಿಯುತ್ತಿದ್ದುದು ದುರ್ಯೋಧನನ ಕಿವಿಗೆ ಕೇಳಿಸುತ್ತಲೇ ಇರಲಿಲ್ಲವಂತೆ. ಅದರ ಮೇಲೆ ಕೃಷ್ಣ ಎದುರು ನಿಂತಿರುವುದೂ ಕಾಣಿಸದೆ, ದುರ್ಯೋಧನನು ಕರ್ಣಾದಿಗಳತ್ತ ವ್ಯಂಗ್ಯ ನೋಟ ಬೀರುತ್ತಿದ್ದನಂತೆ! ಇನ್ನು ಇವನ ಆಸ್ಥಾನದಲ್ಲಿ ಇದ್ದವರೆಂದರೆ, ಕುಮಾರವ್ಯಾಸನೇ ಹೇಳುವಂತೆ, ಕಾಸು ಬಿಚ್ಚಿದರೆ ಎಲ್ಲಾ ಕೆಲಸ ಸರಾಗ, ಇಲ್ಲದಿದ್ದರೆ ರಾಜನ ಕಾನೂನು ಬಿಗಿಯಿದ್ದು, ಅದನ್ನು ಮೀರುವಂತಿಲ್ಲ ಎಂದು ಸಬೂಬು ಹೇಳುವುದಲ್ಲದೆ, ಯಾರನ್ನಾದರೂ ವಂಚಿಸಿ ಕೈ ಬಿಡಬಲ್ಲ ಲಂಚದ ಪರಮಜೀವನ ಜಾಣರು, ಕರಗುಪಿತ ಲೋಲುಪರು. ಅಲ್ಲಿ ಕೃಷ್ಣನು ದುರ್ಯೋಧನಾದಿಗಳಿಗೆ ರಾಜಧರ್ಮವನ್ನು ಬೋಧಿಸಿದ. ಇದೀಗ ನಮ್ಮ ದೇಶದಲ್ಲಿ ಭ್ರಷ್ಟರನ್ನು ಅವರವರ ಜಾತಿಮತದ ನಾಯಕರೇ ರಕ್ಷಿಸುವ ಹೊಸ ನಿಯಮವೊಂದು ಜಾರಿಗೆ ಬರುತ್ತಿದೆ.

ಕನಕ ಜಯಂತಿಯ ಈ ಹೊತ್ತಿನಲ್ಲಿ ಆ ಮಹಾನುಭಾವನದೇ ಒಂದು ಮಾತನ್ನು ಇಲ್ಲಿ ಉಲ್ಲೇಖಿಸಬಹುದು. ರಾಜಕಾರಣದ ರಣರಂಗದಲ್ಲಿ ಬಿದ್ದು ಚಿನ್ನದ ಕಿರೀಟವನ್ನು ಕಳೆದುಕೊಂಡ ಕನಕದಾಸನು ಅದರ ಭ್ರಷ್ಟತೆಗೆ ಹೇಸಿ ‘ಕಷ್ಟಪಟ್ಟರೂ ಇಲ್ಲ ಕಳವಳಿಸಿದರಿಲ್ಲ| ಭ್ರಷ್ಟ ಮಾನವ ನಿನ್ನ ಹಣೆಯ ಬರಹವೇ ಎಲ್ಲ| ಬೆಟ್ಟವನು ಕಿತ್ತಿಟ್ಟರೂ ಇಲ್ಲ| ಕಟ್ಟಾಳು ಕಡು ಜಾಣನಾದರೂ ಇಲ್ಲ’ ಎಂಬ ಕೀರ್ತನೆ ನೆನಪಾಗುತ್ತಿದೆ. ಬೆಟ್ಟವನ್ನು ಅಗೆದು, ಬಂಡೆ ಹುಡಿಗಟ್ಟಿ ಬಂದ ಕೋಟಿ ಲೂಟಿಯಲ್ಲಿ ದೇವರ ಮುಡಿಗೆ ಕಿರೀಟ ಇಡಿಸಿದ್ದಾಯಿತು. ಈಗ ಅದೇ ಕಿರೀಟವನ್ನು ನಮ್ಮ ನಾಯಕರೇ ಮುಡಿಗೇರಿಸಿ ಗದೆ, ಕತ್ತಿ ಹಿಡಿದು ಅಭಿಮಾನಿ ದೇವರುಗಳನ್ನು ಮೆಚ್ಚಿಸುತ್ತಿದ್ದಾರೆ. ಅಭಿಮಾನಿಗಳು ‘ಮುಂದಿನ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಮಂತ್ರಿ, ಅಧ್ಯಕ್ಷರು ಎಲ್ಲ ನೀವೇ, ನೀವೇ’ ಎಂಬ ಘೋಷಣೆ ಹಾಕುವಲ್ಲಿ, ಅದನ್ನು ಕೇಳಿಸಿಕೊಳ್ಳುವುದೇ ಕರ್ಣಾನಂದಕರ. ಅಪ್ರಸ್ತುತವಾಗಿ ಹೋಗಿರುವ ಗಾಂಧೀಜಿ, ಕಾಯಕನಿಷ್ಠೆ ಇರುವ ಎಡೆಯಲ್ಲಿ ನಾಯಕತ್ವಕ್ಕೆ ಸ್ಪರ್ಧೆಯೇ ಇರುವುದಿಲ್ಲ ಎಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು